ಬಾಲಿ ಸಮುದ್ರದಲ್ಲೊಂದು ಲಕ್ಷ್ಮಣರೇಖೆ
ಲೇಖಕರು: ಸುರೇಶ ಸಂ ಕೃಷ್ಣಮೂರ್ತಿ
ಇಂಡೋನೇಷಿಯಾದ ಭೌಗೋಳಿಕ ರಚನೆ ಎಷ್ಟು ವಿಶೇಷವೋ ಅಲ್ಲಿರುವ ಪ್ರಾಣಿಸಂಕುಲದ ವೈವಿದ್ಯತೆಯೂ ಅಷ್ಟೇ ವಿಶೇಷವಾದದ್ದು. ಕೇವಲ ಇಪ್ಪತ್ತು ಕಿಮಿಗಳಷ್ಟು ಅಂತರದ ಲಂಬಕ್ ಕೊಲ್ಲಿಯಿಂದ ಬೇರ್ಪಟ್ಟಿರುವ ಬಾಲಿ ಮತ್ತು ಲಂಬಕ್ ದ್ವೀಪಗಳನ್ನು ಉದಾಹರಣೆಗೆ ತೆಗೆದುಕೊಂಡರೆ ಬಾಲಿ ದ್ವೀಪದಲ್ಲಿ ಏಷ್ಯಾಟಿಕ್ ಪ್ರಾಣಿ ಸಂಕುಲಗಳು ಕಂಡು ಬರುತ್ತವೆ. ಆದರೆ, ಲಂಬಕದಲ್ಲಿ ಆಸ್ಟ್ರೇಲಿಯಾದ ಪ್ರಾಣಿ ಸಂಕುಲ ಕಂಡುಬರುತ್ತದೆ. ಈ ವ್ಯತ್ಯಾಸ ಈ ಎರಡು ದ್ವೀಪಗಳಿಗೆ ಮಾತ್ರ ಸೀಮಿತವಾಗದೆ ವಾಲೆಸ್ ಲೈನ್ ಎಂದು ಕರೆಯಲಾಗುವ ಒಂದು ಕಾಲ್ಪನಿಕ ರೇಖೆಯ ಉದ್ದಕ್ಕೂ ಆಸ್ಟ್ರೇಲಿಯಾದ ಉತ್ತರಕ್ಕೆ ಇರುವ ಇಂಡೋನೇಷ್ಯ, ಮಲೇಷಿಯ, ಬ್ರೂನೆ ಮುಂತಾದ ದೇಶಗಳ ದ್ವೀಪ ಕಲ್ಪಗಳಲ್ಲಿ ಕಂಡುಬರುತ್ತದೆ. ಈ ವ್ಯತ್ಯಾಸವನ್ನು ಹಲವಾರು ಅನ್ವೇಷಕರು ಗಮನಿಸಿ ದಾಖಲಿಸಿದ್ದರು.
ಚಾರ್ಲ್ಸ್ ಡಾರ್ವಿನನ ಸಮಕಾಲೀನ ಮತ್ತು ನೈಸರ್ಗಿಕ ಆಯ್ಕೆಯ ಜೀವ ವಿಕಾಸದ ಸಿದ್ಧಾಂತವನ್ನು ಸ್ವತಂತ್ರವಾಗಿ ಮಂಡಿಸಿದ್ದ ಆಲ್ಫ್ರೆಡ್ ರಸ್ಸೆಲ್ ವಾಲೇಸ್ ಇಂಡೋನೇಷಿಯ ಮತ್ತು ಮಲೇಷಿಯಗಳ ಪ್ರಾಣಿ ಸಂಕುಲದಲ್ಲಿನ ವ್ಯತ್ಯಾಸಗಳ ಕಡೆಗೆ ಹೆಚ್ಚು ಅಕರ್ಷಿತನಾಗಿದ್ದನು. ಪ್ರಾಣಿ ಸಂಕುಲದ ಜೀವನಕ್ರಮಗಳ ಸುದೀರ್ಘ ವೀಕ್ಷಣೆಯ ಆಧಾರದ ಮೇಲೆ ಏಷಿಯಾ ಮತ್ತು ಆಸ್ಟ್ರೇಲಿಯಾದ ಪ್ರಾಣಿ ಸಂಕುಲದ ಸೀಮೆಯನ್ನು ಗುರುತಿಸಿದನು. ಬಾಲಿ-ಲಂಬಕ್ ನಿಂದ ಆರಂಭಿಸಿ ಬೋರ್ನಿಯ-ಸೆಲೆಬಿಸ್, ಫಿಲಿಪೈನ್ಸ್-ಸಂಗಿ ದ್ವೀಪಗಳ ನಡುವೆ ಪೂರ್ವೋತ್ತರವಾಗಿ ಎಳೆದ ಕಾಲ್ಪನಿಕ ಸೀಮಾರೇಖೆಯನ್ನು ವಾಲೇಸನ ರೇಖೆ ಎಂದು ಗುರುತಿಸಲಾಗಿದೆ. ವಾಲೇಸ್ ರೇಖೆಯ ಪೂರ್ವಕ್ಕೆ ಇರುವ ದ್ವೀಪಗಳ ಭೂಭಾಗಗಳ ಮೇಲೆ ಆಸ್ಟ್ರೇಲಿಯಾದ ಪ್ರಾಣಿಗಳು ಕಂಡು ಬಂದರೆ ಪಶ್ಷಿಮಕ್ಕೆ ಇರುವ ದ್ವೀಪಗಳಾದ ಸುಮಾತ್ರ, ಜಾವ, ಬಾಲಿ, ಬೋರ್ನಿಯಾ ಮುಂತಾದ ದ್ವೀಪಗಳಲ್ಲಿ ಏಷ್ಯಾಟಿಕ್ ಪ್ರಾಣಿಗಳು ಕಂಡು ಬರುವುದೇ ಇಲ್ಲಿನ ಒಂದು ವಿಶೇಷವಾಗಿದೆ.
ವಾಲೇಸನ ನಂತರ ಮ್ಯಾಕ್ಸ್ ಕಾರ್ಲ್ ವಿಲಿಯಂ ವೆಬರ್() ಎಂಬಾತ ತನ್ನ ಅನ್ವೇ಼ಷಣೆಯ ಆಧಾರದ ಮೇಲೆ ವಾಲೇಸನ ರೇಖೆಯನ್ನು ಆಸ್ಟ್ರೇಲಿಯಾದ ಪ್ರಾಣಿ ಸಾಮ್ರಾಜ್ಯದಿಂದ ತುಂಬಾ ದೂರದಲ್ಲಿ ಗುರುತಿಸಲಾಗಿದೆ ಎಂದು ಹೇಳಿ ಮಲಕಾಸ್-ಸೆಲಿಬಿಸ್, ಕೈ-ತಿಮೋರ್ ನಡುವೆ ಹಾದು ಹೋಗುವಂತೆ ಮತ್ತೊಂದು ಕಾಲ್ಪನಿಕ ಸೀಮಾ ರೇಖೆಯನ್ನು ಪ್ರತಿಪಾದಿಸಿದನು. ಅಲ್ಲಿ ಕಂಡು ಬರುವ ಮೃದ್ವಂಗಿಗಳು ಮತ್ತು ಸ್ತನಿಗಳ ವೈವಿದ್ಯತೆಯನ್ನು ಗಮನಿಸಿದ ಮೇಲೆ ಅವನು ಈ ರೇಖೆಯನ್ನು ಗುರುತಿಸಿದನು. ವಾಲೇಸ್ ಮತ್ತು ವೆಬರ್ ರೇಖೆಗಳ ನಡುವೆ ಕಂಡು ಬರುವ ದ್ವೀಪಗಳನ್ನು ವಾಲೇಷಿಯ ಎಂದು ಮುಂದೆ ಕರೆಯಲಾಯಿತು. ವಾಲೇಷಿಯದ ಕೆಲವು ಪ್ರಾಣಿಗಳು ಏಷ್ಯಾಟಿಕ್ ಪ್ರಾಣಿಗಳ ಮತ್ತು ಆಸ್ಟ್ರೇಲಿಯಾದ ಪ್ರಾಣಿಗಳೆರಡರ ಗುಣವಿಶೇ಼ಷಗಳನ್ನು ಹೊಂದಿರುವುದನ್ನು ಇಲ್ಲಿ ಗಮನಿಲಾಯಿತು.
ವಾಲೇಸನ ಸೀಮಾರೇಖೆಯ ವಿಭಜನೆಯಿಂದ ತಿಳಿದು ಬರುವ ಅಂಶವೆಂದರೆ ಬಹುತೇಕ ಏಷ್ಯಾಟಿಕ್ ಕಪ್ಪೆಗಳು ಬಾಲಿಯವರೆಗೆ ಮಾತ್ರ ಕಂಡು ಬರುತ್ತವೆ, ಅಲ್ಲಿಂದ ಪೂರ್ವಕ್ಕೆ ಇಲ್ಲ. ಆಸ್ಟ್ರೇಲಿಯಾದ ಉಭಯವಾಸಿಗಳು ಹೆಚ್ಚು ಅಂದರೆ ನ್ಯೂಗಿನಿಯವರೆಗೆ ಕಂಡುಬರುತ್ತವೆ ಅಲ್ಲಿಂದ ಮುಂದಕ್ಕೆ ಇಲ್ಲ. ಏಷ್ಯಾಟಿಕ್ ಸರೀಸೃಪಗಳು ಬಹತೇಕ ವಾಲೇಸ್ ಸೀಮಾರೇಖೆಯನ್ನು ದಾಟುವುದಿಲ್ಲ. ಅತ್ತಲಾಗೆ ಆಸ್ಟ್ರೇಲಿಯಾದ ಹಾವುಗಳು ಮಲಕಾಸನ್ನು ದಾಟುವುದಿಲ್ಲ. ಲಂಬಕದಲ್ಲಿ ಕಂಡುಬರುವ ಹಕ್ಕಿಗಳಲ್ಲಿ ಮುಕ್ಕಾಲು ಪಾಲು ಏಷ್ಯಾಟಿಕ್ ಆಗಿವೆ. ಅತ್ತ ಬಾಲಿಯಲ್ಲಿ ಕಂಡುಬರುವ ಆಸ್ಟ್ರೇಲಿಯಾ ಹಕ್ಕಿಗಳು ಕಡಿಮೆ. ಆದರೂ, ಹಕ್ಕಿಗಳಿಗೆ ಸೀಮಾರೇಖೆ ನಗಣ್ಯ ಎಂಬುದನ್ನೂ ಇಲ್ಲಿ ಅನೇಕ ಉದಾಹರಣೆಗಳಲ್ಲಿ ಕಾಣಬಹುದು. ಏಷ್ಯಾಟಿಕ್ ಸ್ತನಿಗಳು ಹೆಚ್ಚು ಅಂದರೆ ಜಾವ, ಬೋರ್ನಿಯದ ವರೆಗೆ ಮಾತ್ರ ಕಂಡು ಬರುತ್ತವೆ. ಕೆಲವೇ ಕೆಲವು ಬಾಲಿ , ಸಿಲಿಬಿಸ್ ಗಳಲ್ಲಿ ಕಂಡುಬರುತ್ತವೆ. ಆಸ್ಟ್ರೇಲಿಯಾದ ಸ್ತನಿಗಳು ಬಹುತೇಕ ನ್ಯೂಗಿನಿಯಿಂದ ಮುಂದಕ್ಕೆ ಕಂಡುಬರುವುದಿಲ್ಲ.
ಏಷ್ಯಾಟಿಕ್ ಪ್ರಾಣಿ ಸಂಕುಲವು ವಾಲೇಸ್ ಸೀಮಾರೇಖೆಯ ಪಶ್ಚಿಮಕ್ಕೆ ಇರುವ ಬಾಲಿ ಮತ್ತಿತರ ದ್ವೀಪಗಳಿಗೆ ಸಾಗರವನ್ನು ದಾಟಿ ಪ್ರವೇಶವಾದದ್ದು ಹೇಗೆ ಮತ್ತು ಅವು ಬಾಲಿ ಪಕ್ಕದಲ್ಲಿಯೇ ಇರುವ ಲಂಬಕ್ ದ್ವೀಪದಲ್ಲಿ ಕಂಡು ಬರದಿರಲು ಕಾರಣವೇನು? ಹಾಗೆ ಲಂಬಕದವರೆಗೆ ಕೆಲವಾದರೂ ಅಸ್ಟ್ರೇಲಿಯನ್ ಪ್ರಾಣಿ ಸಂಕುಲ ಸಾಗರವನ್ನು ದಾಟಿ ಪ್ರವೇಶಿಸಿದ್ದು ಹೇಗೆ ಮತ್ತು ಅವು ಪಕ್ಕದಲ್ಲಿಯೇ ಇರುವ ಬಾಲಿ ದ್ವೀಪವನ್ನು ತಲುಪದಿರುವಂತೆ ತಡೆದಿದ್ದಾದರೂ ಏನು? ಹೀಗೆ ಉದ್ಭವವಾಗುವ ಹಲವಾರು ಪ್ರಶ್ನೆಗಳಿಗೆ ಹಲವು ಸಿದ್ಧಾಂತಗಳು ಉತ್ತರಿಸುವ ಪ್ರಯತ್ನಗಳನ್ನು ಮಾಡಿವೆ. ಸುಮಾರು ಹದಿನೈದು ಸಾವಿರ ವರ್ಷಗಳ ಹಿಂದೆ ಹಿಮಯುಗದಲ್ಲಿ ಭೂಮಿಯಲ್ಲಿನ ಬಹುತೇಕ ನೀರು ಮಂಜಗಡ್ಡೆಯ ರೂಪದಲ್ಲಿ ಧೃವಗಳಲ್ಲಿ ಶೇಖರವಾಗಿತ್ತು. ಹೀಗಾಗಿ, ಭೂಮಿಯ ಸಮುದ್ರಗಳಲ್ಲಿ ನೀರಿನ ಮಟ್ಟವು ಈಗ ಇರುವ ಮಟ್ದಕ್ಕಿಂತ 110ಮೀಟರಿನಷ್ಟು ಕೆಳಕ್ಕೆ ಇದ್ದಿತು. ಏಷ್ಯಾ ಮತ್ತು ಆಸ್ಟ್ರೇಲಿಯಾಗಳು ಒಟ್ಟಿಗೆ ಸೇರಿಕೊಂಡು ರಚನೆಯಾಗಿದ್ದ ಒಂದು ಬೃಹತ್ ಭೂಪ್ರದೇಶವಿದ್ದಿತು. ಇಂಡೋನೇಷಿಯ ಮಲೇಷಿಯಗಳನ್ನೊಳಗೊಂಡು ಬೋರ್ನಿಯ, ಜಾವಾ, ಬಾಲಿ, ಸುಮಾತ್ರ ಮುಂತಾದ ಅನೇಕ ದ್ವೀಪಕಲ್ಪಗಳು ಸುಂಡಲ್ಯಾಂಡ್ ಎಂದು ಕರೆಯಲಾಗುವ ಒಂದರ ಭೂಭಾಗವಾಗಿದ್ದು ಪರಸ್ಪರ ಮತ್ತು ಏಷ್ಯಾ ಖಂಡದೊಂದಿಗೆ ನೇರವಾಗಿ ಭೂ ಸಂಪರ್ಕ ಹೊಂದಿದ್ದವು. ಇಲ್ಲಿ ಸ್ವಾಭಾವಿಕವಾಗಿ ಎಲ್ಲ ಪ್ರಾಣಿ ಸಂಕುಲವೂ ಯಾವುದೇ ಅಡೆತಡೆ ಇಲ್ಲದೆಯೇ ಒಂದು ಪ್ರದೇಶದಿಂದ ಮತ್ತೊಂದಕ್ಕೆ ತಿರುಗಾಡಲು ಅವಕಾಶವಿದ್ದಿತು ಎಂದಾಯಿತು. ಆದರೂ, ಆಗಲೂ ಬಾಲಿ ಮತ್ತು ಲಂಬಕ್ ನಡುವೆ ಮಿಲಿಯಾಂತರ ವರ್ಷಗಳಿಂದ ನೀರು ತುಂಬಿದ ಅತಿ ಆಳವಾದ ಸಮುದ್ರದ ಕೊಲ್ಲಿಯೊಂದು ಬಾಯಿ ತೆರೆದುಕೊಂಡಿದ್ದು.ಇಂದಿನ ವಾಲೇಸ್ ರೇಖೆಯ ಉದ್ದಕ್ಕೂ ವ್ಯಾಪಿಸಿ ಸಹಜವಾಗಿ ಎರಡೂ ಕಡೆಯ ಪ್ರಾಣಿಗಳ ಓಡಾಟಕ್ಕೆ ತಡೆ ಒಡ್ಡಿ ಆ ಪ್ರಾಣಿಗಳ ಸಂವರ್ಧನೆಯನ್ನು ಆಯಾ ಭೂಪ್ರದೇಶಗಳಿಗೆ ಸೀಮಿತ ಗೊಳಿಸಿರಬೇಕು. ಆಸ್ಟ್ರೇಲಿಯ ಮತ್ತು ಟಾಸ್ಮೇನಿಯಾಗಳೂ ಸೇರಿ ಸಾಹುಲ್ ಎಂದು ಕರೆಯಲಾಗುವ ಒಂದೇ ಭೂಭಾಗಗಳಾಗಿದ್ದು ಅಲ್ಲಿನ ಪ್ರಾಣಿಗಳ ಓಡಾಟವೂ ಒಂದು ಪ್ರದೇಶದಿಂದ ಮತ್ತೊಂದಕ್ಕೆ ಸುಗಮವಾಗಿದ್ದೀತು. ಅದರಲ್ಲಿ ಹಲವಾರು ಪ್ರಾಣಿ ಜಾತಿಗಳು ವಾಸಿಸುತ್ತ, ಸಂಚರಿಸುತ್ತ ಮತ್ತು ಮುಕ್ತವಾಗಿ ಸಂತಾನೋತ್ಪತ್ತಿ ಮಾಡುತ್ತ ಸಂವರ್ಧನೆಯಾಗಿದ್ದವು. ಹಿಮಯುಗಗಳ ಅಂತ್ಯದಲ್ಲಿ ಸಮುದ್ರ ಮಟ್ಟಗಳು ಏರಿದಾಗ ಮತ್ತು ಪ್ಲೇಟ್ ಟೆಕ್ಟೋನಿಕ್ಸ್ ಪರಿಣಾಮ ಬೀರಲು ಪ್ರಾರಂಭಿಸಿದ್ದರ ಕಾರಣದಿಂದ, ನಡುವೆ ತೆರೆದಿರುವ ಈ ಭೂಭಾಗ ವನ್ನು ಸಾಗರವು ಆಕ್ರಮಿಸಿಕೊಂಡಿತು. ಭೂತಾಪವು ಏರುತ್ತಾ ಹೋದಂತೆ ಧೃವ ಗಳಲ್ಲಿನ ಮತ್ತಷ್ಟು ಮಂಜು ಕರಗಿ ಸಾಗರದ ಮಟ್ಟ ಏರುತ್ತಾ ಹೋದಂತೆ ತಗ್ಗು ಪ್ರದೇಶಗಳು ನೀರನಿಂದ ತುಂಬಿ, ಇಂದಿನ ಇಂಡೋನೇಷಿಯ ಮಲೇಷಿಯಗಳು, ವಾಲೇಷಿಯ ಮುಂತಾದವು ದ್ವೀಪಗಳಾಗಿ ಉಳಿದುಕೊಂಡಿರಬಹುದು ಎಂದು ಒಂದು ಅಂದಾಜು ಮಾಡಲಾಗಿದೆ. ವಾಲೇಸ್ ರೇಖೆಯ ಉದ್ದಕ್ಕೂ ಇದ್ದ ಕೊಲ್ಲಿಯ ಆಳ ಮತ್ತು ಪ್ರವಾಹ ಪ್ರಾಣಿ ಸಂಕುಲಗಳು ಅದನ್ನು ದಾಟದಿರಲು ಕಾರಣವಾಗಿದ್ದರಬಹುದು.
ಏಷ್ಯಾದ ಕೆಲವಾದರೂ ಪ್ರಾಣಿಗಳು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತವಾದರೂ ಕೆಲವು ಪಕ್ಷಿಗಳು ಮತ್ತು ಯೂಕಲಿಪ್ಟಸ್ ಮುಂತಾದ ಸಸ್ಯಗಳನ್ನು ಹೊರೆತುಪಡಿಸಿ ಆಸ್ಟ್ರೇಲಿಯಾದ ಪ್ರಾಣಿಗಳು ಏಷ್ಯಾದಲ್ಲಿ ಕಂಡು ಬರುವುದಿಲ್ಲ ಎಂಬುದು ಒಂದು ವಿಸ್ಮಯ. ವಾಲೇಸ್ ರೇಖೆಯು ಅಲ್ಲಿ ಗಮನಿಸಲಾದ ಪ್ರಾಣಿ ಸಂಕುಲದ ವಿದ್ಯಮಾನಗಳನ್ನು ಅವಲಂಬಿಸಿ ನಕ್ಷೆಯ ಮೇಲೆ ಎಳೆದ ಒಂದು ಕಾಲ್ಪನಿಕ ಲಕ್ಷ್ಮಣರೇಖೆ ಅಷ್ಟೆ .ಇದು ಭೂಮಿಯ ಮೇಲೆ ಹಿಮಯುಗವೊಂದು ಬಂದುಹೋದ ಕುರುಹನ್ನು ಸಹ ನೀಡುತ್ತದೆ.
No comments:
Post a Comment