ಬೂದು ಹಾರ್ನ್ ಬಿಲ್
ಒಮ್ಮೆ ಕ್ಯಾಮರ ಹಿಡಿದು ನೀಲಕಂಠ ಪಕ್ಷಿಯ ಒಂದು ಒಳ್ಳೆಯ ಚಿತ್ರ ತೆಗೆಯಲು ಹೊಸಕೋಟೆ ಕೆರೆಯ ಬಳಿ ಗಿಡ ಮರಗಳಲ್ಲಿ ತೋಟಗಳಲ್ಲಿ ಹುಡುಕಾಟ ನೆಡೆಸಿದ್ದೆ. ಹೊಸಕೋಟೆಯ ಕೆರೆ ಬೆಂಗಳೂರು ನಗರಕ್ಕೆ ಅತಿ ಸಮೀಪದಲ್ಲಿರುವ ಒಂದು ಪಕ್ಷಿ ವೀಕ್ಷಣ ಸ್ಥಳ. ಸುಮಾರು ಆರುನೂರು ಎಕರೆಗಳಷ್ಟು ವಿಸ್ತಾರ ಹೊಂದಿರುವ ಈ ಕೆರೆಯನ್ನು ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರ ವಂಶಸ್ಥರೇ ಆದ ಸುಗಟೂರಿನ ತಮ್ಮಗೌಡ ಎಂಬ ಪಾಳೇಗಾರರು ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ.
ಸ್ವತಃ ತಮ್ಮೇಗೌಡರೇ ಜೋಡೆತ್ತಿನ ನೇಗಿಲನ್ನು ಹೂಡಿ ಪೂರ್ವದಿಂದ ಆರಂಭಿಸಿ ನಂತರ ಉತ್ತರಕ್ಕೆ ನಡೆದು ನಂತರ ಪಶ್ಷಿಮಕ್ಕೆ ತಿರುವು ತೆಗೆದುಕೊಂಡು ಕೊನೆಗೆ ದಕ್ಷಿಣ ದಿಕ್ಕಿಗೆ ಉಳುಮೆಯನ್ನು ಮಾಡಿದರಂತೆ. ಹೀಗೆ ನೆಲದಲ್ಲಿ ಮೂಡಿದ ಜಾಡಿನ ಮೇಲೆಯೆ ದಕ್ಷಿಣ ಪಿನಾಕಿನಿ ನದಿಗೆ ಅಡ್ಡಲಾಗಿ ಏರಿಯನ್ನು ನಿರ್ಮಿಸಿ ವಿಶಾಲವಾದ ಕೆರೆಯ ನಿರ್ಮಾಣ ಮಾಡಿದರಂತೆ. ಇಂತಹ ಕೆರೆಯು ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ಒದಗಿಸುವುದರ ಜೊತೆಗೆ ಅನೇಕ ಅಪರೂಪದ ಪಕ್ಷಿಗಳಿಗೆ ಆಸರೆಯ ತಾಣವಾಗಿದೆ. ೨೫೦ಕ್ಕೂ ಮಿಗಿಲಾದ ಪಕ್ಷಿ ಪ್ರಭೇದಗಳನ್ನು ಇಲ್ಲಿ ಪಕ್ಷಿ ವೀಕ್ಷಕರು ಗುರ್ತಿಸಿದ್ದಾರೆ. ಇವುಗಳಲ್ಲಿ ಯುರೋಪು, ಸೈಬೀರಿಯ, ಆಸ್ಟ್ರೇಲಿಯದಂತಹ ದೂರ ದೇಶಗಳಿಂದ ಬರುವ ವಲಸೆ ಹಕ್ಕಿಗಳ ಸಂಖ್ಯೆಯೆ ಸುಮಾರು ಅರ್ಧದಷ್ಟು ಇದೆ.
ನಾನು ಹೊಸಕೋಟೆ ಕರೆಯ ದಕ್ಷಿಣದ ಭಾಗದಲ್ಲಿ ತೋಟಗಳಲ್ಲಿ ಅಲೆದಾಡುತ್ತಿದ್ದಾಗ ಇದ್ದಕ್ಕಿಂದ್ದಂತೆ ಕೆಕ್ ಕೆಕ್ ಕೆಕ್. . . . ಕೀ ಕೀ ಕೀಚ್ ಕೀಚ್ ಎನ್ನುವ ಜೋರಾಧ ಕರ್ಕಶ ಧ್ವನಿಯು ಹತ್ತಿರದ ನೀಲಗಿರಿಯ ಮರದಿಂದ ಬರತೊಡಗಿತು. ನಾನು ನಿಂತಲ್ಲಿಯೆ ಸ್ಥಬ್ದನಾಗಿ ಆ ಮರವನ್ನು ಸೂಕ್ಷ್ಮಾಗಿ ಗಮನಿಸತೊಡಗಿದೆ. ಮೇಲೆ ಎರಡು ಬೂದು ಬಣ್ಣದ ಪಕ್ಷಿಗಳು ಕೂತಿದ್ದವು. ಈ ಹಿಂದೆ ಇಲ್ಲಿ ನಾನು ಅವುಗಳನ್ನು ಕಂಡಿರಲಿಲ್ಲ ಮತ್ತು ಈ ಮೊದಲು ಚಿತ್ರಗಳಲ್ಲಿ ಕಂಡಿದ್ದ ಅವನ್ನು ನಾನು ನೇರವಾಗಿ ಮೊದಲಿಗೆ ಕಂಡಿದ್ದೆ. ಅಲ್ಲಿ ಎರಡು ಬೂದು ಮಂಗಟ್ಟೆ ಪಕ್ಷಿಗಳು ಕುಳಿತಿದ್ದವು. ಬೂದು ಮಂಗಟ್ಟೆ ಅಥವಾ ಇಂಡಿಯನ್ ಗ್ರೇ ಹಾರ್ನ್ ಬಿಲ್‌ಗಳು ಬೂದು ಗರಿಗಳು, ಕಪ್ಪು ಮತ್ತು ಹಳದಿ ಬಣ್ಣದ ಕೊಕ್ಕು,ಕ್ಯಾಸ್ಕ್ ಕರೆಯುವ ಕೊಕ್ಕಿನ ಮೇಲೆ ಕೊಕ್ಕಿನಂತದ್ದೇ ರಚನೆಯನ್ನು ಹೊಂದಿರುತ್ತದೆ ಕೆಂಪು ಐರಿಸ್ ಮತ್ತು ಸುಂದರವಾದ ಕಣ್ಣಿನ ರೆಪ್ಪೆಗೂದಲುಗಳನ್ನು ಹೊಂದಿದೆ. ಗಂಡು ಹೆಣ್ಣಿಗಿಂತ ದೊಡ್ಡ ಕ್ಯಾಸ್ಕ್ ಹೊಂದಿರುತ್ತದೆ. ಇವು ಸುಮಾರು 55-70 ಸೆಂ.ಮೀ ಉದ್ದವಿದ್ದು, ಬೂದು ಹಾರ್ನ್‌ಬಿಲ್ ಭಾರತದಲ್ಲಿ ಕಂಡುಬರುವ ಒಂಬತ್ತು ಜಾತಿಯ ಹಾರ್ನ್‌ಬಿಲ್‌ಗಳಲ್ಲಿ ಒಂದಾಗಿದೆ. ಭಾರತದಲ್ಲಿನ ಎಲ್ಲಾ ಹಾರ್ನ್‌ಬಿಲ್ ಜಾತಿಗಳಲ್ಲಿ, ಬೂದು ಹಾರ್ನ್‌ಬಿಲ್ ಹೆಚ್ಚು ವ್ಯಾಪಕವಾಗಿ ವಿತರಿಸಲ್ಪಟ್ಟಿದೆ. ಇದರ ವ್ಯಾಪ್ತಿಯು ಜಮ್ಮುವಿನಿಂದ ಕೇರಳದ ವರೆಗೆ ಮತ್ತು ರಾಜಸ್ಥಾನದಿಂದ ಪಶ್ಚಿಮ ಬಂಗಾಳದ ವರೆಗೂ ವ್ಯಾಪಿಸಿದೆ. ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶ ಸೇರಿದಂತೆ ಕೆಲವು ನೆರೆಯ ರಾಷ್ಟ್ರಗಳಲ್ಲಿ ಇವು ಕಂಡುಬರುತ್ತವೆ. ಇವು ಅರಣ್ಯವಾಸಿ ಹಾರ್ನ್‌ಬಿಲ್‌ಗಳಿಗಿಂತ ಭಿನ್ನವಾಗಿ ಬಯಲು ಪ್ರದೇಶಗಳು, ತಪ್ಪಲಿನಲ್ಲಿ ಮತ್ತು ತೆರೆದ ಆವಾಸಸ್ಥಾನಗಳಿಗೆ ಆದ್ಯತೆ ನೀಡುತ್ತವೆ. ಇವನ್ನು ಎಲೆಯುದುರುವ ಕಾಡುಗಳು, ತೋಟಗಳು, ಮುಳ್ಳಿನ ಕುರುಚಲು ಕಾಡುಗಳು, ಉದ್ಯಾನಗಳು ಮತ್ತು ನಿಮ್ಮ ಹಿತ್ತಲಿನಲ್ಲಿ ಔದುಂಬುರದ ಮರವಿದ್ದರೆ ನೀವು ಅಲ್ಲಿಯೂ ಅವನ್ನು ಕಾಣಬಹುದು. ದೊಡ್ಡ ನಗರದ ಮಧ್ಯದಲ್ಲಿ ಹಳೆಯ ಎತ್ತರದ ಮರಗಳಲ್ಲಯೂ ಕಂಡು ಬಂದರೆ ಆಶ್ಚರ್ಯವಿಲ್ಲ. ಹೊಂದಿರುವ ಇದು ನಿಮಗೆ ಆಶ್ಚರ್ಯವಾಗಬಹುದು.ಬೂದು ಹಾರ್ನ್ ಬಿಲ್ಲುಗಳು ಮುಖ್ಯವಾಗಿ ಹಣ್ಣು ಭಕ್ಷಕಗಳು. ಅತ್ತಿಯ ಹಣ್ಣು, ನೇರಳೆ, ಪೇರಳೆ, ಪಪ್ಪಾಯಿ, ಬೆರ್ರಿ ಯಾವುದೇ ತಿರುಳು ಭರಿತ ಹಣ್ಣನ್ನು ಇಷ್ಟಪಟ್ಟು ತಿನ್ನುತ್ತವೆ. ಜೊತೆಗೆ ವಿವಿಧ ಕೀಟಗಳು, ಹಾವು ಮುಂತಾದ ಸರೀಸೃಪಗಳು, ಕಪ್ಪೆ, ಇಲಿ, ಹಲ್ಲಿಗಳನ್ನೂ ಸಹ ಬೇಟಯಾಡಿ ಭಕ್ಷಿಸುತ್ತವೆ. ಇತರೆ ಪಕ್ಷಿಗಳ ಗೂಡುಗಳಿಂದ ಮರಿಗಳನ್ನು ಕದ್ದಯೊಯ್ದು ತಿನ್ನುವುದೂ ಉಂಟು. ಒಮ್ಮೆ ಏರ್ಪಟ್ಟ ಈ ಹಕ್ಕಿಗಳ ಜೋಡಿಯು ಒಂದು ಗಂಡಿಗೆ ಒಂದು ಹೆಣ್ಣು ಎಂಬಂತೆ ಜೀವನ ಪರ್ಯಂತ ಒಟ್ಟಿಗೆ ಬಾಳುತ್ತವೆ. ಮಾರ್ಚಿಯಿಂದ ಜೂನ್ ತಿಂಗಳ ವರೆಗೆ ಇವುಗಳ ಸಂತಾನೋತ್ಪತ್ತಿಯ ಕಾಲ. ಎತ್ತರದ ಮರದ ಪೊಟರೆಯೊಂದನ್ನು ಮೊಟ್ಟೆ ಇಡಲು ಆಯ್ಕೆ ಮಾಡಿಕೊಂಡು ತಮ್ಮ ಅಗತ್ಯಕ್ಕೆ ತಕ್ಕಂತೆ ಅದನ್ನು ಸಿದ್ಧಪಟಿಸಿಕೊಳ್ಳುತ್ತವೆ. ಹೆಣ್ಣು ಬೂದು ಹಾರ್ನ್ ಬಿಲ್ ಪೊಟರೆಯೊಳಗೆ ಹೋಗಿ ಸೇರಿಕೊಂಡು ತನ್ನದೇ ಹಿಕ್ಕೆಯಿಂದ ಮತ್ತು ಗಂಡು ಹಕ್ಕಿ ತಂದು ಕೊಡುವ ಹಸಿ ಮಣ್ಣಿನ ಉಂಡೆಗಳಿಂದ ತನ್ನ ಕೊಕ್ಕು ಹೊರಬರುವಷ್ಟು ಕಿಂಡಿಯನ್ನು ಬಿಟ್ಟು ಪೊಟರೆಯ ದ್ವಾರವನ್ನು ಒಳಗಿನಿಂದಲೇ ಮುಚ್ಚಿ ತನ್ನನ್ನು ತಾನೆ ಒಳಗೆ ಬಂಧಿಯಾಗಿಸಿಕೊಳ್ಳುತ್ತದೆ. ಇಂತಹ ಪೊಟರೆಯಲ್ಲಿ ಗರಿಷ್ಟ ಎಂದರೆ ಐದು ಮೊಟ್ಟೆಗಳನ್ನು ಇಟ್ಟು ಕಾವು ಕೊಡುವ ಕೆಲಸವನ್ನು ಮಾಡುತ್ತದೆ. ಹೀಗೆ ಸುಮಾರು ಇಪ್ಪತ್ತೊಂದು ದಿನಗಳಲ್ಲಿ ಮೊಟ್ಟೆಯೊಡೆದು ಮರಿಗಳು ಹೊರಬರುತ್ತವೆ. ಇಷ್ಟಾಗುವ ಹೊತ್ತಿಗೆ ಹೆಣ್ಣು ಹಕ್ಕಿಯ ರೆಕ್ಕೆಗಳೆಲ್ಲ ಉದುರಿಹೋಗಿ ಹಾರುವ ಶಕ್ತಿಯನ್ನೇ ಅದು ಕಳೆದುಕೊಂಡಿರುತ್ತದೆ. ಮುಂದೆ ಮೊಟ್ಟೆಯಿಟ್ಟ ನಲವತೈದು ದಿನಗಳಲ್ಲಿ ತಾಯಿ ಹಕ್ಕಿಗೆ ರೆಕ್ಕೆಗಳ ಮರುಹುಟ್ಟು ಆಗಿರುತ್ತದೆ. ಜೊತೆಗೆ ಮರಿ ಹಕ್ಕಿಗಳು ಬೆಳೆದು ಹಾರಿ ಹೋಗಲು ಸಿದ್ಧವಾಗಿರುತ್ತವೆ. ತಾಯಿ ಹಕ್ಕಿ ಮತ್ತು ಮರಿಗಳು ಪೊಟರೆಯ ಮುಚ್ಚಿದ ದ್ವಾರವನ್ನು ಕಿತ್ತು ಹೊರಬರುತ್ತವೆ. ವಿಶೇಷವೆಂದರೆ ಹೆಣ್ಣು ಹಕ್ಕಿ ಪೊಟರೆಯಲ್ಲಿ ಬಂಧಿಯಾಗಿದ್ದ ಅಷ್ಟೂ ದಿನಗಳು ಗಂಡು ಹಕ್ಕಿ ಅದಕ್ಕೆ ಅಗತ್ಯವಾದ ಆಹಾರ ಮುಂತಾದ ಪದಾರ್ಥಗಳನ್ನು ಗಂಡು ಹಕ್ಕಿ ಹೊತ್ತು ತಂದು ಒದಗಿಸುತ್ತಾ ತನ್ನ ಯಜಮಾನಿಕೆಯ ಜವಾಬ್ದಾರಿ ನಿಭಾಯಿಸುತ್ತದೆ.
ಕೇರಳ ಮತ್ತು ಅರುಣಾಚಲ ಪ್ರದೇಶಗಳ ರಾಜ್ಯ ಪಕ್ಷಿಯ ಸ್ಥಾನ ಬೂದು ಹಾರ್ನ್ ಬಿಲ್ಲುಗಳಿಗೆ ದೊರೆತಿದೆ. IUCN ಪಟ್ಟಿಯಲ್ಲಿ ಸುಲಭವಾಗಿ ಅಳಿವಿನ ಅಂಚಿಗೆ ತಲುಪುವ ಪ್ರಾಣಿ ವರ್ಗವೆಂದು ಬೂದು ಹಾರ್ನ್ ಬಿಲ್ಲುಗಳನ್ನು ದಾಖಲಿಸಿದ್ದಾರೆ.
No comments:
Post a Comment