ಆರೋಗ್ಯಕ್ಕೆ ಭಾರವಾಗುವ ಭಾರ ಲೋಹಗಳು
ಇಂದು ನಾವು ವಿಜ್ಞಾನ, ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉತ್ತುಂಗದಲ್ಲಿದ್ದೇವೆ. ನಮ್ಮ ಬಹುತೇಕ ದೈನಂದಿನ ಕೆಲಸಗಳನ್ನು ಬೆರಳತುದಿಯಲ್ಲೇ ಮಾಡಿ ಮುಗಿಸುತ್ತಿದ್ದೇವೆ. ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಿದ್ದೇವೆ. ಪ್ರಗತಿಯ ಅಬ್ಬರದಲ್ಲಿ ಹೀಗೆ ಸಾಗುವ ಭರದಲ್ಲಿ ನಾವು ಪ್ರಕೃತಿಯನ್ನು ಕಡೆಗಣಿಸುತ್ತಿದ್ದೇವೆ. ನಮ್ಮೆಲ್ಲ ಸುಸ್ಥಿರ ಜೀವನಕ್ಕೆ ಪ್ರಕೃತಿಯೇ ಕಾರಣ ಎಂಬುದನ್ನು ಮರೆಯುತ್ತಿದ್ದೇವೆ. ಹಲವು ಕಾರಣಗಳಿಂದಾಗಿ, ಸುಂದರ ಪ್ರಕೃತಿಯು ಮಾಲಿನ್ಯದ ಕೂಪವಾಗುತ್ತಿದೆ. ಪರಿಸರವು ಜೀವಿಗಳ ವಾಸಕ್ಕೆ ಅಯೋಗ್ಯವಾದ ಹಂತಕ್ಕೆ ತಲುಪುತ್ತಿದೆ ಇವುಗಳಲ್ಲಿ, ಇಂದಿನ ಆಧುನಿಕ ಮಾನವನ ಪ್ರಾಣ ಹಿಂಡುತ್ತಿರುವ ಭಾರ ಲೋಹಗಳ ಪಾತ್ರ ಅಗ್ರಪಂಕ್ತಿಯಲ್ಲಿದೆ.
ಆಧುನಿಕ ಆವರ್ತಕ ಕೋಷ್ಟಕದಲ್ಲಿ, ಹೆಚ್ಚಿನ ಸಾಂದ್ರತೆ (density) ಹೊಂದಿರುವ ಮತ್ತು ವಿಷಕಾರಿಯಾದ ಲೋಹಗಳನ್ನು ಭಾರ ಲೋಹಗಳು (Heavy Metals) ಎಂದು ವೈಜ್ಞಾನಿಕವಾಗಿ ಗುರುತಿಸಲಾಗಿದೆ. ಇಂದಿನ ಅತಿಯಾದ ಪರಿಸರ ಮಾಲಿನ್ಯದಿಂದಾಗಿ ಗಾಳಿ, ನೀರು, ಹಾಲು, ಮತ್ತು ಆಹಾರ ಪದಾರ್ಥಗಳ ಮೂಲಕ ನಮ್ಮ ದೇಹಕ್ಕೆ ಪ್ರವೇಶ ಪಡೆಯುವ ಈ ಭಾರ ಲೋಹಗಳು ಬಹಳದಿನಗಳವರೆಗೆ ದೇಹದ ಶ್ವಾಸಕೋಶ, ರಕ್ತಜಾಲ, ಕೂದಲು, ಮೂತ್ರಜನಕಾಂಗ ಮುಂತಾದ ಸೂಕ್ಷ್ಮ ಜಾಗಗಳಲ್ಲಿ ನೆಲಸಿ, ಜೀವಕ್ಕೆ ಮಾರಣಾಂತಿಕವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು . ಸೀಸ, ಕ್ಯಾಡ್ಮಿಯಂ, ಪಾದರಸ, ಮ್ಯಾಂಗನೀಸ್ ,ಕ್ರೋಮಿಯಂ ಕೋಬಾಲ್ಟ, ನಿಕ್ಕೆಲ್, ತಾಮ್ರ , ಸತು, ಬೆಳ್ಳಿ, ಅಂಟಿಮನಿ, ಥ್ಯಾಲಿಯಂ ಲೋಹಗಳನ್ನು ವೈಜ್ಞಾನಿಕವಾಗಿ ಭಾರ ಲೋಹಗಳೆಂದು ವಿಶ್ಲೇಷಿಸಲಾಗಿದ್ದು, ಇವು ಈ ಕೆಳಗಿನ ಪ್ರಮುಖ ಮಾಧ್ಯಮಗಳ ಮುಖಾಂತರ ಮಾನವನ ದೇಹವನ್ನು ಪ್ರವೇಶಿಸಬಹುದು.
1. ವಾಹನಗಳು ಹೊರಸೂಸುವ ಹೊಗೆಯಿಂದ: ವಾಹನಗಳ ದಕ್ಷತೆ ಹೆಚ್ಚಿಸಲು ಇಂಧನದ ಜೊತೆ ಟೆಟ್ರಾಈಥೈಲ್ ಲೆಡ್ ಬಳಸಲಾಗುತ್ತದೆ. ವಾಹನ ಹೊರಸೂಸುವ ಹೊಗೆಯಿಂದ ಇಂತಹ ಭಾರ ಲೋಹಗಳು ಸುಲಭವಾಗಿ ಶ್ವಾಸಕೋಶಕ್ಕೆ ಪ್ರವೇಶ ಪಡೆಯಬಹುದು.
2. ಗಣಿಗಾರಿಕೆ: ಗಣಿಗಾರಿಕೆ ಉದ್ಯಮದಲ್ಲಿ ತೊಡಗಿಕೊಂಡ ಕಾರ್ಮಿಕರು ಕೆಲವು ಸಂದರ್ಭಗಳಲ್ಲಿ ಇಂತಹ ಭಾರಲೋಹಗಳ ಸಂಪರ್ಕಕ್ಕೆ ನೇರವಾಗಿ ಬರುವುದರಿಂದ, ಅವರು ಉಸಿರಾಡುವ ಗಾಳಿಯ ಮುಖಾಂತರ ಅಥವಾ ಅಂತಹ ವಾತಾವರಣದಲ್ಲಿ ಆಹಾರ ಸೇವಿಸುವ ಸಂದರ್ಭದಲ್ಲಿ, ಸುಲಭವಾಗಿ ಭಾರ ಲೋಹಗಳು ಅವರ ದೇಹವನ್ನು ಪ್ರವೇಶಿಸುತ್ತದೆ.
3. ಕೃಷಿ: ಕೃಷಿಯಲ್ಲಿ ಬಳಕೆಮಾಡುವ ಕೀಟನಾಶಕ, ರಸಗೊಬ್ಬರದಂತಹ ರಾಸಾಯನಿಕಗಳಲ್ಲಿ ಭಾರ ಲೋಹಗಳನ್ನು ಹೆಚ್ಚಾಗಿ ಬಳಸುತ್ತಾರೆ. ಕೃಷಿ ಕಾರ್ಮಿಕರು ನೇರವಾಗಿ ಇವುಗಳ ಸಂಪರ್ಕಕ್ಕೆ ಬರುವುದರಿಂದ ಇವರು ಭಾರ ಲೋಹಗಳಿಂದ ಬಾಧಿತರಾಗುವ ಸಂಭವ ಇರುತ್ತದೆ.
4. ಕೈಗಾರಿಕೆ: ವಿವಿಧ ಕೈಗಾರಿಕೆಗಳಲ್ಲಿ ಬೇರೆ ಬೇರೆ ಉದ್ದೇಶಗಳಿಗಾಗಿ ಭಾರ ಲೋಹಗಳನ್ನು ಬಳಸಲಾಗುತ್ತದೆ. ಅಲ್ಲಿನ ಕುಶಲಕರ್ಮಿಗಳು ಇದರಿಂದ ಅಪಾಯಕ್ಕೊಳಗಾಗುವ ಸಂಭವ ಅತಿಯಾಗಿರುತ್ತದೆ.
ಅಪಾಯಕಾರಿ ಭಾರ ಲೋಹಗಳು.
ಪ್ರಮುಖ ಭಾರ ಲೋಹಗಳಿಂದ ಉಂಟಾಗುವ ಅಪಾಯಗಳನ್ನು ಈ ಕೆಳಗಿನಂತೆ ವಿವರಿಸಬಹುದು.
೧. ಕ್ರೋಮಿಯಂ: ಇದು ದೇಹ ಪ್ರವೇಶ ಮಾಡುವುದರಿಂದ ಕೆಂಪು ರಕ್ತಕಣನಾಶ, ಮೂತ್ರಜನಕಾಂಗದ ಅಸಮರ್ಪಕ ಕಾರ್ಯನಿರ್ವಹಣೆ, ಶ್ವಾಸಕೋಶದ ಕ್ಯಾನ್ಸರ್, ಹೊಟ್ಟೆ ಮತ್ತು ಕರುಳಿನ ಭಾಗದಲ್ಲಿ ರಕ್ತಸ್ರಾವ ಮುಂತಾದ ಸಮಸ್ಯೆಗಳು ಗೋಚರಿಸಬಹುದು.
೨. ಪಾದರಸ: ಇದರಿಂದ ಪ್ರಮುಖವಾಗಿ ಕಿಡ್ನಿ ಮತ್ತು ನರಗಳ ತೊಂದರೆ, ಕೈಕಾಲುಗಳು ತಿಳಿಗೆಂಪು ಬಣ್ಣಕ್ಕೆ ತಿರುಗುವುದು, ವಾಂತಿ, ಬೇದಿ, ಜ್ವರ, ಹಲ್ಲು ಮತ್ತು ವಸಡಿನಲ್ಲಿ ಸೋಂಕು ಹಾಗೂ ಮಿನಮಾಟ ರೋಗದ ಲಕ್ಷಣಗಳು ಗೋಚರಿಸುತ್ತವೆ.
೩. ಸೀಸ : ರಕ್ತದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗುವದರಿಂದ ಉಂಟಾಗುವ ಅನೇಮಿಯಾ, ನರಗಳ ತೊಂದರೆ, ಕಿಡ್ನಿಯ ನೆಪ್ರೋಪತಿ ಸಮಸ್ಯೆ, ವಾಂತಿ ಹಾಗೂ ಮೆದುಳಿನ ಸಮಸ್ಯೆಗಳು ಅತಿಯಾದ ಸೀಸದ ಪ್ರಮಾಣ ನಮ್ಮ ದೇಹದಲ್ಲಿರುವುದರಿಂದ ಉದ್ಭವಿಸುವ ಸಮಸ್ಯೆಗಳಾಗಿವೆ.
೪. ಕ್ಯಾಡ್ಮಿಯಂ: ಇದರಿಂದ ಬಾಧಿತವಾದ ವ್ಯಕ್ತಿಯು ಶ್ವಾಸಕೋಶದ ಕ್ಯಾನ್ಸರ್, ಮೂಳೆ ಮೆದುವಾಗುವಿಕೆ ಮುಂತಾದ ಸಮಸ್ಯೆಗೆ ಒಳಗಾಗುತ್ತಾನೆ.
೫. ಆರ್ಸೆನಿಕ್ : ಈ ಭಾರ ಲೋಹವು ದೇಹವನ್ನು ಪ್ರವೇಶ ಪಡೆದಾಗ ವ್ಯಕ್ತಿಯಲ್ಲಿ ಅಪಾಯಕಾರಿ ತೊಂದರೆಯನ್ನು ಉಂಟುಮಾಡುತ್ತದೆ. ಚರ್ಮದ ಬಣ್ಣ ಬದಲಾವಣೆ, ಚರ್ಮದ ಕ್ಯಾನ್ಸರ್, ನರಗಳಲ್ಲಿ ನೋವು ಕಾಣಿಸಿಕೊಳ್ಳುವುದು, ವಾಂತಿ ಹಾಗೂ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರುತ್ತವೆ. ಹೆಚ್ಚಿನ ದ್ರವ್ಯರಾಶಿ ಹೊಂದಿರುವ ಈ ವಿಷಕಾರಿ ಧಾತುಗಳಿಗೆ ಸಾಮಾನ್ಯವಾಗಿ 'ಸಾವಿನ ಲೋಹಗಳು' (Death metals) ಎಂದೇ ಕರೆಯಲಾಗುತ್ತದೆ. ಇವುಗಳ ದೇಹ ಪ್ರವೇಶವು ಆರೋಗ್ಯಕ್ಕೆ ತೀರಾ ಮಾರಕವಾಗಿದ್ದು, ಕೆಲವೊಂದು ಸಲ ಮಾರಣಾಂತಿಕ ಪರಿಣಾಮವನ್ನು ಉಂಟುಮಾಡಬಹುದು. ಇಂತಹ ಆರೋಗ್ಯಕ್ಕೆ ಭಾರವಾಗುವ ಲೋಹಗಳ ಬಳಕೆಯನ್ನು ನಮ್ಮ ಆರೋಗ್ಯದ ದೃಷ್ಟಿಯಿಂದ ಮಿತಗೊಳಿಸೋಣ. ಆರೋಗ್ಯಕ್ಕೆ ಭಾರವಾದ ಘಟಕಗಳಿಂದ ದೂರವಿದ್ದು, ಸುಸ್ಥಿರ ಆರೋಗ್ಯವನ್ನು ಪಡೆಯೋಣ.
No comments:
Post a Comment