ಓ ಬಣ್ಣದ ಚಿಟ್ಟೆ! ನಿನ್ನ ಮರೆತರೆ ನಾ ಕೆಟ್ಟೆ!!
ಲೇಖಕರು : ಡಾ. ಶಶಿಕುಮಾರ್. ಎಲ್ಜೀವಶಾಸ್ತ್ರ ವಿಭಾಗ ,
ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ
ಜಲಪುರಿ. ಕೆಪಿಎ ಆವರಣ ಮೈಸೂರು - 19
'ಪಾತರಗಿತ್ತಿ ಪಕ್ಕಾ... ನೋಡಿದ್ಯೇನ ಅಕ್ಕ!' ಎಂದು ಕವಿ ಬೆಂದ್ರೆ ಅವರು ಚಿಟ್ಟೆಯ ಬಗ್ಗೆ ವರ್ಣಿಸಿದ್ದಾರೆ. ಪಾತರಗಿತ್ತಿ ಎಂದು ಕರೆಯುವ ಚಂದದ ಚಿಟ್ಟೆಯ ಸುಳಿದಾಟವನ್ನು ನಾವೆಲ್ಲರೂ ಆಗಾಗ್ಗೆ ಗಮನಿಸುತ್ತಿರುತ್ತೇವೆ. ಬಣ್ಣ ಬಣ್ಣದ ಚಿಟ್ಟೆಗಳು ನೋಡಲು ಎಷ್ಟು ಆಕರ್ಷಕವೋ ಅವುಗಳ ಜೀವನವೂ ಅಷ್ಟೇ ಸೋಜಿಗ. ಭೂಮಿಯಲ್ಲಿ ಮನುಷ್ಯನು ವಿಕಾಸಗೊಳ್ಳುವುದಕ್ಕಿಂತ 970 ಲಕ್ಷ ವರ್ಷಗಳಿಗೆ ಮುನ್ನವೇ ಹೂ ಬಿಡುವ ಸಸ್ಯಗಳ ಜೊತೆ ಜೊತೆಗೇ ಚಿಟ್ಟೆಗಳು ವಿಕಾಸಗೊಂಡಿವೆ ಎಂದು ಹೇಳಲಾಗಿದೆ. ಪ್ರಪಂಚದಲ್ಲಿ ಸುಮಾರು 17000 ಚಿಟ್ಟೆ ಪ್ರಭೇದಗಳಿದ್ದು, ಅವುಗಳಲ್ಲಿ 1501 ಚಿಟ್ಟೆ ಪ್ರಭೇದಗಳು ಭಾರತದಲ್ಲಿವೆ. ಈ ಕೌತುಕಮಯ ಚಿಟ್ಟೆಗಳ ಹಲವು ಪ್ರಭೇದಗಳು ಈಗಾಗಲೇ ಅಳಿವಿನಂಚಿನಲ್ಲಿವೆ ಎನ್ನುವ ವಿಚಾರ ಎಲ್ಲರ ಮನಸ್ಸಿಗೆ ಬೇಸರವನ್ನುಂಟು ಮಾಡಿಸುತ್ತದೆ.
ಬಣ್ಣ ಬಣ್ಣದ ಹೂಗಳಿದ್ದ ಪ್ರದೇಶಗಳಲ್ಲಿ ಚಿಟ್ಟೆಗಳನ್ನು ಕಾಣುವುದು ಸಾಮಾನ್ಯ ಅಂಶ. ಹಾದಿಬದಿಯ ಹುಲ್ಲು, ಕಳೆಗಿಡಗಳು, ಕುರುಚಲು ಕಾಡಿನ ಗಿಡಗಳು, ಇಳಿಜಾರು ಪ್ರದೇಶ, ದಟ್ಟ ಅರಣ್ಯದ ವೃಕ್ಷರಾಶಿಯಲ್ಲಿ, ಹೀಗೆ ತಮ್ಮ ಮರಿಗಳಿಗೆ ತಿನ್ನಲು ಆಹಾರವಾಗಿರುವಂತಹ ತಳಿರೆಲೆಗಳು ಸಿಗುವಲ್ಲಿ, ಪೋಷಕಾಂಶಗಳು ಸಿಗುವ ತಿಪ್ಪೆಯಲ್ಲಿ, ಒದ್ದೆ ಮಣ್ಣಿನ ಮೇಲೆ ಹಾಗೂ ಹಲವು ರೀತಿಯ ಪರಿಸರಗಳಲ್ಲಿ ಚಿಟ್ಟೆಗಳನ್ನು ಕಾಣಬಹುದು. ಚಿಟ್ಟೆಗಳು ತಾಪವನ್ನು ಹೆಚ್ಚಾಗಿ ಇಷ್ಟಪಡುವ ಜೀವಿಗಳು. ಭಾರತದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಚಿಟ್ಟೆಗಳನ್ನು ನೋಡಬಹುದಾಗಿದೆ. ಹಲವು ರೀತಿಯ ಚಿಟ್ಟೆಗಳು ಹಲವು ಬಗೆಯ ಪ್ರದೇಶಗಳಲ್ಲಿ ಕಾಣಬರುತ್ತವೆ.
ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಚಿಟ್ಟೆಯ ಬಗೆಗಳಾದ ಮಲಬಾರ್ ಟ್ರಿ ನಿoಪ್, ಕ್ಲಿಪ್ಪರ್, ರೆಡ್ ಸ್ಪಾಟ್ ಡ್ಯೂಕ್ ಹಾಗೂ ಬ್ಲೂ ಬಾಟಲ್ ಗಳನ್ನು ನೋಡಬಹುದು. ಅರೆಹರಿದ್ವರ್ಣ ಕಾಡುಗಳಲ್ಲಿ ಕಮಾಂಡರ್, ಫ್ಯಾನ್ಸಿ, ನವಾಬ್ ಮುಂತಾದ ಚಿಟ್ಟೆಗಳು ಕಾಣಸಿಗುತ್ತವೆ. ಚಿಟ್ಟೆಗಳು ಮತ್ತು ಪತಂಗಗಳು ಲೆಪಿಡಾಪ್ಟ್ರಾ ಗುಂಪಿಗೆ ಸೇರಿದ್ದರೂ ಅವುಗಳ ಮಧ್ಯೆ ಕೆಲವು ವ್ಯತ್ಯಾಸಗಳು ಕಂಡುಬರುತ್ತವೆ.
ಚಿಟ್ಟೆಗಳು ಹಗಲು ಜೀವಿಗಳಾದರೆ ಪತಂಗಗಳು ನಿಶಾಚಾರಿಗಳು. ಚಿಟ್ಟೆಗಳು ರೆಕ್ಕೆಗಳನ್ನು ಬೆನ್ನ ಹಿಂಭಾಗದಲ್ಲಿ ಮಡಚಿಕೊಳ್ಳುತ್ತವೆ. ಆದರೆ ಪತಂಗಗಳು ವಿಮಾನದ ರೆಕ್ಕೆಗಳಂತೆ ಅಡ್ಡಡ್ಡವಾಗಿ ಅಗಲಿಸಿರುತ್ತವೆ. ಚಿಟ್ಟೆಗಳು ಚಟುವಟಿಕೆಯಿಂದ ಹಾರಾಡಿಕೊಂಡಿರಲು ಅವುಗಳ ದೇಹದ ಉಷ್ಣತೆ ಕನಿಷ್ಠ 25°c ಆದರೂ ಇರಬೇಕು. ಹಾಗೆ ಬೇಕಾದ ಉಷ್ಣತೆಯನ್ನು ಅವುಗಳು ಸೂರ್ಯನ ಬೆಳಕಿಗೆ ಮೈಯೊಡ್ಡಿ ಪಡೆಯುತ್ತವೆ. ಇದಕ್ಕೆ ಸೂರ್ಯಸ್ನಾನ ಎನ್ನುತ್ತಾರೆ.
ಮೊಟ್ಟೆಯಿಂದ ಹುಳುವಾಗಿ ಕೋಶಾವಸ್ಥೆಗೆ ತೆರಳಿ ಬಣ್ಣದ ಚಿಟ್ಟೆಯಾಗುವ ರೀತಿ ಆಶ್ಚರ್ಯ ಹುಟ್ಟಿಸುವಂತಹುದು.
ಸಾಮಾನ್ಯವಾಗಿ ಪಕ್ಷಿಗಳಲ್ಲಿ ಹೆಣ್ಣಿಗಿಂತ ಗಂಡು ಆಕರ್ಷಕವಾಗಿರುವಂತೆ ಚಿಟ್ಟೆಯಲ್ಲೂ ಗಂಡೇ ಹೆಚ್ಚು ಸುಂದರ. ಗಂಡು ಚಿಟ್ಟೆಗಳು ಹೆಣ್ಣು ಚಿಟ್ಟೆಯನ್ನು ಆಕರ್ಷಿಸಲು ತಮ್ಮ ದೇಹದಿಂದ ರಾಸಾಯನಿಕ ಕಂಪನ್ನು (ಫಿರೋಮೊನ್) ಹೊರಸೂಸುತ್ತವೆ.
ಹೆಣ್ಣು ಕೂಡ ಕೋಶಾವಸ್ಥೆಯಿಂದ ಹೊರಬಂದ ತಕ್ಷಣ ಹಾರಾಡ ಲಾರoಭಿಸುತ್ತದೆ. ಗಂಡು ಹೆಣ್ಣನ್ನು ಹಿಂಬಾಲಿಸುತ್ತದೆ. ಹಲವು ಗಂಟೆಗಳ ಸಂಗಮದ ನಂತರ ಗಂಡು ಹೆಣ್ಣುಗಳು ಬೇರ್ಪಟ್ಟು ಹೆಣ್ಣು ಮೊಟ್ಟೆ ಇಡಲು ಪ್ರಾರಂಭಿಸುತ್ತದೆ. ಹೆಣ್ಣು ಚಿಟ್ಟೆಯು ತನ್ನ ಮರಿ ಹುಳುವಿನ ಆಹಾರ ಸಸ್ಯದ ಎಲೆಗಳ ಕೆಳಭಾಗದಲ್ಲಿ ಮೊಟ್ಟೆ ಇಡುತ್ತದೆ. ಚಿಟ್ಟೆಗಳು ಗರಿಷ್ಠ 500 ರವರೆಗೆ ಮೊಟ್ಟೆಗಳನ್ನು ಇಡುತ್ತವೆ ಎನ್ನುತ್ತಾರೆ ತಜ್ಞರು.
ಚಿಟ್ಟೆಗಳು ಬೆಳೆಗಳ ಪರಾಗಸ್ಪರ್ಶದಲ್ಲಿ ಪ್ರಮುಖ ಪಾತ್ರವಹಿಸಿ ತನ್ಮೂಲಕ ಆ ಸಸ್ಯಗಳ ಪೀಳಿಗೆ ಮುಂದುವರಿಯುವಂತೆ ಮಾಡುತ್ತವೆ. ಕೊಳೆತ ದ್ರವ್ಯಗಳನ್ನು ತಿಂದು ಸ್ವಚ್ಛಗೊಳಿಸುವ ಕಾರ್ಯವನ್ನು ಚಿಟ್ಟೆ ನಿರ್ವಹಿಸುತ್ತದೆ. ಚಿಟ್ಟೆಯ ಕಂಬಳಿ ಹುಳುಗಳು ಹಲವಾರು ಪಕ್ಷಿಗಳಿಗೆ, ಜೇಡ, ಕಡ್ಡಿ ಹುಳಗಳಿಗೆ ಆಹಾರ ಆಗಿರುತ್ತದೆ. ಹೀಗೆ, ಆಹಾರ ಸರಪಣಿಯಲ್ಲಿ ಚಿಟ್ಟೆಯು ಪ್ರಮುಖ ಕೊಂಡಿಯಾಗಿದೆ. ಹೆಚ್ಚಿನ ಚಿಟ್ಟೆಗಳು ಪರಿಸರ ನೈರ್ಮಲ್ಯ ಸೂಚಿಸುವ ದಿಕ್ಸೂಚಿ ಪ್ರಭೇದ ಕೂಡ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.
ಚಿಟ್ಟೆಗಳು ಚಿಕ್ಕ ಹಾಗೂ ದೊಡ್ಡ ಹೂಗಳ ಮಕರಂದವನ್ನು ಹೀರುತ್ತವೆ. ಎಲ್ಲಾ ಚಿಟ್ಟೆಗಳು ಒಂದೇ ಜಾತಿಯ ಹೂಗಳನ್ನು ಆಶ್ರಯಿಸುವುದಿಲ್ಲ. ಅಂತೇಯೇ ಚಿಟ್ಟೆಯ ಕಂಬಳಿ ಹುಳುಗಳು ಅವುಗಳ ಜಾತಿಗನುಗುಣವಾಗಿ ಕೆಲವು ಗೊತ್ತಾದ ಸಸ್ಯಗಳ ಎಲೆಗಳನ್ನು ಮಾತ್ರ ತಿನ್ನುತ್ತವೆ. ಸಾಮಾನ್ಯ ಮಕರಂದ ಸಸ್ಯಗಳಾದ ಸಣ್ಣ ಸೇವಂತಿ, ಕೇಪಳ, ಲಂಟನಾ, ಡೈಸಿ, ತೇರು ಹೂ, ಹುಳಿ ಸೊಪ್ಪು, ತುಂಬೆ, ಕನಕಾಂಬರ, ದಾಸವಾಳ ಹಾಗು ಇತರ ಹೂಗಳಿಂದ ಚಿಟ್ಟೆಗಳು ಮಕರಂದ ಹೀರುತ್ತವೆ.
ಹೂಗಳಲ್ಲಿನ ಮಕರಂದ ಚಿಟ್ಟೆಗಳಿಗೆ ಸಂಪೂರ್ಣ ಪೋಷಕಾಂಶ ದೊರಕಿಸಿ ಕೊಡುವುದಿಲ್ಲದ ಕಾರಣ ಅವುಗಳು ಒದ್ದೆ ಮಣ್ಣು, ಕೊಳಚೆ ನೀರು, ಕೊಳೆತ ಹಣ್ಣು, ಪಕ್ಷಿ ಹಿಕ್ಕೆಗಳು ಮುಂತಾದವುಗಳ ಮೇಲೆ ಕುಳಿತು ಸಸಾರಜನಕಯುಕ್ತ ಲವಣಾಂಶಗಳನ್ನು ಹೀರುತ್ತವೆ. ಇದು ಅವುಗಳ ಸಂತಾನಭಿವೃದ್ಧಿಗೆ ಸಹಾಯಕವಾಗುತ್ತದೆ. ಕೆಲವೊಂದು ಬಗೆಯ ಚಿಟ್ಟೆಗಳು ಗುಂಪು ಗುಂಪಾಗಿ ಕುಳಿತು ಒದ್ದೆ ಮಣ್ಣಿನಲ್ಲಿ ನೀರನ್ನು ಹೀರುತ್ತವೆ. ಕೆಲವು ಜಾತಿಯ ಚಿಟ್ಟೆಗಳು ಪಕ್ಷಿಗಳಂತೆ ವಲಸೆ ಹೋಗುತ್ತವೆ. ಕುತೂಹಲಕಾರಿ ವಿಷಯವೇನೆಂದರೆ ಪಕ್ಷಿ, ಪ್ರಾಣಿಗಳು ತಿನ್ನಬಹುದಾದ ಕೆಲವು ಚಿಟ್ಟೆಗಳು ಮತ್ತೊಂದು ತಿನ್ನಲಾರದ ಚಿಟ್ಟೆಯ ಬಣ್ಣವನ್ನು ಅನುಕರಿಸಿ ಶತ್ರುಗಳಿಂದ ಪಾರಾಗುತ್ತವೆ.
ಚಿಟ್ಟೆಗಳು ಮೂಲತಃ ಗಿಡ, ಮರ, ಬಳ್ಳಿಗಳಂತಹ ಸಸ್ಯಗಳ ಆಸರೆಯಲ್ಲಿರುವ ಜೀವಿಗಳು. ಅವುಗಳಿಂದಲೇ ತಮ್ಮ ಆಹಾರವನ್ನು, ರಕ್ಷಣೆಯನ್ನು ಪಡೆಯುತ್ತವೆ. ಸಹಜವಾಗಿಯೇ ಸಸ್ಯಲೋಕದ ಏರುಪೇರುಗಳಿಗೆ ತಕ್ಷಣ ಸ್ಪಂದಿಸದಿದ್ದರೆ ಅವು ಉಳಿಯಲಾರವು. ಚಿಟ್ಟೆಗಳಿಂದ ಪ್ರಕೃತಿಯಲ್ಲಿ ಹಲವು ಪ್ರಯೋಜನಗಳಿರುವುದರಿಂದ ಅವುಗಳನ್ನು ಸಂರಕ್ಷಿಸುವುದು ಆದ್ಯ ಕರ್ತವ್ಯ ಆಗಬೇಕಿದೆ.
ಮಾನವನ ಹಸ್ತಕ್ಷೇಪದಿಂದ ಚಿಟ್ಟೆಗಳ ಪರಿಸರ ಹಾಳಾಗುತ್ತಿದೆ. ಆವಾಸಸ್ಥಾನದ ನಷ್ಟ, ನಗರೀಕರಣ, ಹವಾಮಾನ ಬದಲಾವಣೆ, ಅತಿಯಾದ ಕೀಟನಾಶಕಗಳ ಬಳಕೆ, ಅಳಿವಿನಂಚಿನಲ್ಲಿರುವ ಚಿಟ್ಟೆಗಳ ಬೇಟೆಯಾಡುವಿಕೆ ಹಾಗೂ ಅರಣ್ಯ ಬೆಂಕಿಗೆ ಹಲವಾರು ಬಗೆಯ ಚಿಟ್ಟೆಗಳು ನಶಿಸುತ್ತಿವೆ. ವಿವಿಧ ಬಗೆಯ ಚಿಟ್ಟೆಗಳಾದ ಕ್ರಿಮ್ಸನ್ ರೋಸ್, ಕಾಮನ್ ಪೈರೂಟ್, ಕ್ರಿಮ್ಸನ್ ನವಾಬ್, ಡನೈಡ್ ಎಗ್ ಫ್ರೈ, ಕಾಮನ್ ಮಾರ್ಮನ್ ಹಾಗೂ ಮುಂತಾದ ಚಿಟ್ಟೆಗಳು ಐಯುಸಿಎನ್ (ದ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್) ಕೆಂಪು ಪಟ್ಟಿ ಸೇರಿವೆ. ಪ್ರೌಢ ಚಿಟ್ಟೆಗಳಿಗೆ ಬೇಕಾದ ಮಕರಂದ ನೀಡುವ ಮತ್ತು ಅವುಗಳ ಕಂಬಳಿ ಹುಳುಗಳಿಗೆ ತಿನ್ನಲು ಬೇಕಾದ ಸಸ್ಯಗಳನ್ನು ಎಲ್ಲಾ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಿ ಪ್ರಕೃತಿಯ ಪ್ರಮುಖ ಕೊಂಡಿ ಯಾಗಿರುವ ಚಿಟ್ಟೆಗಳನ್ನು ಉಳಿಸಿಕೊಳ್ಳಬೇಕಾದ ಅಗತ್ಯವನ್ನು ರಾಷ್ಟ್ರೀಯ ಚಿಟ್ಟೆ ದಿನದ (ಮಾ. 14) ಈ ಸುಸಂದರ್ಭದಲ್ಲಾದರೂ ನಾವೆಲ್ಲರೂ ತುರ್ತಾಗಿ ಅರಿಯಬೇಕಾಗಿದೆಯಲ್ಲವೇ?
No comments:
Post a Comment