ವಿಜ್ಞಾನ ಕಲಿಕೆಯ ಆಗರ SISF - 2025 !!!
ಲೇ: ರಾಮಚಂದ್ರಭಟ್ ಬಿ.ಜಿ.
ಪುದುಚೆರಿ ಅಥವಾ ಪಾಂಡಿಚೆರಿ!!! ತಮಿಳು ಸಂಸ್ಕೃತಿಯನ್ನು ಹಾಸು ಹೊಕ್ಕಾಗಿಸಿಕೊಂಡ ಐತಿಹಾಸಿಕ ಮಹತ್ವವುಳ್ಳ ಕಡಲ ತೀರದ ಬಂದರು ನಗರ. ಒಂದು ಕಾಲದಲ್ಲಿ ಇದು ಫ್ರೆಂಚರ ಭಾರತೀಯ ವಸಾಹತುವಾಗಿತ್ತು. ಇಂದಿಗೂ ಅದರ ಕುರುಹುಗಳು ಯಥೇಚ್ಛವಾಗಿ ಕಂಡುಬರುತ್ತವೆ. ಇಂದು ಅದು ಭಾರತದ ಕೇಂದ್ರಾಡಳಿತ ಪ್ರದೇಶವಾಗಿದೆ. ಅದೊಂದು ಅಸಾಧಾರಣ ಮೇಳ !! ದಕ್ಷಿಣ ಭಾರತದ ಅನೇಕ ಪ್ರತಿಭೆಗಳ ಸಂಗಮ. ೬ ರಾಜ್ಯಗಳು . ವೈವಿಧ್ಯಮಯ ವಿಷಯಗಳಲ್ಲಿ ೨೪೦ ವಿಜ್ಞಾನ ಮಾದರಿಗಳ ಪ್ರದರ್ಶನ!!! ಜ್ಞಾನ ತೃಷೆಯುಳ್ಳ ಕಲಿಕಾರ್ಥಿಗಳಿಗೆ ಕಲಿಕೆಗೆ ವಿಫುಲ ಅವಕಾಶ.
ಈ ಬಾರಿಯ ರಾಷ್ಟ್ರ ಮಟ್ಟದ ವಿಜ್ಞಾನ ಮೇಳ- SISF - 2025 ದಲ್ಲಿ ಸ್ಪರ್ಧಾಳುವಾಗಿ ಪಾಲ್ಗೊಳ್ಳುವ ಅವಕಾಶವೊಂದು ಅನಿರೀಕ್ಷಿತವಾಗಿ ಬಂದೊದಗಿತು. ಸಾಮಾನ್ಯವಾಗಿ ತೀರ್ಪುಗಾರ ಅಥವಾ ಜ್ಯೂರಿಯಾಗಿ ಪಾಲ್ಗೊಳ್ಳುತ್ತಿದ್ದ ನನಗೆ ಮೊದಲ ಬಾರಿಗೆ ಸ್ಫರ್ಧಾಳುವಾಗಿ ಪಾಲ್ಗೊಳ್ಳುವ ಅವಕಾಶ ಅಯಾಚಿತವಾಗಿಯೇ ಬಂದೊದಗಿತ್ತು. ದಕ್ಷಿಣ ಬಾರತದ ಐದು ರಾಜ್ಯಗಳಾದ ಕರ್ನಾಟಕ , ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಶಿಕ್ಷಣ ಇಲಾಖೆಗಳು ಹಾಗೂ ಇಂತಹ ವಿಜ್ಞಾನ ವಸ್ತು ಪ್ರದರ್ಶನಗಳು ಶಿಕ್ಷಕರೇ ಇರಲಿ, ವಿದ್ಯಾರ್ಥಿಗಳೇ ಇರಲಿ ಯಾರಿಗಾದರೂ ಕಲಿಕೆಗೆ ಹೊಸ ಆಲೋಚನೆಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತವೆ. ಇವು ವೈಜ್ಞಾನಿಕ ಚಿಂತನೆ ಮತ್ತು ಅಭಿಯಾನವನ್ನು ಉತ್ತೇಜಿಸುವ ಉತ್ತಮ ವೇದಿಕೆಯಾಗಿವೆ. ಈ ಪ್ರದರ್ಶನಗಳು ಮಕ್ಕಳಿಗೆ ಜ್ಞಾನವರ್ಧನೆ, ಸಂಶೋಧನೆ, ಹಾಗೂ ಅಭಿವ್ಯಕ್ತಿಯ ಅವಕಾಶಗಳನ್ನು ನೀಡುತ್ತವೆ. ಪ್ರಪಂಚದಲ್ಲಿ ಸಂಭವಿಸುವ ವೈಜ್ಞಾನಿಕ ಪ್ರಗತಿಗಳ ಕುರಿತಾದ ಹೊಸ ದೃಷ್ಟಿಕೋನಗಳನ್ನು ಅನ್ವೇಷಿಸಲು ವಿದ್ಯಾರ್ಥಿಗಳಿಗೆ ಪ್ರೇರಣೆಯನ್ನು ನೀಡುತ್ತವೆ.
ವೈಜ್ಞಾನಿಕ ಚಿಂತನೆಗೆ ಉತ್ತೇಜನ : ವಿಜ್ಞಾನ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ತಿಳಿವಳಿಕೆಯನ್ನು ವಿಸ್ತಾರಗೊಳಿಸಬಹುದು. ಅವರು ಕೈಗೊಳ್ಳುವ ಯೋಜನೆಗಳು ವಿವಿಧ ವೈಜ್ಞಾನಿಕ ತತ್ತ್ವಗಳ ಮೇಲೆ ಆಧಾರಿತವಾಗಿರುತ್ತವೆ ಮತ್ತು ಈ ಮೂಲಕ ಅವುಗಳು ನೈತಿಕ, ಸಾಮಾಜಿಕ, ಹಾಗೂ ತಾಂತ್ರಿಕ ಪರಿಹಾರಗಳನ್ನು ಹುಡುಕಲು ಸಹಾಯ ಮಾಡುತ್ತವೆ.
ಸೃಜನಶೀಲತೆ ಮತ್ತು ಅವಧಾನವನ್ನು ಉತ್ತೇಜಿಸುವುದು : ವಿಜ್ಞಾನ ಪ್ರದರ್ಶನಗಳು ಮಕ್ಕಳು ತಮ್ಮ ಸೃಜನಶೀಲತೆಯನ್ನು ವಿಸ್ತಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೊಸ ಆವಿಷ್ಕಾರಗಳನ್ನು ಅನ್ವೇಷಿಸುವ ಹಾಗೂ ಯೋಜನೆಗಳನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತವೆ. ವೈಜ್ಞಾನಿಕ ಸೃಜನಶೀಲತೆ ವಿದ್ಯಾರ್ಥಿಗಳಲ್ಲಿ ವಿಶ್ಲೇಷಣಾತ್ಮಕ ಚಿಂತನೆ ಮತ್ತು ಹೊಸ ಆವಿಷ್ಕಾರಗಳನ್ನು ಹುಟ್ಟುಹಾಕುತ್ತದೆ.
ಅನುಭವದ ಮೂಲಕ ಅಧ್ಯಯನ : ವೈಜ್ಞಾನಿಕ ಪ್ರದರ್ಶನಗಳು ವೈಜ್ಞಾನಿಕ ಸಿದ್ಧಾಂತಗಳನ್ನು ಅನುಭವದ ಮೂಲಕ ಕಲಿಕೆಗೆ ಒತ್ತು ನೀಡುತ್ತವೆ. ವಿದ್ಯಾರ್ಥಿಗಳು ತಮ್ಮದೇ ಆದ ಯೋಜನೆಗಳನ್ನು ರೂಪಿಸಿ ಮತ್ತು ಸಂಶೋಧನೆ ಮಾಡಿ, ಅದರಲ್ಲಿ ಸಿದ್ಧಾಂತಗಳನ್ನು ಅನುಸರಿಸುವ ಮೂಲಕ ಶಾಸ್ತ್ರೀಯ ವಿಜ್ಞಾನದ ಪಾಠಗಳನ್ನು ನೇರವಾಗಿ ಕಲಿಯಬಹುದು.
ಸಾಮೂಹಿಕ ಕೆಲಸ ಮತ್ತು ಜವಾಬ್ದಾರಿ: ವೈಜ್ಞಾನಿಕ ಪ್ರದರ್ಶನಗಳಲ್ಲಿ ಭಾಗವಹಿಸುವುದು ಸಹಕಾರ ಮತ್ತು ತಂಡದ ಕೆಲಸದ ಮಹತ್ವವನ್ನು ಕಲಿಸುತ್ತದೆ. ತಂಡದೊಂದಿಗೆ ಕೆಲಸ ಮಾಡುವಾಗ ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಕೌಶಲ್ಯಗಳನ್ನು ಮತ್ತು ತಂಡದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಬಹುದು.
ಪ್ರಶಸ್ತಿಯನ್ನು ಪಡೆಯುವ ಅವಕಾಶ: ವಿಜ್ಞಾನ ಪ್ರದರ್ಶನಗಳು ಮಕ್ಕಳನ್ನು ಪ್ರಶಂಸಿಸಲು ಮತ್ತು ಉತ್ತೇಜಿಸಲು ಉತ್ತಮ ವೇದಿಕೆಯಾಗಿವೆ. ಸಹಪಾಠಿಗಳು ಮತ್ತು ವರ ಇತರರಿಗೆ ವೈಜ್ಞಾನಿಕ ಜ್ಞಾನವನ್ನು ಪರಿಚಯಿಸುವ ಅವಕಾಶವನ್ನು ನೀಡುತ್ತದೆ. ಇದು ವಿದ್ಯಾರ್ಥಿಗಳಿಗೆ ಮುಂದಿನ ವಿಜ್ಞಾನದಲ್ಲಿ ಅಥವಾ ಇತರೆ ಕ್ಷೇತ್ರಗಳಲ್ಲಿ ಉತ್ತಮ ಗುರಿಗಳನ್ನು ಸಾಧಿಸಲು ಪ್ರೇರಣೆಯಾಗಬಹುದು.
ಕ್ಷಿಪ್ರ ಬದಲಾವಣೆಯ ಜಗತ್ತಿನಲ್ಲಿ ವೈಜ್ಞಾನಿಕ ಪಥ: ಇಂದಿನ AI ಪ್ರಪಂಚದಲ್ಲಿ ವೈಜ್ಞಾನಿಕ ಅಭಿವೃದ್ಧಿ ವೇಗವಾಗಿ ನಡೆಯುತ್ತಿದೆ. ನಿನ್ನೆಯ ತಂತ್ರಜ್ಞಾನ ಇಂದಿಗೆ ಹಳಸಲು. ಯುವ ಪೀಳಿಗೆಗೆ ಹೊಸ ಕಲಿಕೆಗಳು ಮತ್ತು ಹೊಸ ಆವಿಷ್ಕಾರಗಳನ್ನು ಮಾಡಿದರೆ ಜಗತ್ತಿನಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ಸಾಧ್ಯವಾಗುತ್ತದೆ. ವಿಜ್ಞಾನ ಪ್ರದರ್ಶನಗಳು ಈ ದಾರಿಯಲ್ಲಿ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತವೆ.
೬ ಪ್ರಾಂತ್ಯಗಳ ಗುಂಪು ವಿಭಾಗದ ಸ್ಪರ್ಧೆಯಲ್ಲಿ NCSM ಪ್ರಥಮ ಬಹುಮಾನವು ಹಾಸನದ ವಿಜಯ ಶಾಲೆಯ ಪಾಲಾಯಿತು. ಶ್ರೀಮತಿ ಅನಿತಾ ಜೆ ಯವರ ಮಾರ್ಗದರ್ಶನದಲ್ಲಿ ೧೦ನೇ ತರಗತಿಯ ವಿದ್ಯಾರ್ಥಿಗಳಾದ ವರುಣ್ ಎಚ್ ಎಂ ಮತ್ತು ತ್ರಿಭುವನ್ ಎಸ್ ಗೌಡ ರವರು "ಮ್ಯಾಗ್ನೆಟೋಹೈಡ್ರೋಡೈನಾಮಿಕ್ ಡ್ರೈವ್" ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.
ವಿದ್ಯಾರ್ಥಿಗಳ ವೈಯಕ್ತಿಕ ವಿಭಾಗದಿಂದ ಪ್ರಥಮ ಬಹುಮಾನ ಬೆಂಗಳೂರಿನ ಹೊಸರೋಡ್ ನ ಚನ್ನಕೇಶವ ಪಬ್ಲಿಕ್ ಶಾಲೆಯ ೮ನೆ ತರಗತಿಯ ಪಾಂಡುರಂಗನ ಪಾಲಾಯಿತು.
ಈ ವಿದ್ಯಾರ್ಥಿಯು ಮೆಕ್ಯಾನಿಕಲ್ ಜನರೇಟರ್ ಎಂಬ ಮಾದರಿಯನ್ನು ಪ್ರದರ್ಶಿಸಿದ. ಯಾಂತ್ರಿಕವಾಗಿ ಉತ್ಪಾದಿತ ಶಕ್ತಿ, ಎಸಿ ಮೋಟರ್ ಬಳಸಿ ಪರ್ಯಾಯ ವಿದ್ಯುತ್ ಉತ್ಪತ್ತಿ ಮಾಡುತ್ತದೆ.
ಅನ್ವಯ: ಈ ಸಾಧನದಿಂದ ಉತ್ಪತ್ತಿಯಾಗುವ ವಿದ್ಯುತ್ ಬಲ್ಬ್, ಮೊಬೈಲ್ ಫೋನ್ ಮುಂತಾದ ಉಪಕರಣಗಳನ್ನು ಚಲಾಯಿಸಲು ಬಳಸಬಹುದು. ಉಳಿತಾಯಗೊಂಡ ಶಕ್ತಿಯನ್ನು ಬ್ಯಾಟರಿಯಲ್ಲಿ ಸಂಗ್ರಹಿಸಬಹುದು ಅಥವಾ ಪವರ್ ಬ್ಯಾಂಕ್‌ಗೆ ಹಿಂತಿರುಗಿಸಬಹುದು.
ಶಿಕ್ಷಕ ಜೋಷುವಾ ಮಾರ್ಗದರ್ಶನದಲ್ಲಿ ಈ ಮಾದರಿಯನ್ನು ಸಿದ್ಧಪಡಿಸಿ ಪ್ರದರ್ಶಿಸಲಾಯಿತು.
SISF 2025 ವಿಜ್ಞಾನ ಮೇಳದಲ್ಲಿ ಶಿಕ್ಷಕರ ವಿಭಾಗದಿಂದ ನನ್ನ "ಗ್ರೀನ್ ಕೆಮಿಸ್ಟ್ರಿ - ಮೈಕ್ರೋಸ್ಕೇಲ್ ಎಕ್ಸ್‌ಪರಿಮೆಂಟ್ಸ್" ಪ್ರದರ್ಶನವು ಪ್ರಥಮ ಬಹುಮಾನ ಹಾಗೂ ಬೆಸ್ಟ್ ಎಗ್ಸಿಬಿಟ್ ಗೆ ಆಯ್ಕೆಯಾಗಿ ಕರ್ನಾಟಕ ಟ್ರೋಫಿ ಗೆ ಪಾತ್ರವಾಯಿತು.
ಈ ನವೀನ ವಿಧಾನದಿಂದ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಹಾಗೂ ಕಡಿಮೆ ವೆಚ್ಚದಲ್ಲಿ ರಾಸಾಯನಿಕ ಪ್ರಯೋಗಗಳ ಪ್ರತ್ಯಕ್ಷ ಅನುಭವಪಡೆಯಲು ಅನುಕೂಲವಾಗುತ್ತದೆ.
ಲೇಖಕರು ಬಳಸಿದ ಸೂಕ್ಷ್ಮ ಪ್ರಮಾಣದ ರಸಾಯನಶಾಸ್ತ್ರ ಪ್ರಯೋಗದಲ್ಲಿ ಬಳಸಿದ ಸಾಮಗ್ರಿಗಳ ಪ್ರದರ್ಶನ
ಕಡಿಮೆ ಪ್ರಮಾಣದ ವಸ್ತುಗಳನ್ನು ಬಳಸಿ ಹೆಚ್ಚಿನ ಪ್ರಯೋಗಗಳನ್ನು ನಡೆಸಲು ಇದು ನೂತನ ಪ್ರಯತ್ನವಾಗಿದ್ದು, ಭವಿಷ್ಯದ ವಿಜ್ಞಾನ ಶಿಕ್ಷಣಕ್ಕೆ ಪ್ರೇರಣೆಯಾಗಿದೆ. ಮೈಕ್ರೋಸ್ಕೇಲ್ ಪ್ರಯೋಗ ವಿಧಾನವು ಪದಾರ್ಥಗಳ ಬಳಕೆಯನ್ನು ತಗ್ಗಿಸಿ, ಅಪಾಯವನ್ನು ಕಡಿಮೆ ಮಾಡುತ್ತಾ, ವಿದ್ಯಾರ್ಥಿಗಳ ವೈಜ್ಞಾನಿಕ ಕುತೂಹಲವನ್ನು ಹೆಚ್ಚಿಸುತ್ತದೆ.ಶಿಕ್ಷಕರ ವಿಭಾಗದ ದ್ವಿತೀಯ ಬಹುಮಾನವು ಶ್ರೀ ಅನಿಲ್ ಗಾಂವ್ಕರ್ ರವರ ಪಾಲಾಯಿತು.
ಸತತವಾಗಿ ಏಳನೇ ಬಾರಿಗೆ ರಾಷ್ಟ್ರಮಟ್ಟದ ಸೈನ್ಸ್ ಫೇರ್‌ನಲ್ಲಿ ಪಾಲ್ಗೊಳ್ಳುತ್ತಿರುವ ಶ್ರೀ ಅನಿಲ್ ಗಾಂವ್ಕರ್ ರವರು ಭೌತಶಾಸ್ತ್ರದ ಬೆಳಕು ಮತ್ತು ವಿದ್ಯುಚ್ಛಕ್ತಿ ಕುರಿತ ಮಾದರಿಗಳನ್ನು ಪ್ರದರ್ಶಿಸಿದರು.
೫ ದಿನಗಳ ಕಾಲ ಬೆಳಗ್ಗೆ ೯.೩೦ ರಿಂದ ೫ ಗಂಟೆಯವರೆಗೆ ಸಾರ್ವಜನಿಕರಿಗೆ ತೆರೆದಿಡಲಾಗಿತ್ತು. ಅನೇಕ ಅನುಭವಿ ಸ್ಪರ್ಧಿಗಳು ಅಭಿಪ್ರಾಯ ಪಟ್ಟಂತೆ ಇದೇ ಮೊದಲ ಬಾರಿಗೆ ಪ್ರತಿಯೊಬ್ಬ ಸ್ಪರ್ಧಿಗೂ ವೈಯಕ್ತಿಕ ಸ್ಟಾಲ್ ನೀಡಲಾಗಿತ್ತು. ಈ ಕಾರ್ಯಕ್ರಮಕ್ಕೆಂದೇ ಬಂದರಿನ ಸಮೀಪದ ಕಡಲ ಕಿನಾರೆಯಲ್ಲಿ ಪಾಂಡಿಚೆರಿಯ ಶಾಲಾ ಕಾಲೇಜುಗಳ ಸಹಸ್ರಾರು ವಿದ್ಯಾರ್ಥಿಗಳು ಭೆಟಿ ನೀಡಿದರು. ೬ ರಾಜ್ಯಗಳ ವಿಶ್ವವಿದ್ಯಾಲಯಗಳ ಪ್ರೆಫೆಸರ್ ಗಳು ತೀರ್ಪುಗಾರರಾಗಿ ಸುಮಾರು ೨೪೦ ಮಾದರಿಗಳನ್ನು ಈ ಅವಧಿಯಲ್ಲಿ ಮೌಲ್ಯಮಾಪನ ಮಾಡಿದರು. ಇದು ತಾಳ್ಮೆ ಬೇಡುವ ಮಹಾನ್ ಕಾರ್ಯವೇ ಸರಿ. ಪ್ರತಿಯೊಬ್ಬ ಸ್ಪರ್ಧಿಗೂ ೩-೫ ನಿಮಿಷಗಳ ಸಮಯವನ್ನು ನಿಗದಿಪಡಿಸಲಾಗಿತ್ತು. ಈ ಕಿರು ಅವಧಿಯಲ್ಲಿ ತೀರ್ಪುಗಾರರ ಮನ ಗೆಲ್ಲುವಂತೆ ತಮ್ಮ ಮಾದರಿ ಅಥವಾ ಪ್ರಯೋಗದ ಸಂಕ್ಷಿಪ್ತ ವಿವರಣೆಯನ್ನು ನೀಡುವ ಸವಾಲು ಸ್ಪರ್ಧಿಗಳಿಗಿತ್ತು.
ಪ್ರತಿದಿನದ ಕೊನೆಯಲ್ಲಿ ಎಲ್ಲಾ ರಾಜ್ಯಗಳ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ಆಯಾ ಪ್ರಾಂತ್ಯಗಳ ವಿವಿಧ ಕಲೆಗಳ ಪ್ರದರ್ಶನ ಚೇತೋಹಾರಿಯಾಗಿತ್ತು. ಸಾಂಸ್ಕೃತಿಕ ಸಂಜೆಯ ಜೊತೆಗೆ ನಾವೆಲ್ಲರೂ ಸುತ್ತುಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ನೀಡಿದೆವು. ಸಂಜೆಯ ಕಡಲ ಕಿನಾರೆ, ಸೂರ್ಯ ಮುಳುಗುವ ಮತ್ತು ಏಳುವ ಅದ್ಭುತ ದೃಶ್ಯಗಳು ಹೃನ್ಮನಗಳನ್ನು ತಣಿಸಿದವು.
Superb article sir
ReplyDelete