ಸತ್ಯ ಮಿಥ್ಯಗಳ ಸುತ್ತ : ಅಶೋಕ ವೃಕ್ಷ
ಲೇಖಕರು : ರಮೇಶ, ವಿ,ಬಳ್ಳಾ , ಅಧ್ಯಾಪಕರು
ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು
(ಪ್ರೌಢ) ಗುಳೇದಗುಡ್ಡ ಜಿ: ಬಾಗಲಕೋಟ
ಮೊ: 9739022186
ಮೊನ್ನೆ ಮೊನ್ನೆ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಪಯಣ ಹಸಿರು ನಡಿಗೆಯನ್ನು ಹಮ್ಮಿಕೊಂಡಿದ್ದೆವು. ಈ ಕಾರ್ಯಕ್ರಮದಡಿ ಗಿಡಮರಗಳ ಪರಿಚಯ ಮಾಡುತ್ತಾ ಸಮೀಪದ ಉದ್ಯಾನವೊಂದಕ್ಕೆ ಭೇಟಿ ನೀಡಿದೆವು. ಅಲ್ಲಿ ನಮ್ಮ ಶಿಕ್ಷಕರು ವಿದ್ಯಾರ್ಥಿಗಳು ಎಲ್ಲರೂ ಗಿಡಮರಗಳು, ಅದರ ಎಲೆ, ಹೂ, ಹಣ್ಣು-ಕಾಯಿ ಇತ್ಯಾದಿ ಮುಟ್ಟಿ ನೋಡಿ ಇದು ಹಾಗೆ, ಅದು ಹೀಗೆ, ಎಂತೆಲ್ಲಾ ತಮ್ಮ ತಮ್ಮಲ್ಲೆ ಚರ್ಚೆಗೆ ಇಳಿದಿದ್ದರು. ಅಲ್ಲಿ ಬೆಳೆದಿದ್ದ ಎತ್ತರದ ಕಂಬದಾಕಾರದ ಗಿಡವೊಂದನ್ನು ತೋರಿಸಿ ನಮ್ಮ ಸಹೋದ್ಯೋಗಿಯೊಬ್ಬರು ಇದು ನೋಡಿ ಅಶೋಕ ಮರ ಎಷ್ಟು ಎತ್ತರವಾಗಿದೆಯಲ್ಲ! ಎಂದು ಆಶ್ಚರ್ಯದಿಂದ ಪರಿಚಯಕ್ಕೆ ಇಳಿದಿದ್ದರು. ಇದು ನನ್ನ ಕಿವಿಗೆ ಬಿದ್ದ ತಕ್ಷಣವೇ ಮುಂದೆ ಬಂದು ವಿದ್ಯಾರ್ಥಿಗಳಿಗೆ ಮನನ ಮಾಡಿಸಿದೆ. ಮಕ್ಕಳೇ ಇದು ನಿಜವಾದ ಅಶೋಕ ಮರವಲ್ಲ. ಇದು ಮಿಥ್ಯ ಅಶೋಕ. ನೈಜ ಅಶೋಕ ವೃಕ್ಷ ಬೇರೆಯೇ ಇದೆ. ಅದು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು ಅದರ ಹಿನ್ನಲೆ ಹಾಗೂ ಪಾರಂಪರಿಕ ಮಹತ್ವವೂ ವಿಶಿಷ್ಟವಾಗಿದೆ ಎಂದು ತಿಳಿಸುತ್ತಾ ಮುಂದೆ ಮುಂದೆ ಸಾಗಿದೆವು.
ಹೌದು! ಅಶೋಕ ಮರ ಎಂದಾಕ್ಷಣ ಬಹುತೇಕರು ನೆನಪಿಸಿಕೊಳ್ಳುವುದು ಅದೇ ಎತ್ತರವಾದ, ಕಂಬದಂತಹ, ಚೂಪಾದ-ಮೊನಚಾದ ಎಲೆಗಳುಳ್ಳ ಹಲವು ಗೊಂಚಲುಗಳಲ್ಲಿ ಜೋತು ಬಿದ್ದ ನೀಳವಾದ ಚಿಕ್ಕ ಚಿಕ್ಕ ಟೊಂಗೆಗಳ ಹಸಿರು ಮರವನ್ನು. ನಿಜ ಸ್ನೇಹಿತರೆ ! ಈ ಅಶೋಕ ಮರದ ಬಗ್ಗೆ ಬಹಳಷ್ಟು ಜನರಿಗೆ ಸ್ಪಷ್ಟವಾದ ತಿಳುವಳಿಕೆ ಮಾಹಿತಿ ಇಲ್ಲ. ನಾವು ನೋಡಿರುವ ನಮ್ಮ ಸುತ್ತ ಶಾಲೆ, ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸಿರುವ ಎತ್ತರದ ಕಂಬದಂತಹ ಮರ, ನೈಜವಾದ ಅಶೋಕವಲ್ಲ. ಇದರ ಸುತ್ತ ಹಲವು ತಪ್ಪು ಕಲ್ಪನೆಯ ಮುಸುಕು ಆವರಿಸಿದೆ. ವಾಸ್ತವದಲ್ಲಿ ಅಶೋಕ ಮರ ಬೇರೆಯೇ ಇದೆ.
ಅಶೋಕ ಮರ ಸತ್ಯ ಸಂಗತಿಗಳು
ಅಶೋಕ ಮರದ ಪ್ರಾಚೀನ ಹಿನ್ನಲೆ:
ಅಶೋಕ ಮರ ಒಂದು ಕಾಡು ವೃಕ್ಷ. ಮಳೆಕಾಡಿನ ನಿತ್ಯ ಹರಿದ್ವರ್ಣದ ಸುಂದರ ಮರ. ತನ್ನ ಸುಗಂಧಭರಿತ ಹೂಗಳ ಜೊತೆಗೆ ಆಕರ್ಷಕ ಬಣ್ಣಗಳಿಂದ ಶೃಂಗಾರಗೊಂಡ ಹೂಗಳ ಬೆಡಗು ಬಿನ್ನಾಣ ಎಂತಹವರಲ್ಲೂ ಮೋಹಕತೆಯನ್ನು ತರುತ್ತದೆ. ಇಂತಹ ವೃಕ್ಷದ ಸುತ್ತ ಎಷ್ಟೇ ಮಿಥ್ಯಗಳು ತಳಕು ಹಾಕಿಕೊಂಡಿದ್ದರೂ ನೈಜ ಅಶೋಕ ಮರ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
‘ಅಶೋಕ’ ಹೆಸರೇ ಹೇಳುವಂತೆ ʼಶೋಕರಹಿತʼ ಎಂಬರ್ಥ ಕೊಡುತ್ತದೆ. ಭಾರತದಂತಹ ಸಂಪ್ರದಾಯಸ್ಥ ಕುಟುಂಬಗಳ ನಾರಿಯರ ದುಃಖ ದೂರ ಮಾಡುವ ಪೂಜನೀಯ ಮರವಾಗಿ ಬೆಳೆದು ನಿಂತಿದೆ. ಭಾರತ, ಶ್ರೀಲಂಕಾ, ನೇಪಾಳದಂತಹ ರಾಷ್ಟ್ರಗಳಲ್ಲಿ ಇದು ಪವಿತ್ರ (sacred) ಮರವೆಂದು ಗುರುತಿಸಲ್ಪಟ್ಟಿದೆ. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿರುವವರ ಒಡನಾಡಿಯಾಗಿ ಆಧ್ಯಾತ್ಮದ ಘಮಲನ್ನು ಅಂಟಿಸಿಕೊಂಡಿದೆ. ಧಾರ್ಮಿಕ ಮಹತ್ವದ ವೃಕ್ಷವಾಗಿ ಚೈತ್ರ ಮಾಸದಲ್ಲಿ ಪೂಜಿಸಲ್ಪಟ್ಟು ಹೆಸರಾಗಿದೆ. ಪುರಾಣ ಪುಣ್ಯ ಕಥೆಗಳಲ್ಲಿ ತನ್ನ ಸ್ಥಾನವನ್ನು ಅಚ್ಚಳಿಯದೇ ಉಳಿಸಿದೆ. ಶ್ರೇಷ್ಠ ಹಿಂದೂ, ಬೌದ್ಧ ಧರ್ಮಗಳಲ್ಲಿ ನಾನಾ ಕಾರಣಗಳಿಗಾಗಿ ವಿಭಿನ್ನ ನೆಲೆಯಲ್ಲಿ ಅಸ್ಥಿತ್ವ ಕಾಯ್ದುಕೊಂಡಿದೆ. ಬಹು ಹಿಂದಿನಿಂದಲೂ ಹಲವು ಆಚರಣೆ, ಆರಾಧನೆಗಳೊಂದಿಗೆ ರೈತಾಪಿ ವರ್ಗ, ಬುಡಕಟ್ಟು ಜನಾಂಗ, ಕಾಡಂಚಿನ ಜನಪದರ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ವೃದ್ಧಿಸಿಕೊಂಡಿದೆ.
ಶ್ರೇಷ್ಠ ಹಿಂದೂ ಕಥಾನಕಗಳಲ್ಲಿ ವರ್ಣಿಸಲ್ಪಟ್ಟ ಅಶೋಕ ವೃಕ್ಷ ದೈವತ್ವದ ನೆಲೆ ಕಂಡಿದೆ. ರಾಮಾಯಣದಂತಹ ಪುಣ್ಯಕಥೆಗಳಲ್ಲಿ ರಾಮಲಕ್ಷ್ಮಣರ ವನವಾಸದ ಸಂದರ್ಭದಲ್ಲಿ ಸೀತಾ ಮಾತೆಯ ರಕ್ಷಕ ಮರವಾಗಿ ಹಾಗೂ ರಾಮನ ಬಂಟ ಹನುಮಂತ ಸೀತೆಯನ್ನು ಮೊದಲು ಭೇಟಿಯಾದದ್ದು ಈ ಮರದ ಬಳಿ ಎಂಬ ಬಗ್ಗೆ ಹೇಳಲಾಗುತ್ತದೆ. ಹೋಳಿ ಹಬ್ಬ ಒಂದು ಸಡಗರದ ಹಬ್ಬ. ಈ ಸಂದರ್ಭದಲ್ಲಿ ಹಿಂದೂಗಳಿಂದ ಪೂಜಿಸಲ್ಪಡುವ ಕಾಮದೇವನ ಬಗ್ಗೆ ಕೇಳಿದ್ದೇವೆ. ಈ ಅಶೋಕ ವೃಕ್ಷದ ಹೂಗಳೊಂದಿಗೆ ಕಾಮ ಸಂವೇದನೆಯ ಮಾನವ ಸಹಜ ಆಸಕ್ತಿ ತಳುಕು ಹಾಕಿಕೊಂಡಿದೆ.
ಈ ಮರಕ್ಕಿರುವ ಮಹತ್ವವನ್ನು ಇನ್ನೂ ಸುಲಭವಾಗಿ ಅರಿಯುವುದಾದರೆ ಪ್ರಾಚೀನ ರಾಜಮನೆತನಗಳು ಅರಮನೆ, ನಗರ ಸಮುಚ್ಛಯಗಳು, ಬೀದಿ ಬೀದಿಗಳಲ್ಲಿ, ದೇವಸ್ಥಾನ, ಉದ್ಯಾನಗಳು, ರಸ್ತೆಯ ಇಕ್ಕೆಲಗಳಲ್ಲಿ ಇವುಗಳನ್ನು ನೆಟ್ಟು ಪೋಷಿಸಿಕೊಂಡು ಬಂದಿರುವುದು ಕಂಡುಬರುತ್ತದೆ. ಇದು ಭಾರತೀಯ ಕಲೆ ಪರಂಪರೆಯ ಭಾಗವಾಗಿ ರೂಪಿತಗೊಂಡಿದೆ. ಪ್ರಾಚೀನ ಸ್ಮಾರಕಗಳಲ್ಲಿ, ವಾಸ್ತುಶಿಲ್ಪದ ಶಿಲಾ ಸೌಂದರ್ಯದಲ್ಲಿ ಅಶೋಕ ವೃಕ್ಷ ಮೈದಳೆದು ನಿಂತಿದೆ.
ಅಶೋಕ ವೃಕ್ಷದ ಈ ಸತ್ಯ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ವಿಷಯಾಂಶಗಳ ಅರಿವಿನ ಅಗತ್ಯತೆ ಇಂದು ಎಲ್ಲರಿಗೂ ಬೇಕಾಗಿದೆ. ವೃಕ್ಷಗಳು ನಾಡಿನ ಸಂಪತ್ತು. ಅವುಗಳ ಕುರಿತ ಸ್ಪಷ್ಟ ಜ್ಞಾನ ಕೂಡ ಅಷ್ಟೇ ಮುಖ್ಯ ಎಂಬುದನ್ನು ನಾವೆಲ್ಲರೂ ಮನಗಾಣಬೇಕಾಗಿದೆ. ಬಹು ಪ್ರಾಚೀನ ಹಾಗೂ ಪಾರಂಪರಿಕವಾಗಿ ಬೆಳೆದು ಬಂದ ಈ ಅಶೋಕ ವೃಕ್ಷದ ನಿಖರತೆ, ನೈಜತೆ ಹಾಗೂ ಪೂಜ್ಯತೆಯನ್ನು ಅದರೊಟ್ಟಿಗೆ ಅದರ ಪ್ರಸ್ತುತ ಉಪಯುಕ್ತತೆಯನ್ನು ಅರಿಯುವುದರೊಂದಿಗೆ ಧನ್ಯತೆಯನ್ನು ಕಾಣಬೇಕಾಗಿದೆ.
No comments:
Post a Comment