ಮಲೇರಿಯಾ ಗೆದ್ದ ಆಪದ್ಭಾಂಧವ ರೊನಾಲ್ಡ್ ರಾಸ್
ಲೇ :ರಾಮಚಂದ್ರಭಟ್ ಬಿ.ಜಿ.
ಮಲೇರಿಯಾ
ರೋಗಕ್ಕೆ ಕಾರಣವಾಗುವ ಪರೋಪಜೀವಿಯ ಜೀವನ ಚಕ್ರವನ್ನು ಭೇಧಿಸಿ, ಆ ರೋಗ ನಿಯಂತ್ರಣಕ್ಕೆ ಗಣನೀಯ ಕಾಣಿಕೆ
ನೀಡಿದ ರೊನಾಲ್ಡ್ ರೋಸ್, ಈ ಸಂದರ್ಭದಲ್ಲಿ ಏದುರಿಸಿದ ಕಷ್ಟ ಕಾರ್ಪಣ್ಯಗಳನ್ನು, ಕೊನೆಗೆ ಯಶಸ್ಸು
ಗಳಿಸಿದ ಬಗೆಯನ್ನು ವಿವರಿಸಿದ್ದಾರೆ, ಈ ಲೇಖನದಲ್ಲಿ ಶಿಕ್ಷಕ ರಾಮಚಂದ್ರ ಭಟ್ ಅವರು.
ಪಶ್ಚಾತ್ತಾಪಗೊಂಡ
ದೇವನಿಂದು
ಅದ್ಭುತವನೊಂದ
ಎನ್ನ ಕೈಲಿರಿಸಿದ
ಸ್ತುತ್ಯ
ಈ ದೇವ.
ಅವನಾಣತಿಯ
ಮೇರೆಗೆ,
ಆತನ
ರಹಸ್ಯ ಕಾರ್ಯಗಳ ಹುಡುಕಾಟ
ಕಣ್ಣೀರು
ಮತ್ತು ಪ್ರಯಾಸದ ಉಸಿರೊಡನೆ,
ನಿನ್ನ
ಕುಯುಕ್ತಿಯ ಕೃತ್ಯಗಳ ಕಂಡುಕೊಂಡಿರುವೆ,
ಮಿಲಿಯಾಂತರ
ಜನರ ಕೊಲೆಗೈದ ಓ ಮೃತ್ಯುವೇ .
ಅಸಂಖ್ಯ
ಜನರ ಜೀವಉಳಿಸ ಬಲ್ಲರೆಂಬ
ಚಿಕ್ಕವಿಷಯವ
ನಾ ತಿಳಿದಿರುವೆ
ಓ
ಮೃತ್ಯುವೇ ನಿನ್ನ ಕುಟುಕು ಕೊಂಡಿಯೆಲ್ಲಿ?
ನಿನ್ನಜಯ,
ಓ ಮಸಣವೇ?
ಈ
ಕವಿತೆ ಓದುತ್ತಿದ್ದಂತೆ, ಕವಿ ಅದೆಷ್ಟು ರೋಸಿ ಹೋಗಿರಬೇಡ? ಆತನ ಬದುಕು ಅದೆಂಥ ಪರಿಸ್ಥಿತಿಗಳ ಮೂಲಕ
ಹಾದು ಹೋಗಿರಬೇಡ? ಆತನ ಭಾವನೆಗಳ ಮಹಾಪೂರವೇ ಇಲ್ಲಿದೆ.
ಕೆಲಸಕ್ಕೆ
ಅದೆಷ್ಟು ಅಡ್ಡಿ, ಆತಂಕಗಳು. ಅದೆಷ್ಟು ಅವಮಾನ!!! ಮೇಲಧಿಕಾರಿಗಳ ಕುಹಕ, ವ್ಯಂಗ್ಯ. ಜೊತೆಗೆ, ಸಂಶೋಧನೆಗೆ ಅಡ್ಡಿ ಮಾಡಲೆಂದೇ ಒಂದು ಕಡೆಯಿಂದ
ಮತ್ತೊಂದೆಡೆ ಅಲೆಯುವಂತೆ ಮಾಡುವ ವರ್ಗಾವಣೆಯ ಭಾಗ್ಯ. ಇಂಥ ವಿಷಮ ಪರಿಸ್ಥಿತಿಯಲ್ಲಿ ತನ್ನ ದೈನಂದಿನ
ವೈದ್ಯವೃತ್ತಿಯ ಜೊತೆಗೆ ಸತತ ೩ ವರ್ಷಗಳ ವಿಫಲ ಸಂಶೋಧನೆಯ ನಂತರ ನೂರಾರು ಸೊಳ್ಳೆ ತಳಿಗಳ ಅಂಗಚ್ಛೇದ
ಮಾಡಿ ಮನುಷ್ಯರಲ್ಲಿ ಮಲೇರಿಯ ಉಂಟು ಮಾಡುವ ಪರೋಪಜೀವಿಯನ್ನು ಕಂಡು ಹಿಡಿದು ಗೆದ್ದೇಬಿಟ್ಟರು, ಮನುಕುಲದ
ಆಪದ್ಭಾಂಧವ ಈ ರೊನಾಲ್ಡ್ ರಾಸ್ !!! ಈ ಸಂದರ್ಭದಲ್ಲಿ ತಮ್ಮ ಭಾವನೆಗಳನ್ನು ಮೇಲಿನ ಕವನದ ಮೂಲಕ ಹೊರಹಾಕಿದರು.
ಅನೇಕ
ಪ್ರಾಚೀನ ಬರಹಗಳು ಮತ್ತು ಕಲಾಕೃತಿಗಳು ಮಾನವ ಜನಾಂಗದ ಮೇಲೆ ಮಲೇರಿಯಾದ ದೀರ್ಘ ಸವಾರಿಗೆ ಸಾಕ್ಷಿಯಾಗಿವೆ.
ಮೆಸಪಟೋಮಿಯಾದಿಂದ ಕ್ಯೂನಿಫಾರ್ಮ್ ಲಿಪಿಯನ್ನು ಹೊಂದಿರುವ ಮಣ್ಣಿನ ಮಾತ್ರೆಗಳು ಮಲೇರಿಯಾವನ್ನು ಸೂಚಿಸುವ
ಮಾರಣಾಂತಿಕ ಜ್ವರಗಳನ್ನು ಉಲ್ಲೇಖಿಸಿವೆ. ಇತ್ತೀಚೆಗೆ, ಈಜಿಪ್ಟಿನಲ್ಲಿ ದೊರೆತ ಕ್ರಿಸ್ತಪೂರ್ವ 3200-1300ರ
ಕಾಲಘಟ್ಟಕ್ಕೆ ಸೇರಿದ ಅವಶೇಷಗಳಲ್ಲೂ ಮಲೇರಿಯಾ ಆಂಟಿಜೆನ್ ಅಥವಾ ಪ್ರತಿಕಾಯಜನಕಗಳನ್ನು ಪತ್ತೆಮಾಡಲಾಗಿದೆ.
ಭಾರತೀಯ ವೈದಿಕ ಸಾಹಿತ್ಯದ ಕೃತಿಗಳಲ್ಲಿಯೂ ಮಲೇರಿಯಾವನ್ನು "ರೋಗಗಳರಾಜ" ಎಂದು ಕರೆದಿರುವ
ಉಲ್ಲೇಖಗಳು ಕಂಡುಬರುತ್ತವೆ. 270 BCಕಾಲದ ಚೀನಿಯರ ಸಾಹಿತ್ಯದಲ್ಲೂ ಮಲೇರಿಯ ಸೋಂಕಿನ ಲಕ್ಷಣಗಳನ್ನು
ನಮೂದಿಸಲಾಗಿದೆ. ಗ್ರೀಕ್‌ನ ಹೋಮರ್ (ಸುಮಾರು 750 BC) ತನ್ನ ಮಹಾಕಾವ್ಯ ಇಲಿಯಡ್‌ನಲ್ಲಿ ಮಲೇರಿಯಾವನ್ನು
ಉಲ್ಲೇಖಿಸಿದ್ದಾನೆ. ೨೦ನೇ ಶತಮಾನವೊಂದರಲ್ಲೇ ಸುಮಾರು ೧೫೦-೩೦೦ ಮಿಲಿಯನ್ ಜನರು ಮಲೇರಿಯಕ್ಕೆ
ಬಲಿಯಾಗಿದ್ದರು ಎಂದು ಅಂದಾಜಿಸಲಾಗಿದೆ. ಮಲೇರಿಯ ಹರಡುವ ವಿಧಾನ, ಸೋಂಕಿಗೆ ಕಾರಣವಾಗುವ ಜೀವಿ, ಹಾಗೂ
ರೋಗಕ್ಕೆ ಔಷಧಿ ಕಂಡು ಹಿಡಿಯುವಲ್ಲಿ ಅನೇಕ ವಿಜ್ಞಾನಿಗಳು ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿದ್ದಾರೆ.
ಅಂತಹವರಲ್ಲೊಬ್ಬರು, ರೊನಾಲ್ಡ್ ರಾಸ್.
ರೊನಾಲ್ಡ್ ರಾಸ್, ಆರ್ಮಿ ಮೇಜರ್ ಸರ್ ಕ್ಯಾಂಪ್ಬೆಲ್ ಕ್ಲೇ ಗ್ರಾಂಟ್ ರಾಸ್ ಮತ್ತು ಮಟಿಲ್ಡಾ ಚಾರ್ಲೆಟ್ ಎಲ್ಡರ್ಟನ್ ದಂಪತಿಗಳ ಹತ್ತು ಮಕ್ಕಳಲ್ಲಿ ಮೊದಲನೆಯವರಾಗಿದ್ದರು. ಮಗ ವೈದ್ಯನಾಗಬೇಕೆಂಬುದು ತಂದೆಯ ಮಹದಾಸೆಯಾಗಿತ್ತು. ಮಗನಿಗೋ,
ಇದು ಬಿಟ್ಟು ಉಳಿದೆಲ್ಲದರ ಮೇಲೆ ಅತೀವ ಆಸಕ್ತಿ!!! ಬಾಲ್ಯದಿಂದಲೇ ಈ ಅದ್ಭುತ, ವಿಕ್ಷಿಪ್ತ ವ್ಯಕ್ತಿ.
ಬಹುಮುಖ ಪ್ರತಿಭೆಗಳ ಸಂಗಮ. ಈತ ಪ್ರೇಮಗೀತೆಗಳ ಕವಿ, ಅರೆಕಾಲಿಕ ಕಾದಂಬರಿಕಾರ, ನಾಟಕಕಾರ, ವರ್ಣಚಿತ್ರಕಾರ,
ಸಂಗೀತಗಾರ ಮತ್ತು ಗಣಿತಜ್ಞ. ಎಷ್ಟೆಲ್ಲ ಕ್ಷೇತ್ರಗಳಲ್ಲಿ ಈ ಬಾಲಕನಿಗೆ ಆಸಕ್ತಿ!! ರೊನಾಲ್ಡ್ ರಾಸ್,
ವೈದ್ಯಕೀಯ ವೃತ್ತಿಯನ್ನು ಎಂದಿಗೂ ಮಾಡೆನು ಎಂದು ಬಗೆದರೆ, ಮಾನವಕಲ್ಯಾಣಕ್ಕಾಗಿಯೇ ಇರಬೇಕು, ದೈವವು
ಮತ್ತೊಂದು ಬಗೆಯಿತು. ಹಾಗಾಗಿ, ಆಕಸ್ಮಿಕವಾಗಿ ವೈದ್ಯವಿಜ್ಞಾನದ ಸಂಶೋಧಕರಾದರು. ಸಂಶೋಧನಾ ಪ್ರವೃತ್ತಿ
ಹಾಗೂ ಸಾಮಾಜಿಕ ಕಳಕಳಿಗಳು ಅವರನ್ನು ವೈದ್ಯಕೀಯ ಸಂಶೋಧನೆಯ ಆಳಕ್ಕಿಳಿಸಿದವು. ತನ್ನದೇ ಆದ ಚಾಣಾಕ್ಷ
ಅವಲೋಕನಗಳೊಂದಿಗಿನ ಅವರ ಪ್ರಯೋಗಗಳು ಮಲೇರಿಯದ ಮೇಲೆ ವಿಜಯ ಸಾಧಿಸುವಂತೆ ಮಾಡಿದವು. ಇವರ ಈ ಅಪ್ರತಿಮ
ಕಾರ್ಯಕ್ಕಾಗಿ 1902 ರಲ್ಲಿ ವೈದ್ಯಕೀಯ ವಿಜ್ಞಾನದಲ್ಲಿ ನೀಡಲಾದ ಎರಡನೇ ನೊಬೆಲ್ ಪ್ರಶಸ್ತಿ ಇವರ ಮುಡಿಗೇರಿತು.
ಇಂಥ ಪ್ರತಿಭೆ ರಾಸ್ ಹುಟ್ಟಿದ್ದು, ಭಾರತದ ಹಿಮಾಲಯ ಪರ್ವತಗಳ
ಬಳಿ ಅಲ್ಮೋರಾದಲ್ಲಿ, ಮೇ 13, 1857 ರಂದು. ಅಂದರೆ, ಬ್ರಿಟಿಷರು ಸಿಪಾಯಿದಂಗೆ ಎಂದು ಕರೆದ, ಭಾರತದ
ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾದ ಮೂರು ದಿನಗಳ ನಂತರ ರಾಸ್ ಅವರ ಜನನವಾಯಿತು. ಈತನ ತಂದೆಯಷ್ಟೇ
ಅಲ್ಲ, ತಾತ ಹಗ್‌ಗ್ರಾಸ್ ಕೂಡಾ ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯಲ್ಲಿದ್ದರು.
ಬಾಲಕನಾಗಿದ್ದಾಗ, ರಾಸ್, ತನ್ನ ತಂದೆ ಮಲೇರಿಯಾದಿಂದ ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದನ್ನು
ನೋಡಿದ್ದ. ಬಹುಶಃ ಇದು ಮನಸ್ಸಿನ ಮೂಲೆಯಲ್ಲಿ ಸುಪ್ತವಾಗಿ ಆಳವಾದ ಪರಿಣಾಮ ಬೀರಿರಬಹುದು. ಚುರುಕು ಬಾಲಕ
ರೊನಾಲ್ಡ್‌ನನ್ನು ಎಂಟನೆಯ ವಯಸ್ಸಿನಲ್ಲಿ, ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ಕಳುಹಿಸಲಾಯಿತು. ರೈಡ್‌ನ
ಶಾಲೆಗಳಲ್ಲಿ ರೊನಾಲ್ಡ್ ತನ್ನ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, 1869ರಲ್ಲಿ ಸೌತಾಂಪ್ಟನ್
ಬಳಿಯ ಸ್ಪ್ರಿಂಗ್ ಹಿಲ್‌ನಲ್ಲಿರುವ ಬೋರ್ಡಿಂಗ್ ಶಾಲೆಗೆ ಸೇರಿದ. 14ನೇ ಹರೆಯದಲ್ಲಿ, ರೊನಾಲ್ಡ್
ಸ್ಪರ್ಧೆಯೊಂದರಲ್ಲಿ ಬಹುಮಾನವಾಗಿ ಪಡೆದ “ಆರ್ಬ್ಸ್ಆಫ್ ಹೆವನ್” (Orbs of
Heaven) ಎಂಬ ಪುಸ್ತಕವು ರೊನಾಲ್ಡ್‌ನಲ್ಲಿ ಸುಪ್ತವಾಗಿದ್ದ ಗಣಿತದ ಮೇಲಿನ ಆಸಕ್ತಿಯನ್ನು ಹೊರಹಾಕಿತು.
ಮುಂದೆ, ಇದೇ ಆಸಕ್ತಿ ಗಣಿತವನ್ನು ವೈದ್ಯಶಾಸ್ತ್ರದೊಳಗೆ ಮಿಳಿತಗೊಳಿಸುವಂತೆ ಮಾಡಿತು. 16 ನೇ ವಯಸ್ಸಿನಲ್ಲಿ,
ರೊನಾಲ್ಡ್ ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ನ ಸ್ಥಳೀಯ ಪರೀಕ್ಷೆಯಲ್ಲಿ ಡ್ರಾಯಿಂಗ್‌ನಲ್ಲಿ ಇಂಗ್ಲೆಂಡ್‌ಗೇ
ಪ್ರಥಮ ಸ್ಥಾನ ಪಡೆದ. ಖ್ಯಾತ ಚಿತ್ರಕಾರ ರಾಫೆಲ್‌ನ ಪೇಂಟಿಂಗ್ “ಟಾರ್ಚ್‌ಬೇರರ್” ಚಿತ್ರದ ಪೆನ್ಸಿಲ
ಸ್ಸ್ಕೆಚ್ ಅನ್ನು ಅಂದವಾಗಿ ಕೆಲವೇ ನಿಮಿಷಗಳಲ್ಲಿ ಚಕಚಕನೆ ಬರೆದು ತನ್ನ ಪ್ರತಿಭ ಅನಾವರಣಗೊಳಿಸಿದ!!
ತನ್ನ 17 ನೇ ವಯಸ್ಸಿನಲ್ಲಿ, ರೊನಾಲ್ಡ್ ಬರಹಗಾರನಾಗುವ
ತನ್ನ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸಿದ. ಆಗ ಆತನ ಮಿಲಿಟರಿ ಮೇಜರ್ ತಂದೆ ಅದಕ್ಕೆ ಸೊಪ್ಪು ಹಾಕಲಿಲ್ಲ.
ಈ ಕುರಿತು ರಾಸ್ ಒಮ್ಮೆ "ನಾನು ಕಲಾವಿದನಾಗಲು ಬಯಸಿದ್ದೆ, ಆದರೆ, ನನ್ನ ತಂದೆಗೆ ಇದು ಸ್ವಲ್ಪವೂ
ಒಪ್ಪಿಗೆಯಾಗಲಿಲ್ಲ. ನಾನು ಸೈನ್ಯ ಅಥವಾ ನೌಕಾಪಡೆಗೆ ಪ್ರವೇಶಿಸಲು ಬಯಸುತ್ತೇನೆ ಎಂದರೆ ನನ್ನ ತಂದೆ
ಅದಕ್ಕೂ ಸಮ್ಮತಿಸಲಿಲ್ಲ. ಆಗಿನ ಕಾಲಕ್ಕೆ ಅತ್ಯುತ್ತಮ ವೇತನ, ಸವಲತ್ತುಗಳಿರುವ ಭಾರತೀಯ ವೈದ್ಯಕೀಯ
ಸೇವೆಗೆ ಸೇರುವಂತೆ ಹೇಳಿ, ಬಲವಂತವಾಗಿ ಸೇರಿಸಿದರು. “ಎಂದುಹೇಳಿದ್ದರು. ಹೀಗೆ, ರೊನಾಲ್ಡ್ ರಾಸ್
1875ರಲ್ಲಿ ಲಂಡನ್‌ನ ಸೇಂಟ್ ಬಾರ್ತಲೆಮ್ಯು ಆಸ್ಪತ್ರೆಗೆ ವಿದ್ಯಾರ್ಥಿಯಾಗಿ ದಾಖಲಾದರು. ವೈದ್ಯಕೀಯ
ವಿದ್ಯಾಲಯದಲ್ಲಿ ಅವರ ಹೆಚ್ಚಿನ ಸಮಯವನ್ನು ಸಂಗೀತ ಸಂಯೋಜನೆ ಅಥವಾ ಕವಿತೆಗಳು ಮತ್ತು ನಾಟಕಗಳನ್ನು
ಬರೆಯುವಲ್ಲೇ ಕಳೆದರು!! ಹೀಗಾಗಿ, ಅವರು ತಮ್ಮ ವೈದ್ಯಕೀಯ ಅಧ್ಯಯನವನ್ನು "ಸಾಮಾನ್ಯಶ್ರೇಣಿ"
ಯೊಂದಿಗೆ ಪೂರ್ಣಗೊಳಿಸಿದರು. ಅಷ್ಟೇ ಅಲ್ಲ,, ಭಾರತೀಯ ವೈದ್ಯಕೀಯ ಸೇವೆಯ ಅರ್ಹತಾ ಪರೀಕ್ಷೆಗಳಿಗೂ ಆಯ್ಕೆಯಾಗಲಿಲ್ಲ.
ಮಗನ ಸಾಮರ್ಥ್ಯದ ಅರಿವಿದ್ದ ಮೇಜರ್ ಅಪ್ಪ ಕೆಂಡಾಮಂಡಲರಾದರು. ಕುಪಿತ ಪಿತ ಖರ್ಚನ್ನು ನೀಡುವುದಿಲ್ಲವೆಂದು
ಬೆದರಿಕೆಹಾಕಿದರು!!!. ವಿಧಿ ಇಲ್ಲದ ರೊನಾಲ್ಡ್, ಅಪ್ಪನ ದಾರಿಗೆ ಬಂದರು. ಅವರು ವೈದ್ಯ ವೃತ್ತಿಯನ್ನು
ಮುಂದುವರೆಸಲೇ ಬೇಕಾಯಿತು. ಅವರು ಲಂಡನ ಮತ್ತು ನ್ಯೂಯಾರ್ಕ ನಡುವೆ ನೌಕಾಯಾನ ನಡೆಸುವ ಹಡಗಿನಲ್ಲಿ ಶಸ್ತ್ರಚಿಕಿತ್ಸಕರಾಗಿ
ಕೆಲಸಕ್ಕೆ ಸೇರಿದರು. ಎರಡನೇ ಪ್ರಯತ್ನದಲ್ಲಿ ಅರ್ಹತೆ ಪಡೆದ ರೊನಾಲ್ಡ್ ರಾಸ್ ಗೆ ಕೊನೆಗೂ 1881 ರಲ್ಲಿ
ಭಾರತೀಯ ವೈದ್ಯಕೀಯ ಸೇವೆಯನ್ನು ಸೇರಿ, ತಮ್ಮ ತಂದೆಯ ಆಸೆಯನ್ನು ಪೂರೈಸಿದರು!!! ಆರ್ಮಿ ಮೆಡಿಕಲ್
ಸ್ಕೂಲ್‌ನಲ್ಲಿ ನಾಲ್ಕು ತಿಂಗಳ ತರಬೇತಿಯ ನಂತರ 5 ಏಪ್ರಿಲ್ 1881 ರಂದು ಭಾರತೀಯ ವೈದ್ಯಕೀಯ ಸೇವೆಯಲ್ಲಿ
ಶಸ್ತ್ರಚಿಕಿತ್ಸಕರಾಗಿ ಆಗಿನ ಮದ್ರಾಸ್ ಪ್ರೆಸಿಡೆನ್ಸಿಗೆ ನಿಯೋಜನೆಗೊಂಡರು.
1881 ಮತ್ತು 1894 ರ ನಡುವೆ ಅವರು ಮದ್ರಾಸ್, ಮೌಲ್ಮೇನ್
(ಬರ್ಮಾ/ಮ್ಯಾನ್ಮಾರ್‌ನಲ್ಲಿ), ಬಲೂಚಿಸ್ತಾನ್, ಅಂಡಮಾನ್ ದ್ವೀಪಗಳು, ಬೆಂಗಳೂರು ಮತ್ತು ಸಿಕಂದರಾಬಾದ್‌ನಲ್ಲಿ
ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು. ಮಾರ್ಚ್ 1894 ರಲ್ಲಿ ರೊನಾಲ್ಡ್ ರಾಸ್ ಕುಟುಂಬದೊಂದಿಗೆಲಂಡನ್‌ಗೆಹೋದರು.
ಅಲ್ಲಿ ಅವರು ಮೊದಲ ಬಾರಿಗೆ ಸರ ಪ್ಯಾಟ್ರಿಕ್ ಮ್ಯಾನ್ಸನ್ ಅವರನ್ನು ಭೇಟಿಯಾದರು. ಅವರು ರಾಸ್‌ಅವರಿಗೆ
ಮಲೇರಿಯಾ ಸಂಶೋಧನೆಯಲ್ಲಿರುವ ಸಮಸ್ಯೆಗಳನ್ನು ತಿಳಿಸಿ ಮಾರ್ಗದರ್ಶನ ನೀಡಿದರು. ಮಲೇರಿಯ ಅಧ್ಯಯನಕ್ಕೆ
ಭಾರತವೇ ಅತ್ಯುತ್ತಮ ಸ್ಥಳ ಎಂದು ಮ್ಯಾನ್ಸನ್ ತಿಳಿಸಿದರು. ಮಾರ್ಚ್ 1895 ರಲ್ಲಿ ಹಡಗಿನ ಮೂಲಕ ಭಾರತಕ್ಕೆ
ಮರಳಿ ಬಾಂಬೆ ಸಿವಿಲ್ ಆಸ್ಪತ್ರೆಯಲ್ಲಿ ಮಲೇರಿಯಾ ರೋಗದ ಕುರಿತ ಸಂಶೋಧನೆ ಆರಂಭಿಸಿ ಮಲೇರಿಯ ರೋಗಿಗಳ
ರಕ್ತದ ಸ್ಲೈಡ್‌ಗಳನ್ನು ಮಾಡಲು ಪ್ರಾರಂಭಿಸಿದರು.
ಮೇ1895ರಲ್ಲಿ
ರಾಸ್ ತನ್ನ ಮೊದಲ ಪ್ರಮುಖ ಯಶಸ್ಸನ್ನು ಗಳಿಸಿದರು. ಸೊಳ್ಳೆಯ ಉದರದೊಳಗೆ ಮಲೇರಿಯಾ ಪರಾವಲಂಬಿ ಪ್ಲಾಸ್ಮೋಡಿಯಂನ
ಬೆಳವಣಿಗೆಯ ಆರಂಭಿಕ ಹಂತಗಳನ್ನು ವೀಕ್ಷಿಸಿದರು. ಸಂಶೋಧನೆ ಹೀಗೆ ಮುಂದುವರೆಯುತ್ತಿದ್ದಂತೆ ಸರ್ಕಾರವು
ಅವರನ್ನು ಕಾಲರಾ ಸಾಂಕ್ರಾಮಿಕ ರೋಗದ ಹರಡುವಿಕೆಯ ಕುರಿತು ಅಧ್ಯಯನ ವರದಿ ನೀಡಲು ಬೆಂಗಳೂರಿಗೆ ನಿಯೋಜಿಸಿದ್ದರಿಂದ,
ಅವರ ಉತ್ಸಾಹಕ್ಕೆ ಅಡ್ಡಿಯಾಯಿತು. ಏಕೆಂದರೆ, ಬೆಂಗಳೂರಿನಲ್ಲಿ ಯಾವುದೇ ಮಲೇರಿಯಾ ಪ್ರಕರಣಗಳು ವರದಿಯಾಗಿರಲಿಲ್ಲ.
ಮಾನಸಿಕವಾಗಿ ಕುಗ್ಗಿದ ರಾಸ್ "ನಾನು ಉದ್ಯೋಗದಿಂದ ಹೊರಹಾಕಲ್ಪಟ್ಟಿದ್ದೇನೆ, ಮಾಡಲು ಯಾವುದೇ
ಕೆಲಸವಿಲ್ಲ” ಎಂದು ಮ್ಯಾನ್ಸನ್‌ರಿಗೆ ಪತ್ರ ಮುಖೇನ ತಮ್ಮ ಅಳಲನ್ನು ತೋಡಿಕೊಂಡರು. ರಾಸ್ ಅವರಿಗೆ
ಬೇಕಾದ ಮಾನಸಿಕ ಬೆಂಬಲ ನೀಡಿ ಸಂಶೋಧನಾ ಕೈಂಕರ್ಯ ಮುಂದುವರೆಸುವಂತೆ ಮ್ಯಾನ್ಸನ್ ಪ್ರೇರಣೆ ನೀಡಿದರು.
ರಾಸ್ ಅವರು ಊಟಿಯಲ್ಲಿ ಸಂಶೋಧನಾ ನಿರತರಾಗಿದ್ದಾಗ ಅವರಿಗೂ ಮಲೇರಿಯಾ ರೋಗ ತಗಲಿತು. ಕ್ವಿನೈನ್ ಅವರ
ಜೀವ ಉಳಿಸಿತು. ಜೂನ್‌ನಲ್ಲಿ ಅವರನ್ನು ಸಿಕಂದರಾಬಾದ್‌ಗೆ ವರ್ಗಾಯಿಸಲಾಯಿತು.
ಎರಡು
ವರ್ಷಗಳ ಸತತ ಸಂಶೋಧನೆಯ ವೈಫಲ್ಯದ ನಂತರ, ಜುಲೈ 1897 ರಲ್ಲಿ, ರಾಸ್ ತಾವು ಸಂಗ್ರಹಿಸಿದ್ದ ಲಾರ್ವಾಗಳಿಂದ
20 ಪ್ರೌಢ "ಕಂದು" ಸೊಳ್ಳೆಗಳನ್ನು ಬೆಳೆಸುವಲ್ಲಿ ಯಶಸ್ವಿಯಾದರು. ಅವರು ಹುಸೇನ್ ಖಾನ್
ಎಂಬ ಮಲೇರಿಯ ರೋಗಿಯ ರಕ್ತವನ್ನು ತಾವು ಬೆಳೆಸಿದ ಸೊಳ್ಳೆಗಳು ಕಚ್ಚಿ, ಹೀರುವಂತೆ ಮಾಡಿ ಸೊಳ್ಳೆಗಳ
ದೇಹಕ್ಕೆ ಮಲೇರಿಯ ಪರೋಪಜೀವಿಗಳನ್ನು ಸೇರಿಸುವಲ್ಲಿ ಯಶಸ್ವಿಯಾದರು. ಅಚ್ಚರಿಯ ವಿಷಯವೆಂದರೆ, ಇದಕ್ಕಾಗಿ
ರೋಗಿಗೆ ಒಂದು ಸೊಳ್ಳೆಗೆ ಒಂದಾಣೆಯಂತೆ, ಎಂಟಾಣೆ ನೀಡಿದರು!!!. ರೋಗಿಯ ರಕ್ತ ಹೀರಿ ಸೋಂಕು ತಗುಲಿಸಿಕೊಂಡ
ನಂತರ, ಈ ಸೊಳ್ಳೆಗಳ ದೇಹವನ್ನು ಛೇದಿಸಿ ಅಧ್ಯಯನ ಮಾಡಿದರು. ಸೊಳ್ಳೆಯ ಕರುಳಿನೊಳಗೆ ಮಲೇರಿಯಾ ಪರಾವಲಂಬಿಯ
ಇರುವಿಕೆ ಆಗಸ್ಟ್ 20 ರಂದು ದೃಢಪಟ್ಟಿತು. ಮರುದಿನ, ಸೊಳ್ಳೆಯಲ್ಲಿ ಪರಾವಲಂಬಿಯ ಬೆಳವಣಿಗೆಯನ್ನು ಅವರು
ದೃಢಪಡಿಸಿದರು. ಈ ಆವಿಷ್ಕಾರದ ವರದಿ 27 ಆಗಸ್ಟ್ 1897 ರಂದು ಭಾರತೀಯ ವೈದ್ಯಕೀಯ ಗೆಜೆಟ್‌ನಲ್ಲಿ ಮತ್ತು
ನಂತರ ಡಿಸೆಂಬರ್ 1897ರ ಬ್ರಿಟಿಷ್ ಮೆಡಿಕಲ್ ಜರ್ನಲ್‌ನ ಸಂಚಿಕೆಯಲ್ಲಿ ಪ್ರಕಟವಾಯಿತು. ಇದೇ ಸಂದರ್ಭದಲ್ಲಿ
ರಾಸ್ ತಮ್ಮ ಸಂಶೋಧನೆ ಯಶಸ್ಸನ್ನು ಕವನದ ಮೂಲಕ ಅಭಿವ್ಯಕ್ತಿಸಿದರು.
ಸೆಪ್ಟೆಂಬರ್
1897ರಲ್ಲಿ, ರಾಸ್ ಅವರನ್ನು ಬಾಂಬೆಗೆ ವರ್ಗಾಯಿಸಲಾಯಿತು. ಅಲ್ಲಿಂದ ಅವರನ್ನು ನಂತರ ರಜಪೂತಾನದಲ್ಲಿರುವ
ಮಲೇರಿಯಾ-ಮುಕ್ತ ಖೇರ್ವಾರಾಕ್ಕೆ ವರ್ಗಾಯಿಸಲಾಯಿತು. ಸತತ ವರ್ಗಾವಣೆಗಳಿಂದ ರಾಸ್ ಅವರು ಖಿನ್ನರಾದರು.
ಸಂಶೋಧನೆಗೆ ದೊರೆತ ಪೆಟ್ಟಿನಿಂದ ಅವರು ಸೇವೆಗೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದರು. ಅವರ
ಮಾರ್ಗದರ್ಶಕರಾಗಿದ್ದ ಪ್ಯಾಟ್ರಿಕ್ ಮ್ಯಾನ್ಸನ್ ಅವರ ಹಸ್ತಕ್ಷೇಪದಿಂದ ಸರ್ಕಾರವು ರೋಸ್‌ರನ್ನು ಕಲ್ಕತ್ತಾದಲ್ಲಿ
"ವಿಶೇಷ ಕರ್ತವ್ಯ" ಕ್ಕೆ ನಿಯೋಜಿಸಿ,
ಅವರ ಸೇವೆಯನ್ನು ಮುಂದುವರೆಸಲು ವ್ಯವಸ್ಥೆ ಮಾಡಿತು.
ರಾಸ್
ತಕ್ಷಣವೇ ಶಸ್ತ್ರಚಿಕಿತ್ಸಕ - ಲೆಫ್ಟಿನೆಂಟ್-ಜನರಲ್ ಕನ್ನಿಂಗ್ಹ್ಯಾಮ್ ಅವರ ಪ್ರಯೋಗಾಲಯದಲ್ಲಿ ಮಲೇರಿಯಾ
ಮತ್ತು ಲೀಶ್ಮೇನಿಯಾಸಿಸ್ (ಕಾಲಾ ಅಜರ್) ಕುರಿತು ಸಂಶೋಧನೆ ನಡೆಸಿದರು. ಕೋಲ್ಕತ್ತಾದಲ್ಲಿ ಮಲೇರಿಯ
ಹಾವಳಿ ಅಷ್ಟೇನೂ ಇಲ್ಲದ ಕಾರಣ "ಪಕ್ಷಿಗಳಲ್ಲಿ ಮಲೇರಿಯಾವನ್ನು ಅಧ್ಯಯನ ಮಾಡಿ ಜುಲೈ 1898 ರ
ಹೊತ್ತಿಗೆ ಪಕ್ಷಿ (ಏವಿಯನ್) ಮಲೇರಿಯಾದಲ್ಲಿ ಮಧ್ಯಂತರ ಅತಿಥೇಯ ಜೀವಿಯಾಗಿ ಕ್ಯುಲೆಕ್ಸ್ ಸೊಳ್ಳೆಗಳ
ಪಾತ್ರವನ್ನು ಕಂಡುಕೊಂಡರು ಹಾಗೂ ಸೊಳ್ಳೆಯ ಲಾಲಾರಸ ಗ್ರಂಥಿಯು ಮಲೇರಿಯಾ ಪರಾವಲಂಬಿಗಳ ಆವಾಸವೆಂದು
ಕಂಡುಹಿಡಿದರು.
1899ರಲ್ಲಿ,
ರಾಸ್ ಭಾರತೀಯ ವೈದ್ಯಕೀಯ ಸೇವೆಗೆ ರಾಜೀನಾಮೆ ನೀಡಿ ಲಿವರ್‌ಪೂಲ್ ಸ್ಕೂಲ್ ಆಫ್ ಟ್ರಾಪಿಕಲ್
ಮೆಡಿಸನ್‌ನಲ್ಲಿ ಅಧ್ಯಾಪಕರಾಗಿ ಸೇರಿದರು. ಅವರು ಭಾರತ ಮತ್ತು ಶ್ರೀಲಂಕಾದಲ್ಲಿ ಮಲೇರಿಯಾ ವಿರುದ್ಧ
ಹೋರಾಡಲು ಸಂಸ್ಥೆಗಳನ್ನು ಸ್ಥಾಪಿಸಿದರು. ಪಶ್ಚಿಮ ಆಫ್ರಿಕಾ, ಸೂಯೆಜ್ ಕಾಲುವೆ ವಲಯ, ಗ್ರೀಸ್, ಮಾರಿಷಸ್,
ಸೈಪ್ರಸ್ ಮೊದಲಾದ ಪ್ರಪಂಚದ ವಿವಿಧ ಭಾಗಗಳಲ್ಲಿ ಮಲೇರಿಯಾವನ್ನು ತಡೆಗಟ್ಟುವ ಕಾರ್ಯವನ್ನು ಮುಂದುವರೆಸಿದರು.
ರಾಸ್
ಅವರ ಈ ಕಾರ್ಯಗಳಿಗಾಗಿ 1902 ರಲ್ಲಿ, ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದ ಕ್ಯಾಮರೂನ್ ಪ್ರಶಸ್ತಿಯನ್ನು
ನೀಡಲಾಯಿತು. ಅವರು 1902 ರಲ್ಲಿ ಲಿವರ್‌ಪೂಲ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್‌ನ
ಪ್ರಾಧ್ಯಾಪಕ ಮತ್ತು ಅಧ್ಯಕ್ಷರಾಗಿ ಹಾಗೂ ಹಲವು ಸಂಸ್ಥೆಗಳ ಸಲಹೆಗಾರರಾಗಿಯೋ ,ಅಧ್ಯಕ್ಷರಾಗಿಯೋ ಹೀಗೆ,
ಹತ್ತು ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದರು. ರಾಸ್ ಅವರು ಮಲೇರಿಯಾ ಎಪಿಡೆಮಿಯಾಲಜಿಯ ಅಧ್ಯಯನಕ್ಕಾಗಿ
ಗಣಿತದ ಮಾದರಿಗಳನ್ನು ಅಭಿವೃದ್ಧಿಪಡಿಸಿದರು. ಇದು ಕೇವಲ ಎಪಿಡೆಮಿಯಾಲಜಿಗೆ ಸೀಮಿತವಾಗಿರದೆ ಶುದ್ಧ
ಮತ್ತು ಅನ್ವಯಿಕ ಗಣಿತ ಎರಡರ ಬೆಳವಣಿಗೆಗೂ ಕೊಡುಗೆ ನೀಡಿತು. 1912 ರಲ್ಲಿ ಹಿಸ್ಟರಿ ಆಫ್ ಮೆಡಿಸಿನ್
ಸೊಸೈಟಿಯ ಸ್ಥಾಪನೆಯಲ್ಲಿ ಸರ್ ವಿಲಿಯಂ ಓಸ್ಲರ್ ರವರ ಕೈ ಜೋಡಿಸಿದರು.
ಪಕ್ಷಿಗಳಲ್ಲಿ
ಮಲೇರಿಯಾ ಪರಾವಲಂಬಿಗಳ ಜೀವನಚಕ್ರವನ್ನು ಕಂಡುಹಿಡಿದಿದ್ದಕ್ಕಾಗಿ ರೊನಾಲ್ಡ್ ರಾಸ್ ಅವರಿಗೆ 1902ರಲ್ಲಿ
ಶರೀರಶಾಸ್ತ್ರ ಅಥವಾ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಸೋಂಕಿತ ಸೊಳ್ಳೆಗಳ
ಕಚ್ಚುವಿಕೆಯಿಂದ ಮಲೇರಿಯಾ ಪರಾವಲಂಬಿ ಹರಡುತ್ತದೆ ಎಂದು ರಾಸ್ ಮೊದಲು ತೋರಿಸಿ ಕೊಟ್ಟರು.
Ronald Ross 18 Cavendish Square blue plaque.jpg
1901 ರಲ್ಲಿ ರಾಸ್ ಇಂಗ್ಲೆಂಡ್‌ನ
ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನ ಫೆಲೋ ಆಗಿ ಆಯ್ಕೆಯಾದರು ಮತ್ತು ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದರು.
ಅವರು 1911 ರಿಂದ 1913 ರವರೆಗೆ ಉಪಾಧ್ಯಕ್ಷರಾಗಿದ್ದರು. 1902 ರಲ್ಲಿ ಅವರು ಅತ್ಯಂತ ಗೌರವಾನ್ವಿತ
ಆರ್ಡರ್ ಆಫ್ ಬಾತ್‌ನ ಸದಸ್ಯರಾಗಿ ನೇಮಕಗೊಂಡರು. 1911 ರಲ್ಲಿ ಅವರನ್ನು ನೈಟ್ ಕಮಾಂಡರ್ ಹುದ್ದೆಗೆ
ಏರಿಸಲಾಯಿತು. ಬೆಲ್ಜಿಯಂನಲ್ಲಿ, ಅವರನ್ನು ಆರ್ಡರ್ ಆಫ್ ಲಿಯೋಪೋಲ್ಡ್ II ರಲ್ಲಿ ಅಧಿಕಾರಿಯನ್ನಾಗಿ
ಮಾಡಲಾಯಿತು. 1926 ರಲ್ಲಿ ಅವರು ರಾಸ್ ಇನ್ಸ್ಟಿಟ್ಯೂಟ್ ಮತ್ತು ಹಾಸ್ಪಿಟಲ್
ಆಫ್ ಟ್ರಾಪಿಕಲ್ ಡಿಸೀಸ್ ಅಂಡ್ ಹೈಜೀನ್‌ನ ಮುಖ್ಯ ನಿರ್ದೇಶಕ ಹುದ್ದೆಯನ್ನು ವಹಿಸಿಕೊಂಡರು. ಅವರು
ನೊಬೆಲ್ ಪ್ರಶಸ್ತಿಯ ಜೊತೆಗೆ ಅನೇಕ ಗೌರವಗಳನ್ನು ಪಡೆದರು ಮತ್ತು ಯುರೋಪ್‌ನ ಹೆಚ್ಚಿನ ದೇಶಗಳ ಮತ್ತು ಇತರ ಅನೇಕ ಖಂಡಗಳ ವಿವಿಧ ಸಂಸ್ಥೆಗಳ
ಗೌರವ ಸದಸ್ಯತ್ವವನ್ನು ನೀಡಲಾಯಿತು. ಅವರು 1910 ರಲ್ಲಿ ಕ್ಯಾರೋಲಿನ್ ಇನ್ಸ್ಟಿಟ್ಯೂಟ್‌ನ ಶತಮಾನೋತ್ಸವದ
ಆಚರಣೆಯಲ್ಲಿ ಸ್ಟಾಕ್ಹೋಮ್‌ನಲ್ಲಿ ಗೌರವ M.D ಪದವಿ ಪಡೆದರು.
ರೊನಾಲ್ಡ್ ರಾಸ್ ವಿಲಕ್ಷಣ ಮತ್ತು ಅಹಂಕಾರಿ ಹಾಗೂ "ಉದ್ವೇಗದ
ಪ್ರತಿಭೆ" ಎಂದು ಎಂದು ಗುರುತಿಸಲ್ಪಟ್ಟವರು. ರಾಸ್ ರವರ ವೃತ್ತಿಪರ ಜೀವನವು ಅಧಿಕಾರಿಗಳು,
ಅವರ ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಮತ್ತು ಸಹ ವಿಜ್ಞಾನಿಗಳೊಂದಿಗಿನ ಸಂಬಂಧ ನಿರಂತರ ಸಂಘರ್ಷದ ಕಥೆಯೇ ಸರಿ. ಬಹುಶಃ ಇದೇ ಅವರ ಪದೇ ಪದೇ
ವರ್ಗಾವಣೆಗೆ ಕಾರಣವಾಗಿರಬಹುದು. ವೈದ್ಯಕೀಯ ಸಂಶೋಧನೆಯಲ್ಲಿ ವಿಜ್ಞಾನಿಗಳಿಗೆ ಸರ್ಕಾರದ ಬೆಂಬಲದ ಕೊರತೆಯಿಂದ
ರಾಸ್ ಆಗಾಗ್ಗೆ ಬೇಸರಗೊಂಡಿದ್ದರು. ಅವರು ಸರ್ಕಾರವನ್ನು "ಆಡಳಿತಾತ್ಮಕ ಅನಾಗರಿಕತೆ" ಎಂದು
ಟೀಕಿಸುತ್ತಿದ್ದರು.
1889 ರಲ್ಲಿ ರಾಸ್ ರೋಸಾ ಬೆಸ್ಸಿ ಬ್ಲೋಕ್ಸಮ್ ಅನ್ನು ವಿವಾಹವಾದರು.
ಅವರಿಗೆ ಇಬ್ಬರು ಹೆಣ್ಣುಮಕ್ಕಳು, ಡೊರೊಥಿ (1891-1947) ಮತ್ತು ಸಿಲ್ವಿಯಾ (1893-1925), ಮತ್ತು
ಇಬ್ಬರು ಪುತ್ರರು, ರೊನಾಲ್ಡ್ ಕ್ಯಾಂಪ್ಬೆಲ್ (1895-1914) ಮತ್ತು ಚಾರ್ಲ್ಸ್ ಕ್ಲೇ
(1901-1966). ಅವರ ಪತ್ನಿ 1931 ರಲ್ಲಿ ನಿಧನರಾದರು. ಇಂತಹ ಸಾಧಕ ರಾಸ್ 16 ಸೆಪ್ಟೆಂಬರ್ 1932
ರಲ್ಲಿ ತಮ್ಮ 75ನೇ ವಯಸ್ಸಿನಲ್ಲಿ ದೀರ್ಘಕಾಲದ ಅಸೌಖ್ಯ ಮತ್ತು ಅಸ್ತಮದಿಂದ ನಿಧನರಾದರು. ಅವರನ್ನು
ಲಂಡನ್ ನ ಪುಟ್ನಿ ವೇಲ್ ಸ್ಮಶಾನದಲ್ಲಿ ಅವರ ಪತ್ನಿಯ ಪಕ್ಕದಲ್ಲೇ ಸಮಾಧಿ ಮಾಡಲಾಯಿತು. ಇದರೊಂದಿಗೆ
ವೈದ್ಯಲೋಕದ ವರ್ಣರಂಜಿತ ವಿಸ್ಮಯವೊಂದು ಮಿಂಚಿ ಮರೆಯಾಯಿತು.
No comments:
Post a Comment