ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ನಿಷೇಧದ ಸುತ್ತ.....
ಶಿಕ್ಷಕರು , ಸಾ.ಪೊ ರಾಮಗೇರಿ.ತಾಲ್ಲೂಕು ಲಕ್ಷ್ಮೇಶ್ವರ, ಜಿಲ್ಲಾ ಗದಗ
ದೂರವಾಣಿ 9742193758
ಮಿಂಚಂಚೆ basu.ygp@gmail.com.
ಜನರು ಮನಸ್ಸು ಮಾಡಿದರೆ ಮಾತ್ರ ಪ್ಲಾಸ್ಟಿಕ್ ಬಳಸದಿರಲು ಸಾಧ್ಯ... ತನ್ನಿಮಿತ್ತ ಲೇಖನ....
"ಪ್ಲಾಸ್ಟಿಕ್ ಚೀಲಗಳ ಮೇಲಿನ ಸಂಪೂರ್ಣ ನಿಷೇಧವು ಉತ್ತಮ ಪರಿಹಾರವಲ್ಲ, ಆದರೆ ಜನರು ಅವುಗಳನ್ನು ಬಳಸುವುದನ್ನು ನಿಲ್ಲಿಸಲು ಶಿಕ್ಷಣ ಮತ್ತು ಪ್ರೋತ್ಸಾಹ ಅಗತ್ಯ ಕ್ರಮ ಕೈಗೊಳ್ಳಬೇಕು" ಎಂದು 'ಡೇವಿಡ್ ಸುಜುಕಿ’ಯವರು ಮಾತು ಅಕ್ಷರಶಃ ಸತ್ಯ. ನನ್ನ ಪ್ರಕಾರ, ಪ್ಲಾಸ್ಟಿಕ್ ಬಾಟಲಿಯನ್ನು ಕಸದಲ್ಲಿ ಎಸೆಯುವುದು ದೊಡ್ಡ ವಿಷಯವೆಂದು ಭಾವಿಸದ ಜನರು ಬೇಜವಾಬ್ದಾರಿಯುತವಾಗಿರುವುದು ಮಾತ್ರವಲ್ಲ, ಅವರು ಭೂಮಿಯ ಮೇಲಿನ ಇತರ ಎಲ್ಲ ಮಾನವರ ಬಗ್ಗೆ ಅಗೌರವ ತೋರುತ್ತಿದ್ದಾರೆಂದು ನಾನು ಭಾವಿಸುತ್ತೇನೆ ಎನ್ನುವ ಸಾಲು ಅದಕ್ಕೆ ಸಾಕ್ಷಿ ಎನ್ನುವಂತಿದೆ. ಏಕ-ಬಳಕೆಯ ಶಾಪಿಂಗ್ ಬ್ಯಾಗ್ಗಳು ಪರಿಸರ ಮಾಲಿನ್ಯ ಉಂಟುಮಾಡುವ ಎಲ್ಲಾ ತೊಂದರೆಗಳಿಗೆ ಅವು ಸಾಕಷ್ಟು ಪುರಾವೆ ನೀಡುತ್ತವೆ. ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣ... ಏಕಬಳಕೆ (ಸಿಂಗಲ್ ಯೂಸ್) ಪ್ಲಾಸ್ಟಿಕ್ ದೇಶಾದ್ಯಂತ ಜುಲೈ 01, 2022 ರಿಂದ ನಿಷೇಧ.
ಅಂಗಡಿಗೆ ಇನ್ನುಮುಂದೆ ತರಕಾರಿ ಅಥವಾ ದಿನಸಿ ತರಲು ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಹಿಡಿದುಕೊಂಡು ಹೋಗುವಂತಿಲ್ಲ. ತೀವ್ರತರ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಏಕಬಳಕೆ ಪ್ಲಾಸ್ಟಿಕ್ ದೇಶಾದ್ಯಂತ 2022ರಿಂದ ನಿಷೇಧವಾಗಿದೆ.
#ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ನಿಷೇಧದ ಹಿನ್ನೆಲೆ:
ಪರಿಸರ ಮಾಲಿನ್ಯ ತಡೆಯಲು 2022 ರಿಂದ ದೇಶದಲ್ಲಿ ಕಟ್ಟುನಿಟ್ಟಾಗಿ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ 2019ರಲ್ಲೇ ಘೋಷಿಸಿದ್ದರು.ಕಳೆದ ವರ್ಷ 2021ರ ಆಗಸ್ಟ್ನಲ್ಲೇ ತೀರ್ಮಾನವಾಗಿರುವಂತೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು, ಜುಲೈ 01,2022 ರಿಂದ 19 ರೀತಿಯ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸುವ ಆದೇಶ ಹೊರಡಿಸಿತು.
#ಯಾವ ರೀತಿಯ ಪ್ಲಾಸ್ಟಿಕ್ಗಳು ನಿಷೇಧ?:
-ಪ್ಲಾಸ್ಟಿಕ್ ಬಾವುಟ,
-ಕ್ಯಾಂಡಿ ಸ್ಟಿಕ್ಸ್,
-ಐಸ್ಕ್ರೀಂ ಕಡ್ಡಿಗಳು,
-ಇಯರ್ ಬಡ್ಸ್,
-ಬಲೂನ್ಗಳಿಗೆ ಅಂಟಿಸುವ ಪ್ಲಾಸ್ಟಿಕ್ ಸ್ಟಿಕ್ಸ್, - ಪಾಲಿಸ್ಟೈರೇನ್ (ಥರ್ಮೊಕೋಲ್),
- ಪ್ಲಾಸ್ಟಿಕ್ ತಟ್ಟೆ,
-ಲೋಟಗಳು,
-ಪ್ಲಾಸ್ಟಿಕ್ ರೂಪದ ಗಾಜುಗಳು,
-ಫೋರ್ಕ್ಗಳು,
-ಚಮಚಗಳು,
-ಸ್ಟ್ರಾಗಳು,
-ಟ್ರೇಗಳು,
-ಚಾಕುಗಳು,
-ಸಿಗರೇಟು ಪ್ಯಾಕೇಟ್ಗಳು,
-100 ಮೈಕ್ರಾನ್ಗಿಂತ ಕಮ್ಮಿ ಇರುವ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್ಗಳು ಮತ್ತು ಸ್ಟಿಕರ್ಗಳು,
-ಸಿಹಿತಿನಿಸುಗಳ ಡಬ್ಬಿಗಳಲ್ಲಿ ಬಳಸುವ ಪ್ಯಾಕೇಜಿಂಗ್
-ಫಿಲಂಗಳು ಮತ್ತು
-ಆಹ್ವಾನಪತ್ರಿಕೆಗಳು.
#ಎಷ್ಟು ತೆಳುವಾದ ಪ್ಲಾಸ್ಟಿಕ್ ನಿಷೇಧ...?
ದೇಶದಲ್ಲಿ ಹಲವು ವರ್ಷಗಳಿಂದ 50 ಮೈಕ್ರಾನ್ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಬಳಕೆಗೆ ನಿಷೇಧವಿದೆ. ಇನ್ನು, 2021ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳ ಪ್ರಕಾರ ಕಳೆದ ವರ್ಷದ ಸೆಪ್ಟೆಂಬರ್ 30ರಂದು 75 ಮೈಕ್ರಾನ್ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳು ನಿಷಿದ್ಧವಾಗಿವೆ. ಈ ವರ್ಷದ ಡಿಸೆಂಬರ್ 31ರೊಳಗೆ 120 ಮೈಕ್ರಾನ್ಗಿಂತ ಕಡಿಮೆ ದಪ್ಪವಿರುವ ಕ್ಯಾರಿಬ್ಯಾಗ್ ಹಾಗೂ ಇನ್ನಿತರ ರೀತಿಯ ಪ್ಲಾಸ್ಟಿಕ್ ವಸ್ತುಗಳು ನಿಷೇಧವಾಗಲಿವೆ.
ನಿಯಮ ಉಲ್ಲಂಘಿಸಿದರೆ ಏನು ಶಿಕ್ಷೆ...?
ಜು.01,2022 ರಿಂದ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ನಿಯಮ ಉಲ್ಲಂಘಿಸಿದರೆ 1986ರ ಪರಿಸರ ಸಂರಕ್ಷಣೆ ಕಾಯ್ದೆಯಡಿ ಐದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರು.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಅಲ್ಲದೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಮುನ್ಸಿಪಾಲಿಟಿಗಳು ಹೊಂದಿರುವ ಬೇರೆ ಬೇರೆ ನಿಯಮಗಳಡಿ ಮತ್ತು ಇನ್ನಿತರ ಕೆಲ ದಂಡಸಂಹಿತೆಗಳ ಅಡಿಯಲ್ಲೂ ಶಿಕ್ಷೆ ವಿಧಿಸಲು ಸಾಧ್ಯವಿದೆ.ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.
#ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸಚಿವಾಲಯದ ನಿರ್ದೇಶನಗಳೇನು? ಎಂದು ನೋಡುವುದಾದರೆ...
>ಜುಲೈ 01ರಿಂದ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗುತ್ತದೆ ಎಂದು ಕೇಂದ್ರ ಮೊನ್ನೆ ಮಂಗಳವಾರ ಪ್ರಕಟಿಸಿದೆ.
>ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗುವುದು ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
#ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿ:
ಪ್ಲಾಸ್ಟಿಕ್ ವಸ್ತುಗಳ ಬಳಕೆ ಬಗ್ಗೆ ಈ ಕೆಳಗಿನ ಅಂಶಗಳನ್ನು ಒಳಗೊಂಡಂತೆ ಜಾಗೃತಿ ಮೂಡಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
>ಸಾರ್ವಜನಿಕರಿಗೆ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ ಬೀರುವ ಸಾಧ್ಯತೆ ಬಗ್ಗೆ ಅರಿವು ಮೂಡಿಸಬೇಕು.
~ಬೀದಿ ಬದಿ ವ್ಯಾಪಾರಿಗಳು ಮತ್ತು ಹಣ್ಣು, ತರಕಾರಿ ಅಂಗಡಿಗಳಲ್ಲಿ ಈಗಲೂ ಪ್ಲ್ಯಾಸ್ಟಿಕ್ ಕ್ಯಾರಿ ಬ್ಯಾಗಗಳದ್ದೇ ದರ್ಬಾರು. ಅದಕ್ಕಾಗಿ ಅವರಿಗೆ ದಂಡದ ಶಿಕ್ಷೆ ವಿಧಿಸಿದಾಗ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗುತ್ತದೆ.
>ಗ್ರಾಹಕರಾದ ನಾವು ಒಂದು ಇಡ್ಲಿ-ವಡಾ ಪಾರ್ಸಲ್ ಮಾಡಿದರೂ ಬ್ಯಾಗ್ ಬೇಕು. ನಾಲ್ಕು ಲಿಂಬೆ ಹಣ್ಣುಕೊಂಡರೂ ಬ್ಯಾಗ್ ಬೇಕು.ಇಲ್ಲದಿದ್ದರೆ ಖರೀದಿ ಮಾಡುವದಿಲ್ಲ.ಅಂತ ಬ್ಯಾಗನ್ನು ಎಲ್ಲಿ ಬೇಕಲ್ಲಿ ಎಸೆಯುವ ಪ್ರವೃತಿ ನಮ್ಮ ಜನರಲ್ಲಿದೆ. ಹಾಗಾಗಿ ಈ ಮನಸ್ಥಿತಿ ಬದಲಾಗಬೇಕು.
>ಜನ ತಾವಾಗಿಯೇ ಪ್ಲ್ಯಾಸ್ಟಿಕ್ ಬ್ಯಾಗ್ ತ್ಯಜಿಸುವ ಮನೋಭಾವ ಬೆಳೆಸಲು ಸರ್ಕಾರ ಮತ್ತು ಸೇವಾ ಸಂಸ್ಥೆಗಳು ಶ್ರಮಿಸಬೇಕು.
>ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮ ಬೀರುವ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು.
>ಮುಂದಿನ ಪೀಳಿಗೆ ಆರೋಗ್ಯ ಸ್ಥಿರತೆ ಕಾಯ್ದುಕೊಳ್ಳಲು ಪರಿಸರ, ಮಣ್ಣಿನ ಸಂರಕ್ಷಣೆ ಮಾಡಲು ಪ್ಲಾಸ್ಟಿಕ್ ಗೆ ಪರ್ಯಾಯ ವಸ್ತುಗಳನ್ನು ಬಳಸಬೇಕು.
>ಆದ್ದರಿಂದ ಪ್ರತಿಯೊಬ್ಬರು ಸ್ವಚ್ಛ ಪರಿಸರದ ಅನುಭವ ಪಡೆಯಬೇಕಾದರೆ ತಮ್ಮ ಸುತ್ತಮುತ್ತಲಿನ ಜೀವ ಸಂಕುಲವನ್ನು ಕಾಪಾಡಿಕೊಳ್ಳಬೇಕು.
ಒಟ್ಟಾರೆಯಾಗಿ ಪ್ಲಾಸ್ಟಿಕ್‌ಗಳು ಒಡೆಯುವಾಗ, ಅವು ಜೈವಿಕ ವಿಘಟನೆಯಾಗುವುದಿಲ್ಲ; ಬದಲಿಗೆ, ಅವು ಹೆಚ್ಚೆಚ್ಚು ಸಣ್ಣ ತುಂಡುಗಳಾಗಿ ಒಡೆಯುತ್ತವೆ ಇವುಗಳಲ್ಲಿ ಹೆಚ್ಚಿನವು ಜಲಚರಗಳು ಮತ್ತು ಪಕ್ಷಿಗಳಿಗೆ ಹಾನಿ ಮಾಡುವ ಮೈಕ್ರೋಪ್ಲಾಸ್ಟಿಕ್‌ಗಳಾಗಿ ಸಾಗರಗಳಲ್ಲಿ ಕೊನೆಗೊಳ್ಳುತ್ತವೆ. ಇದರಿಂದಾಗಿ ಪರಿಸರ ಮಾಲಿನ್ಯ ಉಂಟಾಗಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ನಿಷೇಧದ ಕುರಿತು ಚಿಂತನೆ ಮಾಡಲಾಗಿದೆ ಎಂದು ಪರಿಸರ ಇಲಾಖೆ ತಿಳಿಸಿದೆ. ಇದು ಎಷ್ಟು ಸಾಧ್ಯವೋ ಗೊತ್ತಿಲ್ಲ ಕಾದು ನೋಡೋಣ. ಆದರೆ ಜನರು ಮನಸ್ಸು ಮಾಡಿದರೆ ಮಾತ್ರ ಪ್ಲಾಸ್ಟಿಕ್ ಬಳಕೆ ನಿಷೇಧ ಸಾಧ್ಯ ಹಾಗೆಯೇ ಸರ್ಕಾರಗಳು ಕೂಡ ಬದ್ಧತೆ ತೋರಬೇಕು ಎಂಬುದು ನನ್ನ ಆಶಯ.
No comments:
Post a Comment