ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, February 4, 2023

ನೆಲದೊಳಗಣ ಬೀಜಾಂಕುರ - “ಮಣ್ಣರಳಿ ಕಾಯಾಗಿ”

 ನೆಲದೊಳಗಣ ಬೀಜಾಂಕುರ - “ಮಣ್ಣರಳಿ ಕಾಯಾಗಿ”  

ಬಡವರ ಬಾದಾಮಿ ಎಂದೇ ಹೆಸರಾದ ಕಡಲೆಕಾಯಿ ಅಬಾಲವೃದ್ಧರಾಗಿ ಎಲ್ಲರಿಗೂ ಅಚ್ಚುಮೆಚ್ಚು. ಇದರ ರುಚಿ ನೋಡದವರೇ ಇಲ್ಲ . ಇಂತಹ ಕಡಲೆಕಾಯಿಯ ಸಂತಾನೋತ್ಪತ್ತಿ ನಿಸರ್ಗದೊಡಲಿನ ಅಚ್ಚರಿಯೇ ಸರಿ. ಮಣ್ಣೇ ಅರಳಿ ಕಾಯಿಯಾಯ್ತೇನೋ ‌ ಎಂಬಂತೆ ನೆಲದೊಳಗೇ  ಬೀಜಾಂಕುರಿಸುವ ನಿಸರ್ಗದ  ಚೋದ್ಯವೊಂದನ್ನು ಸೋದಾಹರಣವಾಗಿ ವಿವರಿಸಿದ್ದಾರೆ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಶ್ರೀ ಶಶಿಕುಮಾರ್‌ ಅವರು.

(ಕಡಲೆ ಕಾಯಿಗಿಡದಲ್ಲಿನ ಸಂತಾನೋತ್ಪತ್ತಿಯ ಸೋಜಿಗದ ಸಂಗತಿ)

ಆಗ ನಾವಿನ್ನೂ ಚಿಕ್ಕವರು. ಅಮ್ಮಾ ಹಸಿವು ಎಂದಾಗ ಕೊಡುತ್ತಿದ್ದ ತಿನಿಸು ಎಂದರೆ ಅದು ಹುರಿದ ಕಡಲೆಕಾಯಿ. ಯಾರಾದರೂ ಅತಿಥಿಗಳು ದಿಢೀರನೆ ಮನೆಗೆ ಬಂದಾಗ ಕಾಫಿಯ ಜೊತೆ ಅವರಿಗೆ ಮೆಲ್ಲಲು ಕೊಡುತ್ತಿದ್ದ ಸುಲಭದ ತಿನಿಸು ಕೂಡ ಕಡಲೆಕಾಯಿಯೇ. ಆಗಿನ ದಿನಗಳಲ್ಲಿ ಕಡಲೆಕಾಯಿ ಎಂದರೆ ಉ‍ಳ್ಳವರಿಂದ ಹಿಡಿದು ಎಲ್ಲರೂ ಏನಾದರೂ ತಿನ್ನಬೇಕು ಅನಿಸಿದಾಗ ಸುಲಭವಾಗಿ ದೊರೆಯುತ್ತಿದ್ದ ತಿನಿಸು ಕಡಲೆಕಾಯಿಯೇ ಆಗಿತ್ತು. ನಿಜ ಕಡಲೇಕಾಯಿ ಎಂದರೆ ಅದು ಬಡವರ ಬಾದಾಮಿ ಎಂದೇ ಕರೆಸಿಕೊಳ್ಳುತ್ತದೆ. ನನಗೆ ತಿಳಿದ ಮಟ್ಟಿಗೆ ಒಣಗಿದ ಬೀಜಗಳ ಪೈಕಿ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡ, ಕಡಿಮೆ ಬೆಲೆಗೆ ದೊರೆಯುವ, ಎಲ್ಲರೂ ಬಳಸಬಹುದಾದ ಆಹಾರವೆಂದರೆ ಅದು ಕಡಲೆಕಾಯಿ.

ಕಡಲೆಬೀಜದಲ್ಲಿನ ಪೋಷಣಾ ಮೌಲ್ಯಗಳು: (ಪ್ರತಿ 100ಗ್ರಾಂ ಕಡಲೆ ಬೀಜಗಳಲ್ಲಿ)

ಪರ್ಯಾಪ್ತ ಕೊಬ್ಬುಗಳು 35%,  

ಅಪರ್ಯಾಪ್ತ ಕೊಬ್ಬುಗಳು 40%, 

ಕೊಲೆಸ್ಟ್ರಾಲ್‌ - 0%

ಸೋಡಿಯಂ-2% 

ಪೊಟ್ಯಾಸಿಯಂ-20%, 

ಮೆಗ್ನೀಸಿಯಂ-42%, 

ಶರ್ಕರ ಪಿಷ್ಟ-5%, 

ಪ್ರೋಟೀನ್‌-52%, 

ಕ್ಯಾಲ್ಸಿಯಂ-9%, 

ಕಬ್ಬಿಣ-25%, 

ವಿಟಮಿನ್‌ ಬಿ6-15%,

ಏನಿದು!! ಕಡಲೆಕಾಯಿ ಇದು ಯಾರಿಗೆ ಗೊತ್ತಿಲ್ಲ? ಅದರ ಬಗ್ಗೆ ಏನೋ ಹೇಳೋದಿಕ್ಕೆ ಹೊರಟಿದ್ದಾರಲ್ಲ ಅಂದ್ಕೊಂಡ್ರಾ?  ಖಂಡಿತ ನಿಜ. ಈಗ ನಾನು ಹೇಳ ಹೊರಟಿರುವುದು ಕಡಲೆಕಾಯಿ ಮತ್ತು ಅದರಲ್ಲಿರುವ ಪೋಷಕಾಂಶಗಳ ಬಗ್ಗೆ ಅಲ್ಲ. ಕಡಲೆಕಾಯಿ ಗಿಡದಲ್ಲಿ ನಡೆಯುವ ಅಚ್ಚರಿಯ ಸಂತಾನೋತ್ಪತ್ತಿ ಮತ್ತು ಅದರ ರಚನೆ ಬಗ್ಗೆ. ನಮಗೆ ಅನ್ನಿಸಬಹುದು ಅದರಲ್ಲೇನಿದೆ ವಿಶೇಷ. ಎಲ್ಲಾ ಗಿಡದಲ್ಲೂ ನಡೆಯುವ ಹಾಗೆ ಇದ್ರಲ್ಲೂ ನಡೆಯುತ್ತೆ ತಾನೇ? ಅಂದುಕೊಳ್ಳುವಿರಲ್ಲ‌ ? ಆದರೆ ಈ ಅಂಕಣ ಓದಿ ಕಡಲೆಕಾಯಿ ಗಿಡದಲ್ಲಿನ ಸಂತಾನೋತ್ಪತ್ತಿಯ ಸೋಜಿಗ ನಿಮಗೆ ತಿಳಿಯುತ್ತದೆ.

ಕಡಲೆಕಾಯಿ ಸಸ್ಯವು ಹೂಬಿಡುವ ಸಸ್ಯಗಳಲ್ಲಿ ಲೆಗ್ಯುಮಿನೋಸೆ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದು ಸಾಮಾನ್ಯವಾಗಿ ಉಷ್ಣವಲಯದ ಉತ್ತಮವಾದ ಬೆಳೆಯೂ ಹೌದು. ಮೂಲತಃ ಇದರ ಮೂಲ ದಕ್ಷಿಣ ಅಮೇರಿಕಾ ಎಂದು ಚರಿತ್ರೆ ಹೇಳುತ್ತದೆ. ಈಗ ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ  ಎಂಬ ಬಿ.ಜಿ.ಎಲ್‌ ಸ್ವಾಮಿಯವರ ಕೃತಿಯ ನೆನಪಾಯಿತೇ?  ಇರಲಿ, ಆದರೆ ಇದನ್ನು ಅತಿ ಹೆಚ್ಚು ಬೆಳೆಯುವ ರಾಷ್ಟ್ರ ಚೀನಾ ದೇಶವಾಗಿದೆ. ದಕ್ಷಿಣ ಅಮೇರಿಕಾಕ್ಕೆ ಯೂರೋಪ್‌ನಿಂದ ಗುಲಾಮರನ್ನು ಕರೆತರುವಾಗ ಅವರ ಜೊತೆಯಲ್ಲಿಯೇ ಇದು ಕೂಡ ಬಂತು ಎಂಬ ಕಥೆಯೂ ಇದೆ. ಇದನ್ನು ನೋಡಿದರೆ ಇದರ ಹುಟ್ಟು ಯೂರೋಪ್‌ನದ್ದಾಗಿರಬೇಕು. ಹುಟ್ಟು ಎಲ್ಲಾದರೂ ಆಗಲಿ, ಇಂದು ಇದು ನಮ್ಮ ದೇಶದಲ್ಲಿ, ಅದರಲ್ಅಲೂ ನಮ್ಮ ಕನ್ನಡ ನಾಡಿನ ಇದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಬರಡು ಪ್ರದೇಶದಲ್ಲಿ ಹಾಗೂ ನೀರಾವರಿ ಇದ್ದವರು ಬೇಸಿಗೆ ಕಾಲದಲ್ಲಿಯೂ ಬಂಪರ್‌ ಬೆಳೆ ತೆಗೆಯುತ್ತಾರೆ. ಈ ಕೆಳಗಿನ ಚಿತ್ರ ಗಮನಿಸಿ. ಇದರ ವ್ಯಾಪಕ ಹರಡಿಕೆ ಅಂದರೆ ಎಲ್ಲೆಲ್ಲಿ ಪ್ರಮುಖವಾಗಿ ಬೆಳೆಯುತ್ತಾರೆ ಎಂದು ತಿಳಿಯಬಹುದು.


ಪರಾಗಸ್ಪರ್ಶ ಮತ್ತು ಸಂತಾನೋತ್ಪತ್ತಿ:

ಇತರೆ ಸಸ್ಯಗಳಂತೆ ಕಡಲೆಕಾಯಿ ಸಸ್ಯಗಳು ಪರಾಗಸ್ಪರ್ಶಕ್ಕಾಗಿ ಕೀಟಗಳನ್ನು ಅವಲಂಬಿಸಿಲ್ಲ. ಅಂದರೆ ಪರಾಗವನ್ನು ಒಂದು ಸಸ್ಯದಿಂದ ಇನ್ನೊಂದಕ್ಕೆ ಸಾಗಿಸುವ ಜೇನುನೊಣಗಳು ಅಥವಾ ಇತರ ಕೀಟಗಳಂತಹ ಹೊರಗಿನ ಸಹಾಯದ ಅಗತ್ಯವನ್ನು ಅವಲಂಬಿಸಿಲ್ಲ.  ಇವು ಸ್ವಕೀಯ ಪರಾಗಸ್ಪರ್ಶ ನಡೆಸುವ ಸ್ವಾವಲಂಬಿ ಸಸ್ಯಗಳಾಗಿವೆ!!

ಬೀಜವನ್ನು ನೆಟ್ಟ ನಂತರ, ಮೊದಲ ಹೂವುಗಳು ನಾಲ್ಕರಿಂದ ಆರು ವಾರಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಮತ್ತು ಆರು ಅಥವಾ ಅದಕ್ಕಿಂತ ಹೆಚ್ಚು ವಾರಗಳವರೆಗೆ ಆ ಹೂಗಳು ಅರಳಿರುತ್ತವೆ.

ಸಾಮಾನ್ಯವಾಗಿ ಸಸ್ಯವನ್ನು ಗಮನಿಸಿದಾಗ ನಮಗೆ ಕಾಣುವುದು ಕೇವಲ ಐದರಿಂದ ಹತ್ತು ಹೂಗಳು ಮಾತ್ರ. ಆದರೆ ವಾಸ್ತವಾವಾಗಿ ಒಂದು ಗಿಡದಲ್ಲಿ ಐವತ್ತಕ್ಕೂ ಹೆಚ್ಚಿನ ಹೂಗಳು ಇರುತ್ತವೆ. ಈ ಎಲ್ಲಾ ಹೂಗಳು ಅರಳುವುದಿಲ್ಲ. ಮೊದಲ ಹಂತದಲ್ಲಿ ಕಾಣಿಸಿಕೊಂಡ ಹೂಗಳು ಸೂರ್ಯೋದಯದ ಸಮಯದಲ್ಲಿ ಅರಳುತ್ತವೆ. ನಂತರ ಉಗಮಿಸಿದ ಹೂಗಳು ಅರಳುವುದಿಲ್ಲ. ಕಾರಣ ಈಗಾಗಲೇ ಮೊದಲ ಹಂತದ ಹೂಗಳಲ್ಲಿ ಪರಾಗಸ್ಪರ್ಶಕ್ರಿಯೆ ನಡೆದು, ಫಲೀಕರಣ (ಫರ್ಟಿಲೈಸೇಶನ್‌) ನಡೆದಿರುತ್ತದೆ. ಸಸ್ಯದ ಜೀವಿತಾವಧಿ ಮುಗಿಯುತ್ತಾ ಬಂದಿರುತ್ತದೆ. ಆದ ಕಾರಣ ನಂತರದಲ್ಲಿ ಉಗಮಿಸಿದ ಹೂಗಳು ಅರಳದೇ ಸ್ವಕೀಯ ಪರಾಗಸ್ಪರ್ಶ ನಡೆದು, ಗರ್ಭಧಾರಣೆ ನಡೆಯುತ್ತದೆ. ಹಾಗಾಗಿಯೇ ನಾವು ಕಡಲೆಕಾಯಿ ಗಿಡವನ್ನು ಕಿತ್ತಾಗ ಒಂದು ಸುತ್ತಿನ ಕಾಯಿಗಳು ಬಲಿತವುಗಳಾಗಿರುತ್ತವೆ ಮತ್ತು ನಂತರದಲ್ಲಿ ಸಂತಾನೋತ್ಪತ್ತಿಯಾದ ಕಾಯಿಗಳು ಬಲಿಯಲು ಪ್ರಾರಂಭಿಸಿರುತ್ತವೆ. ಅದಕ್ಕೂ ತದನಂತರದವುಗಳು ಕೇವಲ ಬುಡ್ಡಾಗಿ (ಇಮ್ಮೇಚುರ್‌ ಪಾಡ್‌ಗಳು) ಉಳಿದುಬಿಡುತ್ತವೆ. 

ಈಗ ನಾವು ಕಡಲೆಕಾಯಿ ಸಸ್ಯದಲ್ಲಿ ಭೂಮಿಯ ಒಳಗೆ ಕಾಯಿ ಹೇಗೆ ಬರುತ್ತದೆ? ಎಂದು ತಿಳಿದುಕೊಳ್ಳೋಣ.  ನಿಜಕ್ಕೂ ಯಾವುದೇ ಸಸ್ಯದಲ್ಲಿ ಇಲ್ಲದ ಅಚ್ಚರಿ ಈ ಸಸ್ಯದಲ್ಲಿ ನಡೆಯುತ್ತದೆ.

ಪ್ರತಿ ಹೂವು ಬೆಳೆದು ಪಕ್ವವಾದಾಗ ಅರಳುತ್ತದೆ. ಅರಳಿದ ಹೂ, ಒಂದು ದಿನ ಅಥವಾ ಮೂರ್ನಾಲ್ಕು ದಿನ ಹಾಗೇಯೇ ಇರುತ್ತದೆ. ಈ ಸಂದರ್ಭದಲ್ಲಿ ಪರಾಗವನ್ನು ಬಿಡುಗಡೆ ಮಾಡಿ, ಪರಾಗರೇಣುಗಳು ಶಲಾಕಾಗ್ರದ ಮೇಲೆ ಬಿದ್ದು, ಎಂಟು ಅಥವಾ ಒಂಬತ್ತು ಗಂಟೆಗಳ ನಡುವೆ ಗರ್ಭಧಾರಣೆ ನಡೆಯುತ್ತದೆ. ಫಲೀಕರಣವು ಸಂಭವಿಸಿದ ಎಂಟರಿಂದ ಹದಿನಾಲ್ಕು ದಿನಗಳ ನಂತರ, ಅಂಡಾಶಯವು  ನೀಳವಾಗುತ್ತದೆ.  ಇದು  ಲಂಬವಾಗಿ ನೆಲಕ್ಕೆ ತಾಗಿ, ಅಡ್ಡಲಾಗಿ ತಿರುಗುತ್ತದೆ. ನೆಲದಡಿಯಲ್ಲಿ, ಸಮತಲವಾದ ಪೆಗ್, ಪಾಡ್ ಆಗಿ ಪಕ್ವಗೊಳ್ಳುತ್ತದೆ ಮತ್ತು ಏಳರಿಂದ ಒಂಬತ್ತು ವಾರಗಳ ನಂತರ ನಾವೆಲ್ಲರೂ ಗುರುತಿಸುವ ಕಡಲೆಕಾಯಿಯಾಗುತ್ತದೆ. 

ನಂತರದಲ್ಲಿ ಉಗಮಿಸಿದ ಹೂಗಳಲ್ಲಿ ಅರಳುವ ಮುನ್ನವೇ ಪರಾಗಸ್ಪರ್ಶ ನಡೆದು ಗರ್ಭಧಾರಣೆಗಾಗಿ  ನೆಲದಲ್ಲಿ ಹುದುಗಿರುವ ಅಂಡಾಶಯವನ್ನು ತಲುಪಲು ಇಂಟರ್‌ಕ್ಯಾಲರಿ ಮೆರಿಸ್ಟೆಮ್‌ನ ಸಹಾಯದಿಂದ ನೀಳವಾದ ಗೈನೋಪೋರ್‌ ಎಂಬ ರಚನೆಯನ್ನು ಹೊಂದುತ್ತವೆ. 

ಇವು ಗುರುತ್ವಾನುವರ್ತನೆಯ ಪ್ರಚೋದನೆಗೆ ಒಳಗಾಗಿ, ನೆಲಕ್ಕೆ ತಾಗಿ ಅಂಡಾಶಯವನ್ನು ತಲುಪಿ, ಬೀಜೋತ್ಪಾದನೆಗೆ ಸಹಾಯ ಮಾಡುತ್ತವೆ. ಹೂಗಳು ಎಲ್ಲೆಲ್ಲಿ ಕಂಡುಬರುತ್ತವೆಯೋ ಅಲ್ಲೆಲ್ಲಾ ಪೆಗ್‌ಗಳೆಂಬ ರಚನೆ ಉಂಟಾಗಿ ಮೇಲೆ ತಿಳಿಸಿದಂತಹ ಪ್ರಕ್ರಿಯೆ ನಡೆಯುತ್ತದೆ. ಹಾಗಾಗಿಯೇ ನಾವು ಕಡಲೆಕಾಯಿ ಗಿಡವನ್ನು ಕಿತ್ತಾಗ ಗಿಡದ ತುಂಬಾ ನೇತು ಬಿದ್ದಿರುವ ಪೆಗ್‌ಗಳು ಮತ್ತು ಕಾಯಿಗಳೆಂಬ ಪಾಡ್‌ಗಳನ್ನು ನಾವು ನೋಡಬಹುದು. ಇವೆಲ್ಲಾ ಪ್ರಕ್ರಿಯೆಗಳು ಸುಲಭವಾಗಿ ನಡೆಯುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಹಾರ್ಮೋನ್‌ಗಳ ಪಾತ್ರವೂ ಪ್ರಮುಖವಾಗಿದೆ. 

ನೋಡಿದಿರಾ, ಇಂತಹ ಸೋಜಿಗದ ಸಂತಾನೋತ್ಪತ್ತಿ ನಾವು ಬೇರೆ ಯಾವ ಸಸ್ಯದಲ್ಲೂ ಕಾಣಲು ಸಾಧ್ಯವಿಲ್ಲ. ಸಸ್ಯದ ಮೇಲ್ಭಾಗದಲ್ಲಿ ಹೂ ಬಿಟ್ಟು, ನೆಲದ ಕೆಳಗೆ ಬೀಜ ಉತ್ಪತ್ತಿ ಮಾಡಲು ಎಂತಹ ಸೋಜಿಗದ ಸಂಗತಿ ಈ ಸಸ್ಯದಲ್ಲಿದೆ. ಇಷ್ಟೊಂದು ಕಷ್ಟಪಟ್ಟು ಸಂತಾನೋತ್ಪತ್ತಿ ಮಾಡುವ ಈ ಸಸ್ಯದ ಬೀಜಗಳನ್ನು ಎಷ್ಟು ಗ್ಗವಾಗಿ ಸುಲಭವಾಗಿ ತಿಂದು ಬಿಡುತ್ತೇವೆ. ನಿಜಕ್ಕೂ ಇದು ಬಡವರ ಬಾದಾಮಿಯಲ್ಲ.. ಸಸ್ಯ ಸಾಮ್ರಾಜ್ಯದ ವಜ್ರವೆಂದರೂ ತಪ್ಪಾಗಲಾರದು..

ವರ್ಗೀಕರಣದ ಅಡಿಯಲ್ಲಿ ವಿವರಿಸಿದಂತೆ ಈ ಭೂಗತ ಪಕ್ವವಾಗುವಿಕೆಗಾಗಿ ಕಡಲೆಕಾಯಿಗೆ ಅದರ ವೈಜ್ಞಾನಿಕ ಹೆಸರನ್ನು (Arachis hypogea) ನೀಡಲಾಗಿದೆ.

(hypo ಎಂದರೆ ಕೆಳಗೆ, gea- ಎಂದರೆ ನೆಲ ಅಥವಾ ಭೂಮಿ)

(ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್‌ಗಳನ್ನು ಬಳಸಿ. . . .)

References:

https://www.ijcmas.com/7-9-2018/N.%20Vinothini,%20et%20al.pdf

https://www.iosrjournals.org/iosr-javs/papers/vol7-issue4/Version-/H07434449.pdf 

https://core.ac.uk/download/pdf/42989611.pdf

https://www.youtube.com/watch?v=jvxWO-WsM_Q

2.     


Narrated by: 

SHASHIKUMAR B.S. 9900276979.

GHS, YELEKYATHANAHALLI,

NELAMANGALA TQ.

BENGALURUR RURAL DIST-562111

7 comments: