ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, February 4, 2025

ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಉಳಿಸೋಣ

 ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಉಳಿಸೋಣ


                                            ಗಜಾನನ ಭಟ್ಟ

                                   (ಹವ್ಯಾಸಿಲೇಖಕರು, ಪ್ರೌಢಶಾಲಾ ಶಿಕ್ಷಕರು)

                                                   

ಭೂಮಿಯ ಮೇಲಿರುವ ಎಲ್ಲ ಜೀವಿಗಳು ಪ್ರಕೃತಿಯ ಕೂಸು. ಇಲ್ಲಿ ಹುಟ್ಟಿದ ಪ್ರತಿ ಜೀವಿಗೂ ಬದಕುವ ಸಮಾನ ಅವಕಾಶವಿದೆ. ಪ್ರಕೃತಿ ಒದಗಿಸುವ ಸೌಲಭ್ಯಗಳನ್ನು ಸಮಾನವಾಗಿ ಬಳಸುವ ಹಕ್ಕು ಎಲ್ಲ ಜೀವಿಗಳಿಗೆ ಇದೆ. ಅದರೆ, ಮಾನವ ಇಂದು ಎಲ್ಲಾ ವನ್ಯಜೀವಿಗಳನ್ನು ತನ್ನ ಹತೋಟಿಯಲ್ಲಿಡಲು ಪ್ರಯತ್ನಿಸುತ್ತಿದ್ದಾನೆ. ನಿರಂತರವಾಗಿ ಇತರ ಜೀವಿಗಳ ನಿಸರ್ಗದ ಮೇಲೆ ಸವಾರಿ ಮಾಡುತ್ತಿದ್ದಾನೆ. ಹೀಗಾಗಿ, ನಿಧಾನವಾಗಿ ಪರಿಸರ ತನ್ನ ಸೂಕ್ಷ್ಮ ಸಂವೇದಿ ಸಮತೋಲನವನ್ನು ಕಳೆದುಕೊಳ್ಳುತ್ತಿದೆ. ತತ್ಪರಿಣಾಮವಾಗಿ ಕೆಲವು ಜೀವಿಗಳ ಸಂತತಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅತಿ ವೇಗವಾಗಿ ಅಳಿವಿನಂಚಿಗೆ ತಲುಪುತ್ತಿದೆ. ಹೀಗೆ ಮುಂದುವರೆದರೆ ಕೆಲವೇ ವರ್ಷಗಳಲ್ಲಿ ಹಲವಾರು ಜೀವಿಗಳನ್ನು ಚಿತ್ರಪಟಗಳಲ್ಲಿ ಅಥವಾ ಅಂತರ್ಜಾಲಗಳಲ್ಲಿ ಮಾತ್ರ ನೋಡುವಂತಾಗಬಹುದು.

ಕಳೆದ 20 ವರ್ಷಗಳಲ್ಲಿ ಡಾಲ್ಪಿನ್‌ಗಳ ಪ್ರಮಾಣ ಶೇಕಡಾ 20 ರಷ್ಟು ಕಡಿಮೆಯಾಗಿದೆ. ಸಮುದ್ರಸಿಂಹಗಳು, ಹಲ್ಲಿನ ತಿಮಿಂಗಿಲಗಳು ಶೇಕಡಾ 75ರಷ್ಟು ಕಡಿಮೆಯಾಗಿದೆ. ವಿಶ್ವದ ಪಕ್ಷಿ ಪ್ರಬೇಧಗಳು ಶೇಕಾಡಾ 8 ರಷ್ಟು ಕಡಿಮೆಯಾಗಿರುವುದನ್ನು ಅಧ್ಯಯನ ತಿಳಿಸುತ್ತದೆ. ಚರ್ಮೋದ್ಯಮದ ಬಳಕೆಗಾಗಿ ಕಾಡುಬೆಕ್ಕು, ಖಡ್ಗಮೃಗ ಮುಂತಾದ ಪ್ರಾಣಿಗಳ ಚರ್ಮವನ್ನು ನಿರಂತರವಾಗಿ ಹತ್ಯೆ ಮಾಡಲಾಗುತ್ತಿದೆ. ಜೀವಿಗಳ ವಿನಾಶಕ್ಕೆ ಇದು ಪ್ರಮುಖ ಕಾರಣವಾಗಿದೆ. ಜಾಗತಿಕ ತಾಪಮಾನ ಬದಲಾವಣೆಯಿಂದಾಗಿ ಹಲ್ಲಿಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ .ಅಧ್ಯಯನದ ಪ್ರಕಾರ ಹಲ್ಲಿಗಳ ಪ್ರಮಾಣ ಶೇಕಡಾ 40 ರಷ್ಟು ಈಗಾಗಲೇ ನಾಶವಾಗಿದ್ದು 2080ರ ಹೊತ್ತಿಗೆಸಂಪೂರ್ಣವಾಗಿ ನಾಶವಾಗುವ ಸಾಧ್ಯತೆಯಿದೆ.

ಅಳಿವಿನಂಚಿನಲ್ಲಿರುವ ಪ್ರಮುಖ ಪ್ರಾಣಿಗಳು:

ಪ್ರಕೃತಿ ವಿಕೋಪಗಳಿಂದ, ಮಾನವನ ದುರಾಸೆಯಿಂದ ಅಥವಾ ಇನ್ನಾವುದೇ ಕಾರಣದಿಂದ ನಿರ್ದಿಷ್ಟ ಜೀವಿಸಂಕುಲದ ಮೇಲೆ‌ ಪ್ರತಿಕೂಲ ದಾಳಿಯಾಗಿ, ಇಡೀ ಸಂತತಿಗೆ ಹಾನಿಯಾಗಿ ಭಾಗಶ: ನಾಶವಾಗಿರುವ ಜೀವಿಗಳಿಗೆ ಅಳಿವಿನಂಚಿನ ಜೀವಿಗಳು ಎಂದು ಗುರುತಿಸೆಲಾಗುತ್ತದ. ಇಂತಹ ಹಾನಿಗೊಳಗಾದ ಜೀವಿಗಳನ್ನು 'ಕೆಂಪು ಮಾಹಿತಿ () 'ಪುಸ್ತಕದಲ್ಲಿ ಪ್ರಕಟಿಸಲಾಗುತ್ತದೆ. ಈ ರೀತಿ ಹಾನಿಗೊಳಗಾಗಿರುವ ಪ್ರಮುಖ ಜೀವಿಗಳ ಗುಂಪುಗಳನ್ನು ಈ ಕೆಳಗಿನಂತೆ ಪಟ್ಟಿಮಾಡಬಹುದು.

1. ಹಿಮಕರಡಿ: ಹಿಮಾಲಯ ಪರ್ವತ ಪ್ರದೇಶಗಳಲ್ಲಿ ವಿಶೇಷವಾಗಿ ಕಂಡುಬರುವ ಈ ಜೀವಿಗಳ ಸಂಖ್ಯೆ ಪ್ರಾಣಿಗಣತಿಯ ಪ್ರಕಾರ 6 ಸಾವಿರ. ಆದರೆ, ಕಳೆದ 20 ವರ್ಷಗಳಲ್ಲಿ ಇವುಗಳ ಸಂಖ್ಯೆ ಶೇಕಡಾ 32 ರಷ್ಟುಕುಸಿದಿದೆ.

2. ಕೃಷ್ಣಮೃಗ: ಹುಲ್ಲುಗಾವಲು ಪ್ರದೇಶಗಳಲ್ಲಿ ಕಂಡುಬರುವ ಇವುಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಮಾನವನ ದುರಾಸೆಯಿಂದ, ಕೃಷಿಭೂಮಿಯ ಹೆಚ್ಚಳದಿಂದಾಗಿ, ಅತಿಯಾದ ನಗರೀಕರಣದಿಂದ ಈ ಜೀವಿಗಳು ಭಾದಿತವಾಗುತ್ತಿದ್ದು ,ಇವುಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತಿದೆ. ಹೀಗೇ ಮುಂದುವರೆದರೆ, ಇವುಗಳ ಸಂತತಿ ಕೆಲವೇ ವರ್ಷಗಳಲ್ಲಿ ನಾಶವಾಗುವ ಅಪಾಯವಿದೆ.

3.ಖಡ್ಗಮೃಗ:

ಇಂಟರ್‌ನ್ಯಾಷನಲ್‌ ಯೂನಿಯನ್‌ ಫಾರ್‌ ಕನ್ಸರ್ವೇಷನ್ ಆಪ್‌ ನೇಚರ್‌( ) ಗುರುತಿಸಿದಂತೆ ಭಾರತದಲ್ಲಿ ಖಡ್ಗಮೃಗಗಳ ಸಂಖ್ಯೆಗಣನೀಯವಾಗಿ ಕುಂದುತ್ತಿರುವುದರ ಕುರಿತಾಗಿ ಎಚ್ಚರಿಸಿದೆ. ಹಿಮಾಲಯ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಈ ಜೀವಿಗಳ ಸಂಖ್ಯೆ ಕುಸಿಯಲು ಪ್ರಕೃತಿ ವಿಕೋಪಗಳು ಬಹುಮಟ್ಟಿಗೆ ಕಾರಣವಾಗಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಖಡ್ಗಮೃಗ ಸಂರಕ್ಷಣೆಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಿ ಇವುಗಳ ಸಂರಕ್ಷಣೆ ಮತ್ತು ಸಂತತಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

5.ಏಷಿಯಾದ ಸಿಂಹಗಳು:

 ಪ್ರಸ್ತುತ ಹೆಚ್ಚಿನ ಪ್ರಮಾಣದ ಸಿಂಹಗಳು ಕಅನಸಿಗುವುದು ಭಾರತದಲ್ಲಿ ಮಾತ್ರ ಎಂಬುದು ಹೆಮ್ಮೆಯ ಸಂಗತಿಯಾದರೂ ವರ್ಷದಿಂದ ವರ್ಷಕ್ಕೆ ಇವುಗಳ ಸಂಖ್ಯೆ ಅಪಾರ ಪ್ರಮಾಣದಲ್ಲಿ ಇಳಿಮುಖವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಗುಜರಾತಿನ ಗಿರ್‌ ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಇವುಗಳ ಸಂಖ್ಯೆ ಈಗ ಸುಮಾರು 200 ಕ್ಕೆ ಕು‌ಸಿದಿದೆ. ಗಿರ್’ ವನ್ಯಜೀವಿ ಕೇಂದ್ರದಲ್ಲಿ ಏಷ್ಯಾಟಿಕ್ ಸಿಂಹಗಳ ಸಂರಕ್ಷಣಾ ಕೇಂದ್ರವಿದೆ. ಇವುಗಳ ಸಂತತಿ ಹೆಚ್ಚಳಕ್ಕೆ ಹಲವಾರು ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಅಳಿವಿನಂಚಿನಲ್ಲಿರುವ ಜೀವಿಗಳ ಸಂರಕ್ಷಣೆಗೆ ನಾವೇನು ಮಾಡಬಹುದು ?

ಪರಿಸರವ್ಯವಸ್ಥೆಯ ಯಾವುದೇ ಜೀವಿಗೆ ಹಾನಿಯಾದರೂ ಮಾನವನು ಸೇರಿದಂತೆ ಉಳಿದ ಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬಹುಪಾಲು ಜೀವಿಗಳು ಅಳಿವಿನಂಚಿಗೆ ತಲುಪಲು ಪ್ರಮುಖ ಕಾರಣ ಮಾನವನೇ ಆಗಿದ್ದಾನೆ. ಹಾಗಾಗಿ, ವನ್ಯಜೀವಿಗಳ ರಕ್ಷಣೆಯ ಗುರುತರ ಜವಾಬ್ದಾರಿ ಕೂಡಾ ಮಾನವನದ್ದೇ ಆಗಿದೆ. ವನ್ಯಜೀವಿಗಳ ಅದರಲ್ಲೂ ಪ್ರಮುಖವಾಗಿ ಅಳಿವಿನಂಚಿನಲ್ಲಿರುವ ಜೀವಿಗಳರಕ್ಷಣೆಗಾಗಿ ಕೆಳಗಿನ ಪ್ರಮುಖ ಜವಾಬ್ದಾರಿಯುತ ಹಾಗೂ ಕ್ರಮಗಳನ್ನು ಕೈಗೊಳ್ಳಬಹುದು, ಆ ಮೂಲಕ ಅಳಿವಿನಂಚಿನ ಜೀವಿಗಳ ಪುನಶ್ಚೇತನಕ್ಕೆ ಕೈ ಜೋಡಿಸಬಹುದು.

1. ಅಳಿವಿನಂಚಿನಲ್ಲಿರುವ ಜೀವಿಗಳ ಸಂರಕ್ಷಣೆಗೆ ಅವುಗಳ ವಾಸಸ್ಥಾನ ಒಳಗೊಂಡಿರುವ ವನ್ಯಧಾಮಗಳ ವ್ಯಾಪ್ತಿ

    ಹೆಚ್ಚಿಸಬೇಕು.

2. ಅಪಾಯದಂಚಿನಲ್ಲಿರುವ ಜೀವಿಗಳ ಸಂತಾನೊತ್ಪತ್ತಿ ಪ್ರಮಾಣ ಹೆಚ್ಚಿಸಲು ಸೂಕ್ತಕ್ರಮ ಕೈಗೊಳ್ಳಬೇಕು.

3. ಜೀವಿಗಳ ನೈಜ ವಾಸನೆಲೆಗಳಲ್ಲಿ ಅವುಗಳ ಮುಕ್ತ ಜೀವನ ಕ್ರಮಕ್ಕೆ ಯುಕ್ತ ಅವಕಾಶ ಒದಗಿಸಬೇಕು.

4. ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಕುರಿತಾಗಿ ಶಾಲಾಮಕ್ಕಳಿಗೆ ಪಠ್ಯಕ್ರಮದಲ್ಲಿ ವಿಶೇಷ ಅರಿವು, ಕಾಳಜಿ

    ಮೂಡಿಸಬೇಕು.

5, ಮಾಧ್ಯಮಗಳಲ್ಲಿ ವನ್ಯಜೀವಿಗಳ ಸಂರಕ್ಷಣೆ, ಕಾಳಜಿ ಬಿಂಬಿಸುವ ಕಿರುಚಿತ್ರಗಳು ಹೆಚ್ಚೆಚ್ಚು ಪ್ರಸಾರವಾಗಬೇಕು.

6. ನೈಸರ್ಗಿಕ ಪರಿಸರವ್ಯವಸ್ಥೆ ಹೆಚ್ಚಿಸುವ ಸಲುವಾಗಿ ಪರಿಸರ ಇಲಾಖೆಯಿಂದ ಹೊಸ ಹೊಸ ಕಾರ್ಯಕ್ರಮಗಳ

    ಜಾರಿಯಾಗಬೇಕು.

7. ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ಮಾಡುವ ಸಂಘ, ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ, ಅಂಥ ಪ್ರಾಣಿಗಳನ್ನು

   ದತ್ತು ಕೊಡುವ‌ ವ್ಯವಸ್ಥೆ ವ್ಯಾಪಕವಾಗಿ ಜಾರಿಗೆ ಬರಬೇಕು.

8.ಇಂತಹ ಪ್ರಾಣಿಗಳನ್ನು ಬೇಟೆಯಾಡುವವರಿಗೆ ಅಥವಾ ಹಿಂಸಿಸುವರಿಗೆ ಶಿಕ್ಷಿಸುವ ಕಠಿಣ ಕಾನೂನುಗಳು

   ಜಾರಿಯಾಗಿ ಪಾಲನೆಯಾಗಬೇಕು.

ಕೆಲವು ಅಪರೂಪದ ಸಸ್ಯ ಮತ್ತು ಪ್ರಾಣಿಸಂಕುಲಗಳ ನಾಶಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಾನವನೇ ಕಾರಣಕರ್ತನಾಗಿದ್ದಾನೆ.ಇದನ್ನು ಸರಿದಾರಿಗೆ ತರುವ ಗುರುತರ ಜವಾಬ್ದಾರಿ ಕೂಡಾ ಆತನದ್ದೇ ಆಗಿರಬೇಕು

ಇನ್ನೂ ಕಾಲ ಮಿಂಚಿಲ್ಲ, ತಕ್ಷಣ ಜಾಗ್ರತರಾಗಿ ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ರಕ್ಷಣೆಗೆಮುಂದಾಗಿ ,ಭವಿಷ್ಯದಲ್ಲಿ ಜರುಗಬಹುದಾದ ಅಪಾಯಗಳಿಂದ ವನ್ಯಜೀವಿಗಳನ್ನು ಸಂರಕ್ಷಿಸೋಣ, ಪರಿಸರ ರಕ್ಷಣೆಗೆ ಕಂಕಣಬದ್ಧರಾಗೋಣ.


No comments:

Post a Comment