ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Wednesday, September 4, 2024

ಇತಿಹಾಸದ ಅತ್ಯದ್ಭುತ ಸಾಧಕ : ಸರ್‌ ಎಂ.ವಿಶ್ವೇಶ್ವರಯ್ಯ

 ಇತಿಹಾಸದ ಅತ್ಯದ್ಭುತ ಸಾಧಕ : ಸರ್‌ ಎಂ.ವಿಶ್ವೇಶ್ವರಯ್ಯ

                                                                                                           

                                 ಲೇಖಕರು :    

ಬಿ.ಎನ್.ರೂಪ, ಸಹಶಿಕ್ಷಕರು

                                                                           ಕೆಪಿಎಸ್.  ಜೀವನ್ ಬಿಮಾ ನಗರ
                                                                                                                 

               ಬೆಂಗಳೂರು  ದಕ್ಷಿಣ ವಲಯ -4   

 



ಭಾರತ ದೇಶಕ್ಕೆ ಭದ್ರಬುನಾದಿಯನ್ನು ಹಾಕಿಕೊಡುವಲ್ಲಿ ಇಂಜಿನಿಯರ್ಗಳ ಕಾರ್ಯ ಬಹಳ  ಮುಖ್ಯ. ಇಂಜಿನಿಯರ್‌ ಗಳನ್ನು ಉಲ್ಲೇಖಿಸಬೇಕಾದರೆ, ಭಾರತ ಕಂಡಂತಹ ಅಸಾಧಾರಣ ಮೇಧಾವಿ, ಕೈಗಾರಿಕೆ ಕ್ರಾಂತಿಯ ಹರಿಕಾರರಾಗಿ, ಸ್ವಚ್ಛ ,ಶುದ್ಧ ಜೀವನವನ್ನು ನಡೆಸಿಂತಹ ಪ್ರಾಮಾಣಿಕ, ಸಹೃದಯಿ, ಕರ್ಮಯೋಗಿ ಸರ್ ಮೋಕ್ಷಗುಂಡಮ್ ವಿಶ್ವೇಶ್ವರಯ್ಯನವರನ್ನು  ಸ್ಮರಿಸಿಕೊಳ್ಳದೆ ಇರಲಾದೀತೆ ?
ಭಾರತ ದೇಶದ ಅಭಿವೃದ್ಧಿಗಾಗಿ ದೇಶದ ಪ್ರಮುಖ ಯೋಜನೆಗಳಿಗೆ ಭದ್ರ ಬುನಾದಿ ಹಾಕುವಲ್ಲಿ ಇಂಜಿನಿಯರ್ಗಳ ಪಾತ್ರ ಬಹಳ ಪ್ರಮುಖವಾದದ್ದು .ಇಂದು ನಮ್ಮ ಕನ್ನಡ ನೆಲ ವಿಜ್ಞಾನ ಹಾಗೂ ತಂತ್ರಜ್ಞಾನದ ತವರೂರಾಗಿದೆ . ಇದರ ಬುನಾದಿಯನ್ನು ರೂಪಿಸುವಲ್ಲಿ ವಿಶ್ವೇಶ್ವರಯ್ಯನವರ ಅಗಾಧ ಪರಿಶ್ರಮದ, ದೂರದೃಷ್ಟಿಯ ಹಾಗೂ ,ಸಮಾಜಮುಖಿ ಯೋಜನೆಗಳಿವೆ .ಭಾರತದ ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಗಳು ಅತ್ಯಗತ್ಯ ಎಂದು ಮನಗಂಡು, ಭಾರತಕ್ಕೆ ಯೋಜಿತ ಅರ್ಥವ್ಯವಸ್ಥೆ ಎಂಬ ಪುಸ್ತಕವನ್ನು ರೂಪಿಸಿದವರು ಅವರು. “ಭಾರತದ ಆರ್ಥಿಕ ಪಿತಾಮಹ” ಎಂದು ಇವರನ್ನು ಕರೆಯಲಾಗುತ್ತದೆ . ಶಿಸ್ತುಬದ್ಧ, ಅದ್ವಿತೀಯ, ಅಪ್ರತಿಮ, ಅಸಾಧಾರಣ ಕೊಡುಗೆಗಳನ್ನು ನೀಡಿ ಭಾರತವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅಸಾಧಾರಣ ಸಾಧಕರಾಗಿ ಕರ್ಮ ಯೋಗಿಯಾಗಿ ಭಾರತ ದೇಶಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ.
ಅನೇಕ ಕ್ಷೇತ್ರಗಳಿಗೆ ದೊರೆತಿರುವ  ಇವರ ಕೊಡುಗೆಗಳ ಸ್ಮರಣಾರ್ಥವಾಗಿ ಇವರ ಜನ್ಮದಿನವನ್ನು ʼರಾಷ್ಟ್ರೀಯ ಇಂಜಿನಿಯರ್ ದಿನʼ ಎಂದು ಆಚರಿಸಲಾಗುತ್ತಿದೆ.
ಸರ್ ಮೋಕ್ಷ ಗುಂಡO ವಿಶ್ವೇಶ್ವರಯ್ಯ ನವರು 1861ರ ಸೆಪ್ಟೆಂಬರ್ 15 ರಂದು ಮೈಸೂರು ಸಾಮ್ರಾಜ್ಯದ ಇಂದಿನ ಚಿಕ್ಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಮೋಕ್ಷಗುಂಡಂ ಶ್ರೀನಿವಾಸ ಶಾಸ್ತ್ರಿ ಮತ್ತು ವೆಂಕಟಲಕ್ಷ್ಮಿ ಅವರ ಕುಟುಂಬದಲ್ಲಿ ಅವರ ಮಗನಾಗಿ ಜನಿಸಿದರು.
 ವಿಶ್ವೇಶ್ವರಯ್ಯನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದರು ಮತ್ತು ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದರು.  ನಂತರ ಅವರು ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಅಧ್ಯಯನ ಮಾಡಿ ಇಂಜಿನಿಯರ್ ಪದವಿ ಪಡೆದರು. ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ (DCE) ಪಡೆದರು.

 ಇವರು ಬ್ರಿಟಿಷ್ ಇಂಡಿಯಾ ಸರ್ಕಾರಕ್ಕಾಗಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಬಾಂಬೆ ಪ್ರೆಸಿಡೆನ್ಸಿ ಮತ್ತು ಮಧ್ಯಪ್ರಾಚ್ಯದ ಇತರೆ ಬ್ರಿಟಿಷ್ ವಸಾಹಾತುಗಳಲ್ಲಿ ಕೆಲಸ ಮಾಡಿದರು ನಂತರ ಇವರು ಹೈದರಾಬಾದ್ ರಾಜ್ಯಕ್ಕಾಗಿ ಕೆಲಸ ಮಾಡಿದರು . 1885 ರಲ್ಲಿ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಬಾಂಬೆಯ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆದರು. 1899 ರಲ್ಲಿ ವಿಶ್ವೇಶ್ವರಯ್ಯ ಅವರನ್ನು ಭಾರತೀಯ ನೀರಾವರಿ ಆಯೋಗಕ್ಕೆ ಸೇರಲು ಆಹ್ವಾನಿಸಲಾಯಿತು. ಪ್ರಸ್ಥಭೂಮಿಯಲ್ಲಿ ಒಂದು ಸಂಕೀರ್ಣವಾದ ನೀರಾವರಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೆ ತಂದರು.
1903 ರಲ್ಲಿ ಪುಣೆಯ ಬಳಿ ಖಡಕ್ವಾಸ್ಲಾ ಅಣೆಕಟ್ಟಿನಲ್ಲಿ ಸ್ವಯಂ ಚಾಲಿತ ವೇರ್ ವಾಟರ್  ಫ್ಲೆಡ್ ಗೇಟ್ ಗಳ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದರು ಮತ್ತು ಪೇಟೆಂಟ್ ಪಡೆದರು.. ಈ ಗೇಟ್‌ ಗಳು ಜಲಾಶಯದಲ್ಲಿನ ಶೇಖರಣ ಮಟ್ಟವನ್ನು ಅಣೆಕಟ್ಟಿಗೆ ಯಾವುದೇ ಹಾನಿಯಾಗದಂತೆ ಸಾಧಿಸಬಹುದಾದ ಗರಿಷ್ಠ ಮಟ್ಟವನ್ನು ಹೆಚ್ಚಿಸಿವೆ . ಈ ಯಶಸ್ಸಿನ ಆಧಾರದ ಮೇಲೆ ಈ ವ್ಯವಸ್ಥೆಯನ್ನು ಮುಂದೆ ಗ್ವಾಲಿಯರ್ ಟೈಗ್ರಾ ಅಣೆಕಟ್ಟಿನಲ್ಲಿ ಹಾಗೂ ಕರ್ನಾಟಕದ ಮೈಸೂರಿನ ಕೆಆರ್‌ಎಸ್‌ ಅಣೆಕಟ್ಟಿನಲ್ಲಿ ಸ್ಥಾಪಿಸಲಾಯಿತು.
 1907ರಲ್ಲಿ ಬ್ರಿಟಿಷ್ ಇಂಡಿಯಾ ಸರ್ಕಾರವು ಇವರನ್ನು ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಅಡೆನ್ನ ಬ್ರಿಟಿಷ್ ಕಾಲೋನಿಗೆ ಕಳುಹಿಸಿತು . 1908ರಲ್ಲಿ ಸ್ವಯಂ ನಿವೃತ್ತಿಯನ್ನು ಆಯ್ಕೆ ಮಾಡಿದ ನಂತರ, ಕೈಗಾರಿಕೀಕರಣಗೊಂಡ ರಾಷ್ಟ್ರಗಳ ಅಧ್ಯಯನಕ್ಕಾಗಿ ವಿದೇಶ ಪ್ರವಾಸ ಕೈಗೊಂಡರು. ವಿಶಾಖಪಟ್ಟಣಂ ಬಂದರನ್ನು ಸಮುದ್ರದ ಕೊರೆತದಿಂದ ರಕ್ಷಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. ಈ ಅಣೆಕಟ್ಟು ಅದರ ನಿರ್ಮಾಣ ಮಾಡಿದ ಸಮಯದಲ್ಲಿ ಏಷ್ಯಾದ ಅತಿ ದೊಡ್ಡ ಜಲಾಶಯವನ್ನು ಸೃಷ್ಟಿಸಿತು.
 ನವಂಬರ್ 1909 ರಲ್ಲಿ ದಿವಾನ ಎ ಪಿ ಮಾಧವರಾಯರ  ಆಹ್ವಾನದ ಮೇರೆಗೆ ವಿಶ್ವೇಶ್ವರಯ್ಯ ಮೈಸೂರು ರಾಜ್ಯದ ಮುಖ್ಯ ಇಂಜಿನಿಯರ್ ಆಗಿ ಸೇರಿದರು. ಮೈಸೂರಿನ ಕೆ ಆರ್ ಎಸ್  ನ ಅಣೆಕಟ್ಟಿನ ಮುಖ್ಯ ಇಂಜಿನಿಯರ್ ಆಗಿದ್ದರು, ನಂತರ, ಕರ್ನಾಟಕದ ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ ಇಂಜಿನಿಯರ್ ಗಳ ಮಂಡಳಿಯ ಅಧ್ಯಕ್ಷರಾಗಿದ್ದರು. 1912ರಲ್ಲಿ ಮಹಾರಾಜ ಕೃಷ್ಣರಾಜ ಒಡೆಯರ್ ಅವರು ಮೈಸೂರಿನ ದಿವಾನರಾಗಿ ವಿಶ್ವೇಶ್ವರಯ್ಯ ಅವರನ್ನು ನೇಮಿಸಿದರು. ಈ ಹುದ್ದೆಯಲ್ಲಿ 1918 ರ ವರೆಗೆ, ಸುಮಾರು ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ದಿವಾನರಾಗಿದ್ದ ಸಂದರ್ಭದಲ್ಲಿ ಪಾಲಿಟೆಕ್ನಿಕ್ ಕಾಲೇಜು, ಬೆಂಗಳೂರು ಕೃಷಿ ಕಾಲೇಜು ಸೇರಿದಂತೆ ಮಹಾರಾಜರಿಂದ ಧನಸಹಾಯ ಪಡೆದ ಕಾರ್ಖಾನೆಗಳು ಮತ್ತು ಸಂಸ್ಥೆಗಳ ಸ್ಥಾಪನೆಗೆ ಕಾರಣರಾಗಿದ್ದರು. ವಿಶ್ವವಿದ್ಯಾನಿಲಯ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಸೆಂಚುರಿ ಕ್ಲಬ್, ಮೈಸೂರು ಚೇಂಬರ್ ಆಫ್ ಕಾಮರ್ಸ್ ,ಮೈಸೂರು  ಅಪೆಕ್ಸ್ ಚೇಂಬರ್ ಆಫ್ ಕಾಮರ್ಸ್, ಹಲವಾರು ಇತರೆ ಕೈಗಾರಿಕಾ ಸಂಸ್ಥೆಗಳನ್ನು ಸ್ಥಾಪಿಸಿದರು. ಅವರು ದಿವಾನರಾಗಿದ್ದ ಅವಧಿಯಲ್ಲಿ ಬೆಂಗಳೂರು ಮುದ್ರಣಾಲಯವು ಸ್ಥಾಪನೆಯಾಯಿತು.
 1917ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ (ಈಗ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್) ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಇದು ಭಾರತದ ಮೊದಲ ಇಂಜಿನಿಯರಿಂಗ್ ವಿದ್ಯಾಸಂಸ್ಥೆಗಳಲ್ಲಿ  ಒಂದಾಗಿದೆ. ಅವರ ಮೈಸೂರು ರೈಲ್ವೆ ಯಲ್ಲಿ ಹಲವಾರು ಹೊಸ ರೈಲು ಮಾರ್ಗಗಳನ್ನು ನಿಯೋಜಿಸಿದರು. ವಿಶ್ವೇಶ್ವರಯ್ಯ ಅವರು ದಿವಾನರಾಗಿದ ಅವಧಿಯಲ್ಲಿ ಉದ್ಯಮದಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡಿದರು. ಬಿಹಾರದಲ್ಲಿ ಗಂಗಾ ನದಿಯ ಮೇಲೆ ಮೊಕಾಮಾ  ಸೇತುವೆಯ ಸ್ಥಳಕ್ಕಾಗಿ ತಮ್ಮ ತಾಂತ್ರಿಕ ಸಲಹೆಯನ್ನು ವಿಶ್ವೇಶ್ವರಯ್ಯ ನೀಡಿದರು. ವಿಶ್ವೇಶ್ವರಯ್ಯನವರು ಅನೇಕ ಕ್ಷೇತ್ರಗಳಲ್ಲಿ ಮನ್ನಣೆಯನ್ನು ಪಡೆದವರು. ಮುಖ್ಯವಾಗಿ ಶಿಕ್ಷಣ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆ ಪಾಲಿಟೆಕ್ನಿಕ್ ಕಾಲೇಜುಗಳ ಸ್ಥಾಪನೆಯನ್ನು ಮಾಡಿದ್ದಾರೆ .ಅವರ ಗೌರವಾರ್ಥಕ್ಕಾಗಿ ಅವರ ಹೆಸರನ್ನೇ ಇಡಲಾಗಿದೆ. ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ವಿಶ್ವೇಶ್ವರಯ್ಯನವರ ಗೌರವಾರ್ಥವಾಗಿ ಅವರ ಪ್ರತಿಮೆಯನ್ನು ಸ್ಥಾಪಿಸಿತು. ಭಾರತದಲ್ಲಿ ಎರಡು ಮೆಟ್ರೋ ನಿಲ್ದಾಣಗಳು ಒಂದು ಪರ್ಪಲ್ ಲೈನ್ ನಲ್ಲಿರುವ ಬೆಂಗಳೂರಿನಲ್ಲಿ ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣ ಸೆಂಟ್ರಲ್ ಕಾಲೇಜು ಮತ್ತು ಇನ್ನೊಂದು ದೆಹಲಿಯ ಮೋತಿಬಾಗ್ ನ ಪಿಂಕ್ ಲೈನ್ ನಲ್ಲಿ ವಿಶ್ವೇಶ್ವರಯ್ಯ ಅವರ ಹೆಸರನ್ನು ಇಡಲಾಗಿದೆ. ಬೆಂಗಳೂರಿನ ಬೈಯಪ್ಪನಹಳ್ಳಿ ಯಲ್ಲಿರುವ ರೈಲ್ವೆ ಟರ್ಮಿನಲ್ ಗೆ  ಸರ್ ಎಂ.ವಿ ವಿಶ್ವೇಶ್ವರಯ್ಯ ಟರ್ಮಿನಲ್ ಎಂದು  ಹೆಸರಿಡಲಾಗಿದೆ..
ವಿಶ್ವೇಶ್ವರಯ್ಯನವರ ಅತ್ಯದ್ಭುತವಾದ ಸೇವೆ ಹಾಗೂ ಕೊಡುಗೆಗಾಗಿ ಹಲವಾರು ಸನ್ಮಾನ ಪ್ರಶಸ್ತಿಗಳು ಅವರ ಅರಿಸಿಕೊಂಡು ಬಂತು. ಭಾರತದ ಸ್ವಾತಂತ್ರ್ಯ ಪಡೆದ ನಂತರ ವಿಶ್ವೇಶ್ವರಯ್ಯ ಅವರು 1955ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವ ʼಭಾರತ ರತ್ನʼವನ್ನು ಪಡೆದರು. ಅವರ ಲಂಡನ್ ಸಿವಿಲ್ ಇಂಜಿನಿಯರ್ ಸಂಸ್ಥೆಯಿಂದ ಗೌರವ ಸದಸ್ಯತ್ವವನ್ನು ಪಡೆದರು..ಭಾರತದ ಎಂಟು ವಿಶ್ವವಿದ್ಯಾನಿಲಯಗಳಿಂದ ಅವರು ಗೌರವ ಡಾಕ್ಟರೇಟ್‌ ಪಡೆದರು. 1923ರ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.
ವಿಶ್ವೇಶ್ವರಯ್ಯನವರ ಸ್ವಭಾವದ ಬಹುಮುಖ್ಯ ಅಂಶವೆಂದರೆ ಕನ್ನಡ ಭಾಷೆಯ ಮೇಲಿನ ಪ್ರೀತಿ. ಕನ್ನಡದ ಸುಧಾರಣೆಗಾಗಿ ಕನ್ನಡ ಪರಿಷತ್ತನ್ನು ಸ್ಥಾಪಿಸಿದರು .ಕನ್ನಡ ಬೆಂಬಲಿಸುವವರಿಗೆ ವಿಚಾರ ಸಂಕಿರಣಗಳನ್ನು ಕನ್ನಡದಲ್ಲಿ ಸ್ಥಾಪಿಸಿ ನಡೆಸಬೇಕೆಂದು ಅವರು ಬಯಸಿದ್ದರು.
ಅನೇಕ ಕ್ಷೇತ್ರಗಳಲ್ಲಿ ಬಹಳಷ್ಟು ಕೆಲಸವನ್ನು ಮಾಡಿ 102 ವರ್ಷ ತುಂಬು ಬದುಕನ್ನು ಕರ್ಮ ಯೋಗಿಯಂತೆ ಬಾಳಿದ ಭಾರತರತ್ನ ಮೋಕ್ಷಗೊಂಡ ವಿಶ್ವೇಶ್ವರಯ್ಯನವರು ನಮ್ಮ ದೇಶ ಕಂಡಂತಹ ಅಸಾಧಾರಣ, ಮೇಧಾವಿ ಇಂಜಿನಿಯರ್ ದಕ್ಷ ಆಡಳಿತಗಾರ ಪ್ರಾಮಾಣಿಕ ಸಹೃದಯ ಅಪ್ರತಿಮ ಬುದ್ಧಿವಂತ. ಭಾರತ ಇತಿಹಾಸದಲ್ಲಿಯೇ ಇವರನ್ನು ಮೀರಿಸುವಂತಹ ಮತ್ತೊಬ್ಬ ಪ್ರತಿಭಾವಂತ ವ್ಯಕ್ತಿ ಎಲ್ಲೂ ಸಿಗುವುದಿಲ್ಲ ಎಂದು ಹೇಳುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಇವರ ಬದುಕು ಸಾಧನೆ ಅರಿತುಕೊಳ್ಳುವುದೆಂದರೆ  ಆದರ್ಶದ ಉದಾಹರಣೆಯಾಗಿದೆ. ಇಂದಿನ ಯುವ ಪೀಳಿಗೆಗೆ ಇವರ ಆದರ್ಶಪ್ರಾಯ ಜೀವನ ಅತ್ಯುತ್ತಮ ಉದಾಹರಣೆಯಾಗಿ ಪ್ರಜ್ವಲಿಸುತ್ತದೆ. ಅಂಥ  ಧೀಮಂತ ವ್ಯಕ್ತಿತ್ವ ಸರ್ ಎಂ ವಿ ಅವರದು. ಇವರ ಕಾರ್ಯಕ್ಷೇತ್ರ ಇವರ ದೂರದೃಷ್ಟಿ ಸಮಾಜಮುಖಿ ಯೋಜನೆಗಳಿಗೆ ನಮೋನಮಃ.
             
 

No comments:

Post a Comment