ವಿಶ್ವ ಸೊಳ್ಳೆ ದಿನ
ಲೇಖಕರು : ಬಿ ಎನ್ ರೂಪ,
ಸಹ ಶಿಕ್ಷಕರು,
ಕೆಪಿಎಸ್ ಜೀವನ್ ಭೀಮ ನಗರ,
ಬೆಂಗಳೂರು ದಕ್ಷಿಣ ವಲಯ -4.
ಪ್ರತಿ ವರ್ಷವೂ ವಿಶ್ವ ಸೊಳ್ಳೆ ದಿನವನ್ನು ಆಗಸ್ಟ್ 20 ರಂದು ಆಚರಿಸಲಾಗುತ್ತದೆ. 1897 ರಲ್ಲಿ ಸೊಳ್ಳೆಗಳ ಕಡಿತದಿಂದ ಮಲೇರಿಯಾ ರೋಗ ಹರಡುತ್ತದೆ ಎಂಬುದನ್ನು ಕಂಡುಹಿಡಿದ ಬ್ರಿಟಿಷ್ ವೈದ್ಯ ಸರ್ ರೊನಾಲ್ಡ್ ರಾಸ್ ಅವರ ಸ್ಮರಣಾರ್ಥವಾಗಿ ಆಗಸ್ಟ್ 20 ರಂದು ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತದೆ.
ಪ್ರತಿ ವರ್ಷ ಈ ದಿನವು ಸೊಳ್ಳೆಯಿಂದ ಹರಡುವ ರೋಗಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಅರಿವು ಮೂಡಿಸಲು ಜನ ಜಾಗೃತಿಯನ್ನು ಮೂಡಿಸಲಾಗುತ್ತದೆ“ಕೀಟ ಚಿಕ್ಕದಾದರೂ ಕಾಟ ದೊಡ್ಡದು “ ಇತ್ತೀಚಿಗಂತೂ ಈ ವಾಹಕ ಸೊಳ್ಳೆಗಳಿಂದ ಡೆಂಗಿ ಜ್ವರ, ಚಿಕುನ್ ಗುನ್ಯ, ಮೆದುಳು ಜ್ವರ ಹಳದಿ ಜ್ವರ, ಮಲೇರಿಯಾ,…. ಇತ್ಯಾದಿ ಜ್ವರಗಳಿಂದ ನರಳುತ್ತಿರುವುದನ್ನು ನಾವು ಸುದ್ದಿ ಮಾಧ್ಯಮಗಳಿಂದ ತಿಳಿಯುತ್ತಿದ್ದೇವೆ.
ಪ್ರತಿ ವರ್ಷವು ಸುಮಾರು 700 ಮಿಲಿಯನ್ ಜನರಿಗೆ ವಾಹಕ ಸೊಳ್ಳೆಗಳು ವಿವಿಧ ರೋಗಗಳ ಸೋಂಕು
ತಗುಲಿಸಿದರೆ, ಸೊಳ್ಳೆಯಿಂದ ಹರಡುವ ರೋಗಗಳಿಗೆ ಒಂದು
ಮಿಲಿಯನ್‌ಗಿಂತಲೂ ಹೆಚ್ಚು ಜನರು ಬಲಿಯಾಗುತ್ತಿದ್ದಾರೆ.
ಪ್ಲಾಸ್ಮೋಡಿಯಂ ಪರಾವಲಂಬಿ ಮಲೇರಿಯಾಗೆ ಕಾರಣವಾಗುವ ಸೂಕ್ಷ್ಮಾಣುಜೀವಿಯಾಗಿದೆ. ಇದು ಸೋಂಕಿತ ಹೆಣ್ಣು ಅನೊಫಿಲಸ್ ಸೊಳ್ಳೆಯ ಕಚ್ಚುವಿಕೆಯಿಂದ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ಹೆಣ್ಣು ಅನೊಫಿಲಸ್ ಸೊಳ್ಳೆಯು ಈ ಪರಾವಲಂಬಿ ಜೀವಿಯ ವಾಹಕವಾಗಿದೆ.
ಈ ಸೋಂಕಿತ ಹೆಣ್ಣು ಸೊಳ್ಳೆಯು ಕಚ್ಚಿದಾಗ ಏಕಕೋಶೀಯ ಮಲೇರಿಯಾ ರೋಗಾಣು ಪ್ಲಾಸ್ಮೊಡಿಯಂ ಆರೋಗ್ಯವಂತ ಮಾನವ ದೇಹವನ್ನು ಸೇರುತ್ತವೆ. ಈ ಪರಾವಲಂಬಿಗಳು ತಮ್ಮ ಗುರಿ ಅಂಗವಾದ ಯಕೃತ್ತನ್ನು ಪ್ರವೇಶಿಸುತ್ತದೆ. ಈ ಪರಾವಲಂಬಿಯಲ್ಲಿ ಹಲವಾರು ವಿಧಗಳಿವೆ. ಕೆಲವು ಒಂದು ವರ್ಷಕ್ಕೂ ಹೆಚ್ಚು ಕಾಲ ದೇಹದಲ್ಲಿ ಸುಪ್ತ ಸ್ಥಿತಿಯಲ್ಲಿರಬಹುದು ನಂತರ ಈ ಪರಾವಲಂಬಿಗಳು ಕ್ರಿಯಾಶೀಲವಾಗುತ್ತವೆ. ಕೆಂಪು ರಕ್ತಕಣಗಳಿಗೆ ಸೋಂಕು ತಗಲಿದಾಗ ವ್ಯಕ್ತಿಯಲ್ಲಿ ಮಲೇರಿಯಾ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಲಕ್ಷಣಗಳು :
ಸೋಂಕಿಗೆ ಒಳಗಾದ 6 ರಿಂದ 15 ದಿನಗಳಲ್ಲಿ ಮಲೇರಿಯಾದ ಚಿಹ್ನೆಗಳು ಹಾಗೂ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಪರಾವಲಂಬಿಯ ವಿಧವನ್ನು ಅವಲಂಬಿಸಿ ರೋಗಲಕ್ಷಣಗಳು ಸೌಮ್ಯ ಅಥವಾ ತೀವ್ರವಾಗಬಹುದು.
ಸಾಮಾನ್ಯ ಲಕ್ಷಣಗಳು:-
1. ಅತಿ ಹೆಚ್ಚು ಜ್ವರ ಮತ್ತು ಬೆವರುವುದು.
2.ಚಳಿ ಜ್ವರ.
3.ಸ್ನಾಯು ನೋವು ಮತ್ತು ತಲೆನೋವು, ಆಯಾಸ.
4. ಎದೆ ನೋವು ಉಸಿರಾಟದ ತೊಂದರೆ ಕೆಮ್ಮು.
5. ವಾಕರಿಕೆ ಮತ್ತು ಅತಿಸಾರ ವಾಂತಿ .
ತೀವ್ರ ಲಕ್ಷಣಗಳು:-
1. ಮಲದೊಂದಿಗೆ ರಕ್ತ .
2. ಮೂತ್ರಪಿಂಡ ವೈಫಲ್ಯ.
3. ರಕ್ತದಲ್ಲಿ ಸಕ್ಕರೆ ಮಟ್ಟದಲ್ಲಿ ಅಸಹಜ ಮತ್ತು
ಹಠಾತ್ ಇಳಿಕೆ.
4. ಉಸಿರಾಟದ ತೊಂದರೆ.
5. ಗಾಢ ಬಣ್ಣದ ಮೂತ್ರ.
6. ಸೆಳೆತಗಳು.
7. ರಕ್ತ ಹೀನತೆ.
ಮಲೇರಿಯಾ ಪರಾವಲಂಬಿ ವಿಧಗಳು :
ಪ್ಲಾಸ್ಮೊಡಿಯಂಗಳಲ್ಲಿ ಸೋಂಕಿಗೆ ಕಾರಣವಾಗುವ ೫ ಪ್ರಬೇಧಗಳನ್ನು
ಗುರುತಿಸಲಾಗಿದೆ.
1. ಪ್ಲಾಸ್ಮೋಡಿಯಂ ವೈವಾಕ್ಸ್
2.ಪ್ಲಾಸ್ಮೋಡಿಯಮ್ ಫಾಲ್ಸಿಪೋರಮ್
3.ಪ್ಲಾಸ್ಮೋಡಿಯಂ ಮಲೇರಿಯಾ
4.ಪ್ಲಾಸ್ಮೋಡಿಯಂ ನೋಲೇಸಿ
5. ಪ್ಲಾಸ್ಮೋಡಿಯಂ ಓವೇಲೆ (ಅಂಡಾಕಾರ)
ಭಾರತದಲ್ಲಿ ಪ್ಲಾಸ್ಮೋಡಿಯಂ ವೈವಾಕ್ಸ್, ಪ್ಲಾಸ್ಮೋಡಿಯಮ್
ಫಾಲ್ಸಿಪೋರಮ್ ಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಪ್ಲಾಸ್ಮೋಡಿಯಮ್ ಫಾಲ್ಸಿಪೋರಮ್ ವೇಗವಾಗಿ ಹರಡುತ್ತದೆ. ಇದು ಅತಿಯಾದ ರಕ್ತದ ನಷ್ಟಕ್ಕೆ ಕಾರಣವಾಗುತ್ತದೆ.
ರಕ್ತನಾಳಗಳನ್ನು ಮುಚ್ಚಿ ಹಾಕುತ್ತದೆ ಹಾಗೂ ಅಂಗಾಂಗಗಳು ರಕ್ತ ಕೊರತೆಯಿಂದ ಹಾನಿಗೆ ಕಾರಣವಾಗುತ್ತದೆ.
ಇವುಗಳನ್ನು ಪತ್ತೆಹಚ್ಚಲು ವಿವಿಧ ಬಗೆಯ ರಕ್ತ ಪರೀಕ್ಷೆಗಳನ್ನು
ನಡೆಸುತ್ತಾರೆ. ಅವೆಂದರೆ,
1. ಬಾಹ್ಯ ರಕ್ತದ ಸ್ಪಿಯರ್ ಪರೀಕ್ಷೆ .
2.ಪಿಸಿಆರ್ ನಂತಹ ಅಣ್ವಿಕ ಪರೀಕ್ಷೆ .
3. ಪರಾವಲಂಬಿ ಕಿಣ್ವ ಪ್ರತಿಜನಕ ಪರೀಕ್ಷೆ.
ಚಿಕಿತ್ಸೆ:- ಪ್ರಾರಂಭಿಕ ಹಂತದಲ್ಲೇ ಮಲೇರಿಯಾ ಚಿಕಿತ್ಸೆಯಿಂದ
ಉತ್ತಮವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ದೀರ್ಘಕಾಲದವರಿಗೆ ಚಿಕಿತ್ಸೆ ನೀಡದಿದ್ದರೆ ಮಲೇರಿಯಾ
ಜೀವಕ್ಕೂ ಅಪಾಯಕಾರಿಯಾಗಬಹುದು. ಪ್ಲಾಸ್ಮೊಡಿಯಂ ಫ್ಯಾಲ್ಸಿಫ್ಯಾರಂ ಪರಾವಲಂಬಿ ಸೋಂಕಿಗೆ ಒಳಗಾಗಿದ್ದರೆ ಇದು ಇನ್ನೂ ತೀವ್ರತರವಾಗಿರಬಹುದು.
ವೈದ್ಯರು ಆಂಟಿಮಲೇರಿಯಾ ಔಷಧಿಗಳನ್ನು ಸೂಚಿಸುತ್ತಾರೆ.
ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮವಾಗಿದೆ.
ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರಿಂದ
ಸೊಳ್ಳೆಯಿಂದ ಹರಡುವ ರೋಗಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದಾಗಿದೆ.-
1. ರೋಗ ಹರಡುವ ಪ್ರದೇಶಗಳಲ್ಲಿ ಸೊಳ್ಳೆಯ ಪರದೆ
ಬಳಸುವುದು.
2. ತುಂಬುತೋಳಿನ ಬಟ್ಟೆಗಳನ್ನು ಧರಿಸುವುದು.
3. ನೀರಿನ ತೊಟ್ಟಿಗಳಲ್ಲಿ, ಭತ್ತದ ಗದ್ದೆಗಳಲ್ಲಿ
ಗಾಂಬೂಸಿಯಾ ಮೀನುಗಳನ್ನು ಬಳಸಿ ಸೊಳ್ಳೆಯ ನಿರ್ಮೂಲನಕ್ಕೆ ಜೈವಿಕ ವಿಧಾನಗಳನ್ನು ಅನುಸರಿಸುವುದು.
4. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವುದು.
5. ಸ್ವಚ್ಛತೆಗೆ ಆದ್ಯತೆ ನೀಡಿ ಮನೆ, ಶಾಲಾ-ಕಾಲೇಜು,
ಕಚೇರಿ, ಅಂಗಡಿ, ಸಾರ್ವಜನಿಕ ಸ್ಥಳಗಳಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿಯನ್ನು ನಿಯಂತ್ರಿಸುವುದು.
6. ಸೊಳ್ಳೆ ನಿವಾರಕಗಳನ್ನು ಬಳಸುವುದು.
7. ಸೊಳ್ಳೆಗಳು ಮೊಟ್ಟೆಗಳನ್ನು ಇಡುವುದನ್ನು ತಪ್ಪಿಸಲು ಬೇವಿನ ಎಣ್ಣೆ ಅಥವಾ ಇನ್ನಾವುದೇ ಎಣ್ಣೆಯನ್ನು ಸಿಂಪಡಿಸುವುದು.
ಮಲೇರಿಯಾದಂತಹ ಭಯಾನಕ ರೋಗವನ್ನು ನಿಯಂತ್ರಣದಲ್ಲಿಡಲು ಸೊಳ್ಳೆಗಳ ನಾಶ, ಸ್ವಚ್ಛತೆ ಕುರಿತ ಜನಜಾಗೃತಿ ಅತ್ಯಂತ ಅಗತ್ಯ
No comments:
Post a Comment