ಮರೆಯಾದ ವಿಜ್ಞಾನ ಸಂವಹನದ ‘ಗಟ್ಟಿ’ಧ್ವನಿ
ಲೇಖಕರು
: ರಮೇಶ, ವಿ.
ಬಳ್ಳಾ
ಅಧ್ಯಾಪಕರು
ಬಾಲಕಿಯರ
ಸರ್ಕಾರಿ ಪ ಪೂ ಕಾಲೇಜು
(ಪ್ರೌಢ)
ಗುಳೇದಗುಡ್ಡ ಜಿ: ಬಾಗಲಕೋಟ
ಮೊ:
9739022186
ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ
ಕರ್ತವ್ಯ ನಿರ್ವಹಿಸುತ್ತ, ಜೊತೆಯಲ್ಲೇ ತಮ್ಮ ವಿಜ್ಞಾನ ಲೇಖನಗಳಿಂದ, ಕೃತಿಗಳಿಂದ ಮನೆಮಾತಾಗಿದ್ದ ಶ್ರೀಮತಿ
ಸುಮಂಗಲಾ ಎಸ್.ಮಮ್ಮಿಗಟ್ಟಿ ಅವರ ಅಕಾಲಿಕ ನಿಧನದಿಂದ ಕನ್ನಡ ವಿಜ್ಞಾನ ಸಾಹಿತ್ಯ ಲೋಕ ಬಡವಾಗಿದೆ. ಅವರಿಗೆ
ʼಸವಿಜ್ಞಾನʼ ತಂಡದ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿ.
ಈ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ತಮ್ಮ ಲೇಖನದಲ್ಲಿ ಸ್ಮರಿಸಿಕೊಂಡಿದ್ದಾರೆ, ಶಿಕ್ಷಕ ರಮೇಶ್,ವಿ,ಬಳ್ಳಾ
ಅವರು.
ವಿಜ್ಞಾನ ಕಾರ್ಯಕ್ರಮಗಳೆಂದರೆ ಅವರಿಗೆ ಬಲು ಪ್ರೀತಿ. ವಿಜ್ಞಾನ ಬರವಣಿಗೆ ಇನ್ನೂ ಅಚ್ಚುಮೆಚ್ಚಿನ ಪ್ರವೃತ್ತಿ. ವಿಜ್ಞಾನ ಕಾರ್ಯಕ್ರಮಗಳು ಏನೇ ಇರಲಿ, ಎಲ್ಲೇ ಇರಲಿ ತಮ್ಮ ಹಲವಾರು ಕೆಲಸಗಳ ಒತ್ತಡದ, ಕಾರ್ಯಬಾಹುಳ್ಯದ ಮಧ್ಯೆಯೂ ಅಲ್ಲಿ ಪ್ರತ್ಯಕ್ಷವಾಗಿ ಬಿಡುವುದು ಅವರ ಜಾಯಮಾನ. ಅಷ್ಟೊಂದು ಅಪಾರವಾದ ವಿಜ್ಞಾನದ ಆಸಕ್ತಿ, ಅಭಿರುಚಿಯನ್ನು ವಿದ್ಯಾರ್ಥಿ ದೆಸೆಯಿಂದಲೇ ಪೋಷಿಸಿಕೊಂಡು ಬಂದ ಅಪರೂಪದ ಸಂವಹನಗಾರ್ತಿ, ವೃತ್ತಿಯಲ್ಲಿ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾಗಿದ್ದರೂ, ಕನ್ನಡದ ಮಟ್ಟಿಗೆ ಸರ್ವ ಶ್ರೇಷ್ಠ ವಿಜ್ಞಾನ ಬರಹಗಾರ್ತಿ ಎಂತಲೇ ಮನೆ ಮಾತಾದವರು ಅವರು. ಅಂತಹ ಸುಮಂಗಲಾ ಎಸ್. ಮುಮ್ಮಿಗಟ್ಟಿ ಇತ್ತೀಚೆಗೆ ನಮ್ಮನ್ನಗಲಿರುವುದು ವಿಜ್ಞಾನ ಸಾಹಿತ್ಯದ ಓದುಗರಿಗೆ ಹಾಗೂ ಸಮಕಾಲೀನ ಸಂವಹನಕಾರರಿಗೆ ನೋವು ತರಿಸಿದೆ. ಕ್ಯಾನ್ಸರ್ ಕಾಯಿಲೆಗೆ ಸಂಬಂಧಿಸಿದ ಅನಾರೋಗ್ಯದಿಂದ, ಇತ್ತೀಚಿಗೆ ಮಾರ್ಚ 12 ರಂದು ಸುಮಂಗಲಾರವರ ಅಕಾಲಿಕ ನಿಧನ ನಾಡಿನ ಜನರನ್ನು ದಿಗ್ಭ್ರಾಂತರನ್ನಾಗಿಸಿದೆ.
ಸುಮಂಗಲಾರವರು ಮೂಲತಃ ಹಾವೇರಿಯವರು. ತಂದೆ-ಗುರುಸಿದ್ದಪ್ಪ ಹುಲ್ಲೂರು. 1964 ನವಂಬರ್ 4ರಂದು ಜನಿಸಿದ ಇವರು ತಮ್ಮ ಪದವಿ ಶಿಕ್ಷಣವನ್ನು ಪ್ರತಿಷ್ಠಿತ ಪಿ. ಸಿ. ಜಬೀನ್ ಕಾಲೇಜಿನಲ್ಲಿ ಪೂರೈಸಿದ್ದರು. ಶಾಲಾ ಹಂತದಿಂದಲೇ ವಿಜ್ಞಾನ ಗೋಷ್ಠಿ, ಚರ್ಚೆ, ವಿಚಾರ ಸಂಕಿರಣ, ವಿಜ್ಞಾನ ಸಮಾವೇಶಗಳಲ್ಲಿ ಭಾಗವಹಿಸಿ ಹಲವಾರು ರಾಜ್ಯಪ್ರಶಸ್ತಿಗಳನ್ನು ಪಡೆದು, ಶಿಕ್ಷಕರಿಂದ ‘ಭೇಷ್’ ಎನಿಸಿಕೊಂಡಿದ್ದರು. ಕಾಲೇಜು ದಿನದಿಂದಲೇ ವಿಜ್ಞಾನ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ನೋಡುತ್ತಿದ್ದ ಇವರು ಹೆಸರಾಂತ ವಿಜ್ಞಾನಿಗಳ, ವಿಜ್ಞಾನ ಶ್ರೇಷ್ಠರ ಸಂಪರ್ಕಕ್ಕೆ ಬಂದಿದ್ದರು. ಸಹಜವಾಗಿ ವಿಜ್ಞಾನ ಕ್ಷೇತ್ರದಲ್ಲಿ ಒಲವು ಹೆಚ್ಚಾಗುತ್ತಲೇ ಬಂದಿತ್ತು. ಮುಂದೆ ವಿಭಿನ್ನವಾದ ವೃತ್ತಿ ಆಯ್ಕೆ ಮಾಡಿಕೊಂಡರೂ, ಅಲ್ಲೂ ವಿಜ್ಞಾನದ ಕಲರವ ಹರಡುವಂತೆ ನೋಡಿಕೊಂಡರು.
ಆಕಾಶವಾಣಿಯಲ್ಲಿ ನವನವೀನ ವಿಜ್ಞಾನ ಕಾರ್ಯಕ್ರಮಗಳನ್ನು ತರುವ ಮೂಲಕ , ತಮ್ಮ ಆಸಕ್ತಿಯ ವಿಜ್ಞಾನದ ಧ್ವನಿ ರಾಜ್ಯ ಮತ್ತು ರಾಷ್ಟçದಾದ್ಯಂತ ಮೊಳಗುವಂತೆ ಮಾಡಿದರು. ಜೀವಿ ಪರಿಸರವ್ಯವಸ್ಥೆ ಹಾಗೂ ಹವಾಮಾನ ಬದಲಾವಣೆ ಕುರಿತ ಸರಣಿ ಕಾರ್ಯಕ್ರಮಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು. ಅವರು ರೂಪಿಸಿದ ‘ಭುವಿಯೊಂದೇ ಭವಿಷ್ಯವೊಂದೇ’ ಎಂಬ ಬಾನುಲಿ ಕಾರ್ಯಕ್ರಮ 78 ಕಂತುಗಳಲ್ಲಿ ಪ್ರಸಾರವಾಗಿ ಜನರಲ್ಲಿ ಪರಿಸರ ಪ್ರಜ್ಞೆ ಹಾಗೂ ವೈಜ್ಞಾನಿಕ ಅರಿವು ಮೂಡಿಸಿದ್ದಕ್ಕಾಗಿ ರಾಜ್ಯ ಮಟ್ಟದ ಆಕಾಶವಾಣಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ‘ಧರೆಯ ಸಿರಿ’ ಜೀವವೈವಿಧ್ಯವನ್ನು ಪೋಷಿಸುವ ಉದ್ದೇಶ ಹೊಂದಿದ್ದ ವಿಶಿಷ್ಟ ಕಾರ್ಯಕ್ರಮ. ಇದು, ಲಂಡನ್ನಿನ ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎನ್ವಿರಾನ್ಮೆಂಟಲ್ ಆಂಡ್ ಡೆವಲೆಪ್‌ಮೆಂಟ್ ಸಂಸ್ಥೆಯ ಮೆಚ್ಚುಗೆ ಪಡೆಯಿತು. ಅವರು ಇಂತಹ ವಿಶಿಷ್ಟ ವಿಜ್ಞಾನ ಕಾರ್ಯಕ್ರಮಗಳ ಪ್ರಸಾರದ ಮೂಲಕ ಜನಮನ್ನಣೆ ಗಳಿಸಿ ಅಂತರಾಷ್ಟ್ರೀಯ ರೇಡಿಯೋ ಆಸ್ಕರ್ ಪ್ರಶಸ್ತಿಗೂ ಭಾಜನರಾಗಿದ್ದರು. ಅಲ್ಲದೆ, 2006ರಲ್ಲಿ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, 2007ರಲ್ಲಿ ರಾಜ್ಯ ಪರಿಸರ ಪ್ರಶಸ್ತಿ, 2011ರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಆಕಾಡೆಮಿಯಿಂದ ಅತ್ಯುತ್ತಮ ಲೇಖಕ ಪ್ರಶಸ್ತಿ, ವಿದ್ಯುನ್ಮಾನ ಮಾದ್ಯಮದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನಕ್ಕಾಗಿ ಎನ್‌ಸಿಎಸ್‌ಟಿಸಿ ವತಿಯಿಂದ ರಾಷ್ಟ್ರೀಯ ಪ್ರಶಸ್ತಿ ಇವರ ಮುಡಿಗೇರಿವೆ. ಹೀಗೆ ಅವರ ಸಾಧನೆ ಅಂತರಾಷ್ಟ್ರೀಯ ಮಟ್ಟಕ್ಕೂ ಏರಿದ್ದು ಅವರ ಅಪ್ರತಿಮ ಪ್ರತಿಭೆಗೆ ಸಾಕ್ಷಿಯಾಗಿ ನಿಲ್ಲುತ್ತವೆ.
ಕನ್ನಡ ವಿಜ್ಞಾನ ಬರವಣಿಗೆಯ ಮುಂಚೂಣಿಯಲ್ಲಿದ್ದ ಇವರು 40ಕ್ಕೂ ಹೆಚ್ಚು ಕೃತಿಗಳನ್ನು ವಿಜ್ಞಾನಕ್ಕೆ ನಿಡಿದ್ದಾರೆ. ಇವರು ಬರೆದ ವಿಜ್ಞಾನ ಲೇಖನಗಳು ಸಾವಿರಕ್ಕೂ ಹೆಚ್ಚು. ನೂರಾರು ವಿಜ್ಞಾನ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ನಾಡಿನಾದ್ಯಂತ ಚಿರಪರಿಚಿತರಾದವರು. ಪಂಕಜ್ ಸೇಖ್‌ಸರಿಯಾ ಅವರ ಮೂಲ ಕಾದಂಬರಿ ಆಧಾರಿತ ‘ಕೊನೆಯ ಅಲೆ’ ಭಾಷಾಂತರ ಕೃತಿಗೆ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಲಭಿಸಿದೆ. ಮಕ್ಕಳ ವಿಜ್ಞಾನ ಸಾಹಿತ್ಯ ವೃದ್ಧಿಗೆ ಕಾರಣರಾದ ಇವರು ‘ಪ್ರಾಣಿಗಳು’ ‘ಸಸ್ಯಗಳು’ ‘ಅದ್ಭುತ ಜೀವಾವಾಸ ಅಂಡಮಾನ್’ ಚಂದ್ರಶೋಧನೆ, ಫೈಥಾಗೋರಸ್, ನಮ್ಮ ಭೂಮಿ ನಮ್ಮ ಪರಿಸರ ಮುಂತಾದ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಅತ್ಯಂತ ಆಸಕ್ತಿಯ ವಿಷಯವಾದ ಜೈವಿಕ ತಂತ್ರಜ್ಞಾನ ಜನಸಾಮಾನ್ಯರಿಗೂ ಅರ್ಥವಾಗುವ ನಿಟ್ಟಿನಲ್ಲಿ ‘ನಾನು ಯಾರು?’ ಎಂಬ ಪುಸ್ತಕವನ್ನು ತರುವ ಮೂಲಕ ಜೀನ್, ಕ್ರೋಮೊಸೋಮ್, ಡಿಎನ್‌ಎ, ಬೆರಳಚ್ಚು ಮುಂತಾದ ಪದಗಳು ಸರಳವಾಗಿ ಮನನವಾಗುವಂತೆ ವಿವರಿಸಿದ್ದಾರೆ. ವಿಜ್ಞಾನ ಪದಕೋಶ ರಚಿಸಿ ಓದುಗರಿಗೆ ನೆರವಾಗಿದ್ದಾರೆ.
ಪ್ರತಿಷ್ಠಿತ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಆಕಾಡೆಮಿ, ಇಸ್ರೋದಂತಹ ಸಂಘ ಸಂಸ್ಥೆಗಳ ಒಡನಾಟದಲ್ಲಿದ್ದು ವಿಜ್ಞಾನ ಬೆಳೆಸಿದವರು. ಸಮಕಾಲೀನ ಸಂವಹನಕಾರರಾದ ಡಾ. ಹೆಚ್. ಎಸ್. ನಿರಂಜನಾರಾಧ್ಯ, ಶ್ರೀಮತಿ ಹರಿಪ್ರಸಾದ್, ಕೊಳ್ಳೇಗಾಲ ಶರ್ಮಾ, ನಾಗೇಶ ಹೆಗಡೆ, ಎಮ್ ಆರ್ ನಾಗರಾಜು, ಅಬ್ದುಲ್ ರೆಹಮಾನ್ ಪಾಷಾ, ಕೆ ಎನ್ ಗಣೇಶಯ್ಯ ಮುಂತಾದವರ ಸಂಪರ್ಕದಲ್ಲಿ ನಾಡಿನ ವಿಜ್ಞಾನ ಕ್ಷೇತ್ರವನ್ನು ಬೆಳಗಿದವರು ಇವರು. ಆಕಾಶದೆತ್ತರದಲ್ಲಿ ಮೊಳಗುತ್ತಿದ್ದ ವಿಜ್ಞಾನ ಸಂವಹನೆಯ ಗಟ್ಟಿ ಧ್ವನಿಯೊಂದು ತನ್ನ ವಾಣಿ ನಿಲ್ಲಿಸಿದ್ದು ಬೇಸರದ ಸಂಗತಿ.
ನಿಜ ಸರ್, ಅವರನ್ನು ಆಕಾಶವಾಣಿಯಲ್ಲಿ ಭೇಟಿಯಾಗಿದ್ದೆವು, ರಾಜ್ಯಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ನಮ್ಮ ಶಾಲೆಯ ಮಕ್ಕಳಿಗೆ ಆಕಾಶವಾಣಿಯ ವಿಜ್ಞಾನ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನೀಡಿದ್ದರು. ರೇಡಿಯೋ ಕೇಂದ್ರದ ಪರಿಚಯ ಮಾಡಿಕೊಟ್ಟರು. ಸುಮಧುರ ವಾಣಿಯ ಸುಮಂಗಲ ಮುಮ್ಮಿಗಟ್ಟಿ ಮರೆಯಲಾರದ ಧ್ವನಿ.
ReplyDelete