ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, April 4, 2025

ಭೂಮಿ ಹೊರತಾಗಿ ಬೇರೆಲ್ಲೂ ಬದುಕಿಲ್ಲ.....

 ಭೂಮಿ ಹೊರತಾಗಿ ಬೇರೆಲ್ಲೂ ಬದುಕಿಲ್ಲ..... 

ಪ್ಲಾಸ್ಟಿಕ್ ತ್ಯಜಿಸಿ, ಭೂಮಿ ಉಳಿಸಿ;ಹಸಿರೇ ಭೂಮಿಯ ಉಸಿರು.

✍️ಲೇಖನ: ಬಸವರಾಜ ಎಮ್ ಯರಗುಪ್ಪಿ

ಬಿ ಆರ್ ಪಿ ಶಿರಹಟ್ಟಿ

ಸಾ.ಪೊ ರಾಮಗೇರಿ, ತಾಲ್ಲೂಕು ಲಕ್ಷ್ಮೇಶ್ವರ, ಜಿಲ್ಲಾ ಗದಗ , ದೂರವಾಣಿ 9742193758 

ಮಿಂಚಂಚೆ basu.ygp@gmail.com

  


ಎಪ್ರೀಲ್ 22 ವಿಶ್ವ  ಭೂ ದಿನ,ನಿಮಿತ್ತ ವಿಶೇಷ ಲೇಖನ. 

"ತನ್ನ ಮಣ್ಣನ್ನು ನಾಶಪಡಿಸುವ ರಾಷ್ಟ್ರವು ತನ್ನನ್ನು ತಾನೇ ನಾಶಪಡಿಸುತ್ತದೆ. ಕಾಡುಗಳು ನಮ್ಮ ಭೂಮಿಯ ಶ್ವಾಸಕೋಶಗಳು,ಗಾಳಿಯನ್ನು ಶುದ್ಧೀಕರಿಸುತ್ತವೆ ಮತ್ತು ನಮ್ಮ ಜನರಿಗೆ ತಾಜಾ ಶಕ್ತಿಯನ್ನು ನೀಡುತ್ತವೆ" ಎಂದು -ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್  ಅವರು ಹೇಳಿರುವ ಭೂಮಿ ಕುರಿತು ಅಕ್ಷರಶಃ ಸತ್ಯ.ಭೂಮಿ ನಮ್ಮದು ಅದನ್ನು ನಮ್ಮ ರಕ್ತ ಸಂಬಂಧಿತರ ಪ್ರೀತಿಯಿಂದ ಪೋಷಿಸುವಂತೆ ಆದ್ಯ ಕರ್ತವ್ಯವಾಗಬೇಕು.

ನಮ್ಮ ಸುತ್ತಲಿನ ಪ್ರಪಂಚದ ಮೇಲೆ ಪ್ರಭಾವ ಬೀರದೆ ನಾವು ಒಂದೇ ದಿನವನ್ನು ಕಳೆಯಲು ಸಾಧ್ಯವಿಲ್ಲ.ನೀವು ಏನು ಮಾಡುತ್ತೀರೋ ಅದು ವ್ಯತ್ಯಾಸವನ್ನು ಮಾಡುತ್ತದೆ ಮತ್ತು ನೀವು ಯಾವ ರೀತಿಯ ವ್ಯತ್ಯಾಸವನ್ನು ಮಾಡಲು ಬಯಸುತ್ತೀರಿ ಎಂಬುದನ್ನು ನೀವು ನಿರ್ಧರಿಸಬೇಕಾಗಿದೆ ಎಂದು ಪರಿಸರವಾದಿಗಳ ಉವಾಚ.ಜಾಗತಿಕ ತಾಪಮಾನ ಏರಿಕೆ, ಹೆಚ್ಚುತ್ತಿರುವ ಇ ತ್ಯಾಜ್ಯ, ಪ್ರಕೃತಿ ವೈಪರಿತ್ಯಗಳ ನಡುವೆ ಅಳಿದುಳಿದಿರುವ ಭೂಮಿಯನ್ನು ಉಳಿಸಿಕೊಳ್ಳುವ ಹೊಣೆ ನಮ್ಮದಾಗಿದೆ. ಜೀವ ಸಂಕುಲವನ್ನು ಪಾಲನೆ ಪೋಷಣೆ ಮಾಡುವ ಭೂಮಿಯ ವಿಚಿತ್ರ ವರ್ತನೆಗಳಿಂದ ಎಚ್ಚೆತ್ತ ಅಮೆರಿಕದ ಸೆನೆಟರ್ ಗೆರಾಯ್ಡ್ ನೆಲ್ಸನ್ 1972ರ ಏಪ್ರಿಲ್ 22ರಂದು ಭೂಮಿ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ‘ವಿಶ್ವ ಭೂಮಿ ದಿನ’ ಆರಂಭಿಸಿದರು."ಭೂಮಿಯು ನಮ್ಮೆಲ್ಲರ ಮಾತೆ,ಅವಳನ್ನು ಹೊಗಳಲು, ಆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ವಿಶ್ವದೆಲ್ಲೆಡೆ ಮಂಗಳವಾರ ಏಪ್ರಿಲ್ 22, 2025 ರಂದು 55 ನೇ ಭೂ ದಿನವನ್ನು(ಅರ್ಥ್ ಡೇ)  ಆಚರಿಸಲಾಗುತ್ತದೆ.

ಈ ದಿನವನ್ನು ನಾವು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಭೂಮಿ ತಾಯಿಯನ್ನು ರಕ್ಷಣೆ ಮಾಡುವ ಮಹತ್ತರ ಜವಾಬ್ದಾರಿ ಮಾನವ ಸಂಕುಲದ ಮೇಲಿದೆ ಎಂದು ಮನಗಾಣಬೇಕು.ನಾವು ಇಂದಿನ ತಾಂತ್ರಿಕ ಯುಗದಲ್ಲಿ ನಮ್ಮ ಆಸೆಗಳ ಬೆನ್ನು ಬಿದ್ದು ಭೂಮಿಯ ನಾಶಕ್ಕೆ ದಾರಿ ಮಾಡಿಕೊಡುತ್ತಿದ್ದೇವೆ. ಧರೆಯ ಉಳಿವಿಗಾಗಿ ನಮ್ಮ ಪ್ರಯತ್ನ  ಶತಪಥವಾಗಬೇಕು, ಪರಿಸರ ಸಂರಕ್ಷಣೆ ನಮ್ಮ ಧ್ಯೇಯವಾಗಬೇಕು. 'ಸಾಲುಮರದ ತಿಮ್ಮಕ್ಕಳಂತೆ' ಪರಿಸರ ಪ್ರೀತಿ,ಭೂಮಿಯ ಆರೋಗ್ಯಕ್ಕಾಗಿ ಹೋರಾಡಿದ 'ಗ್ರೇಟಾ ಥನ್‍ಬರ್ಗ್' ಎನ್ನುವ ಹದಿನೈದು ವರ್ಷದ ಹುಡುಗಿ, ಅವಳು ಹುಟ್ಟುಹಾಕಿದ ಹೋರಾಟದ "ಇಂದು ಭೂಮಿಯೇ ಮನುಷ್ಯನ ದಾಹಕ್ಕೆ ಸಿಲುಕಿ ದಹಿಸುತ್ತಿದೆ" ಎಂದು ಒಬ್ಬಂಟಿಯಾಗಿ ಧರಣಿ ಕುಳಿತು ಹೋರಾಟ ಮಾಡಿದ ರೀತಿ ಇನ್ನೂ ನಮ್ಮ ಕಣ್ಣುಮುಂದೆ ಇರುವ ವಾಸ್ತವ ಸಂಗತಿ.


    ಚಿಪ್ಕೋ ಚಳುವಳಿಯ 'ಸುಂದರಲಾಲ ಬಹುಗುಣ' ಅವರ ಪರಿಸರ ಸ್ನೇಹಿ ರಕ್ಷಣಾ ಸ್ಪೂರ್ತಿ ನಮ್ಮ ಭೂರಮೆಯ ಒಡಲು ಹಚ್ಚ ಹಸಿರಾಗಿ ಇಂದಿನ ಮಾನವ ಕುಲಕ್ಕೆ ಅವರ ಆದರ್ಶ ಗುಣಗಳು ಶ್ರೀರಕ್ಷೆಯಾಗುವದರಲ್ಲಿ ಸಂದೇಹವಿಲ್ಲ. ಈ ಭೂಮಿಯನ್ನು ಪ್ರೀತಿಸಿ, ಭೂಮಿ ಇರುವುದು ನಿಮಗೆ ಮಾತ್ರವಲ್ಲ, ನಿಮ್ಮ ಮಕ್ಕಳಿಗೂ ಇದೆ ಎಂಬ ವಾಸ್ತವ ಸತ್ಯವನ್ನು ಎಲ್ಲರಿಗೂ ತಿಳಿಯುವಂತೆ ಮಾಡುವುದು  ಈ ದಿನಾಚರಣೆಯ ವಿಶೇಷತೆ ಮತ್ತು ಮುಖ್ಯ ಉದ್ದೇಶವಾಗಿದೆ.ಭೂಮಿ ನಮಗೆ ಜೀವ ಉಳಿಸಿಕೊಳ್ಳಲು ಅಗತ್ಯವಾಗಿ ಬೇಕಾದ ಗಾಳಿ, ನೀರು ಮತ್ತು ಆಹಾರವನ್ನು ನೀಡುತ್ತಿದೆ.ಅದಕ್ಕಾಗಿ ಭೂಮಿಯನ್ನು ಹೆತ್ತ ತಾಯಿಗೆ ಹೋಲಿಸಲಾಗುತ್ತದೆ.ಮಾನವ  ತನ್ನ  ಐಷಾರಾಮಿ ಜೀವನಕ್ಕಾಗಿ  ಹಾಗೂ ಸರ್ಕಾರಗಳು ಅಭಿವೃದ್ಧಿಯ  ಹೆಸರಿನಲ್ಲಿ ಕಾಡುಗಳನ್ನು ಮನಬಂದಂತೆ ನಾಶ ಮಾಡುತ್ತಿದ್ದು, ಇದರ ಪರಿಣಾಮವಾಗಿ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿವೆ.ಇದಲ್ಲದೆ ಅರಣ್ಯ ನಾಶದಿಂದ ಮಳೆಯ ಪ್ರಮಾಣ ಕ್ಷೀಣಿಸಿ ಎಲ್ಲೆಡೆ  ನೀರಿಗೆ ಬರ ಉಂಟಾಗುತ್ತಿದೆ. ಇದರಿಂದ ನೀರಿಲ್ಲದೆ ಜಲಚರ ಪ್ರಾಣಿಗಳು ಅಳಿದು ಹೋಗುತ್ತಿವೆ. ಮರಗಳನ್ನು ಕಡಿಯುವುದರಿಂದ ಮತ್ತು ಕಾರ್ಖಾನೆಗಳು ಹೊಗೆ ಉಗುಳುವುದರಿಂದ ಹಾಗೂ  ಜಲ ತ್ಯಾಜ್ಯದಿಂದಾಗಿ  ಹಲವು ತರಹದ ಮಾಲಿನ್ಯಗಳು ಉಂಟಾಗುತ್ತಿವೆ. ಇದಲ್ಲದೆ ಉಷ್ಣತೆಯ ಪ್ರಮಾಣ ದಿನೇ ದಿನೇ  ಏರಿಕೆಯಾಗುತ್ತಿದ್ದು, ಇದರಿಂದ ಹಿಮಗಡ್ಡೆಗಳು ಕರಗಿ ನೀರಾಗಿ ಪ್ರವಾಹ ಉಂಟಾಗುತ್ತಿದೆ. ಹಾಗಾಗಿ ಅತಿಯಾದ ಶಾಖದಿಂದ ಓಜೋನ್ ಪದರಕ್ಕೆ ಧಕ್ಕೆಯಾಗುತ್ತಿದೆ. ಶುದ್ಧ ಗಾಳಿಯ ಪ್ರಮಾಣ ಕಡಿಮೆಯಾಗಿ ಉಸಿರಾಡಲೂ ಕಷ್ಟಪಡಬೇಕಾಗಿದೆ. ಗಣಿಗಾರಿಕೆಯಿಂದ ಸಸ್ಯ ಸಂಪತ್ತು ನಶಿಸಿ ಹೋಗುತ್ತಿದೆ ಹಾಗೂ ಭೂ ಕಂಪನದಂತಹ ಪ್ರಕೃತಿ ವಿಕೋಪಗಳು ಜರುಗುತ್ತಿವೆ. ವಾಯು, ಜಲ, ಶಬ್ದ ಮತ್ತು ರಾಸಾಯನಿಕ ಮಾಲಿನ್ಯಗಳು ಹೆಚ್ಚಾಗುತ್ತಿವೆ. ಇದರಿಂದ ರೋಗಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇಷ್ಟೆಲ್ಲಾ ಅನಾಹುತಗಳಿಗೆ ಮಾನವ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣನಾಗಿದ್ದಾನೆ. ಅವನು ಭೂಮಿಯ ಮೇಲೆ ಮಾಡುವ ಅವಾಂತರಗಳು ಅಷ್ಟಿಷ್ಟಲ್ಲ. ಇವುಗಳಿಗೆ ಕಡಿವಾಣ ಹಾಕದಿದ್ದರೆ ಪ್ರಕೃತಿಯೇ ಅವನಿಗೆ ಸರಿಯಾದ ಪಾಠ ಕಲಿಸುತ್ತದೆ. ಭೂಮಿಯನ್ನು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ. ಎಂಬುದನ್ನು ನಾವು ಮರೆಯಬಾರದು. ಜಗತ್ತಿಗೆ ಇರುವುದೊಂದೇ ಭೂಮಿ. ಅದನ್ನು ಅತ್ಯಂತ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕೆಂಬ ವಾಸ್ತವ ಸತ್ಯವನ್ನು ಎಲ್ಲರೂ ಅರಿಯಬೇಕು. ಇರುವ ಭೂಮಿ ಬಿಟ್ಟು ಮತ್ತೆಲ್ಲೋ ಅನ್ಯಗ್ರಹಗಳಲ್ಲಿ  ಭೂಮಿ ಹುಡುಕಾಟ ನಡೆಸುವುದು ಅಸಂಬದ್ಧ. ಇರುವುದನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕೇ ವಿನಃ  ಕಳೆದುಕೊಳ್ಳಬಾರದು.

ಇದನ್ನರಿತು ಇಡೀ  ಭೂ ಪ್ರದೇಶ  ಒಳಗೊಂಡಿರುವ ಪರಿಸರ ಮತ್ತು  ಪ್ರಕೃತಿಯನ್ನು ಈಗಿರುವಂತೆ ಮುಂದಿನ ಪೀಳಿಗೆಗೆ  ಸಂರಕ್ಷಿಸಿಕೊಳ್ಳಲು ಅನುಸರಿಸಬೇಕಾದ ಕೆಲವು ಮಾರ್ಗಗಳನ್ನು  ಕುರಿತು ಭೂ ದಿನದಂದು  ಪ್ರತಿಯೊಬ್ಬ  ನಾಗರಿಕನು ಚಿಂತಿಸಬೇಕು. ಹಾಗಾಗಿ ಈ ಕೆಳಗಿನ ಮಾರ್ಗಗಳನ್ನು ಅನುಸರಿಸಿ ಅನುಪಾಲನೆ ಮಾಡುವುದು ನಮ್ಮೆಲರ ಹೊಣೆಯಾಗಬೇಕಾಗಿದೆ:

>ನೀರಿನ ಮಿತ ಬಳಕೆ ಮಾಡುವುದು.

>ಊರಿಗೊಂದು ವನ ಬೆಳೆಸುವುದು.

>ಪರಿಸರಕ್ಕೆ ಮಾರಕವಾಗದಿರುವ ಇಂಧನವನ್ನು ಬಳಸುವುದು.

>ಮನೆಯ ಮುಂದೆ ಜಾಗವಿದ್ದಲ್ಲಿ ಉಪಯೋಗಕ್ಕೆ ಬರುವ ಹಣ್ಣು, ಹೂವಿನ ಗಿಡಗಳನ್ನು ನೆಡುವುದು.

>ಒಣ ಹಾಗೂ ಹಸಿ ಕಸವನ್ನು ಪ್ರತ್ಯೇಕಗೊಳಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಕಾರ್ಮಿಕರಿಗೆ ನೀಡುವುದು.

>ಮಾರ್ಕೆಟ್‌ಗೆ ಹೋಗುವಾಗ  ಬಟ್ಟೆಯಿಂದ ತಯಾರಿಸಿದ  ಕೈಚೀಲವನ್ನೇ ಒಯ್ಯುವುದು.

>ಮಳೆಯ ನೀರು ವ್ಯರ್ಥವಾಗದಿರಲು ಪ್ರತಿ ಮನೆಯಲ್ಲೂ ಇಂಗು ಗುಂಡಿಯನ್ನು ತೋಡಿಸುವುದು.

>ಮನೆಯಲ್ಲಿ ಸೋಲಾರ್ ವಿದ್ಯುತ್ ದೀಪಗಳ ಬಳಕೆ ಮಾಡುವುದು.

>ಮನೆಯ ಮುಂದೆ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳುವುದು. 

>ಪುನರ್ಬಳಕೆ ಮಾಡಬಹುದಾದ ವಸ್ತುಗಳನ್ನು ಹೆಚ್ಚು ಬಳಸುವುದು.

>ಶುಚಿತ್ವದ ಕಡೆ ಆದ್ಯ ಗಮನ ಹರಿಸುವುದು.

>ಭೂ ಸಾರವನ್ನು ಸಂರಕ್ಷಿಸಲು ಹೊಲ, ಗದ್ದೆಗಳಲ್ಲಿ ಒಡ್ಡುಗಳನ್ನು ನಿರ್ಮಿಸುವುದು.

>ಮಳೆಯ ನೀರು ವ್ಯರ್ಥವಾಗಿ ಪೋಲಾಗದಂತೆ ತಡೆಯಲು ಚೆಕ್ ಡ್ಯಾಮ್‌ಗಳನ್ನು ನಿರ್ಮಿಸುವುದು.

>ಆಗಾಗ್ಗೆ ಮಣ್ಣಿನ ಫಲವತ್ತತೆಯನ್ನು ಪರೀಕ್ಷಿಸುವುದು. 

>ಸಂಚಾರಕ್ಕೆ ಬ್ಯಾಟರಿ ಚಾಲಿತ ವಾಹನವನ್ನು ಬಳಸುವುದು.

>ಬೆಳೆದ ಗಿಡಮರಗಳನ್ನು ಯಾರೂ ಕಡಿಯದಂತೆ ನೋಡಿಕೊಳ್ಳುವುದು.

>ಪರಿಸರಕ್ಕೆ ಸಂಬಂಧಿಸಿದ ಜಾಗೃತಿ ಶಿಬಿರಗಳನ್ನು ಏರ್ಪಡಿಸುವುದು.

>ಆದಷ್ಟೂ ಸೌಂದರ್ಯವರ್ಧಕಗಳನ್ನು ಕಡಿಮೆ ಬಳಕೆ ಮಾಡುವುದು. 

#2025 ರ ವಿಶ್ವ ಭೂಮಿಯ ದಿನ  ಥೀಮ್:

ಭೂಮಿಗೆ, ಪರಿಸರ ಸಂರಕ್ಷಣೆಯ ಮಹತ್ವವನ್ನು ಒತ್ತಿಹೇಳಲು ಪ್ರತಿವರ್ಷ ಭೂ ದಿನಕ್ಕೆ ಒಂದು ಧೈಯ ವಾಕ್ಯವನ್ನು ನೀಡಲಾಗುತ್ತದೆ.

'ನಮ್ಮ ಶಕ್ತಿ, ನಮ್ಮ ಗ್ರಹ' (Our Power, Our Planet) ಎಂಬುದು 2025 ರ ಘೋಷ ವಾಕ್ಯವಾಗಿದೆ. ಪರಿಸರದ ಅವನತಿಯನ್ನು ಪರಿಹರಿಸಲು, ಪರಿಸರ ವ್ಯವಸ್ಥೆಗಳನ್ನು ಮರುಸ್ಥಾಪಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಸುಸ್ಥಿರತೆಯನ್ನು ಉತ್ತೇಜಿಸುವ ತುರ್ತು ಅಗತ್ಯವನ್ನು ಈ ಥೀಮ್ ಒತ್ತಿಹೇಳುತ್ತದೆ. ಲಕ್ಷಾಂತರ ಜನರು ಕಂಪನಿಗಳು, ಸರ್ಕಾರಗಳು ಮತ್ತು ನಾಗರಿಕರ ನಡುವೆ ಪರಿಸರವನ್ನು ರಕ್ಷಿಸಲು ಕ್ರಮಗಳನ್ನು ಕಾರ್ಯಗತಗೊಳಿಸಲು ಮತ್ತು ಕಾರ್ಯನಿರ್ವಹಿಸಲು ಜಾಗತಿಕ ಮೈತ್ರಿಯನ್ನು ಕ್ರೋಢೀಕರಿಸಲು ಕರೆ ನೀಡುವುದನ್ನು  ನೆನಪಿಸುತ್ತದೆ. 

ಒಟ್ಟಾರೆಯಾಗಿ ಈ "ಭೂಮಿಯಲ್ಲಿ ಪ್ರತಿಯೊಬ್ಬ ಮನುಷ್ಯನ ಅಗತ್ಯವನ್ನು ಪೂರೈಸಲು ಸಾಕಷ್ಟು ಒದಗಿಸುತ್ತದೆ, ಆದರೆ ಪ್ರತಿಯೊಬ್ಬ ಮನುಷ್ಯನ ದುರಾಶೆಯನ್ನು ಪೂರೈಸುವುದಿಲ್ಲ." ಎಂದು ಗಾಂಧೀಜಿ ಅವರ ಭೂರಮೆ ಕುರಿತು ಜಾಗೃತಿ ಮೂಡಿಸುವ ಮಾತಾಗಿದೆ. ನಾವು ಈ ದಶಕದಲ್ಲಿ  ಪ್ರವಾಹ, ಅತಿವೃಷ್ಟಿ, ಅನಾವೃಷ್ಟಿ, ಸುನಾಮಿ, ಚಂಡಮಾರುತ, ಭೂಕಂಪನ ಹಾಗೂ ಮಾನವನ  ದುರಾಸೆಗಳು. ಈ ಎಲ್ಲಾ ಪರಿಸ್ಥಿತಿಗಳನ್ನು ಅವಲೋಕನ ಮಾಡಿ ನೋಡಿದರೆ ಪ್ರಕೃತಿ ಕೋಪ ನೆತ್ತಿಗೇರಿದಂತಿದೆ ಅಂತ ಗೊತ್ತಾಗುತ್ತದೆ. ಇದನ್ನರಿತು ನಾವು ಮುಂದಿನ ಪೀಳಿಗೆಗೆ ಏನಾದರು ಕೊಡುಗೆ ನೀಡುವುದಿದ್ದರೆ ಅದು ಪ್ರಕೃತಿ ಸಂಪತ್ತನ್ನು ಕಾಪಾಡಿಕೊಂಡು ಬರುವಂತಹ ಅರಿವು ನಿಮ್ಮದಾಗಲಿ ಎಂಬುದು ನನ್ನ ಆಶಯ. ಏನಂತೀರಿ ತಾವುಗಳು? 


 














No comments:

Post a Comment