ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, March 4, 2024

ಮೂಢನಂಬಿಕೆ

ಮೂಢನಂಬಿಕೆ

ಲೇ :  ಕೃಷ್ಣ ಚೈತನ್ಯ

 ಇತ್ತೀಚೆಗೆ ಒಮ್ಮೆ ಮೈಸೂರಿನಲ್ಲಿ ರಾತ್ರಿ ಊಟದ ನಂತರ ಒಂದಷ್ಟು ದೂರ ತಿರುಗಾಡಿಕೊಂಡು ಬರೋಣವೆಂದು ಮನೆಯ ಹೊರಗಡೆಯಿರುವ ರಸ್ತೆಯಲ್ಲಿ ಪಾದವಿರಿಸುತ್ತಿದ್ದಂತೆ ಮೊಟ್ಟೆ ಒಡೆದಿರುವುದು ಕಣ್ಣಿಗೆ ಬಿತ್ತು. ಆ ರಸ್ತೆಗೆ ಒಂದು ಅಡ್ಡ ರಸ್ತೆ ಬಂದು ಕೂಡುವ ಸ್ಥಳವಾಗಿತ್ತು. ಅಂದರೆ ಅದು ಮೂರು ರಸ್ತೆ ಕೂಡುವ ಸ್ಥಳ. ಅಲ್ಲಿಂದ ಮುಂದಕ್ಕೆ ಒಂದು ಐವತ್ತು-ಅರವತ್ತು ಹೆಜ್ಜೆ ಹಾಕಿರಬಹುದು ಮತ್ತೆ ಅದೇ ಘಟನೆ. ಮತ್ತೆ ಮುಂದಕ್ಕೆ ಅಷ್ಟು ಹೆಜ್ಜೆ ಹಾಕುವಷ್ಟರಲ್ಲಿ ಮತ್ತೆ ಅದೇ. ಏನು ಇವರು ‘ಒಂದು ಮೊಟ್ಟೆಯ ಕತೆʼ ಹೇಳಲು ಹೊರಟಿದ್ದಾರೆ ಎಂದು ಕೊಂಡಿದ್ದೀರಾ? ಖಂಡಿತಾ ಇಲ್ಲಾ. ಹೌದೌದು! ಇದು ಒಂಥರಾ ಮೊಟ್ಟೆಯ ಕತೆಯೇ.

 ಏನಪ್ಪಾ ಇದು, ಮೊಟ್ಟೆ ಬಿದ್ದು ಒಡೆದಿದೆಯಲ್ಲಾ ಎಂದು ನೋಡಿದರೆ ಅದು ತಂದು ಬೇಕಂತಲೇ ಒಡೆದಿದ್ದಾಗಿತ್ತು. ಕಾರಣ ತಿಳಿದಿದೆ ಅಲ್ಲವೇ? ಇಲ್ಲವಾ? ಮನೆಯಲ್ಲಿ ಏನಾದರೂ ತೊಂದರೆ ಆದರೆ, ಒಳ್ಳೆಯದಾಗಲಿ ಎಂದು ಹೀಗೆ ತಂದು ಒಡೆಯುತ್ತಾರೆ ಎಂಬುದು ತಿಳಿಯಿತು. ಹೀಗೆಯೆ ಪಾಂಡವಪುರದ ಬಳಿ ಇರುವ ಆರತಿ ಉಕ್ಕಡ ಕ್ಷೇತ್ರದಲ್ಲಿಯು ʼತಡೆʼ ಒಡೆಸಲು ನೂರಾರು ಜನ ಸಾಲುಗಟ್ಟಿ ನಿಂತಿರುವುದನ್ನು ಬಹಳ ಹಿಂದೆಯೇ ನೋಡಿರುವುದು ಉಂಟು. ಅದರ ಒಂದು ಭಾಗವಾಗಿ ಏನೇನೊ ಬುಡ್ತು ಎಂದು ಒಂದು ಮೊಟ್ಟೆಯನ್ನು ವ್ಯಕ್ತಿಗೆ ನಿವಾಳಿಸಿ ಬೀಸಿ ಒಡೆಯುವುದು ಇದೆ. ಮೊಟ್ಟೆ ತಂದು ಒಡೆದರೆ ಅದು ಹೇಗೆ ಒಳ್ಳೆಯದಾಗುತ್ತದೆ. ಮೊಟ್ಟೆಗೂ ಮನುಷ್ಯನ ಆರೋಗ್ಯಕ್ಕೂ ಏನಾದರೂ ಸಂಬAಧವಿದೆಯೇ? ಎಂದು ತರ್ಕಿಸಿದಾಗ ಖಂಡಿತ ಇಲ್ಲಾ ಎನ್ನುವ ಉತ್ತರವೇ ಸಿಗುತ್ತದೆ. ಇದರ ಬಗ್ಗೆ ಯಾರನ್ನಾದರೂ ಪ್ರಶ್ನಿಸಿದರೂ ಅವರು ಕೊಡುವ ಉತ್ತರ ನಿರ್ದಿಷ್ಟವಾಗಿ, ಸ್ಪಷ್ಟವಾಗಿ ಇರುವುದೇ ಇಲ್ಲ. ಮೊಟ್ಟೆ, ತಿನ್ನುವ ಪದಾರ್ಥವಲ್ಲವೇ? ಅದನ್ನು ಹಸಿಯಾಗಿ ಕುಡಿಯುವುದರಿಂದಲೋ ಅಥವಾ ಬೇಯಿಸಿ ತಿನ್ನುವುದರಿಂದಲೋ ಒಂದಷ್ಟು ಪ್ರಮಾಣದ ಅಮೈನೊ ಆಮ್ಲ ದೇಹಕ್ಕೆ ಸೇರಿ ಒಳ್ಳೆಯದು ಆಗುತ್ತದೆ. ಅಮೈನೊ ಆಮ್ಲ ಅಂದರೆ ತಿಳಿಯಲಿಲ್ಲವೇ? ಅದೇರೀ.. ಸರಳ ಪ್ರೋಟೀನ್. ಇದು ನಮ್ಮ ದೇಹಕ್ಕೆ ಅತ್ಯವಶ್ಯಕವಾಗಿ ಬೇಕಾಗಿರುವ ಪೋಷಕಾಂಶ. ಅದು ಬಿಟ್ಟು ಮೊಟ್ಟೆಯನ್ನು ಮೂರು ದಾರಿ ಕೂಡಿರುವ ಜಾಗದಲ್ಲಿ ಒಡೆದರೆ ಹೇಗೆ ಒಳ್ಳೆಯದಾಗುತ್ತದೆ. ಅದೂ ಅಲ್ಲದೇ ಗಡಿಬಿಡಿಯಲ್ಲಿ ನಡೆದಾಡುವಾಗಲೋ, ಆರಾಮಾಗಿ ಸಂತೋಷಕ್ಕೋ, ಶುದ್ಧಗಾಳಿ ತೆಗೆದುಕೊಳ್ಳಲೋ ಜನರು ನಡೆಯುತ್ತಿದ್ದರೆ ಅವರೆಲ್ಲರ ಅಸಹನೆ, ಬೈಗುಳ ಅಥವಾ ಶಾಪಕ್ಕೆ ಇದು ಕಾರಣವಾಗುವುದಿಲ್ಲವೇ? ಒಂದು ವೇಳೆ ತುಳಿದರೆ, ಅದನ್ನು ಪರಿಹರಿಸಲು ಶಾಸ್ತ್ರ ಕೇಳಿಯೋ, ಅಥವಾ ಮೊಟ್ಟೆ ತುಳಿದಿದ್ದೇನೆ ಎಂದು ಕೊರಗುತ್ತಾ ರೋಗ ಬೀಳುವುದು ಗ್ಯಾರಂಟಿ. ಈ ಪದ್ಧತಿಯನ್ನು ಹುಟ್ಟುಹಾಕಿದವರು ಯಾರು? ಯಾವಾಗ ಹುಟ್ಟುಹಾಕಿದರು? ಉದ್ಧೇಶ ಏನು? ಎಲ್ಲಿ ಹುಟ್ಟುಹಾಕಿದರು? 

  ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಸಿಗುವುದೇ? ಖಂಡಿತಾ ಇಲ್ಲ. ಇದರ ಬದಲು ಹಣವನ್ನೋ, ಚಿನ್ನ ಅಥವಾ ಬೆಳ್ಳಿಯನ್ನೋ ಬಿಸಾಡಬೇಕು ಎಂದಿದ್ದರೆ, ಯಾರಾದರೂ ಆ ಪದಾರ್ಥಗಳನ್ನು ಬಿಸಾಡುತ್ತಿದ್ದರೇನು? ಒಂದು ಏರಿಯಾದಲ್ಲಿ ಕನಿಷ್ಟ ಇಪ್ಪತ್ತೊಂದು ಮೊಟ್ಟೆ ಒಡೆದರೂ, ಮೈಸೂರಿನಲ್ಲಿಯೇ ಒಂದು ದಿನಕ್ಕೆ ಸುಮಾರು ಐದು-ಆರು ನೂರು ಮೊಟ್ಟೆಗಳಾದವು. ವರ್ಷಕ್ಕೆ ಅಂದಾಜು 2 ಲಕ್ಷಕ್ಕಿಂತಲೂ ಹೆಚ್ಚಾಯಿತು. ಇಷ್ಟು ಮೊಟ್ಟೆಗಳನ್ನು ಉತ್ಪತ್ತಿ ಮಾಡಲು ವ್ಯೆಯಿಸಿದ ನೀರು, ಶಕ್ತಿ ಎಲ್ಲವನ್ನೂ ಹಾಳುಮಾಡಿದಂತೆ ಆಗುವುದಿಲ್ಲವೇ? ಅದರ ಬದಲು ಆ ಮೊಟ್ಟೆಗಳನ್ನು ಬಡವರಿಗೋ, ವೃದ್ಧಾಶ್ರಮಕ್ಕೊ ಅನಾಥಾಶ್ರಮಕ್ಕೋ ನೀಡಿ ಕೃತಾರ್ಥರಾಗುವುದು ಸಾರ್ಥಕವಾಗುತ್ತದೆ.

 ಮೈಸೂರಿಗೆ ಹೋಲಿಸಿದರೆ ಕೊಡಗಿನಲ್ಲಿ ಈ ಪದ್ಧತಿ ಕಡಿಮೆಯೆ. ಆದರೆ ನಾವು ವಿಚಾರ ಮಾಡದಿದ್ದಲ್ಲಿ ಮುಂದೆ ಇಲ್ಲಿಯೂ ಬೃಹತ್ತಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ. ಇದೇ ರೀತಿ ಅಕ್ಷಯ ತೃತೀಯದಂದು ಚಿನ್ನ-ಬೆಳ್ಳಿ ಖರೀದಿಸಿದರೆ, ಸಂಬಂಧಿಕರಿಗೆ ಬೆಳ್ಳಿಯ ಕಡಗ ನೀಡುವುದರಿಂದ, ಅತ್ತೆಯರಿಗೆ ಸೀರೆಯನ್ನು ಉಡಿಸುವುದು ಎಂದೋ ಮಾಡುವ ಅನೇಕ ಗಾಳಿ ಸುದ್ದಿಗಳಿಂದ ಅನುಕೂಲವಾಗುವುದು ಯಾರಿಗೋ? ಕಷ್ಟವಾಗುವುದು ಯಾರಿಗೋ? ಓಮ್ಮೆ ವೃತ್ತಪತ್ರಿಕೆಯಲ್ಲಿ, ಬೇವಿನ ಮರದಿಂದ ಹಾಲು ಸುರಿಯುತ್ತಿದೆ ಎಂದು ಓದಿದ್ದು ನೆನಪಾಗುತ್ತದೆ, ಇದು ಸಾದ್ಯವೇ? ಕೆಲವು ಸಸ್ಯಗಳಲ್ಲಿ ಅಂದರೆ ʼಫೈಕಸ್‌ʼ ಜಾತಿಯ ಮರಗಳಾದ ಆಲ, ಅರಳಿ, ಬಸರಿ, ಗೋಳಿ ಮತ್ತು ಕಳ್ಳಿ ಜಾತಿಯ ಸಸ್ಯಗಳಲ್ಲಿ ಹಾಲು ಅಂದರೆ ಸಸ್ಯದ ರಸ ಒಸರುವುದನ್ನು ನಾವು ನೋಡಿದ್ದೇವೆ. ವಿಜ್ಞಾನದ ʼವಸ್ತು ನಿತ್ಯತೆಯ ನಿಯಮʼದ ಪ್ರಕಾರ ಯಾವುದೇ ದ್ರವ್ಯವನ್ನು ಸೃಷ್ಟಸುವುದಾಗಲಿ, ಲಯ(ನಾಶ)ಗೊಳಿಸುವುದಾಗಲಿ ಸಾದ್ಯವಿಲ್ಲ. ಅಂದ ಮೇಲೆ ಬೇವಿನ ಮರದಿಂದ ಹಾಲು ಅಥವ ಹಾಲಿನಂತಹ ಪದಾರ್ಥ ಬರುವುದು ಸಾದ್ಯವೇ? ಅಲ್ಲಿ ಕಾಣದ ಕೈಗಳ ಪಾತ್ರ ಇದೆಯೆ? ಇದರಿಂದ ಯಾರಿಗೆ ಲಾಭ ಆಗುತ್ತದೆ? ಇದನ್ನೆಲ್ಲಾ ಯೊಚಿಸಿದರೆ ಉತ್ತರ ಹೊಳೆಯಬಹುದು.

 ಇನ್ನು ವಾಹನಗಳಿಗೆ ನಿಂಬೆಹಣ್ಣು, ಮೆಣಸಿನ ಕಾಯಿ ಕಟ್ಟುವುದು, ಡ್ಯಾಷ್‌ಬೋರ್ಡ್‌ ಮೇಲೆ ದೇವರ ಮೂರ್ತಿ ಇಟ್ಟು ಪೂಜಿಸುವುದು ನಮ್ಮ ದೇಶದ ಸಂಸ್ಕೃತಿ. ಆದರೆ ಅದರಿಂದ ವಾಹನಗಳು ಅಪಘಾತವಾಗುವುದು ತಪ್ಪಿದೆಯೇ? ಉಹೂಂ, ಇಲ್ಲವಲ್ಲಾ! ಚಾಲಕರ ತಪ್ಪಿನಿಂದಾಗಿಯೋ, ನಿರ್ಲಕ್ಷದಿಂದಾಗಿಯೋ, ತೂಕಡಿಕೆಯಿಂದಾಗಿಯೋ ಅಥವಾ ಅವಸರದಿಂದಾಗಿಯೋ ಅಪಘಾತವಾಗಿದೆ ಎಂದು ಭಾವಿಸುವವರೆಷ್ಟು ಮಂದಿ ಇದ್ದಾರೆ? ಪೂಜಿಸಿಯೂ ಜೀವ ತೆತ್ತವರು ಎಷ್ಟೋ ಮಂದಿ ಇದ್ದಾರೆ. ಕಳೆದ ತಿಂಗಳು ಅಯ್ಯಪ್ಪಸ್ವಾಮಿ ದರ್ಶನ ಮುಗಿಸಿ ವಾಪಸ್ಸು ಮನೆಗೆ ತೆರಳುವ ಮಾರ್ಗದಲ್ಲಿ ನಂಜನಗೂಡಿನ ದೇವಸ್ಥಾನದ ಎದುರಿನ ಕಪಿಲ ನದಿಯಲ್ಲಿ ಮೂವರು ಭಕ್ತರು ಮುಳುಗಿ ಸತ್ತರಲ್ಲವೇ? ಇದಕ್ಕೆ ಅವರಿಗೆ ಸರಿಯಾಗಿ ಈಜು ಬರದೇ ಇರುವುದು ಕಾರಣವೇ ಹೊರತು ಬೇರೆ ಯಾರು ಕಾರಣರಲ್ಲ. ಇದಕ್ಕೆ ಯಾವುದೇ ದೇವರನ್ನು ದೂಷಿಸುವುದು ತರವಲ್ಲ. ಆದರೆ ಅವರ ಮನೆಯವರೋ, ನೆಂಟರೋ ದೇವರಿಗೆ ಹಿಡಿ ಶಾಪ ಹಾಕಿಯೇ ಇರುತ್ತಾರೆ. ದೇವರ ದರ್ಶನಕ್ಕೆ ಹೋದವರನ್ನು ದೇವರು ಕಾಪಾಡಲಿಲ್ಲವಲ್ಲಾ ಎಂದು. ಇದು ಮೂಢನಂಬಿಕೆ.

ವಿದ್ಯಾರ್ಥಿಗಳನ್ನು ದೇವರು ಪಾಸು ಮಾಡಿಸಲಿ ಎಂತಲೋ, ನನ್ನ ಮಗ ಅಥವಾ ಮಗಳಿಗೆ ಕೆಲಸ ಸಿಗಲಿ ಎಂತಲೋ, ದೇವರೇ ಕೆಲಸ ಕೊಡಿಸಿದ ಎಂತಲೋ, ಮನೆ ಕಟ್ಟಲು ದೇವರು ಸಹಾಯ ಮಾಡಿದ, ವಾಹನ ತೆಗೆದುಕೊಳ್ಳಲು ದೇವರೇ ಕರುಣೆ ತೋರಿದ ಎಂತಲೂ.. ಹೀಗೆ ಪಟ್ಟಿ ಮಾಡಿದರೆ ಮುಗಿಯುವುದಿಲ್ಲ ಬಿಡಿ. ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಯಾರೊಬ್ಬರೂ ಇಷ್ಟ(ಕಷ್ಟ)ಪಟ್ಟು ಓದಿದ್ದರಿಂದಲೇ ಪಾಸಾದೆ, ಒಳ್ಳೆಯ ಅಂಕಗಳಿಸಿ, ಪ್ರವೇಶ ಪರೀಕ್ಸೆಯಲ್ಲಿ ಉತ್ತಮ ಅಂಕ ಗಳಿಸಿ ಉದ್ಯೋಗ ಸಿಕ್ಕಿತು, ಹಣವನ್ನು ಮಿತವಾಗಿ ಬಳಸಿ ಉಳಿದ ಹಣದ ಜೊತೆಗೆ ಗೃಹ ಸಾಲ ಅಥವಾ ವಾಹನ ಸಾಲ ತೆಗೆದು ಮನೆ ಕಟ್ಟಿಸಿದೆ, ವಾಹನ ತೆಗೆದುಕೊಂಡೆ ಎಂದು ಯೋಚಿಸುವವರೆಷ್ಟು ಮಂದಿ ಇದ್ದಾರೆ?

 ಸೂರ್ಯ ಗ್ರಹಣದ ವೇಳೆಯಂತು ಮನೆಯಲ್ಲಿರುವ ನೀರು, ಆಹಾರವನ್ನೆಲ್ಲಾ ಬಿಸಾಡಿ, ಬಾವಿ ಅಥವಾ ಟ್ಯಾಂಕಿನ(ಗ್ರಹಣ ಅದಕ್ಕೆ ತಾಕಿರುವುದೆ ಇಲ್ಲಾ ಬಿಡಿ!) ನೀರನ್ನು ತುಂಬಿಸಿಕೊಂಡು ಮನೆಯಲ್ಲಿದ್ದ ಆಹಾರ ಬೇಯಿಸಿ ತಿನ್ನುವವರೇ ಹೆಚ್ಚು ಮಂದಿ. ವರ್ಷವೆಲ್ಲಾ ವಾಹನಗಳಿಂದ ಗಿಜಿಗುಡುತ್ತದ್ದ ರಸ್ತೆಗಳು ಅಂದು ಬಿಕೋ ಎನ್ನುತ್ತಿರುತ್ತವೆ. ದೂರದರ್ಶನದ ಚಾನೆಲ್‌ ಗಳಲ್ಲಿ ಉಚಿತವಾಗಿ ಆದರೆ ಬಣ್ಣಬಣ್ಣವಾಗಿ ಸುದ್ದಿಗಳು. ನಾನೊಮ್ಮೆ ಯಾವುದೋ ರಾಶಿಯವರು ಚಿನ್ನವನ್ನು ದಾನಮಾಡಬೇಕೆಂಬ ಸಲಹೆ ಬೇರೆ! ಅಮವಾಸ್ಯೆ ದಿನ ಎಲ್ಲಿಗೂ ಹೋಗಬಾರದು, ಮಂಗಳವಾರ ತಲೆ ಕ್ಷೌರ ಮಾಡಬಾರದು ಹೀಗೆ ಮತ್ತಷ್ಟು. ಶೂನ್ಯದಿಂದ ಚಿನ್ನದ ಸರ ಕೊಡುವುದು, ಅಂಗ ವಿಕಲ ವ್ಯಕ್ತಿಯನ್ನು ದೇವಮಾನವರೊ, ಬಾಬಾಗಳೊ, ಧರ್ಮ ಗುರುಗಳೋ ಮುಟ್ಟಿದ ತಕ್ಷಣ ವಾಸಿಯಾಗಿ ಎದ್ದು ಓಡುವ ವ್ಯಕ್ತಿ ಅವರ ಕಡೆಯ ಆರೋಗ್ಯವಂತ ವ್ಯಕ್ತಿಗಳು ಎಂದು ಅಲ್ಲಿರುವವರಿಗೆ ಗೊತ್ತಾಗುತ್ತದೆಯೇ?

 ನೂರುವರ್ಷಗಳ ಹಿಂದೆಯೇ ಕುವೆಂಪುರವರು ಗುಡಿ ಚರ್ಚ್ ಮಸೀದಿಗಳ ಬಿಟ್ಟು ಹೊರಬನ್ನಿ ಬಡತನವ ಬುಡಮಟ್ಟ ಕೀಳಬನ್ನಿ. ಮೌಢ್ಯತೆಯ ಮಾರಿಯನು ಹೊರದೂಡಲೈ ತನ್ನಿ, ವಿಜ್ಞಾನದ ದೀವಿಗೆಯ ಹಿಡಿಯ ಬನ್ನಿ. ಎಂದು ಬರೆದು ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದರು. ಗೋವಿಂದ ಪನ್ಸಾರೆ, ಹುಲಿಕಲ್‌ ನಟರಾಜು, ಪ್ರೊ ನರೇಂದ್ರ ನಾಯಕ್‌ ಮುಂತಾದ ಮಹನೀಯರು ಹಲವಾರು ಪ್ರ‌ದರ್ಶನಗಳ ಮೂಲಕ ವಿದ್ಯಾರ್ಥಿಗಳ ಮತ್ತು ಸರ‍್ವಜನಿಕರಲ್ಲಿ ಮೌಡ್ಯತೆಯ ವಿರುದ್ದ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ವಿಜ್ಞಾನವನ್ನು ಓದಿರುವ ಬಹಳಷ್ಟು ಮಂದಿಯೇ ಮೌಡ್ಯತೆಯನ್ನು ಪೋಷಿಸುತ್ತಿರುವುದು ಬಹಳ ಬೇಸರದ ಸಂಗತಿಯಾಗಿದೆ. ಹಲವು ಶಿಕ್ಷಕರು ಕರ‍್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಲ್ಲಿ ತರಬೇತಿಯನ್ನು ಪಡೆದಿದ್ದರೂ ಕೇವಲ ಬೆರಳಣಿಕೆಷ್ಟು ಮಂದಿ ಮಾತ್ರ ವಿದ್ಯಾರ್ಥಿಗಳಲ್ಲಿ ಸ್ವಲ್ಪ ಮಟ್ಟಿನ ಅರಿವು ಮೂಡಿಸುತ್ತಿದ್ದಾರೆ.

 ಇರಲಿ ಸ್ನೇಹಿತರೆ, ಇಂತಹ ನೂರಾರು, ಸಾವಿರಾರು ಘಟನೆಗಳು ನಮ್ಮ ಸುತ್ತ ಮುತ್ತಲೂ ನಡೆಯುತ್ತಲೇ ಇರುತ್ತವೆ. ಎಷ್ಟೆ ಘಟನೆಗಳು ಜರುಗಿದರೂ ಇವುಗಳ ಹಿಂದೆ ಇರುವ ಸತ್ಯವನ್ನು ನಾವೆಲ್ಲರೂ ಅರಿಯಬೇಕಿದೆ. ಏನೆನನ್ನೊ ನಂಬಿ ಹಣ ಕಳೆದುಕೊಳ್ಳುವುದನ್ನು ನಿಲ್ಲಿಸಬೇಕಿದೆ. ಯಾರು ಏನು ಹೇಳಿದರೂ ಅದನ್ನು ʼಪ್ರಶ್ನಿಸದೇ ಏನನ್ನು ಒಪ್ಪಬೇಡʼ ಎಂದು ಸಾಯಿಬಾಬಾ ಅವರಿಗೆ ಸವಾಲು ಹಾಕಿ ಗೆದ್ದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸ್ಥಾಪನೆಗೆ ಕಾರಣಕರ್ತರಾದ ಡಾ. ಹೆಚ್. ನರಸಿಂಹಯ್ಯನವರ ವಿಚಾರಧಾರೆ ನಮ್ಮೆಲ್ಲರಿಗೂ ದಾರಿದೀಪವಾಗಲಿ. ನಾವೆಲ್ಲರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಜ್ಞಾನವಂತರಾಗೋಣ. ಮೂಢನಂಬಿಕೆ ಅಳಿಸೋಣ. ನಮ್ಮ ಮಕ್ಕಳಿಗೆ ಸರಿಯಾದ ಜ್ಞಾನದ ಬುನಾದಿ ಹಾಕೋಣ.

No comments:

Post a Comment