ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, November 4, 2024

ನೆರೆಮನೆ ಪ್ರೀತಿಯ ಪರಪುಟ್ಟಗಳು

 ನೆರೆಮನೆ ಪ್ರೀತಿಯ ಪರಪುಟ್ಟಗಳು 

                                               

 ಚಿತ್ರಗಳು ಮತ್ತು ಲೇಖನ : 

ಚಿಕ್ಕಾಯರಹಳ್ಳಿ  ಡಿ.  ಕೃಷ್ಣಚೈತನ್ಯ. 

ವಿಜ್ಞಾನ ಶಿಕ್ಷಕರು ಮತ್ತು ಪರಿಸರತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು

 



ತಮ್ಮ ಇಂಪಾದ ದನಿಯಿಂದ ನಮ್ಮ ಗಮನವನ್ನು ಸೆಳೆದಿರುವ ಕೋಗಿಲೆಗಳ ಜೀವನದ ಬಗ್ಗೆ ವಸ್ತುಸ್ಥಿತಿಯನ್ನು ವಿವರಿಸುವ ಸುಂದರ ಲೇಖನವನ್ನು ವನ್ಯಜೀವಿ ಹಾಗೂ ಪರಿಸರತಜ್ಞರೂ ಆಗಿರುವ ವಿಜ್ಞಾನ ಶಿಕ್ಷಕ ಡಿ.ಕೃಷ್ಣ ಚೈತನ್ಯ ಅವರು ಬರೆದಿದ್ದಾರೆ

 ಮನುಷ್ಯ ಸಂಘಜೀವಿ. ತಾನು ಇತರರ ಜೊತೆ ಅಕ್ಕಪಕ್ಕದಲ್ಲಿ ಮನೆಕಟ್ಟಿಕೊಂಡು ವಾಸಿಸುವ ಪ್ರಾಣಿ. ಊರಿನಲ್ಲಿರುವ ಜನರೊಂದಿಗೆ ಅನೋನ್ಯತೆ, ಸಹಕಾರ, ಪ್ರೀತಿ, ವಿಶ್ವಾಸ ಹಾಗೂ ಸಹಬಾಳ್ವೆಯಿಂದ ಜೀವನ ನಡೆಸಿಕೊಂಡು ನೆಮ್ಮದಿಯಿಂದ ಬದುಕುತ್ತಾನೆ. ಕೆಲವರಂತೂʼಎಗುಡ್‌ ಸಿಟಿಜನ್‌ ಹ್ಯಾಸ್‌ ಎ ಬ್ಯಾಡ್‌ ನೈಬರ್‌ʼಎಂಬಂತೆ ಯಾವಾಗಲೂ ಜಗಳ ಮಾಡುವುದು, ಕ್ಯಾತೆ ತೆಗೆಯುವುದು ಮುಂತಾದುವನ್ನು ಮಾಡುತ್ತಲೇ ಇರುತ್ತಾರೆ .ನಮ್ಮ ನಾಡಿನಲ್ಲಿ ʼನೆರೆಮನೆಯ ಸಾರು ರುಚಿʼ ಎಂಬ ನಾಣ್ನುಡಿ ರೂಢಿಯಲ್ಲಿದೆ. ಅವರವರ ಮನೆಯ ಸಾರನ್ನು ಪ್ರತಿದಿನ ಊಟಮಾಡಿ ಮಾಡಿ ಆ ರುಚಿಗೆ ಹೊಂದಿಕೊಂಡಿರುವವರಿಗೆ, ಅಪರೂಪಕ್ಕೆ ಪಕ್ಕದ ಮನೆಯ ಸಾರನ್ನು ಊಟ ಮಾಡಿದಾಗ (ಉಪ್ಪು, ಹುಳಿ, ಖಾರ ಸರಿ ಇಲ್ಲದಿದ್ದರೂ) ಸಿಗುವ ಭಿನ್ನರುಚಿಗೆ ಮನಸೋತು,ಆಹಾ ಪಕ್ಕದ ಮನೆಯ ಸಾರು ಎಷ್ಟು ರುಚಿಯಾಗಿದೆ ಎಂದು ಹೆಂಡತಿಯನ್ನು ಮೂದಲಿಸುವವರೂ ಇದ್ದಾರೆ.ಅದಕ್ಕೆಕಾರಣ ನಮಗೆಲ್ಲರಿಗೂ ತಿಳಿದಿದ್ದೇ ಆಗಿದೆ.ಅವರವರ ಕೈರುಚಿ, ಪದಾರ್ಥಗಳ ವ್ಯತ್ಯಾಸ. ಹಾಗೆಯೆ ಕುವೆಂಪುರವರ ವಿಶ್ವಮಾನವ ಕವನ ʼಓ ನನ್ನ ಚೇತನʼ ದಲ್ಲಿ ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರುʼ ಎನ್ನುವಂತೆ ಮನೆ ಅರ್ಥಾತ್‌ ಗೂಡನ್ನೆ ಕಟ್ಟದೆ, ಮೊಟ್ಟೆಗೆ ಕಾವನ್ನೂಕೊಡದೇ, ಮರಿಗಳನ್ನೂ ಪೋಷಿಸದೇ ಬದುಕುವ ತುಪ್ಪಳದ ಸದಸ್ಯರ ಬಗ್ಗೆ ಒಂದಷ್ಟು ತಿಳಿಯೋಣ ಬನ್ನಿ. ಅವೇ ನೆರೆಮನೆಯನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಿರುವ ಕೋಗಿಲೆಗಳು ! ವಸಂತಕಾಲ ಬಂದಾಗ ಮಾವು ಚಿಗುರಲೇಬೇಕು, ಕೋಗಿಲೆ ಹಾಡಲೇಬೇಕುʼ ಎಂಬ ಪ್ರಸಿದ್ಧ ಗೀತೆಯನ್ನು ಯಾರು ತಾನೇ ಕೇಳಿಲ್ಲ ! 

ಕುವೆಂಪು ವಿರಚಿತ

ʼನಾನು ಮತ್ತು ಸೋವಿಯತ್‌ ರಷ್ಯಾʼ ಎಂಬ ಕವನದಲ್ಲಿ, ʼಕೋಗಿಲೆ ಸ್ವತಃ ಗೂಡುಕಟ್ಟಿ, ತಾನೆ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಗಳಿಗೆ ಪೋಷಣೆ ಮಾಡುವಂತೆ ತಾಕೀತು ಮಾಡಿರುವ ಪರಿಯನ್ನು ಕವಿಯವರಲ್ಲಿ ದೈನ್ಯತೆಯಿಂದ ಹೇಳಿಕೊಂಡಿರುವ ಪರಿ ನೆನಪಾಗದೇ ಇರದು. ಕೋಗಿಲೆಗಳು ಏಕೆ ಗೂಡು ಕಟ್ಟುವುದಿಲ್ಲ? ಅವು ಏಕೆ ಮೊಟ್ಟೆಗಳನ್ನು ಕಾಗೆಯ ಗೂಡಿನಲ್ಲೇ ಇಡುತ್ತವೆ?

ಪಕ್ಷಿಗಳಲ್ಲೆಲ್ಲಾ ಬುದ್ಧಿವಂತ ಪಕ್ಷಿ ಎಂದು ಕಾಗೆಯನ್ನು ಕರೆಯುತ್ತೇವೆ. ಹೂಜಿಯ ತಳದಲ್ಲಿದ್ದ ನೀರಿಗೆ ಕಲ್ಲು ತುಂಬಿ ನೀರನ್ನು ಕುಡಿಯುವ ಕಥೆ ನಮಗೆ ನೆನಪಿದೆ ಮತ್ತು ಸಾಮಾಜಿಕ ಮಾದ್ಯಮದಲ್ಲಿ ವೀಕ್ಷಿಸಿದ ಕೆಲವು ದೃಶ್ಯಗಳೂ ಸಹ ಇದಕ್ಕೆ ಪುಷ್ಠಿಯನ್ನು ನೀಡಿವೆ. ಇಂತಹ ಕಾಗೆಯನ್ನೇ ಯಾಮಾರಿಸಿ ಅದರ ಗೂಡಿನಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿಸಿಕೊಳ್ಳುವ ಕೋಗಿಲೆಯ ಬುದ್ದಿವಂತಿಕೆಯನ್ನು ಮೆಚ್ಚಲೇಬೇಕು, ಅಲ್ಲವೇ?  ಕೋಗಿಲೆಗಳು ಮಾವಿನ ಚಿಗುರನ್ನು ತಿಂದು ಗಂಟಲಿನ ಸ್ವರವನ್ನು ಸರಿಪಡಿಸಿಕೊಂಡು ಹಾಡುತ್ತವೆಯೇ? ಇಲ್ಲ. ಕೋಗಿಲೆಗಳು ಫ್ರೂಜಿವೋರ್ಸ್‌, ಅಂದರೆ ಹಣ್ಣುಭಕ್ಷಕಗಳು. ,ಆಲ, ಗೋಳಿ, ಬಸರಿ, ಮಾವು, ಗಂಧದಹಣ್ಣು, ನೇರಳೆಹಣ್ಣು, ಅಮೃತಬಳ್ಳಿಯಹಣ್ಣು ಮತ್ತು ಇತರೆ ಕಾಡುಹಣ್ಣುಗಳು ಇವುಗಳ ಆಹಾರ.

ಗಂಡು ಕೋಗಿಲೆಗಳು ಹಾಡುವುದು ಸಾಮಾನ್ಯವಾಗಿ ಹೆಣ್ಣು ಕೋಗಿಲೆಗಳಿಗೆ ತಮ್ಮ ಇರುವನ್ನು ಪ್ರಸ್ತುತ ಪಡಿಸಲು. ಅಂದರೆ ಹಾಡುವ, ನರ್ತಿಸುವ, ಆಹಾರ ನೀಡಿ ಒಲಿಸಿಕೊಳ್ಳುವ, ಗೂಡು ಕಟ್ಟಿ ಹೆಣ್ಣನ್ನು ಆಕರ್ಷಿಸಿಕೊಳ್ಳುವ ಪಕ್ಷಿಗಳೆಲ್ಲ ಗಂಡುಗಳೇ ಆಗಿರುತ್ತವೆ. ಒಂದು ಗಂಡು ಕೋಗಿಲೆ ಹಾಡಲು ಪ್ರಾರಂಭಿಸಿದರೆ, ಅದರ ಸುತ್ತಮುತ್ತ ಅನತಿ ದೂರದಲ್ಲಿರುವ ಗಂಡುಗಳೆಲ್ಲವೂ ಪೈಪೋಟಿಗೆ ಬಿದ್ದಂತೆ ಹಾಡಲು ಶುರು ಮಾಡಿಕೊಳ್ಳುತ್ತವೆ ! . ಇನ್ನು ಹೆಣ್ಣು ಕೋಗಿಲೆಯೋ ಪ್ರೇಕ್ಷಕನಂತೆ ಸುಮ್ಮನೆ ಕೇಳಿಸಿಕೊಂಡು ಗಮನಿಸುತ್ತಿರುತ್ತದೆ. ಹೀಗೆ, ಹಲವಾರು ದಿನ ಗಾಯನ ಕಾರ್ಯಕ್ರಮ ನಡೆದು, ಕೊನೆಗೆ ಯಾವ ಗಂಡು ಸುದೀರ್ಘವಾಗಿ ಹಾಡುತ್ತದೆಯೋ, ಅದನ್ನು ಮೆಚ್ಚಿದ ಹೆಣ್ಣು ಬಂದು ಕೂಡುತ್ತದೆ.

ನಾನು ಗಮನಿಸಿದ ಮತ್ತೊಂದು ಅಂಶವೆಂದರೆ, ಎರಡು ಗಂಡು ಕೋಗಿಲೆಗಳು ಅಕ್ಕಪಕ್ಕ ಕುಳಿತು ತಮ್ಮ ಕೊರಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಕೊಂಕಿಸುವುದು. ಇದನ್ನು ಗಮನಿಸಿ ಬೆರಗಿನಿಂದ ನೋಡುತ್ತಾ ನಿಂತೆ. ಒಂದು ಗಂಡು ಕೋಗಿಲೆ ತನ್ನ ತಲೆಯನ್ನು ಓರೆಯಾಗಿ ಕೆಳಕ್ಕೆ ಬಾಗಿಸಿ ನೋಡಿದರೆ ಮತ್ತೊಂದು ಮೇಲಕ್ಕೆ ಎತ್ತುತ್ತಿತ್ತು. ಅದು ಕೆಳಕ್ಕೆ ಇಳಿಸಿದಾಗ ಇದು ಮೇಲಕ್ಕೆ ತನ್ನ ಕೊರಳನ್ನು ಕೊಂಕಿಸುತ್ತಿತ್ತು. ಸ್ವಲ್ಪ ಹೊತ್ತು ಗಮನಿಸಿ, ಅವುಗಳಿಗೆ ಏಕೆ ತೊಂದರೆ ಕೊಡುವುದು ಎಂದು ಬಂದುಬಿಟ್ಟೆ. ಇದರಲ್ಲಿ ಬಹುಶಃ ಯಾರು ಸೋತರು, ಯಾರು ಗೆದ್ದರು ಎಂದು ತಿಳಿಯದೇ ಹೋಯಿತು.

ಗಂಡು ಕೋಗಿಲೆಗಳು ಕಾಗೆಯಂತೆ ನೀಲಿ ಮಿಶ್ರಿತ ಕಪ್ಪು ಬಣ್ಣವನ್ನು ಹೊಂದಿದ್ದರೆ, ಹೆಣ್ಣು ಕೋಗಿಲೆಗಳು  ಮಾತ್ರ ಬೂದು ಮತ್ತು ಬಿಳಿಪಟ್ಟೆಗಳನ್ನು ಹೊಂದಿರುವ ಗರಿಗಳನ್ನು ಹೊಂದಿರುತ್ತವೆ. ಗಂಡು ಕೋಗಿಲೆಯ ಕಣ್ಣಿನ ಐರಿಸ್‌ ರಕ್ತದಂತೆ ಕೆಂಪಗಿದ್ದರೆ, ಹೆಣ್ಣು ಕಂದು ಬಣ್ಣದ ಐರಿಸ್‌ ಹೊಂದಿರುತ್ತದೆ. ಕೋಗಿಲೆ ಜಾತಿಯಲ್ಲಿ ಹಲವಾರು ಪ್ರಬೇಧಗಳಿದ್ದು, ಅವುಗಳೆಂದರೆ, ಚೊಟ್ಟಿ ಕೋಗಿಲೆ(ಚೆಸ್ಟ್ನಟ್‌ವಿಂಗ್ಡ್‌ ಕುಕೂ),ಜಾತಕ ಪಕ್ಷಿ(ಪೈಡ್‌ ಕುಕೂ),ಸಣ್ಣ ಮತ್ತು ದೊಡ್ಡ ಕೋಗಿಲೆಚಾಣ( ಕಾಮನ್‌ ಮತ್ತು ಲಾರ್ಜ್ಹಾಕ್‌ ಕುಕೂ), ಕಾಜಾಣ ಕೋಗಿಲೆ(ಫೋರ್ಕ್‌ ಟೈಲ್ಡ್‌ ಡ್ರೋಂಗೊ ಕುಕೂ), ಪಟ್ಟೆಬಾಲದ ಕುಕೂಟ (ಇಂಡಿಯನ್‌ ಕುಕೂ), ಕುಕೂಟ (ಕಾಮನ್‌ ಕುಕೂ), ಸಣ್ಣ ಕುಕೂಟ (ಲೆಸ್ಸರ್‌ ಕುಕೂ), ಪಟ್ಟೆಕುಕೂಟ(ಬ್ಯಾಂಡೆಡ್‌ ಕುಕೂ), ಬೂದು ಕುಕೂಟ (ಗ್ರೇಬೆಲ್ಲೀಡ್‌ ಕುಕೂ) ಮತ್ತು ನಮ್ಮೆಲ್ಲರಿಗೂ ಪರಿಚಿತವಾಗಿರುವ ಕೋಗಿಲೆ ( ಏಶಿಯನ್‌ ಕೋಯಲ್).‌ ಕೆಂಬೂತ (ಕೌಕಲ್) ಮತ್ತು ಕೈರಾತ(ಮಾಲ್ಕೋವ)‌ಗಳೂ ಇದೇ ವಂಶಕ್ಕೆ ಸೇರಿದರೂ ತಮ್ಮದೇ ಗೂಡುಕಟ್ಟಿ ಮರಿ ಮಾಡಿಕೊಳ್ಳುತ್ತವೆ. ಉಳಿದವುಗಳೆಲ್ಲವೂ ಪರಪುಟ್ಟ(ಬ್ರೂಡ್‌ಪ್ಯಾರಸೈಟ್)ಗಳೇ ಆಗಿವೆ. ಅಂದರೆ, ಇತರ ಪಕ್ಷಿಗಳ ಗೂಡಿನಲ್ಲಿ ಮೊಟ್ಟೆಇಟ್ಟು, ಕಾವು ಕೊಡುವ ಕಷ್ಟವೂ ಇಲ್ಲದೆ ಮರಿ ಮಾಡಿಸಿಕೊಂಡು ತಮ್ಮ ಸಂತತಿಯನ್ನು ಅನಾದಿ ಕಾಲದಿಂದಲೂ ಮುಂದುವರಿಸಿಕೊಂಡು ಬಂದಿವೆ! ಇತ್ತೀಚೆಗೆ ಒಂದು ಸುದ್ದಿ ವಾಟ್ಸ್‌ ಅಪ್‌ ಯುನಿವರ್ಸಿಟಿಯಲ್ಲಿ ಹರಿದಾಡಿ ಏನೇನೊ ಸುದ್ದಿ ನೀಡಿತ್ತು !. ಅದೆಂದರೆ ಒಂದು ಪುಟ್ಟಪಕ್ಷಿ ಕೋಗಿಲೆ ಜಾತಿಯ, ತನಗಿಂತಲೂ ಗಾತ್ರದಲ್ಲಿ ದೊಡ್ಡದಾದ ಮರಿಹಕ್ಕಿಗೆ ಗುಟುಕು ಕೊಡುವುದು. ವಾಟ್ಸ್‌ಅಪ್‌ನ ಸುಳ್ಳುಸುದ್ದಿಶೂರರು ಮರಿಹಕ್ಕಿಗೆ ಮುದಿತನ ಬಂದಿದೆ ಎಂತಲೂ, ಅವುಗಳಿಗೆ ವೃದ್ಧಾಶ್ರಮ ಇರುವುದಿಲ್ಲ ಎಂತಲೂ, ಬೇರೆ ಹಕ್ಕಿಗಳು ಅವುಗಳನ್ನು ಸಲಹುತ್ತವೆ ಎಂದೂ ಇನ್ನೂ ಏನೇನೊ…ಹಬ್ಬಿಸಿದ್ದರು !.ಇದೆಲ್ಲಾ ಎಷ್ಟು ಬಾಲಿಶ ಎನ್ನಿಸದೇ ಇರದು.

ಕೋಗಿಲೆಗಳು ಕಾಗೆಯ ಗೂಡಿನಲ್ಲಿ ಮೊಟ್ಟೆ ಇಡುವುದು ಸಾಮಾನ್ಯವಾದ ಕ್ರಿಯೆ ಏನಲ್ಲ. ಮೊದಲು ಕಾಗೆಗಳು ಗೂಡು ಕಟ್ಟುವ ಸ್ಥಳವನ್ನು ಹುಡುಕಬೇಕು, ಹುಡುಕಿದರೂ, ಅದು ಯಾವ ಹಂತದಲ್ಲಿದೆ ಎನ್ನುವುದನ್ನು ಪರಿಶೀಲಿಸಬೇಕು, ಅದೇ ಸಂದರ್ಭಕ್ಕೆ ಮೊಟ್ಟೆ ಇಡುವಂತೆ ಹೆಣ್ಣು ಕೋಗಿಲೆ ತನ್ನನ್ನು ತಾನು ಸರಿ ಹೊಂದಿಸಿಕೊಳ್ಳಬೇಕು, ಹೆಣ್ಣು ಕಾಗೆ ಒಂದೊ-ಎರಡೋ ಮೊಟ್ಟೆ ಇಟ್ಟಾಗ ಕೋಗಿಲೆಯೂ ಇಡಬೇಕು. ಇಷ್ಟೆಲ್ಲಾ ಆಗಬೇಕಾದರೆ ಕಾಗೆಗಳಿಂದಲೂ ತಪ್ಪಿಸಿಕೊಳ್ಳಬೇಕು! ಕೆಲವೊಮ್ಮೆ ಗಂಡು ಕೋಗಿಲೆ ಭಯದಿಂದ ಕಿರುಚಿಕೊಂಡು ಹಾರಿಹೋಗುವಾಗ, ಕಾಗೆಗಳು ಕೋಗಿಲೆಯನ್ನು ಅಟ್ಟಿಸಿಕೊಂಡು ಹೋಗುತ್ತಿರುವುದನ್ನು ಗಮನಿಸಿರಬಹುದು, ಅಲ್ಲವೇ? ಗಂಡು ಕೋಗಿಲೆ ಭಯದ ಕೂಗನ್ನು ಹಾಕುತ್ತಾ ಹಾರಿ ದೂರಕ್ಕೆ ಹೋಗುತ್ತಿರಬೇಕಾದರೆ ಹಿಂಬದಿಯಿಂದ ಕಾಗೆ ಅಥವಾ ಜೋಡಿಕಾಗೆಗಳು ಗೂಡಿನ ಹತ್ತಿರಕ್ಕೆ ಸುಳಿಯದಂತೆ ಓಡಿಸುತ್ತಿರುತ್ತವೆ. ಈ ಸಂದರ್ಭವನ್ನು ಕಾಯ್ದು ಕುಳಿತ ಹೆಣ್ಣು ಕೋಗಿಲೆ ಏನೂ ಗೊತ್ತಿಲ್ಲದಂತೆ, ಸದ್ದಿಲ್ಲಂತೆ ಗೂಡಿಗೆ ತೆರಳಿ ಒಂದೆರಡು ಮೊಟ್ಟೆಗಳನ್ನು ಇಟ್ಟು ಹಾರಿಹೋಗುತ್ತದೆ. ಅಲ್ಲಿಗೆ ತನ್ನ ಕೆಲಸ ಮುಗಿಯಿತು ಎಂಬಂತೆ ಮತ್ತೆ ಕಾಗೆಯ ಗೂಡಿನ ಸ್ಥಳದಿಂದ ದೂರದಲ್ಲಿ ಇದ್ದುಬಿಡುತ್ತವೆ. ಇಷ್ಟೆಲ್ಲಾ ಮುಗಿಯಲು ಮೂರ್ನಾಲ್ಕು ತಿಂಗಳುಗಳಾದರೂ ಬೇಕು. ತನ್ನ ಕೆಲಸ ಮುಗಿದ ನಂತರ ಕೋಗಿಲೆ ಹಾಡುತ್ತದೆಯೇ? ಉಹೂಂ ಇಲ್ಲವೇ ಇಲ್ಲ. ಜುಲೈ-ಆಗಸ್ಟ್‌ನಿಂದ ಮುಂದಿನ‌ ಫೆಬ್ರವರಿ-ಮಾರ್ಚ್‌ ವರೆಗೂ ನಿಶ್ಯಬ್ಧ.

ಕೋಗಿಲೆ ಜಾತಿಯ ಇತರ ಪಕ್ಷಿಗಳೂ ಸಹ ಗೂಡುಕಟ್ಟುವುದಿಲ್ಲ .ಜಾತಕಪಕ್ಷಿಗಳು ಮೊಟ್ಟೆಯನ್ನು ಬ್ಯಾಬ್ಲರ್‌ಹಕ್ಕಿಗಳ ಗೂಡುಗಳಲ್ಲಿ ಇಟ್ಟು ಮರಿ ಮಾಡಿಕೊಂಡರೆ.ಮತ್ತೊಂದು ಶ್ರೈಕ್‌ಗಳ ಗೂಡುಗಳಲ್ಲಿ, ಹೀಗೆ, ಒಂದೊಂದು ಕೋಗಿಲೆ ಜಾತಿಯ ಪಕ್ಷಿಗಳು ಒಂದೊಂದು ಬಗೆಯ ಇತರ ಪಕ್ಷಿಗಳ ಗೂಡುಗಳಲ್ಲಿ ಮರಿ ಮಾಡಿಕೊಳ್ಳುತ್ತವೆ.

ಕೋಗಿಲೆಗಳು ಹಾಡದೆ ಇದ್ದ ಕಾಲದಲ್ಲಿ ಸಾಮಾನ್ಯವಾಗಿ ಜನಗಳು ಹೇಳುತ್ತಿದ್ದುದು ನೆನಪಿಗೆ ಬರುತ್ತದೆ. ಅದೇನೆಂದರೆ ಅವುಗಳಿಗೆ ಗಂಟಲು ಕಟ್ಟಿಕೊಂಡಿದೆ ಎಂತಲೂ, ವಸಂತ ಕಾಲದಲ್ಲಿ ಮಾವು ಚಿಗುರಿದಾಗ ಅದರ ರಸ ಕುಡಿದು ಗಂಟಲು ಸರಿಪಡಿಸಿಕೊಳ್ಳುತ್ತವೆ, ಎಂತಲೂ. ಆನಂತರವೇ ಕೋಗಿಲೆಗಳು ಹಾಡುತ್ತವೆ ಎಂದು. ಆದರೆ ಇದರ ಹಿಂದಿನ ಸತ್ಯ ತಿಳಿದಾಗ ಎಂಥ ಕಲ್ಪಿತ ಕಥೆ ಎನ್ನಿಸದೇ ಇರದು.


ಕೋಗಿಲೆ ಜಾತಿಯ ಎಲ್ಲಾ ಪಕ್ಷಿಗಳು ಸಂಗೀತದಲ್ಲಿ ಬರುವಂತೆ ಆರೋಹಣದಲ್ಲಿ ಕೂಗುತ್ತವೆ. ವಸಂತ ಬರೆದನು ಒಲವಿನ ಓಲೆ… ಎಂಬ ಹಾಡಿನಲ್ಲಿ ಬರುವ ಒಂದು ಸಾಲು ʼಪಂಚಮದಲ್ಲಿ ಹಾಡಿತು ಕೋಗಿಲೆ, ಎಂಬಂತೆ ಇರುವುದಿಲ್ಲ ಎನ್ನುವುದೇ ಸತ್ಯ. ಸಣ್ಣ ಕೋಗಿಲೆ ಚಾಣ ಪಕ್ಷಿಯಂತೂ ಬ್ರೈನ್‌ ಫೀವರ್‌ ಹಕ್ಕಿ ಎಂತಲೇ ಉಪನಾಮ ಪಡೆದುಕೊಂಡು ಬಿಟ್ಟಿದೆ. ಅದರ ಹಿಂದಿನ ಕಥೆ ಕೇಳಿದಾಗ ಅಶ್ಚರ್ಯವಾಗದೇ ಇರದು. ಅದೇನೆಂದರೆ ಬ್ರಿಟೀಷ್‌ ರಾಣಿ ಭಾರತದಲ್ಲಿದ್ದಾಗ, ಈ ಹಕ್ಕಿಯ ಕೂಗು ಕೇಳಿ ಕೇಳಿ ಆಕೆಗೆ ಆ ಕಾಯಿಲೆ ಬಂದಿತಂತೆ! ಎಂಥ ಅದ್ಭುತ ಪ್ರಪಂಚ ಅಲ್ಲವೇ?

 

 

No comments:

Post a Comment