ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, October 6, 2024

"ಗುಬ್ಬಚ್ಚಿ ಉಳಿಸಿ, ಜೀವ ವೈವಿಧ್ಯ ಪೋಷಿಸಿ".

"ಗುಬ್ಬಚ್ಚಿ ಉಳಿಸಿ, ಜೀವ ವೈವಿಧ್ಯ ಪೋಷಿಸಿ". 

ಡಾ. ಎಲ್. ಶಶಿಕುಮಾರ್    
ವೈಜ್ಞಾನಿಕ ಅಧಿಕಾರಿ

ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ

ಜೀವಶಾಸ್ತ್ರ  ವಿಭಾಗ, ಜಲಪುರಿ

ಕೆ.ಪಿ.ಎ. ಆವರಣ, ಮೈಸೂರು.


ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವೆ ಯಾರನ್ನು?  

ಆಚೆ ಈಚೆ ಕೊಂಕಿಸಿ ಕೊರಳನು ನೋಡುವೆ ಏನನ್ನು ?

ಬಾಲ್ಯದ ಈ ಶಿಶು ಗೀತೆಯನ್ನು ಮರೆಯಲಾದೀತೆ? ಬಾಲ್ಯದ ಆ ನೆನಪುಗಳು ಗುಬ್ಬಚ್ಚಿಯೊಂದಿಗಿನ ಬಾಲ್ಯದ ಸಂವೇದನೆಗಳಿಂದು ಕಾಣುವುದೇ ಅಪರೂಪವಾಗಿವೆ. ನಿಸರ್ಗದ ಪುಟ್ಟ ಪಕ್ಷಿಯಾದ ಗುಬ್ಬಚ್ಚಿಯು ಇತ್ತೀಚಿನ ವರ್ಷಗಳಲ್ಲಿ ಕಾಣುತ್ತಿಲ್ಲ ಎನ್ನುವ ಮಾತು ಪಟ್ಟಣ ಪ್ರದೇಶಗಳಲ್ಲಿ ಆಗಾಗ ಕೇಳಿಬರುತ್ತಿವೆ. ಗುಬ್ಬಚ್ಚಿಗಳು ಕಾಣೆಯಾಗಿರುವುದಕ್ಕೆ ಹಲವಾರು ಕಾರಣಗಳು ಸುದ್ಧಿ ಮಾಡುತ್ತಿವೆ. ವಾಸ್ತವವಾಗಿ ಮಹಾನಗರಗಳು ಹಾಗೂ ಪಟ್ಟಣ ಪ್ರದೇಶಗಳಲ್ಲಿ ಈಗ ಅವುಗಳಿಲ್ಲ. ಇದ್ದರೂ ಸಹ ಅತಿ ವಿರಳವಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ.

ಪ್ರಪಂಚದಾದ್ಯಂತ ಕಂಡುಬರುವ ಗುಬ್ಬಚ್ಚಿಯ ವೈಜ್ಞಾನಿಕ ಹೆಸರು Passer domesticus, ಇಂಗ್ಲಿಷನಲ್ಲಿ ಇದನ್ನು ಹೌಸ್ ಸ್ಪಾರೋ ಎನ್ನುತ್ತಾರೆ. ಗುಬ್ಬಚ್ಚಿಗಳಲ್ಲಿ ಹೆಣ್ಣು ಮತ್ತು ಗಂಡುಗಳಿಗೆ ವ್ಯತ್ಯಾಸ ಗುರುತಿಸಬಹುದು. ಗಂಡು ಹಕ್ಕಿಯ ರೆಕ್ಕೆ ಕೆನ್ನೆ, ತಲೆಯು ಕಂದು ಕೆಂಪು ಬಣ್ಣ ಇರುತ್ತದೆ. ಹೊಟ್ಟೆಯ ಭಾಗ ಬೂದು ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಬೂದು ಬಣ್ಣ ಹೊಂದಿದ್ದು, ರೆಕ್ಕೆಯ ಮೇಲೆ ಕಪ್ಪು ಪಟ್ಟಿಗಳಿರುತ್ತದೆ. ತಾಯಿ ಹಕ್ಕಿ ಒಂದು ಬಾರಿಗೆ 4 ರಿಂದ 7 ಮೊಟ್ಟೆಯಿಟ್ಟು ಕಾವು ಕೊಡುತ್ತದೆ. ಮೊಟ್ಟೆಯೊಡೆದು ಹೊರ ಬಂದ ಮರಿಗಳಿಗೆ ಹುಳು ಹುಪ್ಪಟೆ ತಂದು ಗುಟುಕು ಕೊಟ್ಟು ಸಾಕುತ್ತವೆ. ಗುಬ್ಬಚ್ಚಿಗಳ ಸಂಸಾರ ನೋಡಲು ಬಲು ಚಂದ!

    ಯುರೋಪ್, ಏಷ್ಯಾ, ಮಡಿಟರೇನಿಯನ್ ಪ್ರದೇಶ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಗುಬ್ಬಚ್ಚಿ ಕಂಡುಬರುತ್ತದೆ. ಭಾರತದ ಪಶ್ಚಿಮ ಮತ್ತು ಪೂರ್ವ ಹಿಮಾಲಯ ಪ್ರದೇಶದಲ್ಲೂ ಇವು ನೆಲೆ ಕಂಡುಕೊಂಡಿವೆ. ಗುಬ್ಬಚ್ಚಿಯು ಸುಮಾರು 14 ರಿಂದ 18 ಸೆಂ.ಮಿಗಳಷ್ಟು ಉದ್ಧವಿರುತ್ತದೆ. ಗುಬ್ಬಚ್ಚಿಯ ಚಿಲಿಪಿಲಿ ಶಬ್ದವು ಕಡಿಮೆ ಸ್ಥಾಯಿಯದಾಗಿದ್ದು ಆಗಾಗ್ಗೆ ಚಿಲಿಪಿಲಿಗುಟ್ಟುವ ಕರೆಯಲ್ಲಿ ಏರಿಳಿತವಿರುತ್ತದೆ. ಜೀವಶಾಸ್ತ್ರೀಯವಾಗಿ ಇದು ಪ್ಯಾಸಿರೆಡೆ ಕುಟುಂಬಕ್ಕೆ ಸೇರಿದ ಪಕ್ಷಿ ಎಂದು ಗುರುತಿಸಲಾಗಿದೆ.

ಹಿಂದಿಯಲ್ಲಿ ಗೊರೈಯಾ ಮಾರಾಠಿಯಲ್ಲಿ ‘ಚಿಮನಿ’ ಗುಜರಾತಿಯಲ್ಲಿ ‘ಚಕ್ಲಿ’ ತೆಲುಗಿನಲ್ಲಿ ಪಿಚ್ಚುಕಾ’, ತಮಿಳು ಹಾಗೂ ಮಲಯಾಳಂನಲ್ಲಿ ‘ಕುರು’ ಪಂಜಾಬಿ ಭಾಷೆಯಲ್ಲಿ ‘ಚಿರಿ’ ಎಂದು ಕರೆಯುವ ಪಕ್ಷಿಯನ್ನು ಕನ್ನಡದಲ್ಲಿ ಗುಬ್ಬಚ್ಚಿ’ ಎಂದು ಗುರುತಿಸಲಾತಿದೆ. 

ಗುಬ್ಬಚ್ಚಿ ಗೂಡು ಕಟ್ಟುವ ಕೌಶಲ್ಯ ಸಾಟಿಯೇ ಇಲ್ಲ ಎಂದು ಜೀವಶಾಸ್ತ್ರಜ್ಞರು ಹೇಳುತ್ತಾರೆ. ಒಣಗಿದ ಹುಲ್ಲು, ಕಡ್ಡಿ ಎಳೆದು ತಂದು ದಿನವಿಡೀ ಶ್ರಮವಹಿಸಿ ಗುಬ್ಬಚ್ಚಿ ಗೂಡುಕಟ್ಟುತ್ತದೆ. ಗೂಡು ನಿರ್ಮಿಸುವಲ್ಲಿ ಹೆಣ್ಣು ಗುಬ್ಬಚ್ಚಿ ಪಾತ್ರ ಹಿರಿದು!! ಗಂಡು ಗುಬ್ಬಚ್ಚಿ ಸಹಾಯಕ ಮಾತ್ರ. ಕಾಳುಭಕ್ಷಕ ಪಕ್ಷಿ ಎಂದು ಕರೆಯಲಾಗುವ ಗುಬ್ಬಚ್ಚಿ , ಸಣ್ಣ ಸಣ್ಣ ಕೀಟಗಳನ್ನು ಸಹ ತಿನ್ನುತ್ತದೆ. ಹಾಗಾಗಿ ಗುಬ್ಬಚ್ಚಿ ರೈತನ ಗೆಳೆಯನೂ ಹೌದು.

ಗುಬ್ಬಚ್ಚಿಗಳು ಹಿಂಡು ಹಿಂಡಾಗಿ ಧಾನ್ಯಗಳ ಮೇಲೆ ಎರಗಿ ಭಕ್ಷಿಸುತ್ತದೆ. ರೈಸ್ ಮಿಲ್ ಧಾನ್ಯಸಂಗ್ರಹ ಮಳಿಗೆಗಳ ಮುಂಭಾಗ, ಮನೆಯ ಹೊರಾಂಗಣ, ಹಿತ್ತಲು, ಕಟ್ಟಡಗಳು, ಕಾಂಪೌಂಡುಗಳ ಮೇಲೆ ಕಾಣುತ್ತಿದ್ದ ಇವುಗಳು ಈಗ ಅಪರೂಪದ ಅತಿಥಿಗಳಾಗುತ್ತಿರುವುದು ವಿಪರ್ಯಾಸ.

ಹಿಂದೆ ನಾಡ ಹಂಚಿನ ಮನೆಗಳು, ಮಂಗಳೂರು ಹೆಂಚಿನ ಮನೆಗಳು ಎಲ್ಲೆಲ್ಲೂ ಸರ್ವೇ ಸಾಮಾನ್ಯವಾಗಿದ್ದ‌ ಕಾಲದಲ್ಲಿ, ಈ ಮನೆಗಳ ಸೂರಿನಡಿಯಲ್ಲಿ, ಗೋಡೆಯ ಪೊಟರೆಗಳಲ್ಲಿ ಗುಬ್ಬಚ್ಚಿಗಳಿಗೆ ಗೂಡು ಕಟ್ಟಿಕೊಂಡು ಮರಿ ಮಾಡಲು ಸಾಕಷ್ಟು ಸ್ಥಳಾವಕಾಶವಿತ್ತು. ಎಲ್ಲೆಂದರಲ್ಲಿ ಗೂಡು ಕಟ್ಟಿ ಮರಿ ಮಾಡುತ್ತಿದ್ದ ಗುಬ್ಬಚ್ಚಿಗಳಿಗೆ ಇಂದು ಹೆಂಚಿನ ಮನೆಗಳೆ ಸಿಗುತ್ತಿಲ್ಲ. ಹೆಂಚನ್ನು ತೆಗೆದು ತಗಡು ಹಾಕಿಸಿದ್ದೇವೆ ಅಥವಾ ಆರ್.ಸಿ.ಸಿ. ಹಾಕಿಸಿದ್ದೇವೆ. ಹೀಗೆ ಬದಲಾದ ಪರಿಸರದಲ್ಲಿ ಗುಬ್ಬಚ್ಚಿಯ ಆವಾಸಸ್ಥಾನ ಕಡಿಮೆಯಾಗಿ ಅವುಗಳ ಸಂಖ್ಯೆಯೂ ಕ್ಷೀಣಿಸಿದೆ.

ಮಾನವನ ನಾಗರೀಕತೆಯೊಂದಿಗೆ ಗುಬ್ಬಚ್ಚಿಗಳ ಬದುಕು ಬೆಸೆದಿದೆ. ಜನಪದ ಕಾವ್ಯಗಳಲ್ಲಿ ಇವುಗಳ ವರ್ಣನೆ ಕಾಣಬಹುದಾಗಿದೆ. ಗುಬ್ಬಚ್ಚಿಗೆ ದೆಹಲಿಯ ರಾಜ್ಯ ಪಕ್ಷಿಯ ಸ್ಥಾನ ಸಿಕ್ಕಿದೆ. ಇವುಗಳ ಇರುವಿಕೆಯು ಆರೋಗ್ಯಪೂರ್ಣ ಸಮಾಜದ ಸಂಕೇತ.  ಆಹಾರ ಸರಪಳಿಯಲ್ಲಿ ಗುಬ್ಬಚ್ಚಿಯ ತನ್ನದೇ ಆದ ಪಾತ್ರವನ್ನು ಹೊಂದಿದೆ.

2010ರಲ್ಲಿ ‘ರಾಷ್ಟ್ರೀಯ ಕೃಷಿ ಅನುಸಂಧಾನ ಪರಿಷತ್’ ದೇಶದಲ್ಲಿ ಗುಬ್ಬಚ್ಚಿಗಳ ಬಗ್ಗೆ ಅಧ್ಯಯನ ಕೈಗೊಂಡಿತು. ಇದರಿಂದ ನೆರೆಯ ಆಂಧ್ರಪ್ರದೇಶದಲ್ಲಿ ಇವುಗಳ ಸಂಖ್ಯೆ ಶೇ 80ರಷ್ಟು ಕ್ಷೀಣಿಸಿರುವ ಸಂಗತಿ ಬಯಲಾಗಿದೆ. ಕೇರಳ, ಗುಜರಾತ್, ರಾಜಸ್ತಾನದಲ್ಲಿ ಗುಬ್ಬಿ ಸಂಕುಲ ಹೆಚ್ಚು ಅಪಾಯಕ್ಕೆ ಸಿಲುಕಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಮುಂಬೈ ಹೆದರಾಬಾದ್ ಮತ್ತು ಬೆಂಗಳೂರು ನಂತರ ಬೃಹತ್ ಮಹಾನಗರಗಳ ಜನರ ಗಜಿಬಿಜಿ ಬದುಕಿನ ನಡುವೆ ಗುಬ್ಬಿಗಳ ಸ್ವರ ಕ್ಷೀಣಿಸಿದೆ. ಅರೆ ಪಟ್ಟಣ, ಹೋಬಳಿ ಪ್ರದೇಶಗಳ ಸ್ಥಿತಿಯೂ ಭಿನ್ನವಾಗೇನು ಉಳಿದಿಲ್ಲ. ಇನ್ನು ಗ್ರಾಮೀಣ ಪ್ರದೇಶದಲ್ಲೂ ಇವುಗಳ ವಾಸದ ನೆಲೆ ಕಿರಿದಾಗುತ್ತಿದೆ.

ಗುಬ್ಬಚ್ಚಿಗಳ ಸಂಖ್ಯೆ ಇಳಿಮುಖವಾಗಿರುವುದು ಭಾರತದಲ್ಲಷ್ಟೇ ಅಲ್ಲ. ನೆದರ್‌ಲ್ಯಾಂಡ್ ದೇಶದಲ್ಲಿ ಇವುಗಳ ಸಂಖ್ಯೆ ಎಷ್ಟು ಕಡಿಮೆಯಾಗಿದೆ ಎಂದರೆ ಇವುಗಳನ್ನು ಅತ್ಯಂತ ಅಪಾಯದ ಅಂಚಿನಲ್ಲಿರುವ ಜೀವಿಗಳು ಎಂದು ಕೆಂಪು ಪಟ್ಟಿಗೆ ಸೇರಿಸಲಾಗಿದೆ! ಇಂಗ್ಲೆಂಡ್‌ನಲ್ಲಿ ಇವುಗಳ ಸಂಖ್ಯೆ ಗಮನಾರ್ಹವಾಗಿ ಇಳಿದಿದ್ದು ‌, ಶೇ 85ರಷ್ಟು ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಗುಬ್ಬಚ್ಚಿಗಳು ಕಡಿಮೆಯಾಗಿರುವುದನ್ನು ಗುರುತಿಸಿದ್ದರೂ ಅದರ ಪ್ರಮಾಣ ಎಷ್ಟೆಂಬ ಅಂದಾಜು ಇಲ್ಲ. ಆದರೆ ಅವುಗಳ ಸಂಖ್ಯೆ ನಿಸ್ಸಂದೇಹವಾಗಿ ಇಳಿಮುಖವಾಗಿದೆ.

ಹಳ್ಳಿಗಳಲ್ಲಿ ಈ ಹಿಂದೆ ಭತ್ತವನ್ನು ಮನೆಯ ಹೊರಾಂಗಣದಲ್ಲಿ ಒಣಗಿಸಲಾಗುತ್ತಿತ್ತು. ಮಹಿಳೆಯರು ಭತ್ತ ಶುಚಿಗೊಳಿಸುತ್ತಿದ್ದರು. ಮಣ್ಣು ಮೆತ್ತಿಕೊಂಡ ಭತ್ತವನ್ನು ಒಂದೆಡೆ ಸುರಿಯುತ್ತಿದ್ದರು. ಗುಬ್ಬಚ್ಚಿಗಳು ತಮ್ಮ ಕೊಕ್ಕಿನಿಂದ ಅಕ್ಕಿ ಬೇರ್ಪಡಿಸಿ ತಿನ್ನುತ್ತಿದ್ದವು. ಪ್ರಸ್ತುತ ಅಂತಹ ಸಾಂಸ್ಕೃತಿಕ ಬದುಕು ಗ್ರಾಮೀಣ ಸೊಗಡಿನಿಂದ ಮರೆಯಾಗಿ ಹಲವಾರು ವರುಷಗಳೇ ಉರುಳಿವೆ. ಎಲ್ಲೆಡೆ ಈಗ ಮನೆಯ ವಾಸ್ತುಶಿಲ್ಪದ್ದೇ ವಿಷಯ. ಹಾಗಾಗಿ ನಗರ ಪ್ರದೇಶಗಳಲ್ಲಿ ಪಕ್ಷಿಸ್ನೇಹಿ ಮನೆಗಳು ಕಣ್ಮರೆಯಾಗಿ ಬೆಂಕಿಪೊಟ್ಟಣ ಮಾದರಿ ಹೋಲುವ ಮನೆಗಳು ನಿರ್ಮಾಣವಾಗುತ್ತಿವೆ. ಇಂತಹ ಮನೆಯ ಮತ್ತು ಅಪಾರ್ಟ್ಮೆಂಟ್ ಗೋಡೆಗಳ ವಿನ್ಯಾಸ ಅವುಗಳಿಗೆ ಗೂಡುಕಟ್ಟಲು ಪೂರಕವಾಗಿಲ್ಲ.

ಮನೆ ಅಂಗಳದಲ್ಲಿ ಇಣುಕಿ ನೋಡಿದರೆ ಕಾಣಸಿಗುತ್ತಿದ್ದ ಗುಬ್ಬಿಗಳು ಅಳಿವಿನಂಚಿಗೆ ತಲುಪುತ್ತಿರುವುದು ಮನುಕುಲ ತಲೆತಗ್ಗಿಸುವಂತೆ ಮಾಡಿದೆ. ಅವುಗಳ ಸಂಖ್ಯೆ ಕ್ಷೀಣಿಸಲು ನೆಲೆ ನಾಶವೇ ಮೂಲ ಕಾರಣವಾಗಿದೆ. ಇಷ್ಟೆ ಅಲ್ಲದೆ ಗೊಬ್ಬರ, ಕೀಟನಾಶಕ ತಿಂದು ಗುಬ್ಬಚ್ಚಿಗಳು ಸಾಯುತ್ತಿವೆ. ಪೆಟ್ರೋಲ್ ದಹಿಸಿದಾಗ ಉತ್ಪನ್ನವಾಗುವ ಮಿಥೈಲ್ ನೈಟ್ರೇಟ್, ಕೀಟಗಳ ಹೊಟ್ಟೆ ಸೇರಿ ಗುಬ್ಬಚ್ಚಿಗಳ ಸಾವಿಗೂ ಕಾರಣವಾಗುತ್ತಿದೆ. ಇನ್ನು ಮೊಬೈಲ್ ಟವರ್‌ಗಳಿಂದ ಹೊರಹೊಮ್ಮುವ ತರಂಗಗಳಿಂದ ಗುಬ್ಬಚ್ಚಿ ಮೊಟ್ಟೆಗಳು ನಾಶವಾಗುತ್ತಿವೆ ಎಂದು ಅಧ್ಯಯನಲ್ಲಿ ಹೇಳಲಾಗುತ್ತಿದೆ.

ಸ್ನೇಹಜೀವಿಯಾದ ಗುಬ್ಬಚ್ಚಿಯನ್ನು ಕಳೆದುಕೊಳ್ಳುವ ಮನ್ನ ಒಮ್ಮೆ ಯೋಚಿಸುವ ಅಗತ್ಯವಿದೆ. ನಮ್ಮ ಮನೆಗಳ ಮುಂದೆಯೇ ಕೃತಕ ಗೂಡುಗಳನ್ನಿಟ್ಟು ನೀರು, ಕಾಳುಗಳನ್ನು ಒದಗಿಸಿ ಒಂದಿಷ್ಟು, ಪ್ರೀತಿ ಕಾಳಜಿ ತೋರಿಸಿದರೆ ಗುಬ್ಬಚ್ಚಿ ಚಿಂವ್‌ಗುಟ್ಟುಬಹುದು.

“ಭೂಮಿ ಮೇಲಿರುವ ಯಾವುದೇ ಒಂದು ಪ್ರಭೇದ ಅಳಿದರೆ ಅದು ಇಡೀ ಮನುಕುಲಕ್ಕೆ ದೊಡ್ಡ ಆಪತ್ತು” ಎಂಬ ಅರಿವು ಎಲ್ಲರಿಗೂ ಇರಬೇಕು. ಅಂದ ಹಾಗೆ ಇತ್ತೀಚೆಗೆ ಮಾರ್ಚ್ 20ರಂದು ನಾವೆಲ್ಲರೂ ‘ವಿಶ್ವಗುಬ್ಬಿ’ ದಿನಾಚರಣೆಯನ್ನು ಆಚರಿಸಿದ್ದೇವೆ. ಈ ವರ್ಷದ ವಿಶ್ವಗುಟ್ಟು ದಿನಾಚರಣೆಯ ಧ್ಯೇಯವಾಕ್ಯ ‘ಚಿಕ್ಕ ಗುಬ್ಬಚ್ಚಿ ಪಕ್ಷಿಗಳಿಗೆ ಅವಕಾಶ ನೀಡೋಣ! ನಾನು ಗುಬ್ಬಚ್ಚಿಯನ್ನು ಪ್ರೀತಿಸುತ್ತೇನೆ ಮತ್ತು ನಾವೆಲ್ಲರೂ ಗುಬ್ಬಚ್ಚಿಯನ್ನು ಪ್ರೀತಿಸೋಣ ಎಂಬುದಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಕೃತಿಯ ಕೊಂಡಿಯಾಗಿರುವ ಗುಬ್ಬಚ್ಚಿಗಳ ಸಂರಕ್ಷಣೆಗೆ ನಾವು ಮೊದಲು ಮುಂದಾಗೋಣ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸದೇ ಪರಿಸರ ಸ್ನೇಹಿ ಯೋಜನೆಗಳನ್ನು ಹೆಚ್ಚು ಹೆಚ್ಚಾಗಿ ರೂಢಿಸಿಕೊಳ್ಳುವುದರ ಮೂಲಕ ಪುಟ್ಟಪಕ್ಷಿಯಾದ ಗುಬ್ಬಚ್ಚಿಯನ್ನು ನಾವೆಲ್ಲರೂ ಮುಂದಿನ ಪೀಳಿಗೆಗಾಗಿ ಹಾಗೂ ಪ್ರಕೃತಿಯ ಒಳಿತಿಗಾಗಿ ರಕ್ಷಿಸಲು ತುರ್ತು ಕೈಜೋಡಿಸಬೇಕಿದೆ.


No comments:

Post a Comment