ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, July 4, 2025

IACCS ಎಂಬ ಕಣ್ಣು, ಕಿವಿ ಮತ್ತು ಮೆದುಳು

 IACCS ಎಂಬ ಕಣ್ಣು, ಕಿವಿ ಮತ್ತು ಮೆದುಳು

                                                                     ಲೇಖಕರು : ಸುರೇಶ ಸಂಕೃತಿ

 

ದಿನಾಂಕ 14 ಜೂನ್‌ 2025 ರಾತ್ರಿ ಸುಮಾರು 9ಗಂಟೆ IACCS(Integrated Air Command and Control System) ಕೇಂದ್ರದ ರಾಡಾರ್‌ನ  ವಿಶಾಲವಾದ ಒಎಲಿಡಿ ಪರದೆಗಳ ಮೇಲೆ ಹಾರಾಡುತ್ತಿರುವ ಒಂದು ಅಪರಿಚಿತ ವಿಮಾನದ ಕುರುಹು ಕಂಡು ಬರುತ್ತದೆ. ಕ್ಷಣಾರ್ಧದಲ್ಲಿ ಅದು ಒಂದು ಮಿಲಿಟರಿ ವಿಮಾನ ಅದರಲ್ಲೂ  ವಿಶ್ವದ ಅತಿ ಉನ್ನತ ತಂತ್ರಜ್ಞಾನದ ವಿಮಾನವಾದ ಅಮೇರಿಕಾದ ಲಕಿಡ್‌ ಮಾರ್ಟಿನ್‌ ನಿರ್ಮಿಸಿದ F-35B ಎಂಬ ಯುದ್ದ ವಿಮಾನ ಎಂಬುದನ್ನು ಅರಿತ ಮೇಲೆ ಕಂಮ್ಯಾಂಡ್‌ ಸೆಂಟರಿನಲ್ಲಿ ಒಂದು ರೀತಿ ಬಿಗುವಿನ ವಾತಾವರಣ ಸೃಷ್ಟಿಯಾಗುತ್ತದೆ. ಮುಂದಿನ ಕೆಲವೇ ಸೆಕೆಂಡುಗಳಲ್ಲಿ ಕೇರಳದ ತಿರುವನಂತಪುರದ ಏರ್ಫೋರ್ಸ್‌ ಸದರನ್‌ ಕಮ್ಯಾಂಡಿನ ವಿಮಾನ ನಿಲ್ದಾಣದಲ್ಲಿ ಸಿದ್ಧವಾಗಿ ನಿಂತಿದ್ದ ಸುಕೋಯಿ Su-30MKI ಯುದ್ಧ ವಿಮಾನವೊಂದು ಗಗನಕ್ಕೆ ಹಾರುತ್ತದೆ. ಭಾರತದ ವಾಯು ಪ್ರದೇಶವನ್ನು ಅನಧಿಕೃತವಾಗಿ ಪ್ರವೇಶಿಸಿದ F-35B ಯುದ್ಧ ವಿಮಾನವನ್ನು ತಡೆದು ವಿಚಾರಿಸಲು(Intersept) ಅದರ ಕಡೆಗೆ ಹಾರತೊಡಗುತ್ತದೆ.

 ಇದೆಲ್ಲವೂ ತನ್ನ   ವಿಮಾನದ ರಾಡಾರ್‌ ನಲ್ಲಿ ಪ್ರಕಟವಾಗುತ್ತಿದ್ದಂತೆ F-35B ವಿಮಾನದ ಪೈಲಟ್ ತಿರುವನಂತಪುರದ ಏಎಸ್ಸಿಯ ಏರ್‌ ಟ್ರಾಫಿಕ್‌ ಕಂಟ್ರೋಲಿಗೆ ಕೋಡ್‌ 7700 ನ್ನು ಸ್ವಾಕ್‌(squawk 7700) ಮಾಡುತ್ತಾನೆ. ಸಂಕೇತದ ಅರ್ಥ ತನ್ನ ವಿಮಾನದಲ್ಲಿ ತಾಂತ್ರಿಕ ದೋಷವಿರುವುದರಿಂದ  ತುರ್ತಾಗಿ ನಿಮ್ಮ ವಿಮಾನ ನಿಲ್ದಾಣದಲ್ಲಿ ಇಳಿಯಲು ಅವಕಾಶ ಮಾಡಿಕೊಡಿ ಎಂದು ಆಗಿರುತ್ತದೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಭಾರತೀಯ  ಸುಕೋಯಿ Su-30MKI ಪೈಲಟ್  ತನ್ನ ವಿಮಾನವನ್ನು ಹಿಂಬಾಲಿಸುವಂತೆ ಸೂಚನೆ ನೀಡಿ ತಿರುವನಂತಪುರದ ಏಎಸ್ಸಿಯ ಕಡೆಗೆ ಅದನ್ನು ಕರೆದುಕೊಂಡು ಹೋಗಿ ಅದು ಅಲ್ಲಿ ಇಳಿಯಲು ಸಹಕಾರ ನೀಡುತ್ತಾನೆ. ಅಲ್ಲಿ ಇಳಿದ F-35B ವಿಮಾನಕ್ಕೆ ಬಿಗಿ ಭದ್ರತೆಯನ್ನೊದಗಿಸಲು CIF ಕಮ್ಯಾಂಡೋಗಳು ಮಹೀಂದ್ರ ನಿರ್ಮಿತ ಮಾರ್ಕ್ಸಮ್ಯಾನ್‌ ಎಂಬ ಬಾಂಬ್‌ ನಿರೋಧಕ ಮಿಲಿಟರಿ ವ್ಯಾನಿನಲ್ಲಿ ಆಗಿಮಿಸುತ್ತಾರೆ.

 

ತಿರುವನಂತಪುರದ ವಿಮಾನ ನಿಲ್ದಾಣದಲ್ಲಿ ಲಕಿಡ್‌ ಮಾರ್ಟಿನ್‌ ನಿರ್ಮಿತ F-35B ಯುದ್ದ ವಿಮಾನ


ಮಹೀಂದ್ರ ಮಹಮದ್‌ ಎಂದು ಆರಂಭವಾದ ಒಂದು ಸಂಸ್ಥೆ ಅದರ ಸಂಸ್ಥಾಪಕರಲ್ಲಿ ಒಬ್ಬರಾದ ಮಲಿಕ್‌ ಗುಲಾಂ ಮಹಮದ್‌ ದೇಶ ವಿಭಜನೆಯ ಸಂದರ್ಭದಲ್ಲಿ ಸಿಕ್ಕೆದೆಲ್ಲವನ್ನು ಬಾಚಿಕೊಂಡು ಪಾಕಿಸ್ಥಾನಕ್ಕೆ ವಲಸೆ ಹೋದ ಮೇಲೆ ಬರಿಗೈಯಲ್ಲಿ ಉಳಿದವರು ಕೈಲಾಸ್ ಚಂದ್ರ ಮಹೀಂದ್ರ ಮತ್ತು ಜಗದೀಶ ಚಂದ್ರ ಮಹೀಂದ್ರ ಸಹೋದರರು . ಅನಿವಾರ್ಯವಾಗಿ ಅವರು ತಮ್ಮ ಸಂಸ್ಥೆಯ ಹೆಸರನ್ನು ಮಹೀಂದ್ರ ಅಂಡ್‌ ಮಹೀಂದ್ರ ಎಂದು ಬದಲಾಯಿಸಿದರು. ಕಷ್ಟ ಪಟ್ಟು ಸಂಸ್ಥೆಯನ್ನು ಬೆಳೆಸಿದರು. ಅವರ ಸಂಸ್ಥೆಗೆ ಶುಕ್ರದೆಸೆ ಶುರುವಾದದ್ದು ಅಮೇರಿಕಾದ ವಿಲ್ಲೀಸ್‌ ಕಂಪನಿಯ ಜೀಪ್‌ ಎಂಬ ಸಣ್ಣ ವಾಹನದ ಬಿಡಿಭಾಗಗಳನ್ನು ಅಮೇರಿಕಾದಿಂದ ತಂದು ಜೋಡಿಸುವ ಘಟಕವನ್ನು ಪ್ರಾರಂಭಿಸಿದಂದಿನಿಂದ. ಅಮೇರಿಕಾದ ಇಂಟರ್‌ ನ್ಯಾಷನಲ್‌ ಟ್ರ್ಯಾಕ್ಟರ್ ಗಳನ್ನು ಭಾರತದಲ್ಲಿ ಜೋಡಿಸಲು ಶುರುಮಾಡಿದ ಮೇಲೆ  ಮಹೀಂದ್ರ ಸಂಸ್ಥೆ ಮತ್ತೊಂದು ಮಜಲನ್ನು ತಲುಪಿತು. ಇಂದು ಮಹೀಂದ್ರ ಕಂಪನಿ ತಾನೆ ಬಿಡಿಬಾಗಗಳನ್ನು ತಯಾರಿಸಿ, ಜೋಡಿಸಿ ಪರಿಪೂರ್ಣವಾಗಿ ಸ್ವದೇಶೀಯವಾದ ಸ್ಕಾರ್ಪಿಯೋ, ಬೊಲೆರೋ, ಥಾರ್‌, ಎಕ್ಸ್ಯೂವಿ ೫೦೦ ಮುಂತಾಗಿ ಕಾರು, ಸಣ್ಣ ವಾಹನ, ಮಧ್ಯಮಗಾತ್ರದ ವಾಹನ, ಭಾರಿ ವಾಹನಗಳನ್ನು ತಯಾರಿಸಿ, ವಿಶ್ವವಾದ್ಯಂತ ವಿತರಿಸುವ ವಿಶ್ವದ ಪ್ರಮುಖ ವಾಹನ ತಯಾರಿಸುವ ಸಂಸ್ಥೆಗಳಲ್ಲಿ ಒಂದಾಗಿದೆ. ಇಂದು ಅಮೇರಿಕಾದಲ್ಲಿ ಮಾರಾಟವಾಗುವ ಹೆಚ್ಚಿನ ಟ್ರ್ಯಾಕ್ಟರ್ಗಳು ಮಹೀಂದ್ರದ್ದೇ ಆಗಿವೆ ಎನ್ನುವುದು ಒಂದು ಹೆಮ್ಮೆಯ ವಿಚಾರವಾಗಿದೆ. ಮೇಲೆ ತಿಳಿಸಿದ ಮಹೀಂದ್ರ ಮಾರ್ಕ್ಸ್‌ ಮ್ಯಾನ್‌ ಬಾಂಬ್‌ ನಿರೋಧಕ ಮಿಲಿಟರಿ ವಾಹನ ಕೇವಲ ಭಾರತದ ಸೇನೆಗಾಗಿ ಮಹೀಂದ್ರ ನಿರ್ಮಿಸುತ್ತಿರುವ ಒಂದು ಹೆಮ್ಮೆಯ ಉತ್ಪನ್ನವಾಗಿದೆ.

 

Su-30MKI

 

     ಸುಕೋಯಿ Su-30 ಮೂಲತಃ ರಶ್ಯಾದ ಯುದ್ಧ ವಿಮಾನವಾಗಿದೆ. ಪಾವೆಲ್‌ ಸುಕೋಯ್‌ ಇದರ ಸಂಸ್ಥಾಪಕರು. ಮೊದಲಿಗೆ ರಶ್ಯಾದಿಂದ ೫೦ ಸುಕೋಯಿ Su-30 ವಿಮಾನಗಳನ್ನು ಆಮದು ಮಾಡಿಕೊಳ್ಳಲಾಯಿತು. ಮಾರಾಟದ ಒಪ್ಪಂದದಂತೆ ನಂತರ ೨20 ವಿಮಾನಗಳನ್ನು ಎಚ್‌ ಎಲ್‌ ನಾಸಿಕದ ಘಟಕದಲ್ಲಿ ಭಾರತದಲ್ಲಿ ನಿರ್ಮಾಣ ಮಾಡಲಾಯಿತು. ಭಾರತದಲ್ಲಿ ನಿರ್ಮಿಸಿದವುಗಳನ್ನು Su-30MKI ಕರೆಯಲಾಗುತ್ತದೆ. ಬ್ರಹ್ಮೋಸ್‌ ಮುಂತಾದ ಭಾರತದಲ್ಲಿಯೇತಯಾರಿಸುವ ಕ್ಷಿಪಣಿಗಳನ್ನು ಹೊತ್ತು ಶತೃಗಳ ನೆಲೆಗಳನ್ನು ನಾಶಪಡಿಸುವ ಇವು ನಮ್ಮ ವಾಯುಸೇನೆಯ ಬೆನ್ನೆಲುಬಾಗಿ  ಬಳಕೆಯಾಗುತ್ತಿವೆ.

    ಅಮೇರಿಕಾದ ಲಿಕೀಡ್‌ ಮಾರ್ಟಿನ್‌ ಸಂಸ್ಥೆ ತಯಾರಿಸುವ F-35 ಮಾದರಿಯ ಯುದ್ಧ ವಿಮಾನವನ್ನು ತಂತ್ರಜ್ಞಾನದ ಅದ್ಭುತ ಎಂದು ಬಣ್ಣಸಲಾಗುತ್ತದೆ. ಇದೊಂದು ಅದೃಶ್ಯ(Stealth) ಯುದ್ಧ ವಿಮಾನ ಎಂತಲೂ ಖ್ಯಾತಿಯನ್ನು ಪಡೆದಿದೆ. ಅಂದರೆ ವಿಶ್ವದಲ್ಲಿ ಪ್ರಸ್ತುತ ಇರುವ ಯಾವುದೇ ರಾಡಾರ್‌ ಇದನ್ನು ಪತ್ತೆ ಮಾಡಲಾರದು. ಹೀಗಾಗಿ ಶತೃವಿನ ವಾಯು ರಕ್ಷಣಾ ವ್ಯವಸ್ಥೆ(ಏರ್‌ ಡಿಪೆಂಸ್‌ ಸಿಸ್ಟಂ) ಎಷ್ಟೇ ಆಧುನಿಕವಾದರೂ   ದಾಳಿ ಮಾಡಲು ತನ್ನ ವಾಯು ಪ್ರದೇಶವನ್ನು ಪ್ರವೇಶ ಮಾಡುವ ವಿಮಾನವನ್ನು ಪತ್ತೆ ಮಾಡಲಾಗದು ಎಂದು ಹೇಳುತ್ತಾ ಅಮೇರಿಕಾವು ನ್ಯಾಟೋ ಮುಂತಾದ ತನ್ನ ಮಿತ್ರ ರಾಷ್ಟ್ರಗಳಿಗೆ ಇದನ್ನು ಮಾರಾಟ ಮಾಡುತ್ತ ಬಂದಿದೆ.  F-35 ಯುದ್ಧ ವಿಮಾನಗಳಲ್ಲಿ ಮೂರು ಮಾದರಿಗಳಿವೆ.  F-35 ̧A, F-35 B ಮತ್ತು F-35 C. ವಾಯು ನೆಲೆಯ ರನ್‌ ವೇಯಿಂದ ಹಾರುವ ಇದು ಸಾಮಾನ್ಯ ವಿಮಾನದಂತೆ  ಹೆಚ್ಚಿನ ಬಳಕೆಯಲ್ಲಿರುವ ಮಾದರಿಯೆಂದರೆ  F-35A (ಬೆಲೆ ಒಂದಕ್ಕೆ ೮೦ ಸಾವಿರ ಡಾಲರ್!). ವಿಮಾನವಾಹಕ ನೌಕೆಯಲ್ಲಿರುವ ಅತ್ಯಂತ ಕಿರಿದಾದ ರನ್‌ ವೇಗಳಲ್ಲಿ ಓಡದೆಯೆ ಹೆಲಿಕ್ಯಾಪ್ಟರಿನಂತೆ ಆಕಾಶದಿಂದ ನೇರವಾಗಿ ಇಳಿಬಲ್ಲ ಹಾಗೆ ನಿಂತಿರುವಂತೆ ಹಾಗೆಯೆ  ಆಕಾಶಕ್ಕೆ ನೇರವಾಗಿ ಮೇಲಕ್ಕೆ ಏರಿ ನಂತರ ಮುಂದೆ ಸಾಗುವ ಮಾದರಿ F-35 B (‌ಬೆಲೆ ಒಂದಕ್ಕೆ ೧20 ಸಾವಿರ ಡಾಲರ್!), ಇದರ ಮತ್ತಷ್ಟು ಸುಧಾರಿಸಿದ ಮಾದರಿ ಎಂದರೆ F-35 Cಬೆಲೆ ಒಂದಕ್ಕೆ೧೨೫ ಸಾವಿರ ಡಾಲರ್!). ಹೀಗಿರಲು ಭಾರತಕ್ಕೂ ಇದನ್ನು ಮಾರಲು ಅಮೆರಿಕಾ ತುದಿಗಾಲ ಮೇಲೆ ನಿಂತಿದೆ.  ಮೊದ ಮೊದಲಿಗೆ ವಿಮಾನವನ್ನು ಬೇರೆ ದೇಶಗಳಿಗೆ ಮಾರಲು ನಿರ್ಬಂಧ ಹೇರಿದ್ದ ಅಮೇರಿಕಾದ ವರಸೆ ವಿಚಿತ್ರವೆನಿಸುತ್ತಿದೆ. ಇಂತಹ ಅತಿ ಉನ್ನತ ತಂತ್ರಜ್ಞಾನದ ವಿಮಾನ ದಿನಗಳು ಕಳೆದರೂ ರೀಪೇರಿ ಕಾಣದೆ ತಿರುವನಂತಪುರದಲ್ಲಿ ವಿಶ್ರಾಂತಿ ಪಡೆಯುತ್ತಿದೆ ಎಂದರೆ ಇದನ್ನು ಹೇಗೆ ನಂಬುವುದು?  ಯಾವ ಏರ್‌ ಡಿಫೆಂಸ್‌ ಸಿಸ್ಟಂಗೂ ಕಾಣಿಸದ ವಿಮಾನವನ್ನು ಭಾರತದ IACCS ಪತ್ತೆ ಮಾಡಿದೆ ಎಂದರೆ ಇದು   ಸಂಪೂರ್ಣ ಅದೃಶ್ಯ ವಿಮಾನವಲ್ಲ ಎಂದಾಯಿತು ಮುಂತಾದ ಪ್ರಶ್ನೆಗಳು ಉದ್ಭವಿಸುತ್ತವೆ. ನಮ್ಮ  ಭಾರತದ IACCS ಎಂತಹುದು ಎನ್ನುವ ವಿಚಾರ ಸಿಂಧೂರ ಕಾರ್ಯಾಚರಣೆಯ ಕಾಲದಲ್ಲಿ ಜಗತ್ತಿಗೆ ವೇದ್ಯವಾಗಿದೆ.

     ಭಾರತವು ಮೈ ಕೊಡವಿಕೊಂಡು ಎದ್ದು ಪ್ರಗತಿ ಪಥದಲ್ಲಿ ಸಾಗುತ್ತಿರುವುದರ ವಿಚಾರವನ್ನು ವಿಶ್ವಕ್ಕೆ ಸಿಂಧೂರ ಕಾರ್ಯಾಚರಣೆ ಮತ್ತೊಮ್ಮೆ ಸಾಬೀತು ಪಡಿಸಿದೆ. ಭಾರತದ ಸೈನಿಕ  ಶಕ್ತಿ ಏನೆಂಬುದು ಸ್ವತಃ ಭಾರತೀಯರಿಗೆ ಅನೇಕರಿಗೆ  ಸಿಂಧೂರ ಕಾರ್ಯಾಚರಣೆ ಅರಿವು ಮಾಡಿಕೊಟ್ಟಿದೆ ಎಂದರೆ ಅತಿಶಯೋಕ್ತಿಯಲ್ಲ.  ಕಾರ್ಯಾಚರಣೆಯಲ್ಲಿ ಪಾಕಿಸ್ಥಾನದಲ್ಲಿ ಅಡಗಿ ಕುಳಿತು ಭಾರತದಲ್ಲಿ ಭಯೋತ್ಪಾದನೆ ನಡೆಸುವ ಅನೇಕ ಸೂತ್ರಧಾರರನ್ನು ಅವರ ನೆಲೆಯಲ್ಲಿಯೇ ಒಸಕಿಹಾಕಿದ್ದಲ್ಲದೆ, ಪಾಕಿಸ್ಥಾನದ ಎಲ್ಲ ಸೈನಿಕ, ವಾಯು ನೆಲೆಗಳನ್ನು ಬೆರೆಳೆಣಿಕೆಯ ದಿನಗಳಲ್ಲಿ ಧ್ವಂಸ ಮಾಡಿ ಅದನ್ನು ನಿಶಸ್ತ್ರ ಮಾಡಿದ್ದರ ಜೊತೆಗೆ ಅಲ್ಲಿಂದ ಹಾರಿಬಂದ ಕ್ಷಿಪಣಿ, ಯುದ್ದ ವಿಮಾನ, ದ್ರೋಣ್ಗಳು ಎಲ್ಲವನ್ನು ಗಡಿಯಲ್ಲಿಯೆ ನಿಖರವಾಗಿ ದೀಪಾವಳಿ ಪಟಾಕಿಗಳಂತೆ ಹೊಡೆದು ಉರುಳಿಸಿ ಶತೃಗಳ ದಾಳಿಯಿಂದ ದೇಶವನ್ನು ರಕ್ಷಿಸಿದ ನಮ್ಮ ಯೋಧರ, ತಂತ್ರಜ್ಞರ, ಸಂಶೋಧಕರ, ವಿಜ್ಞಾನಿಗಳ ಸಾಧನೆಯನ್ನು ವಿಶ್ವವು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ.

ಏಪ್ರಿಲ್‌ ೨೨ರಂದು ಪೆಹಲ್ಗಾಂಲ್ಲಿ ಪಾಕಿಸ್ಥಾನ ಪ್ರೇರಿತ ಉಗ್ರಗಾಮಿಗಳು ೨೬ಜನ ಅಮಾಯಕ ಭಾರತೀಯ ನಾಗರೀಕರನ್ನು  ಗುಂಡಿಟ್ಟು ಕೊಂದು ರಾಕ್ಷಸ್ವತ್ವವನ್ನು ಮೆರೆದಿದ್ದರು. ಇದಕ್ಕೆ ಪ್ರತಿಕಾರವಾಗಿ ಮೇ ೭ರಂದು ನಮ್ಮ ಭಾರತೀಯ ಸೇನೆ ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ಥಾನದ ಪಂಜಾಬಿನಲ್ಲಿ ಅಡಗಿ ಕುಳಿತಿದ್ದ ಅನೇಕ ಉಗ್ರಗಾಮಿಗಳನ್ನು ಮತ್ತು ಅವರನ್ನು ತರಬೇತಿಗೊಳಿಸುವ ನೆಲೆಗಳನ್ನು ಹೇಳಲು ಹೆಸರಿಲ್ಲದಂತೆ ಒಸಕಿ ಹಾಕಿದ್ದಿತು. ಅಂದು ಭಾರತ ಸೇನೆಯ ಆರ್ಟಿಲರಿ ಘಟಕದವರು ಕ್ಷಿಪಣಿಗಳು, ದ್ರೋಣುಗಳು ಮುಂತಾದ ಲಾಯ್ಟರಿಂಗ್‌ ಶಸ್ತ್ರಾಸ್ತ್ರಗಳನ್ನು ಬಳಸಿ ಪಾಕಿಸ್ಥಾನ ಭೂ ಸೇನೆಯನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದರೆ. ನಮ್ಮ ಭಾರತೀಯ ವಾಯಸೇನೆಯು ಸುಕೋಯಿ 30 ಎಂಕೆಐ ಮತ್ತು ರಾಫೇಲ್‌ ಜೆಟ್ಟುಗಳನ್ನು ಬಳಸಿ ಸ್ಕಾಲ್ಪ್‌ ಮಿಸೈಲ್‌, ಏಏಎಸ್ಸೆಮ್ ಹ್ಯಾಮರ್‌ ಮತ್ತು ಬ್ರಹ್ಮೋಸ್‌ ಕ್ಷಿಪಣಿಗಳನ್ನು ಬಳಸಿ ಬಯೋತ್ಪಾದಕರ ನೆಲೆಗಳನ್ನು ಧ್ವಂಸ ಮಾಡುವುದರ ಮೂಲಕ ಅನೇಕ ಕಟ್ಟರ್‌ ಭಯೋತ್ಪಾದರಿಗೆ ನರಕದ ದಾರಿಯನ್ನು ತೋರಿಸಿದ್ದವು. ಪಾಕಿಸ್ಥಾನದ ವಾಯನೆಲೆಗಳನ್ನು ಅಲ್ಲಿ ನಿಲ್ಲಿಸಲಾಗಿದ್ದ ಯುದ್ಧ ವಿಮಾನಗಳನ್ನು ರಾಡಾರುಗಳನ್ನು ಧ್ವಂಸಗೊಳಿಸಿ ಪಾಕ್‌ ಸೇನೆಯನ್ನು ನಿಶಸ್ತ್ರಗೊಳಿಸಲಾಯಿತು. ಯೋಜನಾಬದ್ದವಾಗಿ ಭಾರತ ನಡೆಸಿದ ದಾಳಿಯಿಂದ ಪಾಕಿಸ್ಥಾನದ ಮಿಲಿಟರಿ, ಆಡಳಿತ ಹಿಡಿದ ನಾಯಕತ್ವ ಮತ್ತು ಸಾಮಾನ್ಯ ಜನತೆ ಬೆಚ್ಚಿಬಿದ್ದಿದ್ದಿತು. ಯುದ್ದ ನಿಲುಗಡೆಗೆ ಬೇಡಿಕೆಯಿಟ್ಟಿತು. ಭಾರತದ ಅಫೆಂಸೀವ್‌ ಟ್ಯಾಕ್ಟಿಕ್ಕಿಗೆ ಇಡೀ ವಿಶ್ವವೇ  ಬೆರಗಾಗಿ ಹೋಯಿತು.

ಶತಮಾನದ ಆರಂಭದಲ್ಲಿ ಭಾರತದಲ್ಲಿ ಮೊಬೈಲ್‌ ಫೋನಿನ ಬಳಕೆ ಹೆಚ್ಚಿದಂತೆ ರೇಡಿಯೋ ಪ್ರೀಕ್ವೇನ್ಸಿಯ ಸ್ಪೆಕ್ಟ್ರಂನ ಬೇಡಿಕೆ ಹೆಚ್ಚುತ್ತಾ ಹೋಯಿತು. ಇದರ ತರಂಗ ಪ್ರಸಾರಕ್ಕೆ ಬಳಕೆಯಾಗುವ ವಾಯುಮಂಡಲದಲ್ಲಿನ ಸ್ತರಗೋಳದ ರೇಡಿಯೋ ಪ್ರಸಾರವು (Stratosphere Transmission) ಸೇನೆಯ ಬಳಕೆಗೆ ಹೆಚ್ಚು ಸುರಕ್ಷಿತವಲ್ಲ ಎಂಬ ಅಂಶವು ಅರಿವಾಗುತ್ತಾ ಬಂದಿತ್ತು.  ಹೀಗಾಗಿ ಭಾರತ ಎಲೆಕ್ಟ್ರಾನಿಕ್‌ ಲಿಮಿಟೆಡ್‌ ಒಂದು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿತು. ಭಾರತದಲ್ಲಿರುವ ಸಣ್ಣ, ಮಧ್ಯಮ, ಬೃಹತ್‌ ಮುಂತಾಗಿ ಎಲ್ಲ ಸಾರ್ವಜನಿಕ, ಸಿವಿಲ್‌, ಮಿಲಿಟರಿ, ವಾಯುಸೇನೆ, ನೆವಿ, ಹವಾಮಾನ ಇಲಾಖೆಯ ಹೀಗೆ

ಎಲ್ಲಾ ರಾಡಾರುಗಳನ್ನು ಭಾರತಾದ್ಯಂತ ಹರಡಿರುವ ಫೈಬರ್‌ ಆಪ್ಟಿಕ್ಸ್‌ ತಂತುಗಳ ಮೂಲಕ ಒಂದು ಜಾಲದಲ್ಲಿ ಜೋಡಿಸುವ ಯೋಜನೆಯನ್ನು ಅತಿ ಶೀಘ್ರವಾಗಿ ಜಾರಿಗೆ ತರಲಾಯಿತು. ಸಾಗರದಾಳದ ಜಲಾಂತರಗಾಮಿ, ಸಾಗರದ ಮೇಲೆ ತೇಲುತ್ತಿರುವ ಯುದ್ಧ ವಿಮಾನವಾಹಕ ನೌಕೆ, ಯುದ್ಧ ನೌಕೆ, ಗಗನದಲ್ಲಿ ಹಾರುತ್ತಿರುವ ಮುಂಸೂಚನೆ ನೀಡುವ ಕಮಾಂಡ್‌ ಸೆಂಟರ್ (AWACS) ವಿಮಾನ, ತನ್ನದೇ ಆದ ಉಪಗ್ರಹ ಆಧಾರಿತ ಭಾರತದ ಜಿಪಿಎಸ್‌ ವ್ಯವಸ್ಥೆಯಾದ  NavIC (Navigation with Indian Constellation ), ಗಡಿ ರೇಖೆಯಲ್ಲಿ ಸನ್ನದವಾಗಿ ನಿಂತಿರುವ ಹೆಗಲ ಹೊತ್ತು ಸಾಗಿಸುವ ಸಣ್ಣ ಕ್ಷಿಪಣಿಯಿಂದ ಇಡಿದು ಮಧ್ಯಮಗಾತ್ರದ ಎಂ ಆರ್‌ ಸ್ಯಾಮ್‌, ಆಕಾಶ್‌ ಅಲ್ಲದೇ ಭಾರಿ ಗಾತ್ರದ ಎಸ್‌ ೪೦೦ ನಂತಹ ಎಲ್ಲಾ ಕ್ಷಿಪಣೆ ವ್ಯವಸ್ಥೆ, ಎಲ್ಲವನ್ನು ಮತ್ತು ಭಾರತದ  ಮಿಲಿಟರಿ ಮತ್ತು ಗೂಢಚಾರ ಉಪಗ್ರಹಗಳಿಗೆ ಮೈಕ್ರೋವೇವ್‌ ಮತ್ತು

 

 ಫೈಬರ್‌ ಆಪ್ಟಿಕ್ಸ್‌ ತಂತುಗಳ ಮೂಲಕ ಸಂಪರ್ಕ ಕಲ್ಪಿಸಲಾಯಿತು.  ಯೋಜನೆ ಜಾರಿಗೆ ಬಂದ ಮೇಲೆ ಭಾರತದ ರಕ್ಷಣಾ ವ್ಯವಸ್ಥೆಗೆ IACCS ಎಂಬ ಒಂದು ಧೃಡವಾದ ಸಂಪರ್ಕಜಾಲವು ದೊರೆಯಿತು. ಇದರ ನಂತರ ಸೇನೆಯು ಸ್ತರಗೋಳದ ರೇಡಿಯೋ ಪ್ರಸಾರದ ಬಳಕೆ ನಿಲ್ಲಿಸಿತು. ಇದರಿಂದ ಸಾರ್ವಜನಿಕರ ಮೊಬೈಲ್‌ ಫೋನ್ ಬಳಕೆಗೆ ಬೇಕಾದ ಹೆಚ್ಚಿನ ರೇಡಿಯೋ ಸ್ಪಕ್ಟ್ರಂ ದೊರೆತಂತಾಯಿತು. ಇಂದು ಭಾರತದ ವಾಯು ಪ್ರದೇಶವನ್ನು ಪ್ರವೇಶಿಲು ಯತ್ನಿಸುವ ಯುದ್ಧ ವಿಮಾನ, ಕ್ಷಿಪಣಿ, ದ್ರೋಣ್ ಯಾವುದೇ ಆದರು ಅದನ್ನು IACCS ಪತ್ತೆ ಮಾಡುತ್ತದೆ, ಗುರ್ತಿಸುತ್ತದೆ, ಶತೃದಾಳಿಯೆಂದು ಗೊತ್ತಾದ ಕೂಡಲೆ ಗಡಿಯಲ್ಲಿರುವ ತಕ್ಕ ರಕ್ಷಣ ವ್ಯವಸ್ಥೆಯನ್ನು ಜಾಗೃತಗೊಳಿಸುತ್ತದೆ. ಗುರಿ ಮತ್ತು ಯಾವ ಕ್ಷಿಪಣೆ ಬಳಸಬೇಕೆಂಬುದನ್ನು ನಿರ್ಧರಿಸುತ್ತದೆ. ಅತಿಕ್ರಮಣವನ್ನು ಹೊಡೆದುರುಳಸಲು ತಾನೇ ಆದೇಶ ನೀಡುತ್ತದೆ. ಇಂದು IACCS ಭಾರತದ ರಕ್ಷಣಾ ವ್ಯವಸ್ಥೆಯ ಕಣ್ಣು ಕಿವಿ ಮತ್ತು ಮೆದುಳು ಆಗಿ ವರ್ಷದ ೩೬೫ದಿನ,  ದಿನದ ೨೪ ಗಂಟೆಗಳ ಪ್ರತಿಕ್ಷಣವು ಹದ್ದಿನ ಕಣ್ಣಾಗಿ, ಉಕ್ಕಿನ ಕೋಟೆಯಾಗಿ ಕಾರ್ಯನಿರ್ವಹಿಸುತ್ತದೆ.

  

 

 

 

 

 

 

 

 

 

 

 

 

 

 

 

 

 F-35 ಯುದ್ಧ ವಿಮಾನವು ವಿಶೇಷಾಗಿ ತಯಾರಿಸಿದ ವಸ್ತುಗಳಿಂದ ನಿರ್ಮಿಸಿದೆ. ಅದಕ್ಕೆ ಅಳಡಿಸುವ ಕ್ಷಿಪಣೆ ಬಾಂಬು ಮುಂತಾದವನ್ನು ಅದರ ಹೊಟ್ಟೆಯೊಳಗೆ ಮರೆ ಮಾಡಿ ಇರಿಸಲಾಗುತ್ತದೆ. ಅದರ ಎಂಜಿನ್‌ ಮತ್ತು ಅದರಿಂದ ಹೊರಬರುವ ಬಿಸಿ ನಿಷ್ಕಾಸ ಗಾಳಿಯು ಹೊರಸೂಸು ರಕ್ತಾತೀತ ಕಿರಣಗಳನ್ನು ಸಹ ಹೊರಸೂಸದಂತೆ ತಡೆಯುವ ವ್ಯವಸ್ಥೆ ಅದರಲ್ಲಿದೆ. ರಾಡಾರಿನಿಂದ ಬರುವ ರೇಡಿಯೋ ತರಗಂಗಳು ಚದುರುವಂತೆ ವಿಮಾನದ ಹೊರಭಾಗದ ರಚನೆಯನ್ನು ಮಾಡಿದೆ ಮತ್ತು ಮುಖ್ಯವಾಗಿ ಹೊರಭಾರಗಕ್ಕೆ ಹಚ್ಚಿರುವ ಬಣ್ಣ ರಾಡಾರಿನ ತರಂಗಗಳನ್ನು ಪ್ರತಿಫಲಿಸದೇ ಎಲ್ಲವನ್ನೂ ಹೀರಿಕೊಳ್ಳುತ್ತದೆ. F-35 B ನಿಂತಂತೆ ಲಿಫ್ಟಿನಂತೆ ಮೇಲೇರಬಲ್ಲದು. ಹಾಗೆಯೆ ಕೆಳಗೆ ಇಳಿಬಲ್ಲದು. ಆದ್ದರಿಂದ ಉದ್ದನೆಯ ರನ್ವೇ ಅಗತ್ಯವಿರುವುದಿಲ್ಲಇಂತಹ ಅತ್ಯಾಧುನಿಕ ವಿಮಾನವನ್ನು ನಮ್ಮ IACCS ಹೇಗೆ ಪತ್ತೆ ಮಾಡಿತು ಎಂಬುದು ಒಂದು ದೊಡ್ಡ ಪ್ರಶ್ನೆ. ತರಬೇತಿ ಮೋಡಿನಲ್ಲಿ ಇದ್ದದ್ದರಿಂದ ಅದನ್ನು  IACCS ಪತ್ತೆ ಮಾಡಲು ಸಾಧ್ಯವಾಯಿತು, ಅದು ದಾಳಿಯ ಮೋಡಿನಲ್ಲಿದ್ದರೆ ಪತ್ತೆ ಮಾಡಲಾಗದು ಎನ್ನುವ ಮಾತುಗಳು ಕೇಳಿ ಬರುತ್ತಲಿವೆ. ಅದರ ರೆಕ್ಕೆಗಳಿಗೆ ಲೂನ್ಬರ್ಗ್‌ ಲೆಂಸ್‌ ಅಳವಡಿಸಿದ್ದರೆ ಅದು ರಾಡಾರಿಗೆ ಕಾಣಿಸಿಕೊಳ್ಳುತ್ತದೆ. ಅದು ಇಲ್ಲದಿದ್ದರೆ ಅದು ಕಾಣುವುದಿಲ್ಲ ಎಂದು ವಿವರಣೆಯನ್ನು ನೀಡಲಾಗುತ್ತಿದೆ. ಆದರೆ ನಮ್ಮ IACCS ವ್ಯವಸ್ಥೆಯು ಎಷ್ಟು ಸೂಕ್ಷಣವಾಗಿದೆ ಎಂದರೆ ಗಡಿಯಲ್ಲಿ ಯಾರಾದರೂ ಒಂದು ಗಾಳಿ ಪಟ ಹಾರಿಸಿದರೂ ಅದರ ಹಾರಾಟದಿಂದ ಗಾಳಿಯಲ್ಲಿ ಉಂಟಾಗುವ ವಿಚಲನೆಯನ್ನು ಗ್ರಹಿಸಿ ಅದು ಏನು ಎಂಬುದನ್ನು ಪತ್ತೆ ಮಾಡಬಲ್ಲದು. ಅಂತಹದ್ದರಲ್ಲಿ F-35B ನಂತಹ ಬೃಹತ್‌ ವಿಮಾನದ ಅರಿವು ಅದಕ್ಕೆ ಆಗದೆಯೆ ಇರುತ್ತದೆಯೇ? ಚೀನಾವು J20 ಮತ್ತು J35 ಎಂಬ ಎರಡು ಮಾರಿಯ ಅದೃಶ್ಯ ವಿಮಾನಗಳನ್ನು ತಯಾರಿಸುತ್ತಿದೆತನ್ನ ವಾಯುಸೇನೆಯನ್ನು ಇಂತಹ ೫ನೇ ತಲೆಮಾರಿನ ವಿಮಾನಗಳಿಂದ ಆಧುನಿಕಗೊಳಿಸುವುದರ ಜೊತೆಗೆ ನಮ್ಮ ನೆರೆಯ ಪಾಕಿಸ್ಥಾನಕ್ಕೂ ಇವುಗಳನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿದೆಹೀಗಿರಲು ಭಾರತವು ೫ನೇ ತಲೆಮಾರಿನ ಯುದ್ದ ವಿಮಾನಗಳಿಂದ ವಾಯುಸೇನೆಯನ್ನು ಆಧುನಿಕಗೊಳಿಸುವುದು ಅನಿವಾರ್ಯವಾಗಿದೆ. ಇಲ್ಲಿ ಭಾರತಕ್ಕೆ ಮೂರು ಆಯ್ಕೆಗಳಿವೆ. ಒಂದು ತನ್ನದೇ ಆದ ೫ನೇ ತಲೆಮಾರಿನ ಯುದ್ಧವಿಮಾನವನ್ನು ವಿನ್ಯಾಸಗೊಳಿಸಿ ತಯಾರಿಸುವುದು.   ಇದರ ವಿನ್ಯಾಸ ಈಗಾಗಲೆ ಸಿದ್ಧವಾಗಿದೆ. ಮಧ್ಯಮಗಾತ್ರದ ಅತ್ಯಾಧುನಿಕ ಯುದ್ದ ವಿಮಾನವನ್ನು AMCA ಎಂದು ಕರೆಯಲಾಗಿದೆ. ಇದರ ಪೂರ್ಣಪ್ರಮಾಣದ ತಯಾರಿಕೆಗೆ ಇನ್ನೊಂದು ದಶಕ ತೆಗೆದುಕೊಳ್ಳಬಹುದೆಂದು ಒಂದು ಅಂದಾಜು ಇದೆ. ಹೀಗಾಗಿ ತತ್ಕಾಲಕ್ಕೆ ತುರ್ತಾಗಿ ವಿದೇಶಿ ನಿರ್ಮಿತ ೫ನೇ ತಲೆಮಾರಿನ ಯುದ್ದವಿಮಾನ ಭಾರತಕ್ಕೆ ಅನಿವಾರ್ಯವಾಗಿದ್ದು ಎರಡನೆಯ ಆಯ್ಕೆಯಾಗಿ ಅಮೆರಿಕಾದ ದುಬಾರಿಯಾದ F-35 ಯುದ್ಧ ವಿಮಾನಗಳನ್ನು ಕೊಳ್ಳುವುದುಮೂರನೆಯ ಆಯ್ಕೆ ರಶ್ಯಾದ Su-57   ಎಂಬ ೫ನೇ ತಲೆಮಾರಿನ ಯುದ್ಧವಿಮಾನವನ್ನು ಕೊಳ್ಳುವುದುSu-57 ಪೂರ್ಣಪ್ರಮಾಣದ ಅದೃಶ್ಯ ವಿಮಾನವಲ್ಲವೆಂಬ ಅನುಮಾನವಿದೆರಶ್ಯಾವು ಇವುಗಳನ್ನು ಪೂರೈಸುವುದರ ಜೊತೆಗೆ ಅದರ ತಂತ್ರಜ್ಞಾನ ಮತ್ತು ತಂತ್ರಾಂಶವನ್ನು ಹಂಚಿಕೊಂಡು ನಿರ್ಮಾಣವನ್ನು ಭಾರತದಲ್ಲಿಯೇ ತಯಾರು ಮಾಡಲು ಸಿದ್ಧವಿದೆ. ಅದಕ್ಕೆ ಅಗತ್ಯವಾದ ಕ್ಷಿಪಣಿಗಳನ್ನು ಕೊಡಲು ಸಿದ್ಧವಿದೆ. ಬೆಲೆಯೂ ಕೂಡ  ಅಮೆರಿಕಾದ ವಿಮಾನಕ್ಕಿಂತ ಕಡಿಮೆ( ೫೦ಸಾವಿರ ಡಾಲರ್‌) .  ಇಂತಹ ಪರಿಸ್ಥಿತಿಯಲ್ಲಿ ಭಾರತ ತನ್ನ ಆಯ್ಕೆಯನ್ನು ಮುಕ್ತವಾಗಿರಿಸಿಕೊಂಡಿದೆ.   ಮಧ್ಯೆ ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧದಲ್ಲಿ ಮಧ್ಯೆ ಪ್ರವೇಶಿಸಿದ ಅಮೇರಿಕಾ ತನ್ನ ವಾಯು ಸೇನೆಯ Northrop B-2 Spirit ಎಂಬ ಭಾರಿ ವಿಮಾನಳನ್ನು ಬಳಸಿ ಇರಾನ್‌ ಮೇಲೆ ಬಂಕರ್‌ ಬಸ್ಟರ್‌ ಬಾಂಬಿನಿಂದ ದಾಳಿ ನಡೆಸಿದೆ. ನಾರ್ಥರಪ್‌ ತಯಾರಿಸಿದ ವಿಮಾನವು ಸಹ ಒಂದು ಅದೃಶ್ಯ ವಿಮಾನವಾಗಿದೆಇದು ಅದೃಶ್ಯ ವಿಮಾನವಾಗಿ ತಯಾರಾಗಲು ಅದರ ಘಟಕಗಳ ವಿನ್ಯಾಸ ರಚಿಸಿದವರು ಅಮೇರಿಕಾದಲ್ಲಿ ನೆಲೆಸಿರುವ ನೊಶಿರ್‌ ಗವಾಡಿಯ ಎಂಬ ಭಾರತೀಯ ಸಂಜಾತರೆಂದರೆ ನೀವು ನಂಬಲಾರರಿಚೀನಾ ಮುಂತಾದ  ವಿದೇಶಗಳಿಗೆ ತಂತ್ರಜ್ಞಾವನ್ನು ಮಾರಿದರೆಂಬ ಅರೋಪ ಹೊರಿಸಿದ ಅಮೇರಿಕಾದ  ಸರ್ಕಾರ  ೩೨ ವರ್ಷಗಳ ಸೆರೆವಾಸವನ್ನು ವಿಧಿಸಿ ಅವರನ್ನು ಬಂಧನದಲ್ಲಿರಿಸಿದೆದೌರ್ಭಾಗ್ಯವೆಂದರೆ ಭಾರತೀಯರೇ ಅಭಿವೃದ್ಧಿ ಪಡಿಸಿದ ಅದೃಶ್ಯ ವಿಮಾನ ತಂತ್ರಜ್ಞಾನವನ್ನು ಪಡೆಯಲು ದುಬಾರಿ ಬೆಲೆ ತೆತ್ತು ನಾವು ವಿದೇಶಿಯರನ್ನು  ಗೋಗೆರೆಯಬೇಕಾಗಿದೆ.  

 ಇಂದು ಭಾರತ ಕೇವಲ ಅತ್ಯಾಧುನಿಕ ಆಯುಧಗಳ ಖರೀದಿದಾರನಾಗಿ ಉಳಿದಿಲ್ಲಆತ್ಮನಿರ್ಭರತೆ ಯೋಜನೆಯ ಅಡಿಯಲ್ಲಿ ಅನೇಕ ಖಾಸಗಿ ಕಂಪನಿಗಳಿಗೂ ಮಿಲಿಟರಿ ಸಾಧನ ಸಲಕರಣೆಗಳನ್ನು ತಯಾರಿಸುವ ಅನುಮತಿ ನೀಡಿದ ಮೇಲೆ ಆರಂಭವಾದ ಉತ್ಪಾದನಾ ಘಟಕಗಳು ನಮ್ಮ ಭಾರತೀಯ ಸೇನೆಗೆ ಆಧುನಿಕ ಸಾಧನ ಸಲಕರಣೆಗಳನ್ನು ಅತಿ ಕಡಿಮೆ ಬೆಲೆಗೆ ತಯಾರಿಸಿಕೊಡುತ್ತಿರುವುದರ ಜೊತೆ ಜೊತೆಗೆ ವಿಶ್ವದ ೮೦ ವಿವಿಧ  ದೇಶಗಳಿಗೆ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುತ್ತಿವೆ ರಫ್ತು ಪ್ರಮಾಣ 20೨೪-೨೫ರಲ್ಲಿ ಸುಮಾರು೨೩,೬೨೨ ಕೋಟಿ ರೂಪಾಯಿಗಳನ್ನು ಮೀರಿದೆ. ಇದು ಅದರ ಹಿಂದಿನ ವರ್ಷದ ಶೇಕಡ ೧೨.೦೪ ರಷ್ಟು ಹೆಚ್ಚು  ಎಂದು ಅಂದಾಜು ಮಾಡಲಾಗಿದೆ. ಇದಕ್ಕೂ ಮೊದಲು ಬಂದೂಕಿಗೆ ಬಳಸುವ ಮದ್ದು ಗುಂಡಿನಿಂದ ಆರಂಭಿಸಿ ಬಹಳಷ್ಟು ಮಿಲಿಟರಿ ಆಯುಧ ಸಾಧನ ಸಲಕರಣೆಗಳನ್ನು ಆಮದು ಮಾಡಿಕೊಳ್ಳುತಿದ್ದ ಭಾರತ ಇಂದು ಬಹು ದೊಡ್ಡ ಉತ್ಪಾದಕ ಮತ್ತು ರಫ್ತುದಾರನಾಗಿ ಹೊರಹೊಮ್ಮಿದೆ ಎಂಬುದು ಒಂದು ಹೆಮ್ಮೆಯ ವಿಚಾರವಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ೫ನೇತಲೆಮಾರಿನ ತೇಜಸ್‌ ಮತ್ತು   AMCA ಯುದ್ಧ ವಿಮಾನಗಳು ಭಾರತದಲ್ಲಿಯೇ ದೇಶೀಯವಾಗಿ ತಯಾರಾಗಿ ನಿಂತು ಜಗತ್ತನ್ನು ಬೆರಗುಗೊಳಿಸುತ್ತವೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಅಷ್ಟಾಗಿ ಶಾಂತಿ ಪ್ರಿಯ ರಾಷ್ಟ್ರವಾದ ಭಾರತ ಪ್ರಮಾಣದಲ್ಲಿ ಖರ್ಚು ಮಾಡಿ  ಯುದ್ಧ ಸನ್ನದವಾಗುವ ಅಗತ್ಯವಿದೆಯೆ ಎನ್ನುವ ಪ್ರಶ್ನೆ ಯಾರಿಗಾದರೂ ಎದುರಾಗಬಹುದುಪ್ರಸ್ತುತ ಭೌಗೋಳೀಕ ರಾಜಕೀಯ ಪರಿಸ್ಥತಿಯೇ ನಾವು ಸದಾ ಎಚ್ಚರವಾಗಿ ಸದಾ ಸನ್ನದರಾಗಿರುವಂತೆ ಮಾಡಿದೆಒಂದೆಡೆ ಚೀನಾದ ವಿಸ್ತಾರವಾದಿ ಆಕ್ರಮಣ ಪ್ರವೃತ್ತಿ. ಪಾಶ್ಚಮಾತ್ಯ ರಾಷ್ಟ್ರಗಳ ಕುಯುಕ್ತಿಪಾಪರ್ ಪಾಕಿಸ್ಥಾನದಂತಹ ದುಷ್ಟ ನೆರಯ ರಾಷ್ಟ್ರ, ಅದೇ ಜಾಡನ್ನು ಹಿಡಿದಿರುವ ನೆರೆಯ ಬಂಗ್ಲಾದೇಶ. ಭಾರತಕ್ಕೆ ಹೋಲಿಸಿದರೆ ಸೊಳ್ಳೆಯಂತಿರುವ ಮಾಲ್ಡೀವಸ್‌ ಕೂಡ ಭಾರತವನ್ನು ಕೆಣಕಲು ಪ್ರಯತ್ನಿಸಿತೆಂದರೆ ನಮ್ಮ ಸಂಯಮವನ್ನು ಇವರೆಲ್ಲ ದೌರ್ಬಲ್ಯವೆಂದು ಭಾವಿಸಿದ್ದರು ಎಂದು ಕಾಣುತ್ತದೆ. ಇದಕ್ಕೆಲ್ಲ ಸಿಂಧೂರ ಸರಿಯಾದ ಉತ್ತರ ನೀಡಿದೆಭಾರತ ವಿಜ್ಞಾನ ತಂತ್ರಜ್ಞಾನಗಳಲ್ಲಿ ಪ್ರಗತಿ ಸಾಧಿಸದರಷ್ಟೆ ಸಾಲದು ಅದರ ಸಂಪೂರ್ಣ ಪ್ರಯೋಜನ ನಮ್ಮ ಕೃಷಿ, ವೈದ್ಯಕೀಯ, ಶಿಕ್ಷಣ, ಸಾಮಾಜಿಕ ನ್ಯಾಯ, ಆರ್ಥಿಕ ಪ್ರಗತಿ ಇವೆಲ್ಲದರ ಜೊತೆಗೆ ಬಹಳ ಮುಖ್ಯವಾಗಿ ನಮ್ಮೆಲ್ಲರ ಶಾಂತಿ ನೆಮ್ಮದಿಗೆ ಕಾರಣವಾಗಿರುವ ನಮ್ಮ ರಕ್ಷಣಾ ವ್ಯವಸ್ಥೆಗೆ ಸಲ್ಲಲೇಬೇಕುಇದಕ್ಕೆ ಒಳ್ಳೆಯ ಉದಾಹರಣೆ ನಮ್ಮ   IACCS ಅಲ್ಲವೇ? ಲೇಖನ ಬರೆದು ಮುಗಿಸುವಷ್ಟರಲ್ಲಿ  ಅಮೆರಿಕಾದ  ವಾಯು ಸೇನೆ ̳F35 ವಿಮಾನವೊಂದು ಆಂಧ್ರ ಪ್ರದೇಶದ ಕರಾವಳಿಯಲ್ಲಿ  ಭಾರತದ ವಾಯು ಸೀಮೆಯನ್ನು ಮೀರಿ ಒಳ ನುಗ್ಗಲು ಯತ್ನಿಸುವಾಗ ಅದನ್ನು  ನಮ್ಮ  IACCS ವ್ಯವಸ್ಥೆಯು ಅದನ್ನು ಪತ್ತೆಮಾಡಿ ಗುರ್ತಿಸಿ ವಾಪಸು ಕಳುಹಿಸಿದ ಸುದ್ಧಿ ಬರುತ್ತಲಿದೆ. ಅದು ನಿಜವಾಗಿದ್ದಲ್ಲಿ ಅಮೇರಿಕಾ ನಮ್ಮ ವಾಯು ರಕ್ಷಣಾ ವ್ಯವಸ್ಥೆಯನ್ನು ಪರೀಕ್ಷೆಗೆ ಒಡ್ಡುತ್ತಿದೆಯೇ ಅಥವಾ ತನ್ನ ಅದೃ‍ಶ್ಯ ವಿಮಾನದ ಸಾಮರ್ಥ್ಯವನ್ನು ನಮ್ಮ ವಾಯು ರಕ್ಷಣಾ ವ್ಯವಸ್ಥೆಗೆ ಒಡ್ಡಿ   ತನ್ನ ಸಾಮರ್ಥ್ಯವನ್ನು ತಾನೇ ಪರೀಕ್ಷಿಸಿಕೊಳ್ಳುತ್ತಿದೆಯೆ ಎನ್ನುವ ಪ್ರಶ್ನೆ ಉದ್ಭವಿಸುತ್ತವೆ. ಅಲ್ಲವೇ?

 

No comments:

Post a Comment