ಜೀವಸತ್ವಗಳ ಮಹತ್ವ ಮತ್ತು ಜೀವಸತ್ವ ಪೂರೈಕೆಯಲ್ಲಿ ಸೂಕ್ಷ್ಮಜೀವಿಗಳ ಪಾತ್ರ
ಲೇಖಕರು : ಡಾ. ನೇತ್ರಾವತಿ. ವಿ
ಸಹಾಯಕ ಪ್ರಾಧ್ಯಾಪಕರು, ಜೈವಿಕ ತಂತ್ರಜ್ಞಾನ ವಿಭಾಗ, ರೇವ ವಿಶ್ವವಿದ್ಯಾಲಯ ಬೆಂಗಳೂರು
Email: nethraprasad08@gmail.com
ಮನುಷ್ಯನ ಆರೋಗ್ಯ ನಿರ್ವಹಣೆಯಲ್ಲಿ ಜೀವಸತ್ವ(ವಿಟಮಿನ್)ಗಳು ಮಹತ್ವದ ಪಾತ್ರ ವಹಿಸುತ್ತಿವೆ. ಜೀವಸತ್ವಗಳು ನಿಯಮಿತವಾಗಿ ಅಲ್ಪ ಪ್ರಮಾಣದಲ್ಲಿ ಪ್ರತಿನಿತ್ಯ ಬೇಕಾಗುವ ಅತೀ ಮುಖ್ಯ ಪೋಷಕಾಂಶಗಳು. ಜೀವಸತ್ವ ಬಿ-೧೨ (B12) ಹೊರತುಪಡಿಸಿ, ಉಳಿದ ಎಲ್ಲಾ ಜೀವಸತ್ವಗಳನ್ನು ನಾವು ದಿನನಿತ್ಯ ಸೇವಿಸುವ ವಿವಿಧ ಪ್ರಕೃತಿದತ್ತ ಹಣ್ಣು, ತರಕಾರಿ, ಸೂಪ್ಪು, ಧಾನ್ಯಗಳು, ಸೂರ್ಯನ ಬಿಸಿಲು ಮತ್ತು ಹಾಲಿನ ಉತ್ಪನ್ನಗಳ ಮೂಲಕ ಪಡೆಯುತ್ತೇವೆ. ಇದಲ್ಲದೆ, ಅನೇಕ ಜೀವಸತ್ವಗಳನ್ನು ಉತ್ಪಾದಿಸಬಲ್ಲ ಬ್ಯಾಕ್ಟೀರಿಯಾಗಳು ಅಗಾಧ ಸಂಖ್ಯೆಯಲ್ಲಿ ಮನುಷ್ಯನ ದೇಹ ಪ್ರಕೃತಿಯಲ್ಲೇ ವಾಸಿಸುತ್ತಿವೆ. ಅವು, ಹಲವಾರು ಜೀವಸತ್ವಗಳನ್ನು ತಯಾರಿಸಿ ತಾವೂ ಬಳಸಿ, ನಮಗೂ ಪೂರೈಸುತ್ತಿವೆ.
ಜೀವಸತ್ವಗಳನ್ನು ಎರಡು ಪ್ರಮುಖ ವಿಭಾಗಗಳಾಗಿ ಗುರುತಿಸಲಾಗುತ್ತದೆ
೧. ನೀರಿನಲ್ಲಿ ಕರಗುವ ಜೀವಸತ್ವಗಳು/Water soluble: ಬಿಕಾಂಪ್ಲೆಕ್ಸ್ ಜೀವಸತ್ವ (B1, B2, B3, B5, B6, B9, B12) ಮತ್ತು ಜೀವಸತ್ವ ಸಿ.
೨. ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು/Fat soluble: ಜೀವಸತ್ವA, D, E, K1 ಮತ್ತು K2
ಈ ಎಲ್ಲ ಜೀವಸತ್ವಗಳ ಸಮಗ್ರ ಪಾತ್ರವನ್ನು ಕೆಳಗೆ ವಿವರಿಸಲಾಗಿದೆ:
೧. ನಮ್ಮ ಜೀವಕೋಶಗಳಲ್ಲಿ ಇರುವ ಡಿ.ಏನ್.ಎ ರಚನೆಗೆ ಬೇಕಾದ ಮೂಲವಸ್ತುಗಳ ಉತ್ಪಾದನೆಗೆ ಕಾರಣವಾಗುತ್ತವೆ.
೨. ಬಿ೧೨ ಜೀವಸತ್ವ ಎರಡು ಪ್ರಮುಖ ಕಿಣ್ವ (enzyme)ಗಳಿಗೆ ಸಹವರ್ತಿ (ಕೊಫ್ಯಾಕ್ಟರ್) ಆಗಿ ವರ್ತಿಸಿ, ಕೆಲವು ಬಹುಮುಖ್ಯ ಜೀವರಾಸಾಯನಿಕಗಳ ಉತ್ಪಾದನೆಯನ್ನು ನಿರ್ವಹಿಸುತ್ತದೆ.
೩. ಆಂಟಿ-ಆಕ್ಸಿಡೆಂಟ್ (ಉತ್ಕರ್ಷಣ ನಿರೋಧಕ)ಗಳಾಗಿ ಕಾರ್ಯನಿರ್ವಹಿಸಿ, ನಿರ್ವಿಷೀಕರಣ (detoxification) ಕ್ರಿಯೆಯನ್ನು ಚುರುಕುಗೊಳಿಸುತ್ತವೆ.
೪. ಜೀವಕೋಶಗಳಿಗೆ ಹಾನಿಯಾಗುವುದನ್ನು ತಪ್ಪಿಸುತ್ತವೆ.
೫. ನಾಶಗೊಂಡ ಜೀವಕೋಶಗಳನ್ನು ಪುನರುಜ್ಜೀವನ (rejuvenation) ಗೊಳಿಸುತ್ತವೆ.
೬.ಸಂಕೀರ್ಣ ಚಯಾಪಚಯ ಕ್ರಿಯೆಗಳನ್ನು ನಿರ್ವಹಿಸಿ, ಕಾರ್ಬೋಹೈಡ್ರೇಟ್ ,ಪ್ರೋಟೀನ್ ಮತ್ತು ಕಬ್ಬಿನ ಪದಾರ್ಥಗಳನ್ನು ಜೀರ್ಣಿಸುವಲ್ಲಿ ಸಮತೋಲನೆಯನ್ನು ಕಾಯ್ದುಕೊಳ್ಳುತ್ತವೆ.
೭. ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತವೆ.
೮. ದೀರ್ಘಕಾಲೀನ ಕಾಯಿಲೆಗಳನ್ನು (Degenerative diseases) ತಡೆಯುತ್ತವೆ.
೯. ಮೂಳೆಗಳನ್ನು ಬಲಪಡಿಸುತ್ತವೆ.
೧೦. ಮೆದುಳು, ನರಗಳು ಮತ್ತು ಕರುಳಿನ ಆರೋಗ್ಯ ಹಾಗು ಕಾರ್ಯಕ್ಷಮತೆಯನ್ನು ನಿರ್ವಹಿಸುತ್ತವೆ.
ಒಟ್ಟಾರೆಯಾಗಿ, ಜೀವಸತ್ವಗಳು ಇಡೀ ದೇಹದ ಉತ್ತಮ ಆರೋಗ್ಯಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳು.
ಕೊರತೆ :
ಪ್ರಕೃತಿ ಹಲವು ಮೂಲಗಳಿಂದ ನಮಗೆ ಜೀವಸತ್ವಗಳನ್ನು ಒದಗಿಸಿದರೂ ಸಹ, ಹಲವರಲ್ಲಿ ಕೊರತೆ (deficiency) ಕಂಡುಬರುತ್ತದೆ.
ಕೊರತೆಗೆ ಕಾರಣಗಳು:
೧. ಕುಪೋಷಣೆ (Malnutrition)
೨. ಆಧಿಕವಾಗಿ ಅಪೌಷ್ಟಿಕ (ಜಂಕ್ ಆಹಾರ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು) ಆಹಾರಸೇವನೆ
೩.ಹಣ್ಣು, ತರಕಾರಿಗಳನ್ನು ಕತ್ತರಿಸಿ, ತೊಳೆದು, ತಯಾರಿಸುವ ವಿಧಾನದಲ್ಲಿ ನೀರಿನಲ್ಲಿ ಕರಗುವ ಜೀವಸತ್ವಗಳು ನಷ್ಟಹೊಂದುತ್ತವೆ.ತರಕಾರಿಗಳನ್ನು ಇಡಿಯಾಗಿ ತೊಳೆಯುವುದರಿಂದ ಹಾಗೂ ಮುಚ್ಚಿದ ಪಾತ್ರೆಯಲ್ಲಿ ಬೇಯಿಸುವುದರಿಂದ, ಬಿ ಮತ್ತು ಸಿ ಜೀವಸತ್ವಗಳ ನಷ್ಟವನ್ನು ತಪ್ಪಿಸಬಹುದು.
೪.ದೀರ್ಘಕಾಲದವರೆಗೆ ಕೆಲವು ಔಷಧಗಳು ಮತ್ತು ಆಂಟಿಬಯೋಟಿಕಗಳು ಸೇವನೆಯಿಂದಲೂ ಜೀವಸತ್ವ ಬಿ ಕಾಂಪ್ಲೆಕ್ಸ್ ಕೊರತೆ ಸೃಷ್ಟಿಯಾಗಬಹುದು.
೫. ಕೆಲವರಲ್ಲಿ, ಜೀವಸತ್ವಬಿ12 ಅನ್ನು ಹೀರಿಕೊಳ್ಳುವ ಪ್ರಕ್ರಿಯೆ ಕ್ಷೀಣಿಸಿ ಬಿ೧೨ನ ಕೊರತೆ ಸೃಷ್ಟಿಯಾಗುತ್ತದೆ.
ಕರುಳಿನ ಬ್ಯಾಕ್ಟೀರಿಯಾಗಳ ಮಹತ್ವ:
ಮನುಷ್ಯರ ಕರುಳಿನಲ್ಲಿ ಅಸಂಖ್ಯ ಸೂಕ್ಷ್ಮಜೀವಿಗಳು ವಾಸಿಸುತ್ತವೆ. ಈ ಸೂಕ್ಷ್ಮಜೀವಿಗಳು ಹಲವು ರೀತಿಯಲ್ಲಿ ನಮಗೆ ಉಪಯೋಗವಾಗುತ್ತಿವೆ. ಈ ಸೂಕ್ಷ್ಮಜೀವಿಗಳನ್ನು ಗಟ್ ಮೈಕ್ರೋಬಯೋಮ್ (gut micrbiomes) ಎನ್ನುವರು. ಉತ್ತಮ ಆರೋಗ್ಯ ಹೊಂದಲು ಸಮೃಧ್ಧ ಗಟ್-ಮೈಕ್ರೋಬಯೋಮ್ ಇರಬೇಕಾಗುತ್ತದೆ. ಇಂತಹ ಪ್ರಯೋಜನಕಾರಿ ಕರುಳಿನ ಬ್ಯಾಕ್ಟೀರಿಯಾಗಳನ್ನು ಪ್ರೋಬಯೋಟಿಕ್ಸ್(probiotics) ಎನ್ನಲಾಗುತ್ತದೆ. ಮನುಷ್ಯರ ಕರುಳಿನಲ್ಲಿರುವ ಒಟ್ಟಾರೆ ಬ್ಯಾಕ್ಟೀರಿಯಾಗಳಲ್ಲಿ ಬಿ12 ತಯಾರಿಸುವ ಬ್ಯಾಕ್ಟೀರಿಯಾಗಳ ಪ್ರಮಾಣ ಶೇಕಡಾ೨೦. ಈ ಬ್ಯಾಕ್ಟೀರಿಯಾಗಳು ಜೀವಸತ್ವಬಿ೧, ಬಿ2, ಬಿ6, ಬಿ೧೨ಗಳನ್ನೂ ಸಹ ಉತ್ಪಾದಿಸುತ್ತವೆ.
ಹಲವು ಅಧ್ಯಯನಗಳ ಪ್ರಕಾರ, ಸುಡೋಮೋನಾಸ್ ಡಿನೈಟ್ರಿಫಿಕೇನ್ಸ್ (Pseudomonas denitrificans), ಬ್ಯಾಸಿಲ್ಲಸ್ ಮೆಗಟೇರಿಯಂ (Bacillus megaterium), ಪ್ರೊಪಿಯೋನಿಬ್ಯಾಕ್ಟೇರಿಯಮ್ ಪ್ರುಡೇನ್ರೆಚಿ (Propionibacteriumfreudenreichii), ರೂಮಿನೋಕೋಕ್ಕಸ್ ಲ್ಯಾಕ್ಟಾರಿಸ್ (Ruminococcuslactaris), ಬೈಫಿಡೊ ಬ್ಯಾಕ್ಟೇರಿಯಮ್ (Bifidobacterium) ಹಾಗು ಇನ್ನು ಹಲ ಬಗೆಯ ಪ್ರೋಬಯೋಟಿಕ್ ಬ್ಯಾಕ್ಟೀರಿಯಾಗಳು ನಮ್ಮ ಕರುಳಿನಲ್ಲಿ ವಾಸಿಸುತ್ತಾ ನಮಗೆ ಬಿ12 ಮತ್ತು ಬಿ-ಕಾಂಪ್ಲೆಕ್ಸ್ ಮತ್ತಿತರ ಬಿ ಜೀವಸತ್ವಗಳನ್ನೂ ತಯಾರಿಸಿಕೊಡುತ್ತವೆ. ನಮ್ಮ ದೇಹದ ಯಾವ ಅಂಗವು ಸಹ ಜೀವಸತ್ವಗಳನ್ನು ತಯಾರಿಸುವ ವ್ಯವಸ್ಥೆ ಹೊಂದಿಲ್ಲ.
ನಾರಿನಂಶ ಹೆಚ್ಚು ಇರುವ ಆಹಾರ ಪದಾರ್ಥಗಳು ಕರುಳಿನಲ್ಲಿ ಉತ್ತಮ ಗಟ್ ಮೈಕ್ರೋಬಯೋಮ್ ಸ್ಥಾಪಿಸಲು ಸಹಕರಿಸುತ್ತವೆ. ನಾರಿನಂಶವನ್ನು ಪ್ರಿಬಯೋಟಿಕ್ಸ್ (prebiotics) ಎನ್ನಕಾಗುತ್ತದೆ . ಹಸಿ ತರಕಾರಿಗಳು, ಹಣ್ಣುಗಳು, ಹೊಟ್ಟನ್ನು ಬೇರ್ಪಡಿಸದ ಗೋಧಿಹಿಟ್ಟು, ರಾಗಿಹಿಟ್ಟು, ಸಿಪ್ಪೆ/ಹೊಟ್ಟು ಸಹಿತ ದ್ವಿದಳ ದಾನ್ಯಗಳು, ಸೊಪ್ಪುಗಳು ನಾರಿನಂಶದ ( ಪ್ರಿಬಯೋಟಿಕ್ಸ್ ) ಉತ್ತಮ ಮೂಲಗಳು. ಪ್ರಿಬಯೋಟಿಕ್ ಪದಾರ್ಥಗಳು ಪ್ರೋಬಯೋಟಿಕ್ ಬ್ಯಾಕ್ಟೀರಿಯಾಗಳನ್ನು ಪ್ರೋತ್ಸಾಹಿಸುತ್ತವೆ.
ಮೊಸರಿನಮಹತ್ವ:
ಮೊಸರಿನಲ್ಲಿ ಜೀವಸತ್ವ ಸಿ ಯನ್ನು ಹೊರತುಪಡಿಸಿ ಉಳಿದೆಲ್ಲ ಜೀವಸತ್ವಗಳು ಇವೆ. ಹಾಲು, ಮೊಸರಾಗುವ ಹುದುಗುವಿಕೆ (fermentation) ಪ್ರಕ್ರಿಯೆಯಲ್ಲಿ ಬೈಫಿಡೊಬ್ಯಾಕ್ಟೀರಿಯಾ (Bifidobacteria)ಗಳು ಜೀವಸತ್ವ ಬಿ೧೨ ಅನ್ನು ಉತ್ಪಾದಿಸುತ್ತವೆ. ಮೊಸರು ಮತ್ತು ಇತರ ಹಾಲಿನ ಉತ್ಪನ್ನಗಳು ಪ್ರೊಬಯೋಟಿಕ್ ಬ್ಯಾಕ್ಟೀರಿಯಾಗಳಿಂದ ಸಮೃದ್ಧವಾಗಿದೆ.
ಸಾರವರ್ಧಿತ / ಬಲವರ್ಧಿತ (Fortified foods) ಆಹಾರಗಳು:
ಸಾರವರ್ಧಿತ / ಬಲವರ್ಧಿತ ಆಹಾರಗಳು ಎಂದರೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಪ್ರಕಾರ ಉದ್ದೇಶಪೂರ್ವಕವಾಗಿ ಅಗತ್ಯ ಸೂಕ್ಷ್ಮ ಪೋಷಕಾಂಶಗಳನ್ನು ಆಹಾರ ಪದಾರ್ಥಗಳಲ್ಲಿ ಸೇರಿಸಿ ಆಹಾರದ ಪೌಷ್ಟಿಕಾಂಶದ ಗುಣಮಟ್ಟವನ್ನು ಹೆಚ್ಚಿಸಿ ಅಥವಾ ಸುಧಾರಿಸಿ ಸಾರ್ವಜನಿಕ ಆರೋಗ್ಯ ಪ್ರಯೋಜನವನ್ನು ಒದಗಿಸುವುದು. ಕೇಂದ್ರ ಸರ್ಕಾರ ಬಲವರ್ಧಿತ ಅಕ್ಕಿಯನ್ನು 2025 ರ ವೇಳೆಗೆ ಸಾರ್ವಜನಿಕರಿಗೆ ಒದಗಿಸಲು ಸಿದ್ಧತೆ ನಡೆಸುತ್ತಿದೆ. FSSAI ಮಾನದಂಡಗಳ ಪ್ರಕಾರ, 1 ಕೆಜಿ ಬಲವರ್ಧಿತ ಅಕ್ಕಿ ಹಲವು ಪೋಷಕಾಂಶಗಳನ್ನು ಹೊಂದಿರುತ್ತದೆ; ಕಬ್ಬಿಣ (28-42.5 ಮೈಕ್ರೋಗ್ರಾಂ), ಫೋಲಿಕ್ ಆಮ್ಲ (75-125 ಮೈಕ್ರೋಗ್ರಾಂ), ಮತ್ತು ಜೀವಸತ್ವ B12 (0.75-1.25 ಮೈಕ್ರೋಗ್ರಾಂ), ಅಕ್ಕಿಯಲ್ಲಿ ಜಿಂಕ್ (10-15 ಮೈಕ್ರೋಗ್ರಾಂ), ಜೀವಸತ್ವ ಎ (500-750 ಮೈಕ್ರೋಗ್ರಾಂ), ಜೀವಸತ್ವ B1 (1-1.5 ಮೈಕ್ರೋಗ್ರಾಂ), ಜೀವಸತ್ವ ಬಿ2 (1.25 -1.75 ಮೈಕ್ರೋಗ್ರಾಂ), ಜೀವಸತ್ವಬಿ 3 (12.5 -೨೦ಮೈಕ್ರೋಗ್ರಾಂ) ಮತ್ತು ಜೀವಸತ್ವ B6 (1.5-2.5 ಮೈಕ್ರೋಗ್ರಾಂ) ಪೋಷಕಾಂಶಗಳನ್ನು ಹೊಂದಿರುತ್ತದೆ.
ಮಾರುಕಟ್ಟೆಯಲ್ಲಿ ಜೀವಸತ್ವ ಬಿ೧೨ ಮತ್ತು ಇತರ ಸೂಕ್ಷ್ಮಪೋಷಕಾಂಶಗಳನ್ನು ಒಳಗೊಂಡ ಬಲವರ್ಧಿತ ಆಹಾರಗಳು ವಿವಿಧ ಬ್ರಾಂಡ್ಗಳಲ್ಲಿ ಲಭ್ಯವಿವೆ, ಉದಾಹರಣೆಗೆ, ಬಲವರ್ಧಿತ ಧಾನ್ಯಗಳು, ಗೋಧಿಹಿಟ್ಟು, ಹಾಲಿನ ಉತ್ಪನ್ನಗಳಾದ ಚೀಸ್, ಯೋಗರ್ಟ್ ಮುಂತಾದವು. ಬಲವರ್ಧಿತ ಆಹಾರ ಪದಾರ್ಥಗಳ ಪ್ಯಾಕೆಟ್ ಗಳ ಮೇಲೆ +F ಲೋಗೋ ಇರುತ್ತದೆ. ಹಾಗೆಯೇ, ಯಾವ ಯಾವ ಪೋಷಕಾಂಶಗಳನ್ನು ಸೇರಿಸಲಾಗಿದೆ ಎಂಬ ಮಾಹಿತಿಯೂ ಇರುತ್ತದೆ. ಸಸ್ಯಾಹಾರಿಗಳು ಇಂತಹ ಆಹಾರಗಳನ್ನು ಬಳಸುವುದು ಉತ್ತಮ.
ಜೀವಸತ್ವಪೂರಕಗಳನ್ನು ತಯಾರಿಸುವಲ್ಲಿ ಸೂಕ್ಶ್ಮಜೀವಿಗಳ ಪಾತ್ರ :
ಜೀವಸತ್ವ ನ್ಯೂನತೆಗಳನ್ನು ಸರಿಪಡಿಸಲು ವೈದ್ಯರು ಜೀವಸತ್ವ ಪೂರಕ (Vitamin supplement) ಔಷಧಗಳನ್ನು ನಿಯಮಿತವಾಗಿ ನಿರ್ಧಿಷ್ಟ ಅವಧಿಯವರೆಗೆ ತೆಗೆದುಕೊಳ್ಳಲು ಸೂಚಿಸುತ್ತಾರೆ. ಜೀವಸತ್ವ ಪೂರಕಗಳನ್ನು ಔಷಧ ಕಂಪನಿಗಳು ಹಲವಾರು ಸೂಕ್ಷ್ಮಜೀವಿಗಳನ್ನು ಜೈವಿಕ ಪ್ರತಿಸ್ಪಂದನ (ಬಯೋರಿಯಾಕ್ಟಾರ್) ಗಳಲ್ಲಿ ಬೆಳೆಸಿ, ಸಂಸ್ಕರಿಸಿ ಉತ್ಪಾದಿಸುತ್ತಾರೆ. ಜೈವಿಕತಂತ್ರಜ್ಞಾನ ಹಾಗು ಸಂಶ್ಲೇಷಿತ ಜೀವಶಾಸ್ತ್ರ (ಸಿಂಥೆಟಿಕ್ ಬಯಾಲಜಿ) ತಂತ್ರಜ್ಞಾನದ ಮೂಲಕ ಕೆಲವು ಸೂಕ್ಷ್ಮಜೀವಿಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಜೀವಸತ್ವಗಳನ್ನು ತಯಾರಿಸಿ, ಮಾತ್ರೆ, ಇಂಜೆಕ್ಷನ್, ಸಿರಪ್ ಗಳ ರೂಪದಲ್ಲಿ ನಮಗೆ ಪೂರೈಸುತ್ತಿವೆ . ಇಂತಹ ಜೀವಸತ್ವಗಳನ್ನು ಪೂರಕಜೀವಸತ್ವ (ಜೀವಸತ್ವ ಸಪ್ಲಿಮೆಂಟ್ ) ಎನ್ನಲಾಗುತ್ತದೆ.
ಬಿ೧೨ ಇಂಜೆಕ್ಷನ್ ಮತ್ತು ಮಾತ್ರೆಗಳು ಲಭ್ಯವಿದ್ದು, ಈ ಎರಡನ್ನು ಬೇರೆ ಬೇರೆ ಸಂಧರ್ಭಗಳಲ್ಲಿ ವೈದ್ಯರು ಸೂಚಿಸುತ್ತಾರೆ. ಜೀವಸತ್ವಬಿ೧೨ಚುಚ್ಚುಮದ್ದನ್ನು (ಇಂಜೆಕ್ಷನ್) ಸ್ನಾಯುವಿನೊಳಗೆ (intra-muscular ) ಸೇರಿಸುವುದರ ಮೂಲಕ ಕರುಳಿನಲ್ಲಿ ಹೀರಿಕೊಳ್ಳುವ ಪ್ರಕ್ರಿಯೆ ಕ್ಷೀಣಿಸಿರುವವರಿಗೆ ಬಹಳ ಬೇಗ ಬಿ೧೨ ಕೊರತೆಯನ್ನು ನೀಗಿಸಲಾಗುತ್ತದೆ. ಒಂದರಿಂದ ಮೂರು ತಿಂಗಳವರೆಗೆ ನೀಡಿ ಬಿ12 ಪ್ರಮಾಣವನ್ನು ಉತ್ತಮಪಡಿಸಬಹುದು. ಕರುಳಿನಲ್ಲಿ ಆಂತರಿಕ ಅಂಶಗಳ ( intrinsic factors ) ಕೊರತೆ ಇರದವರಿಗೆ ಬಿ12 ಮಾತ್ರೆಗಳು ಉಪಯುಕ್ತವಾಗಿವೆ.
ಬಿ ಗುಂಪಿನ ಜೀವಸತ್ವ ತಯಾರಿಕೆಯಲ್ಲಿ ಬಳಸಲಾಗುತ್ತಿರುವ ಸೂಕ್ಷ್ಮಜೀವಿಗಳು
ಜೀವಸತ್ವ | ಸೂಕ್ಷ್ಮಜೀವಿ |
ಜೀವಸತ್ವ B1/Thiamine (ಥಯಾಮೈನ್) | B. subtilis TH95 (ಬ್ಯಾಸಿಲ್ಲಸ್ ಸಬ್ಟಿಲಿಸ್) TH95) E. coli (ಇ. ಕೋಲೈ) Aspergillus oryzae (ಅಸ್ಪೆರ್ಜಿಲ್ಲಸ್ ಒರೈಝೇ) |
ಜೀವಸತ್ವ B2/Riboflavin (ರೈಬೋಫ್ಲೇವಿನ್) | B. subtilis (ಬ್ಯಾಸಿಲ್ಲಸ್ ಸಬ್ಟಿಲಿಸ್) Ashbya gossypii (ಅಷಬ್ಯಾ ಗಾಸಿಪ್ಪಿ) Candida famata(ಕ್ಯಾಂಡಿಡಾ ಫಮಾಟ) |
ಜೀವಸತ್ವ B3/ Niacin (ನಿಯಾಸಿನ್) | Yeast (ಯೀಸ್ಟ್) E. coli (ಇ. ಕೋಲೈ) |
ಜೀವಸತ್ವ B4 /pantothenic acid (ಪ್ಯಾಂಟೋಥೆನಿಕ್ಆಸಿಡ್) | Candida glutamicum (ಕ್ಯಾಂಡಿಡಾ ಗ್ಲುಟಾಮಿಕಮ್) B. subtilis (ಬ್ಯಾಸಿಲ್ಲಸ್ ಸಬ್ಟಿಲಿಸ್)
|
ಜೀವಸತ್ವB6/pyridoxine/ಪಿರಿಡಾಕ್ಸಿನ್ | E. coli (ಇ. ಕೋಲೈ) Sinorhizobium meliloti (ಸೈನೋರೈಝೋಬಿಯಂಮೇಲಿಲೊಟಿ) B. subtilis (ಬ್ಯಾಸಿಲ್ಲಸ್ ಸಬ್ಟಿಲಿಸ್)
|
ಜೀವಸತ್ವB7/ Biotin (ಬಯೊಟಿನ್) | ಅಗ್ರೋಬ್ಯಾಕ್ಟೀರಿಯಮ್/ ರೈಝೋಬಿಯಂ HK4 E. coli (ಇ. ಕೋಲೈ) B. subtilis (ಬ್ಯಾಸಿಲ್ಲಸ್ ಸಬ್ಟಿಲಿಸ್) |
ಜೀವಸತ್ವB9/Folic Acid (ಫೋಲಿಕ್ಆಸಿಡ್) | Ashbya gossypii (ಅಷಬ್ಯಾ ಗಾಸಿಪ್ಪಿ)
|
ಜೀವಸತ್ವ B12/ Cobalamin (ಕೋಬಾಲಮಿನ್) | Sinorhizobium meliloti (ಸೈನೋರೈಝೋಬಿಯಂ ಮೇಲಿಲೊಟಿ) Pseudomonas denitrificans (ಸುಡೋಮೋನಾಸ್ ಡಿನೈಟ್ರಿಫಿಕೇನ್ಸ್) Bacillus megaterium (ಬ್ಯಾಸಿಲ್ಲಿಸ್ ಮೇಗಟೇರಿಯಂ) Propionibacterium freudenreichii (ಪ್ರೊಪಿಯೋನಿಬ್ಯಾಕ್ಟೀರಿಯಮ್ ಪ್ರುಡೇನ್ರೆಚಿ) Propionibacterium Shermanii (ಪ್ರೊಪಿಯೋನಿಬ್ಯಾಕ್ಟೀರಿಯಮ್ ಶೆರ್ಮಾನಿ) |
ಶಿಫಾರಸು ಮಾಡಲಾದ ಅಗತ್ಯ ಬಿ೧೨ ಜೀವಸತ್ವ ಸೇವನೆಯ ಮಟ್ಟವನ್ನು (Recommended Dietary Allowances /RDA) ಕೆಳಗೆನೀಡಲಾಗಿದೆ
| ಪುರುಷ
| ಹೆಣ್ಣು | ಗರ್ಭಾವಸ್ಥೆ | ಹಾಲುಣಿಸುವ ಮಹಿಳೆ |
೬ತಿಂಗಳವರೆಗೆ | 0.4 ಮೈಕ್ರೋಗ್ರಾಂ | 0.4 ಮೈಕ್ರೋಗ್ರಾಂ
| - | - |
7–12 ತಿಂಗಳು | 0.5 ಮೈಕ್ರೋಗ್ರಾಂ
| 0.5 ಮೈಕ್ರೋಗ್ರಾಂ
| - | - |
1-3 ವರ್ಷಗಳು | 0.9 ಮೈಕ್ರೋಗ್ರಾಂ | 0.9 ಮೈಕ್ರೋಗ್ರಾಂ | - | - |
4–8 ವರ್ಷಗಳು | 1.2 ಮೈಕ್ರೋಗ್ರಾಂ
| 1.2 ಮೈಕ್ರೋಗ್ರಾಂ | - | - |
9–13 ವರ್ಷಗಳು | 1.8 ಮೈಕ್ರೋಗ್ರಾಂ
| 1.8 ಮೈಕ್ರೋಗ್ರಾಂ
| - | - |
14–18 ವರ್ಷಗಳು | 2.4 ಮೈಕ್ರೋಗ್ರಾಂ | 2.4 ಮೈಕ್ರೋಗ್ರಾಂ
| 2.6 ಮೈಕ್ರೋಗ್ರಾಂ
| 2.8 ಮೈಕ್ರೋಗ್ರಾಂ
|
19 ವರ್ಷಗಳನಂತರ | 2.4 ಮೈಕ್ರೋಗ್ರಾಂ | 2.4 ಮೈಕ್ರೋಗ್ರಾಂ
| 2.6 ಮೈಕ್ರೋಗ್ರಾಂ
| 2.8 ಮೈಕ್ರೋಗ್ರಾಂ
|
ಜೀವಸತ್ವಗಳು ಹಲವು ಸಂಕೀರ್ಣವಾದ ಕಾರ್ಯಗಳನ್ನು ವಿರ್ವಹಿಸುವುದರಿಂದ ಇಡೀ ದೇಹವನ್ನು ಹಲವು ರೀತಿಯಲ್ಲಿ ಪೋಷಿಸಿ ನಿಯಂತ್ರಿಸುತ್ತವೆ. ನಮ್ಮ ದಿನನಿತ್ಯದ ಆಹಾರದಲ್ಲಿ ಎಲ್ಲ ಜೀವಸತ್ವಗಳು ಇವೆಯೇ ಎಂಬುದನ್ನು ಗಮನಿಸಿಕೊಳ್ಳಬೇಕು. ಸಮೃದ್ಧ ಗಟ್ ಮೈಕ್ರೋಬಯೋಮ್ ಹೊಂದಲು ಹೆಚ್ಚು ನಾರಿನಂಶಯುಕ್ತ ನೈಸರ್ಗಿಕ ಆಹಾರ ಸೇವನೆ ಮಾಡುವುದು ಮತ್ತು ಜಂಕ್ ಪುಡ್ ಸೇವನೆ ಕಡಿಮೆಗೊಳಿಸುವುದನ್ನು ರೂಡಿಸಿಕೊಳ್ಳಬೇಕು. ಉತ್ತಮ ಆರೋಗ್ಯಕ್ಕಾಗಿ ದೇಹವನ್ನು ಬಹಳ ಜಾಗ್ರತೆಯಿಂದ ಪೋಷಿಸಬೇಕು . ಉತ್ತಮ ಅಹಾರ ಕ್ರಮಗಳು ಎಲ್ಲರಿಗು ಸಾಧ್ಯವಾಗಿ ಆರೋಗ್ಯವಂತರಾಗಿ ಬಾಳೋಣ ಎಂದು ಆಶಿಸೋಣ.
ಹೆಚ್ಚಿನ ಮಾಹಿತಿಗೆ ಕೆಳಗೆ ನೀಡಿರುವ ಸಂಶೋಧನಾ ಪ್ರಬಂಧಗಳ ಲಿಂಕ್ ಬಳಸಿ ಓದಬಹುದು.
1. doi: 10.3389/fbioe.2021.661562
2. https://www.nhlbi.nih.gov/health/anemia/vitamin-b12-deficiency-anemia
No comments:
Post a Comment