ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, June 4, 2024

"ಹಸಿರು ಪರಿಸರ;ನಮ್ಮೆಲ್ಲರ ಉಸಿರು"


 "ಹಸಿರು ಪರಿಸರ;ನಮ್ಮೆಲ್ಲರ ಉಸಿರು" 

-ಪರಿಸರ ಸ್ನೇಹಿ ವಾತಾವರಣ ಸಂತೋಷದ ಆಗರ. 

✍️ಲೇಖನ:

ಬಸವರಾಜ ಎಮ್ ಯರಗುಪ್ಪಿ

ರಾಮಗೇರಿ, ತಾಲ್ಲೂಕು ಲಕ್ಷ್ಮೇಶ್ವರ.

ಜಿಲ್ಲಾ ಗದಗ  9742193758

ಮಿಂಚಂಚೆ basu.ygp@gmail.com



ಜೂನ್ 05-ವಿಶ್ವ ಪರಿಸರ ದಿನ-ತನ್ನಿಮಿತ್ತ ವಿಶೇಷ ಲೇಖನ. 

"ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು, ಆತನ ದುರಾಸೆಯನ್ನಲ್ಲ" ಎಂದು ಮಹಾತ್ಮ ಗಾಂಧಿ ಹೇಳಿರುವ ನಾಣ್ಣುಡಿ ಅಕ್ಷರಶಃ ಸತ್ಯ. ಅದರಂತೆ "ಭೂಮಿಯು ಸುಂದರವಾದ ವಧುವಿನಂತೆ, ಅವಳ ಸೌಂದರ್ಯವನ್ನು ಹೆಚ್ಚಿಸಲು ಯಾವುದೇ ಮಾನವ ನಿರ್ಮಿತ ಆಭರಣಗಳ ಅಗತ್ಯವಿಲ್ಲ" ಎಂದು ಖಲೀಲ್ ಗಿಬ್ರಾನ್ ಅವರು ಭೂಮಿಯ ಪರಿಸರ ಕುರಿತಾದ ಅವರ ಹೇಳಿಕೆ ನೆನಪಿಗೆ ಬಂತು. ಇಡೀ ಗ್ರಹಗಳಲ್ಲೇ ಅತ್ಯದ್ಭುತವಾದ ಗ್ರಹ ನಮ್ಮೀ ಭೂಮಿ. ತಿರೆ, ಧರೆ, ಅವನಿ, ಪೃಥ್ವಿ, ಭುವಿ, ಧಾತ್ರಿ ,ವಸುಂಧರೆ, ಇಳೆ, ಭೂರಮೆ,.. ಅಂತೆಲ್ಲ ಹಲವು ಹೆಸರುಗಳಿಂದ ಕರೆಯಲ್ಪಡುವ  ಭೂತಾಯಿಯನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸೋಣ. ಪ್ರಕೃತಿಯನ್ನು ನಮ್ಮ ಹಿರಿಯರು ನಮಗಾಗಿ ಬಿಟ್ಟು ಹೋಗಿದ್ದಾರೆ, ನಾವೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಭೂ ಸಿರಿಯನ್ನು ಉಳಿಸೋಣ.

ಪರಿಸರದ ಅರಿವು ಮತ್ತು ಸಂರಕ್ಷಣೆಗಾಗಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಿ, ಆರೋಗ್ಯಕರ ಪರಿಸರದ ಅಂಶಗಳಾದ ಬೆಳಕು, ಆಕ್ಸಿಜನ್, ಮಣ್ಣು ಮತ್ತು ಗಿಡ-ಮರಗಳನ್ನು ಒಳಗೊಂಡಂತೆ, ಉತ್ತಮ ಭವಿಷ್ಯಕ್ಕಾಗಿ ಪರಿಸರ ವ್ಯವಸ್ಥೆಗಳ ಬಗ್ಗೆ ಕಾಳಜಿ ವಹಿಸಿ ವಿಶ್ವದ ಜನರನ್ನು ಪ್ರೇರೇಪಿಸುವ ಸಲುವಾಗಿ ಪ್ರತಿವರ್ಷ ಜೂನ್ 05 ರಂದು ವಿಶ್ವಾದ್ಯಂತ "ವಿಶ್ವ ಪರಿಸರ ದಿನವನ್ನು" ಆಚರಿಸಲಾಗುತ್ತದೆ.

ಈ ದಿನಾಚರಣೆಯ ಬಗ್ಗೆ, ಇತಿಹಾಸದ ಪುಟಗಳಲ್ಲಿ ನೋಡುವುದಾದರೆ 1972 ರಲ್ಲಿ ಮಾನವ ಪರಿಸರ ಕುರಿತು ಸ್ಟಾಕ್ಹೋಮ್ ಸಮ್ಮೇಳನದ ಮೊದಲ ದಿನದಂದು ವಿಶ್ವಸಂಸ್ಥೆಯು ವಿಶ್ವ ಪರಿಸರ ದಿನವ‌ನ್ನು ಆಚರಿಸುವ ಬಗ್ಗೆ ಅಧಿಕೃತ ತೀರ್ಮಾನವನ್ನು ತೆಗೆದುಕೊಂಡಿತು.ಇದರ ಪರಿಣಾಮವಾಗಿ ಮಾನವ ಸಂವಹನ ಮತ್ತು ಪರಿಸರದ ಏಕೀಕರಣ ಕುರಿತು ಚರ್ಚೆಗಳು ಅಂದು ನಡೆದವು. ಎರಡು ವರ್ಷಗಳ ನಂತರ ಅಂದರೆ 1973 ರಲ್ಲಿ ಮೊದಲ ವಿಶ್ವ ಪರಿಸರ ದಿನವನ್ನು "ಕೇವಲ ಒಂದು ಭೂಮಿ" ಎಂಬ ವಿಷಯದೊಂದಿಗೆ ಆಚರಿಸಲಾಯಿತು. ನಂತರ 1973 ರಿಂದ ವಾರ್ಷಿಕವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ನಡೆಸಲಾಗಿದ್ದರೂ, 1987 ರಲ್ಲಿ ವಿವಿಧ ಅತಿಥೇಯ ರಾಷ್ಟ್ರಗಳನ್ನು ವಿಶ್ವ ಸಂಸ್ಥೆಯು ಆಯ್ಕೆ ಮಾಡುವ ಮೂಲಕ ಈ ಆಚರಣೆಯನ್ನು ಪ್ರಾರಂಭ ಮಾಡಿತು. ಹೀಗೆ ಮುಂದುವರಿಸಿ ಇಂದಿನ ದಿನಗಳಲ್ಲಿ ಪರಿಸರದ ಮೇಲಾಗುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತಿದೆ.

#ಪರಿಸರ ಸಕಲ ಜೀವರಾಶಿಗಳ ಉಸಿರು:

'ನಮಗೆ ಇರುವುದೊಂದೇ ಭೂಮಿ, ಅದರ ರಕ್ಷಣೆಯು ನಮ್ಮೆಲ್ಲರ ಹೊಣೆಗಾರಿಕೆ' ಎಂಬುವುದು ಈ ದಿನದ ಆಶಯವಾಗಿದೆ. ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗವಷ್ಟೇ. ಹೀಗಾಗಿ ಈಗ ನಮ್ಮ ಪರಿಸರ ಹೇಗಿದೆ, ಇದನ್ನು ರಕ್ಷಣೆ ಮಾಡದಿದ್ದರೆ ಮುಂದೇನು ಆಗುವುದು ಎಂಬ ಕಟು ವಾಸ್ತವ ಎಲ್ಲರಿಗೂ ಗೊತ್ತು. ಆದರೂ ಅಭಿವೃದ್ಧಿಯ ಹೆಸರಿನಲ್ಲಿ ಜಾಣ ಕುರುಡರಾಗಿ ವರ್ತಿಸುವುದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಎಷ್ಟೋ ಮರ ಗಿಡಗಳನ್ನು ಕಡಿಯಲಾಗಿದೆ, ನದಿಗಳ ನೀರು ಕಲುಷಿತಗೊಂಡಿವೆ, ವಾಹನಗಳು, ಕೈಗಾರಿಕೆಗಳಿಂದಾಗಿ ಗಾಳಿ ಕಲುಷಿತಗೊಂಡಿದೆ.

ಪರಿಸರ ಕಲುಷಿತವಾದರೆ ಏನೆಲ್ಲಾ ಸಮಸ್ಯೆ ಎದುರಿಸಬೇಕಾದೀತು ಈಗಾಗಲೇ ಎಲ್ಲರ ಅನುಭವಕ್ಕೆ ಬರಲಾರಂಭಿಸಿದೆ. ಮರಗಳು ಕೊಡುವ ಶುದ್ಧ ಆಮ್ಲಜನಕದ ಕೊರತೆಯಾದರೆ ಉಳಿಗಾಲವಿಲ್ಲ ಎಂಬುವುದರ ಅರಿವೂ ನಮಗೆ ಆಗಿದೆ.ಆದ್ದರಿಂದ ಪರಿಸರದ ಬಗ್ಗೆ ಈ ಹಿಂದೆಂದಿಗಿಂತಲೂ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಯಾವ ವಸ್ತುವನ್ನು ಪುನರ್ಬಳಕೆ ಮಾಡಲು ಸಾಧ್ಯವಿಲ್ಲವೋ ಆ ವಸ್ತುವನ್ನು ಬಳಸಲೇಬಾರದು ಬಳಸಕೂಡದು. ಎಲ್ಲಾ ಬಗೆಯ ಮಾಲಿನ್ಯದಿಂದ ಪರಿಸರವನ್ನು ರಕ್ಷಿಸುವುದು ಇಂದಿನಿಂದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕಾಗಿದೆ. 

ಸಕಲ ಜೀವರಾಶಿಯ ದೃಷ್ಟಿಯಿಂದ ಪರಿಸರ ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇದೆ. ಪರಿಸರಕ್ಕೆ ಮುಖ್ಯವಾಗಿ ಹಾನಿಯಾಗುತ್ತಿರುವುದೇ ಮನುಷ್ಯರಿಂದ, ಆದ್ದರಿಂದ ಮನುಷ್ಯ ಆ ತಪ್ಪನ್ನು ತಿದ್ದಿಕೊಳ್ಳಬೇಕಾಗಿದೆ. ಪರಿಸರ ರಕ್ಷಣೆಗೆ ಮನುಷ್ಯ ತುಂಬಾ ಶ್ರಮಿಸಬೇಕಾಗಿಲ್ಲ. ಅನಗ್ಯತವಾಗಿ ಅದನ್ನು ಹಾಳು ಮಾಡದಿರುವುದು ಹಾಗೂ ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಬೆಳೆಸಿದರೆ ಸಾಕು ಪರಿಸರ ಸಮೃದ್ಧಿಯಾಗಿರುತ್ತದೆ. ಅನೇಕ ಪ್ಲಾಸ್ಟಿಕ್ ತ್ಯಾಜ್ಯಗಳು ಭೂಮಿಯನ್ನು ಸೇರುತ್ತಿವೆ. ಇವೆಲ್ಲಾ ಭೂಮಿಗೆ ಮಾರಕವಾಗಿವೆ. ಈ ಬಗ್ಗೆ ಪರಿಣಾಮಕಾರಿಯಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕಾಗಿದೆ ಹಾಗೂ ಅನಗತ್ಯ ತ್ಯಾಜ್ಯ ನದಿಗಳಿಗೆ ಸೇರದಂತೆ ಎಚ್ಚರವಹಿಸಬೇಕಾಗಿದೆ. ಆದಷ್ಟು ವಾಯುಮಾಲಿನ್ಯ ಕಡಿಮೆ ಮಾಡಬೇಕು. ಗಿಡ ಮರಗಳು ಹೆಚ್ಚಾದರೆ ವಾಯು ಖಂಡಿತ ಶುದ್ಧವಾಗುತ್ತದೆ. 

#ಪರಿಸರ ನಮ್ಮೆಲ್ಲರ ಅಸ್ಮಿತೆ:

ನಾವೆಲ್ಲರೂ ಪರಿಸರ ವ್ಯವಸ್ಥೆಯನ್ನು ಅದರ ಅತ್ಯಂತ ಸುಂದರ ರೂಪದಲ್ಲಿ ಮರಳಿ ತರಲು ಒಂದು ಸಾಮೂಹಿಕ ಪ್ರಯತ್ನ ಮಾಡಬೇಕಾಗುತ್ತದೆ. ನಮ್ಮ ನಿಮ್ಮ ಮನೆ, ವ್ಯಾಪಾರ, ಶಾಲೆ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಮರಗಳು ಅಥವಾ ಸಸ್ಯಗಳನ್ನು ನೆಟ್ಟು ಬೆಳೆಸಿದ ಪೋಷಿಸಿ ಆ ಸ್ಥಳವನ್ನು ಹಸಿರೀಕರಣಗೊಳಿಸೋಣ ಎಂದು ದೃಢ ನಿರ್ಧಾರ ಮಾಡೋಣ.

 ಸೂಕ್ತವಾದ ಪರ್ಯಾಯ ಮಾರ್ಗಗಳನ್ನು ಕಂಡು ಕೊಳ್ಳುವ ಮೂಲಕ ಈ ಭೂಮಿಯನ್ನು ರಕ್ಷಣೆ ಮಾಡಬೇಕಾಗಿದೆ. ಪ್ರತಿಯೊಬ್ಬರು ನಮ್ಮ ಸುತ್ತ-ಮುತ್ತ ಗಿಡ ನೆಟ್ಟು ಬೆಳೆಸೋಣ. ಆಗ ಇಡೀ ನಾಡೇ ಹಸಿರಾಗಿರುವುದು. ಹಸಿರನ್ನೇ ಉಸಿರಾಡಿ, ಹಸಿರಿನ ಜೊತೆಗೆ ಜೀವಿಸಿ, ಹಸಿರಿನ ಜೊತೆಗೆ ಮುಂದಿನ ಜೀವನ ಪಯಣ ಸಾಗಿಸೋಣ. ಮನೆಗೊಂದು ಮರ, ಮನಸ್ಸಿಗೊಂದು ನೆಮ್ಮದಿ. ಗಿಡ ನೆಟ್ಟು ಧರೆಯ ಗಟ್ಟಿತನವನ್ನು ಸಾರೋಣ. ಹಾಗಾಗಿ ಪರಿಸರದ ಸಮಸ್ಯೆಗಳನ್ನು ನಾವು ಪರಿಹರಿಸಿದರೆ, ನಮ್ಮ ನೂರಾರು ಸಮಸ್ಯೆಗಳು ಪರಿಹಾರವಾದಂತೆ. 

#2024 ರ ವಿಶ್ವ ಪರಿಸರ ದಿನದ ಥೀಮ್: 

ಈ ವರ್ಷ ವಿಶ್ವ ಪರಿಸರ ದಿನದ 51 ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಜೂನ್ 05, 2024 ರಂದು ಸೌದಿ ಅರೇಬಿಯಾ ದಲ್ಲಿ ಈ ಕೆಳಗಿನ ಥೀಮ್ ಇಟ್ಟುಕೊಂಡು ಕಾರ್ಯಕ್ರಮ ಆಯೋಜಿಸಲಾಗಿದೆ. ಅದೇನೆಂದರೆ... 

"ನಮ್ಮ ಭೂಮಿ,ನಮ್ಮ ಭವಿಷ್ಯ.ಪೀಳಿಗೆಯ ಮರುಸ್ಥಾಪನೆಯ ಸಲುವಾಗಿ  ನಾವು"("Our Land. Our Future. We are #Generation Restoration") ಎಂಬ ವಿಷಯದ ಅಡಿಯಲ್ಲಿ ಈ ದಿನವನ್ನು ಆಯೋಜಿಸುತ್ತದೆ.

ಈ ಥೀಮ್ ಭೂಮಿ ಮತ್ತು ಪರಿಸರ ವ್ಯವಸ್ಥೆಗಳನ್ನು ಪುನಃಸ್ಥಾಪಿಸಲು, ಜೀವವೈವಿಧ್ಯತೆಯನ್ನು ರಕ್ಷಿಸಲು ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಅಗತ್ಯವಿರುವ ಸಾಮೂಹಿಕ ಪ್ರಯತ್ನವನ್ನು ಒತ್ತಿಹೇಳುತ್ತದೆ. ನೈಸರ್ಗಿಕ ಆವಾಸಸ್ಥಾನಗಳನ್ನು ಪುನರ್ವಸತಿಗೊಳಿಸುವ ಮತ್ತು ಪರಿಸರ ಅವನತಿಯನ್ನು ಕಡಿಮೆ ಮಾಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸುಸ್ಥಿರ ಭವಿಷ್ಯದ ಕಡೆಗೆ ಸಹಕಾರದಿಂದ ಕೆಲಸ ಮಾಡಲು ಸರ್ಕಾರಗಳು, ಸಂಸ್ಥೆಗಳು, ಸಮುದಾಯಗಳು ಮತ್ತು ವ್ಯಕ್ತಿಗಳಿಗೆ ಇದು ಕರೆ ನೀಡುತ್ತದೆ. 

ಒಟ್ಟಾರೆಯಾಗಿ ಈ ದಿನದಲ್ಲಿ ಜಗತ್ತಿನ ಎಲ್ಲ ಜನರನ್ನು ಒಟ್ಟುಗೂಡಿಸುವುದು ಮತ್ತು ಪರಿಸರ ಶೋಷಣೆಯಿಂದಾಗಿ ನಾವು ಎದುರಿಸುತ್ತಿರುವ ಹವಾಮಾನ ಬದಲಾವಣೆಗಳ ಬಗ್ಗೆ ಅವರಿಗೆ ಅರಿವು ಮೂಡಿಸುವುದು. ಪರಿಸರ ಸಂರಕ್ಷಣೆಗೆ ಯುವಕರನ್ನು ಉತ್ತೇಜಿಸುವ ಸಲುವಾಗಿ ಈ ದಿನದಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿತ್ರಕಲೆ ಸ್ಪರ್ಧೆಗಳು, ರಸಪ್ರಶ್ನೆ ಸ್ಪರ್ಧೆಗಳು, ಕಲಾ ಪ್ರದರ್ಶನಗಳು, ಪ್ರಬಂಧ ಬರವಣಿಗೆ ಮತ್ತು ಭಾಷಣ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶೋಭೆ ತರಲು ಪ್ರತಿಜ್ಞೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದಾಗ್ಯೂ ಕೊನೆಯದಾಗಿ ಪೂರ್ಣಚಂದ್ರ ತೇಜಸ್ವಿ ಅವರ ಹೇಳಿಕೆ ನೆನಪಿಗೆ ಬಂತು. ಅದೇನೆಂದರೆ "ಈಗ ಕಾಡುಗಳಿಲ್ಲದ, ಕಾಡುಪ್ರಾಣಿಗಳಿಲ್ಲದ ಪರಿಸರವು ಸ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತದೆ" ಎಂದು ನುಡಿದ ಅವರ ಮಾತು ಸತ್ಯಕ್ಕೆ ಸನ್ನಿಹಿತವಾಗುವುದರಲ್ಲಿ ಸಂಶಯವಿಲ್ಲ ಎನ್ನಬಹುದು.ಆದ್ದರಿಂದ ನಾವೆಲ್ಲ ಪರಿಸರ ಸ್ನೇಹಿ ಸಮಾಜ ಕಟ್ಟೋಣ, ಪರಿಸರ ಪ್ರಜ್ಞೆ ನಾಗರಿಕರಲ್ಲಿ ಬೆಳೆಸೋಣ. ಹಾಗೆಯೇ ಈ ಭೂಮಿಗಿಂತ ಅತ್ಯುತ್ತಮವಾದ ಸ್ಥಳ ಬೇರೊಂದಿಲ್ಲ, ಆದ್ದರಿಂದ ಶ್ರಮವಾದರೂ ಸರಿಯೇ ನಮ್ಮ ಭೂಮಿಯನ್ನು ರಕ್ಷಿಸೋಣ.ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗವಷ್ಟೇ. ಹಾಗಾಗಿ ಹಲವಾರು ಜೀವ ಪ್ರಭೇದಗಳು ಇರುವುದೊಂದೇ ಭೂಮಿಯಲ್ಲಿ. ಹೀಗಾಗಿ ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕಾಗಿದೆ.ಮತ್ತೊಮ್ಮೆ ವಿಶ್ವ ಪರಿಸರ ದಿನದ ಶುಭಾಶಯಗಳು.

No comments:

Post a Comment