ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, March 4, 2024

ಎಲೆಗಳ ಬಣ್ಣ ಹಸಿರಲ್ಲವೇ ?

ಎಲೆಗಳ ಬಣ್ಣ ಹಸಿರಲ್ಲವೇ ?

  ಲೇಖಕರು : ರಮೇಶ, ವಿ,ಬಳ್ಳಾ

ಅಧ್ಯಾಪಕರು

 ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು 

 (ಪ್ರೌಢ) ಗುಳೇದಗುಡ್ಡ ಜಿ: ಬಾಗಲಕೋಟ  

ಅಂಗಳದಲ್ಲಿ ಆಡುತ್ತಿದ್ದ ಸುಮಾ ಮತ್ತು ಅವಳ ಗೆಳತಿಯರು ತುಂಬಾ ಗಲಾಟೆಯಲ್ಲಿ ತೊಡಗಿದ್ದರು. ಒಬ್ಬರಿಗೊಬ್ಬರು ಕಿತ್ತಾಡುತ್ತಾ, ಬಾಯಿ ಮಾಡುತ್ತಾ ಅತ್ತಿತ್ತ ಓಡಾಡುತ್ತಿದ್ದರು. ಈ ನಡುವೆ ಅಲ್ಲಿ ಅಂದವಾಗಿ ಬೆಳೆದಿದ್ದ ಹೂ ಗಿಡಗಳು ಇವರ ದಾಳಿಗೆ ಸಿಕ್ಕು ನಲುಗಿದ್ದವು. ಕಣ್ಣಾರೆ ಇದನ್ನು ಕಂಡು ಮನೆಯಲ್ಲಿ ಸುಮ್ಮನೆ ಕೂರಲಾಗಲಿಲ್ಲ. ಹೊರಗಡೆ ಎದ್ದು ಬಂದು ಬಾಯಿ ಮಾಡದಂತೆ ತಾಕೀತು ಮಾಡಿ ತಿಳಿ ಹೇಳಿದೆ, ಹಾಗೇ ಅಲ್ಲಿ ಬೆಳೆದು ನಿಂತಿದ್ದ ಹೂಗಿಡಗಳಿಗೆ ದಕ್ಕೆ ಮಾಡದಂತೆ ಎಚ್ಚರಿಸಿದೆ. ನಂತರ ಸಸ್ಯಗಳಿಗೆ ಹಾನಿ ಮಾಡಿದ್ದರ ಬಗ್ಗೆ ಅವರೂ ಪಶ್ಚಾತಾಪ ಪಟ್ಟರು. ಹಚ್ಚ ಹಸಿರು ಎಲೆಗಳ ಮಧ್ಯೆ ಅರಳಿದ ಬಗೆ ಬಗೆ ಹೂಗಳು ಅವರ ಮನಸ್ಸನ್ನು ಬದಲಾಯಿಸಿದ್ದವು. ಈಗ ಅವರ ಕುತೂಹಲ ಆ ಹಸಿರು ಸಂಕುಲದತ್ತ ತಿರುಗಿತ್ತು. ಪ್ರಶ್ನೆಗಳ ಸುರಿಮಳೆ ಮಕ್ಕಳಿಂದ ಶುರುವಾಯಿತು. ಎಲ್ಲ ಹಸಿರು ಗಿಡಗಳ ನಡುವೆ ಅಲ್ಲೊಂದು ಕೆಂಪು ಬಣ್ಣದ ಎಲೆಗಳುಳ್ಳ ಸಸ್ಯ ಅವರನ್ನು ಬೆರಗುಗೊಳಿಸಿತ್ತು. ಈ ಗಿಡದ ಎಲೆಗಳೇಕೆ ಹಸಿರಿಲ್ಲ? ಎಲೆಗಳ ಬಣ್ಣ ಹಸಿರಲ್ಲವೇ ? ಎಂಬ ಸಹಜ ಪ್ರಶ್ನೆ ಅವರನ್ನು ಕಾಡತೊಡಗಿತು. ನನಗೆ ಗೊತ್ತಿದ್ದ ಮಟ್ಟಿಗೆ ಉತ್ತರಿಸಲು ಪ್ರಯತ್ನಿಸಿ ಮಾಹಿತಿ ಕಲೆಹಾಕಿದೆ.

 ಬಹುತೇಕ ಎಲ್ಲ ಹಸಿರು ಸಸ್ಯಗಳು ಸ್ವಪೋಷಕಗಳು. ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ಸಸ್ಯ ಜೀವಕೋಶದಲ್ಲಿರುವ ಹಸಿರು ವರ್ಣಕ ಪತ್ರಹರಿತ್ತಿನ ಸಹಾಯದಿಂದ ಸೂರ್ಯನ ಬೆಳಕು, ಕಾರ್ಬನ್ ಡೈ ಆಕ್ಸೆöÊಡ್, ನೀರು ಲವಣಗಳ ನೆರವಿನಿಂದ ದ್ಯುತಿಸಂಶ್ಲೇಷಣೆ ಕ್ರಿಯೆ ನಡೆದು ಪೋಷಣೆ ಮಾಡಿಕೊಳ್ಳುತ್ತವೆ, ಆದರೆ ಪ್ರಾಣಿಗಳು ಪರಪೋಷಕಗಳು. ತಮ್ಮ ಆಹಾರವನ್ನು ತಾವೇ ತಯಾರಿಸಲಾರವು ಎಂಬುದು ಎಲ್ಲ ಮಕ್ಕಳ ಸಾಮಾನ್ಯ ತಿಳಿವಳಿಕೆ. ಎಲೆ ಸಸ್ಯದ ಅಡುಗೆ ಮನೆ ಎಂತಲೂ ಹೇಳಬಹುದು. ಅಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯಿಂದ ಸಸ್ಯದ ಬದುಕು ಸಾಗುತ್ತದೆ. ಈ ಎಲೆಗಳಿಗೂ ಮತ್ತು ಸಸ್ಯದ ಆಹಾರ ತಯಾರಿಕೆಗೂ ನಿಕಟ ಸಂಬAಧವಿರುವುದು ಸತ್ಯ. ಎಲೆಗಳಿಗೆ ಬಣ್ಣ ನೀಡುವ ವಸ್ತುಗಳು(ವರ್ಣಕಗಳು)ಕೋಶರಸದಲ್ಲಿರುವ ಪತ್ರಹರಿತ್ತಿನ ತಟ್ಟೆಯಾಕಾರದ ರಚನೆಗಳೊಂದಿಗೆ ಹೊಂದಿಕೊಂಡು ತೇಲುತ್ತಿರುತ್ತವೆ. ಈ ವರ್ಣಕಗಳೇ ಆ ಸಸ್ಯದ ಎಲೆಗಳ ಬಣ್ಣದ ಬದುಕಿನ ರೂವಾರಿಗಳು. ಆದರೆ ಆಹಾರ ತಯಾರಿಕೆ ಬಹುತೇಕ ಸಸ್ಯಗಳಲ್ಲೂ ಸಾಧ್ಯವಾಗುವ ಸಹಜ ಸಂಗತಿ.

ವೈವಿಧ್ಯಮಯವಾದ ವರ್ಣಕಗಳು ಸಸ್ಯಗಳ ವರ್ಣರಂಜಿತ ಬದುಕಿಗೆ ದಾರಿ ಮಾಡಿಕೊಟ್ಟಿವೆ. ಪರಿಸರದ ಪ್ರಚೋಧನೆಗಳಿಗೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸಲು ಹಾಗೂ ವಿವಿಧ ಜೈವಿಕ ಕಾರ್ಯಚಟುವಟಿಕೆಗಳು ಸುಲಲಿತಗೊಳ್ಳಲು ಬೆಳಕು ಪ್ರಮುಖ ಪಾತ್ರವಹಿಸುತ್ತದೆ. ಆ ಬೆಳಕಿನ ಸಹಾಯದಿಂದಲೇ ಎಲೆಗಳ ಬೆಡಗು ಭಿನ್ನಾಣ ಇಮ್ಮಡಿಗೊಂಡಿದೆ. ಇದರ ಜೊತೆಗೆ ಸಹಜ ಜೈವಿಕ ಸಮತೋಲನ ಸಾಗಿದೆ. ಬೀಜ ಪ್ರಸಾರ, ಪ್ರಾಣಿ, ಕೀಟಗಳ ಆಕರ್ಷಣೆ ಆ ಮೂಲಕ ಸಹಜ ಸಸ್ಯ ಪೀಳಿಗೆ ಸಮೃದ್ಧಿಗೊಳ್ಳುತ್ತಾ ಹೋಗುತ್ತಿದೆ. ಬೆಳಕು ಸಸ್ಯದ ಶಕ್ತಿಯ ಮೂಲ ಆಕರವಾಗಿದ್ದಲ್ಲದೆ ಆ ಬೆಳಕನ್ನು ಹೀರುವಿಕೆಯ ಆಧಾರದಲ್ಲಿ ಸಸ್ಯದ ಎಲೆಗಳು ವಿಭಿನ್ನ ಬಣ್ಣಗಳನ್ನು ಹೊಂದುತ್ತವೆ. ಈ ಹೀರುವಿಕೆ ವರ್ಣಕಗಳನ್ನು ಆಧರಿಸಿದೆ. ಬೇರೆ ಬೇರೆ ರೀತಿಯ ವರ್ಣಕಗಳು ಎಲೆಗಳ ವಿವಿಧ ಬಣ್ಣಗಳಿಗೆ ಕಾರಣವಾಗಿವೆ. ಮುಖ್ಯವಾಗಿ ಸಸ್ಯ ವರ್ಣಕಗಳನ್ನು ಮೂರು ವಿಧದಲ್ಲಿ ಗುರುತಿಸಲಾಗಿದೆ.

ಕ್ಲೋರೊಫಿಲ್ಸ್ : ಕ್ಲೋರೊಫಿಲ್ ಇದು ಒಂದು ಹಸಿರು ವರ್ಣಕ, ಕ್ಲೋರೊಫಿಲ್ ಎ ಮತ್ತು ಬಿ ಗಳು ದ್ಯುತಿಸಂಶ್ಲೇಷನಾ ವರ್ಣಕಗಳಾಗಿದ್ದು ಎಲೆಯ ಪತ್ರಹರಿತ್ತಿನ ದ್ಯುತಿಸಂಶ್ಲೇಷಕ ಅಂಗಾAಶಗಳಲ್ಲಿ ಉತ್ಪತ್ತಿಯಾಗುತ್ತವೆ. ಕ್ಲೋರೊಫಿಲ್ ಅಣುಗಳು ಮುಚ್ಚಿದ ಉಂಗುರದ ರಚನೆಯಂತಿದ್ದು, ನೋಡಲು ನಮ್ಮ ದೇಹದ ರಕ್ತದ ಹಿಮೋಗ್ಲೋಬಿನ್ ಅನ್ನು ಹೋಲುತ್ತವೆ. ಆದರೆ ಅವು ಮಧ್ಯದಲ್ಲಿ ನಮ್ಮ ಕಬ್ಬಿಣದ ಅಣು ಬದಲಾಗಿ ಮೆಗ್ನಿಷಿಯಂ ಅಣುವನ್ನು ಹೊಂದಿವೆ.

ಕೆರೊಟಿನಾಯ್ಡ್ : ಅತೀ ಉದ್ದನೆಯ ಸರಪಳಿ ರಚನೆಯನ್ನು ಹೊಂದಿರುವ ಕೆರೊಟಿನಾಯ್ಡಗಳು ನೀರು ಹಿಮ್ಮೆಟ್ಟಿಸುವ ಷಿrepelling) ಗುಣ ಹೊಂದಿವೆ. ಸಸ್ಯ ಜೀವಕೋಶದ ಪ್ಲಾಸ್ಟಿಡ್ ಭಾಗದಲ್ಲಿ ಸಂಶ್ಲೇಷಿಸಲ್ಪಡುವ ಇವುಗಳು ಹಳದಿ ಕಿತ್ತಳೆ ಬಣ್ಣವನ್ನು ಸೃಸ್ಠಿಸುತ್ತವೆ. ಸೂರ್ಯನಿಂದ ಆಕರ್ಷಿಸಲ್ಪಡುವ ಸನ್ ಪ್ಲವರ್‌ನಲ್ಲಿ ಇದರ ಚವiತ್ಕಾರವನ್ನು ನೋಡಬಹುದಾಗಿದೆ. ಇನ್ನು ಕೆಲ ಸಸ್ಯಗಳಲ್ಲಿ ವಯಸ್ಸಾದಂತೆ ಮತ್ತು ಚಳಿಗಾಲದಲ್ಲಿ ಕ್ಲೋರೊಪ್ಲಾಸ್ಟ್‌ ಅನ್ನು ಕಳೆದುಕೊಳ್ಳುವುದರಿಂದ ಹಳದಿ ಬಣ್ಣವನ್ನು ಪಡೆಯುವವು.

ಅಂತೋಸಯನಿನ್ : ಇವು ನೀರಿನಲ್ಲಿ ಕರಗಬಲ್ಲ ವರ್ಣಕಗಳಾಗಿದ್ದು, ಸಕ್ಕರೆ ಅಣುವನ್ನು ಹೊಂದಿರುವ ಕಾರಣ ಕರಗುವಿಕೆ ಸುಲಲಿತವಾಗಿದೆ. ಕೆಂಪು ಗುಲಾಬಿಯ ದಳಗಳು,ಕೆಂಪು ಬಣ್ಣದ ಹಣ್ಣು(ಸೇಬು)ಗಳು ಹಾಗೂ ಕೆಲ ಕೆಂಪು ಎಲೆಗಳನ್ನು ಹೊಂದಿದ ಸಸ್ಯಗಳಲ್ಲಿ ಈ ವರ್ಣಕಗಳು ಬೆಳಕಿನ ಕೆಂಪು ಬಣ್ಣವನ್ನು ಹೆಚ್ಚು ಹೀರುವಿಕೆಯ ಕಾರಣದಿಂದ ಕೆಂಪಾಗಿ ಕಂಗೊಳಿಸುತ್ತವೆ.

ಹಸಿರುಧಾತು ಎಲೆಯ ಉಸಿರು

ಸಸ್ಯಗಳ ಆಹಾರ ತಯಾರಿಕೆಯು ಅಡುಗೆಮನೆಯಾದ ಎಲೆಗಳಲ್ಲೇ ನಡೆಯುತ್ತದೆ ಎಂಬುದು ಬಹುವಾಗಿ ನಾವೆಲ್ಲಾ ತಿಳಿದಿದ್ದೇವೆ. ಮೈಯಲ್ಲಾ ಹಸಿರಾಗಿಸಿಕೊಂಡ ಕಳ್ಳಿ ಜಾತಿಯ ಸಸ್ಯಗಳು, ತರಕಾರಿಯಂತೆ ಉಪಯೋಗಿಸಲ್ಪಡುವ ಟೊಮೆಟೊ, ದ್ರಾಕ್ಷಿ ಇತ್ಯಾದಿಗಳಲ್ಲಿ ಎಲ್ಲಿ ಆಹಾರ ತಯಾರಾಗುತ್ತದೆ ಎಂಬುದು ಪ್ರಶ್ನೆ? ಈ ಪ್ರಶ್ನೆಗೆ ಉತ್ತರ ತುಂಬಾ ಸರಳ. ಎಲ್ಲೆಲ್ಲಿ ಹಸಿರು ಧಾತು ಇದೆಯೋ ಅಲ್ಲೆಲ್ಲಾ ಆಹಾರ ತಯಾರಾಗುತ್ತದೆ. ಅಂದರೆ ಮೇಲೆ ಹೇಳಿದ ಕೆಲ ಸಸ್ಯಗಳ ಕಾಂಡ,ಹಣ್ಣು ಭಾಗಗಳು ಸಹ ಆಹಾರ ತಯಾರಿಕೆಯ ಜವಾಬ್ದಾರಿ ಹೊತ್ತಿವೆ. ಶಿಲೀಂಧ್ರಗಳಂತಹ ಪರೋಪಜೀವಿಗಳು ಆಹಾರ ತಯಾರಿಸಲು ಅಸಮರ್ಥವಾಗಿವೆ. ಏಕೆಂದರೆ ಅವುಗಳಲ್ಲಿ ಹರಿತ್ತು ಇಲ್ಲ.

ಹರಿತ್ತು ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಬೆಳಕನ್ನು ಹೀರಿ ಸಂಕೀರ್ಣ ಅಣುಗಳನ್ನು ಜೋಡಿಸಿ ರಾಸಾಯನಿಕ ಕ್ರಿಯೆಗಳ ಮೂಲಕ ಶರ್ಕರಪಿಷ್ಠಗಳನ್ನು ತಯಾರಿಸುವ ಮೂಲಕ ಸಸ್ಯಜೀವಕ್ಕೆ ಚೈತನ್ಯವನ್ನು ನೀಡುತ್ತದೆ.

ಚಳಿಗಾಲದಲ್ಲಿ ಎಲೆಗಳು ಹಳದಿ ಏಕೆ?

ಋತುಮಾನಗಳಿಗೆ ಅನುಗುಣವಾಗಿ ಎಲೆಗಳು ಬಣ್ಣ ಬದಲಾಯಿಸುವುದನ್ನು ನಾವು ಕಂಡಿದ್ದೇವೆ. ಅಂದರೆ ಚಳಿಗಾಲ ಬಂತೆಂದರೆ ಹಸಿರು ಗಿಡಮರಗಳಲ್ಲಿನ ಎಲೆಗಳೆಲ್ಲಾ ಹಳದಿ ವರ್ಣಕ್ಕೆ ತಿರುಗುತ್ತವೆ. ಕಾರಣ ಸ್ಪಷ್ಟ. ಎಲೆಗಳಲ್ಲಿನ ಕ್ಲೋರೋಪ್ಲಾಸ್ಟ್ ಚಳಿಗಾಲದಲ್ಲಿ ತನ್ನ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುತ್ತದೆ. ಅಂದರೆ ಇದಕ್ಕೆ ಶೈತ್ಯವೆಂದರೆ ಅಪಥ್ಯ. ಹಾಗೆಯೇ ಅತೀ ತಾಪವೂ ಕೂಡಾ. 35 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಉಷ್ಣತೆ ದ್ಯುತಿಸಂಶೇಷಣೆಗೆ ತುಂಬಾ ಹಿತಕರವಾದದ್ದು. ಇದು ಕ್ಲೊರೊಪ್ಲಾಸ್ಟನ್ನು ಸೂಕ್ತ ರೀತಿಯಲ್ಲಿ ಉಳಿಸಿಕೊಳ್ಳುತ್ತದೆ ಹಾಗೂ ಬಣ್ಣದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳುತ್ತದೆ. ಚಳಿಗಾಲದಲ್ಲಿ ಶೀತ ಜಾಸ್ತಿಯಾಗುತ್ತಿದ್ದಂತೆ ಎಲೆಗಳ ಬಣ್ಣದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಅಂದರೆ ಹಳದಿ ವರ್ಣಕ್ಕೆ ತಿರುಗುತ್ತವೆ. ಮತ್ತೆ ಕೆಲವು ದಿನಗಳಲ್ಲೇ ಉದುರುವುದು ಉಂಟು. ಕಾರಣ ಅವುಗಳಲ್ಲಿನ ಹಸಿರುಧಾತು ಕ್ಷೀಣಿಸುವುದು ಅಥವಾ ನಷ್ಟ ಹೊಂದುವುದು. 

ಕೆಂಪು ಗಿಡದ ವಯ್ಯಾರ

ಉದ್ಯಾನವೊಂದರಲ್ಲಿ ಬೆಳೆದು ನಿಂತಿದ್ದ ಸಣ್ಣ ಸಸ್ಯವೊಂದು ಕೆಂಪು ಬಣ್ಣದ ಎಲೆಗಳಿಂದ ಅತ್ಯಾಕರ್ಷಕವಾಗಿ ಕಾಣುತ್ತಿತ್ತು. ಎಲೆಗಳಿಗೆ ಆ ಬಣ್ಣ ಬಂದ ಬಗ್ಗೆ ಕೂತೂಹಲ ಕೂಡಾ ಕಾಡುತ್ತಿತ್ತು. ಸಾಮಾನ್ಯವಾಗಿ ಅಂಥೊಸಯನಿನ್ ವರ್ಣಕದ ಕಾರಣದಿಂದ ಇದು ಸಾಧ್ಯವಾಗಿರಲೂಬಹುದು. ಆ ದಟ್ಟ ಕೆಂಪು ಬಣ್ಣದ ಚಲುವೆಯ ಸುತ್ತ ಇಣುಕಿದಾಗ ಅದು ರೆಡ್‌ಓಕ್ ಎಂಬುದು ತಿಳಿಯಿತು.

ಬಣ್ಣ ಬದಲಾವಣೆ ಹೇಗೆ ?

ರೆಡ್‌ ಓಕ್‌ನಲ್ಲಾಗುವ ಬಣ್ಣ ಬದಲಾವಣೆಯ ಹಂತಗಳನ್ನು ನೋಡಿದಾಗ, ಮೊದಲು ಸಸ್ಯದೆಲೆಯ ಕೋಶಗಳಲ್ಲಿನ ಕ್ಲೋರೋಪ್ಲಾಸ್ಟ್ ಕ್ಲೋರೊಫಿಲ್‌ಗಳನ್ನು ಕಳೆದುಕೊಳ್ಳುತ್ತದೆ. ಆಗ ಅಂತೋಸೈಯನಿನ್ ಕೋಶದ ರಸದಾನಿಗಳಲ್ಲಿ ತಳ್ಳಲ್ಪಡುತ್ತದೆ. ಅಲ್ಲಲ್ಲಿ ಉಳಿದ ಮತ್ತಷ್ಟು ಕ್ಲೋರೊಪ್ಲಾಸ್ಟ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಆಗ ಅಂತೊಸೈನಿನ್ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ. ಕೆರೊಟಿನಾಯ್ಡ್ ಕ್ಲೊರೊಪ್ಲಾಸ್ಟ್ ನಲ್ಲಿ ಉಳಿದುಕೊಂಡಿರುತ್ತದೆ. ಮುಂದಿನ ಹಂತಗಳಲ್ಲಿ ಪತ್ರಹರಿತ್ತಿನ ಕೆರೋಟಿನಾಯ್ಡುಗಳು ಸಹ ಮಾಯವಾಗಿ ಅಂತೋಸೈಯನಿನ್ ಅಧಿಪತ್ಯ ಸಾಧಿಸಿ ಕೆಂಪುವರ್ಣದ ಎಲೆಗಳಾಗಿ ಮಾರ್ಪಡುತ್ತವೆ. 

ರೆಡ್ ಓಕ್ ಎಲೆ

ಎಲೆಗಳ ಬಣ್ಣ ಹಸಿರೊ, ಹಳದಿಯೊ ಎಲ್ಲವೂ ನಿರ್ಧರಿತವಾಗುವುದು ಅವುಗಳಲ್ಲಿನ ವರ್ಣಕಗಳ ಆಧಾರದ ಮೇಲೆಯೇ. ಹಾಗೆಯೇ ವರ್ಣಕಗಳು ಬೆಳಕನ್ನು ಹೀರುವಿಕೆಯ ಆಧಾರದಲ್ಲಿ. ಎಲ್ಲಿ ಹಸಿರಿದೆಯೋ ಅಲ್ಲಿ ಸಸ್ಯ ಆಹಾರ ಸಮೃದ್ಧವಾಗಿರುತ್ತದೆ. ಆ ಎಲೆಗಳು ಸಚೇತನಗೊಂಡು ನಳನಳಿಸುವ ಹಸಿರು ಮರ ನೋಡಲು ಸೊಬಗು. 


ಕ್ಲೊರೊಪ್ಲಾಸ್ಟ್   

No comments:

Post a Comment