ಹುಲಿ, ಪರಿಸರ ಮತ್ತು ಮಾನವನ ಕ್ರೌರ್ಯ
ಲೇಖಕರು ತಾಂಡವಮೂರ್ತಿ.ಎ.ಎನ್
ಜಿ.ಜೆ.ಸಿ. ನೆಲಮಂಗಲ
ಇತ್ತೀಚೆಗೆ ಮಲೈಮಹದೇಶ್ವರ ವನ್ಯಜೀವಿಧಾಮದಲ್ಲಿ ವಿಷಪ್ರಾಶನದಿಂದ ಘಟಿಸಿದ 5 ಹುಲಿಗಳ ಮಾರಣಹೋಮ ಮಾನವನ ಕುಟಿಲತೆ ಮತ್ತು ಕ್ರೌರ್ಯವನ್ನು ಮತ್ತೋಮ್ಮೆ ಅನಾವರಣಗೊಳಿಸಿದೆ. ಹುಲಿಗಳ ಚರ್ಮ, ಮೂಳೆ, ಹಲ್ಲುಗಳಿಗಾಗಿ ನಡೆಯುವ ಅಕ್ರಮ ಬೇಟೆ,ಕಳ್ಳ ಸಾಗಾಣಿಕೆಯ ಬಗ್ಗೆ ಕೇಳಿದ್ದ ನಮಗೆ ಸಗಣಿ ಮಾಫಿಯಾದಿಂದ ಈ ಹತ್ಯನಡೆದಿರುವುದು ಕಳವಳಕಾರಿ.
ದೊಡ್ಡಬೆಕ್ಕುಗಳಾದ ಹುಲಿ, ಸಿಂಹ, ಜಾಗ್ವಾರ್ ಮತ್ತು ಚಿರತೆಗಳಲ್ಲಿ ಅತ್ಯಂತ ಬಲಿಷ್ಠ, ಗಾತ್ರ ಮತ್ತು ತೂಕಗಳಲ್ಲಿ
ಎಲ್ಲವುಗಳಿಗಿಂತಲೂ ದೊಡ್ಡದಾದ ಹುಲಿ ತನ್ನ ನೋಟದಲ್ಲೇ ಇತರ ಪ್ರಾಣಿಗಳಲ್ಲಿ ನಡುಕ ಹುಟ್ಟಿಸುವ ರಣಬೇಟೆಗಾರ.
ಸಿಂಹಗಳು ಹಿಂಡಿನಲ್ಲಿ ಬೇಟೆಯಾಡಿದರೆ,ಹುಲಿ ಎಂದೆಂದಿಗೂ ಏಕಾಂಗಿ ಬೇಟೆಗಾರ.ಸುಂದರಬನ್ ನಲ್ಲಿರುವ
ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಕಾಡುಗಳಿಂದ ಹಿಡಿದು, ಸುಮಾತ್ರ ಮತ್ತು ಜಾವಾದ ಉಷ್ಣವಲಯದ
ಮಳೆಕಾಡುಗಳು, ಈಶಾನ್ಯ ಚೀನಾ
ಮತ್ತು ಸೈಬೀರಿಯಾದ ಹಿಮಭರಿತ
ಪರ್ವತಗಳವರೆಗೆ ಹುಲಿಗಳ ನೈಸರ್ಗಿಕ ಆವಾಸ ಏಷ್ಯಾದಲ್ಲಿ
ಸೀಮಿತವಾಗಿ ವ್ಯಾಪಿಸಿದೆ. ಹುಲಿಗಳ ಸಂವರ್ಧನೆಗಿರುವ ಏಕೈಕ ತೊಡಕು ಮಾನವನ ದುರಾಸೆ.
ಅನಾದಿಕಾಲದಿಂದಲೂ ಹುಲಿಬೇಟೆ ರಾಜ-ಮಹಾರಾಜರ ಮತ್ತು ಆಗರ್ಭ ಶ್ರೀಮಂತರ ಪ್ರತಿಷ್ಠೆಯ ಸಂಕೇತವಾಗಿದೆ. ಈ ಪ್ರತಿಷ್ಠೆಯ ವ್ಯಸನಕ್ಕೆ ಬಲಿಯಾದ ಹುಲಿಗಳ ಸಂಖ್ಯೆ ಲೆಕ್ಕವಿಲ್ಲದಷ್ಟು.ಇತಿಹಾಸದುದ್ದಕ್ಕೂ ಈ ಪ್ರತಿಷ್ಠೆಯ ಲಾಲಸೆಗೆ ನಮಗೆ ಸಾಕಷ್ಟು ಸಾಕ್ಷಾಧಾರಗಳು ಸಿಗುತ್ತವೆ. 20ನೇ ಶತಮಾನದ ಆರಂಭದಲ್ಲಿ ಸರಿಸುಮಾರು ಒಂದು ಲಕ್ಷದಷ್ಟಿದ್ದ ಹುಲಿಗಳ ಸಂಖ್ಯೆ ಕೈಗಾರಿಕಾ ಕ್ರಾಂತಿ ,ಜನಸಂಖ್ಯಾ ಸ್ಫೊಟ ಮತ್ತು ನಗರೀಕರಣದಿಂದಾಗಿ 20ನೇ ಶತಮಾನದ ಅಂತ್ಯದಲ್ಲಿ 3200-4000 ಕ್ಕೆ ಕುಸಿತ ಕಂಡಿದ್ದು ಮಾನವನ ದುರಾಸೆ ಮತ್ತು ಕ್ರೌರ್ಯದಿಂದ.
ಪ್ರಪಂಚದಾದ್ಯಂತ
21ನೇ ಶತಮಾನದ ಆರಂಭದಿಂದ ವಿವಿಧ ಪರಿಸರಾಸಕ್ತ ಸಂಘಟನೆಗಳ ಜಾಗೃತಿ ಮತ್ತು ಸರ್ಕಾರಗಳ ಸಂಘಟಿತ ಪ್ರಯತ್ನದಿಂದ
2024 ರ ವೇಳೆಗೆ ಹುಲಿಗಳ ಸಂಖ್ಯೆ 5574ಕ್ಕೆ ಏರಿಕೆಯಾದದ್ದು ಒಂದು ಆಶಾದಾಯಕ ಬೆಳವಣಿಗೆ. ಪ್ರಪಂಚದ
ಒಟ್ಟು ಹುಲಿಗಳ ಸಂಖ್ಯೆಯಲ್ಲಿ ಶೇ 70(3682) ರಷ್ಟು ಹುಲಿಗಳು ಭಾರತದಲ್ಲಿರುವುದು ಹೆಮ್ಮೆಯ ಸಂಗತಿ.
ಭಾರತದಲ್ಲಿ 1973 ರಲ್ಲಿ ಜಾರಿಗೆ ತಂದ ಹುಲಿ ಯೋಜನೆ(ಪ್ರಾಜೆಕ್ಟ್ ಟೈಗರ್) ಹುಲಿಗಳ ಸಂವರ್ಧನೆಯ
ದಿಶೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಸರ್ವವೇದ್ಯ. ಅದರಲ್ಲಿಯೂ ಕರ್ನಾಟಕವು ಹುಲಿ ಯೋಜನೆಯ ಅನುಷ್ಟಾನ
ಮತ್ತು ಹುಲಿಗಳ ಸಂವರ್ಧನೆಯಲ್ಲಿ ಅಗ್ರಗಣ್ಯ ರಾಜ್ಯವಾಗಿ ಹೊರಹೊಮ್ಮಿದೆ. ಈ ಆಶಾದಾಯಕ ಬೆಳೆವಣಿಗೆಯ
ನಡುವೆ ಮಲೈಮಹದೇಶ್ವರ ವನ್ಯಜೀವಿಧಾಮದಲ್ಲಿ ನಡೆದ ಈ ದುರಂತ ಎಲ್ಲ ಪರಿಸರಾಸಕ್ತರನ್ನು ಕೆರಳಿಸಿದೆ.
ಹುಲಿಗಳುಮತ್ತುಪರಿಸರ:
ಹುಲಿಗಳು ಭೂಮಿಯ ಮೇಲಿನ ಕೆಲವು ಪ್ರಮುಖ ಆದರೆ ಅತ್ಯಂತ ಅಪಾಯದಲ್ಲಿರುವ
ಆವಾಸಸ್ಥಾನಗಳಲ್ಲಿ ವಾಸಿಸುತ್ತವೆ, ಅಲ್ಲಿ
ಏಷ್ಯಾದ ಅತ್ಯಂತ ಅಸಾಧಾರಣ ಪ್ರಭೇದಗಳು ಕಂಡುಬರುತ್ತವೆ. ಸುಮಾತ್ರಾದಲ್ಲಿ, ದಟ್ಟವಾದ ಉಷ್ಣವಲಯದ ಕಾಡುಗಳು ಒರಾಂಗುಟನ್‌ಗಳು, ಮತ್ತು ಆನೆಗಳ ಜೊತೆಗೆ
ಹುಲಿಗಳು ವಾಸಿಸುವ ವಿಶ್ವದ ಏಕೈಕ ಆವಾಸಸ್ಥಾನವಾಗಿದೆ. ಹುಲಿ ಆವಾಶಗಳನ್ನು ರಕ್ಷಿಸುವುದು ಈ ಭವ್ಯವಾದ ದೊಡ್ಡ
ಬೆಕ್ಕುಗಳನ್ನು ಮಾತ್ರವಲ್ಲದೆ ಸಾವಿರಾರು ಇತರ ಪ್ರಭೇದಗಳನ್ನು
ರಕ್ಷಿಸಲು ಸಹಾಯ ಮಾಡುತ್ತದೆ.
ಹುಲಿಗಳು ಮತ್ತುಜಲಭದ್ರತೆ:
ಭಾರತದಲ್ಲಿ 35 ಕ್ಕೂ ಹೆಚ್ಚು
ನದಿಗಳು ಹುಲಿ ಸಂರಕ್ಷಿತ ಅರಣ್ಯ
ಪ್ರದೇಶಗಳಿಂದ ಉಗಮವಾಗುತ್ತವೆ, ಇದು ದೇಶದಲ್ಲಿ ಜಲಭದ್ರತೆಗೆ ನಿರ್ಣಾಯಕವಾಗಿದೆ. ಹುಲಿ ಆವಾಸಗಳು ಶುದ್ಧ ಆಮ್ಲಜನಕವನ್ನು
ಒದಗಿಸುತ್ತವೆ ಮತ್ತು ಪ್ರವಾಹವನ್ನು ನಿಯಂತ್ರಿಸಲು ಅಂತರ್ಜಲವನ್ನು ನಿಧಾನವಾಗಿ ಬಿಡುಗಡೆ
ಮಾಡುತ್ತವೆ. ಆದ್ದರಿಂದ, ಹುಲಿ ಮೀಸಲುಗಳನ್ನು ರಕ್ಷಿಸುವುದು ಉಳಿದ ಪರಿಸರ ವ್ಯವಸ್ಥೆಯ ಮೇಲೆ
ಪರಿಣಾಮ ಬೀರುತ್ತದೆ. ಅದರಲ್ಲಿಯೂ ದಕ್ಷಿಣ ಭಾರತದ
ನದಿಮೂಲಗಳಲ್ಲಿ ಜಲಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಹುಲಿ ಆವಾಸಸ್ಥಾನಗಳನ್ನು ಸಂರಕ್ಷಿಸುವುದು ಸಾರ್ವಕಾಲಿಕಅಗತ್ಯವಾಗಿದೆ.
ಇಲ್ಲದಿದ್ದರೆ ಇಡೀ ದಕ್ಷಿಣಭಾರತ ಜಲಕ್ಷಾಮದಿಂದ ತಲ್ಲಣಿಸುವ ಕಾಲದೂರವಿಲ್ಲ.
No comments:
Post a Comment