ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, June 4, 2024

ಕಮರದ ಕಥೆ

 ಕಮರದ ಕಥೆ


ತಾಂಡವಮೂರ್ತಿ.ಎ.ಎನ್                                            

ಸರ್ಕಾರಿ ಪದವಿಪೂರ್ವ ಕಾಲೇಜು

 (ಪ್ರೌಢಶಾಲಾ ವಿಭಾಗ)  ನೆಲಮಂಗಲ, 

ಬೆಂಗಳೂರು(ಗ್ರಾಮಾಂತರ)


    ನಾನೀಗ ಹೇಳ ಹೊರಟಿರುವುದು ಭಾರತ ಉಪಖಂಡದಲ್ಲಿಯೇ ಅತ್ಯಂತ ಸಾಂದ್ರ ಮತ್ತು ಗಟ್ಟಿ ಮರವಾದ ಕಮರದ ಕಥೆ…

ಭಾರತ ಉಪಖಂಡದ ಶುಷ್ಕ ಎಲೆ ಉದುರುವ ಮತ್ತು ಕುರುಚಲು ಕಾಡುಗಳಲ್ಲಿ ಪ್ರಧಾನವಾಗಿ ಕಂಡುಬರುವ ಕಮರ, ಕೃಷಿ ಪ್ರಧಾನ ಭಾರತದ ಜನಪದದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಶುಷ್ಕ ಮತ್ತು ಅರೆ ಶುಷ್ಕ ಭೌಗೋಳಿಕ ಪ್ರದೇಶಗಳ ಅಷ್ಟೇನು ಫಲವತ್ತಲ್ಲದ ಮರಳು ಮಿಶ್ರಿತ ಆಳವಿಲ್ಲದ ಮಣ್ಣಿನಲ್ಲಿ ಹುಲುಸಾಗಿ ಬೆಳಯುತ್ತದೆ. ಈ ಮರ 25 ರಿಂದ 30 ಮೀಟರ್‌ ಎತ್ತರದವರೆಗೆ ಬೆಳೆಯುವ ಮಧ್ಯಮ ಗಾತ್ರದ ಮರವಾಗಿದೆ. ಮಲೆನಾಡು ಮತ್ತು ಕರಾವಳಿಯ ಆದ್ರ ವಾತಾವರಣದಲ್ಲಿ ಈ ಮರ ಬೆಳೆಯುವುದಿಲ್ಲ. ನಮ್ಮಲ್ಲಿ ಹೆಚ್ಚಾಗಿ ತುಮಕೂರು ಜಿಲ್ಲೆಯ ಉತ್ತರ ಭಾಗ ಮತ್ತು ಚಿತ್ರದುರ್ಗ ಜಿಲ್ಲೆಯ ನೈಸರ್ಗಿಕ ಶುಷ್ಕ ಕುರುಚಲು ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಎಂತಹ ಹರಿತವಾದ ಹತಾರವಾದರೂ ಒಣಗಿದ ಕಮರದ ಮರವನ್ನು ಕತ್ತರಿಸಲು ಏಳು ಕೆರೆ ನೀರು ಕುಡಿದಿರಬೇಕು: ಈ ಕಾರಣದಿಂದಲೇ ಕೃಷಿ ಉಪಕರಣಗಳಾದ ನೇಗಿಲು, ಎತ್ತಿನ ಗಾಡಿಯ ಮರದ ಗಾಲಿ, ಗುಂಭ ಮತ್ತು ಒನಕೆಗಳ ತಯಾರಿಕೆಗೆ ಹಿಂದಿನ ತಲೆಮಾರಿನ ರೈತರು ಹೆಚ್ಚಾಗಿ ಬಳಸುತ್ತಿದ್ದ ಜನಪ್ರಿಯ ಮರ ಇದಾಗಿತ್ತು. ಈ ಮರದ ಬೀಜ ಮೊಳಕೆಯೊಡೆದ ನಂತರ ಮೊದಲ ಮೂರು ವರ್ಷ ಬೇರು ಪ್ರಧಾನವಾಗಿ ಬೆಳೆದು, ಕಾಂಡ ಅಷ್ಟೇನು ಬೆಳೆಯುವುದಿಲ್ಲ. ಒಮ್ಮೆ ಬೇರು ತನ್ನ ಅಸ್ತಿತ್ವವನ್ನು ಸ್ಥಾಪಿಸಿದ ನಂತರ ಕಾಂಡ ಕ್ಷಿಪ್ರವಾಗಿ ಬೆಳವಣಿಗೆ ಹೊಂದುತ್ತದೆ . ಗೆದ್ದಲು ನಿರೋಧಕ ಗುಣ ಹೊಂದಿರುವ ಈ ಮರ ಕೃಷಿ ಉಪಕರಣಗಳ ತಯಾರಿಕೆಗೆ ಅತ್ಯಂತ ಸೂಕ್ತ. 

ಸಸ್ಯ ಶಾಸ್ತ್ರೀಯ ವರ್ಗೀಕರಣ.

ವಿಭಾಗ/Division-ಆವೃತ ಬೀಜ ಸಸ್ಯಗಳು/Angiospermae

ವರ್ಗ/Class-ಯೂಡೈಕಾಟ್ಸ್‌/Eudicots

ಗಣ/Order-ಫ್ಯಾಬೇಲ್ಸ್‌/Fabales

ಕುಟುಂಬ/Family-ಫ್ಯಾಬೇಸಿ/Fabaceae

ಜಾತಿ/Genus-ಹಾರ್ಡ್ವಿಕಿಯಾ /Hardwickia

ಪ್ರಭೇದ/Species-ಹಾರ್ಡ್ವಿಕಿಯಾ ಬಿನಾಟ/Hardwickia binata


ಕಮರದ ಎಲೆಗಳು‌  ಕೃಪೆ-ಐ ಸ್ಟಾಕ್(ಇ-ಫೋಟೋಕಾರ್ಪ್)

ಎಳೆಯ ಗಿಡದಲ್ಲಿ ಇದರ ಹಂದರ(canopy) ಶಂಖುವಿನಾಕಾರದಲ್ಲಿದ್ದು ದೊಡ್ಡದಾದಂತೆ ಹರಡಿಕೊಳ್ಳುತ್ತದೆ. ಎಲೆಗಳು ಎರಡು ದಳಗಳಿಂದ ಕೂಡಿದ್ದು, ಗೊರಸಿನಾಕಾರದಲ್ಲಿವೆ. ಬಸವನಪಾದ ಮರದ ಎಲೆಗಳು ಮತ್ತು ಕಮರದ ಮರದ ಎಲೆಗಳಿಗಿರುವ ಪ್ರಧಾನ ವ್ಯತ್ಯಾಸವೆಂದರೆ ಬಸವನ ಪಾದ ಮರದ ಎಲೆಗಳ ದಳಗಳು ಕೂಡಿಕೊಂಡಿರುತ್ತವೆ, ಆದರೆ ಕಮರದ ಎಲೆಗಳ ದಳಗಳು ಒಂದೇ ತೊಟ್ಟನ್ನು ಹೊಂದಿದ್ದರು ಕೂಡುಕೊಂಡಿರುವುದಿಲ್ಲ, ದೀರ್ಘಕಾಲದ ಶುಷ್ಕ ವಾತಾವರಣವನ್ನು ತಡೆದುಕೊಳ್ಳಬಲ್ಲ ಈ ಮರ ಫೆಬ್ರವರಿ-ಮಾರ್ಚ್ ತಿಂಗಳ ಸುಮಾರಿಗೆ ಎಲೆಗಳು ಉದುರಿ ತಾಮ್ರ ಬಣ್ಣದ ಹೊಸ ಚಿಗುರು ಏಪ್ರಿಲ್ ತಿಂಗಳಲ್ಲಿ ಕಂಡುಬರುತ್ತದೆ. ಬಿಳಿ ಅಥವ ಹಳದಿಮಿಶ್ರಿತ ಹಸಿರು ಛಾಯೆಯ ಸಣ್ಣ ಹೂಗೊಂಚಲುಗಳು ಜುಲೈಯಿಂದ ಸೆಪ್ಟೆಂಬರ್ ವರೆಗೂ ಮೂಡಿ, ಕಾಯಿಗಳು ಏಪ್ರಿಲ್ ತಿಂಗಳ ಸುಮಾರಿಗೆ ಬಲಿಯುತ್ತವೆ. ಚಪ್ಪಟೆಯಾದ ಕಾಯಿಗಳು ಗಾಳಿಯಲ್ಲಿ ಸ್ವಲ್ಪ ದೂರ ತೂರಿಹೋಗಬಲ್ಲವು-3-5 ವರ್ಷಗಳಿಗೊಮ್ಮೆ ಹೆಚ್ಚಿನ ಪ್ರಮಾಣದಲ್ಲಿ ಕಾಯಿ ಬಿಟ್ಟು ಮಿಕ್ಕ ವರ್ಷಗಳಲ್ಲಿ ಸಾಧಾರಣವಾಗಿ ಫಲ ಬಿಡುತ್ತದೆ. ಇದರ ಸಸಿಗಳು ಗಟ್ಟಿ ನೆಲದಲ್ಲಿಯೂ ತಾಯಿಬೇರನ್ನು ಆಳವಾಗಿ ಇಳಿಸಬಲ್ಲವು. ಆದ್ದರಿಂದಲೇ ಇವು ಶುಷ್ಕ ಪ್ರದೇಶಗಳಲ್ಲಿಯೂ ಬೆಳೆಯುವ ಶಕ್ತಿ ಪಡೆದಿರುವುದು. ಬುಡ ಕತ್ತರಿಸಿದಾಗ ಕಾಂಡ ಚಿಗುರದಿದ್ದರೂ ರೆಂಬೆಗಳನ್ನು ಕತ್ತರಿಸಿದರೆ ಚೆನ್ನಾಗಿ ಚಿಗುರುತ್ತದೆ. ದನ, ಮೇಕೆ, ಜಿಂಕೆಗಳಿಗೆ ಇದರ ಎಲೆ ಬಹಳ ಇಷ್ಟ. ಎಳೆಯ ಸಸಿಗಳಿಗೆ ಬೆಂಕಿ ಬಹು ಅಪಾಯಕಾರಿ. ಈ ಸಸ್ಯಗಳ ಸ್ವಾಭಾವಿಕ ಪುನರುತ್ಪತ್ತಿಗೆ ಬೆಂಕಿ, ಜಾನುವಾರುಗಳ ಉಪಟಳ ಹಾಗೂ ಹುಲ್ಲು, ಕಳೆ ಮಾರಕವಾಗಿ ಪರಿಣಮಿಸುತ್ತವೆ. ಆದ್ದರಿಂದ ಬೀಜ ಬಿತ್ತಿ ಬೆಳೆಸುವಾಗ ಎಳೆಯದರಲ್ಲಿ ಬೆಂಕಿ, ಜಾನುವಾರುಗಳಿಂದ ಕಾಪಾಡಬೇಕು. ಅರಣ್ಯ ಇಲಾಖೆಯವರು ಬಯಲು ಸೀಮೆಯಲ್ಲಿ ಬೆಳೆಸುವ ನೆಡುತೋಪುಗಳ ಕಾರ್ಯಕ್ರಮದಲ್ಲಿ ಬೆಳಸುವ ಮರಗಳಲ್ಲಿ ಇದೂ ಒಂದು ಮುಖ್ಯ ಸ್ಥಳೀಯ ಪ್ರಭೇದವಾಗಿದೆ. ಬೆಳೆಯುತ್ತಿರುವ ಸಸಿಗೆ ಹೆಚ್ಚು ನೀರುಣಿಸಿದರೆ ಈ ಸಸ್ಯ ಸಾಯುತ್ತದೆ.

ಚೌಬೀನೆ(timber)

ಈ ಮರದ ಚೌಬೀನೆ(timber) ಕೆಂಪುಮಿಶ್ರಿತ ಕಂದುಬಣ್ಣವನ್ನು ಹೊಂದಿದ್ದು. ಭಾರವಾಗಿಯೂ ಗಡುಸಾಗಿಯೂ ಬಲಯುತವಾಗಿಯೂ ಇರುವುದರಿಂದ ಇದನ್ನು ಹದಮಾಡುವುದು ಕಷ್ಟ. ಹಸಿಯ ಮರವನ್ನೇ ಕತ್ತರಿಸಿ ನಿಧಾನವಾಗಿ ಆರಲು ಬಿಡಬೇಕು. ಗೆದ್ದಲು ಹತ್ತುವುದಾಗಲೀ ಕೊಳೆಯುವುದಾಗಲೀ ಬಹಳ ವಿರಳ. ಒಣಮರವನ್ನು ಕೊಯ್ಯುವುದು ಕಷ್ಟವಾದರೂ ಹಸಿಯದರಲ್ಲಿ ಮರಗೆಲಸ ಸುಲಭ.

ಕಮರದ ಮರ : ಕೃಪೆ-ಇಂಡಿಯಾ ಬಯೋಡೈವರ್ಸಿಟಿ ಪೋರ್ಟಲ್ಲಕ್ಷಣಗಳು

ಐತಿಹಾಸಿಕ ಹಿನ್ನೆಲೆ

ಈ ಮರದ ತೋಗಟೆಯನ್ನು ಸಂಸ್ಕರಿಸಿ ಪಡೆಯುವ ಎಳೆಗಳಿಂದ ತಯಾರಿಸುವ ಹಗ್ಗವನ್ನು ಆನೆಗಳನ್ನು ಹಿಡಿದು ಪಳಗಿಸಲು ಬಳಸಲಾಗುತ್ತಿತ್ತೆಂದು 12 ನೇ ಶತಮಾನದ ಕಲ್ಯಾಣ ಚಾಲುಕ್ಯ ಚಕ್ರವರ್ತಿ 3ನೇ ಸೋಮೇಶ್ವರನ ಕಾಲದ ಮಾನಸೋಲ್ಲಾಸ ಎಂಬ ಸಂಸೃತ ವಿಶ್ವಕೋಶದಲ್ಲಿ ಉಲ್ಲೇಖಿಸಲಾಗಿದೆ. ತಮಿಳು ಸಂಗಮ ಸಾಹಿತ್ಯದಲ್ಲಿಯೂ ಈ ಮರದ ತೊಗಟೆಯಿಂದ ಹೊರಸೂಸುವ ಸುಗಂಧ ಭರಿತ ತೈಲವು ಆನೆಗಳಿಗೆ ಬಲು ಪ್ರಿಯವಾದದ್ದು ಎಂಬುದಾಗಿ ಉಲ್ಲೇಖಿಸಲಾಗಿದೆ.

ಉಪಯೋಗಗಳು

ಅತ್ಯಂತ ಗಟ್ಟಿ ಮತ್ತು ಸಾಂದ್ರ ಮರಮಾದುದರಿಂದ ಎತ್ತಿನ ಗಾಡಿಯ ಮರದಗಾಲಿ, ಗುಂಭ, ಒನಕೆ, ನೇಗಿಲು, ಯಂತ್ರಘರ್ಷಣಾ ಭಾಗಗಳು, ಗಣಿಗಳ ಊರುಗಂಬ, ತೊಲೆಗಳು, ನೆಲಹಾಸುಗಳು ಇತ್ಯಾದಿಗಳಿಗೆ ಬಳಸಲಾಗುತ್ತದೆ. ಸಾಂಪ್ರದಾಯಿಕ ಮರದ ಗಾಣಗಳ ಬೋಗುಣಿ ಮತ್ತು ಮರದ ಒರಳುಗಳಲಿ ಈ ಮರವನ್ನು ಬಳಸಲಾಗುತ್ತದೆ. ಈ ಮರದ ಓಲಿಯೋ ರೆಸಿನ್‌ ಅನ್ನು ವಾರ್ನಿಷ್‌ ತಯಾರಿಕೆಯಲ್ಲಿ ಬಳಸಲಾಗುತ್ತದೆ. ತೊಗಟೆಯನ್ನು ಸಂಸ್ಕರಿಸಿ ತಯಾರಿಸಲಾಗುವ ಅತ್ಯಂತ ಬಲಯುತವಾದ ಹಗ್ಗವನ್ನು ಹಿಂದೆ ಹಡಗುಗಳನ್ನು ಬಂದರುಗಳಲ್ಲಿ ಲಂಗರುಹಾಕಲು ಬಳಸಲಾಗುತ್ತಿತ್ತು. ಒಟ್ಟಾರೆ ಕೃಷಿ ಪ್ರಧಾನ ಭಾರತದಲ್ಲಿ ಐತಿಹಾಸಿಕ ಮಹತ್ವವನ್ನು ಪಡೆದಿರುವ ಈ ಮರವನ್ನು ಇಂದಿನ ಪೀಳಿಗೆ ನಿರ್ಲಕ್ಷಿಸಿರುವುದು ಸರ್ವವೇದ್ಯ. ಇತ್ತೀಚಿನ ದಶಕಗಳಲ್ಲಿ ಬಯಲು ಸೀಮೆಯಲ್ಲಿ ಅರಣ್ಯ ಪ್ರದೇಶಗಳು ಸಾಗುವಳಿ ಭೂಮಿಗಳಾಗಿ ಪರಿವರ್ತನೆಗೊಂಡ ನಂತರ ಕಮರದ ಮರಗಳು ವಿರಳವಾಗಿವೆ. ಆದರೂ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯ ಸಂರಕ್ಷಿತ ಮೀಸಲು ಅರಣ್ಯಗಳಲ್ಲಿ ಕಮರದ ಮರಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ತುಮಕೂರು ಜಿಲ್ಲೆಯ ಗುಬ್ಬಿ ಸಮೀಪದಲ್ಲಿ ಪ್ರಗತಿಪರ ರೈತರಾದ ಪ್ರದೀಪ್‌ ರವರು ಈ ಮರಗಳ ಸಂವರ್ಧನೆಯಲ್ಲಿ ಯಶಸ್ವಿಯಾಗಿರುವುದು ಈ ಮರಗಳ ಸಂರಕ್ಷಣೆಯಲ್ಲಿ ಆಶಾದಾಯಕ ಬೆಳವಣಿಗೆ. ಅರಣ್ಯ ಇಲಾಖೆಯವರು ಬಯಲು ಸೀಮೆಯ ಮೀಸಲು ಅರಣ್ಯಗಳಲ್ಲಿ ಮತ್ತು ಸಾಮಾಜಿಕ ಅರಣ್ಯದ ನೆಡುತೋಪು ಯೋಜನೆಗಳಲ್ಲಿ ಸ್ಥಳೀಯ ಮರಗಳ ಸಂವರ್ಧನೆಗೆ ಒತ್ತು ನೀಡುತ್ತಿರುವುದು ಗಮನಾರ್ಹ. ಕಮರದ ಮರದಂತಹ ವಿಶೇಷ ಸ್ಥಳೀಯ ಪ್ರಭೇದಗಳ ಸಂವರ್ಧನೆಗೆ ವಿಶೇಷ ಆದ್ಯತೆ ನೀಡಿ ಸಂರಕ್ಷಿಸುವುದು ಸರ್ಕಾರ,ಅರಣ್ಯ ಇಲಾಖೆ ಮತ್ತು ಜಾಗೃತ ಸಮುದಾಯದ ನೈತಿಕ ಜವಾಬ್ದಾರಿಯಾಗಿದೆ.

                                                                                



1 comment:

  1. ಹೆಸರಲ್ಲೇ ಇರುವಂತೆ ಕಮರದಿರಲಿ ಕಮರದ ಮರ

    ReplyDelete