ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, February 4, 2023

ದೊರೆ ಮೂರನೆಯ ರಿಚರ್ಡನೂ ಮತ್ತು ಮೈಟೋಕಾಂಡ್ರಿಯಲ್ ಜೀನೂ!!!

ದೊರೆ ಮೂರನೆಯ ರಿಚರ್ಡನೂ  ಮತ್ತು   ಮೈಟೋಕಾಂಡ್ರಿಯಲ್  ಜೀನೂ!!!

ಬದುಕಿದ್ದಾಗ ವಿವಾದಿತ ವ್ಯಕ್ತಿಯಾಗಿದ್ದ ಇಂಗ್ಲೆಂಡಿನ ದೊರೆ 3ನೇ ರಿಚರ್ಡ್ ಸತ್ತ ಐದಕ್ಕೂ ಹೆಚ್ಚು ಶತಮಾನಗಳ ನಂತರ ಆಕಸ್ಮಿಕವಾಗಿ ಸಿಕ್ಕ ಆತನ ಅಸ್ಥಿ ಪಂಜರವನ್ನು ಹೊರತೆಗೆದು ಡಿಎನ್‌ಎ ಪರೀಕ್ಷೆಯ ಮೂಲಕ ಅದನ್ನು ನಿಖರವಾಗಿ ಗುರುತಿಸಿ, ಮತ್ತೆ ಸಮಾಧಿ ಮಾಡಿ ಗೌರವ ಸಲ್ಲಿಸಿದ ಕುತೂಹಲಕಾರಿ ಕಥೆಯನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ಮೂಲಕ ಡಿಎನ್‌ಎ ಪರೀಕ್ಷಯ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ ಈ ಲೇಖನದಲ್ಲಿ ಶಿಕ್ಷಕ ಸುರೇಶ್ ಸಂಕೃತಿ ಅವರು.

   

ಇಂಗ್ಲೆಂಡಿನ‌ ದೊರೆ 3ನೇ ರಿಚರ್ಡ್ (ಕ್ರಿ.ಶ.14521485) ಬದುಕಿದ್ದಾಗ ಮಾತ್ರವಲ್ಲ, ಮರಣದ ನಂತರವೂ, ಇಂದಿಗೂ ಅತ್ಯಂತ ಪ್ರಸಿದ್ಧ ಮತ್ತು ವಿವಾದಿತ ವ್ಯಕ್ತಿ. ಷೇಕ್ಸಪಿಯರ್ ರಚಿಸಿದ ಅದೇ ಹೆಸರಿನ ದುರಂತ ನಾಟಕದ ಕುಖ್ಯಾತ ಖಳ ಮತ್ತು ದುರಂತ ನಾಯಕ. ಈ ನಾಟಕದಲ್ಲಿ 3ನೇ ರಿಚರ್ಡ್ನದು ಗೂನು ಬೆನ್ನಿನ, ವಿಕೃತ ರೂಪದ ಕ್ರೌರ್ಯ ಮತ್ತು ಕುತಂತ್ರ ಬುದ್ಧಿಯ ವಿಲಕ್ಷಣ ಪಾತ್ರ.. ತನ್ನ ಒಡ ಹುಟ್ಟಿದ ಅಣ್ಣ, 4ನೇ ಎಡ್ವರ್ಡನ ನಂತರ ಸಿಂಹಾಸನಕ್ಕೆ ಅರ್ಹನೆನಿಸಿದ್ದ ಅವನ ಅಣ್ಣನ ಮಗ 5ನೇ ಎಡ್ವರ್ಡನನ್ನು ಅನರ್ಹನೆಂದು ಘೋಷಿಸಿ ತಾನೇ ಸಿಂಹಾಸನವೇರುತ್ತಾನೆ. ನಂತರದ ಕೆಲ ದಿನಗಳಲ್ಲಿಯೇ ಬಾಲಕ 5ನೇ ಎಡ್ವರ್ಡನನ್ನು ಮತ್ತು ಅವನ ತಮ್ಮನನ್ನು ಗುಟ್ಟಾಗಿ ಕೊಲ್ಲಿಸಿ ಬಿಡುತ್ತಾನೆ. ತನ್ನ ವಕ್ರಬುದ್ಧಿಯಿಂದ ಹಲವಾರು ಎಡವಟ್ಟುಗಳನ್ನು ಮಾಡುತ್ತಾ ಪಟ್ಟವೇರಿದ ಎರಡೇ ವರ್ಷಗಳಲ್ಲಿ ರೋಸಸ್ ಕೊನೆಯ ಯುದ್ದದಲಿ ಕೊಲೆಯಾಗುತ್ತಾನೆ. ಇದಕ್ಕೆ ಹಿಂದಿನ ರಾತ್ರಿ, ಯುದ್ದದ ಬಿಡಾರದಲ್ಲಿ ಅವನು ಕಾಣುವ ಕನಸುಗಳು, ಹಳವಂಡಗಳು ಅತ್ಯಂತ ಭೀಕರವಾಗಿರುತ್ತವೆ. ಯುದ್ದ ಮಾಡುತ್ತಾ ತಾನು ಸವಾರಿ ಮಾಡುತ್ತಿದ ್ದಕುದುರೆಯನ್ನು ಕಳೆದುಕೊಂಡು ಅಸಹಾಯಕನಾದ ಕೊನೆ ಘಳಿಗೆಯಲ್ಲಿ, "ಕುದುರೆಗಾಗಿ ಈ ನನ್ನ ರಾಜ್ಯ, ಒಂದು ಕುದುರೆಗಾಗಿ ಈ ನನ್ನ ರಾಜ್ಯ" ಎಂದು ಅವನಾಡುವ ಮಾತು ಷೇಕ್ಸಪಿಯರ್ ಬರೆದ ಸಂಭಾಷಣೆಗಳಲ್ಲಿ ಹೆಚ್ಚು ಪ್ರಸಿದ್ಧ ಹಾಗೂ ರಾಜಕೀಯಕ್ಕೆ ಯಾವಾಗಲೂ ಅನ್ವಯಿಸುವ ಒಂದು ಹೇಳಿಕೆ. ಈ ನಾಟಕ ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದವಾಗಿದೆ, ಅನೇಕಾನೇಕ ರಂಗ ಪ್ರದರ್ಶನಗಳನ್ನು ಈ ನಾಟಕ ಕಂಡಿದೆ. 3ನೇ ರಿಚರ್ಡನ ಪಾತ್ರವನ್ನು ಷೇಕ್ಸ್ಪಿಯರ್‌ಎಷ್ಟು ಪ್ರಭಾವಶಾಲಿಯಾಗಿ ಸೃಷ್ಟಿಸಿದ್ದಾನೆ ಎಂದರೆ, ತಮ್ಮ ಜೀವಿತಾವಧಿಯಲ್ಲಿ ರಂಗದ ಮೇಲೆ ಒಮ್ಮೆಯಾದರೂ ಈ ಪಾತ್ರವನ್ನುಅಭಿನಯಿಸಬೇಕೆಂಬ ಅಭಿಲಾಷೆಯು ರಂಗಕಲಾವಿದರನ್ನು, ದೇಶ-ಭಾಷೆಯನ್ನು ಮೀರಿ, ಕಾಡದೇ ಇರುವುದಿಲ್ಲ. ಷೇಕ್ಸಪಿಯರನ ಹಲವಾರು ನಾಟಕಗಳನ್ನು ಬೆಳ್ಳಿ ತೆರೆಗೆ ಅಳವಡಿಸಲಾಗಿದ್ದು, ಅವುಗಳಲ್ಲಿ ನಾಯಕನ ಪಾತ್ರದಲ್ಲಿ ಅಭಿನಯಿಸಿರುವ ಸುಪ್ರಸಿದ್ಧ ಬ್ರಿಟಿಷ್ ನಟ ಮತ್ತು ನಿರ್ದೇಶಕ ಲಾರೆನ್ಸ ಒಲಿವಿಯರ್, ಈ ನಾಟಕವನ್ನೂ ಚಲನಚಿತ್ರವಾಗಿ ನಿರ್ದೇಶಿಸಿದ. ಜೊತೆಗೆ, ತಾನೇ 3ನೇ ರಿಚರ್ಡನ ಪಾತ್ರವನ್ನು ಅತ್ಯಂತ ಅದ್ಭುತವಾಗಿ ನಿರ್ವಹಿಸಿದ್ದು ಚಲನಚಿತ್ರ ಜಗತ್ತಿನ ಒಂದು ಇತಿಹಾಸ..

 

ಚಿತ್ರ ಕೃಪೆ ಲೆಸ್ಟರ್ ವಿಶ್ವವಿದ್ಯಾಲಯ

https://www.youtube.com/watch?v=-5JF9Gq5tL4 

https://www.youtube.com/watch?v=hNJPpGnHp3w 

ಘೋರಅನ್ಯಾಯ 

ಬಿಳಿ ಗುಲಾಬಿಯನ್ನು ರಾಜಲಾಂಛನವಾಗಿ ಹೊಂದಿದ್ದ ಯಾರ್ಕ್ ಕುಟುಂಬ ಮತ್ತು ಕೆಂಪು ಗುಲಾಬಿಯನ್ನು ರಾಜಲಾಂಛನವಾಗಿ ಹೊಂದಿದ್ದ ಲೆಸ್ಟರ್ ಕುಟುಂಬಗಳ ನಡುವಿನ ದಾಯಾದಿ ಕಲಹದಲ್ಲಿ ಇಂಗ್ಲೆಂಡ್ ಮುಳುಗಿಹೋಗಿದ್ದ ಕಾಲವದು. ಈ ಕಲಹವು ಇಂಗ್ಲೆಂಡಿನಲ್ಲಿ ರಕ್ತಪಾತಕ್ಕೆ ಕಾರಣವಾಗಿತ್ತು. ರೋಸಸ್ ವಾರ್ ಎಂದು ಈಚೀಚೆಗೆ ಕರೆಯಲಾಗುತ್ತಿರುವ ಇಂತಹ ಯುದ್ದವೊಂದರಲ್ಲಿ ಯಾರ್ಕ್ ಪರ ಹೋರಾಡುತ್ತಲೇ ಶತೃಗಳ ಕೈಯಲ್ಲಿ ಅತ್ಯಂತ ಬರ್ಬರವಾಗಿ ಹತನಾಗಿ ಹೋದ 3ನೇ ರಿಚರ್ಡ್, ಯುದ್ದದಲ್ಲಿ ಮಡಿದ ಇಂಗ್ಲೆಂಡಿನ ಕೊನೆಯ ದೊರೆ ಎಂದೂ ಸಹ ದಾಖಲೆಗೆ ಸೇರುತ್ತಾನೆ. ಲೀಸ್ಟರ್ ನಗರದ ಪಶ್ಚಿಮಕ್ಕೆ ಇರುವ ಬೋಶ್ವರ್ತನಲ್ಲಿ ನಡೆದ ಯುದ್ದದಲ್ಲಿ ಆಗಸ್ಟ್‌ 22, 1485ರಲ್ಲಿ ಮಡಿದಾಗ ಅವನ ವಯಸ್ಸು ಕೇವಲ 32ವರ್ಷಗಳು. ಇದರೊಂದಿಗೆ 300 ವರ್ಷಗಳು ಇಂಗ್ಲೆಂಡನ್ನು ಆಳಿದ ಪ್ಲಾಂಟಿಜೆನಟ್ ವಂಶದ ಆಳ್ವಿಕೆ ಕೊನೆಗೊಂಡು, ದೊರೆ 7ನೇ ಹೆನ್ರಿ ಪಟ್ಟವೇರುವುದರೊಂದಿಗೆ ಟೂಡರ್ ವಂಶದ ಆಳ್ವಿಕೆ ಆರಂಭಗೊಳ್ಳುತ್ತದೆ. ಯುದ್ದದಲ್ಲಿ ಮಡಿದ 3ನೇ ರಿಚರ್ಡ್‌ನ ದೇಹವನ್ನು ಸೂಕ್ತ ಗೌರವ ಸಲ್ಲಿಸದಯೇ, ಯಾವುದೇ ಅರ್ಹ ಕರ್ಮಗಳನ್ನು ನೆರೆವೇರಿಸದೇ, ಲೀಸ್ಟರ್‌ನ ಒಂದು ಹಳೆಯ ಚರ್ಚಿನಲ್ಲಿ ಯಾವುದೇ ಗುರುತು ಸಿಗದಂತೆ ಹೂತು ಹಾಕಲಾಗುತ್ತದೆ. ನಂತರದ ವರ್ಷಗಳಲ್ಲಿ ದೊರೆ 7ನೇ ಹೆನ್ರಿಯ ಆದೇಶದ ಮೇರೆಗೆ ಈ ಕಟ್ಟಡ ಸಮುಚ್ಚಯವನ್ನು ಗುರುತು ಸಿಗದಂತೆ ನೆಲಸಮಗೊಳಿಸಲಾಗುತ್ತದೆ. ಇದಾದ ನಂತರ, ಐದೂ ಕಾಲು ಶತಮಾನಗಳಿಗೂ ಮೀರಿದ ಕಾಲಾವಧಿಯಲ್ಲಿ 3ನೇ ರಿಚರ್ಡ್‌ನ ಗೋರಿಯ ಕಾಲನ ಸುಳಿಗೆ ಸಿಕ್ಕು ಪ್ರಾಮುಖ್ಯತೆ ಕಳೆದು ಕೊಳ್ಳುತ್ತದೆ. ನಿಧಾನವಾಗಿ ಜನಮಾನಸದಿಂದ ಮರೆಯಾಗುತ್ತದೆ. ಈ ನಡುವೆ ಲೆಸ್ಟರ್ ನಗರವು ಸಾಕಷ್ಟು ಬದಲಾವಣೆಗಳನ್ನು ಕಾಣುತ್ತದೆ. ಸುಮಾರು ವರ್ಷಗಳಿಂದ ಮರೆಯಾಗಿ ಹೋಗಿದ್ದ 3ನೇ ರಿಚರ್ಡ್‌ನ ಕುರುಹುಗಳನ್ನು ಅವನ ಅಭಿಮಾನಿಗಳು ಪತ್ತೆ ಹಚ್ಚುವಲ್ಲಿ ನಿರಂತರವಾಗಿ ತೊಡಗಿರುತ್ತಾರೆ. 3ನೇ ರಿಚರ್ಡ್‌ನನ್ನು ಒಬ್ಬ ಖಳನಾಗಿ ಚಿತ್ರಿಸಿರುವುದು ಒಂದು ಕಟ್ಟುಕಥೆ. ಇಂತಹ ಕಥೆಗಳ ಮೂಲಕ ಜನಜನಿತವಾಗಿರುವ ಅಭಿಪ್ರಾಯಗಳಿಗೆ ಪುಷ್ಟಿ ನೀಡುವ ದಾಖಲಾತಿಗಳು ಇಲ್ಲ. ಇತಿಹಾಸದಲ್ಲಿ 3ನೇ ರಿಚರ್ಡ್‌ನ ವ್ಯಕ್ತಿತ್ವವನ್ನು ಚಿತ್ರಿಸಿರುವುದು ಸರಿಯಿಲ್ಲ. ಅವನ ಉತ್ತಮ ಗುಣಗಳನ್ನು ದುರುದ್ಧೇಶ ಪೂರ್ವಕವಾಗಿ ಮರೆಮಾಚಲಾಗಿದೆ. ವಿಲಿಯಂ ಷೇಕ್ಷಪಿಯರನು ಟೂಡರ್ ದೊರೆಗಳ ಪೋಷಣೆಯಲ್ಲಿ ಇದ್ದುದ್ದರಿಂದ ಅವರ ಒಲುಮೆ ಗಳಿಸಲೆಂದೇ 3ನೇ ರಿಚರ್ಡನನ್ನು ಅತ್ಯಂತ ಕೆಟ್ಟ ಖಳನನ್ನಾಗಿ ಚಿತ್ರಿಸಿದ್ದಾನೆ. ಇತಿಹಾಸಕಾರರೂ ಸಹ ಇದೇ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಇದು 3ನೇ ರಿಚರ್ಡನ ಅಭಿಮಾನಿಗಳ ಅಳಲು. ಇತಿಹಾಸದಲ್ಲಿ ಆತನಿಗೆ ಸಲ್ಲಬೇಕಾದ ಸೂಕ್ತವಾದ ಸ್ಥಾನಮಾನಗಳನ್ನು ದೊರಕಿಸಿಕೊಡಬೇಕಿದೆ. ಅವನಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಅದರ ವಸ್ತುನಿಷ್ಟ ಅಧ್ಯಯನವನ್ನು ಮಾಡಬೇಕಿದೆ. ಈ ಉದ್ಧೇಶಗಳನ್ನು ಇರಿಸಿಕೊಂಡು 3ನೇ ರಿಚರ್ಡ್ ಸೊಸೈಟಿಯನ್ನು 1924ರಷ್ಟು ಹಿಂದೆಯೇ ಸ್ಥಾಪಿಸಲಾಗಿದೆ.

ಲೀಸ್ಟರ್ ನಗರದ ವಿನ್ಯಾಸದಲ್ಲಿ ಆದ ಬದಲಾವಣೆಗಳ ಇತಿಹಾಸ ಮತ್ತು ಅದಕ್ಕೆ ಸಂಬಂಧಿಸಿ ನಕ್ಷೆಗಳು ಹಾಗೂ ಇತರೆ ದಾಖಲೆಗಳ ಅಧ್ಯಯನದಲ್ಲಿ ಈ ಸೊಸೈಟಿಯ ಸದಸ್ಯರು ನಿರಂತರ ತೊಡಗಿದ್ದರು. ಲೀಸ್ಟರ್ ವಿಶ್ವವಿದ್ಯಾಲಯದ ಪ್ರಾಚ್ಯಶಾಸ್ತ್ರ ವಿಭಾಗ, ಲೀಸ್ಟರ್ ನಗರ ಸಭೆ ಮತ್ತು 3ನೇ ರಿಚರ್ಡ್ ಸೊಸೈಟಿ, ಇವುಗಳ ಶ್ರಮ ಮತ್ತು ಸಹಯೋಗದ ಫಲಿತಾಂಶವಾಗಿ 2012ರ ಸೆಪ್ಟೆಂಬರ್ ತಿಂಗಳಿನಲ್ಲಿ ಲೀಸ್ಟರಿನ ಒಂದು ಕಾರು ಪರ‍್ಕಿಂಗ್ ತಾಣದ ಸಿಮೆಂಟ್ ಕಾಂಕ್ರಿಟ್ಟನ್ನು ಬಗೆದು ನೆಲವನ್ನು ಅಗೆದಾಗ ಅಲ್ಲಿ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದ ಚರ್ಚಿನ ಕಟ್ಟಡದ ಗೋಡೆಯ ಮತ್ತು ನೆಲಹಾಸಿನ ಕುರುಹುಗಳು ದೊರೆತವು. ನೆಲಹಾಸಿನ ಒಂದು ಕಡೆ ಅಗೆದಾಗ ಕಂಡು ಬಂದ ಮೊದಲ ಗೋರಿ ಪ್ರಾಚ್ಯಶಾಸ್ತ್ರಜ್ಞರ ಗಮನ ಸೆಳೆಯಿತು. ಶವಪೆಟ್ಟಿಗೆಯಾಗಲಿ, ಶವವಸ್ತ್ರವಾಗಲಿ ಇಲ್ಲದೆಯೇ ಬೆತ್ತಲಾಗಿಯೇ ಮಣ್ಣು ಮಾಡಲಾಗಿದ್ದ ಶವದ ಅಸ್ಥಿಪಂಜರವೊಂದು ದೊರೆತಿತ್ತು. ದೊರೆತ ಅಸ್ಥಿಪಂಜರ, ಒಬ್ಬ ಸಾಮಾನ್ಯನ ಶವದಂತೆ ಮಣ್ಣು ಮಾಡಿಲಾಗಿದ್ದು, ಅದರ ಬೆನ್ನುಹುರಿ ಬಾಗಿದ್ದು ಕಂಡು ಬಂದಿತು. ಇತಿಹಾಸದ ದಾಖಲೆಗಳಲ್ಲಿ ವರ್ಣಿಸುವ ಗೂನು ಬೆನ್ನಿನ ರಿಚರ್ಡನದೇ ಅದು ಎಂದು ಮೇಲು ನೋಟಕ್ಕೆ ತೋರುತಿತ್ತು. ಅದು ನಿಜವಾಗಿಯೂ 3ನೇ ರಿಚರ್ಡನಿಗೆ ಸಂಬಂಧಿಸಿದ್ದು ಎಂದು ಸಿದ್ಧಮಾಡಿ ತೋರಿಸಲು ಸಂಶೋಧಕರು ಅದನ್ನು ಸಿ.ಟಿ. ಸ್ಕಾನ್, ಡಿಎನ್ಎ ವಿಶ್ಲೇಷಣೆ, ಅಸ್ಥಿಪಂಜರದ ವಿಶ್ಲೇಷಣೆ, ಮತ್ತಿತರ ಆಧುನಿಕ ಫೋರೆನ್ಸಿಕ್ ತಂತ್ರ ಬಳಸಿ ಫೇಸ್ ರಿಕನ್ಸಟ್ರಕ್ಷನ್, ಕಾರ್ಬನ್ ಡೇಟಿಂಗ್ ಮುಂತಾದ ವೈಜ್ಞಾನಿಕ ವಿಧಿವಿಧಾನಗಳನ್ನು ನಡೆಸಿ ತೀರ್ಮಾನ ಮಾಡಬೇಕಿದ್ದಿತು.

ಮಾತನಾಡಿದ ಅಸ್ತಿಪಂಜರ!!!

ಮೊದಲಿಗೆ ಅಸ್ಥಿಪಂಜರದ ಎಡ ಕೆಳ ದವಡೆಯ ಹಲ್ಲೊಂದನ್ನು ತೆಗೆದು ಡಿಎನ್ಎ ವಿಶ್ಲೇಷಣೆಗೆ ರವಾನಿಸಲಾಯಿತು. ನಂತರ ಸಿ.ಟಿ ಸ್ಕಾನ್ ಮಾಡಲಾಯಿತು. ಅದಾದ ನಂತರ ಅಸ್ಥಿಪಂಜರವನ್ನು ಸ್ವಚ್ಚಗೊಳಿಸಿ ತಜ್ಞವೈದ್ಯರ ಪರೀಕ್ಷೆಗೆ ನೀಡಲಾಯಿತು. ಪಾದಗಳ ಭಾಗ ನಾಪತ್ತೆಯಾಗಿದ್ದಿದ್ದು ಬಿಟ್ಟರೆ, ಅದು ಒಳ್ಳೆಯ ಸ್ಥಿತಿಯಲ್ಲಿತ್ತು. ಅದರ ಮೇಲೆ ಹತ್ತು ಕಡೆ ಗಂಭೀರ ಗಾಯಗಳ ಗುರುತುಗಳನ್ನು ತಜ್ಞರು ವಿಶ್ಲೇಷಣೆ ಮಾಡಿದರು. ಅತ್ಯಂತ ಚೂಪಾದ ಆಯುಧಗಳಿಂದಾದ ಒಟ್ಟು ಎಂಟು ಮಾರಣಾಂತಿಕ ಗಾಯಗಳ ಕುರುಹುಗಳನ್ನು ಅವರು ತಲೆಯ ಬುರುಡೆಯೊಂದರಲ್ಲೇ ಗುರ್ತಿಸಿದರು. ತಲೆ ಹಿಂಭಾಗಕ್ಕೆ ಚೂಪಾದ ಕತ್ತಿ ಅಥವಾ ಕೊಡಲಿಯಂಥ ಆಯುಧದಿಂದ ಬಿದ್ದ ಹೊಡೆತವು ಅಂಗೈ ಅಗಲದಷ್ಟು ತಲೆಚಿಪ್ಪನ್ನು ಹೋಳು ಮಾಡಿ ಹಾರಿಸಿಬಿಟ್ಟಿತ್ತು. ಈ ಹೊಡೆತದಿಂದ ಮೆದುಳಿಗೆ ಅದ ಘಾಸಿಯು ಮಾರಣಾಂತಿಕವಾಗಿ ಪರಿಣಮಿಸಿತ್ತು. ಅತ್ಯಂತ ಭೀಬತ್ಸ ವಿಚಾರವೆಂದರೆ, 3ನೇ ರಿಚರ್ಡನ ಪ್ರಾಣ ಹಾರಿಹೋದ ಮೇಲೆಯೂ ಯುದ್ಧೋನ್ಮತ್ತ ಶತೃಗಳ ಗುಂಪು ಅವನ ಶವದ ಮೇಲೆ ಮುಗಿಬಿದ್ದು, ತುಚ್ಛೀಕರಿಸಲೆಂದೇ ಮನ ಬಂದಂತೆ ಅದನ್ನು ಆಯುಧಗಳಿಂದ ಮನಸೋ ಇಚ್ಛೆ ಇರಿದು ರೋಷವನ್ನು ತೀರಿಸಿಕೊಂಡದ್ದು ಮತ್ತು ಅದನ್ನು ಕುದುರೆಯ ಮೇಲೆ ಏರಿಸಿ ಹಗ್ಗದಿಂದ ಬಿಗಿದು ಸಾಗಿಸಿ, ಅರೆಬರೆ ಅಗೆದಿದ್ದ ಹಳ್ಳದಲ್ಲಿ ಬೇಕಾಬಿಟ್ಟಿ ಎಂಬಂತೆ ಗಡಿಬಿಡಿಯಲ್ಲಿ ಮಣ್ಣು ಮಾಡಿದ್ದು, ಹೀಗೆ ತನ್ನ ಮೇಲಾದ ಈ ಎಲ್ಲ ದರ‍್ಜನ್ಯವನ್ನು ಆ ಅಸ್ಥಿಪಂಜರ ತಜ್ಞರಿಗೆ ವಿವರಿಸಿ ಹೇಳಿತೆಂದರೆ ಆಶ್ಚರ್ಯವೇ ಸರಿ.

ವಿವರವಾದ ಪರೀಕ್ಷೆಯಿಂದ ಆ ವ್ಯಕ್ತಿಯ ಎತ್ತರ ಸುಮಾರು ಐದು ಅಡಿ ಎಂಟು ಇಂಚು ವಯಸ್ಸು 30 ರಿಂದ 34 ಎಂದು ಅಂದಾಜಿಸಲಾಯಿತು. ಅಸ್ಥಿಪಂಜರದ ಭೌತಿಕ ರಚನೆಯ ಕಾರಣದಿಂದ ಅದು ಗಂಡಸಿನದೇ ಅಥವಾ ಹೆಂಗಸಿನದೇ ಎಂಬ ಗೊಂದಲ ಒಂದು ಹಂತದಲ್ಲಿ ಸಂಶೋಧಕರನ್ನು ಕಾಡಿದ್ದು ಉಂಟು. ಅದು ದೃಢಕಾಯ ಶರೀರದ ಮನುಷ್ಯನದಾಗಿರದೇ ಹೆಣ್ಣನ್ನು ಹೋಲುವ ಸಣಕಲು ದೇಹದ ಮನುಷ್ಯನ ಮೂಳೆಯ ರಚನೆ ಹೊಂದಿದ್ದು ಮೊದಲ ಕಾರಣ. ಅದರ ಪೆಲ್ವಿಸ್ ಮೂಳೆಯಲ್ಲಿನ ದ್ವಾರವು ಗಂಡಸಿನಲ್ಲಿ ಸಾಮಾನ್ಯವಾಗಿ ಇರಬೇಕಾದಕ್ಕಿಂತ ಹೆಚ್ಚು ವಿಸ್ತಾರವಾಗಿದ್ದು ಎರಡನೆಯಕಾರಣ. ಹೀಗಾಗಿ, ಅದು ಹೆಣ್ಣಿನದೋ, ಗಂಡಿನದೋ ಎಂದು ಖಚಿತ ಪಡಿಸಿಕೊಳ್ಳಲು ಙ ಕ್ರೋಮೋಸೋಮಿನ ಪರೀಕ್ಷೆಗೆ ಮೊರೆ ಹೋಗಬೇಕಾಯಿತು. ಕೋಶ ಕೇಂದ್ರದ ಡಿಎನ್ಎ ಪರೀಕ್ಷೆಯಲ್ಲಿ ಅದು Y- ಕ್ರೋಮೋಸೋಮ್ ಹೊಂದಿದ್ದರಿಂದ, ಅಸ್ಥಿ ಪಂಜರ ಗಂಡಿನದೇ ಎಂದು ಖಚಿತವಾಯಿತು.

ಅಗ್ನಿಪರೀಕ್ಷೆ!

ಕಾರ್ಬನ್ ಡೇಟಿಂಗ್ ವಿಶ್ಷೇಷಣೆಯನ್ನು ಪ್ರತ್ಯೇಕವಾಗಿ ಎರಡು ವಿಭಿನ್ನ ಪ್ರಯೋಗಾಲಯಗಳಲ್ಲಿ ನಡೆಸಲಾಯಿತು. ಎರಡೂ ಕಡೆಯಿಂದ ಬಂದ ಫಲಿತಾಂಶಗಳು ಒಂದೇ ರೀತಿಯಲ್ಲಿದ್ದವು. ಆ ವ್ಯಕ್ತಿಯು ಬದುಕಿದ್ದ ಕಾಲವನ್ನು ಶೇಕಡ 95.4 ರಷ್ಟು ನಿಖರವಾಗಿ 14561530 ಎ0ದು ಅವು ಗುರ್ತಿಸಿದ್ದವು. 3ನೇ ರಿಚರ್ಡ್ ಯುದ್ದದಲ್ಲಿ ಮಡಿದಿದ್ದು 1485ರಲ್ಲಿ ಎ0ಬುದು ಇಲ್ಲಿ ಗಮನಿಸಬೇಕಾದ ವಿಚಾರ.

ಬಹಳ ಮುಖ್ಯವಾದ ಸಂಶೋಧನೆಯ ಹಂತವೆಂದರೆ ಅಸ್ಥಿಪಂಜರವು ದೊರೆ 3ನೇ ರಿಚರ್ಡನದೇ ಎಂದು ನಿರೂಪಿಸುವುದು. ಇದಕ್ಕಾಗಿ, ಡಿಎನ್ಎ ಪರೀಕ್ಷೆ ಮಾಡುವುದು ಅಗತ್ಯವಾಗಿತ್ತು. ಪ್ರಸ್ತುತ ವಾರಸುದಾರಿಕೆ ಪರೀಕ್ಷಿಸಲು ಮುಖ್ಯವಾಗಿ ಮೂರುರೀತಿಯ ಡಿಎನ್ಎ ಪರೀಕ್ಷೆಗಳಿವೆ. 1. Y-ಕ್ರೋಮೋಸೋಮ್, 2. ಮೈಟೋಕಾಂಡ್ರಿಯ, 3. ಆಟೋಸೋಮಲ್. ಜನಾಂಗೀಯ ಮೂಲ, ಅದರ ಚಟುವಟಿಕೆ ಮುಂತಾದವುಗಳನ್ನು ಪತ್ತೆ ಮಾಡುವಲ್ಲಿ ಆಟೋಸೋಮಲ್ ಡಿಎನ್ಎ ಪರೀಕ್ಷೆ ಉಪಯೋಗಕ್ಕೆ ಬರುತ್ತದೆ. Y-ಕ್ರೋಮೋಸೋಮ್ ಪರೀಕ್ಷೆಯು ಪಿತೃ ಮೂಲವನ್ನು ಕಂಡು ಹಿಡಿಯಲು‌ ಉಪಯೋಗಕ್ಕೆ ಬರುತ್ತದೆ. ತಂದೆಯು ಮಗನಿಗೆ ವರ್ಗಾಯಿಸುವ Y-ಕ್ರೋಮೋಸೋಮ್ಗಳಲ್ಲಿ ಯಾವುದೇ ಬದಲಾವಣೆ‌ ಇರುವುದಿಲ್ಲ. ತಂದೆ ಮತ್ತು ಮಗನ ಡಿಎನ್ಎ ಪ್ರೊಫೈಲಿನ ಹೋಲಿಕೆಯು ಪಿತೃತ್ವವನ್ನು ಸಾಬೀತು ಪಡಿಸುತ್ತದೆ. ಹೀಗಾಗಿ, ಈ ರೀಕ್ಷೆಯಿಂದ ಒಂದು ವಂಶಾವಳಿಯಲ್ಲಿ ಬಂದ ಗಂಡು ಮೂಲವನ್ನು ಪತ್ತೆ ಮಾಡಬಹುದು, ಅಮ್ಮ ಸತ್ಯ ಅಪ್ಪ ನಂಬಿಕೆ ಎಂಬ ಅರ್ಥವತ್ತಾದ ಒಂದು ಮಾತಿದೆ. ಐದು ಶತಮಾನಗಳಿಗೂ ಮೀರಿದ ಒಂದು ನಮೂನೆಯನ್ನು ಪರೀಕ್ಷೆ ಮಾಡುವಾಗ ಯಾವುದಾದರೂ ಒಂದು ಹಂತದಲ್ಲಿ ವಿವಾಹೇತರ ಸಂತಾನ ಅಥವಾ ದತ್ತು ಸ್ವೀಕಾರ ವಂಶಾವಳಿಯಲ್ಲಿ ಸೇರಿಹೋಗಿದ್ದರೆ ಈ ಹೋಲಿಕೆ ಹೊಂದಾಣಿಕೆ ಆಗದೆ ಪಿತೃತ್ವದ ಪರೀಕ್ಷೆಯ ಫಲಿತಾಂಶ ನಕಾರಾತ್ಮಕ ಬರುವುದು ಶತಸಿದ್ಧ. ಟೂಡರ್ ವಂಶಾವಳಿಯ ಒಂದು ಹಂತದಲ್ಲಿ ಇಂಥ ಒಂದು ಪ್ರಸಂಗ ಕ್ರೋಮೋಸೋಮಲ್ ಡಿಎನ್ಎ ವಿಶ್ಲೇಷಣೆಯಿಂದ ಪತ್ತೆಯಾಗಿದೆ. ಆದ್ದರಿಂದ, 3ನೇ ರಿಚರ್ಡನದು ಎಂದು ಹೇಳಲಾದ ಈ ನಮೂನೆಗೆ Y -ಕ್ರೋಮೋಸೋಮ್ ಪರೀಕ್ಷೆ ಮತ್ತು ಮೈಟೋಕಾಂಡ್ರಿಯಲ್ ಪರೀಕ್ಷೆ‌ ಎರಡನ್ನೂ ಮಾಡಲಾಯಿತು. ಈ ಹಿಂದೆ ತಿಳಿಸಿದಂತೆ Y -ಕ್ರೋಮೋಸೋಮಲ್ ಪರೀಕ್ಷೆಯನ್ನು ಈ ನಮೂನೆಯಲ್ಲಿ ಲಿಂಗ ನಿರ್ಧಾರಕ್ಕೆ ಮಾತ್ರ ಪರಿಗಣಿಸಲಾಯಿತು. ಅದರೆ, ವಾರಸುದಾರಿಕೆ ನಿರ್ಧರಿಸುವಾಗ ಮೈಟೋಕಾಂಡ್ರಿಯಲ್ ಪರೀಕ್ಷೆಯನ್ನು ಮಾತ್ರ ಅವಲಂಬಿಸಲಾಯಿತು.


ಚಿತ್ರ ಕೃಪೆ :ಕ್ಲೀವ್ಲ್ಯಾಂಡ್‌ಕ್ಲಿನಿಕ್

ಮೈಟೋಕಾಂಡ್ರಿಯಲ್‌ ಡಿಎನ್‌ಎ ದ ರಂಗ ಪ್ರವೇಶ




ಚಿತ್ರ ಕೃಪೆ:: ವಿಕಿಪೀಡಿಯ

ಕೋಶಕೇಂದ್ರದ ಕ್ರೋಮೋಸೋಮಿನಲ್ಲಿ ಮಾತ್ರವಲ್ಲದೇ, ಅದರ ಹೊರಗಿರುವ ಮೈಟೋಕಾಂಡ್ರಿಯಾದಲ್ಲೂ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಡಿಎನ್ಎ ಇರುತ್ತದೆ. ಇದನ್ನು ಮೈಟೋಕಾಂಡ್ರಿಯಲ್ ಡಿಎನ್ಎ (mtDNA) ಎಂದು ಕರೆಯಲಾಗುತ್ತದೆ. mtDNA ತಾಯಿಯಿಂದ ಮಗುವಿಗೆ ಬರುತ್ತದೆ. ಹೀಗೆ, ಬಂದ ಇದನ್ನು ಗಂಡು ಮಕ್ಕಳು ತಮ್ಮಲ್ಲಿ ಹೊಂದಿರುತ್ತಾರೆ ಆದರೆ, ವರ್ಗಾಯಿಸಲಾಗುವುದಿಲ್ಲ. ಹೆಣ್ಣು ಮಕ್ಕಳು ಹೊಂದಿರುತ್ತಾರೆ ಮತ್ತು ಬಹಳ ಮುಖ್ಯವಾಗಿ ಮುಂದಿನ ಪೀಳಿಗೆಗೆ ವರ್ಗಾಯಿಸುತ್ತಾರೆ. ಯುಗ್ಮಜ ನಿರ್ಮಾಣವಾಗುವಾಗ ಸಂದರ್ಭದಲ್ಲಿ ವೀರ್ಯಾಣು mtDNA ಇರುವ ತನ್ನ ಬಾಲವನ್ನು ಕಳಚಿ ಹೊರಗೆ ಬಿಟ್ಟು ಅಂಡಾಣುವನ್ನು ಪ್ರವೇಶಿಸುತ್ತದೆ. ಹೀಗಾಗಿ ಮುಂದಿನ ಪೀಳಿಗೆಗೆ ತಂದೆಯ mtDNA ವರ್ಗಾವಣೆ (ಕೆಲವು ಅಪವಾದಗಳನ್ನು ಬಿಟ್ಟು) ವರ್ಗಾವಣೆ ಆಗುವುದೇ ಇಲ್ಲ. ಮಾತೃ ವಂಶಾವಳಿಯನ್ನು ತಿಳಿಯಲು mtDNA ವಿಶ್ಲೇಷಣೆಯು ಅತ್ಯಂತ ನಿಖರವಾದ ಮತ್ತು ವಿಶ್ವಾಸಾರ್ಹ ವಿಧಾನವಾಗಿರುತ್ತದೆ. ಸುಲಭವಾಗಿ ರೂಪಾಂತರವಾಗಬಲ್ಲ ಕೋಶಕೇಂದ್ರೀಯ ಡಿಎನ್ಎಗೆ ಹೋಲಿಸಿದರೆ mtDNA, ಕಾಲಾಂತರದ ಪರೀಕ್ಷೆಗಳಲ್ಲಿ ಹೆಚ್ಚು ಸ್ಥಿರ, ದೃಢ, ಬಹತೇಕ ರೂಪಾಂತರ ಮುಕ್ತ. ಹೀಗಾಗಿ, ವಂಶಾವಳಿ ನಿರ್ಧಾರಕ್ಕೆ ಸೂಕ್ತ ವಿಧಾನ. ತಾಯಿ ಬಳಗದವರ ಹಲವಾರು ತಲೆಮಾರುಗಳ ಹಿಂದಿನವರ mtDNA ಯೊಂದಿಗೆ ಹೋಲಿಕೆ ಮಾಡಬಹುದು.

ದೊರೆ 3ನೇ ರಿಚರ್ಡನ ವಂಶವೃಕ್ಷವನ್ನು ಗಮನಿಸಿದರೆ ಪ್ಲಾಂಟಿಜೆನೆಟ್ ಮತ್ತು ಟೂಡರ್ ಈ ಎರಡೂ ಬಣದವರು ದಾಯಾದಿಗಳು ಎಂಬುದು ತಿಳಿಯುತ್ತದೆ. ದೊರೆ 3ನೇ ರಿಚರ್ಡನ ಏಕೈಕ ಪುತ್ರ ಎಡ್ವರ್ಡ್ ಆಫ್ ಮಿಡಲ್ಹಾಮ್ ಹತ್ತು ವರ್ಷ ಪೂರೈಸುವ ಮೊದಲೇ ತೀರಿ ಹೋದನಾದ್ದರಿಂದ ಅವನಿಗೆ ಯಾರೂ ವಾರಸುದಾರರು ಇರಲಿಲ್ಲ. ಬ್ರಿಟನ್ನಿನ ಅರಸೊತ್ತಿಗೆಯ ವಂಶಜರ ವಂಶವೃಕ್ಷಗಳನ್ನು ಇರಿಸಿಕೊಂಡು ಆಧುನಿಕ ಜಗತ್ತಿನಲ್ಲಿ ಈಗ ಜೀವಿಸಿರುವ ಎಲ್ಲರನ್ನೂ ಹುಡುಕಲಾಯಿತು. ಮತ್ತು ಅವರಲ್ಲಿ ಸ್ವಪ್ರೇರಣೆಯಿಂದ ಡಿಎನ್ಎ ಪರೀಕ್ಷೆಗೆ ಒಳಗಾಗಲು ಬಂದವರ ಬಾಯಿಯ ಲಾಲಾರಸ ಮತ್ತು ಒಳ ದವಡೆಯ ಜೀವಕೋಶಗಳನ್ನು ಸಂಗ್ರಹಿಸಿ ಅದರಿಂದ ಅವರ ಮೈಟೋಕಾಂಡ್ರಿಯ ಮತ್ತು ಕ್ರೋಮೋಸೋಮ್‌ ಡಿಎನ್ಎ ಪ್ರತ್ಯೇಕಿಸಲಾಯಿತು. ನಂತರ, ಅವರ ಡಿಎನ್ಎ ಪ್ರೊಫೈಲನ್ನು 3ನೇ ರಿಚರ್ಡನ ಡಿಎನ್ಎ ಪ್ರೊಫೈಲಿನೊಂದಿಗೆ ಹೋಲಿಸಲಾಯಿತು. ಇದರಲ್ಲಿ, ಅವನ ಒಡ ಹುಟ್ಟಿದ ಅಕ್ಕನ ಪೀಳಿಗೆಯ ಹದಿನಾಲ್ಕು ತಲೆಮಾರುಗಳು ನಂತರದ ಸಂಬಂಧಿಗಳಾದ ಅಧುನಿಕ ಜಗತ್ತಿನಲ್ಲಿ ಜೀವಿಸಿರುವ ಕೆನಡಾ ನಿವಾಸಿ ಮೈಕೆಲ್ ಇಬ್ಸನ್ ಮತ್ತು ಆಸ್ಟ್ರೇಲಿಯಾದ ನಿವಾಸಿ ಶ್ರೀಮತಿ ವೆಂಡಿಡಲ್ಡಿಗೆ ಇವರ ಕೊಡುಗೆ ನಿರ್ಣಾಯಕವಾಗಿ ಪರಿಣಮಿಸಿತು. ಅವರ mtDNA ಪ್ರೊಫೈಲ್‌ ಮತ್ತು 3ನೇ ರಿಚರ್ಡನ mtDNA ಪ್ರೊಫೈಲ್ ನಿಖರವಾಗಿ ಹೋಲಿಕೆಯಾಗುವುದರೊಂದಿಗೆ ಬಲವಾದ ಸಾಕ್ಷ್ಯವನ್ನು ಒದಗಿಸಿತು. ಇದರ ಆಧಾರದ ಮೇಲೆಯೇ ಕಾರು ಪಾರ್ಕಿನ ಕೆಳಗೆ ದೊರೆತ ಅಸ್ಥಿಪಂಜರವು 3ನೇ ರಿಚರ್ಡನದೇ ಎನ್ನುವ ನಿರ್ಧಾರಕ್ಕೆ ಬರಲಾಯಿತು.


ತಲೆಬುರುಡೆಯ ಫೋಟೋ ಬಳಕೊಂಡು ಡಿಜಿಟಲ್ ತಂತ್ರದಿಂದ ಪುನರ್ ನಿರ್ಮಿಸಿದ ದೊರೆ 3ನೇ ರಿಚರ್ಡನ ಮೂರ್ತಿ.

ಚಿತ್ರಕೃಪೆ: 3ನೇ ರಿಚರ್ಡ ಸೊಸೈಟಿ

3ನೇ ರಿಚರ್ಡನ ತಲೆಬುರುಡೆಯ ಚಿತ್ರವನ್ನು ಆಧಾರವಾಗಿ ಇರಿಸಿಕೊಂಡು ಡಿಜಿಟಲ್ ತಂತ್ರದಿಂದ ರೂಪಿಸಿದ ಅವನ ಪ್ರತಿಮೆಯು ಅವನ ಕಾಲದಲ್ಲಿ ಕಲಾಕಾರರು ರಚಿಸಿದ್ದ ಅವನ ಭಾವಚಿತ್ರಗಳನ್ನು ಬಹುತೇಕ ಹೋಲುತ್ತಿದ್ದುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿತು. ಈ ಎಲ್ಲ ವಿವಿಧ ಅಗ್ನಿ ಪರೀಕ್ಷೆಗಳನ್ನು ಮುಗಿಸಿ ಕೊನೆಗೆ 3ನೇ ರಿಚರ್ಡನ ಗುರುತು ಸ್ವಷ್ಟವಾದ ಮೇಲೆ ಆತನಿಗೆ ಈಗಲಾದರೂ ಸೂಕ್ತ ರೀತಿಯ ಗೌರವ ಸ್ಥಾನಮಾನಗಳನ್ನು ನೀಡಬೇಕೆಂದು ನಿರ್ಧರಿಸಿದ ಆಡಳಿತ ಮತ್ತು ಸಾರ್ವಜನಿಕರು, ಅವನ ಅಸ್ಥಿಯನ್ನು ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಅದು ದೊರೆತಲ್ಲಿಂದ ಅನತಿ ದೂರದಲ್ಲಿಯೇ ಇರುವ ಕೆಥೆಡ್ರಲ್ಲಿನಲ್ಲಿ ಸಮಾಧಿ ಮಾಡಿದರು. ಅವನಿಗೆ ಆಗಿರಬಹುದಾದ ಅನ್ಯಾಯವನ್ನು ಸರಿಪಡಿಸುವ ಕಾರ್ಯವನ್ನು ಬಹಳ ವಿಜೃಂಭ್ರಣೆಯಿಂದ ನೆರೆವೇರಿಸಿ ಅವನ ಅಭಿಮಾನಿಗಳಿಗೂ ಸಮಾಧಾನವಾಗುವಂತೆ ಅವನ ಆತ್ಮಕ್ಕೆ ಶಾಂತಿ ಕೋರಿದರು. ಈಗ ಲೀಸ್ಟರಿನಲ್ಲಿ 3ನೇ ರಿಚರ್ಡನ ಅಸ್ಥಿಪಂಜರ ದೊರೆತ ಕಾರ್ ಪಾರ್ಕ್ ಮತ್ತು ಅವನ ಹೊಸ ಸಮಾದಿ ಸ್ಥಳಗಳು ಪ್ರವಾಸಿಗರನ್ನು ಸೆಳೆಯುವ ಕೇಂದ್ರಗಳಾಗಿ ಬೆಳೆದಿವೆ.


No comments:

Post a Comment