ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, November 4, 2024

ಸಂದರ್ಶನ

 ರಾಯಲ್‌ ಸೊಸೈಟಿಯ ವಿಜ್ಞಾನ ಶಿಕ್ಷಕ ತರಬೇತಿದಾರರಾದ ಶ್ರೀಮತಿ ಪದ್ಮಾವತಿ ನಾಗರಾಜ್‌ ರಾವ್‌ ಅವರ ಆತ್ಮೀಯ ಪರಿಚಯ :                                                    

ಲೇಖನ :  ರಾಮಚಂದ್ರ ಭಟ್.ಬಿ.ಜಿ ಹಾಗೂ ಲಕ್ಷ್ಮಿ ಪ್ರಸಾದ ನಾಯಕ್‌  


ಅದು 70ರ ದಶಕ. ಆಗತಾನೇ RIE ಮೈಸೂರಿನಲ್ಲಿ ಕಾಲೇಜ್‌ ಶಿಕ್ಷಣ ಮುಗಿಸಿದ ಹೆಣ್ಣು ಮಗಳೊಬ್ಬಳು ತನ್ನ ಹಿರಿಯ ಸ್ನೇಹಿತೆಯ ಒತ್ತಾಸೆಯಂತೆ ಶಿಕ್ಷಕ ವೃತ್ತಿಗಾಗಿ ದೂರದ ಅರುಣಾಚಲ ಪ್ರದೇಶಕ್ಕೆ ಹೊರಡುವ ತೀರ್ಮಾನ ತೆಗೆದುಕೊಂಡು ರಸಾಯನ ವಿಜ್ಞಾನ ಶಿಕ್ಷಕರಾಗುವ ಆಸಕ್ತಿಯೊಂದಿಗೆ ಉಮೇದಿನೊಂದಿಗೆ ಹೊರಟೇ ಬಿಟ್ಟರು!!!. ಒಂದು ವಾರದ ಸುದೀರ್ಘ ರೈಲು ಪ್ರಯಾಣ. ಹೆಣ್ಣು ಮಕ್ಕಳು ಮನೆಯಿಂದ ಹೊರಬರುವ ಧೈರ್ಯವನ್ನೇ ತೋರದಿದ್ದ ಕಾಲವದು. ಇಂತಹ ಸಂದರ್ಭದಲ್ಲಿ ದೂರದ ಅರುಣಾಚಲ ಪ್ರದೇಶಕ್ಕೆ ಸ್ನೇಹಿತೆಯೊಬ್ಬಳ ಮಾತು ಕೇಳಿ ಹೊರಟ ಹೆಣ್ಡು ಮಗಳೇ ಶ್ರೀಮತಿ ಪದ್ಮಾವತಿ ನಾಗರಾಜರಾವ್. 

    ತಮಿಳುನಾಡಿನಲ್ಲಿ ಪ್ರೌಢ, ಪಿಯು ಶಿಕ್ಷಣ ಪಡೆದರೆ, ಮೈಸೂರಿನಲ್ಲಿ ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಪದವಿ ಶಿಕ್ಷಣವನ್ನು ಪಡೆದುಕೊಂಡರು. ಶಿಕ್ಷಣ ಮುಗಿಸಿ ಹೊರ ಬರುತ್ತಿದ್ದಂತೆ ಹಿರಿಯ ಸ್ನೇಹಿತೆಯೊಬ್ಬರು, ತಾನು ಅರುಣಾಚಲ ಪ್ರದೇಶದಲ್ಲಿನ ರಾಮಕೃಷ್ಣಾಶ್ರಮದ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು ನನ್ನೊಂದಿಗೆ ಬರುವೆಯಾ ಎಂದು ಕೇಳಿದ್ದೇ ತಡ, ಹಿಂದೆ ಮುಂದೆ ನೋಡದೆ,  ಹೊರಟೇ ಬಿಟ್ಟಿದ್ದರು!!!. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಬೋಧನೆ ಮಾಡಿ ಸಮೃದ್ಧ ಬೋಧನಾ  ಅನುಭವದೊಂದಿಗೆ ಮತ್ತೆ ಕರ್ನಾಟಕಕ್ಕೆ ಹಿಂದಿರುಗಿದರು. ಚಿಂತಾಮಣಿಗೆ ಬಂದು ಅಲ್ಲಿನ ಸಿಬಿಎಸ್ಸಿ ಶಾಲೆಯೊಂದರಲ್ಲಿ ಶಿಕ್ಷಕ ವೃತ್ತಿಯನ್ನು ಮುಂದುವರೆಸಿದರು. ಸುಮಾರು 20 ವರ್ಷಗಳ ಅವಧಿಯಲ್ಲಿ ಚಿಂತಾಮಣಿಯಲ್ಲಿ ವಿಜ್ಞಾನ ಶಿಕ್ಷಕರಾಗಿಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. ನಂತರ ಹರಿಹರದಲ್ಲಿ ಸಿಬಿಎಸ್‌ಸಿ ಶಾಲೆಯೊಂದರಲ್ಲಿ ಪ್ರಾಂಶುಪಾಲರಾಗಿ ದಶಕಗಳ ಕಾಲ ಕಾರ್ಯನಿರ್ವಹಿಸಿ ಕೊನೆಗೆ ಮಗನ ಭವಿಷ್ಯದ ದೃಷ್ಟಿಯಿಂದ ಬೆಂಗಳೂರು ಸೇರಿದರು. 

ಸತತವಾಗಿ  ಕ್ರಿಯಾಶೀಲತೆಯಿಂದ ಕೆಲಸ ನಿರ್ವಹಿಸುತ್ತಿದ್ದ ಯಾರಿಗೇ ಆದರೂ ಕೆಲಸವಿಲ್ಲದ ವಿಶ್ರಾಂತ ಜೀವನವನ್ನು ಊಹಿಸುವುದೂ ಕಠಿಣವೇ ಸರಿ. ಅಂತಹವರನ್ನು ಕೆಲಸವೇ ಹುಡುಕಿಕೊಂಡು ಬರುತ್ತದೆ. !!! ಹಾಗಾಗಿ ಬೆಂಗಳೂರಿನ CBSE ಶಾಲೆಯಲ್ಲಿ ಕೆಲವು ಸಮಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಅದೇ ಸಂದರ್ಭದಲ್ಲಿ ರಾಯಲ್ ಸೊಸೈಟಿ ನೀಡಿದ ಪತ್ರಿಕಾ ಪ್ರಕಟಣೆ ಅವರ ಗಮನ ಸೆಳೆಯಿತು. ಇದು ಪದ್ಮಾವತಿ ಮೇಡಂ ರವರ ಕಾರ್ಯವೈಖರಿಗೆ ಸೂಕ್ತ ಎನಿಸುವ ಪ್ಲಾಟ್‌ ಫಾರಂ ನಂತೆ ಕಾಣಿಸಿತು. ತಮ್ಮ ಬಿಡುವಿನ ವೇಳೆಯಲ್ಲಿ ಕಾರ್ಯ ನಿರ್ವಹಿಸುವ ಸದವಕಾಶವಿತ್ತು. ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ, ಭಾರತದಲ್ಲಿ ರಸಾಯನ ವಿಜ್ಞಾನ ಶಿಕ್ಷಣದ ಕುರಿತು ಶಿಕ್ಷಕರಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿತ್ತು. ಈ ದಿಸೆಯಲ್ಲಿ ಶಿಕ್ಷಕ ತರಬೇತುದಾರರಾಗಿ ಕಾರ್ಯನಿರ್ವಹಿಸಲು  ಅರ್ಜಿಯನ್ನು ಆಹ್ವಾನಿಸಿತ್ತು.  ಅರ್ಜಿ ಸಲ್ಲಿಸಿದ ಪದ್ಮಾವತಿಯವರು ಸಂದರ್ಶನ ಎದುರಿಸಿ ಶಿಕ್ಷಕ ತರಬೇತುದಾರರಾಗಿ ಆಯ್ಕೆಗೊಂಡರು. ಆಯ್ಕೆಯಾದ ಆಭ್ಯರ್ಥಿಗಳಿಗೆ ಬಾಂಬೆಯಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಯಿತು. ಈ ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ಸಿಪ್ಲಾ ಫಾರ್ಮಾಸ್ಯುಟಿಕಲ್ಸ್ ಸಂಸ್ಥೆಯ ಮುಖ್ಯಸ್ಥರಾದ ಖ್ಯಾತ ವಿಜ್ಞಾನಿ, ಬಿಲಿಯನೇರ್‌  ಡಾ. ಹಮೀದ್‌  ಯೂಸುಫ್‌ ರವರ ಪ್ರಾಯೋಜಕತ್ವವಿದೆ. 

 ಇಂದು ಭಾರತದೇಶವು ಅಂರಾಷ್ಟ್ರೀಯ ಮಟ್ಟದಲ್ಲಿ ಅತಿ  ಹೆಚ್ಚಿನ ಪ್ರಮಾಣದ ರಾಸಾಯನಿಕ ಔಷಧಗಳನ್ನು ಉತ್ಪತ್ತಿ ಮಾಡುವ ದೇಶವಾಗಿದೆ. ಆದರೆ ಈ ಔಷಧಿಗಳ ಪ್ರಮುಖ ಸಂಯೋಜನೆ ವಿದೇಶಿ ಶಕ್ತಿಗಳದ್ದಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಈ ಕ್ಷೇತ್ರದಲ್ಲಿ ಸಂಶೋಧನೆಗಳಿಗೆ ಉತ್ತೇಜನ ನೀಡಲು, ವಿದ್ಯಾರ್ಥಿಗಳಲ್ಲಿ ರಸಾಯನ ಶಾಸ್ತ್ರದ ಕುರಿತು ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಣ ಪ್ರಮುಖ ಮಾಧ್ಯಮ ಎಂಬುದನ್ನು ಮನಗಂಡಿತು. ಶಿಕ್ಷಕರಿಗೆ ರಸಾಯನಶಾಸ್ತ್ರದಲ್ಲಿ ಪ್ರಾಯೋಗಿಕ ತರಬೇತಿ ನೀಡುವ ಸಲುವಾಗಿ ಸಿಪ್ಲಾ ಫಾರ್ಮಸ್ಯುಟಿಕಲ್, ರಾಯಲ್ ಸೊಸೈಟಿ ಆಫ್‌ ಕೆಮಿಸ್ಟ್ರಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಭಾರತದಲ್ಲಿನ ಈ ಶೈಕ್ಷಣಿಕ ಯೋಜನೆಗೆ ತನ್ನ CSR ಧನರಾಶಿಯನ್ನು ಬಳಸುವ ಮೂಲಕ ಪ್ರಾಯೋಜಕತ್ವವನ್ನು ನೀಡಿತು. ಈ ಯೋಜನೆಯ ಮೂಲಕ ಶ್ರೀಮತಿ ಪದ್ಮಾವತಿಯವರು ರಾಜ್ಯದಾದ್ಯಂತ  ಅನೇಕ ತರಬೇತಿ ಕಾರ್ಯಾಗಾರಗಳನ್ನು  ನಡೆಸಿಕೊಟ್ಟರು. ಶಿಕ್ಷಕರ ಕೋರಿಕೆಯ ಮೇರೆಗೆ 25-30 ಜನರ ಶಿಕ್ಷಕರ ತಂಡವಾಗಿರಲಿ  ಅಥವಾ ರಾಜ್ಯ, ಜಿಲ್ಲಾ ಅಥವಾ ತಾಲ್ಲೂಕು ಮಟ್ಟದ ವಿಜ್ಞಾನ ಶಿಕ್ಷಕರ ತರಬೇತಿ ಕಾರ್ಯಾಗಾರಗಳಾಗಿರಲಿ, ವಿವಿಧ ತರಬೇತಿಗಳಲ್ಲಿ ಪಾಲ್ಗೊಂಡು  ಶಿಕ್ಷಕರಿಗೆ ಉಚಿತ ಪ್ರಾಯೋಗಿಕ ತರಬೇತಿಯನ್ನು ನೀಡಲಾರಂಭಿಸಿದರು. ಹೀಗೆ ಹಲವಾರು ವರ್ಷಗಳ ಕಾಲ ತಮ್ಮ ಬಿಡುವಿನ ವೇಳೆಯಲ್ಲಿ ವಿವಿಧ ಶಿಕ್ಷಕ ತರಬೇತಿಗಳನ್ನು ನಡೆಸಿದ್ದಲ್ಲದೇ, ರಾಯಲ್‌ ಸೊಸೈಟಿ, JNCASR, IISc ಸಂಸ್ಥೆಗಳ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ ನಡೆಸಲಾಗುತ್ತಿದ್ದ ಹಲವಾರು ಸನಿವಾಸ ವಿಜ್ಞಾನ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡು ಮಾರ್ಗದರ್ಶನ ನೀಡುತ್ತಿದ್ದರು. ಇಂತಹ ಒಂದು ಸಾಲ್ಟರ್ಸ್‌ ಕೆಮಿಸ್ಟ್ರಿ ಕ್ಯಾಂಪ್‌ಗೆ ನಮ್ಮ ಶಾಲೆಯ ಮಕ್ಕಳನ್ನೂ ಕರೆದೊಯ್ದಿದ್ದೆ. ನಮ್ಮ ವಿದ್ಯಾರ್ಥಿಗಳಿಗೆ ಭಾರತರತ್ನ ಸಿ.ಎನ್.ಆರ್‌ ರಾವ್‌ರವರನ್ನು ಭೇಟಿ ಮಾಡುವ ಅಪರೂಪದ ಅವಕಾಶ. 

ಈ ತರಬೇತಿಗಳ ಅತ್ಯಂತ ಪ್ರಮುಖ ಆಕರ್ಷಣೆ ಅಂದರೆ ಒಂದು ಹನಿ ರಾಸಾಯನಿಕ ಬಳಸಿ ಪ್ರಯೋಗ ನಡೆಸುವ ಮೈಕ್ರೋ ಸ್ಕೇಲ್‌ ಎಕ್ಸ್ಪರಿಮೆಂಟ್ಸ್‌. ಪ್ರನಾಳಗಳು ಬೀಕರ್‌ಗಳಿಲ್ಲದಿದ್ದರೂ ಯಾವುದೇ ಸಬೂಬು ಹೇಳದೇ ಪ್ರಯೋಗ ನಡೆಸಲು ಈ ವಿಧಾನ ಸಹಕಾರಿ!!!. ಯಾವುದೇ ಅನಗತ್ಯ ಉಪಕರಣ ಬಳಸದೇ, ಕೇವಲ ಪ್ಲಾಸ್ಟಿಕ್‌ ಹಾಳೆ ಬಳಸಿ ಅನೇಕ ರಾಸಾಯನಿಕ ಕ್ರಿಯೆಗಳನ್ನು ನಡೆಸಬಹುದು. ಕೆಲವು ವರ್ಷಗಳ ಹಿಂದೆ, ರಾಷ್ಟ್ರಪ್ರಶಸ್ತಿ ವಿಜೇತ ಸ್ನೇಹಿತ  ನಾಗರಾಜ್‌ ಸಿ.ಎಂ.‌ರವರು ಇದೇ ಮೈಕ್ರೋ ಸ್ಕೇಲ್‌ ಎಕ್ಸ್ಪರಿಮೆಂಟ್ಸ್‌ ತಂತ್ರ ಬಳಸಿಕೊಂಡು ರಾಜ್ಯಮಟ್ಟದ ಶಿಕ್ಷಕರ ಪಠ್ಯೇತರ ಚಟುವಟಿಕೆಗಳಲ್ಲಿ  ಮೊದಲ ಸ್ಥಾನ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು. ಇವುಗಳಲ್ಲದೇ ಟಾರ್ಸಿಯ ಗ್ರಿಡ್‌, ಅಣುಸೂತ್ರ, ರಾಸಾಯನಿಕ ಕ್ರಿಯೆಗಳ ವಿಧಗಳು, ಸರಳವಾಗಿ ಮನೆಯಲ್ಲೇ ಸಿಗುವ ವಸ್ತುಗಳಿಂದ ಮಾಡಿದ ಮಾದರಿಗಳು, ಜೀವಶಾಸ್ತ್ರ ಮತ್ತು ಭೌತಶಾಸ್ತ್ರದ ಹಲವು ಪರಿಕಲ್ಪನೆಗಳು, ಪರಿಸರ ವಿಜ್ಞಾನದ ಹಲವು ಪ್ರಯೋಗಗಳು ಅವರ ಬತ್ತಳಿಕೆಯಲ್ಲಿವೆ. ಇದಲ್ಲದೇ ತಾವೇ ಹಲವಾರು ವಿಡಿಯೋಗಳನ್ನು ಮಾಡಿ YouTubeನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ವಿಡಿಯೋ ಲಿಂಕ್‌ ಕೊಂಡಿ https://www.youtube.com/@you2can286

ಕರೋನ ಸಾಂಕ್ರಾಮಿಕ ಕಾಯಿಲೆ ವಿಶ್ವವನ್ನು ಆವರಿಸಿದ ಸಂದರ್ಭ. ಅಚ್ಚರಿ ಎಂದರೆ ಆಗ ತಾವೇ ವಿಡಿಯೋ ಚಿತ್ರೀಕರಣ ಮಾಡಿ, ತಾವೇ ಹೊಸತಾಗಿ ಎಡಿಟಿಂಗ್‌ ಕಲಿತು ವಿಡಿಯೋ ತಯಾರಿಸಿ, ಕ್ರಿಯಾಶಿಲತೆಯಿಂದ ಶೈಕ್ಷಣಿಕ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದರು.  ಆ ಸಂದರ್ಭದಲ್ಲಿ ಶ್ರೀಮತಿ ಪದ್ಮಾವತಿಯವರನ್ನು DSERTಯಲ್ಲಿ ನಡೆದ ತರಬೇತಿಯೊಂದಕ್ಕೆ ಆಹ್ವಾನಿಸಿದ್ದೆ. ಅವರು DSERT ಗೆ ಬಂದು ಯಾವುದೇ ಪ್ರತಿಫಲ ಸ್ವೀಕರಿಸದೇ ನಮ್ಮ ಶಿಕ್ಷಕರಿಗೆ ಉಚಿತ ಪ್ರಾಯೋಗಿಕ ತರಬೇತಿ ನೀಡಿದ್ದನ್ನು ಮರೆಯುವಂತಿಲ್ಲ.  ಈ ಇಳಿ ವಯಸ್ಸಿನಲ್ಲೂ ತರಬೇತಿಗಾಗಿ ತಮ್ಮದೇ ಕಿಟ್‌ಗಳನ್ನು ಮಾಡಿಕೊಂಡು, ಅವನ್ನೆಲ್ಲ ಹೊತ್ತೊಯ್ದು ದೂರದ ಪ್ರದೇಶಗಳಿಗೆ ಹೋಗಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ತರಬೇತಿ ನಡೆಸಿಕೊಡುತ್ತಿದ್ದುದು ನಮ್ಮೆಲ್ಲರಿಗೂ ಅನುಕರಣೀಯ ಗುಣವೇ ಸರಿ. ವಿಜ್ಞಾನ ಶಿಕ್ಷಣಕ್ಕಾಗಿ ತಮ್ಮ ಬದುಕನ್ನು ಮೀಸಲಾಗಿಟ್ಟ, ಶಿಕ್ಷಕರಿಗೆ ರೋಲ್‌ ಮಾಡೆಲ್‌ ಆಗಿರುವ ಶ್ರೀಮತಿ ಪದ್ಮಾವತಿಯವರಿಗೆ ಸವಿಜ್ಞಾನ ತಂಡ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.

 

No comments:

Post a Comment