ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, April 4, 2023

ಸಸ್ಯ ಪ್ಲವಕಗಳೆಂಬ ಪ್ರವರ್ತಕ ಜೀವಿ ಸಮೂಹ 2

 ಸಸ್ಯ ಪ್ಲವಕಗಳೆಂಬ ಪ್ರವರ್ತಕ ಜೀವಿ ಸಮೂಹ 

ಲೇಖಕರು : ತಾಂಡವಮೂರ್ತಿ.ಎ.ಎನ್ 

 ಸರ್ಕಾರಿ ಪ್ರೌಢಶಾಲೆ,

ಕಾರಮಂಗಲ ಬಂಗಾರಪೇಟೆ(ತಾ.),

ಕೋಲಾರ(ಜಿಲ್ಲೆ)

ಸಸ್ಯ ಪ್ಲವಕಗಳು ಭೂಮಿಯ ಜೀವಸಂಕುಲದ ಉಸಿರೇ ಆಗಿವೆ. ಇವು ಭೂಮಿಯ ೫೦% ರಷ್ಟು ಆಕ್ಸಿಜನ್ ಅನ್ನು ಉತ್ಪಾದಿಸುತ್ತವೆ. ಅನೇಕ ಜೀವಿಗಳಿಗೆ ಆಹಾರವನ್ನು ಒದಗಿಸುತ್ತವೆ. ಇಂತಹ ಜೀವಿಗಳ ಕುರಿತಾದ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ ಲೇಖಕ ತಾಂಡವಮೂರ್ತಿ ಎ.ಎನ್ ರವರು.

ಸೌರಮಂಡಲದ ಏಕೈಕ ಸಜೀವ ಗ್ರಹವಾದ ಭೂಮಿಯಲ್ಲಿ ಜೀವ ವಿಕಾಸ ಮತ್ತು ಜೀವ ವೈವಿಧ್ಯತೆಗೆ ಅಗತ್ಯ ಭೂಮಿಕೆ ಒದಗಿಸಿದ ಜೀವಿ ಸಮೂಹಗಳಲ್ಲಿ ಪ್ರವರ್ತಕ ಜೀವ ಸಮೂಹಗಳೆಂದರೆ ಸಸ್ಯ ಪ್ಲವಕಗಳು.  ಸಸ್ಯ ಪ್ಲವಕಗಳು ಸಾಗರ ಮತ್ತು ಇತರ ಜಲಾವಾರಗಳಲ್ಲಿ ಆಹಾರ ಜಾಲವನ್ನು ಪೋಷಿಸುವ ಆದ್ಯ ಪ್ರವರ್ತಕ ಜೀವಿ ಸಮುಹಗಳಾಗಿವೆ. ಸಾಗರ-ಸಮುದ್ರಗಳ ದ್ಯುತಿ ವಲಯದಲ್ಲಿ ವಿಸ್ತರಿಸಿರುವ ಸಸ್ಯ ಪ್ಲವಕಗಳು ಜಲಾವಾಸಗಳಲ್ಲಿ ಸಜೀವ ಸಾವಯವ ಪರಿಸರವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ದ್ಯುತಿಸ್ವಪೋಷಣೆಯ ಮೂಲಕ ತಮಗೆ ಅಗತ್ಯವಾದ ಶಕ್ತಿಯನ್ನು ಪಡೆದು ಇತರ ಜೀವಿಗಳನ್ನು ಪೋಷಿಸುವ ಅನಿವಾರ್ಯತೆಯಿಂದ ಸಸ್ಯಪ್ಲವಕಗಳು ಸೂರ್ಯ ರಶ್ಮಿ ತಲುಪಬಹುದಾದ ಆಳದವರೆಗೆ ಜಲಾವಾಸಗಳಲ್ಲಿ ಕಂಡುಬರುತ್ತವೆ. ದ್ಯುತಿಸಂಶ್ಲೇಷಣೆಯ ಈ ಪ್ರಕ್ರಿಯೆಯಲ್ಲಿ ವಾತಾವರಣದ ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಂಡು, ಅಪಕರ್ಷಿಸಿ, ಸಾವಯವ ಕಾರ್ಬನ್ ಯುಕ್ತ ಆಹಾರವನ್ನು ತಯಾರಿಸಿ ಆಕ್ಸಿಜನ್ ಹೊರಹಾಕುವ ನಿಷ್ಕಾಮ ಕಾಯಕವನ್ನು ನಿರಂತರವಾಗಿ ನಿರ್ವಹಿಸಿ ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್ ಮತ್ತು ಆಕ್ಸಿಜನ್ ಸಂತುಲನೆಯಲ್ಲಿ ಇವುಗಳು ಅತ್ಯಂತ ನಿರ್ಣಾಯಕ ಪಾತ್ರವಹಿಸುತ್ತವೆ. 

ಸಸ್ಯ ಪ್ಲವಕಗಳ ಪ್ರಮುಖ ವಿಧಗಳು

 ಸಸ್ಯಪ್ಲವಕಗಳ ಮೂರು ಪ್ರಮುಖ ಗುಂಪುಗಳೆಂದರೆ 

೧. ಡಯಟಮ್ ಗಳು 

೨. ಡೈನೋಫ್ಲಾಜಲೇಟ್ ಗಳು 

೩. ಸಯನೋಬ್ಯಾಕ್ಟೀರಿಯಾ 

 

ಡಯಾಟಮ್ ಗಳು ಕಂದು-ಹೊಂಬಣ್ಣದ ಏಕಕೋಶೀಯ ಶೈವಲಗಳಾಗಿದ್ದು (Golden-brown algae), ಸಿಲಿಕಾ ಕೋಶಭಿತ್ತಿ ಹೊಂದಿದ್ದು ಸಸ್ಯ ಪ್ಲವಕಗಳ ಪ್ರಧಾನ ಗುಂಪಾಗಿವೆ. ಡಯಾಟಮ್ ಗಳು ತಮ್ಮ ಚಲನೆಗೆ ಸಾಗರ ಪ್ರವಾಹವನ್ನು ಅವಲಂಬಿಸಿದ್ದರೆ ಡೈನೋಫ್ಲಾಜಲ್ಲೇಟ್ ಗಳು ಕಶಾಂಗಗಳ ಸಹಾಯದಿಂದ ಸ್ವತಂತ್ರವಾಗಿ ಚಲಿಸುತ್ತವೆ.‌ ಬಹುತೇಕ ಡೈನೋಫ್ಲಾಜಲೇಟ್ ಗಳು ದ್ಯುತಿ ಸ್ವಪೋಷಕಗಳಾಗಿದ್ದು, ಕೆಲವು ಡೈನೋಫ್ಲಾಜಲೇಟ್ ಗಳು ಸ್ವಪೋಷಕಗಳಾಗಿದ್ದರೂ ಇತರ ಸೂಕ್ಷ್ಮಜೀವಿಗಳನ್ನು ಭಕ್ಷಿಸುವ ಮೂಲಕ ಮಿಶ್ರಪೊಷಣೆಯನ್ನು ಪಡೆಯುತ್ತವೆ. ಜೈವಿಕ ಪ್ರತಿದೀಪ್ತಿಯನ್ನು ಹೊರಸೂಸುವ ಕೆಲವು ಡೈನೋಫ್ಲಾಜಲೇಟ್ ಗಳು ಸಾಗರಗಳ ವಿಶಿಷ್ಟ ವರ್ಣ ಸಂಯೋಜನೆಗೆ ಕಾರಣವಾಗುತ್ತವೆ. ಡೈನೋಫ್ಲಾಜಲೇಟ್ ಗಳನ್ನು ಸಸ್ಯ ಪ್ಲವಕಗಳು ಮತ್ತು ಪ್ರಾಣಿ ಪ್ಲವಕಗಳ ನಡುವಿನ ಕೊಂಡಿ ಎಂದು ಪರಿಗಣಿಸಲಾಗುತ್ತದೆ. ಡಯಟಮ್ ಗಳು ಮತ್ತು ಡೈನೋಫ್ಲಾಜಲ್ಲೇಟ್ ಗಳು ಯೂಕ್ಯಾರಿಯೋಟ್ ಗಳಾಗಿದ್ದು ಪ್ರೊಟಿಸ್ಟಾ ಸಾಮ್ರಾಜ್ಯಕ್ಕೆ ಸೇರುತ್ತವೆ.‌ ಸಯನೋ ಬ್ಯಾಕ್ಟೀರಿಯಾಗಳು ಪ್ರೋಕ್ಯಾರಿಯೋಟ್ ಗಳಾಗಿದ್ದು ಮೊನೆರಾ ಸಾಮ್ರಾಜ್ಯಕ್ಕೆ ಸೇರುತ್ತವೆ. 

ಸಸ್ಯ ಪ್ಲವಕಗಳ ಸಂವರ್ಧನೆಯನ್ನು ನಿಯಂತ್ರಿಸುವ ಅಂಶಗಳು 

 ಸಸ್ಯಪ್ಲವಕಗಳ ಬೆಳವಣಿಗೆ ಬೆಳಕಿನ ಲಭ್ಯತೆ, ಪೋಷಕಾಂಶಗಳಾದ ನೈಟ್ರೇಟ್, ಫಾಸ್ಪೇಟ್ ಮತ್ತು ಕಬ್ಬಿಣದ ಪ್ರಮಾಣವನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಸಾಗರ ಪ್ರವಾಹಗಳು ಸಂಧಿಸುವ ಭಾಗಗಳಲ್ಲಿ ಪೊಷಕಾಂಶಗಳ ಲಭ್ಯತೆ ಹೆಚ್ಚಾಗಿರುವುದರಿಂದ ಸಸ್ಯಪ್ಲವಕಗಳ ವೈವಿಧ್ಯತೆ ಮತ್ತು ಉತ್ಪಾದನೆ ಗರಿಷ್ಟವಾಗಿರುತ್ತದೆ. ಆದ್ದರಿಂದ ಈ ಭಾಗಗಳಲ್ಲಿ ಜಲಚರಗಳ ಜೀವವೈವಿಧ್ಯತೆ ಸಮೃದ್ಧವಾಗುರುತ್ತದೆ. ಜಾಗತಿಕ ಹವಾಮಾನ ಬದಲಾವಣೆ, ಹಸಿರು ಮನೆ ಪರಿಣಾಮ ಮತ್ತು ಇತರ ಮಾನವ ಜನ್ಯ ಕಾರಣಗಳಿಂದ ಸಸ್ಯ ಪ್ಲವಕಗಳ ಜೀವವೈವಿಧ್ಯತೆ ಅವನತಿಯತ್ತ ಸಾಗಿದೆ. 

 

ಸಸ್ಯ ಪ್ಲವಕಗಳ ಪ್ರಾಮುಖ್ಯತೆ 

೧. ಸಸ್ಯ ಪ್ಲವಕಗಳು ಭೂಮಿಯ ಮೇಲಿನ ನಿರ್ಣಾಯಕ ಜೀವಿ ಸಮೂಹಗಳಲ್ಲಿ ಒಂದಾಗಿದ್ದು,ಭೂಮಿಯ ೫೦% ರಷ್ಟು ಆಕ್ಸಿಜನ್ ಅನ್ನು ಉತ್ಪಾದಿಸುತ್ತವೆ. ಇವುಗಳು ನೀರಿನಲ್ಲಿ ತೇಲುವ ಸೂಕ್ಷ್ಮ ಜೀವಿಗಳಾಗಿದ್ದು ಸಸ್ಯ ಜೀವರಾಶಿಯ ಕೇವಲ ೧% ಮಾತ್ರ ಸಸ್ಯಪ್ಲವಕಗಳು ಪ್ರತಿನಿಧಿಸುತ್ತವೆ. ಆದರೂ ೫೦% ದ್ಯುತಿ ಸಂಶ್ಲೇಷಣೆ ಮತ್ತು ಆಕ್ಸಿಜನ್ ಉತ್ಪಾದಿಸುವ ಇವುಗಳ ಕಾರ್ಯಕ್ಷಮತೆ ಸಸ್ಯಗಳಿಗಿಂತಲೂ ಹಲವಾರು ಪಟ್ಟು ಮಿಗಿಲಾದುದು. 

೨. ಸಾಗರ ಆಹಾರ ಜಾಲದ ಪೋಷಣೆಗೆ ಅಗತ್ಯವಾದ ನೆಲೆಗಟ್ಟನ್ನು ರೂಪಿಸುತ್ತವೆ.

೩. ಸಾಗರ ಮೀನುಗಾರಿಕೆ ಸಂಪೂರ್ಣವಾಗಿ ಸಸ್ಯ ಪ್ಲವಕಗಳ ಸಂವರ್ಧನೆ ಮತ್ತು ಉತ್ಪಾದನೆಯನ್ನು ಅವಲಂಬಿಸಿರುವುದರಿಂದ ಆರ್ಥಿಕತೆಯ ಮೇಲೂ ಪ್ರಭಾವ ಬೀರುತ್ತವೆ. 

೪. ದ್ಯುತಿ ಸಂಶ್ಲೇಷಣೆಯ ಮೂಲಕ ನಿರವಯವ ಕಾರ್ಬನ್ ಅನ್ನು ಸಾವಯವ ಕಾರ್ಬನ್ ಸಂಯುಕ್ತಗಳಾಗಿ ಪರಿವರ್ತಿಸಿ ಜಾಗತಿಕ ಕಾರ್ಬನ್ ಚಕ್ರದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುತ್ತವೆ.

 ೫. ಸತ್ತ ಸಸ್ಯ ಪ್ಲವಕಗಳ ಅವಶೇಷಗಳು ಇತರ ಜಲಚರಗಳ ಅವಶೇಷಗಳೊಂದಿಗೆ ಸಾಗರದಾಳವನ್ನು ಸೇರಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರೂಪುಗೊಳ್ಳಲು ಪ್ರಮುಖ ಪಾತ್ರ ವಹಿಸುತ್ತವೆ. ಭೂಮಿ ಸಜೀವ ಗ್ರಹವಾಗಿ ರೂಪುಗೊಳ್ಳಲು ಸಸ್ಯ ಪ್ಲವಕಗಳು ಆದ್ಯ ಪ್ರವರ್ತಕರಾಗಿ ಭದ್ರ ನೆಲೆಗಟ್ಟನ್ನು ರೂಪಿಸಿವೆ.ಅಲ್ಲವೇ? 

 

No comments:

Post a Comment