ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, March 4, 2025

ಪ್ರಪಂಚದ ಮೂಲ ರೂಪವೇ ಹೆಣ್ಣು ̧ ಹೆಣ್ಣು- ಜಗದ ಕಣ್ಣು

 ಪ್ರಪಂಚದ ಮೂಲ ರೂಪವೇ ಹೆಣ್ಣು ̧ ಹೆಣ್ಣು- ಜಗದ ಕಣ್ಣು


ಲೇಖನ: ಬಸವರಾಜ ಎಮ್ ಯರಗುಪ್ಪಿ  ಬಿ ಆರ್ ಪಿ ಶಿರಹಟ್ಟಿ 

ಸಾ.ಪೊ ರಾಮಗೇರಿ, ತಾಲ್ಲೂಕು ಲಕ್ಷ್ಮೇಶ್ವರ. ಜಿಲ್ಲಾ ಗದಗ.

 ಮಿಂಚಂಚೆ:basu.ygp@gmail.com 




ಮಾರ್ಚ್ 08:ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷ ಲೇಖನ.

"ಹೆಣ್ಣುಮಕ್ಕಳು ಶಿಕ್ಷಣ ಪಡೆದಾಗ, ಅವರ ದೇಶಗಳು ಬಲಿಷ್ಠವಾಗುತ್ತವೆ ಮತ್ತು ಹೆಚ್ಚು ಸಮೃದ್ಧವಾಗುತ್ತವೆ”.ಎಂದು ಪ್ರತಿಯೊಂದು ಹೆಣ್ಣು ಮಗುವಿನ ಶಿಕ್ಷಣದ ಕುರಿತಾಗಿ ಮಿಚೆಲ್ ಒಬಾಮ ಹೇಳಿರುವುದು ಬಹಳ ಸಮಂಜಸವಾಗಿದೆ.ಮಾತೃ ಶಕ್ತಿ, ವಾತ್ಸಲ್ಯ, ಸಹನೆ, ಪ್ರೀತಿ,ತಾಳ್ಮೆ, ಆರೈಕೆ, ಸತ್ಕಾರ, ಸನ್ಮಾನ, ಸಾಂತ್ವನ ಈ ಎಲ್ಲಾ  ಗುಣಗಳನ್ನು ತನ್ನ ಹುಟ್ಟಿನಿಂದಲೇ ಮೈಗೂಡಿಸಿಕೊಂಡು, ಜೀವನದಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸುವ ಮೂಲಕ ಬದುಕಿಗೊಂದು ರೂಪನೀಡುತ್ತಿರುವುದು ಹೆಣ್ಣು.ಮಹಿಳೆಯರು ಇಡೀ ಪ್ರಪಂಚದಲ್ಲಿ ಅತ್ಯಂತ ಸುಂದರವಾದ, ಬಹುಕಾಂತೀಯ ಜೀವಿಗಳು.ಹೆಣ್ಣೂಬ್ಬಳು ತಾನು ಕಲಿತರೆ ತನ್ನ ಸುತ್ತಮುತ್ತಲಿನ ಜನರನ್ನು ಸುಶಿಕ್ಷಿತರನ್ನಾಗಿಸುತ್ತಾಳೆ.ಸನ್ಮಾರ್ಗದಲ್ಲಿ ನಡೆಸುತ್ತಾಳೆ.ಪ್ರತಿಯೊಬ್ಬರ ಜೀವನವು ರೂಪುಗೊಳ್ಳಲು ಹೆಣ್ಣುಮಕ್ಕಳ ಪಾತ್ರ ಅಗಾಧವಾಗಿದೆ.ನನ್ನ ಜೀವನದಲ್ಲೂ ಅಮ್ಮ,ದೊಡ್ಡಮ್ಮ,ಅತ್ತೆ,ಅಕ್ಕ, ತಂಗಿ & ಅತ್ತಿಗೆ ಹೀಗೆ ಎಲ್ಲರೂ ಒಂದಿಲ್ಲೊಂದು ಬದಲಾವಣೆಗೆ ಕಾರಣರಾಗಿದ್ದಾರೆ ಎಂದು ಹೇಳಬಹುದು.

ಹಾಗಾಗಿ ಮಹಿಳೆಯರು ಯಾವ ಪುರುಷರಿಗಿಂತ ನಾವೇನು ಕಮ್ಮಿ ಇಲ್ಲ ಎಂದು ನಿರೂಪಿಸಿದ್ದಾರೆ. ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗೌರವಿಸಲು ವಿಶ್ವದಾದ್ಯಂತ ಪ್ರತಿ ವರ್ಷ ಮಾರ್ಚ್ 08 ರಂದು "ಅಂತರರಾಷ್ಟ್ರೀಯ ಮಹಿಳಾ" ದಿನವನ್ನು ಆಚರಿಸಲಾಗುತ್ತದೆ.

#ಉದ್ದೇಶ:

ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶವೆಂದರೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳ ಬಗ್ಗೆ, ಅಷ್ಟೇ ಅಲ್ಲದೆ ಕಲಾವಿದರಾಗಿ, ಶಿಕ್ಷಕರಾಗಿ, ಆಡಳಿತಾಧಿಕಾರಿಗಳಾಗಿ, ರಾಜಕಾರಣಿಗಳಾಗಿ ಮತ್ತು ವಿಜ್ಞಾನಿಗಳಾಗಿ  ಅವರು ಪಾತ್ರ ನಿರ್ವಹಿಸಲು ಅವರೆಲ್ಲರಿಗೂ ಸರಿ ಸಮಾನವಾಗಿ ನಿಲ್ಲುವ ಅವಕಾಶಗಳನ್ನು ಕಲ್ಪಿಕೊಡಬೇಕು. 

'ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ತತ್ರ ದೇವತಾಃ' ಅಂದರೆ ಎಲ್ಲಿ ಮಹಿಳೆಯರನ್ನು ಗೌರವದಿಂದ ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಮಾತು ಕೇವಲ ಮಾತಾಗಿಯೇ ಇರಬಾರದು, ಅದನ್ನು ಆಚರಣೆಗೆ ತರಬೇಕು.ಆಗ ಮಾತ್ರ ಈ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಒಂದು ಒಳ್ಳೆಯ ಸ್ಥಾನ ಸಿಗಲು ಸಾಧ್ಯ. ಹೀಗಾದಲ್ಲಿ ಮಾತ್ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ದೇಶ ಅರ್ಥಪೂರ್ಣವಾಗುತ್ತದೆ.ಮಹಿಳೆಯರನ್ನು ಎಲ್ಲಾ ಸ್ತರಗಳಲ್ಲೂ ಮೇಲಕ್ಕೆತ್ತಬೇಕು.ಆಕೆಯ ಸಾಧನೆಗಳನ್ನು ಗುರುತಿಸಬೇಕು ಎಂಬ ಉದ್ದೇಶದಿಂದ ಆಕೆಗೆ ಪುರುಷರಷ್ಟೇ ಸಮಾನ ಅವಕಾಶಗಳನ್ನು ನೀಡುವ ಮೂಲಕ ಮಹಿಳೆಯರಿಗೆ ಈ ದಿನ ಗೌರವಿಸಲಾಗುತ್ತದೆ.

ಮಹಿಳೆಯರು ತಮ್ಮ ಅಂತ್ಯವಿಲ್ಲದ ಶಕ್ತಿ, ಸಮರ್ಪಣೆ ಮತ್ತು ನಂಬಿಕೆಯಿಂದ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಿದ್ದಾರೆ.ಅವರು ಶಿಕ್ಷಕರು, ಗೃಹಿಣಿಯರು, ಅರ್ಥಶಾಸ್ತ್ರಜ್ಞರು, ಇಂಜಿನಿಯರ್ಗಳು ಅಥವಾ ಪ್ರವರ್ತಕರಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಸಂಗತಿ ನಮ್ಮ ಕಣ್ಣ ಮುಂದೆ ಇದೆ.ಆದಾಗ್ಯೂ ಮಹಿಳೆಯರು ಪ್ರತಿದಿನ ಸಾಮಾಜಿಕ ತೊಂದರೆಗಳಿಂದ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇವೆಲ್ಲವನ್ನು ತಡೆಯುವ ಸಲುವಾಗಿ ಈ ದಿನವನ್ನು ಕಾರ್ಯ ರೂಪಕ್ಕೆ ತಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. 

#ಈ ದಿನಾಚರಣೆಯನ್ನು ಆಚರಿಸಲು ಕಾರಣ...?:

ಸುಮಾರು 15,000 ಮಹಿಳೆಯರು 1908 ರಲ್ಲಿ, ನ್ಯೂಯಾರ್ಕ್ ನಗರದ ಮೂಲಕ ಮೆರವಣಿಗೆಯನ್ನು ನಡೆಸಿದರು.ಕಾರಣ ಉತ್ತಮ ವೇತನ, ಕಡಿಮೆ ಕೆಲಸದ ಸಮಯ ಮತ್ತು ಮತದಾನದ ಹಕ್ಕುಗಳನ್ನು ಒತ್ತಾಯಿಸಿದರು. ಫೆಬ್ರುವರಿ 28 ರಂದು, ಯುನೈಟೆಡ್ ಸ್ಟೇಟ್ಸ್ನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. 1913 ರವರೆಗೆ, ಈ ದಿನವನ್ನು ಫೆಬ್ರುವರಿ ಕೊನೆಯ ಭಾನುವಾರದಂದು ಆಚರಿಸಲಾಗುತ್ತಿತ್ತು.ಪ್ರಪಂಚದಾದ್ಯಂತ, ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಚಳುವಳಿಗಳು ಅಥವಾ ಮೆರವಣಿಗೆ ಸೇರಿದಂತೆ ವಿವಿಧ ಘಟನೆಗಳು ನಡೆದವು. ಮಹಿಳೆಯರನ್ನು ಸಮಾನವಾಗಿ ಪರಿಗಣಿಸದ ಕೆಲವು ದೇಶಗಳಿವೆ. ಈ ದೇಶಗಳಲ್ಲಿ ಮಹಿಳೆಯರ ವಿಮೋಚನೆಗಾಗಿ ಪ್ರತಿಭಟನೆಗಳನ್ನು ಮಾಡಿ ಈ ದಿನವನ್ನು ಆಚರಿಸಲಾಗುತ್ತದೆ. ಎಷ್ಟೋ ಜನರಿಗೆ ಹೆಣ್ಣಿನ ಪಾತ್ರ ಮನೆಕೆಲಸಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ಎಷ್ಟೋ ಜನರ ಕಲ್ಪನೆಯಲ್ಲಿ ಹಾಸುಹೊಕ್ಕಾಗಿದೆ. ಆದ್ದರಿಂದ ಅವರಿಗೆ ಎಲ್ಲ ರಂಗಗಳಲ್ಲೂ ಭಾಗವಹಿಸಿ, ಜೀವನ ನಡೆಸಲು ಅವಕಾಶಗಳನ್ನು ಒದಗಿಸಿಕೊಡಬೇಕೆಂಬುದು ಈ ದಿನದ ಸದಾಶಯ. 

#ಮಹಿಳೆ ಸರ್ವ ಪಾತ್ರಗಳ ಪಾತ್ರಧಾರಿ:

ಒಂದು ಕುಟುಂಬವನ್ನು ಸಲುಹುವ ಸಾಮರ್ಥ್ಯ ಗಂಡಿಗಿಂತ ಹೆಚ್ಚಿನದಾಗಿ ಇರುವುದೇ ಮಹಿಳೆಗೆ. ಹೆಣ್ಣು ಸಂಸಾರದ ಒಂದು ಕಣ್ಣು.ಪ್ರತಿಯೊಬ್ಬರ ಬದುಕಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ದೊಡ್ಡದು. ಆಕೆಗಿರುವ ಸ್ಥೈರ್ಯ, ಧೈರ್ಯಕ್ಕೆ ಸರಿಸಾಟಿಯಿಲ್ಲ. ಒಬ್ಬ ಮಗಳಾಗಿ, ಮಡದಿಯಾಗಿ, ತಾಯಿಯಾಗಿ, ಮನೆಗೆ ಆಳಾಗಿ, ಹೊರಗಡೆ ದುಡಿಯುವ ಮಹಿಳೆಯಾಗಿ ಹೀಗೆ ಮಹಿಳೆ ಹತ್ತು ಹಲವು ಪಾತ್ರಗಳನ್ನು ಒಟ್ಟಿಗೆ ಮಾಡುತ್ತಾಳೆ.ಆಕೆಯ ಸಾಮಾರ್ಥ್ಯಕ್ಕೆ ಅವಳೇ ಸರಿಸಾಟಿ.ನಮ್ಮ ಬದುಕಿನಲ್ಲಿ ಆಕೆಯ ಮಾತ್ರ ಮಹತ್ವವಾಗಿರುತ್ತದೆ. ಆಕೆ ಗೃಹಿಣಿಯಾಗಿರಬಹುದು ಅಥವಾ ಹೊರಗಡೆ ದುಡಿಯುವ ಮಹಿಳೆಯಾಗಿರಬಹುದು, ಇಬ್ಬರಲ್ಲಿ ಯಾರು ಮೇಲಲ್ಲ, ಯಾರೂ ಕೀಳಲ್ಲ. ಇಬ್ಬರ ಪಾತ್ರಗಳು ನಮ್ಮ ಸಂಸಾರ ತೂಗಿಸಲು ಬಹುಮುಖ್ಯ. ಆಕೆ ನಮಗಾಗಿ ದುಡಿಯುತ್ತಾಳೆ, ಇಡೀ ಬದುಕನ್ನು ನಮಗಾಗಿ ಮೀಸಲಿಡುತ್ತಾಳೆ. ಆ ಹೆಣ್ಣಿಗೆ ಮಹಿಳಾ ದಿನಾಚರಣೆಯೆಂದು ಶುಭ ಕೋರಿದರೆ ಅವಳು ತುಂಬಾ ಖುಷಿಯಾಗುತ್ತಾಳೆ.ಶಿಕ್ಷಣ,ಆರ್ಥಿಕ ಸಬಲೀಕರಣ ಸಾಧಿಸಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಮಹಿಳೆ ಇನ್ನೂ ಮೀಸಲಾತಿಯಡಿಯಲ್ಲಿ ದುಡಿಯಬೇಕಾದ ಅನಿವಾರ್ಯತೆಯೂ ಇದೆ. ಮಹಿಳೆಯರಿಗೆ ಹಕ್ಕು, ಹಿತರಕ್ಷಣೆ, ಜಾಗತಿಕ ಮಟ್ಟದಲ್ಲಿ ತಿಳಿವಳಿಕೆ, ಶಿಕ್ಷಣ, ತರಬೇತಿ, ವಿಜ್ಞಾನ-ತಂತ್ರಜ್ಞಾನಕ್ಕೆ ನೆರವು ನೀಡಿ, ಸಮಾಜದಲ್ಲಿ ಸಮಾನತೆಯ ವೈಶಿಷ್ಟ್ಯಪೂರ್ಣ ಬದಲಾವಣೆಗಳಿಗಾಗಿ ಅವಕಾಶಗಳನ್ನು ಕಲ್ಪಿಸಬೇಕು ಅಂದಾಗ ಈ ಆಚರಣೆಗೆ ಮಹತ್ವ ಬರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಹೆಣ್ಣು ಗಂಡಿಗೆ ಸರಿಸಮಾನ ಎಂದು ತೋರಿಸಿಕೊಂಡಿದ್ದರೂ, ಹಲವೆಡೆಗಳಲ್ಲಿ ಇನ್ನೂ ನಡೆಯುತ್ತಿರುವ ಲಿಂಗ ತಾರತಮ್ಯ, ಹೆಣ್ಣು ಭ್ರೂಣಹತ್ಯೆ, ಅತ್ಯಾಚಾರ ಇವುಗಳನ್ನು ತಡೆಯಬೇಕು.ವಿಶ್ವಾಸ, ಪ್ರೀತಿ, ಮಮತೆ, ನಂಬಿಕೆ ಹಾಗೂ ನೈತಿಕ ಮೌಲ್ಯಗಳು ನಮ್ಮ ಸಮಾಜದ ಕಣ್ಣುಗಳಾಗಬೇಕು. ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡಬೇಕು. ಇದಕ್ಕೆ ಪುರುಷರ ನೈತಿಕ ಬೆಂಬಲವೂ ದೊರಕಬೇಕಾಗಿದೆ. 

#2025 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಥೀಮ್:

"ಕ್ರಿಯೆಯನ್ನು ವೇಗಗೊಳಿಸಿ" (Accelerate Action) ಎಂಬುದು ಈ ವರ್ಷದ ಥೀಮ್ ಇಟ್ಟುಕೊಂಡು ಕ್ರಿಯೆಯನ್ನು ವೇಗಗೊಳಿಸುವ ಅಗತ್ಯದ ಮೇಲೆ ಕೇಂದ್ರೀಕರಿಸುವುದು, ಲಿಂಗ ಸಮಾನತೆಯನ್ನು ಸಾಧಿಸಲು ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವ ಮಹತ್ವವನ್ನು ಒತ್ತಿಹೇಳುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ವ್ಯವಸ್ಥಿತ ಅಡೆತಡೆಗಳು ಮತ್ತು ಪಕ್ಷಪಾತಗಳನ್ನು ಪರಿಹರಿಸುವಲ್ಲಿ ಇದು ಹೆಚ್ಚಿನ ಆವೇಗ ಮತ್ತು ತುರ್ತು ಅಗತ್ಯವನ್ನು ಬಯಸುತ್ತದೆ.

ಆದ್ದರಿಂದ, ಒಟ್ಟಾಗಿ, ವಿಶ್ವಾದ್ಯಂತ ಪ್ರಗತಿಯ ದರವನ್ನು ವೇಗಗೊಳಿಸಲು ಕ್ರಿಯೆಯನ್ನು ವೇಗಗೊಳಿಸೋಣ... 


ಒಟ್ಟಾರೆಯಾಗಿ ಹೇಳುತ್ತಿರುವುದು ಏನೆಂದರೆ "ಅಮ್ಮ…. ನಿಮ್ಮಿಂದಾಗಿ ನಾನಿದ್ದೇನೆ. ನಾನಿವತ್ತು ಏನೇ ಆಗಿದ್ದರೂ ಅದಕ್ಕೆ ಕಾರಣ ನೀವು. ನೀವೇ ನನ್ನ ಬದುಕಿಗೆ ಸ್ಫೂರ್ತಿ''.ಇಂದಿನ ಶಾಲಾ ಶಿಕ್ಷಣದಲ್ಲಿ 100% ಬಾಲಕಿಯರ ದಾಖಲಾತಿ ಮತ್ತು ಉನ್ನತ ಶಿಕ್ಷಣದಲ್ಲಿ  ಭಾಗವಹಿಸುವಿಕೆಯ ಪ್ರಮಾಣವನ್ನು ಖಾತ್ರಿಪಡಿಸಿ ಹೆಚ್ಚಿಸುವುದು.ಎಲ್ಲಾ ಹಂತಗಳಲ್ಲಿ ಲಿಂಗ ಅಂತರವನ್ನು ಕಡಿಮೆ ಮಾಡುವುದು, ಲಿಂಗ ಸಮಾನತೆ ಮತ್ತು ಸಮಾಜದಲ್ಲಿ ಒಳಗೊಳ್ಳುವಿಕೆಯನ್ನು ಅಭ್ಯಾಸ ಮಾಡುವುದು ಮತ್ತು ಸಕಾರಾತ್ಮಕ ನಾಗರಿಕ ಸಂವಾದಗಳ ಮೂಲಕ ಹುಡುಗಿಯರ ನಾಯಕತ್ವದ ಸಾಮರ್ಥ್ಯವನ್ನು ಸುಧಾರಿಸುವುದರಿಂದ ಸಾಧ್ಯತೆಗಳು ಇರುತ್ತವೆ.ಅದಕ್ಕೆ ಹೇಳೋದು 'ಹೆಣ್ಣೊಂದು ಕಲಿತರೆ,ಶಾಲೆಯೊಂದು ತೆರೆದಂತೆ' ಅಂತಾ ಹಿರಿಯರ ಮಾತೂ ಇಂದಿಗೂ ಸತ್ಯ.ಹೀಗಾಗಿ ಹೆಣ್ಣು ಕುಟುಂಬದ ಬಾಳಿನ ಕಣ್ಣು.ಅಮ್ಮ, ಅಕ್ಕ-ತಂಗಿ ಅತ್ತೆ, ಅಜ್ಜಿ, ಪತ್ನಿ,ಸ್ನೇಹಿತೆ..ಹೀಗೆ ಹಲವಾರು ಮಹತ್ವಪೂರ್ಣ ಸ್ಥಾನಗಳಲ್ಲಿ ನಮಗೆ ಬೆನ್ನೆಲುಬಾಗಿ ನಿಲ್ಲುವವಳು ಮಮತಾಮಯಿ ಹೆಣ್ಣು. ಸ್ತ್ರೀ ಎಂದ ತಾನು ಉರಿದು ಜಗವನೆಲ್ಲ ಬೆಳಗುವ ಬತ್ತಿಯಂತೆ. ತಾನು ಸ್ವಾರ್ಥಕ್ಕಾಗಿ ಹಂಬಲಿಸದೆ ಕುಟುಂಬದ ಹಿತಕ್ಕಾಗಿ ತನ್ನ ಬದುಕನ್ನು ಮುಡಿಪಾಗಿಡುವವಳು ಯಾರು ಎಂದರೆ ಅವರೆ ಮಹಾ ಮಮತಾಮಯಿ. ‘ಹೆಣ್ಣು ಮಕ್ಕಳಿಗೆ ಶಿಕ್ಷಣ ಹಕ್ಕು, ಮತದಾನದ ಹಕ್ಕು,ಆಸ್ತಿ ಹಕ್ಕು ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ 'ಬಾಬಾ ಸಾಹೇಬ್ ಅಂಬೇಡ್ಕರ್’ ಅವರ ದೂರದೃಷ್ಟಿ  ಇಂದಿಗೂ ಪ್ರಸ್ತುತವಾಗಿದೆ ಎಂದರೆ ಅದು ಅತಿಶಯೋಕ್ತಿ ಆಗಲಾರದು. 

#ಕೊನೆಯ ಮಾತು:

“ಮಹಿಳೆ ಎಂದರೆ ಪೂರ್ಣ ವೃತ್ತ. ಅವಳೊಳಗೆ ಸೃಷ್ಟಿಸುವ, ಪೋಷಿಸುವ ಮತ್ತು ಪರಿವರ್ತಿಸುವ ಶಕ್ತಿ ಇದೆ”~ ಡಯೇನ್ ಮಮೇರಿಚೈಲ್ಡ್. 




No comments:

Post a Comment