ಮೇ ತಿಂಗಳ
ಅಂದ ಚಂದಕ್ಕೆ ಮೊಹರು ಒತ್ತಿದ ಗುಲ್ಮೊಹರ್
ಲೇಖಕರು : ಬಸವರಾಜ ಎಮ್ ಯರಗುಪ್ಪಿ
ಬಿ ಆರ್ ಪಿ ಶಿರಹಟ್ಟಿ ಸಾ.ಪೊ ರಾಮಗೇರಿ.
ತಾಲ್ಲೂಕು ಲಕ್ಷ್ಮೇಶ್ವರ.
ಜಿಲ್ಲಾ ಗದಗ. ದೂರವಾಣಿ 9742193758
ಮಿಂಚಂಚೆ basu.ygp@gmail.com
ಮೇ ತಿಂಗಳಲ್ಲಿ ತನ್ನ
ಕೆಂಪು – ಕಿತ್ತಳೆ ಹೂಗಳ ಸಮೂಹದಿಂದ ನೋಡುಗರ ಗಮನವನ್ನು ಸೆಳೆಯುವ ಗುಲ್ಮೊಹರ್ ಮರಗಳನ್ನು ಬೀದಿಯ
ಎರಡೂ ್ ಬ ಕಂಡಿರಬಹುದು. ಈ ಮರಗಳ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದಾರೆ. ಭಿ.ಆರ್ ಪಿ.ಬಸವರಾಜ
ಎಮ್ಮರಗುಪ್ಪಿ ಅವರು
"ರಾಷ್ಟ್ರವಾಗಿ ಅಸ್ತಿತ್ವದಲ್ಲಿರಲು, ರಾಜ್ಯವಾಗಿ ಏಳಿಗೆ ಹೊಂದಲು, ಜನರಂತೆ ಬದುಕಲು, ನಾವು ಮರಗಳನ್ನು ಹೊಂದಿರಬೇಕು." – ಥಿಯೋಡರ್ ರೂಸ್ವೆಲ್ಟ್ ಹೇಳಿರುವ ಹಾಗೆ ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗೆ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವ ಆಮ್ಲಜನಕದ ಪೂರೈಕೆ ಮಾಡುವ ಮೂಲಕ ಮರಗಳು ಜೀವಿಗಳು ಅಸ್ತಿತ್ವದಲ್ಲಿರುವ ಹಾಗೆ ನೋಡಿಕೊಳ್ಳುತ್ತವೆ.
ನಾನು
ಹೇಳ ಹೊರಟಿರುವುದು ಸುಂದರ ಕೆಂಪುಬಣ್ಣದ ಹೂಬಿಡುವ ಗುಲ್ಮೊಹರ್ ಎಂಬ ಮರದ ಬಗ್ಗೆ. ನನ್ನೂರು ರಾಮಗೇರಿಯಿಂದ
ಕರ್ತವ್ಯದ ನಿಮಿತ್ಯ ಪ್ರತಿದಿನ ಶಿರಹಟ್ಟಿಗೆ ಹೋಗಿ ಬರುತ್ತಿರುತ್ತೇನೆ. ಮಾರ್ಗದ ರಸ್ತೆಯ
ಬದಿಯಲ್ಲಿ ತನ್ನ ಕೆಂಬಣ್ಣದ ಚೆಲುವ ಸಿರಿಯ ಹೂಗಳಿಂದ ಮನಸ್ಸು ಮುದಗೊಳಿಸುವ ಗುಲ್ಮೊಹರ್ ಮರಗಳು ,ತಮ್ಮ ಅಂದದ
ಬಣ್ಣದಿಂದ ಆಕರ್ಷಿಸುವ ‘ಗುಲ್ಮೊಹರ್’ ಹೂಗಳು ಬಿರು ಬೇಸಿಗೆಯ ಬಿಸಿಲ(ಬೆಂಕಿಯ)ಲ್ಲಿ ಅರಳುವ ಸುಂದರಿಯರು
ಎಂದರೆ ಉತ್ಪ್ರೇಕ್ಷೆಯಲ್ಲ. ಹಾಗೆಯೇ ಶಿರಹಟ್ಟಿಯ ಡಬಾಲಿ ಶಾಲೆಯ ಆವರಣದಲ್ಲಿ ಮತ್ತು ತಾಲ್ಲೂಕು ಕ್ರೀಡಾಂಗಣದಲ್ಲಿ
ಬೆಳೆದಿರುವ ಕೆಂಪು ಹೂಗಳ ಗುಲ್ಮೊಹರ್ ಮರಗಳು ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುತ್ತವೆ. ಹೀಗೆ
ಬಹುತೇಕ ರಸ್ತೆ ಪಕ್ಕದ ಮರಗಳಲ್ಲಿ ಗೋಚರಿಸುವ ವಿಶಿಷ್ಟ- ಅಷ್ಟೇ ವಿಭಿನ್ನ ಬಗೆಯಲ್ಲಿ ಬೆಳೆದು ನಿಲ್ಲುವ
ಈ ಗುಲ್ಮೊಹರ್ ಮರಗಳಲ್ಲಿನ ಕೆಂಪು ಹೂಗಳು ಕಂಡ ಕ್ಷಣ ಮನಸ್ಸು ಸೆಳೆಯುವ ಜೊತೆಗೆ ಹಿತಾನುಭವ ನೀಡುತ್ತವೆ.
ಪ್ರವಾಸಿಗರನ್ನು ಆಕರ್ಷಿಸುವ
ಮರಗಳು:
ಈ
ಭಾಗದಲ್ಲಿನ ವಿವಿಧ ಸ್ಥಳ ವೀಕ್ಷಣೆ ಮಾಡಲು ಬರುವ ಪ್ರವಾಸಿಗರಿಗೆ ತನ್ನ ಚೆಲುವ ಸೊಬಗಿನಿಂದ ಈ ಗುಲ್ಮೊಹರ್
ಮರಗಳು ವಿಶಿಷ್ಟ ಸ್ವಾಗತ ಕೋರಿ, ಮನಸ್ಸಿಗೆ ಸಂತೋಷ ನೀಡುತ್ತವೆ. ಇವುಗಳಿಗೆ ಉತ್ತರ ಕರ್ನಾಟಕದಲ್ಲಿ
ಸಂಕೇಶ್ವರ ಮರ ಎಂದೇ ಹೆಸರು. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಕೆಂಡದಂತಹ ಉರಿಬಿಸಿಲು.
ಸೆಕೆಯ ಸಂಕಟ, ತಾಪಕ್ಕೆ ಜನ ದೂರ ಓಡುವಂತೆ ಮಾಡಿದ್ದರೆ, ಅಂಥಾ ಬಿಸಿಲಲ್ಲಿ ಗುಲ್(ಹೂ) ಮೊಹರ್(ನವಿಲು)
ಜೀವಕಳೆ ಪಡೆದಿರುವಂತೆ, ನಸು ನಗುತ್ತಲೇ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುವುದು ಈ ಹೂ ಬಿಟ್ಟ
ಮರಗಳ ವಿಶೇಷತೆಯಾಗಿದೆ.
ಗುಲ್ಮೊಹರ್ ನ ಪರಿಚಯ:
ಡೆಲೋನಿಕ್ಸ್
ರೀಜಿಯಾ () ಎಂಬುದು ಗುಲ್ಮೊಹರ್ ಮರದ ವೈಜ್ಞಾನಿಕ ಹೆಸರು. ಹುರುಳಿ ಜಾತಿಯ ಸಸ್ಯಗಳ ಕುಟುಂಬವಾದ ಫ್ಯಾಬೇಸಿಯಲ್ಲಿ
ಒಂದು ಉಪಕುಟುಂಬವಾದ ಸಿಸಾಲ್ಪಿನಿಯಾಯಿಡೆಗೆ ಇದು ಸೇರುತ್ತದೆ. ಸಸ್ಯಶಾಸ್ತ್ರಜ್ಞ
ವೆನ್ಸೆಲ್ ಬೊಜೆರ್*() ಅವರು 19 ನೇ ಶತಮಾನದ ಆರಂಭದಲ್ಲಿ
ಮಡಗಾಸ್ಕರ್‌ನಲ್ಲಿ ಇದನು ಕಂಡುಹಿಡಿದರು.
ಕೆಲವರು ಇದನ್ನು ವಿಶ್ವದ ಅತ್ಯಂತ ವರ್ಣರಂಜಿತ ಮರ
ಎಂದು ವಿವರಿಸುತ್ತಾರೆ. ವಸಂತ ಮತ್ತು ಬೇಸಿಗೆಯಲ್ಲಿ ಹಲವಾರು ವಾರಗಳವರೆಗೆ ಇದು ಹೂ ಬಿಡುತ್ತದೆ. ಈ
ರೀತಿಯ ಕೆಂಪು ಹೂವುಗಳು ಗುಲ್ಮೊಹರ್ ಮರದ ಸಮೃದ್ಧ ಸಮೂಹಗಳಿಂದ ಮುಚ್ಚಲ್ಪಟ್ಟಿರುತ್ತದೆ. ಇದು ಜರೀಗಿಡದಂತಹ
ಎಲೆಗಳನ್ನು ಹೊಂದಿದೆ ಪ್ರಪಂಚದ ಅನೇಕ ಉಷ್ಣವಲಯದ ಭಾಗಗಳಲ್ಲಿ ಇದನ್ನು ಅಲಂಕಾರಿಕ ಮರವಾಗಿ ಬೆಳೆಸಲಾಗುತ್ತದೆ
ಕೆಂಪು-ಕಿತ್ತಳೆ ಬಣ್ಣದ ಹೂಗಳ ಸಮೂಹ ಜ್ವಾಲೆಯ ರೀತಿ ಕಾಣುವುದರಿಂದ, ಕಾಡಿನ ಜ್ವಾಲೆ ಅಥವಾ ಜ್ವಾಲೆಯ
ಮರ ಎಂದೇ ಹೆಸರುವಾಸಿಯಾಗಿದೆ. ಇಂಗ್ಲೀಷಿನಲ್ಲಿ ಇದನ್ನು ರಾಯಲ್ ಪೊಯಿನ್ಸಿಯಾನಾ() ,ಫ್ಲಾಂಬಾಯಿಂಟ್()
ಫೀನಿಕ್ಸ್ ಹೂವು,ಎಂಬ ವಿವಿಧ ಹೆಸರುಗಳಲ್ಲಿ ಕರೆಯಲಾಗುತ್ತದೆ.
ಭಾರತದಲ್ಲಿ
ಇದನ್ನು ನೈಸರ್ಗಿಕಗೊಳಿಸಲಾಗಿದೆ ಅಲ್ಲದೆ, ಇದನ್ನು ಬೀದಿ ಮರವಾಗಿ ವ್ಯಾಪಕವಾಗಿ ಬೆಳೆಸಲಾಗುತ್ತಿದೆ.ಹೀಗಾಗಿ
ಭಾರತದಲ್ಲಿ ಮೇ ತಿಂಗಳಲ್ಲಿ ಹೂ ಗಳು ಅರಳುವುದರಿಂದ,ಇದನ್ನು ಮೇ-ಹೂವಿನಮರ (May Flower), ಎಂದೂ ಕರೆಯಲಾಗುತ್ತದೆ.
ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಇದನ್ನು ಕೃಷ್ಣಚುರಾ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ಭಾರತದ
ರಾಜ್ಯವಾದ ಕೇರಳದಲ್ಲಿ ,ರಾಯಲ್ ಪೊಯಿನ್ಸಿಯಾನಾ ವನ್ನು ಕಾಲ್ವರಿಪ್ಪು ( ಕಾಲ್ವರಿಪೂವ್) ಎಂದು ಕರೆಯಲಾಗುತ್ತದೆ
, ಇದರರ್ಥ "ಕ್ಯಾಲ್ವರಿಹೂವು” ಇದನ್ನು ಕೇರಳದ ಹಲವು ಪ್ರದೇಶಗಳಲ್ಲಿ ವಾಗಾ ಎಂದೂ ಕರೆಯುತ್ತಾರೆ.
ಶ್ರೀಲಂಕಾದಲ್ಲಿ ಇದನ್ನು ಸಿಂಹಳೀಯ ಭಾಷೆಯಲ್ಲಿ ಮಾರಮರ ಎಂದು ಕರೆಯಲಾಗುತ್ತದೆ. ಇದನ್ನು ನೆರಳಿನ ಮರವಾಗಿ
ಪರಿಚಯಿಸಲು ಕಾರಣವಾದ ಬ್ರಿಟಿಷ್ ನಾಗರಿಕ ಸೇವಕ
ಲಾಮೆಸುರಿಯನ್ ಸ್ಮರಣೆಯಲ್ಲಿ ಇದನ್ನು ಲಾಮಾಸೂರಿಯ
ಮರ ಎಂದು ಕರೆಯಲಾಯಿತು ಇದನ್ನು ಪಾಕಿಸ್ತಾನದ ಕರಾಚಿಯಲ್ಲಿಯೂ ಬೆಳೆಯಲಾಗುತ್ತದೆ . ಮಾರಿಷಸ್ ಮತ್ತು
ಲಾರಿ ಯೂನಿಯನ್‌ನಲ್ಲಿ ಇದು ಹೊಸ ವರ್ಷದ ಬರುವಿಕೆಯನ್ನು ಪ್ರಕಟಿಸುತ್ತದೆ.
ಉಪಯುಕ್ತತೆ:
ಗುಲ್ಮೊಹರ್
ತನ್ನ ಅಲಂಕಾರಿಕ ಮೌಲ್ಯದ ಜೊತೆಗೆ, ಉಷ್ಣವಲಯದ ಪರಿಸ್ಥಿತಿಗಳಲ್ಲಿ ಇದು ಉಪಯುಕ್ತ ನೆರಳಿನ ಮರವಾಗಿದೆ.
ಏಕೆಂದರೆ ಇದು ಸಾಮಾನ್ಯವಾಗಿ ಸಾಧಾರಣ ಎತ್ತರಕ್ಕೆ ಬೆಳೆಯುತ್ತದೆ (ಹೆಚ್ಚಾಗಿ 5 ಮೀಅಥವಾ 15 ಅಡಿ,
ಆದರೆ ಇದು ಗರಿಷ್ಠ ಎತ್ತರ 12 ಮೀಅಥವಾ 40 ಅಡಿ ತಲುಪಬಹುದು) ಆದರೆ, ವ್ಯಾಪಕವಾಗಿ ಹರಡುತ್ತದೆ ಮತ್ತು
ಅದರ ದಟ್ಟವಾದ ಎಲೆಗಳು ಪೂರ್ಣ ನೆರಳು ನೀಡುತ್ತದೆ. ಗಮನಾರ್ಹವಾದ ಶುಷ್ಕ ಋತುವಿನ ಪ್ರದೇಶಗಳಲ್ಲಿ,
ಇದು ಬರಗಾಲದ ಸಮಯದಲ್ಲಿ ತನ್ನ ಎಲೆಗಳನ್ನು ಚೆಲ್ಲುತ್ತದೆ. ಆದರೆ ಇತರ ಪ್ರದೇಶಗಳಲ್ಲಿ ಇದು ವಾಸ್ತವಿಕವಾಗಿ
ನಿತ್ಯ ಹರಿದ್ವರ್ಣವಾಗಿರುತ್ತದೆ.
ಗುಲ್ಮೊಹರ್
ವಿಷಕಾರಿಯಲ್ಲದ ಮರ. ಇದರ ಹೂವಿನ ಮೊಗ್ಗುಗಳನ್ನು ಖಾದ್ಯ ಮತ್ತು ಸುವಾಸನೆಗಾಗಿ ಬಳಸಲಾಗುತ್ತದೆ. ಇದು
ಆಳವಿಲ್ಲದ ಬೇರುಗಳನ್ನು ಹೊಂದಿರುವ ದೀರ್ಘಕಾಲಿಕ ಸಸ್ಯವಾಗಿದ್ದರಿಂದ ಭಾರೀ ಗಾಳಿ ಮತ್ತು ಮಳೆಯ ಸಮಯದಲ್ಲಿ
ಬೀಳುವ ಸಾಧ್ಯತೆಯಿದೆ.
ಅಳಿವಿನಂಚಿನಲ್ಲಿರುವ
ಮರಗಳು:
ಜಿಲ್ಲಾ
ಹಾಗೂ ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ ಕಳೆದ ಆರೇಳು ವರ್ಷಗಳ ಹಿಂದೆ ಸಾವಿರಾರು ಗುಲ್ಮೊಹರ್ ಮರಗಳ
ಮಾರಣ ಹೋಮವಾಗಿವೆ. ಮತ್ತೆ ಹೊಸ ಮಾರ್ಗಕ್ಕೆ ಈಗಿನ ಅನೇಕ ಗುಲ್ಮೊಹರ್ ಮರಗಳು ಬಲಿಯಾಗಿವೆ. ಅಭಿವೃದ್ಧಿ
ಹಾಗೂ ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ಮುಂಬರುವ ದಿನಗಳಲ್ಲಿ ಈ ಸುಂದರ ‘ಗುಲ್ಮೊಹರ್’ ಹೂ, ಪ್ರಕೃತಿ
ಪ್ರಿಯರಿಗೆ ಅಪರೂಪ ಆಗುತ್ತವೆ ಎಂಬುದು ಬೇಸರದ ಸಂಗತಿಯಾಗಿದೆ.
ಒಟ್ಟಾರೆಯಾಗಿ
ನನ್ನ ದೃಷ್ಟಿಯಲ್ಲಿ ಈ 'ಮೇಫ್ಲವರ್ಸ್' ಮರಗಳು ಬಿಸಿಯಾದ ತಾಪಮಾನದ ಮೇ ತಿಂಗಳಲ್ಲಿ ತಮ್ಮ ಆಕರ್ಷಕವಾದ
ಕೆಂಪು ಹೂವುಗಳೊಂದಿಗೆ ಸಸ್ಯಪ್ರೇಮಿಗಳ ಹೃದಯದಲ್ಲಿ ಶಾಶ್ವತವಾದ ಪ್ರಭಾವ ಬೀರುತ್ತವೆ.
No comments:
Post a Comment