ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, February 4, 2023

ಭಾರತೀಯ ಸಂಜಾತ ಗಣಿತಜ್ಞೆ ಭಾಮಾ ಶ್ರೀನಿವಾಸ್‌

ಭಾರತೀಯ ಸಂಜಾತ ಗಣಿತಜ್ಞೆ ಭಾಮಾ ಶ್ರೀನಿವಾಸ್‌ 

ಶ್ರೀಮತಿ ಚಂದ್ರಕಲಾ ಆರ್

ಗಣಿತ ಶಿಕ್ಷಕಿ, 

ಕೆ ಪಿ ಎಸ್ ಕೊಡಿಗೆಹಳ್ಳಿ , 

ಬೆಂಗಳೂರು ಉತ್ತರ                

ಗಣಿತ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ ಭಾರತೀಯ ಸ್ತ್ರೀಯರಲ್ಲಿ ಕೇಳಿಬರುವ ಒಂದು ಪ್ರಮುಖ ಹೆಸರು ಶ್ರೀಮತಿ ಭಾಮಾ ಶ್ರೀನಿವಾಸನ್ ಅವರದ್ದು. ಅವರ ಸಾಧನೆಗಳ ಪರಿಚಯವನ್ನು ಮಾಡಿಕೊಡುವ ಈ ಲೇಖನವನ್ನು ಬರೆದವರು ಗಣಿತ ಶಿಕ್ಷಕಿ ಶ್ರೀಮತಿ ಎಸ. ಚಂದ್ರಕಲಾ ಅವರು. ಈ ಲೇಖನದ ಮೂಲಕ ಅವರು ‘ಸವಿಜ್ಞಾನ’ದ ಲೇಖಕರ ಬಳಗವನ್ನು ಸೇರುತ್ತಿದ್ದಾರೆ.

ತರಗತಿಯಲ್ಲಿ ಪಾಠ ಮಾಡುವಾಗ, ಭಾಸ್ಕರಾಚಾರ್ಯ, ಆರ್ಯಭಟ, ಶ್ರೀನಿವಾಸ ರಾಮಾನುಜನ್, ಪೈಥಾಗರಸ್, ಯೂಕ್ಲಿಡ್ ಇತ್ಯಾದಿ ಗಣಿತಶಾಸ್ತ್ರಜ್ಞರ ಹೆಸರನ್ನು  ಹೇಳುತ್ತಿರುತ್ತೇವೆ.

ಹೀಗೆ ಒಂದು ತರಗತಿಯಲ್ಲಿ ನನ್ನ ವಿದ್ಯಾರ್ಥಿನಿಯೊಬ್ಬಳು " ಯಾವಾಗ್ಲೂ ಪುರುಷ ಗಣಿತಶಾಸ್ತ್ರಜ್ಞರ ಬಗ್ಗೆ ಹೇಳ್ತಿರಲ್ಲ, ಸ್ತ್ರೀಯರು ಇಲ್ವಾ? ಮಿಸ್ " ಎಂದಾಗ ಒಮ್ಮೆಲೆ ಎದೆ ಝಲ್ ಎಂದಿತ್ತು. ಹೌದಲ್ವಾ ನಾವ್ಯಾಕೆ ಸ್ತ್ರೀ ಗಣಿತಶಾಸ್ತ್ರಜ್ಞರ ಬಗ್ಗೆ ಏನೂ ಹೇಳುವುದೇ ಇಲ್ಲ ಅನ್ನಿಸ್ತು.

ಪ್ರಕೃತಿ ಸ್ತ್ರೀ ಪುರುಷರನ್ನ ಸಮಾನವಾಗಿ ಸೃಷ್ಟಿಸಿದೆಯಾದರೂ…… ಗಣಿತ ಕ್ಷೇತ್ರದಲ್ಲಿ ಸ್ತ್ರೀಯರ ಸಂಖ್ಯೆ ಕಡಿಮೆ ಅನ್ನಿಸುತ್ತಲ್ಲ! ಅಂತ ಯೋಚಿಸಿದ್ರೆ, ಬಹುಶಃ ಅಂದಿನ ಸಾಮಾಜಿಕ ಸ್ಥಿತಿ ಇದಕ್ಕೆ ಕಾರಣ ಇರಬಹುದು ಅನ್ನಿಸಿತು.

ಇದೇ ಆಲೋಚನೆ ಮುಂದುವರೆದು ಕೆಲ ಗಣಿತಶಾಸ್ತ್ರಜ್ಞರನ್ನು ಪರಿಚಯ ಮಾಡಿಸೋಣ ಅಂತ ಹೊರಟೆ. ಮೊದಲನೆಯದಾಗಿ ಭಾರತೀಯ ಮೂಲದವರಾದ ಭಾಮಾ ಶ್ರೀನಿವಾಸನ್ ಬಗ್ಗೆ ತಿಳಿದುಕೊಳ್ಳೋಣ 

ಭಾಮ ಶ್ರೀನಿವಾಸನ್ 

ಭಾರತಮಾತೆಯ ಮಡಿಲಲ್ಲಿ ಹುಟ್ಟಿ,ಬೆಳೆದು, ಅಮೆರಿಕಾದಲ್ಲಿ ಗಣಿತಜ್ಞಯ ಸ್ಥಾನವನ್ನು ಅಲಂಕರಿಸಿರುವ ಭಾಮ ಶ್ರೀನಿವಾಸನ್ ಜನಿಸಿದ್ದು ನಮ್ಮ ದೇಶ ಸ್ವತಂತ್ರ ವಾಗುವುದಕ್ಕೆ 12 ವರ್ಷ ಮೊದಲು ಕ್ರಿ. 1935 ನೇ ಇಸವಿಯಲ್ಲಿ. ಆಗಿನ ಮದ್ರಾಸ್ ನಲ್ಲಿ. ಅವರ ತಂದೆ V K ರಂಗಸ್ವಾಮಿ, ಕಾಲದಲ್ಲೇ ಪ್ರಸಿದ್ಧ ಆಕ್ಷ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ M.A. ಪದವಿ ಪಡೆದ ಮೇಧಾವಿ. ತಾಯಿ ಇಂದಿರಾ. ದಂಪತಿಗಳ ಮೊದಲ ಮಗಳೇ ಭಾಮಾ

ಭಾಮ ಶ್ರೀನಿವಾಸನ್ ಕುಟುಂಬ ಶಿಕ್ಷಣಕ್ಕೆ ಮಹತ್ವ ಕೊಟ್ಟಂತಹ ಕುಟುಂಬ. ಇವರ ಕುಟುಂಬದ ಅನೇಕರು ಕೇಂಬ್ರಿಡ್ಜ್, ಸ್ಟ್ಯಾನ್ ಫೋರ್ಡ್, ಸಿಡ್ನಿ ಮುಂತಾದಂತಹ ವಿಶ್ವವಿದ್ಯಾಲಯಗಳಲ್ಲಿ ಕೆಲಸದಲ್ಲಿ ತೊಡಗಿದ್ದಂತಹವರು. ಭಾಮರ ತಾತ ಸ್ವಂತ ಪರಿಶ್ರಮದಿಂದ ಗಣಿತ ಕಲಿಯುತ್ತಿದ್ದ ಹವ್ಯಾಸಿ ಗಣಿತಜ್ಞ. ಇಂತಹ ಹಿನ್ನೆಲೆಯಿಂದ ಬಂದ ಭಾಮ ತರಗತಿಗಳಲ್ಲಿ ಮುಂದೆ ಜೀವನದಲ್ಲಿ ಅಸಾಮಾನ್ಯ ಬುದ್ಧಿವಂತಿಕೆ ತೋರಿದ್ದು ಸಹಜವೇ. ಅವರ ಪ್ರಾರಂಭಿಕ ಶಿಕ್ಷಣ ಮದ್ರಾಸ್ನ ಆಲ್ ಗರ್ಲ್ಸ್ ಹೈ ಸ್ಕೂಲ್ ನಲ್ಲಿ ಆಯಿತು. ನಂತರ ಮದ್ರಾಸ್ ನಲ್ಲೇ ಗಣಿತದಲ್ಲಿ ಬಿಎ ಪದವಿ ಪಡೆದರು. ಅವಧಿ ಅವರಿಗೆ ಆಸಕ್ತಿದಾಯಕವಾಗಿರಲಿಲ್ಲ, ಕಾರಣ ಪಠ್ಯ ವಸ್ತು ಕನಿಷ್ಠ 30 ವರ್ಷ ಹಳೆಯದಾಗಿದ್ದು ಭಾಮಾರ ಗಣಿತ ತೃಷೆ ತಣಿಸುವಲ್ಲಿ ಸಫಲವಾಗಲಿಲ್ಲ. ನಂತರ ಅವರು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ M.Sc., ಪದವಿ ಪಡೆದರು. ಅವಧಿ ಅವರಿಗೆ ಉತ್ಸಾಹದಾಯಕವಾಗಿತ್ತು. ಆಧುನಿಕ ಬೀಜಗಣಿತದಲ್ಲಿ ಆಸಕ್ತಿ ಮೂಡಿದ್ದು ಆಗಲೇ.  ಇದೇ ವೇಳೆಗೆ ಮದ್ರಾಸ್ನಲೊಯೊಲಾ ಕಾಲೇಜಿನ ಫಾದರ್ ಸೀನ್ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಹಲವು ಕೋರ್ಸ್ ಗಳನ್ನು ಪ್ರಾರಂಭಿಸಿದರು. ಸದವಕಾಶ ಬಳಸಿಕೊಂಡ ಭಾಮಾರು ಟೋಪೋಲಜಿ ಮುಂತಾದ ವಿಷಯಗಳ ಕೋರ್ಸ್ಗೆ ಪ್ರವೇಶ ಪಡೆದರು. ಇದು ಅವರನ್ನು ಧುತ್ತನೆ 20ನೇ ಶತಮಾನಕ್ಕೆ ಕೊಂಡೊಯ್ದಂತೆ ಆಯ್ತಂತೆ.

M.Sc. ಪದವಿ ಪಡೆದ ನಂತರ ಭಾಮಾ ಮದುವೆಯಾಗಿ ಪತಿಯೊಡನೆ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಗೆ ತೆರಳಿದರು. ಸಮಯದಲ್ಲಿ ಅಲ್ಲಿ ಗಣಿತಕ್ಕೆ ಪ್ರೋತ್ಸಾಹದಾಯಕ ವಾತಾವರಣವಿತ್ತು. ಹಾಗಾಗಿ ಅವರು ಅಲ್ಲಿನ ವಿಶ್ವವಿದ್ಯಾಲಯಕ್ಕೆ Ph.D ವಿದ್ಯಾರ್ಥಿಯಾಗಿ ಸೇರಿದರು.

J A ಗ್ರೀನ್ (ಸ್ಯಾಂಡಿ ಗ್ರೀನ್) ಸಮರ್ಥ ಮಾರ್ಗದರ್ಶನದಲ್ಲಿ ಮಾಡ್ಯೂಲಾರ್ ರೆಪ್ರೆಸೆಂಟೇಶನ್ ಆಫ್ ಫೈನೆಟ್ ಗ್ರೂಪ್ (modular pepersentation of finite groups)  ಎಂಬ ವಿಷಯದ ಬಗ್ಗೆ ಪ್ರೌಢ ಪ್ರಬಂಧ ರಚಿಸಿ ಕ್ರಿ. ಶ. 1960 ರಲ್ಲಿ Ph.D ಪದವಿ ಪಡೆದರು.

 ಸಂಪ್ರದಾಯದಂತೆ ಉತ್ತಮ ಗೃಹಿಣಿಯಾದರೆ ಸಾಕು ಇನ್ನೇನು ಆಗುವುದೆಲ್ಲ ಬೇಡ ಎನ್ನುತ್ತಿದ್ದ ಮನೆ ಮಂದಿಯ ಜೊತೆ ವಾದಕ್ಕೆ ನಿಂತು ಭಾಮಾರನ್ನು ಪ್ರೋತ್ಸಾಹಿಸಿದ್ದು ಸ್ವತಃ ಅವರ ಪತಿಯೇ. ಇದನ್ನು ಆಕೆ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ.

ಡಾಕ್ಟರೇಟ್ ಪದವಿ ಪಡೆದ ನಂತರ ಭಾಮ ರವರು ಇಂಗ್ಲೆಂಡಿನ ಸ್ಟ್ಯಾಂಡ್ ಫೋರ್ಡ್ ಶೈರ್ ನಲ್ಲಿನ ಪೀಲೆ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ ಪ್ರಾರಂಭಿಸಿದರು. ಕ್ರಿ. 1964 ರಲ್ಲಿ ತಮ್ಮ ಎರಡನೇ ಪ್ರಬಂಧ ಸ್ಪೆಷಲ್ ಲೀನಿಯರ್ ಗ್ರೂಪ್ಗಳ ಗುಣಲಕ್ಷಣ ವನ್ನು ಪ್ರಕಟಿಸಿದರು.

ಭಾಮಾರಿಗೆ ಕೆನಡಾದ ನ್ಯಾಷನಲ್ ರಿಸರ್ಚ್ ಕೌನ್ಸಿಲ್, ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ನೀಡಿ ಗೌರವಿಸಿತು. ಅಲ್ಲದೆ 1965-66 ರಲ್ಲಿ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾ ನಿಲಯಕ್ಕೆ ಭೇಟಿ ನೀಡಲು ಧನ ಸಹಾಯ ಒದಗಿಸಿತು. ಹಾಗಾಗಿ ಕೆನಡಾದಲ್ಲಿ ಒಂದು ವರ್ಷ ಕಳೆದ ಭಾಮಾರವರು ನಂತರ ಭಾರತಕ್ಕೆ ಮರಳಿ ಬಂದು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ರಾಮಾನುಜನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮ್ಯಾಟಿಕ್ಸ್ ನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದರು.

ಭಾರತದಲ್ಲಿ ಉದ್ಯೋಗದಲ್ಲಿದ್ದಾಗ ಹೆಣ್ಣು ಎಂಬ ಕಾರಣಕ್ಕೆ ಅಂತಹ ತಾರತಮ್ಯವನ್ನೇನು ಕಾಣದಿದ್ದರೂ "ನಿನ್ನ ಪತಿ ಒಳ್ಳೆಯ ಉದ್ಯೋಗದಲ್ಲಿದ್ದಾರೆ ನೀನೇಕೆ ದುಡಿಯಬೇಕು? " "ಅನವಶ್ಯಕವಾಗಿ ದುಡಿಯುತ್ತಿರುವ ನೀನು ಇನ್ನೊಬ್ಬರ ಅನ್ನ ಕಸಿಯುತ್ತಿರುವೆ. ಅಯ್ಯೋ ಪಾಪ! ನಿನಗೆ ಮಕ್ಕಳಿಲ್ಲ, ಹೋಗಲಿ ಬಿಡು ಅದನ್ನು ಮರೆಸುವಂತೆ ಉದ್ಯೋಗವಿದೆಯಲ್ಲ" ಎಂಬಂತಹ ಸಣ್ಣ ಮಾತುಗಳನ್ನು ಕೇಳಬೇಕಾಯಿತು.

ಮುಂದೆ ಕ್ರಿ. 1970 ರಲ್ಲಿ ಅಮೇರಿಕಾಗೆ ತೆರಳಿದ ಭಾಮ ಮೆಸೇಜು ಸೆಟ್ಸ್ ಪ್ರಾಂತ್ಯದ ವೋರ್ಸ್ ಸ್ಟರ್ ಕ್ಲಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆಗೆ ಸೇರಿದರು. ಕ್ರಿ 1976-77 ರಲ್ಲಿ ಆರ್ಮಂಡ್ ಬೋರೆಲ್ ಆಹ್ವಾನದ ಮೇರೆಗೆ ಪ್ರಿನ್ಸ್ಟನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ಉನ್ನತ ಅಧ್ಯಯನ ಸಂಸ್ಥೆ) ಗೆ ತೆರಳಿ ಅಲ್ಲಿ ಕಳೆದ ಒಂದು ವರ್ಷ ಅವರ ವೃತ್ತಿ ಜೀವನದ ಪ್ರಮುಖ ವರ್ಷ. ಕ್ರಿ. 1977 ರಲ್ಲಿ ಅವರಿಗೆ ಅಮೆರಿಕಾ ಪೌರತ್ವವೂ ಲಭಿಸಿತು.

ಇಂತಹ ಅಪ್ರತಿಮ ಗಣಿತಜ್ಞೆ 1980 ರಿಂದ ಚಿಕಾಗೋದ ಇಲ್ಲಿನಾಯ್ಸ್ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ಯಾರಿಸ್,ಜರ್ಮನಿ,ಆಸ್ಟ್ರೇಲಿಯಾ, ಜಪಾನ್ ದೇಶಗಳಲ್ಲಿ ಸಂದರ್ಶಕ ಉಪನ್ಯಾಸಕಿಯಾಗಿಯೂ ಸೇವೆ ಸಲ್ಲಿಸುತ್ತಿರುವುದು ಇವರ ಮೇಧಾ ಶಕ್ತಿಗೆ, ಕರ್ತೃತ್ವ ಶಕ್ತಿಗೆ ಸಾಕ್ಷಿ.

ಈಗ ಅವರ Ph.D. ಪ್ರಬಂಧ ಕುರಿತು ಅವರ ಮಾತುಗಳಲ್ಲೇ ಹೇಳುವುದಾದರೆ " ರೆಪ್ರಸೆಂಟೇಶನ್ ಥಿಯರಿ ಆಫ್ ಫೈ ನೈಟ್ ಗ್ರೂಪ್ಸ್ " ಎಂಬ ನನ್ನ ಸಂಶೋಧನಾ ವಿಷಯದಲ್ಲಿ ಬರುವ ಅಬ್ಪ್ತ್ರಾಕ್ಟ್ (ಅಮೂರ್ತ) ಫೈನೆಟ್ ಗ್ರೂಪ್ ಸಂರಚನೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಹಾಗಾಗಿ ಅದನ್ನೇ ಮ್ಯಾಟ್ರಿಕ್ಸ್ ಮುಖಾಂತರ ಪ್ರತಿನಿಧಿಸಲಾಗುತ್ತದೆ, ವಿಷಯಕ್ಕೆ ನೂರು ವರ್ಷಗಳ ಸಮೃದ್ಧ ಇತಿಹಾಸವಿದೆ.  "‌

 ಇವರ ಕೊಡುಗೆಗಳು

 ರೆಪ್ರಸೆಂಟೇಶನ್ ಥಿಯರಿ ಆಫ್ ಪೈ ನೆಟ್  ಗ್ರೂಪ್ಸ್ Ph.D ಪ್ರಬಂಧ.

 ರೆಪ್ರೆಸೆಂಟೇಶನ್ ಫ್ ಪೈ ನೆಟ್ ಚಾ ವ್ಯಲಿ ಗ್ರೂಪ್ಸ್ - ಪುಸ್ತಕ ಪ್ರಕಟಣೆ  1979

  ಕ್ರಿ 1981 ರಿಂದ 1983 ರವರೆಗೆ ಅಸೋಸಿಯೇಷನ್ ಆಫ್ ವುಮೆನ್ ಮ್ಯಾಥಮೆಟಿಷಿಯನ್ಸ್ ನಾ ಅಧ್ಯಕ್ಷ ಸ್ಥಾನ ಅಲಂಕರಿಸಿ ಸೇವೆಗೈದದ್ದು.

 1990 ರಾ ನೋಯ್ ದರ್ ಉಪನ್ಯಾಸ

 ಡೀಲೈನ್ - ಲೂಸ್ಟಿಂಗ್ ಸಿದ್ದಾಂತ

 ಲೂಸಿವೈಲ್ ಕೆಂಟುಕಿಯಲ್ಲಿ " ಇನ್ವೇಶನ್ ಜಾಮಿಟ್ರಿ ಇಂಟು ಫೈ ನೈಟ್ ಗ್ರೂಪ್ ಥಿಯರಿ " ಉಪನ್ಯಾಸ.

 ಅಲ್ಜೀಬ್ರಾ  ಪತ್ರಿಕೆ ಸಂಪಾದನೆ

 ಮೇರಿಕನ್ ಮ್ಯಾಥಮ್ಯಾಟಿಕಲ್ ಸೊಸೈಟಿ ಸಂಪಾದಕ ಮಂಡಲಿಗೆ ಸೇವೆ 1991-94

 ಮ್ಯಾಥಮೆಟಿಕಲ್ ಸರ್ವೆ ಅಂಡ್ ಮೋನೋಗ್ರಾಫ್ ಗಾಗಿ ಸೇವೆ1991-93

ತಮ್ಮ ಬದುಕಿನಲ್ಲಿ ಇಷ್ಟೊಂದು ಅರ್ಥಪೂರ್ಣವಾಗಿ, ಅವಿಶ್ರಾಂತವಾಗಿ ಕರ್ತವ್ಯ ನಿರತರಾಗಿರುವ ಭಾಮ ಶ್ರೀನಿವಾಸನ್ ತಮ್ಮ ಶಿಷ್ಯರಿಗೆ ಅಚ್ಚುಮೆಚ್ಚಿನ ಶಿಕ್ಷಕಿಯು ಹೌದು. ಅವರ ಶಿಷ್ಯರಲ್ಲಿ ಒಬ್ಬರು ಹೇಳುವಂತೆ  " ಅವರು ನನ್ನ ನೆಚ್ಚಿನ ಶಿಕ್ಷಕಿ, ಅವರ ಪ್ರತಿಭೆ ಉಜ್ವಲ ವಜ್ರದಂತಹಹುದು. ಅದನ್ನು ಗುರುತಿಸಲಾರದವರು ಕಣ್ಣೆದುರಿಗೆ ವಜ್ರದ ಹರಳಿದ್ದರೂ ಗುರುತಿಸಲಾಗದ ಅಸಮರ್ಥರೇ ಸರಿ "

ಭಾರತೀಯ ಸಂಸ್ಕೃತಿಯ ಹಿನ್ನೆಲೆ ಹೊಂದಿರುವ ಭಾಮರವರು ಗಣಿತದಲ್ಲೇ " ಸತ್ಯಂಶಿವಂ, ಸುಂದರಂ" ನುಡಿಯ ಸಾಕ್ಷಾತ್ಕಾರ ಮಾಡಿಕೊಂಡವರು. ಗಣಿತದ ಬಗ್ಗೆ ನ್ಯೂಯಾರ್ಕ್ ಟೈಮ್ಸ್ arent truth and beauty enough? ಎಂಬ ಮಾತನ್ನು ಸ್ಮರಿಸುತ್ತಾ " ಸತ್ಯ ಮತ್ತು ಸೌಂದರ್ಯವೇ ಸಾಕು" ಎಂದು ತತ್ವಜ್ಞಾನಿಯಂತೆ ನುಡಿಯುತ್ತಾರೆ. ಅವರ ಅಭಿಪ್ರಾಯದಲ್ಲಿ' ಗಣಿತ ಯಾವ ಪ್ರಯೋಜನಕ್ಕೆ? ' ಎಂಬ ಪ್ರಶ್ನೆ ಇಲ್ಲದಿದ್ದ ಸಂದರ್ಭದಲ್ಲಿ ಗಣಿತದಲ್ಲಿ ಉತ್ತಮ ಸಾಧನೆ ಸಾಧ್ಯ. ಹಾಗಿದ್ದೂ  ' ಮಾಡ್ಯುಲರ್  ರೆಪ್ರೆಸೆಂಟೇಶನ್ ಆಫ್ ಪೈನೆಟ್ ಗ್ರೂಪ್ಸ್  ' ಆವಿಷ್ಕಾರಗಳು ಭೌತಶಾಸ್ತ್ರದ ಕ್ವಾಂಟಮ್ ಗ್ರೂಪ್ಸ್ ಗೆ ಸಂಬಂಧಿಕರಿಸಿ ನಡೆಯುತ್ತಿರುವ ಕೆಲಸ ರೋಮಾಂಚನವನ್ನುಂಟು ಮಾಡುತ್ತದೆ ಎನ್ನುತ್ತಾರೆ.

ಇಂತಹ ಅದ್ಬುತ ಪ್ರತಿಭೆ ಭಾರತೀಯ ಮೂಲದವರೇ ಎನ್ನುವುದು ಹೆಮ್ಮೆಯ ಸಂಗತಿ.


                                                            

4 comments:

  1. Very good information..... Nicely written

    ReplyDelete
  2. ಮಹಿಳಾ ಗಣಿತಜ್ಞೆ, ಅದರಲ್ಲೂ ಭಾರತೀಯರು ಎಂದು ತಿಳಿದು ಮತ್ತಷ್ಟು ಹೆಮ್ಮೆ ಎನಿಸಿತು
    ಉತ್ತಮ ಲೇಖನ

    ReplyDelete