ನವತಾರೆಯ ನಿರೀಕ್ಷೆಯಲ್ಲಿ: T ಕರೋನಾ ಬೋರಿಯಾಲಿಸ್
ಲೇಖಕರು: ಸುರೇಶ ಸಂ ಕೃಷ್ಣಮೂರ್ತಿ.
ಕರೋನ ಬೋರಿಯಾಲಿಸ್ ನಕ್ಷತ್ರ ಪುಂಜ ಉತ್ತರಾರ್ಧ ಖಗೋಳದಲ್ಲಿ ಕಾಣುವ ಒಂದು ಸಣ್ಣ ನಕ್ಷತ್ರಪುಂಜ. ಗ್ರೀಕ್ ಪುರಾಣದ ಪ್ರಕಾರ ಇದು ರಾಜಕುಮಾರಿ ಅರಿಯಾಡ್ನಿಯ ಕಿರೀಟವಾದ್ದರಿಂದ ಇದಕ್ಕೆ ಉತ್ತರ ಮುಕುಟ ಎಂದೂ ಹೆಸರು. ಮಾರ್ಚಿ ತಿಂಗಳಿನಲ್ಲಿ ಸೂರ್ಯಾಸ್ತವಾಗುತ್ತಿದ್ದಂತೆ ಪೂರ್ವಾಕಾಶದಲ್ಲಿ ಕಾಣಿಸುವ ಈ ನಕ್ಷತ್ರಪುಂಜವನ್ನು ಗುರುತಿಸುವುದು ಸ್ವಲ್ಪ ತ್ರಾಸದಾಯಕ ಕೆಲಸವೇ ಸರಿ. ಇದರ ಬಲಕ್ಕೆ ಹರ್ಕ್ಯೂಲಸ್ ಮತ್ತು ಎಡಕ್ಕೆ ಬೂಟಿಸ್ ನಕ್ಷತ್ರ ಪುಂಜಗಳಿವೆ. ಜೊತೆಗೆ, ಪ್ರಕಾಶಮಾನವಾದ ಏಳು ನಕ್ಷತ್ರಗಳನ್ನು ಹೊಂದಿರುವ ಸಪ್ತಋಷಿ ಮಂಡಲ ಅಥವಾ ಅರ್ಸ ಮೇಜರನ್ನು ಆಧಾರವಾಗಿ ಇರಿಸಿಕೊಂಡು ಕರೋನ ಬೋರಿಯಾಲಿಸ್ ನಕ್ಷತ್ರಪುಂಜವನ್ನು ಪತ್ತೆ ಹಚ್ಚಬಹುದು.
T ಕರೋನಾ ಬೋರಿಯಾಲಿಸ್ ನವತಾರೆಯ ಸ್ಥಾನವನ್ನು ನಕಾಶೆಯಲ್ಲಿನ ಕೆಂಪು ವೃತ್ತ ಸೂಚಿಸುತ್ತದೆ |
ಕರೋನಾ ಬೋರಿಯಾಲಿಸ್ ನಲ್ಲಿರುವ Abell 2065 ಮುಂತಾದ ಗೆಲಾಕ್ಸಿ ಗುಚ್ಚಗಳು. ಚಿತ್ರ ಕೃಪೆ ಸೋಲಾನ್ ಡಿಜಿಟಲ್ ಸ್ಕೈ ಸರ್ವೇ |
ನಮ್ಮ ಸೌರವ್ಯೂಹವಿರುವ ನಕ್ಷತ್ರ ಮಂಡಲದ ಹೆಸರು ಕ್ಷೀರಪಥ ನಕ್ಷತ್ರ ಮಂಡಲ ಅಥವಾ ಮಿಲ್ಕೀವೇ ಗೆಲಾಕ್ಸಿ. ಇದರಲ್ಲಿ ನಮ್ಮ ಸೂರ್ಯನನ್ನು ಒಳಗೊಂಡು ಸುಮಾರು ಇನ್ನೂರು ಬಿಲಿಯನ್ ನಕ್ಷತ್ರಗಳಿರಬಹುದೆಂದು ಅಂದಾಜು ಮಾಡಿದ್ದಾರೆ. ಸುರಳಿ ಗೆಲಾಕ್ಸಿ, ದೀರ್ಘವೃತ್ತೀಯ ಗೆಲಾಕ್ಸಿ, ಅನಿಯತಾಕಾರದ ಗೆಲಾಕ್ಸಿ ಎಂಬು ಮೂರು ಬಗೆಯ ಗೆಲಾಕ್ಸಿಗಳಲ್ಲಿ ಕ್ಷೀರಪಥ ಒಂದು ಸುರಳಿ ಗೆಲಾಕ್ಸಿ ಆಗಿದ್ದು ಇದು ಸುಮಾರು ಒಂದು ಲಕ್ಷ ಜ್ಯೋತಿರ್ ವರ್ಷಗಳಷ್ಟು ವ್ಯಾಸ ಹೊಂದಿದೆ. ಅಂದರೆ ಬೆಳಕಿನ ವೇಗದಲ್ಲಿ ನಾವು ಪ್ರಯಾಣಿಸುತ್ತಾ ಇದರ ಒಂದು ಅಂಚಿನಿಂದ ಅದರ ವಿರುದ್ಧ ದಿಕ್ಕಿನ ಅಂಚನ್ನು ತಲುಪಲು ಒಂದು ಲಕ್ಷ ವರ್ಷಗಳಷ್ಟು ಕಾಲ ಬೇಕಾಗುತ್ತದೆ!!! T ಕರೋನಾಬೊರ್ರ್ಯಾಲಿಸ್ವರ್ಚುಯಲ್ ಟೆಲಿಸ್ಕೋಪ್ ನಕ್ಷತ್ರ ಮಂಡಲಗಳ ಗುಚ್ಚ ಅಥವಾ ಗೆಲಾಕ್ಸಿಗಳ ಗುಚ್ಚವೆಂದರೆ ಎರಡಕ್ಕಿಂತ ಹೆಚ್ಚು ಗೆಲಾಕ್ಸಿಗಳ ಸಮೂಹ. ಲೋಕಲ್ ಗ್ರೂಪ್ ಎಂಬುದು ನಮಗೆ ಸಮೀಪದ ಮತ್ತು ನಮ್ಮ ಮಿಲ್ಕೀವೇ ಇರುವ ಗೆಲಾಕ್ಸಿ ಗುಚ್ಚ. ಮಿಲ್ಕೀವೇ ಗೆಲಾಕ್ಸಿ, ಅಂಡ್ರೋಮೇಡ ಗೆಲಾಕ್ಸಿ ಮತ್ತು ಟ್ರೈಯಾಂಗುಲಮ್ ಗೆಲಾಕ್ಸಿಗಳು ಮತ್ತು ಮಿಲ್ಕೀವೇಗೆ ಮೆಗಲಾನಿಕ್ ಮೋಡಗಳೆಂದು ಕರೆಯಲಾಗುವ ಎರಡು ಉಪ ಗೆಲಾಕ್ಸಿಗಳೂ ಸೇರಿದಂತೆ ನಕ್ಷತ್ರಪುಂಜಗಳ ಸಮೂಹವೇ ಲೋಕಲ್ ಗ್ರೂಪ್. ಬರಿ ಕಣ್ಣಿಗೆ ರಾತ್ರಿಯಾಕಾಶದಲ್ಲಿ ಕಾಣುವ ನಕ್ಷತ್ರಗಳಲ್ಲದ ಆಕಾಶ ಕಾಯಗಳನ್ನು ಮೆಸ್ಸಿಯರ್ ಅಬ್ಜೆಕ್ಟ್ ಎಂದು ಗುರುತಿಸಲಾಗುತ್ತಿತ್ತು. ಈಚೀಚೆಗೆ ಅವುಗಳನ್ನು NGC ಎಂದು ಗುರುತಿಸಲಾಗುತ್ತದೆ. ಹಾಗೆಯೇ ಅತಿ ದೂರದ ಆಕಾಶದಲ್ಲಿನ ಗೆಲಾಕ್ಸಿಗಳ ಗುಚ್ಚಗಳನ್ನು ಜಾರ್ಜ್ ಡಬ್ಲ್ಯೂ ಅಬೆಲನ ಕೋಷ್ಟಕದಲ್ಲಿ ನಮೂದಿಸಿರುವ Abell ಕ್ರಮಸಂಖ್ಯೆಯಿಂದ ಗುರುತಿಸಲಾಗುತ್ತದೆ. ಮೇಲೆ ತಿಳಿಸಿದ ಗಲಾಕ್ಸಿ ಗುಚ್ಚಗಳಲ್ಲದೆಯೇ ಕರೋನ ಬೋರಿಯಾಲಿಸ್ ನಕ್ಷತ್ರಪುಂಜ ಹೊಂದಿರುವ ಮತ್ತೊಂದು ವಿಶೇಷವೆಂದರೆ T ಕರೋನಾ ಬೋರಿಯಾಲಿಸ್ ಅಂದರೆ T CrB ಎಂಬ ಪುನರಾವರ್ತಿತ ನವತಾರೆ . ಇದನ್ನು - ಫೆಬ್ರವರಿ 9, 1946, ಮೇ 12, 1866, ಡಿಸೆಂಬರ್ 25 1787 ರಲ್ಲಿ ಅಲ್ಲದೆಯೆ 1217 ರಲ್ಲಿ ಕಂಡಿರುವುದಕ್ಕೆ ದಾಖಲೆಗಳಿವೆ. ಹೀಗಾಗಿ T CrB ಎಂಬತ್ತು ವರ್ಷಗಳಿಗೊಮ್ಮೆ ಪುನರಾವರ್ತಿತವಾಗಿ ಉಂಟಾಗುವ ನವತಾರೆ ಎಂದು ನಿರ್ಣಯಿಸಲಾಗಿದೆ. ರಾತ್ರಿಯಾಕಾಶದಲ್ಲಿ ನಮ್ಮ ಬರಿಗಣ್ಣಿಗೆ ಅತ್ಯಂತ ಮಂಕಾಗಿ ಕಾಣುವ ನಕ್ಷತ್ರದ ಕಾಂತಿಮಾನವನ್ನು 6 ಎಂದು ಖಗೋಳ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಕಾಂತಿಮಾನ 6ಕ್ಕಿಂತ ಹೆಚ್ಚಾದರೆ ಅಂತಹ ನಕ್ಷತ್ರ ನಮ್ಮ ಬರಿಗಣ್ಣಿಗೆ ಕಾಣುವದೇ ಇಲ್ಲ. ಕಾಂತಿಮಾನ ಕಡಿಮೆಯಾದಂತೆ ನಕ್ಷತ್ರದ ಗೋಚರ ಪ್ರಕಾಶ ಹೆಚ್ಚು ಎಂದು ಪರಿಗಣಿಸಲಾಗುತ್ತದೆ. 6 ಕಾಂತಿಮಾನದ ನಕ್ಷತ್ರಕ್ಕಿಂತ 5 ಕಾಂತಿಮಾನವಿರುವ ನಕ್ಷತ್ರ 2.5 ಪಟ್ಟು ಹೆಚ್ಚು ಗೋಚರ ಪ್ರಕಾಶ ಹೊಂದಿರುತ್ತದೆ. 6 ಕಾಂತಿಮಾನದ ನಕ್ಷತ್ರಕ್ಕಿಂತ 4 ಕಾಂತಿಮಾನವಿರುವ ನಕ್ಷತ್ರ 6.25 ಪಟ್ಟು ಹೆಚ್ಚು ಗೋಚರ ಪ್ರಕಾಶ ಹೊಂದಿದ್ದು ಹೆಚ್ಚು ಪ್ರಖರವಾಗಿ ಕಾಣುತ್ತದೆ. ರಾತ್ರಿಯಾಕಾಶದಲ್ಲಿ ಹೆಚ್ಚು ಪ್ರಖರವಾಗಿ ಕಾಣುವ ಸಿರಿಯಸ್ ನಕ್ಷತ್ರದ ಕಾಂತಿಮಾನ 1.46, ಚಂದ್ರನ ಸರಾಸರಿ ಕಾಂತಿಮಾನ -12.74. ಸೂರ್ಯನ ಕಾಂತಿಮಾನ -26.74. ಈಗ T-ಕರೋನಾ ಬೋರಿಯಾಲಿಸ್ ವಿಚಾರಕ್ಕೆ ಬರುವುದಾದರೆ ಸಾಮಾನ್ಯವಾಗಿ ಇದರ ಕಾಂತಿಮಾನ ಸುಮಾರು 10. ಅಂದರೆ ರಾತ್ರಿಯಾಕಾಶದಲ್ಲಿ ವೀಕ್ಷಣೆಗೆ ಎಂತಹದೇ ಉತ್ತಮ ಪರಿಸ್ಥಿತಿ ಇದ್ದಾಗ್ಯೂ ಈ ನಕ್ಷತ್ರವನ್ನು ದೂರದರ್ಶಕದ ಸಹಾಯವಿಲ್ಲದೆಯೇ ಬರಿಗಣ್ಣಿನಿಂದ ನೋಡುವುದು ಅಸಾಧ್ಯ. ಆದರೂ ಇದೇ ವರ್ಷ ಮಾರ್ಚಿ 27 ಮತ್ತು 2026ರ ಜೂನ್ 25ರ ನಡುವೆ ಈ ನಕ್ಷತ್ರ ಸುಮಾರು +2 ಕಾಂತಿಮಾನವನ್ನು ಹೊಂದುವ ಸಾಧ್ಯತೆಯಿದ್ದು, ಆಗ ಅದನ್ನು ಬರಿಗಣ್ಣಿನಿಂದ ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತದೆ. 1926ರಲ್ಲಿ ಇದು ಕಾಂತಿಮಾನ +2 ಹೊಂದಿದ್ದು ಈ ಹಿಂದೆ ಸಪ್ತ ಋಷಿ ಮಂಡಲದ ನಕ್ಷತ್ರಗಳಿಗಿಂತ ಪ್ರಖರವಾಗಿ ಕಂಡಿದ್ದನ್ನು ಖಗೋಳ ವೀಕ್ಷಕರು ದಾಖಲಿಸಿದ್ದಾರೆ. ವಾಸ್ತವದಲ್ಲಿ T CrB ಒಂದು ಜೋಡಿ ನಕ್ಷತ್ರ ವ್ಯವಸ್ಥೆಯಾಗಿದ್ದು ಇದರಲ್ಲಿ ಒಂದು ಕೆಂಪು ದೈತ್ಯ ನಕ್ಷತ್ರ ಮತ್ತು ಒಂದು ಶ್ವೇತಕುಬ್ಜ ನಕ್ಷತ್ರಗಳಿವೆ. ಎಲ್ಲ ಸಜೀವಿಗಳಿಗೆ ಹುಟ್ಟು, ಶೈಶವ, ಬಾಲ್ಯ, ಯೌವನ, ಮಧ್ಯ ವಯಸ್ಕ, ವಯಸ್ಕ, ವೃದ್ಯಾಪ್ಯಗಳೆಂಬ ಅವಸ್ಥೆಗಳಿರುವಂತೆಯೆ ನಕ್ಷತ್ರಗಳಿಗೂ ವಿವಿಧ ಅವಸ್ಥೆಗಳಿವೆ. ಸ್ಥಿರ ನಕ್ಷತ್ರವೊಂದರ ಕೊನೆಯ ಅವಸ್ಥೆ ಕೆಂಪು ದೈತ್ಯ ಸ್ಥಿತಿ. ಈ ಸ್ಥಿತಿಯ ನಂತರ ನಕ್ಷತ್ರವು ಸಿಡಿದು ಅದರ ಹೊರ ಕವಚ ಸಿಡಿದು ಸಾಕಷ್ಟು ದ್ರವ್ಯ ಅಂತರಿಕ್ಷದಲ್ಲಿ ಚದುರಿಹೋಗುತ್ತದೆ. ಅದರ ಗರ್ಭದಲ್ಲಿನ ದ್ರವ್ಯ ಗುರುತ್ವದ ಕಾರಣದಿಂದ ಒಳಕ್ಕೆ ಕುಸಿಯುತ್ತಾ ಹೋಗುತ್ತದೆ. ಅದು ಮುಂದೆ ತನ್ನ ರಾಶಿಯ ಪ್ರಮಾಣವನ್ನು ಅವಲಂಬಿಸಿ ಶ್ವೇತ ಕುಬ್ಜವೋ, ನ್ಯೂಟ್ರಾನ್ ನಕ್ಷತ್ರವೋ ಇಲ್ಲವೆ ಕೃಷ್ಣಕುಹರವೋ ಆಗಿ ಪರಿವರ್ತಿತವಾಗಬಹುದು..T CrB ವ್ಯವಸ್ಥೆಯಲ್ಲಿ ಮೇಲೆ ತಿಳಿಸಿದಂತೆ ಒಂದು ಕೆಂಪು ದೈತ್ಯ ಮತ್ತು ಒಂದು ಶ್ವೇತ ಕುಬ್ಜ ನಕ್ಷತ್ರಗಳಿದ್ದು ಅವು 227.6 ಭೂದಿನಗಳಿಗೊಮ್ಮೆ |
ತನ್ನ ಸಂಗಾತಿ ಅನಿಲದೈತ್ಯ ನಕ್ಷತ್ರದ ದ್ರವ್ಯವನ್ನು ಶ್ವೇತಕುಬ್ಜವು ಕಸಿಯುತ್ತಿರುವ ಕಲಾವಿದನ ಕಾಲ್ಪನಿಕಚಿತ್ರ
ಪರಸ್ಪರ ಪರಿಭ್ರಮಿಸುತ್ತಿವೆ. ಇದರಲ್ಲಿನ ಕೆಂಪು ದೈತ್ಯವು ಹಿಂದೊಮ್ಮೆ ಸೂರ್ಯನಂತಹುದೆ ನಕ್ಷತ್ರವಾಗಿದ್ದು ತನ್ನಲ್ಲಿನ ಇಂಧನವಾದ ಹೈಡ್ರೋಜನ್ ನಶಿಸಿದ ನಂತರ ಅಲ್ಲಿ ನಡೆಯುತ್ತಿದ್ದ ಉಷ್ಣಬೈಜಿಕ ಕ್ರಿಯೆಗಳು ನಿಧಾನವಾಗಿ ನಕ್ಷತ್ರವು ತನ್ನ ಸ್ಥಿರತೆಯನ್ನು ಕಳೆದುಕೊಳ್ಳುತ್ತದೆ. ಒಳಕ್ಕೆ ಸೆಳೆಯುವ ಗುರುತ್ವಬಲ ಮತ್ತು ಹೊರಕ್ಕೆ ಸೆಳೆಯುವ ಉಷ್ಣ ಸಂವಹನ ಬಲಗಳ ನಡುವೆ ಹಗ್ಗ ಜಗ್ಗಾಟ ಆರಂಭವಾಗುತದೆ. ಹೀಗಾದಾಗ, ಒಳಗಿನ ಗರ್ಭ ಒಳಕ್ಕೆ ಕುಸಿಯುತ್ತಾ ಹೋಗುತ್ತದೆ, ಹೊರ ಕವಚವು ಅತಿ ತಾಪದ ಕಾರಣದಿಂದ ಹಿಗ್ಗುತ್ತಲೆ ಹೋಗಿ ಸಿಡಿಯುತ್ತದೆ. ಹೀಗೆ, ಕೆಂಪು ದೈತ್ಯದ ಸಿಡಿದಾಗ ಹೊರಕ್ಕೆ ಅಂತರಿಕ್ಷಕ್ಕೆ ಚೆಲ್ಲಿಹೋದ ದ್ರವ್ಯವವನ್ನು ಬದಿಯಲ್ಲಿಯೇ ಇರುವ ಶ್ವೇತ ಕುಬ್ಜವು ತನ್ನ ಪ್ರಬಲ ಗುರುತ್ವದ ಕಾರಣದಿಂದ ತನ್ನೆಡೆಗೆ ಸೆಳೆದುಕೊಳ್ಳುವ ಕಾರಣದಿಂದ ಈ ದ್ರವ್ಯವು ಮೊದಲಿಗೆ ಶ್ವೇತ ಕುಬ್ಜದ ಸುತ್ತಲೂ ಸುರುಳಿಯಾಗಿ ಸುತ್ತಿಕೊಳ್ಳುತ್ತಾ ಹೋಗಿ ಕೊನೆಗೆ ಅದರ ಒಡಲನ್ನು ಸೇರಿಬಿಡುತ್ತದೆ. ಹೀಗೆ ಆದಾಗ ಶ್ವೇತಕುಬ್ಜ ನಕ್ಷತ್ರದಲ್ಲಿ ಒಮ್ಮೆಲೆ ಬೈಜಿಕ ಕ್ರಿಯೆಗಳು ಸ್ಫೋಟದೋಪಾದಿಯಲ್ಲಿ ಉಂಟಾಗಿ ಅಂತಹ ನಕ್ಷತ್ರವು ಕೆಲಕಾಲದ ಮಟ್ಟಿಗೆ ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತದೆ. ಈಗ ವೀಕ್ಷಿಸಿರುವ ಇಂತಹ ಹನ್ನೊಂದು ನವತಾರೆಗಳಲ್ಲಿಯೇ T CrB ಗೆ ಒಂದು ಪ್ರತ್ಯೇಕತೆ ಇದೆ. ಇದು ನೂರು ವರ್ಷಗಳಿಗೆ ಮುಂಚೆಯೇ ಪುನರಾವರ್ತಿತವಾಗುವ ಏಕೈಕ ತಾರೆಯಾಗಿದೆ ಎಂಬುದು ಒಂದು ವಿಶೇಷ. ಆದ್ದರಿಂದ, ಇದು ಹವ್ಯಾಸಿ ಮತ್ತು ವೃತ್ತಿಪರ ಖಗೋಳ ವೀಕ್ಷಕರಿಬ್ಬರಿಗೂ ಅತ್ಯಂತ ಕುತೂಹಲಕರವಾದ ವಿದ್ಯಮಾನವಾಗುವುದರಿಂದ 2015 ರಿಂದ ಈ ಎಲ್ಲರೂ ಇದನ್ನು ಗಮನವಿಟ್ಟು ವೀಕ್ಷಿಸುತ್ತಾ ಬಂದಿದ್ದಾರೆ.
T CrB ವ್ಯವಸ್ಥೆಯಲ್ಲಿ ಈಗ ನೀವು ಗಮನಿಸಿದ್ದೇ ಆದರೆ ಈ ವಿದ್ಯಮಾನ ಈಗಲೇ ನಡೆದ ವಿದ್ಯಮಾನವೆಂಬ ತಪ್ಪು ಕಲ್ಪನೆಗೆ ನಾವು ಒಳಗಾಗುವುದು ಬೇಡ. ಯಾಕೆಂದರೆ ಅದು ನಮ್ಮಿಂದ ಅಂದರೆ ಭೂಮಿಯಿಂದ ಸುಮಾರು ಮೂರು ಸಾವಿರ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಯುಗ್ಮತಾರೆ. ಆದ್ದರಿಂದ, ವಾಸ್ತವವಾಗಿ ಅದನ್ನು ಇಂದು ನಾವು ಕಾಣುತ್ತೇವೆ ಎಂದರೆ, ಈ ಘಟನೆ ಅಲ್ಲಿ ನಡೆದು ಮೂರುಸಾವಿರ ವರ್ಷಗಳು ಗತಿಸಿ ಹೋಗಿವೆ. ಅಲ್ಲಿಂದ ಹೊರಟ ಬೆಳಕು ಸೆಕೆಂಡಿಗೆ ಸುಮಾರು ಮೂರು ಲಕ್ಷ ಕಿ.ಮೀ ವೇಗದಲ್ಲಿ ಚಲಿಸಿ ಇಂದು ನಮ್ಮನ್ನು ತಲುಪಲು ಮೂರು ಸಾವಿರ ವರ್ಷಗಳನ್ನು ತೆಗೆದುಕೊಂಡಿದೆ! ಅದು ಎಂತಾದರೂ ಆಗಲಿ ನಮ್ಮ ಜೀವಮಾನದಲ್ಲಿ ಒಮ್ಮೆ ಮಾತ್ರ ದೊರೆಯುವ ಅವಕಾಶವಿದು. ಹಕ್ಕಿಗಳನ್ನು ಚುಕ್ಕಿಗಳನ್ನು ನೋಡಲು ಟಿಕೆಟ್ ಇಲ್ಲವಲ್ಲ. ಆಕಾಶ ನೋಡಲು ನೂಕು ನುಗ್ಗಲೇ? ಎಂಬ ಮಾತೂ ತಿಳಿದಿದೆಯಲ್ವೇ? ಇನ್ಯಾಕೆ ತಡ? ನಡಿಯಿರಿ. ಇಂದಿನಿಂದಲೇ ಜ್ವಾಲಮಾಲನೆಂದೇ ಪ್ರಸಿದ್ಧನಾದ T CrB ವ್ಯವಸ್ಥೆಯ ಬದಲಾವಣೆಯನ್ನು ನೋಡೋಣ. ಬೈನಾಕ್ಯಲರ್ಸ್,ಟಾರ್ಚ್,ನಕ್ಷತ್ರಪಟ ಎಲ್ಲವೂ ಸಿದ್ಧಪಡಿಸಿಕೊಳ್ಳಿ. ಬೆಳಕಿನ ಮಾಲಿನ್ಯವಿಲ್ಲದ ತಾಣವನ್ನು ಆಯ್ಕೆ ಮಾಡಿ. ಈ ಸುಂದರ ನಯನ ಮನೋಹರವಾದ ಆಕಾಶ ವೀಕ್ಷಣೆಯ ಆನಂದವನ್ನು ಮನದಣಿಯೆ ಸವಿಯೋಣ. ರಾತ್ರಿಯ ಕತ್ತಲಿನಲ್ಲಿ ಅಪಾಯಕಾರಿ ಎನಿಸುವ ಕಟ್ಟಡದ ಅಂಚಿನ ಆಳ, ಕಂದಕ, ವಿದ್ಯುತ್ ತಂತಿ, ಕೀಟಗಳು, ವಿಷಜಂತುಗಳು ಮುಂತಾದವುಗಳ ಬಗ್ಗೆಯೂ ಸಾಕಷ್ಟು ಎಚ್ಚರವಹಿಸಿ.
ಚಂದ್ರದೂರದರ್ಶಕದಎಕ್ಸ್ ರೇಕಣ್ಣಲ್ಲಿಕಂಡಂತೆT CrB ನವತಾರೆ. ಚಿತ್ರಕೃಪೆ ನಾಸಾ. |
|
An exciting article Suresh ಸಾಕಷ್ಟು ಆಳವಾದ ಅಧ್ಯಯನ ಮಾಡಿ ಬರೆದಿದ್ದೀರ ಶುಭವಾಗಲಿ
ReplyDeleteThis comment has been removed by the author.
DeleteThis comment has been removed by the author.
ReplyDelete