ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, March 4, 2025

ಮೊದಲಿಗರಾರು? ಮಲರಿ-ಇರ್ವಿನ್ನರೋ ಅಥವಾ ಹಿಲೆರಿ-ತೇನ್ಜಿಂಗರೋ?

 ಮೊದಲಿಗರಾರು? ಮಲರಿ-ಇರ್ವಿನ್ನರೋ ಅಥವಾ  ಹಿಲೆರಿ-ತೇನ್ಜಿಂಗರೋ?


            ಲೇಖಕರುಸುರೇಶ ಸಂ ಕೃಷ್ಣಮೂರ್ತಿ‌


                ನಿವೃತ್ತ ಮುಖ್ಯಶಿಕ್ಷಕರು 


  

    ವಿಶ್ವದ ಅತಿ ಎತ್ತರದ ಪರ್ವತ ಶಿಖರ ಮೌಂಟ್‌ ಎವರೆಸ್ಟ್.‌  ಭಾರತೀಯರು ಇದನ್ನು ಗೌರಿಶಂಕರ ಎಂದು ಕರೆಯುತ್ತಾರೆ. ನೇಪಾಳಿಗರು ಇದನ್ನು ಸಾಗರಮಾತ ಎಂತಲೂ, ಷೆರ್ಪಾ ಜನಾಂಗದವರು ಕ್ವಾಮಲೋಂಗ್ಮ ಎಂತಲೂ ಕರೆಯುತ್ತಾರೆ.  ಕಳೆದ 2024ರ ಸೆಪ್ಟೆಂಬರ್‌ ತಿಂಗಳಿನ ಒಂದು ದಿನ ನ್ಯಾಷನಲ್‌ ಜಿಯೋಗ್ರಾಫಿಕ್‌ ಸೊಸೈಟಿಯ  ಚಿತ್ರಕರಣ ತಂಡ ಹಿಮಾಲಯದಲ್ಲಿರುವ ವಿಶ್ವದ ಅತಿ ಎತ್ತರದ  ಈ  ಪರ್ವತ ಶಿಖರದ ಉತ್ತರ ಮುಖದಲ್ಲಿರುವ ರಂಬಕ್‌ ಹಿಮನದಿಯಲ್ಲಿ ಅನ್ವೇಷಣೆಯನ್ನು ನಡೆಸುತ್ತಿತ್ತು.   ನ್ಯಾಷನಲ್‌ ಜಿಯೋಗ್ರಾಫಿಕ್‌ ಸೊಸೈಟಿಯ ಚಿತ್ರ ತಂಡದ ನಿರ್ದೇಶಕ ಮತ್ತು ಆ ಒಂದು ಅನ್ವೇಷಣೆಯ ಮುಖಂಡ ಜಿಮ್‌ ಚಿನ್ ಮತ್ತು ಅವನ ಜೊತೆಗಾರರಿಗೆ ಕರಗುತ್ತಿರುವ ಹಿಮನದಿಯಲ್ಲಿ ಒಂದು ಕಡೆ ಒಂದು ಹಳೆಯದಾದ ಬೂಟು ಬಿದ್ದಿರುವುದು ಕಂಡು ಬಂದಿತು.  ಅವರು ಅದರ ಹತ್ತಿರ ಹೋಗಿ ನೋಡಲು ಅದೊಂದು ತುಂಬಾ ಹಳೆಯ ಕಾಲದ ಪರ್ವತಾರೋಹಿಗಳು ಉಪಯೋಗಿಸುತ್ತಿದ್ದ ಚರ್ಮದ ಬೂಟು ಎಂದು ಅವರಿಗೆ ಅರಿವಾಯಿತು. ಯಾರದೋ ಎಡಗಾಲಿನ ಬೂಟು ಅದಾಗಿದ್ದು ಅದರ ಒಳಗೆ ಕಾಲಿನ ಚೀಲವೂ  ಇರುವುದು ಮೇಲ್ನೋಟಕ್ಕೆ ಅವರಿಗೆ ಕಂಡುಬಂತು. ಇಷ್ಟೇ ಅಲ್ಲದೆ ಕಾಲು ಚೀಲದ ಒಳಗೆ ಅದರ ಒಡೆಯನ ಎಡಪಾದ ಭಾಗ ಮಾತ್ರ ಮರಗಟ್ಟಿದ ಸ್ಥಿತಿಯಲ್ಲಿ ಇರುವುದು ಅವರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತು. ಇದು ಯಾರೋ ಪರ್ವತಾರೋಹಿ ಸುಮಾರು ಶತಮಾನದಷ್ಟು ಹಿಂದೆ ಎವರೆಸ್ಟ್‌ ಶಿಖರವೇರಲು ಪ್ರಯತ್ನಿಸುವಾಗ ಎತ್ತರದಿಂದ ಜಾರಿಬಿದ್ದು ಅಸುನೀಗಿದವನ ಪಾದವೆಂದು ಅವರು ಮೊದಲಿಗೆ ನಿರ್ಣಯಿಸಿದರು. ಅವರು ಸುತ್ತ ಮುತ್ತಲೂ ಎಷ್ಟು ಹುಡುಕಾಡಿದರೂ ಆ ವ್ಯಕ್ತಿಯ ದೇಹವಾಗಲಿ ಅವನ ಇತರೆ ವಸ್ತುಗಳಾಗಲಿ ಯಾವುವೂ ಕಂಡು ಬರಲಿಲ್ಲ. ಬೂಟಿನ ಒಳಗಿನಿಂದ ಕಾಲು ಚೀಲವನ್ನು ಹೊರಕ್ಕೆ ತೆರೆಯುತ್ತಿದ್ದಂತೆ ಅದರ ಮೇಲೆ ಕೆಂಪು ದಾರದಲ್ಲಿ A.C. IRVINE ಎಂದು ಕಸೂತಿ ಮಾಡಿದ್ದು ಕಂಡು ಅವರಿಗೆ ಅಚ್ಚರಿಯಾಯಿತು. ತಾವುಗಳು ಏನನ್ನು ನೋಡುತ್ತಿದ್ದೇವೆ ಎಂಬುದನ್ನು ಅವರಿಗೆ ನಂಬಲು ಅವರಿಗೆ ಸ್ವಲ್ಪ ಸಮಯ ಕಷ್ಟವಾಯಿತು. 

    1924 ರಲ್ಲಿ ಬ್ರಿಟನ್ನಿನ  ಪರ್ವತಾರೋಹಿಗಳ ತಂಡವೊಂದು ಎವರೆಸ್ಟ್ ಶಿಖರವನ್ನು ಏರುವ ಸಾಹಸ ಯಾತ್ರೆಯಲ್ಲಿ ತೊಡಗಿತ್ತು.  ಎವೆರೆಸ್ಟ್‌ ಶಿಖರವೇರಲು ಅದರ ದಕ್ಷಿಣದ  ಮಾರ್ಗವು ಸುಲಭದಾಗಿದ್ದು‌, ಅದು ನೇಪಾಳದಿಂದ ಆರಂಭವಾಗುವುದಾದರೂ ಅಂದಿನ ನೇಪಾಳದ ರಾಜಕೀಯ ಪರಿಸ್ಥಿತಿ ಮತ್ತು ಮೂಲ ಸೌಕರ್ಯಗಳ ಕೊರತೆಯ ಕಾರಣದಿಂದ ಬ್ರಿಟಿಷರಿಗೆ ಅದು ನಿಲುಕದಾಗಿತ್ತು. ಹೀಗಾಗಿ ಬ್ರಿಟಿಷ್‌ ಸಾಹಸಿಗಳ ತಂಡಗಳು ಎವರೆಸ್ಟಿನ ಉತ್ತರ ಭಾಗದ ಟಿಬೆಟ್ಟಿನಿಂದ ಅತಿ ಕಠಿಣವಾದ ಮಾರ್ಗವನ್ನು ಎವರೆಸ್ಟ್‌ ಶಿಖರ ಏರಲು ಅವಲಂಬಿಸಬೇಕಾಗಿತ್ತು. ಆಗ ಟಿಬೆಟ್ಟನ್ನು ಆಳುತ್ತಿದ್ದ ದಲೈಲಾಮರ ಮೇಲೆ ಬ್ರಿಟಿಷ್‌ ಸರ್ಕಾರ ಒತ್ತಡ ಹೇರಿ ಡಾರ್ಜಿಲಿಂಗ್‌, ಸಿಕ್ಕಿಂ ಮೂಲಕ ಟಿಬೆಟ್ಟನ್ನು ಪ್ರವೇಶಿಸಲು ಅವರಿಗೆ ಸುಲಭವಾಗಿ ಅನುಮತಿಯನ್ನು ದೊರೆಕಿಸಿಕೊಡುತ್ತಿತ್ತು. ಎವರೆಸ್ಟ್‌ ಶಿಖರವನ್ನು ಉತ್ತರ ಮುಖದಿಂದ ಏರಲು ಇರುವ ಕಾಲಾವಧಿ ಅತ್ಯಲ್ಪವಾಗಿರುತ್ತದೆ. ಕೊರೆವ ಚಳಿಗಾಲ ಕಳೆದ ಕೂಡಲೆ ಆರಂಭಿಸಿ ಮಾನ್ಸೂನ್‌ನ ಬಿರುಮಳೆಗಳು ಆರಂಭವಾಗುವುದಕ್ಕೆ ಮುಂಚೆಯೆ ಮುಗಿಸಬೇಕಾಗುತ್ತದೆ. ಇಂತಿರುವಾಗ 1924ರಲ್ಲಿ ಹೊರಟ ಬ್ರಿಟನ್ನಿನ ಎವರೆಸ್ಟ್‌ ಶಿಖರ ಏರುವ ಸಾಹಸ ತಂಡಕ್ಕೆ ರಂಬಕ್‌ ಗ್ಲೇಷಿಯರಿನ ಸುತ್ತಮುತ್ತಲಿನ ಪ್ರದೇಶದ ಸರ್ವೇ ಕಾರ್ಯದ ಜವಾಬ್ದಾರಿಯನ್ನೂ ಹೊರಿಸಲಾಗಿರುತ್ತದೆ. ಬ್ರಿಗೇಡಿಯರ್‌ ಚಾರ್ಲಸ್‌ ಜಿ ಬ್ರೂಸ್‌ ನೇತೃತ್ವದಲ್ಲಿ ತಯಾರಾಗಿ ಹೊರಟ, ಈ ತಂಡದಲ್ಲಿ ಸೈನ್ಯಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳನ್ನು ಒಳಗೊಂಡ ಬ್ರಿಟಿಷ್‌  ಸಮಾಜದ ವಿವಿಧ ಸ್ತರಗಳ ಜನರಿದ್ದರು. ‌ ಅವರಲ್ಲಿ ಮುವತ್ತೇಳು ವಯಸ್ಸಿನ ಜಾರ್ಜ್ ಮಲರಿ ಮತ್ತು ಇಪ್ಪತ್ತೆರಡು ವಯಸ್ಸಿನ ಆಂಡ್ರ್ಯೂ ಇರ್ವಿನ್‌ ಕೂಡ ಇದ್ದರು.  ಇಂಗ್ಲೆಂಡಿನ ಸುರ್ರೇಯಲ್ಲಿದ್ದ ಕಾರ್ಟರ್‌ ಹೌಸ್‌ ಶಾಲೆಯಲ್ಲಿ ಶಿಕ್ಷಕನಾಗಿದ್ದ ಮಲರಿಯು 1922 ರ ಎವರೆಸ್ಟ್‌ ಶಿಖರ ಏರಲು ಪ್ರಯತ್ನಿಸಿ ವಿಫಲವಾದ ತಂಡದಲ್ಲಿದ್ದು ಹಿಮಾಲಯದ ಅನುಭವವನ್ನು ಹೊಂದಿದ್ದನು.  ಇಂಜಿನೀರಿಂಗ್‌ ಕಾಲೇಜಿನ ವಿದ್ಯಾರ್ಥಿಯಾಗಿದ್ದ  ಇರ್ವಿನ್‌, ಆರ್ಕಟಿಕ್‌ಗೆ ಸಾಹಸ ಯಾತ್ರೆ ಹೊರಟಿದ್ದ ತಂಡದಲ್ಲಿದ್ದು ಎಲ್ಲಾ ವಿಚಾರಗಳಲ್ಲಿ ಶ್ರೇಷ್ಟತೆಯನ್ನು ಪ್ರದರ್ಶಿಸಿರುತ್ತಾನೆ. ಅಷ್ಟೇ ಅಲ್ಲದೆ ಹಿಮಚ್ಚಾದಿತ ಮೂರು ಸಾವಿರ ಅಡಿ ಎತ್ತರದ ಪರ್ವತದ ಮೇಲಕ್ಕೆ ತನ್ನ ಮೋಟರು ಬೈಕನ್ನು ಓಡಿಸಿ ನಿಲ್ಲಿಸಿ ಸಾಹಸ ಮೆರೆದಿರುತ್ತಾನೆ. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಇರ್ವಿನನ್ನು ಈ ಸಾಹಸಕ್ಕೆ ಆರಿಸಲಾಗಿತ್ತು.


ಎಡದಿಂದ ಮೊದಲನೆಯವರು ಇರ್ವಿನ್‌, ಎರಡನೆಯವರು ಮಲರಿ

    1921ರಲ್ಲಿ ಮೊಟ್ಟಮೊದಲಿಗೆ  ಎವರೆಸ್ಟ್‌ ಶಿಖರವನ್ನು ಉತ್ತರದ ಕಡೆಯಿಂದ  ಏರುವ ಪ್ರಯತ್ನ ಬ್ರಿಟಿಷ್‌ ತಂಡದಿಂದ ನಡೆಯುತ್ತದೆ. ನಂತರದ ವರ್ಷಗಳಲ್ಲಿ ನಿರಂತರವಾಗಿ  ನಡೆದ ಎಲ್ಲಾ ಪ್ರಯತ್ನಗಳಲ್ಲಿ ಭಾಗಿಯಾಗಿದ್ದ ಜಾರ್ಜ್‌ ಮಲರಿಯು  ಹಿಂದಿನ ಪ್ರಯತ್ನಗಳ  ಎಲ್ಲಾ ಅನುಭವಗಳ ಆಧಾರದ ಮೇಲೆ ಎವರೆಸ್ಟ್‌ ಶಿಖರವನ್ನು ತಲುಪುವ ಸುಲಭವಾದ ಒಂದು ಮಾರ್ಗವನ್ನು ಸೂಚಿಸುತ್ತಾನೆ. ರಂಬಕ್‌ ನದಿಯಗುಂಟ  ಸಾಗಿ ನಾರ್ತ್‌ಕೋಲ್‌ ಎಂಬ ಮೂಲಶಿಬಿರವನ್ನು ತಲುಪುವುದು, ನಂತರ ಉತ್ತರ ಪರ್ವತಶ್ರೇಣಿಯನ್ನು ಏರಿ ಪೂರ್ವಕ್ಕೆ ಸಾಗಿ ಪೂರ್ವೋತ್ತರ ಶಿಖರದ ಮೂಲಕ ಎವರೆಸ್ಟಿನ ತುದಿಯನ್ನು ತಲುಪುವುದು. ಇದು ಸ್ವಲ್ಪ ಸುತ್ತು ಎನ್ನಿಸಿದರೂ ಹೋಲಿಕೆಯಲ್ಲಿ ಸುಲಭದ ಮಾರ್ಗವಾಗಿತ್ತು. ಹೀಗಿದ್ದರೂ ಹಲವಾರು ಅಡಚಣೆಗಳ ನಡುವೆ 1922 ಮತ್ತು 23ರ ಪ್ರಯತ್ನಗಳು ಫಲ ನೀಡಿರಲಿಲ್ಲ. ಹೀಗಾಗಿ ಬ್ರಿಟಿಷ್‌ ತಂಡ ಏನೇ ಆದರೂ ಈ ಪ್ರಯತ್ನದಲ್ಲಿ ಸಫಲರಾಗಬೇಕೆಂಬ ಧೃಡನಿಶ್ಚಯ ಮಾಡಿ  ಪೂರ್ಣ ತಯಾರಿಯೊಂದಿಗೆ 1924 ರ ಮಾರ್ಚಿ ತಿಂಗಳ ಕೊನೆಯಲ್ಲಿ ಡಾರ್ಜಿಲಿಂಗಿನಿಂದ ತನ್ನ ಪ್ರಯಾಣವನ್ನು ಆರಂಭಿಸುತ್ತದೆ. ಈ ತಂಡದಲ್ಲಿ ತನ್ನ ಆತ್ಮೀಯ ಮಿತ್ರನೂ ಅತ್ಯಂತ ನುರಿತ ಪರ್ವತಾರೋಹಿಯೂ ಆದ ಜಾರ್ಜ್‌ ಇಂಗಲ್‌ ಫಿಂಚ್‌ನನ್ನು ಸೇರಿಸಿಕೊಳ್ಳಬೇಕೆಂದು ಮಲರಿಯು ಒತ್ತಡ ಹೇರುತ್ತಾನಾದರೂ ಅದು ಸಫಲವಾಗುವುದಿಲ್ಲ. ಎವರೆಸ್ಟನ್ನು ಏರಿದ ಕೀರ್ತಿ ಬ್ರಿಟಿಷರಿಗಲ್ಲದೇ ಬೇರೆ ಯಾರಿಗೂ ಸಲ್ಲಬಾರದೆಂಬ  ಸಂಕುಚಿತ ಮನೋಭಾವವೇ ಆಸ್ಟ್ರೇಲಿಯಾದ ಪ್ರಜೆಯಾದ ಫಿಂಚ್‌ನನ್ನು ತಂಡದಿಂದ ದೂರವಿಡಲು ಕಾರಣವಾಗಿತ್ತು.   ಫಿಂಚ್‌ ಇಲ್ಲದ ತಂಡದಲ್ಲಿ ತಾನು ಇರಲಾರೆ ಎಂಬ ನಿರ್ಧಾರಕ್ಕೆ ಬಂದು ತಂಡದಿಂದ ದೂರ ಉಳಿದಿದ್ದ ಮಲರಿಯು ಬ್ರಿಟಿಷ್‌ ರಾಜ ಮನೆತನದ ಮಧ್ಯಪ್ರವೇಶದಿಂದ  ತನ್ನ ಪಟ್ಟನ್ನು ಸಡಿಲಿಸಿ ಕೊನೆಯ ಘಳಿಗೆಯಲ್ಲಿ ಈ ಸಾಹಸ ಯಾತ್ರೆಗೆ ಜೊತೆಗೂಡುತ್ತಾನೆ.  ಮೊದಲ ಕ್ಯಾಂಪನ್ನು 5400ಮೀ. ಎತ್ತರದಲ್ಲಿ, ಎರಡನೇ ಕ್ಯಾಂಪನ್ನು 6000 ಮೀ ಎತ್ತರದಲ್ಲಿ, ಮೂರನೆಯ ಕ್ಯಾಂಪನ್ನು 6400 ಮೀ ಎತ್ತರದಲ್ಲಿನಾಲ್ಕನೆಯ ಕ್ಯಾಂಪನ್ನು 7000ಮೀ ಎತ್ತರದಲ್ಲಿ ನಿರ್ಮಿಸಲು ತೀರ್ಮಾನಿಸಿ ಷರ್ಪಾಗಳ ಸಹಾಯದಿಂದ ಆಹಾರ ಮತ್ತು ಅಗತ್ಯ ಸಾಮಗ್ರಿ ಸರಂಜಾಮುಗಳನ್ನು ಸಾಗಿಸಿ ಟೆಂಟ್‌ ಮುಂತಾದವನ್ನು ನಿರ್ಮಿಸಿದರು. ಶಿಖರವೇರುವ ಮೊದಲ ಪ್ರಯತ್ನವಾಗಿ ಬ್ರೂಸ್‌ ಮತ್ತು ಮಲರಿ ಜೊತೆಯಾಗಿ ನಾಲ್ಕನೆಯ ಕ್ಯಾಂಪ್‌ ಇದ್ದ ನಾರ್ತ್‌ ಕೋಲ್ನಿಂ‌ದ ಆರಂಭಿಸಿ ಜೂನ್‌ ೨ರಂದು ತಮ್ಮ ಚಾರಣವನ್ನು ಪ್ರಾರಂಬಿಸಿದರು. ಇವರಿಗೆ ಒಂಬತ್ತು ಜನ ಷರ್ಪಾಗಳು ಸಾಮಾನು ಸರಂಜಾಮುಗಳನ್ನು ಹೊತ್ತು ಸಹಾಯಕರಾಗಿ ನಡೆದರು. 7,681  ಮೀಟರ್‌ ಎತ್ತರದಲ್ಲಿ‌ ಐದನೆಯ ಕ್ಯಾಂಪ್ ನಿರ್ಮಿಸಿಲು ಅವರು ಉದ್ದೇಶಿಸಿದ್ದರು. ಆ ದಿನದ  ಪ್ರತಿಕೂಲ ಹವಾಮಾನ, ವೇಗದ ಶೀತಗಾಳಿಯ ಕಾರಣ ಬಹುತೇಕ ಷರ್ಪಾಗಳು ಮುಂದುವರೆಯದೆ ತಾವು ಹೊತ್ತಿದ್ದ ಹೊರೆಯನ್ನು ಇಳಿಸಿ ಹಿಂದಿನ ಕ್ಯಾಂಪಿಗೆ ಹಿಂತಿರುಗಿದರು. ವಿಧಿಯಿಲ್ಲದೆ ಬ್ರೂಸ್‌ ತಂದಿದ್ದ ಹೊರೆಯನ್ನು ಬಿಡಿಸಿ ಓರಣ ಮಾಡಿದನು. ಮಲರಿ ಟೆಂಟುಗಳನ್ನು ನಿರ್ಮಿಸಿದನು. ಮಾರನೆಯ ದಿನ 8,170ಮೀಟರ್‌ ಎತ್ತರದಲ್ಲಿ ಅವರು ನಿರ್ಮಿಸಲು ಉದ್ದೇಶಿಸಿದ್ದ ಆರನೆಯ ಕ್ಯಾಂಪಿನ ಯೋಜನೆ ಷರ್ಪಾಗಳ ಅಸಹಕಾರದಿಂದ ವಿಫಲವಾಯಿತಾದರೂ ಅದರ ಮಾರನೆಯ ದಿನ ಅಂದರೆ ಜೂನ್‌ ೩ರಂದು ಅಲ್ಲಿ ಕ್ಯಾಂಪನ್ನ್ನು ನಿರ್ಮಿಸಲು ಸಫಲರಾದರು. ಜೂನ್‌ ೪ರಂದು ನಾರ್ಟನ್‌ ಮತ್ತು ಸಮರ್ವೆಲ್‌ ಜೊತೆಯಾಗಿ ಬೆಳಗೆದ್ದು ತಮ್ಮ ಪರ್ವತಾರೋಹಣವನ್ನು ಆರಂಭಿಸಿದರು. ಮೊದಲಿಗೆ ಅವರು ಉತ್ತರ ಶ್ರೇಣಿಯನ್ನು ಏರಿ ಅದರ ಮೂಲಕ ಎವರೆಸ್ಟ್‌ ಕಡೆಗೆ ಆಗ್ನೇಯಕ್ಕೆ ಏರುತ್ತಾ ಹೋದರು. 8,572.8 ಮೀಟರ್‌ ವರೆಗೆ ಅವರು ಯಶಸ್ವಿಯಾಗಿ ಏರುತ್ತಾ ಹೋದರಾದರೂ ತದನಂತರ  ಶೀತಗಾಳಿದಪ್ಪನೆಯ ಮಂಜು ಹೊದ್ದ ದಾರಿ ಅವರ ಪ್ರಯತ್ನವನ್ನು ವಿಫಲಗೊಳಿಸಿತು. ಇನ್ನೇನು ಶಿಖರ 280 ಮೀಟರಿನಷ್ಟು ಸಮೀಪವಿದೆ ಎನ್ನುವಾಗ ಕಡಿದಾದ ದಾರಿ ಒಂದೆಡೆಯಾದರೆ, ಉಸಿರಾಟದ ಸಮಸ್ಯೆಯೂ ಉಂಟಾದ ಕಾರಣ ಇಬ್ಬರೂ ಜೀವ ಉಳಿಸಿಕೊಳ್ಳಲು ಐದನೆಯ ಕ್ಯಾಂಪಿಗೆ ಹಿಂತಿರುಗಬೇಕಾಯಿತು. ಮೂರನೆಯ ಪ್ರಯತ್ನವಾಗಿ ಜಾರ್ಜ್‌ ಮಲರಿ ಮತ್ತು ಆಂಡ್ರ್ಯೂ ಇರ್ವಿನ್‌ ದಿನಾಂಕ 6 ರಂದು ಐದನೆಯ ಕ್ಯಾಂಪಿನಿಂದ ಆರನೆಯ ಕ್ಯಾಂಪಿಗೆ ಶಿಖರವೇರುವ ಉದ್ದೇಶದಿಂದ ಹೊರಟು ನಿಂತರು. ದಿನಾಂಕ 8ರಂದು ಅವರು ಶಿಖರವನ್ನೇರಿ ಆರನೆಯ ಕ್ಯಾಂಪಿಗೆ ಹಿಂತಿರುಗಬೇಕಾಗಿತ್ತು. ಇದರ ಮಾರನೆಯ ದಿನ ಮೂರನೆಯ ಕ್ಯಾಂಪಿನಿಂದ  ಪರ್ವತಾರೋಹಿಯೊಬ್ಬರು ದೂರದರ್ಶಕದ ಮೂಲಕ ನೋಡಿದಾಗ ಎರಡು ಚುಕ್ಕೆಗಳಂತೆ ಕಂಡ ಅವರಿಬ್ಬರು ಇನ್ನೇನು ಕೆಲವೇ ನಿಮಿಷಗಳಲ್ಲಿ ಶಿಖರವೇರಿ ಜೂನ್‌ ೮ರಂದು ಕ್ಯಾಂಪ್‌ ಆರಕ್ಕೆ ಹಿಂತಿರುಗಿ ಬರುತ್ತಾರೆ  ಎಂದು ಅಂದಾಜು ಮಾಡಿದ್ದರು. ಆದರೆ ಮಲರಿ ಮತ್ತು ಆಂಡ್ರ್ಯೂ ಇರ್ವಿನ್‌ ಇಬ್ಬರೂ ಹಿಂತಿರುಗಿ ಬರಲೇ ಇಲ್ಲ!!!.  ಹಿಮಪಾತ ಮತ್ತು ಬಲವಾಗಿ ಬೀಸಿದ ಶೀತಗಾಳಿಯ ಕಾರಣದಿಂದ ಅವರು ಕಣ್ಮರೆಯಾದರು ಎಂದು ಎಲ್ಲರೂ ತೀರ್ಮಾನಕ್ಕೆ ಬಂದರು. ಹೀಗೆ ಎವರೆಸ್ಟ್‌ನ್ನು ಉತ್ತರದ ಕಡೆಯಿಂದ ಏರುವ 1924ರ ಪ್ರಯತ್ನವು ವಿಫಲವಾಯಿತು.  

      ನೇಪಾಳವು  ವಿದೇಶಿಯರ ಪ್ರವೇಶಕ್ಕೆ ನಿರ್ಬಂಧಿಸಿದ್ದ ತನ್ನ ಗಡಿಗಳನ್ನು 1950ರಲ್ಲಿ ತೆರೆಯಿತು. ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡ ವಿಶ್ವದ ಅನೇಕ ದೇಶಗಳ ಪರ್ವತಾರೋಹಿಗಳು ಟಿಬೆಟ್ಟಿನಿಂದ ಎವರೆಸ್ಟನ್ನು ತಲುಪಬಹುದಾದ ಕಠಿಣ ಮಾರ್ಗಕ್ಕಿಂತ ದಕ್ಷಿಣದ ಕಡೆಯಿಂದ ಸುಲಭವಾದ ನೇಪಾಳದ ಮಾರ್ಗವನ್ನು ಅನ್ವೇಷಿಸಿದರು.  1953ರಲ್ಲಿ ನ್ಯೂಜಿಲೆಂಡಿನ ಎಡ್ಮಂಡ್‌ ಹಿಲೆರಿ ಮತ್ತು ನೇಪಾಳದ ಷೆರ್ಪಾ ತೆನ್ಜಿಂಗ್‌ ನೋರ್ಗೆ ಮೊಟ್ಟ ಮೊದಲಿಗೆ ಎವರೆಸ್ಟ್‌ ಶಿಖರವನ್ನು ಏರಿದ ದಾಖಲೆಗೆ ಭಾಜನರಾದರು. ಅಂದಿನಿಂದ ಆರಂಭಿಸಿ ಇಲ್ಲಿಯವರೆಗೆ ಸುಮಾರು 9000 ಬಾರಿ ಎವರೆಸ್ಟ್‌ ಶಿಖರವನ್ನು ವಿಶ್ವದ ಪರ್ವತಾರೋಹಿಗಳು ಏರಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.






     ನೇಪಾಳದ ಕಠ್ಮಂಡುವಿಗೆ ವಿಮಾನದಲ್ಲಿ ಆಗಮಿಸುವ ವಿಶ್ವದ ಪರ್ವತಾರೋಹಿಗಳು ಅಲ್ಲಿಂದ ಸಣ್ಣ ವಿಮಾನದಲ್ಲಿ ಲೂಕ್ಲಾ ಎಂಬ ಅತಿ ಚಿಕ್ಕದಾದ ಆದರೂ ವಿಶ್ವದ ಅತಿ ಅಪಾಯಕಾರಿ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಾರೆ. ಅಲ್ಲಿಂದ ಅವರ ಟ್ರಕ್ಕಿಂಗ್‌ ಎವರೆಸ್ಟ್‌ ಬೇಸ್‌ ಕ್ಯಾಂಪಿಗೆ ಶುರುವಾಗುತ್ತದೆ. ಅವರೊಂದಿಗೆ ಅವರಿಗೆ ಅಗತ್ಯವಾದ ಸಾಧನ ಸರಂಜಾಮುಗಳು ಯಾಕ್‌ ಎಂಬ ಪ್ರಾಣಿಯ ಮೇಲೆ ಸಾಗುತ್ತದೆ. ಹೀಗೆ ಸಾಗುವ ಸುಮಾರು ಒಂದು ವಾರಕಾಲದ ಕಾಲ ನಡಿಗೆಯಲ್ಲಿ ಪರ್ವತಾರೋಹಿಗಳು ನಿಧಾನವಾಗಿ ಮೇಲೆ ಮೇಲೆ ಏರಿ ಹೋದಂತೆ ಅವರ ದೇಹವು ಅತಿ ಎತ್ತರದಲ್ಲಿನ ವಾಯುಮಂಡಲದ  ಕಡಿಮೆ ಒತ್ತಡ ಮತ್ತು ವಿರಳಗಾಳಿ ಅಲ್ಲದೇ ಅತಿ ಶೀತದ ವಾತಾವರಣಕ್ಕೆ ಒಗ್ಗಿಕೊಳ್ಳುವ ಪ್ರಕ್ರಿಯೆಗೆ ಒಳಗಾಗುತ್ತಾ ಹೋಗುತ್ತದೆ. ದೇಹವನ್ನು ಈ ರೀತಿಯಲ್ಲಿ ಒಗ್ಗಿಸುವ ಪ್ರಕ್ರಿಯೆ ಪರ್ವತಾರೋಹಣದ ಅಂತ್ಯದವರೆಗೆ ನಡೆಯುತ್ತಲೇ ಇರಬೇಕು. ಕುಂಬು ಕಣಿವೆಯ ಆರಂಭದಲ್ಲಿರುವ ಬೇಸ್‌ ಕ್ಯಾಂಪಿನಲ್ಲಿ  ದೇಹವನ್ನು ಒಗ್ಗಿಸುವ ಉದ್ದೇಶದಿಂದ  ಒಂದೆರಡು ದಿನ ವಿಶ್ರಾಂತಿ ಪಡೆದ ನಂತರ ಕುಂಬು ಕಣಿವೆಯ ಹಿಮನದಿಯಲ್ಲಿ ಅಸ್ತವ್ಯಸ್ತವಾಗಿ ಬಿದ್ದಿರುವ ಬಹುಮಹಡಿಗಳ ಕಟ್ಟಡ ಗಾತ್ರದ ಹಿಮ ಬಂಡೆಗಳನ್ನು ದಾಟಿ 5,943ಮೀಟರ್‌  ಎತ್ತರದಲ್ಲಿರುವ ಒಂದನೆಯ ಕ್ಯಾಂಪನ್ನು ತಲುಪುವುದು. ಕುಂಬು ಕಣಿವೆಯಲ್ಲಿ ನಿರಂತರವಾಗಿ ತನ್ನ ಸ್ಥಾನ ಬದಲಾಯಿಸುವ ಬೃಹತ್ ಹಿಮಬಂಡೆಗಳು, ಅವುಗಳ ನಡುವೆ ಬಾಯಿ ತೆರೆದುಕೊಂಡಿರುವ ಆಳವಾದ ಕಂದಕಗಳು ಇವುಗಳನ್ನು ದಾಟಿ ಒಂದನೆಯ ಕ್ಯಾಂಪರ ತಲುಪುವುದೇ ಒಂದು ಬೃಹತ್ ಮತ್ತು ಅತ್ಯಂತ ಅಪಾಯಕರ ಸಾಹಸ. ಈ ಕಣಿವೆಗೆ ಹೊಂದಿಕೊಂಡಿರುವ ಪರ್ವತಗಳಿಂದ ಎಂದು ಎಂತು ಹಿಮಪಾತವಾಗುತ್ತದೆಯೋ ಹೇಳಲು ಬರುವುದಿಲ್ಲ. ಒಂದನೆಯ ಕ್ಯಾಂಪಿನ ನಂತರ 6,400  ಮೀಟರ್ , ನಂತರ 7,162ಮೀ ಮತ್ತು 8,016ಮೀ ಗಳಲ್ಲಿ ಕ್ರಮವಾಗಿ ಸ್ಥಾಪಿಸುವ ಎರಡು ಮೂರು ಮತ್ತು ನಾಲ್ಕನೆಯ ಕ್ಯಾಂಪುಗಳು ಇರುತ್ತವೆ. ಇವುಗಳಲ್ಲಿ ಕೆಲಕಾಲ ಇದ್ದು ದೇಹವನ್ನು ಒಗ್ಗಿಸಿಕೊಳ್ಳಬೇಕಾಗುತ್ತದೆ.  ಇವೆಲ್ಲಕ್ಕೂ ಸಹಾಯಕರಾಗಿ ಹೊರೆ ಹೊತ್ತು ಸಾಗಲು, ಕ್ಯಾಂಪ್‌ ನಿರ್ಮಿಸಲು, ಮುಂಚಿತವಾಗಿ ಹೋಗಿ ಶಿಖರದ ತುದಿಯವರೆಗೆ , ರಕ್ಷಣಾ ಹಗ್ಗವನ್ನು ಬಿಗಿದು, ಣಿಗಳನ್ನು ಹಾಕಿ, ದಾರಿಯನ್ನು ಹದಗೊಳಿಸುವ ಕೆಲಸವನ್ನು ಮಾಡುವವರು ಷೆರ್ಪಾಗಳು. ಮಾರ್ಗದರ್ಶನ ಮಾಡುವುದಲ್ಲದೇ ಪರ್ವತಾರೋಹಿಗಳನ್ನು ಪ್ರಾಣಾಪಾಯದಿಂದ ರಕ್ಷಿಸಲು ಇವರು ಇರಲೇಬೇಕು. 



      ಎವರೆಸ್ಟ್‌ ಪರ್ವತ ಏರುವವನ ಸಾವು ಯಾವ ಕ್ಷಣದಲ್ಲೋ ಹೇಳುವುದು ಅಸಾಧ್ಯ. ಹಿಮಾಲಯದ ಎತ್ತರದಲ್ಲಿ ಅತಿಶೀತದ ಕಾರಣದಿಂದ ಹಿಮಕಡಿತದಿಂದ ಮೂಗು, ಕೈಕಾಲುಗಳ ತುದಿಗಳು ಕೊಳೆತು ಅಂಗ ವೈಕಲ್ಯವಾಗಬಹುದುಇಡುವ ಹೆಜ್ಜೆಯ ಮೇಲೆ ನಿರಂತರ ಗಮನವಿರಬೇಕು. ಮುಂದೆ ಇಡುವ ಒಂದು ಹೆಜ್ಜೆ ತಪ್ಪಿತಂದರೆ ಪಾತಾಳವೆ ಗತಿ. ಎಲ್ಲಾ ಸರಿಯಿದ್ದರೂ ಎಷ್ಟೋ ಸಲ ನಮ್ಮ ದೇಹವೇ ಸಹಕರಿಸುವುದಿಲ್ಲ. ಎಂಟು ಸಾವಿರದ ಅಡಿಯ ಮೇಲಿನ ಎವರೆಸ್ಟಿನ ಭಾಗದಲ್ಲಿ  ಈ ಸಮಸ್ಯೆಗಳು  ಸರ್ವೇಸಾಮಾನ್ಯ. ಆದ್ದರಿಂದ ಈ ವಲಯವನ್ನು ಡೆತ್ ಜೋನ್‌ ಎಂದು ಕರೆಯಲಾಗುತ್ತದೆ. ಎತ್ತರದಲ್ಲಿನ ಕಡಿಮೆ ಒತ್ತಡದ ಅತಿ ವಿರಳ ವಾಯುವಾದ್ದರಿಂದ ಉಸಿರಾಡಲು ಸಿಗುವ ಆಮ್ಲಜನಕವು ಕಡಿಮೆ ಹಾಗಾಗಿ ಉಸಿರಾಟದ ತೊಂದರೆ ಸರ್ವೇ ಸಾಮಾನ್ಯ. ಬಹುತೇಕ ಎಲ್ಲರೂ ತಮ್ಮೊಂದಿಗೆ ಆಕ್ಸಿಜನ್‌ ಸಿಲಿಂಡರ್‌ ತೆಗದುಕೊಂಡು ಹೋಗುತ್ತಾರೆ. ಅದು ಇಲ್ಲದಿದ್ದರೆ ಎವರೆಸ್ಟಿನ ಚಾರಣ ಕಷ್ಟಸಾಧ್ಯ. ದೈಹಿಕ ಹೊಂದಾಣಿಕೆಯ ಸಮಸ್ಯೆಯಿಂದಾಗಿಯೇ ಬಹುತೇಕ ಸಾವುಗಳು  ಸಂಭವಿಸುತ್ತವೆ. ಶ್ವಾಸಕೋಶದಲ್ಲಿ ಮತ್ತು ಮೆದುಳಿನಲ್ಲಿ ನೀರು ತುಂಬಿಕೊಂಡು ದೇಹ ಯಾವುದಕ್ಕೂ ಸಹಕರಿಸದಂತೆ ಮಾಡುತ್ತದೆ. ಉಸಿರಾಟದ ಸಮಸ್ಯೆ ಒಂದೆಡೆಯಾದರೆ ಮೆದುಳಿನ ಚಟುವಟಿಕೆಯೂ ಸಮರ್ಪಕವಾಗಿರುವುದಿಲ್ಲ. ಎಲ್ಲವೂ ಅಯೋಮಯದಂತೆ ತೋರುತ್ತದೆ. ನೀರು ಹೆಪ್ಪುಗಟ್ಟಿದ ವಾತಾವರಣದಲ್ಲಿಯೂ ಸೆಕೆ ಎನಿಸಿದ್ದರಿಂದ ಅನೇಕರು  ತಾವು ಧರಿಸಿದ್ದ ಬಟ್ಟೆಗಳನ್ನು ಕಿತ್ತೆಸೆದು ಮರಗಟ್ಟಿ ಸತ್ತಿರುವ ಅನೇಕ ಉದಾಹರಣೆಗಳಿವೆ.!!! ಅತಿಯಾದ ಬಳಲಿಕೆ ಎನಿಸಿ ಸ್ವಲ್ಪ ವಿಶ್ರಾಂತಿ ಪಡೆಯಲೆಂದು ಕುಳಿತವರು ಮೈ ಮರೆತು ಮರಗಟ್ಟಿ ಹೋಗಿರುವ ಉದಾಹರಣೆಗಳು ಹಲವಾರು ಇವೆ. ಎಲ್ಲವೂ ಸರಿಯಾದರೂ ಎಲ್ಲ ಪರ್ವತಾರೋಹಿಗಳಿಗೆ ತಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಭ್ರಮೆ ಕಾಡುತ್ತಲೇ ಇರುತ್ತದೆ. 

ಈ ಸಾಹಸದಲ್ಲಿ ನೂರಾರು ಜನ ಪರ್ವತಾರೋಹಿಗಳು, ಅವರಿಗೆ ನೆರವು ನೀಡುವ ಷೆರ್ಪಾಗಳೂ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹಲವರು ಪತ್ತೆಯಾಗದಂತೆ ಕಣ್ಮರೆಯಾಗಿದ್ದಾರೆ. ಮತ್ತೆ ಕೆಲವರು ಅಸುನೀಗಿ ತಮಗೆ ಪ್ರಿಯವಾದ ಎವರೆಸ್ಟಿನ ಮಡಲಿನಲ್ಲಿ ಇಂದಿಗೂ ಚಿರನಿದ್ರೆಯಲ್ಲಿ ಮಲಗಿದ್ದಾರೆ. ಎವರೆಸ್ಟ್‌ ಏರಲು ಹೋಗಿ ದಾರಿಯಲ್ಲಿ ಸತ್ತು ಬಿದ್ದುರುವ ನೂರಾರು ಪರ್ವತಾರೋಹಿಗಳ ಶವಗಳು ಹಿಮಾಲಯದ ಅತಿಶೀತದಲ್ಲಿ ಮಮ್ಮೀಕರಣಹೊಂದಿ ಸಂಸ್ಕಾರ ಕಾಣದೆ ನೂರಾರು ವರ್ಷಗಳಿಂದ ಹೇಗಿದೆಯೋ ಹಾಗಿಯೆ ಇಂದಿಗೂ ಇವೆ. ಇದರೊಂದಿಗೆ ಮೂಲ ಕ್ಯಾಂಪಿನಿಂದ ಆರಂಭಿಸಿ ಶಿಖರದ ತುತ್ತತುದಿಯವರೆಗೆ ಪರ್ವತಾರೋಹಿಗಳು ಹೊತ್ತು ಒಯ್ದು ಉಪಯೋಗಿಸಿ ಎಸೆದು ಹೋಗಿರುವ ಟೆಂಟ್‌, ಆಹಾರದ ಡಬ್ಬಿಗಳು, ಗ್ಯಾಸ್‌ ಸಿಲಿಂಡರುಗಳು, ನೀರಿನ, ಆಮ್ಲಜನಕದ ಬಾಟಲಿಗಳು, ಬಾವುಟಗಳುಪ್ಲಾಸ್ಟಿಕ್‌ ಕಸ, ಮಾನವ ಮಲಮೂತ್ರಗಳು ಕೂಡ ಹಾಗೆಯೆ ಉಳಿದುಬಿಟ್ಟಿವೆ. ಇವೆಲ್ಲವೂ ಎವರೆಸ್ಟ್‌ ಅಷ್ಟೇ ಅಲ್ಲದೆ ಸುತ್ತ ಮುತ್ತಲಿನ ಗ್ಲೇ಼ಷಿಯರಗಳನ್ನು ಮಲಿನಗೊಳಿಸಿವೆ. ಕೆಲವು ವರ್ಷಗಳ ಹಿಂದೆ ಎವರೆಸ್ಟ್‌ನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ತನ್ನ ಸೇನೆಯ ನೆರವಿನೊಂದಿಗೆ ನೇಪಾಳ ಸರ್ಕಾರ ಕೈಗೊಳ್ಳುತ್ತಾ ಬಂದಿದೆ. ಇತ್ತೀಚೆಗೆ ಪ್ರತಿಯೊಬ್ಬ ಪರ್ವತಾರೋಹಿ ಕೊಂಡೊಯ್ಯವ ಆಹಾರ ನೀರು, ಟೆಂಟು, ಮುಂತಾಗಿ ಎಲ್ಲವನ್ನು ಬಳಸಿದ ಮೇಲೆ ಹಿಂತಿರುಗಿ ತಂದು ಬೇಸ್‌ ಕ್ಯಾಂಪಿನಲ್ಲಿ ಒಪ್ಪಿಸಬೇಕೆಂಬ ಕರಾರನ್ನೂ ಅಲ್ಲಿನ ಸರ್ಕಾರ ವಿಧಿಸಿದೆ. ಜೊತೆಗೆ ಎವರೆಸ್ಟ್‌ ಶಿಖರ ಏರಲು ಹೊರಟ ಪ್ರತಿಯೊಬ್ಬನು ತನ್ನೊಂದಿಗ ಪೂಪ್‌ ಬ್ಯಾಗನ್ನು ಜೊತೆಗೆ  ಕೊಂಡು ಒಯ್ಯಬೇಕಾಗುತ್ತದೆ. ಅದರಲ್ಲಿ ದಿನ ನಿತ್ಯ ತನ್ನದೇ ಮಲಮೂತ್ರಗಳನ್ನು ಸಂಗ್ರಹಿಸಿ ಹಿಂತಿರುಗಿ ತಂದು ಬೇಸ್‌ಕ್ಯಾಂಪಿನಲ್ಲಿ ವಿಲೇವಾರಿ ಮಾಡುವುದೂ ಕಡ್ಡಾಯವಾಗಿರುತ್ತದೆ.   ಸಾಗರಮಾತ ನ್ಯಾಷನಲ್‌ ಪಾರ್ಕಿನ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಇದು ಅನಿವಾರ್ಯವಾಗಿದೆ ಎಂಬುವುದು ನೇಪಾಳದ ನಿಲುವು.

 

 ‌     ಮೇಲೆ ವಿವರಿಸಿದಂತೆ ಎವರೆಸ್ಟ್‌ ಶಿಖರದ ದಾರಿಗುಂಟ ಮೈಚೆಲ್ಲಿ ಮಲಗಿರುವ ಅನೇಕರ ಕಳೇಬರಗಳು-ಅವುಗಳನ್ನು ಬೇರೆಡೆಗೆ ಸಾಗಿಸುವುದು, ಇಳಿಸಿ ತರುವುದು ಅಸಾಧ್ಯ ಮತ್ತು ತರಲು ಪ್ರಯತ್ನಿಸುವುದು ರಕ್ಷಣಾತಂಡಕ್ಕೆ ಅತ್ಯಂತ ಅಪಾಯಕಾರಿ. ಹೀಗಾಗಿ ಇರುವಲ್ಲಿ ಅವುಗಳನ್ನು ವಿಲೇವಾರಿ ಮಾಡುವ ಕ್ರಿಯೆಯೂ ಆಗಾಗ್ಗೆ ನಡೆಯುತ್ತಿರುತ್ತವೆ. ತಮ್ಮವರ ಅವಶೇಷಗಳಿಗೆ ವಾರಸುದಾರರು ಶೋಧನೆಗಳನ್ನು ನಡೆಸಿದ ಅನೇಕ ಉದಾಹರಣೆಗಳಿವೆ. ಅವುಗಳಲ್ಲಿ  ಬಿಡಿಸಲಾಗದ ಕಗ್ಗಂಟಾಗಿ ಉಳಿದುಬಿಟ್ಟಿದ್ದ ಮಲರಿ ಮತ್ತು ಇರ್ವಿನ್‌ ಈ ಇಬ್ಬರ ಕಣ್ಮರೆಯ ರಹಸ್ಯವನು ಭೇದಿಸಲು ಅನೇಕ ತಂಡಗಳು ಪ್ರಯತ್ನಿಸಿವೆ. ಮೇಲೆ ವಿವರಿಸಿದಂತೆ 1924 ರಲ್ಲಿ ಮಲರಿ ಮತ್ತು  ಇರ್ವಿನ್‌ ಜೋಡಿಯು ಕಣ್ಮರೆಯಾದ ವಿಚಾರ ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದಿತು. ಪರ್ವತ ಶಿಖರಕ್ಕೆ ಕೇವಲ 800 ಮೀ ಎತ್ತರದಲ್ಲಿದ್ದ ಅವರನ್ನು ಕೊನೆಯ ಬಾರಿ ಕಂಡಿದ್ದರಿಂದ ಅವರು ಶಿಖರವನ್ನು ಏರಿದ ನಂತರ ಇಳಿಯುವಾಗ ನಾಪತ್ತೆಯಾದರು ಎನ್ನುವ ವಾದ ಒಂದು ಕಡೆ, ಇಲ್ಲ ಅವರು ಶಿಖರವನ್ನು ಏರದೆಯೇ ನಾಪತ್ತೆಯಾದರು ಎಂಬ ವಾದ ಹೀಗೆ ವಾದ ವಿವಾದಗಳು ಒಂದು ಶತಮಾನದಿಂದ ನಡೆಯುತ್ತಲೆ ಇದ್ದವು. ಇದಕ್ಕೆ ಒಂದು ತಾರ್ಕಿಕ ಅಂತ್ಯವನ್ನು ಹಾಡಲು ಹಲವಾರು ಶೋಧನೆಗಳು ಎವರೆಸ್ಟ್ ನಲ್ಲಿ ನಡೆಯುತ್ತಿದ್ದವು.  1930ರಷ್ಟು ಹಿಂದೆಯೆ ಇರ್ವಿನನದು ಇರಬಹುದೆಂದು ಹೇಳಲಾದ ಹಿಮಕೊಡಲಿಯು 8,440  ಎತ್ತರದಲ್ಲಿ ಪತ್ತೆಯಾಗಿದ್ದಿತು. 1975ರಲ್ಲಿ ಇರ್ವಿನನದು ಇರಬಹುದೆಂಬ ಕಳೇಬರವನ್ನು ಚೀನದ ಎವರೆಸ್ಟ್‌ ತಂಡ ಕಂಡಿದ್ದಿತು ಮತ್ತು 1991ರಲ್ಲಿ ಒಂದು‌ 1920ರ ವರ್ಷದ ಆಕ್ಸಿಜನ್‌ ಸಿಲಿಂಡರ್  ಸಿಕ್ಕಿತ್ತು. ಈ ಕುರುಹುಗಳ ಆಧಾರದ ಮೇಲೆ ಶೋಧನೆಗಾಗಿ ಎವರೆಸ್ಟ್‌ ಗೆ ಹೊರಟ ತಂಡವು ತೀವ್ರ ಹುಡುಕಾಟವು ನಂತರ ಜಾರ್ಜ್‌ ಮಲರಿಯ ಕಳೇಬರವನ್ನು 8,155  ಮೀ ಎತ್ತರದಲ್ಲಿ  1ಮೇ1999 ರಲ್ಲಿ ಪತ್ತೆ ಹಚ್ಚಿತು. ಬಲಗಾಲು ಮುರಿದು ತೀವ್ರವಾಗಿ ಗಾಯಗೊಂಡಿದ್ದ ಮಲರಿ ಬಿದ್ದ ಜಾಗದಲ್ಲೇ ಅಸುನೀಗಿದ್ದ ಅವನ ದೇಹವು ಮಮ್ಮೀಕರಣವಾಗಿತ್ತು. ಪೂರ್ಣಪ್ರಮಾಣದ ಪರಿಶೋಧನೆಯ ನಂತರ ಮಲರಿಗೆ ಸೇರಿದ ಕೆಲವು ವಸ್ತಗಳನ್ನು ಸಂಶೋಧನೆಗೆಂದು ಸಂಗ್ರಹಿಸಲಾಯಿತು. ಡಿಎನ್‌ಎ ಪರೀಕ್ಷೆಗೆಂದು ಅವನ ಬಲಮುಂಗೈನ ಸ್ವಲ್ಪ ಚರ್ಮವನ್ನೂ ಸಂಗ್ರಹಿಸಲಾಯಿತು.  ನಂತರ ಅಲ್ಲೆ ಸುತ್ತ ಮುತ್ತಲಿದ್ದ ಕಲ್ಲುಗಳ ಸಹಾಯದಿಂದ ಅವನ ದೇಹಕ್ಕೆ ಸಮಾಧಿಯನ್ನು ನಿರ್ಮಿಸಿದ ತಂಡ ಹಿಂತಿರುಗಿ ಬಂದಿತು. ಮಲರಿಯ ಕಳೇಬರದ ಶೋಧನೆಯಿಂದ ಅನಾವರಣಗೊಳ್ಳಬೇಕಾಗಿದ್ದ ರಹಸ್ಯ ಮತ್ತಷ್ಟು ಕಗ್ಗಂಟಾಯಿತು. ಮಲರಿಯು ತಾನು ಬ್ರಿಟನಿನ ಮನೆಯನ್ನು ಬಿಡುವಾಗ ತನ್ನೊಂದಿಗೆ ತನ್ನ ಪತ್ನಿಯ ಭಾವಚಿತ್ರವನ್ನು ಪಡೆದು ತಂದಿದ್ದ.  ಅದನ್ನು ಎವರೆಸ್ಟ್‌ ಶಿಖರದಲ್ಲಿರಿಸಿ ಬರುವೆನೆಂದು ಹೇಳಿಯೂ ಬಂದಿದ್ದ. ಆದರೆ ಈಗ ಅದು ಅವನ  ಕಳೇಬರದಲ್ಲಿ ಕಂಡು ಬರಲಿಲ್ಲ. ಅಂದರೆ ಅವನು ಎವರೆಸ್ಟನ್ನು ಏರಿ ಹಿಂತಿರುಗಿದ್ದನೆಂಬುದಕ್ಕೆ ಇದು ಪುಷ್ಟಿ ನೀಡುವಂತಿತ್ತು. ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯಬಹುದಾಗಿದ್ದ ಒಂದು ಬಲವಾದ ಸಾಕ್ಷ್ಯವೆಂದರೆ ಮಲರಿಯು ಸಮರ್ವೆಲನಿಂದ ಪಡೆದುಕೊಂಡು ಹೋಗಿದ್ದ ಕೊಡಕ್‌ ಕ್ಯಾಮರ ಅಲ್ಲಿ ದೊರೆಯದೇ ಹೋದದ್ದು. ಆ ಕ್ಯಾಮರ ಸಿಕ್ಕಿದ್ದೇ ಆದರೆ ಮಲರಿ ಮತ್ತು ಇರ್ವಿನರು ಎವರೆಸ್ಟಿನ ಶಿಖರವನ್ನು ತಲುಪಿದ್ದೇ ಆದರೆ ಅಲ್ಲಿ ಅವರು ತೆಗೆದ ಚಿತ್ರಗಳು ಅದರಲ್ಲಿದ್ದು ಬಲವಾದ ಸಾಕ್ಷ್ಯವನ್ನು ಒದಗಿಸುತ್ತವೆ. ಹಾಗಾಗಿ ಯಾರು ಮೊದಲು ಎವರೆಸ್ಟ್‌ ಶಿಖರವನ್ನು ಏರಿದ್ದು ಎಂಬುದರ ಸಾಕ್ಷ್ಯ ಆ ಕ್ಯಾಮರಾದಲ್ಲಿರಬಹುದು. ಅದು ಮಲರಿ - ಇರ್ವಿನ್ನರೋ ಅಥವಾ ಹಿಲೆರಿ- ತೇನ್ಜಿಂಗರೋ ಎನ್ನುವ ರಹಸ್ಯವನ್ನು ಬೇಧಿಸಬಹುದು. ಹೀಗಾಗಿ ಆ ಕ್ಯಾಮರಕ್ಕಾಗಿ ವಿಶ್ವದಾದ್ಯಂತ ಜನರು ಕುತೂಹಲಭರಿತ ನಿರೀಕ್ಷೆಗಳೊಂದಿಗೆ ಕಾಯುತ್ತಿದ್ದಾರೆ. ಇರ್ವಿನ್‌ ಜೊತೆಗೆ  ಅದು ಸಿಕ್ಕೀತೆ?  ನಮಗೂ ಕಾಯದೆ ವಿಧಿ ಇಲ್ಲ.





ಭಾರತದ ಧ್ವಜವನ್ನು ಎವರೆಸ್ಟ್‌ ಶಿಖರದ ಮೇಲೆ 1965ರಲ್ಲಿ ಹಾರಿಸಿದ ಮೊದಲ ಭಾರತೀಯ ಪುರುಷ ಭಾರತೀಯ ಸೇನೆಯ ಅವತಾರ್‌ ಸಿಂಗ್‌ ಚೀಮಾ.‌



ಭಾರತದ ಧ್ವಜವನ್ನು ಎವರೆಸ್ಟ್‌ ಶಿಖರದ ಮೇಲೆ 1985ರಲ್ಲಿ ಹಾರಿಸಿದ ಮೊದಲ ಭಾರತೀಯ ಮಹಿಳೆ ಬಚೇಂದ್ರಿಪಾಲ್.




 

No comments:

Post a Comment