ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, March 4, 2024

ಸಹಜೀವನವೇ ಸರ್ವೋತ್ತಮ

 ಸಹಜೀವನವೇ ಸರ್ವೋತ್ತಮ


                                                                                             
   ಲೇಖಕರು :  
ತಾಂಡವಮೂರ್ತಿ.ಎ.ಎನ್‌

                                                                                         ಸರ್ಕಾರಿ ಪದವಿಪೂರ್ವ ಕಾಲೇಜು
                                                                                            (ಪ್ರೌಢಶಾಲಾ ವಿಭಾಗ)

                                                  ನೆಲಮಂಗಲ

 ಕಲಿಯುವುದಾದರೆ ನಿಸರ್ಗ ಎಂಬ ಪಾಠಶಾಲೆಯಲ್ಲಿ ಅನಂತ ಪಾಠಗಳಿವೆ. ಕಲಿಯುವ ಉತ್ಸಾಹ,ಕುತೂಹಲ,ಮತ್ತು ಸಹನೆ ನಮ್ಮಲ್ಲಿರಬೇಕಷ್ಟೇ.ಪರಿಸರದಲ್ಲಿ ಜೀವಿಗಳು ಪ್ರತ್ಯೇಕವಾಗಿ ಜೀವಿಸಲು ಸಾಧ್ಯವಿಲ್ಲದಷ್ಟು ಪರಸ್ಪರ ಅವಲಂಬನೆ ಬೆಸೆದುಕೊಂಡಿರುವುದು ಸರ್ವವೇದ್ಯ .ಅದು ಸ್ವಪೋಷಣೆಯೇ ಆಗಿರಲಿ,ಪರಪೋಷಣೆಯೇ ಆಗಿರಲಿ ಪರಿಸರದ ನಿಯಮಗಳ ಇಂದ್ರಜಾಲದಲ್ಲಿ ಎಲ್ಲಾ ಜೀವಿಗಳೂ ಪರಸ್ಪರ ಅವಲಂಬಿಗಳೇ.ಸಹಜೀವನ(Symbiosis) ಎಂಬ ಪೋಷಣಾ ವಿಧಾನ “ನೀನನಗಿದ್ದರೆ,ನಾನಿನಗೆʼಎಂಬ ಭಾವವನ್ನು ಜೀವಿಗಳಲ್ಲಿ ಸದಾ ಜಾಗೃತಗೊಳಿಸುತ್ತದೆ. ಈ ವಿಧಾನದ ಪೋಷಣೆಯಲ್ಲಿ ಸಹಸಂಬಂಧದಲ್ಲಿರುವ ಜೀವಿಗಳು ಹತ್ತಿರದ ಸಂಬಂಧಿಗಳಂತೂ ಅಲ್ಲ, ಆದರೂ, ತಮ್ಮ ಅವಶ್ಯಕತೆಯನ್ನು ಪರಸ್ಪರ ವಿನಿಮಯ ಮಾಡಿಕೊಂಡು ಜೀವನ ಸಾಗಿಸುವ ಪರಿ ಜೀವವಿಕಾಸದ ಅನೂಹ್ಯ ಸಾಧ್ಯತೆಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ.

ಸಸ್ಯಗಳು ಸ್ವಪೋಷಕಗಳೇ ಆಗಿದ್ದರೂ, ಬೃಹತ್‌ ಪೋಷಕಾಂಶಗಳಲ್ಲಿ ಒಂದಾದ ನೈಟ್ರೋಜನ್‌ ಅನ್ನು ಪಡೆಯಲು ಇಂತಹ ಸಹಸಂಬಂಧಗಳನ್ನು ಸಾಧಿಸಲೇಬೇಕಾದ ಅನಿವಾರ್ಯತೆ ಇದೆ. ವಾತಾವರಣದ ನೈಟ್ರೋಜನ್‌ ಅನ್ನು ನೈಟ್ರೇಟ್‌ ರೂಪಕ್ಕೆ ಪರಿವರ್ತಿಸುವ ಜೈವಿಕ ಸಾಮರ್ಥ್ಯ ಸಸ್ಯಗಳಿಗೆ ಇಲ್ಲ.ಆದರೆ, ಕೆಲವು ಬ್ಯಾಕ್ಟೀರಿಯಾ ಮತ್ತು ನೀಲಿ ಹಸಿರು ಶೈವಲ (ಸಯನೋಬ್ಯಾಕ್ಟೀರಿಯಾ) ಗಳು ನೈಟ್ರೋಜನ್‌ ಸ್ಥಿರೀಕರಣಗೊಳಿಸಲು ಅಗತ್ಯವಾದ ಜೈವಿಕ ಸಂರಚನೆಯನ್ನು ಹೊಂದಿವೆ.ನಾವು ಈ ಲೇಖನದಲ್ಲಿ ಚರ್ಚಿಸ ಹೊರಟಿರುವುದು ಸಸ್ಯಗಳು ನೈಟ್ರೋಜನ್‌ ಸ್ಥಿರೀಕರಣಕ್ಕಾಗಿ ಇಂತಹ ಸಹಜೀವನವನ್ನು ಹೊಂದಿರುವ ಪೋಷಣಾ ವಿಧಾನಗಳ ಬಗ್ಗೆ.

 ರೈಜೋಬಿಯಂ ಮತ್ತು ಲೆಗ್ಯೂಮ್‌  ಸಸ್ಯಗಳ ಸಹಜೀವನ

ಲೆಗ್ಯೂಮ್‌ ಜಾತಿಯ ಸಸ್ಯಗಳ ಬೇರಿನ ಗಂಟುಗಳಲ್ಲಿ ತಮ್ಮ ವಸಾಹತುವನ್ನು ಸ್ಥಾಪಿಸುವ ರೈಜೋಬಿಯಂ ಬ್ಯಾಕ್ಟೀರಿಯ ನೈಟ್ರೋಜನ್‌ ಸ್ಥಿರೀಕರಿಸುವ ವಂಶವಾಹಿಯನ್ನು (nif gene )ಹೊಂದಿದ್ದು, ಈ ವಂಶವಾಹಿಯ ಸಹಾಯದಿಂದ ನೈಟ್ರೋಜಿನೇಸ್‌  ಎಂಬ ಕಿಣ್ವವನ್ನು ಉತ್ಪಾದಿಸುತ್ತವೆ.ಈ ಕಿಣ್ವವು ವಾತಾವರಣದ ನೈಟ್ರೋಜನ್‌ ಅನ್ನು ಸ್ಥಿರೀಕರಿಸಿ ಮೊದಲಿಗೆ ನೈಟ್ರೇಟ್‌ ರೂಪಕ್ಕೆ,,ನಂತರ ಅಮೋನಿಯಾ ರೂಪಕ್ಕೆ ಪರಿವರ್ತಿಸಿ ತದನಂತರ ಸಾವಯವ ನೈಟ್ರೋಜನ್‌ ಸಂಯುಕ್ತಗಳಾದ ಗ್ಲುಟಾಮಿನ್‌ (glutamine) ಮತ್ತುಯೂರಿಡ್ಸ್‌(ureides) ರೂಪದಲ್ಲಿ ತಾನು ಆಶ್ರಯ ಪಡೆದಿರುವ ಸಸ್ಯಕ್ಕೆ ಒದಗಿಸುತ್ತವೆ,ಪ್ರತಿಯಾಗಿ ಸಸ್ಯದಿಂದ ಆಶ್ರಯ ಮತ್ತು ಆಹಾರವನ್ನು ಪಡೆಯುತ್ತವೆ.ಮಣ್ಣಿನ ಫಲವತ್ತತೆಯನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ರೈಜೋಬಿಯಂ ಮತ್ತು ಲೆಗ್ಯೂಮ್‌ ಸಸ್ಯಗಳ ಸಹಜೀವನ ಶುಷ್ಕ ಮತು ಅರೆ ಶುಷ್ಕ ಪ್ರದೇಶಗಳಲ್ಲಿನ ಮಣ್ಣಿನ ಪುನಶ್ಚೇತನಕ್ಕೆ ಪರಿಹಾರವನ್ನು ಒದಗಿಸುತ್ತದೆ.ಲೆಗ್ಯೂಮ್‌ ಜಾತಿಯ ಸಸ್ಯಗಳು ಶುಷ್ಕ ಮತ್ತು ಅರೆಶುಷ್ಕ ಆವಾಸಗಳಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ರೈಜೋಬಿಯಂ ಬ್ಯಾಕ್ಟೀರಯಾಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ.

 ಅನಾಬಿನಾ ಮತ್ತು ಅಜೋಲ್ಲಾ ಸಸ್ಯಗಳ ಸಹಜೀವನ

ಅಜೋಲ್ಲಾ ಒಂದು ಪುಚ್ಛಸಸ್ಯವಾಗಿದ್ದು ಜೌಗು ಪ್ರದೇಶಗಳಲ್ಲಿ ತೇಲು ಸಸ್ಯವಾಗಿ ಬೆಳೆಯುತ್ತದೆ.ಫಾಸ್ಪೇಟ್‌ ಅಂಶ ಹೆಚ್ಚಾಗಿರುವ ನೀರಿನಲ್ಲಿ ಅಜೋಲ್ಲಾ ಕಳೆ ರೂಪದಲ್ಲಿ ವ್ಯಾಪಕವಾಗಿ ಮತ್ತು ಸಮೃದ್ಧವಾಗಿ ಕಂಡು ಬರುತ್ತದೆ.ಈ ಸಸ್ಯದ ಎಲೆಗಳಲ್ಲಿರುವ ಜೀವಕೋಶಗಳ ನಡುವಿನ ಅವಕಾಶದಲ್ಲಿ ಅನಾಬೀನಾ ಎಂಬ ನೀಲಿ ಹಸಿರು ಶೈವಲ (ಸಯನೋಬ್ಯಾಕ್ಟೀರಯಾ)ಗಳು ಸಹಜೀವನ ನಡೆಸುತ್ತವೆ. 


ಅನಾಬೀನಾ ಸಹ ರೈಜೋಬಿಯಂನಂತೆ ನೈಟ್ರೋಜನ್‌ ಸ್ಥಿರೀಕರಿಸುವ ವಂಶವಾಹಿಯನ್ನು ಹೊಂದಿದ್ದು ನೈಟ್ರೋಜಿನೇಸ್‌  ಕಿಣ್ವದ ಸಹಾಯದಿಂದ ವಾತಾವರಣದ ನೈಟ್ರೋಜನ್‌ ಅನ್ನು ಸ್ಥಿರೀಕರಿಸುತ್ತದೆ.ಅನಾಬಿನಾ ಸ್ವಪೋಷಕವಾಗಿದ್ದು, ಅಜೋಲ್ಲಾ ಸಸ್ಯವನ್ನು ಆಶ್ರಯಕ್ಕೆ ಮಾತ್ರ ಬಳಸುತ್ತದೆ.ಚೀನಾ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಭತ್ತದ ಇಳುವರಿಯನ್ನು ಹೆಚ್ಚಿಸಲು ಅಜೋಲ್ಲಾವನ್ನು ಜೈವಿಕಗೊಬ್ಬರವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.ಇದರಿಂದ ಲಕ್ಷಾಂತರ ಟನ್‌ ಯೂರಿಯಾ ಒಳಸುರಿ ಭತ್ತದಗದ್ದೆಯನ್ನು ಸೇರುವುದು ತಪ್ಪಿದೆ. ಭಾರತದಲ್ಲಿಯೂ ಇತ್ತೀಚಿನ ದಿನಗಳಲ್ಲಿ ಭತ್ತದ ಬೆಳೆಗೆ ಅಜೋಲ್ಲಾ ಜೈವಿಕಗೊಬ್ಬರವನ್ನು ಪ್ರಯೋಗಶೀಲ ರೈತರು ವ್ಯಾಪಕವಾಗಿ ಬಳಸುತ್ತಿದ್ದಾರೆ. ಅವಶ್ಯಕ ಅಮೈನೋಆಮ್ಲ ಮತ್ತು ಪ್ರೋಟೀನ್‌ ಗಳಿಂದ ಸಮೃದ್ಧವಾಗಿರುವ ಅಜೋಲ್ಲಾವನ್ನು ಹಾಲಿನ ಇಳುವರಿಯನ್ನು ಹೆಚ್ಚಿಸುವ ಪಶುಆಹಾರವಾಗಿಯೂ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ.

 ಸಮಗ್ರವಾಗಿ ಅವಲೋಕಿಸಿದಾಗ ಸಸ್ಯ ಮತ್ತು ನೈಟ್ರೋಜನ್‌ ಸ್ಥಿರೀಕರಿಸುವ ಸೂಕ್ಷ್ಮಜೀವಿಗಳ ಸಹಜೀವನ ನೈಟ್ರೋಜನ್‌ ಕೊರತೆಯಿಂದ ಬಳಲುತ್ತಿರುವ ಮಣ್ಣಿನ ಫಲವತ್ತೆಯನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಶುಷ್ಕ ಮತ್ತು ಅರೆಶುಷ್ಕ ಪ್ರದೇಶಗಳ ಮಣ್ಣಿನ ಪುನಶ್ಚೇತನವು ಈ ಅನೂಹ್ಯವಾದ ಸಹಜೀವನವನ್ನು ಅವಲಂಬಿಸಿರುವುದು ಸೋಜಿಗವಾದರೂ ಸತ್ಯ. 

ರೈಜೋಬಿಯಂ ಮತ್ತು ಅಜೋಲ್ಲಾ ಜೈವಿಕಗೊಬ್ಬರಗಳ ವ್ಯಾಪಕ ಬಳಕೆ ಯೂರಿಯಾ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆಮಾಡುತ್ತದೆ, ಇದರಿಂದಾಗಿ ಲಕ್ಷಾಂತರ ಟನ್‌ ಯೂರಿಯಾ ಒಳಸುರಿ ಕೃಷಿಭೂಮಿಯನ್ನು ಸೇರುವುದು ತಪ್ಪಿ ಮಣ್ಣಿನ ಜೈವಿಕ ಸಂರಚನೆ ಸುಸ್ಥಿರಗೊಳ್ಳಲು ಸಾಧ್ಯವಿದೆ. ಪರಿಸರಕ್ಕೆ ಪೂರಕವಾದ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಇಲ್ಲಿ ನಮಗೆ ಪಾಠವಿದೆ.ಅಲ್ಲವೇ?                                                ಚಿತ್ರ: ಲೆಗ್ಯೂಮ್‌ ಸಸ್ಯದ ಬೇರಿನ ಗಂಟಿನಲ್ಲಿರುವ ರೈಜೋಬಿಯಂ ವಸಾಹತು

1 comment: