ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, November 4, 2024

ಇರುವೆಗಳು ಸಾರ್‌ ಇರುವೆಗಳು!

 ಇರುವೆಗಳು ಸಾರ್‌ ಇರುವೆಗಳು!

 

ಲೇಖಕರು: ಸುರೇಶ  ಕೃಷ್ಣಮೂರ್ತಿ







ಸಂಘಜೀವಿ ಕೀಟಗಳಾದ ಇರುವೆಗಳ ಜೀವನ ಶೈಲಿಯ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ಈ ಲೇಖನದಲ್ಲಿ ಒದಗಿಸಿದ್ದಾರೆ, ಶಿಕ್ಷಕ ಸುರೇಶ ಅವರು

   ಮೈಗಳ್ಳರೆ, ಇರುವೆಗಳ ಬಳಿಹೋಗಿ ಬದುಕುವುದು ಹೇಗೆಂದು ಕಲಿಯಿರಿ  ಎಂಬ ಮಾತೊಂದಿದೆ. ಹಾಗೆಯೆ ʼಇರುವೆ ಬೆಟ್ಟವನ್ನೇ ಕದಲಿಸಬಲ್ಲದುʼ. ʼಒಳ್ಳೆಯ ಕೆಲಸಗಳು ಇರುವೆಗಳು ಮಾಡುವಂತೆ ಸ್ವಲ್ಪ ಸ್ವಲ್ಪವೇ ನಡೆಯುತ್ತಾ ಹೋಗುತ್ತವೆ.ʼ ಮುಂತಾದ ನಾಣ್ನುಡಿಗಳಲ್ಲಿ ಇರುವೆಗಳಿಗಿರುವ ಸಾಮರ್ಥದ ಔನ್ನತ್ಯವನ್ನು   ಒತ್ತಿ ಹೇಳುವ ಪ್ರಯತ್ನವೇ ಕಂಡು ಬರುತ್ತದೆ. ಇರುವೆಗಳು ನಮಗೆಲ್ಲ ತಿಳಿದ ಹಾಗೆ ಶಿಸ್ತುಬದ್ಧ ಜೀವನ, ಧೈರ್ಯ , ಶೌರ್ಯ ಕರ್ತವ್ಯ ಪಾರಾಯಣತೆಗೆ ಪ್ರತೀಕವಾಗಿವೆ. ಅಂಟಾರ್ಟಿಕ ಖಂಡ , ಐಸ್ಲ್ಯಾಂಡ್‌, ಗ್ರೀನ್ಲ್ಯಾಂಡ್‌  ಹೊರೆತುಪಡಿಸಿ ಜಗತ್ತಿನ ಯಾವುದೇ ಮೂಲೆಗೆ ಹೋದರು ಒಂದಲ್ಲ ಹಲವಾರು ಬಗೆಯ ಇರುವೆಗಳು ಕಂಡು ಬರುತ್ತವೆ. ಅವುಗಳಲ್ಲಿ ಹೆಚ್ಚಿನವು ಕಪ್ಪು, ಕಂದು ಅಥವಾ ಕೆಂಪು ಬಣ್ಣವನ್ನು ಹೊಂದಿರುತ್ತವೆ. ಅಂಬರಿನಲ್ಲಿ ಸಂರಕ್ಷಿಸಲ್ಪಟ್ಟಿದ್ದ ಇರುವೆಯ ಒಂದು ಮಾದರಿಯು ತೊಂಬತ್ತೊಂಬತ್ತು ಮಿಲಿಯನ್‌ ವರ್ಷಗಳ ಇರುವೆಗಳ ಇತಿಹಾಸಕ್ಕೆ ಸಾಕ್ಷಿಯಾಗಿದೆಒಂದು ಮಿಲಿಮೀಟರ್‌ ನಿಂದ ಹಿಡಿದು ಸೆಂಟಿಮೀಟರ್‌ನಷ್ಟು ಉದ್ದವಿರುವ ಸುಮಾರು ಇಪ್ಪತ್ತು ಸಾವಿರ ಪ್ರಭೇದದ  ಇರುವೆಗಳು ಜಗತ್ತಿನಲ್ಲಿ ಇವೆ ಎಂದು ಅಂದಾಜು ಮಾಡಲಾಗಿದೆ

   ಇರುವೆಗಳು ಪ್ರಾಣಿ ಪ್ರಪಂಚದಲ್ಲಿ ಫರ್ಮಿಸಿಡಿಯೇ ಕುಟುಂಬಕ್ಕೆ ಸೇರಿದ್ದು, ಜೇನುನೊಣಗಳು ಮತ್ತು ಕಣಜಗಳಿಗೆ ಹೆಚ್ಚು ನಿಕಟ ಸಂಬಂಧ ಹೊಂದಿವೆ, ಇವೆಲ್ಲವೂ ಕಿರಿದಾದ ಸಲೀಸಾಗಿ ಬಾಗುವ ಸೊಂಟವನ್ನು , ದೇಹಕ್ಕೆ ಕೈಟನ್‌ ನಿಂದ ಸಂಯೋಜಿತವಾದ ಗಟ್ಟಿಯಾದ ಜಲನಿರೋಧಕ ಹೊರಚಿಪ್ಪನ್ನು  ಹೊಂದಿರುತ್ತವೆಇವುಗಳ  ದೇಹವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ ತಲೆ, ಎದೆ ಮತ್ತು ಗ್ಯಾಸ್ಟರ್ (ಸೊಂಟದ ಹಿಂದೆ ಹೊಟ್ಟೆಯ ಭಾಗ). ಇರುವೆಗಳ ಆಹಾರವು ಅವುಗಳ ಜಾತಿಗಳು ಬದಲಾದಂತೆ  ಬದಲಾಗುತ್ತಾ ಹೋಗುತ್ತದೆ, ಆದರೆ ಹೆಚ್ಚಿನವು ಎಲೆಗಳು, ಬೀಜಗಳು, ಸಣ್ಣ ಕೀಟಗಳು, ಮಕರಂದ ಮತ್ತು ಜೇನುಹುಳುಗಳನ್ನು ತಿನ್ನುತ್ತವೆ. ಇರುವೆಗಳು  ಅವುಗಳ ತೂಕಕ್ಕಿಂತ ಹತ್ತು ಪಟ್ಟು ಹೆಚ್ಚು ಭಾರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ.

ಇರುವೆಗಳಿಗೆ ಶ್ವಾಸಕೋಶವಿಲ್ಲ. ದೇಹದ ಚಯಪಚಯ ಕ್ರಿಯೆಗೆ ಅಗತ್ಯವಾದ ಆಕ್ಸಿಜನ್ ವಾತಾವರಣದಿಂದ  ನೇರವಾಗಿ ದೇಹದ ಹೊರಭಾಗದಲ್ಲಿರುವ ಸೂಕ್ಷ್ಮ ರಂದ್ರಗಳ ಮೂಲಕ ಇರುವೆಯ ಅಂಗಾಂಶಗಳನ್ನು ತಲುಪುತ್ತದೆ.   ಅಂಗಾಂಶಗಳಲ್ಲಿ ಬಿಡುಗಡೆಯಾದ ಕಾರ್ಬನ್ ಡೈಆಕ್ಸೈಡ್ ಹಾಗೆಯೆ‌ ಅದೇ ರಂದ್ರಗಳ ಮೂಲಕ ವಾತಾವರಣಕ್ಕೆ ಬಿಡುಗಡೆಯಾಗುತ್ತದೆಇರುವೆಯ ಹೃದಯವು ಮೆದುಳಿನ ಜೊತೆ ಜೊತೆಗೆ ಅದರ ತಲೆಯಲ್ಲಿರುತ್ತದೆತಲೆಯಲ್ಲಿರುವ ಕೊಳವೆಯಾಗಕಾರದ ಹೃದಯವು ಬಿಳಿ ಬಣ್ನದ ರಕ್ತವನ್ನು ದೇಹದ ಭಾಗಗಳಿಗೆ ಮತ್ತು ವಾಪಸ್ ಹೃದಯಕ್ಕೆ ಪಂಪು ಮಾಡುತ್ತದೆ. ಇರುವೆಗಳು ಸುವಾಸನೆ, ಸ್ಪರ್ಶ, ಚಲನೆ, ಧ್ವನಿ ಮತ್ತು ಉಗುಳು ವಿನಿಮಯದ ಮೂಲಕ ಸಂವಹನ ನಡೆಸುತ್ತವೆ.ಇರುವೆಗಳಿಗೆ ಕಿವಿಗಳಿಲ್ಲ ಮತ್ತೆ ಕೆಲವು ಪ್ರಬೇಧಗಳಲ್ಲಿ ಕಣ್ಣುಗಳೂ ಇರುವುದಿಲ್ಲ. ಅವು ತಮ್ಮ ಪಾದಗಳ ಮೂಲಕ ತಾವು ನಿಂತ ನೆಲದಲ್ಲಿ ಉಂಟಾಗುವ ಕಂಪನಗಳನ್ನು ಅನುಭವಿಸುವ ಮೂಲಕ ಅವು ಧ್ವನಿಯನ್ನು "ಕೇಳುತ್ತವೆ".  ಆಂಟೆನ್ನಾ ಎಂದು ಕರೆಯಲಾಗುವ ತಮ್ಮ ಬಾಯಿ ಬಳಿ ಇರುವ ಎರಡು ಮೀಸೆಯಂತಹ ರಚನೆಯನ್ನು ಬಳಸಿ ಅವು ಸ್ಪರ್ಶದ ಮೂಲಕ ಪರಸ್ಪರ ಸಂಭಾಷಿಸಬಲ್ಲವು, ಆಹಾರವನ್ನು ಪರಿಶೀಲಿಸಬಲ್ಲವು. ಇರುವೆಗಳ ಅತ್ಯಂತ ಪ್ರಬಲವಾದ ಸಂವೇದನಾ ಅಸ್ತ್ರವೆಂದರೆ ಸುವಾಸನೆಯ ಗ್ರಹಿಕೆ. ಇರುವೆಗಳು ತಾವು ಸಾಗುವ ದಾರಿಯುದ್ದಕ್ಕೂ ಫೆರಮೋನ್‌ ಎಂಬ ಸುವಾಸನೆಯ ಜಾಡನ್ನು ಬಿಡುತ್ತಾ ಸಾಗುತ್ತವೆ ಜಾಡು ಇತರೆ ಇರುವೆಗಳಿಗೆ ಮಾರ್ಗದರ್ಶಕವಾಗಿ ಸಹಾಯಕ್ಕೆ ಬರುತ್ತದೆ. ಜೊತೆಗೆ ಇರುವೆ ತಾನು  ಹೊರಟ ಸ್ಥಳಕ್ಕೆ ಮತ್ತೆ ಹಿಂತಿರುಗಲೂ ಸಹಕರಿಸುತ್ತದೆ. ಆಹಾರದ ಆಕರದ ಪತ್ತೆ, ಅಪಾಯದ ಸೂಚನೆ, ತನ್ನ ಗೂಡನ್ನು ಹುಡುಕಲು  ಎಲ್ಲಾ ಸಂದರ್ಭಗಳಲ್ಲಿ ಇತರೆ ಇರುವೆಗಳನ್ನು ಎಚ್ಚರಿಸಲು ಇದೇ  ಫೆರಮೋನ್‌ ಸುವಾಸನೆ ಪ್ರಸಾರ ಸಾಧನವಾಗಿ ಬಳಕೆಯಾಗುತ್ತದೆ. ಸುವಾಸನೆಯನ್ನು ಗ್ರಹಿಸುವ ಕೆಲಸವನ್ನು  ಮ್ಯಾಕ್ಸಿಲರಿ ಪಾಲ್ಪ್‌ ಎಂಬ ಅಂಗ ಇರುವೆಯ ಮೂಗಿನಂತೆ ಕೆಲಸ ಮಾಡುತ್ತದೆಸಾಮಾನ್ಯ ಇರುವೆಗಳಿಗೆ ಒಂದು ಜೊತೆ ಸಂಯೋಜಿತ ಕಣ್ಣುಗಳಿವೆ. ಇವು ಇರುವೆಗಳು ತಮ್ಮ ಸುತ್ತಲೂ ೩೬೦ ಡಿಗ್ರಿಯ ನೋಟವನ್ನು ಗ್ರಹಿಸಲು ಸಹಕರಿಸುತ್ತವೆ. ರಾಣಿ ಮತ್ತು  ಗಂಡು ಇರುವೆಗಳಲ್ಲಿ ಮತ್ತು ಕೆಲವು ಪ್ರಬೇಧದ ಇರುವೆಗಳ ಎಲ್ಲ ವರ್ಗಗಳಲ್ಲಿ   ಸಂಯೋಜಿತ ಕಣ್ಣುಗಳ ಜೊತೆಗೆ ಅವುಗಳ ನೆತ್ತಿಯ ಮೇಲೆ ಒಂದು ಜೊತೆ ಸರಳ ಕಣ್ಣುಗಳಿವೆ. ಅವುಗಳಲ್ಲಿ ಓಮಟೀಡಿಯಾ ಮತ್ತು  ಒಸೆಲೈ ಅಂಗಾಂಶಗಳಿದ್ದು. ಇವು ಬೆಳಕಿನ ಪ್ರಖರತೆ, ನೆಳಲು ಬೆಳಕನ್ನು ಗುರ್ತಿಸಲು ನೆರವಾಗುತ್ತವೆ. ಇರುವೆಯ ತಲೆಯಲ್ಲಿನ ಮೆದುಳಿನಿಂದ ಹೊರಟ ನರಮಂಡಲ ದೇಹದ ಎಲ್ಲಾ ಭಾಗಗಳಿಗೆ ವ್ಯಾಪಿಸಿದೆ. ಅತ್ಯಂತ ಪುಟ್ಟದಾದ ಮೆದುಳನ್ನು ಹೊಂದಿರುವ ಇರುವೆಗಳು ಅತ್ಯಂತ ಚಾಲಾಕಿನ ಟಾಸ್ಕುಗಳನ್ನು ಹೇಗೆ ನಿರ್ಹವಹಿಸುತ್ತದೆ ಎಂಬುದು ಸಂಶೋಧಕರ ಆಸಕ್ತಿಯ ವಿಷಯವಾಗಿ ಹೊರಹೊಮ್ಮುತ್ತಿದೆ. ಗ್ಯಾಸ್ಟರ್‌ ಎಂದು ಕರೆಯಲಾಗುವ ಇರುವೆಯ ಹೊಟ್ಟೆಯು ಜಠರ ಕರುಳು ವಿಸರ್ಜನಾಂಗ ವಿಷದ ಚೀಲ ಮುಂತಾದ ಅವಯವಗಳನ್ನು ಹೊಂದಿದೆ. ಇರುವೆಯ ದವಡೆಯ ಎರಡೂ ಕಡೆಗಿರುವ ಮ್ಯಾಂಡಿಬಲ್‌ ಎಂಬ ಇಕ್ಕಳದಂತಹ ಎರಡು  ಕೋರೆಗಳು ರಕ್ಷಣೆಗಾಗಿ, ದಾಳಿ ಮಾಡಲು, ಮತ್ತು ಆಹಾರವನ್ನು ಇತರೆ ವಸ್ತುಗಳನ್ನು ಎತ್ತಿ ಹಿಡಿಯಲು, ತುಂಡರಿಸಲು ಬಲವಾದ ಆಯುಧವಾಗಿದೆಕೆಲವು ಪ್ರಬೇಧದ ಇರುವೆಗಳಲ್ಲಿ ಇದು ಎಷ್ಟು ಪರಿಣಾಮಕಾರಿಯಾಗಿದೆಯೆಂದರೆ ತನ್ನ ಶತೃವನ್ನು ಹಿಮ್ಮೆಟ್ಟಿಸಲು, ಘಾಸಿಗೊಳಿಸಲು ಗಂಟೆಗೆ ೧೪೦ ಕಿಮೀ ವೇಗದಲ್ಲಿ ಮ್ಯಾಂಡಿಬಲುಗಳು ಮುಚ್ಚಿ ಹಿಡಿದು ಗಾಯಗೊಳಿಸಬಲ್ಲವು    

        ಇರುವೆಗಳು ಸಾಮಾಜಿಕ ಜೀವನ ಕ್ರಮಕ್ಕೆ ಸಂಕೇತವಾಗಿವೆ. ಇರುವೆ ಗೂಡು ಎಂಬುದು ಒಂದು ಕಾಲೋನಿಯಂತೆಯೇ ಸಕಲ ಸಾನುಕೂಲಗಳನ್ನು ಹೊಂದಿರುವ ಸಮೂಹವಾಗಿರುತ್ತದೆಇರುವೆಯ ಒಂದು ವಸಾಹತು ನೂರಾರು ಸಾವಿರ ಪ್ರತ್ಯೇಕ ಇರುವೆಗಳನ್ನು ಒಳಗೊಂಡಿರಬಹುದು. ಕಾಲೋನಿಗಳಿಗೆ ರಾಣಿ ಅಥವಾ ರಾಣಿಯರ ನೇತೃತ್ವ ಇರುತ್ತದೆ. ಕೆಲವು ಬಹುಪತ್ನಿತ್ವದ ಜಾತಿಗಳು ಎರಡು ಅಥವಾ ಸಾವಿರಾರು ರಾಣಿಗಳನ್ನು ಹೊಂದಿರಬಹುದು. ಕಾಲೋನಿಗಳ ಉಳಿವಿಗಾಗಿ ರಾಣಿ ಸಾವಿರಾರು ಮೊಟ್ಟೆಗಳನ್ನು ಇಡುತ್ತದೆ. ಕೆಲವು ಜಾತಿಗಳಲ್ಲಿ,ಡ್ರೋನ್‌ಗಳು ಎಂದು ಕರೆಯಲ್ಪಡುವ ಗಂಡು ಇರುವೆಗಳು  ಸಾಮಾನ್ಯವಾಗಿ ಒಂದೇ ಒಂದು ಪಾತ್ರವನ್ನುಅವು ಹೊಂದಿರುತ್ತವೆ. ಅದೇನೆಂದರೆ ರಾಣಿಯೊಂದಿಗೆ ಸಂಯೋಗ ಹೊಂದುವುದು, ಅದಾದ ಸ್ವಲ್ಪ ಸಮಯದ ನಂತರ ಸಾಯುತ್ತವೆ. ಕೆಲಸಗಾರ ಇರುವೆಗಳು, ಹೆಚ್ಚು ಚಟುವಟಿಕೆಯಿಂದ ಇದ್ದು ನಮಗೆ ಗೋಚರಿಸುವ ಕಾಲೋನಿಯ ಸದಸ್ಯರು, ಅವು ಎಂದಿಗೂ ಸಂತಾನೋತ್ಪತ್ತಿ ಮಾಡದ ಹೆಣ್ಣುಗಳಾಗಿವೆ. ಅವು ಆಹಾರ ಹುಡುಕಿ ಸಂಗ್ರಹಿಸಿ ಗೂಡಿಗೆ ಸಾಗಿಸುತ್ತವೆರಾಣಿಯನ್ನೂ,ಅದರ ಸಂತತಿಯ ಪೋಷಣೆಯನ್ನು ನೋಡಿಕೊಳ್ಳುತ್ತವೆ, ಗೂಡನ್ನು ಕಟ್ಟವ ಕೆಲಸ  ಮಾಡುತ್ತವೆ ಮತ್ತು ಕೆಲವು ಸೈನಿಕರಾಗಿ ಹೋರಾಡಿ ಸಮುದಾಯವನ್ನು ರಕ್ಷಿಸುತ್ತವೆ. ಕೆಲವು ಕೆಲಸಗಾರರು ತಮ್ಮ ದೇಹದ ತೂಕದ ಹತ್ತು ಪಟ್ಟು ತೂಕವನ್ನು ಹೊತ್ತು ಸಾಗಿಸಬಲ್ಲವುವರ್ಷದ ಕೆಲವು ಸಮಯಗಳಲ್ಲಿ ರಾಣಿ ವಿಶೇಷ ಮೊಟ್ಟೆಗಳನ್ನು ಇಡುತ್ತದೆ, ಅದು ಹೊಸ ರಾಣಿ ಮತ್ತು ಗಂಡುಗಳಾಗಿ ಹೊರಹೊಮ್ಮುತ್ತದೆ. ರಾಣಿ ಮತ್ತು ಗಂಡು ಜನಿಸಿದಾಗರೆಕ್ಕೆ ಹೊಂದಿರುತ್ತವೆ ಮತ್ತು  ಗೂಡಿನಿಂದ ಹಾರಿಹೋಗಿ ಗಾಳಿಯಲ್ಲಿ ಬೆರೆಯುತ್ತವೆ. ನಂತರ ರೆಕ್ಕೆ ಕಳಚಿದ ಗಂಡುಗಳು ನೆಲಕ್ಕೆ ಬಿದ್ದು ಸಾಯುತ್ತವೆಇಲ್ಲವೇ ಪಕ್ಷಿಗಳು ಅಥವಾ ಇತರ ಕೀಟಗಳಿಗೆ ಆಹಾರವಾಗುತ್ತವೆ. ರಾಣಿಯು  ಗೂಡು ಮಾಡಲು ಉತ್ತಮ ಸ್ಥಳವನ್ನು ಕಂಡುಕೊಳ್ಳುತ್ತದೆ. ಅದರ ರೆಕ್ಕೆಗಳು ಕಳಚಿ ಬೀಳುತ್ತವೆಅಲ್ಲಿಂದ ಆರಂಭಿಸಿ ರಾಣಿ ಮೊಟ್ಟೆಇಡಲು ಪ್ರಾರಂಭಿಸುತ್ತದೆ.ಮೊಟ್ಟೆಗಳು ಒಡೆದು ಲಾರ್ವಾ ಆಗುತವೆಲಾರ್ವಾಗಳು ಅಂತಿಮವಾಗಿ ಪ್ಯೂಪ ಆಗಿ ನಂತರ ಅವುಗಳಿಂದ  ಕೆಲವು ವಾರಗಳ ನಂತರ, ಹೊಸ ಇರುವೆಗಳು ಹೊರಹೊಮ್ಮುತ್ತವೆ. ಹೀಗೆ ಇರುವೆಯ ಹೊಸ ಕಾಲೋನಿ ಆರಂಭಗೊಳ್ಳುತ್ತದೆ.

 ಮನುಷ್ಯರನ್ನು ಬಿಟ್ಟರೆ ಪ್ರಾಣಿ ಪ್ರಪಂಚದಲ್ಲಿ ಪಶುಸಂಗೋಪನೆ, ವ್ಯವಸಾಯ ಮಾಡುವ ಜೀವಿಗಳಿದ್ದರೆ ಅವು ಬಹುತೇಕ ಇರುವೆಗಳೆ ಇರಬೇಕು. ಇರುವೆಗಳು ಎಪಿಡ್ಸ್‌ ಗಳೆಂಬ ಕೀಟಗಳನ್ನು ಸಸ್ಯಗಳ ಕಾಂಡ, ಎಲೆ,ಚಿಗುರು ಮುಂತಾದವುಗಳಲ್ಲಿ ನೆಲೆಗೊಳಿಸಿ ಪೋಷಿಸುತ್ತವೆ. ಎಪಿಡ್ಸ್‌ಗಳು ಸಸ್ಯದಿಂದ ಪೋಷಕಾಂಶಭರಿತ ರಸವನ್ನು ಹೀರಿ ತಾವು ಜೇನಿನಂತಹ ರಸವನ್ನು ಒಸರುತ್ತವೆ. ರಸವು ಇರುವೆಗಳಿಗೆ ಒಳ್ಳೆಯ ಆಹಾರವಾಗಿದ್ದು ಇರುವೆಗಳು ರಸವನ್ನು ಸಂಗ್ರಹಿಸಿ ಇರುವೆ ಕಾಲೋನಿಯಲ್ಲಿ ಬಳಕೆಗೆ ಸಾಗಿಸುತ್ತವೆ. ಮಾನವರು ತೋಟಗಾರಿಕೆಯನ್ನು  ಆರಂಭಿಸಿ ೧೨,೦೦೦ ವರ್ಷಗಳಾಗಿರಬಹುದೆಂದು ಒಂದು ಅಂದಾಜು, ಆದರೆ ದಕ್ಷಿಣ ಅಮೇರಿಕಾದ ಮಳೆ ಕಾಡುಗಳ ಇರುವೆಗಳು ತೋಟಗಾರಿಕೆಯಾಗಿ ೬೦ ಮಿಲಿಯನ್‌ ವರ್ಷಗಳ ಹಿಂದೆಯೆ ಶಿಲೀಂದ್ರ ಕೃಷಿಯನ್ನು  ಮಾಡುತ್ತಿದ್ದವು ಎಂದರೆ ಆಶ್ಚರ್ಯವಲ್ಲವೇ? ಇರುವೆಗಳ ಗೂಡಿನ ಸ್ತರಗಳಲ್ಲಿ ತೇವಾಂಶಭರಿತ ವಾತಾವರಣದಲ್ಲಿ ಶಿಲೀಂದ್ರವು ಸೊಗಸಾಗಿ ಬೆಳೆಯಬಲ್ಲದು. ಇರುವೆಗಳಿಗೆ ಆಹಾರವಾಗಬಲ್ಲ ಇಂತಹ ಶಿಲೀಂದ್ರಗಳನ್ನು ಅವು ತಮ್ಮ ಗೂಡುಗಳಲ್ಲಿ ಬೆಳೆಸುತ್ತವೆಸಸ್ಯದ ಎಲೆ ಕಾಂಡ ಮುಂತಾದವನ್ನು ಇರುವೆಗಳು ಸಾಗಿಸಿ ಗೂಡುಗಳಲ್ಲಿ ಹರಡಿ ಅವುಗಳ ಮೇಲೆ ಶಿಲೀಂದ್ರದ ಕೃಷಿ ಮಾಡುತ್ತವೆಸುಮಾರು ೨೪೦ ಪ್ರಬೇಧದ ಅಟ್ಟ ಇರುವೆಗಳು ಅದರಲ್ಲೂ ಎಲೆ ಕಡಿಯುವ ಇರುವೆಗಳು ಶಿಲೀಂದ್ರ ಕೃಷಿಯಲ್ಲಿ ಪರಿಣಿತಿಯನ್ನು ಸಾಧಿಸಿವೆ. ಎಲೆ ಕಡಿಯುವ ಇರುವೆಗಳು ಎಲೆ ಮುಂತಾದ ಸಾವಯವ ಪದಾರ್ಥಗಳನ್ನು ಸಂಗ್ರಹಿಸಿ ಅವುಗಳನ್ನು ಶೇಖರಿಸಿ ಗೊಬ್ಬರ ತಯಾರಿಸಿ ಅದರ ಮೇಲೆ ಶಿಲೀಂದ್ರ ಕೃಷಿಯನ್ನು ಮಾಡುತ್ತವೆ.  

ಆಫ್ರಿಕಾದ ಬೋಟ್ಸವಾನದ ಕಾಡುಗಳಲ್ಲಿ ಕಂಡು ಬರುವ ಮೆಟಬಿಲಿ ಇರುವೆಗಳು ಗೆದ್ದಲು ಗೂಡಿಗೆ ದಾಳಿ ಇಡುವ ವಿಧಾನ ಶತ್ರುಗಳ ಮೇಲೆ ಎರಗುವ ಪಕ್ಕಾ ವೃತ್ತಪರ ಸೈನ್ಯದ ಕಾರ್ಯಾಚರಣೆಯಂತಿರುತ್ತದೆ. ಸಿಕ್ಕಲ್ಲಿ ಕಂಡಲ್ಲಿ ಗೆದ್ದಲುಗಳನ್ನು ಸೈನಿಕ ಗೆದ್ದಲು, ಕೆಲಸಗಾರ, ಮರಿ, ಮೊಟ್ಟೆ ಯಾವುದನ್ನೂ ಲೆಕ್ಕಿಸದೇ ದಾಳಿ ಮಾಡಿ ಕೊಂದು ಆಹಾರಕ್ಕಾಗಿ ತಮ್ಮ ಗೂಡಿಗೆ ಹೊತ್ತೊಯ್ಯುತ್ತವೆ. ದಂಡು ಇರುವೆಗಳು(army ants) ಎಂದು ಕರೆಯಲಾಗುವ ಅಲೆಮಾರಿ ಇರುವೆಗಳಿವೆ. ಇವು ಶಾಶ್ವತ ಗೂಡನ್ನು ನಿರ್ಮಿಸಿ ಒಂದೆಡೆ ಇರುವುದಿಲ್ಲ. ಸೈನಿಕ ಇರುವೆಗಳು ತಾವೇ ಅಕ್ಕಪಕ್ಕದಲ್ಲಿ ಜೋಡಿಸಿಕೊಳ್ಳುತ್ತಾ ತಮ್ಮ ದೇಹದಿಂದ ಒಂದು ತಾತ್ಕಾಲಿಕ ಗೂಡನ್ನು ನಿರ್ಮಿಸಿಕೊಳ್ಳುತ್ತವೆ. ಇರುವೆಗಳು ಲಕ್ಷಗಟ್ಟಳೇ ಇರುವ  ಗುಂಪಿನಲ್ಲಿ ಕಾಡಿನ ನೆಲದಲ್ಲಿ ಚಲಿಸುತ್ತಾ ದಾರಿಗೆ ಅಡ್ಡಬಂದ ಇತರೆ ಇರುವೆ ಕೀಟ, ಕಪ್ಪೆ, ಓತಿ, ಹಾವು ಎಲ್ಲವನ್ನೂ ದಾಳಿ ಮಾಡಿ ಹಿಡಿದು ತಮ್ಮ ಬಲವಾದ ಮ್ಯಾಡಿಬಲ್ಲುಗಳಿಂದ ಕಚ್ಚಿ ತಮ್ಮ ದೇಹ ಹಿಂದಿರುವ ವಿಷದ ಮುಳ್ಳಿನಿಂದ ಚುಚ್ಚಿ ಕೊಂದು ತಿಂದು ಮುಗಿಸಿ ಮುಂದಿನ ಕ್ಯಾಂಪನ್ನು ಸೇರತ್ತವೆ. ಅಮೆಜಾನ್‌ ಕಾಡಿನಲ್ಲಿ ವಾಸಿಸುವ ಒಂದು ಬಗೆಯ ಇರುವೆ ಕಾಡಿನ ಸಸ್ಯದ ನಾರಿನಿಂದ ಬಲೆಯನ್ನು ಹೆಣೆಯಬಲ್ಲದು. ಬಲೆಯನ್ನು ದಾಟಿ ಹೋಗುವ ಯಾವುದೇ ಕೀಟ, ಪ್ರಾಣಿಯನ್ನು ಬಲೆ ರಂದ್ರದಲ್ಲಿ ಕಾದು ಕುಳಿತಿರುವ ಇರುವೆಗಳು ಕಚ್ಚಿ ಹಿಡಿದು ಬೇಟೆಯಾಡುತ್ತವೆ. ಹೀಗೆ ಇರುವೆಗಳು ತಮ್ಮ ಪರಿಸರ ತಕ್ಕಂತೆ ಹೊಂದಿಕೊಂಡು ಯೋಜನಾಬದ್ಧವಾಗಿ ಕಾರ್ಯನಿರ್ವಹಿಸಿ ಎಂತಹ ಪರಿಸರದಲ್ಲಿಯೂ ಶಿಸ್ತುಬದ್ಧವಾಗಿ, ಯಶಸ್ವಿಯಾಗಿ ಬದುಕನ್ನು ನಡೆಸುತ್ತಿವೆ. ಇರುವೆಗಳಿಂದ ನಾವು ಕಲಿಯುವುದು ಬಾಕಿ ಬೇಕಾದಷ್ಟಿದೆ ಅಲ್ಲವೇ?

 



No comments:

Post a Comment