ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, July 4, 2024

ಬನ್ನಿ ಆಚರಿಸೋಣ ವನಮಹೋತ್ಸವ ಸಪ್ತಾಹ

ಬನ್ನಿ ಆಚರಿಸೋಣ ವನಮಹೋತ್ಸವ ಸಪ್ತಾಹ 


ಲೇಖನ:  ಬಸವರಾಜ ಎಮ್ ಯರಗುಪ್ಪಿ

ಬಿ ಆರ್ ಪಿ ಶಿರಹಟ್ಟಿ ̧  ಸಾ.ಪೊ ರಾಮಗೇರಿ, ತಾಲ್ಲೂಕು ಲಕ್ಷ್ಮೇಶ್ವರ. 

ಜಿಲ್ಲಾ ಗದಗ.      ದೂರವಾಣಿ 9742193758

ಮಿಂಚಂಚೆ basu.ygp@gmail.com.


ಜುಲೈ 1 ರಿಂದ 7ರವರೆಗೆ ಭಾರತದಾದ್ಯಂತ "ವನ ಮಹೋತ್ಸವ" ಸಪ್ತಾಹವನ್ನು ಆಚರಿಸಲಾಗುತ್ತದೆ. ತನ್ನಿಮಿತ್ತ ಸಾಂದರ್ಭಿಕ ಲೇಖನ. 

ನಾಳಿನ ಹಸಿರಿಗೆ ಸಸಿಗಳೇ ಉಸಿರು, 

ಹಸಿರೇ ಉಸಿರು;

ಕಾಡಿದ್ದರೆ ನಾಡು, 

ಒಂದು ಭೂಮಿ ಒಂದೇ ಭವಿಷ್ಯ, 

ಮನೆಗೊಂದು ಮರ ಊರಿಗೊಂದು

ವನ, ಅರಣ್ಯವಿಲ್ಲದೆ ಮಳೆ ಇಲ್ಲಾ ಮಳೆ ಇಲ್ಲದೆ ಬೆಳೆ ಇಲ್ಲಾ; 

ಹೀಗೆ ಪರಿಸರದ ಕುರಿತು ಉಲ್ಲೇಖಿಸಿ ಹೇಳಿರುವ ಘೋಷಣೆಗಳಾಗಿವೆ. ಅದರಂತೆ ಗಿಡಮರಗಳಿಗೆ ಹಾಗೂ ಮಾನವನ ನಡುವೆ ಅವಿನಾಭಾವ ಸಂಬಂಧವಿದೆ. ಗಿಡಮರಗಳು ಮಾನವನ ಜೀವನದ ಆಧಾರವಾಗಿದ್ದು, ಅಮೂಲ್ಯ ಕೊಡುಗೆಯನ್ನು ನೀಡುತ್ತದೆ. ಅರಣ್ಯ ಬೆಳೆಸಬಹುದಾದ ಪ್ರದೇಶಗಳಲ್ಲಿ ಹೊಸದಾಗಿ ಬೆಳೆಸುವ, ಹಳ್ಳಿ, ಗ್ರಾಮ, ಪಟ್ಟಣ, ನಗರ ಪ್ರದೇಶಗಳಲ್ಲಿ ಗಿಡ ನೆಡುವ ತನ್ಮೂಲಕ ಶುದ್ಧಗಾಳಿ, ಪರಿಸರ ಸೌಂದರ್ಯ, ಪಶು–ಪಕ್ಷಿಗಳಿಗೆ ಆಹಾರ, ಆಶ್ರಯ ಹೀಗೆ... ವಿಭಿನ್ನ ಆಶಯಗಳೊಂದಿಗೆ ನಡೆಯುವ ಕಾರ್ಯಕ್ರಮ ಇದಾಗಿದೆ. ಆದ್ದರಿಂದ ಹೊಸ ಯುವ ಪೀಳಿಗೆಗೆ ಗಿಡ–ಮರ, ಪರಿಸರ ತನ್ನದೆನ್ನುವ ಆತ್ಮೀಯ ಭಾವ– ಸ್ಪರ್ಶವನ್ನು  ಅವರಲ್ಲಿ ಬಿತ್ತುವ ಮಹೋದ್ದೇಶದಿಂದ ಜುಲೈ 1 ರಿಂದ 7ರವರೆಗೆ ಭಾರತದಾದ್ಯಂತ "ವನ ಮಹೋತ್ಸವ" ಸಪ್ತಾಹವನ್ನು ಆಚರಿಸಲಾಗುತ್ತದೆ.

ಮೊದಲ ಬಾರಿಗೆ ಗಿಡಗಳನ್ನು ನೆಡುವ ಸಪ್ತಾಹ ದೆಹಲಿ ರಾಜ್ಯದಲ್ಲಿ 1947ರಲ್ಲಿ ಪ್ರಾರಂಭಿಸಲಾಯಿತು. 1950 ರಿಂದ ಪ್ರತಿವರ್ಷ 'ವನಮಹೋತ್ಸವ ಸಪ್ತಾಹ' ನಡೆಯುತ್ತಾ ಬರುತ್ತಿದೆ. ಸಪ್ತಾಹದ ದಿನಗಳಲ್ಲಿ ಹುಣಸೆ, ಮಾವು, ಬೇವು, ಹೊಂಗೆ, ಮಹಾಗನಿ, ಪೇರಲ, ಸೀತಾಫಲ, ಹೆಬ್ಬಾವು ಇನ್ನೂ ಮುಂತಾದ ಮರಗಳನ್ನು ದೇಶದಾದ್ಯಂತ ನೆಡಲಾಗುತ್ತಿದೆ. ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು,ಸ್ವಯಂಸೇವಾ ಸಂಸ್ಥೆಗಳು ಹಾಗೂ ಮಹಿಳಾಸಂಘಗಳು ಪ್ರತಿವರ್ಷ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ಖಾಲಿಯಿರುವ ಅಗತ್ಯ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಲು ವ್ಯವಸ್ಥೆ ಮಾಡುಲಾಗುತ್ತಿವೆ. ತೋಟಗಾರಿಕೆ ಇಲಾಖೆಗಳು, ನಗರ ಸಭೆಗಳು ಮತ್ತು ಪಂಚಾಯಿತಿಗಳು ವನಮಹೋತ್ಸವ ಸಪ್ತಾಹವನ್ನು ಬೇರೆ ಬೇರೆ ಸ್ಥಳಗಳಲ್ಲಿ ನೆಡೆಸಿ ಅದರ ಮಹತ್ವವನ್ನು ಜನರಿಗೆ ತಿಳಿಯಪಡಿಸುತ್ತಾರೆ. ಸಾಲು ಮರಗಳನ್ನು ನೆಡುವುದರಿಂದ ನಗರ ಮತ್ತು ಹಳ್ಳಿಗಳು ಸುಂದರವಾಗುವುದಲ್ಲದೆ ಭೂಸವೆತ ಕಡಿಮೆಯಾಗುತ್ತದೆ. ವನಮಹೋತ್ಸವದ ಅಂಗವಾಗಿ ಎಲ್ಲೆಡೆ ಗಿಡಗಳನ್ನು ನೆಡುವ ಆಚರಣೆ ಭಾರತದಲ್ಲಿ ಮಾತ್ರವಲ್ಲದೆ ಬೇರೆ ಅನೇಕ ದೇಶಗಳಲ್ಲೂ ಜಾರಿಯಲ್ಲಿದೆ. ಸಸ್ಯ ಸಂರಕ್ಷಣೆ, ಉಳಿಸಿಕೊಳ್ಳುವ ಪ್ರಯತ್ನ ನಡೆಯಬೇಕು.ಜನರು ಈ ಅರಣ್ಯಗಳ ವಿಷಯದಲ್ಲಿ ಪ್ರಾಮಾಣಿಕವಾಗಿ ಜಾಗೃತರಾಗಬೇಕು.

ಈ ವನಮಹೋತ್ಸವ ಕಾರ್ಯಕ್ರಮದ ಮೂಲಕ ಅರಣ್ಯಗಳನ್ನು ಬೆಳೆಸುವುದು ಮತ್ತು ಮುಂದಿನ ಪೀಳಿಗೆ  ಅವುಗಳನ್ನು ಸಂರಕ್ಷಿಸುವುದು ವನಮಹೋತ್ಸವದ ಪ್ರಮುಖ ಉದ್ದೇಶವಾಗಬೇಕಾಗಿದೆ. ಹಾಗೆಯೇ ಕರ್ನಾಟಕ ರಾಜ್ಯದಲ್ಲಿ  ಜುಲೈ ತಿಂಗಳ ಮೊದಲ ವಾರದ ಸಪ್ತಾಹದಲ್ಲಿ ವನಮಹೋತ್ಸವ  ಕಾರ್ಯಕ್ರಮ ನಡೆದಿದ್ದು, ಅದರಂತೆ  "ನಾಳಿನ ಹಸಿರಿಗೆ ಸಸಿಗಳೇ ಉಸಿರು" ಎಂಬ ಘೋಷವಾಕ್ಯದಡಿಯಲ್ಲಿ ವನಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಾರ್ವಜನಿಕರು ಭಾಗವಹಿಸುವ ಮೂಲಕ ತಮ್ಮ ಸಹಕಾರವನ್ನು ನೀಡುವಂತೆ  ಅರಣ್ಯ ಇಲಾಖೆ ಅಧಿಕಾರಿಗಳು  ಕರೆ ನೀಡಿದ್ದಾರೆ.

#ಪ್ರಕೃತಿ & ಮಾನವನ ನಡುವೆ ಅವಿನಾಭಾವ ಸಂಬಂಧ:

 ಕರ್ನಾಟಕ ರಾಜ್ಯವು ಪರಿಸರಕ್ಕೆ, ಅರಣ್ಯೀಕರಣಕ್ಕೆ ಹಾಗೂ ಟ್ರೀಟಾಪ್ ಗಳನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇಂದು ಶಾಲಾ ಮಕ್ಕಳು, ಹಿರಿಯರಿಗೆ ಸಸಿಗಳನ್ನು ನೀಡಲಾಗುತ್ತಿದೆ. ಹಳೇ ಬೇರು , ಹೊಸ ಚಿಗುರು ಒಂದಾದಾಗ ಮಾತ್ರ ಅರಣ್ಯೀಕರಣ ಯಶಸ್ವಿಯಾಗುತ್ತದೆ. ಮಕ್ಕಳು ನೆಡುವ ಗಿಡಗಳಿಗೆ ಒಂದು ಹೆಸರು ನೀಡಬೇಕು. ನಿಮ್ಮ ಪ್ರೀತಿಪಾತ್ರರ ಹೆಸರನ್ನು ನೀಡಿ, ಆಗ ಆ ಗಿಡದೊಂದಿಗೆ ನಿಮ್ಮ ಬಾಂಧವ್ಯ ಹೆಚ್ಚುತ್ತದೆ. ಗಿಡಮರಗಳಿಗೆ ಹಾಗೂ ಮಾನವನ ನಡುವೆ ಅವಿನಾಭಾವ ಸಂಬಂಧವಿದೆ. ಗಿಡಮರಗಳು ಮಾನವನ ಜೀವನದ ಆಧಾರವಾಗಿದ್ದು, ಅಮೂಲ್ಯ ಕೊಡುಗೆಯನ್ನು ನೀಡುತ್ತದೆ. ಮಕ್ಕಳಲ್ಲಿ ಗಿಡಮರಗಳನ್ನು ಆರೈಕೆಯಲ್ಲಿ ಆಸಕ್ತಿಯನ್ನು ಬೆಳೆಸಲು ಸರ್ಕಾರದೊಂದಿಗೆ ಸಾರ್ವಜನಿಕರು, ಸಂಘಸಂಸ್ಥೆಗಳೂ ಕೈಜೋಡಿಸಬೇಕು. ಪ್ರತಿ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಗಿಡಗಳನ್ನು ನೆಡಬೇಕು ಅಂದಾಗ ಮಾತ್ರ ಪ್ರಕೃತಿ ಸಂಪತ್ತು ಸಂತೋಷದಿಂದ ಸಂಭ್ರಮಿಸಲು ಸಾಧ್ಯ.

#ವಿಪತ್ತು ತಡೆಯಲು ಅರಣ್ಯೀಕರಣ ಬಹಳ ಮುಖ್ಯ: 

ನಾವು ಬದುಕಲು ಪರಿಸರ ಬಹಳ ಮುಖ್ಯ. ಗಿಡಮರಗಳಿಂದ ಶುದ್ಧ ಗಾಳಿ ಸಿಗುತ್ತದೆ. ಗಿಡಮರಗಳಿಂದ ಶುದ್ಧವಾದ ಆಮ್ಲಜನಕ ದೊರೆಯುತ್ತದೆ. ಪರಿಸರದಲ್ಲಿ ಕಾರ್ಬನ್ ಅಂಶ ಹೆಚ್ಚಾದರೆ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಹವಾಮಾನ ಬದಲಾವಣೆ ಆಗುತ್ತಿದೆ. ಕಳೆದ ವರ್ಷ ವಿಶ್ವದ ತಾಪಮಾನ ಶೇ.1 ರಷ್ಟು ಹೆಚ್ಚಾಗಿದ್ದು, ಹಿಮಬಂಡೆಗಳು ಕರುಗುತ್ತಿವೆ. ಇದರಿಂದ ವಾತಾವರಣದಲ್ಲಿನ ಉಷ್ಣಾಂಶ ಹೆಚ್ಚಾಗಿ ಜನರಿಗೆ ತೊಂದರೆಯಾಗುವ ಜೊತೆಗೆ ಪ್ರವಾಹ ಭೀತಿಯೂ ಎದುರಾಗುತ್ತದೆ. ಈ ಸಮಸ್ಯೆಗಳನ್ನು ತಡೆಗಟ್ಟಲು ಅರಣ್ಯೀಕರಣ ಬಹಳ ಮುಖ್ಯ.

# ವನಮಹೋತ್ಸವ ಕಾರ್ಯಕ್ರಮದ ದಿನಗಳಂದು ಈ ಕೆಳಗಿನ  ಸಂಕಲ್ಪಗಳನ್ನು ತೆಗೆದುಕೊಂಡು ಅಳವಡಿಸಿಕೊಳ್ಳಬೇಕು.*

*ಸಸ್ಯ ಸಂರಕ್ಷಣೆ,ಅವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯಬೇಕು.

*ಒಂದು ವರ್ಷದಲ್ಲಿ ಕನಿಷ್ಠ ಪಕ್ಷ ಒಂದು ಸಸಿಯನ್ನಾದರೂ ನೆಡಿ ಮತ್ತು ಅದನ್ನು ಉಳಿಸಿ ಬೆಳೆಸಿ ಹಾಗೂ ಮರ-ಗಿಡಗಳ ಸಂರಕ್ಷಣೆಗೆ ಸಹಕರಿಸಿ.

*ನದಿ, ಹಳ್ಳ, ಕೊಳ್ಳಗಳಂತಹ ನೀರಿನ ಮೂಲಗಳನ್ನು ಕಲುಷಿತಗೊಳಿಸಬೇಡಿ.

*ನೀರನ್ನು ದುರುಪಯೋಗಪಡಿಸಿಕೊಳ್ಳಬೇಡಿ ಮತ್ತು ಬಳಕೆಯ ನಂತರ ನಲ್ಲಿಯನ್ನು ಬಂದ್ ಮಾಡಿ.

*ಅನಾವಶ್ಯಕವಾಗಿ ವಿದ್ಯುತ್ ಬಳಕೆಯನ್ನು ವ್ಯಯ ಮಾಡಬೇಡಿ.  ಫ್ಯಾನ, ಬಲ್ಫ್ ಮತ್ತು ಇನ್ನಿತರ ಉಪಕರಣಗಳನ್ನು ಬಳಕೆಯ ನಂತರ ಆರಿಸಿ. 

*ಕಸವನ್ನು ಕಸದಬುಟ್ಟಿಯಲ್ಲಿ ಎಸೆಯಿರಿ ಮತ್ತು ಇನ್ನೊಬ್ಬರಿಗೆ ಹಾಗೇ ಮಾಡಲು ಪ್ರೇರೇಪಿಸಿ.

*ಪ್ಲಾಸ್ಟಿಕ್ ಮತ್ತು ಪಾಲಿಥಿನ್ ಗಳನ್ನು ಬಳಸುವುದನ್ನು ನಿಲ್ಲಿಸಿ. ಇವುಗಳಿಗೆ ಪರ್ಯಾಯವಾಗಿ ಕಾಗದದಿಂದ ಮಾಡಿದ ಚೀಲ/ಕೈಚೀಲವನ್ನು ಉಪಯೋಗಿಸಿ.

*ಕಡಿಮೆ ದೂರದ ಅಥವಾ ಹತ್ತಿರದ ಪ್ರಯಾಣಕ್ಕೆ ಸೈಕಲ್ ಉಪಯೋಗಿಸಿ.

*ಹುಟ್ಟುಹಬ್ಬ, ಮದುವೆ ಇತ್ಯಾದಿ ಸಂದರ್ಭದ ಸವಿ ನೆನಪಿಗಾಗಿ ಸಸಿಗಳನ್ನು ಕೊಡುಗೆ ನೀಡಿ, ಅವುಗಳನ್ನು ನೆಟ್ಟು ಪೋಷಿಸುವ ಆಚರಣೆ ಜನರಲ್ಲಿ ಬೆಳೆದು ಬರಬೇಕು ಅಂದಾಗ ಈ ವನಮಹೋತ್ಸವಕ್ಕೆ ಶೋಭೆ ಬರುತ್ತದೆ. 

ಒಟ್ಟಾರೆಯಾಗಿ ಸ್ವಚ್ಛ ಭಾರತದ ಜೊತೆಗೆ ಹಸಿರು ಭಾರತವನ್ನೂ ನಿರ್ಮಿಸುವ ಪ್ರಯತ್ನ ಎಲ್ಲರೂ ಸಂಕಲ್ಪ ಮಾಡಬೇಕೆಂದು ನನ್ನ ಆಶಯವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಕನಿಷ್ಟ ನೂರು ಎಕರೆ ಪ್ರದೇಶದಲ್ಲಿ ಅರಣ್ಯೀಕರಣ ಮಾಡುವ ಕೆಲಸವನ್ನು ಮಾಡಬೇಕು. ರಾಜ್ಯದದಲ್ಲಿರುವ ಶೇ. 21 ರಷ್ಟಿರುವ ಅರಣ್ಯ ಪ್ರದೇಶವನ್ನು ಶೇ.30 ಕ್ಕೆ ಏರಿಸಬೇಕು. ಈ ದಿಸೆಯಲ್ಲಿ ಅರಣ್ಯ ಇಲಾಖೆಗೆ ಎಲ್ಲ ಸಹಕಾರವನ್ನು ನೀಡಿದಾಗ ಪರಿಸರ ಉಳಿಸಲು ಸಾಧ್ಯವಾಗುತ್ತದೆ.

#ಕೊನೆಯ ಮಾತುಗಳು:

ಗಿಡ ನಕ್ಕರೆ ಜಗ ನಗುವುದು,

ಗಿಡ ಅಳಿದರೆ ಜಗ ಅಳಿವುದು. 

ನಿಮ್ಮ ವಂಶ ಬೆಳಗಲು ಮಗನನ್ನು

ಬೆಳೆಸಿ, ಮಗನ ವಂಶ ಬೆಳಗಲು

ಮರಗಳನ್ನು ಬೆಳೆಸಿ. 

ಅಕ್ಷರ ಅನ್ನ, ಪರಿಸರ ಚಿನ್ನ. 

ವೃಕ್ಷ ಕಡಿದವನಿಗೆ ಭಿಕ್ಷೆ ತಪ್ಪದು

ಕಾಡು ಬೆಳೆಸಿ, ಭೂ ತಾಪಮಾನ

ಇಳಿಸಿ, ಮಳೆ ಬೀಜಕ್ಕಾಗಿ, ಮರ ಬೆಳೆಸಿ.

ಪ್ರಕೃತಿ ಮಾತೆ  ನೀಡು ಸನ್ಮತಿ.

No comments:

Post a Comment