ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, July 4, 2025

ತನಿಖೆಯಲ್ಲಿ ಡಿಎನ್ಎ ಬೆರಳಚ್ಚು ತಂತ್ರಜ್ಞಾನದ ಮಹತ್ವ

ತನಿಖೆಯಲ್ಲಿ ಡಿಎನ್ಎ ಬೆರಳಚ್ಚು ತಂತ್ರಜ್ಞಾನದ ಮಹತ್ವ

ಡಾ. ಶಶಿಕುಮಾರ್. ಎಲ್ 


ವೈಜ್ಞಾನಿಕ ಅಧಿಕಾರಿ 
ಜೀವಶಾಸ್ತ್ರ ಇವಾಗ
ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ
ಜಲಪುರಿ
ಮೈಸೂರು



ಜನರ ಜೈವಿಕ ಮಾದರಿಗಳ ಮೂಲಕ ಅವರ ಗುರುತು, ಸಂಬಂಧ ಪತ್ತೆ ಹಚ್ಚುವ ಡಿಎನ್ಎ ಬೆರಳಚ್ಚು ಪರೀಕ್ಷೆ ಒಂದು ಸಂಕೀರ್ಣವಾದ ಪ್ರಕ್ರಿಯೆಯಾಗಿದೆ. ಗುರುತು ಸಿಗದ ಮೃತ ದೇಹಗಳನ್ನು ಪತ್ತೆ ಹಚ್ಚುವುದು ಸೇರಿದಂತೆ ಹಲವು ಸಂದರ್ಭಗಳಲ್ಲಿ ಡಿಎನ್ಎ ಬೆರಳಚ್ಚು ಪರೀಕ್ಷಾ ವಿಧಾನವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಪೊಲೀಸ್ ಮತ್ತು ನ್ಯಾಯಾಂಗ ಇಲಾಖೆಗಳಿಗೆ ಇದು ಅತ್ಯಂತ ಉಪಯುಕ್ತವಾಗಿದೆ. ಇತ್ತೀಚಿನ ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆಗೂ ಇದು ನೆರವಾಗಿದೆ. ಡಿಎನ್ಎ ಬೆರಳಚ್ಚು ವಿಧಾನವು ವಿಧಿ ವಿಜ್ಞಾನದ ಒಂದು ಭಾಗವಾಗಿದೆ ಎಂದರೆ ತಪ್ಪಾಗಲಾರದು. 

ವಿಧಿವಿಜ್ಞಾನವು ಕಾನೂನು ವ್ಯವಸ್ಥೆಯಲ್ಲಿ ವಿಜ್ಞಾನದ ಅನ್ವಯವಾಗಿದೆ. ಆಧುನಿಕ ವಿಧಿವಿಜ್ಞಾನದ ಪುರಾವೆಗಳ ಒಂದು ಉದಾಹರಣೆ ಎಂದರೆ ಡಿಎನ್ಎ ಬೆರಳಚ್ಚು ಬಳಕೆ. ಡಿಯಾಕ್ಸಿ ರೈಬೋ ನುಕ್ಲಿಕ್ ಆಸಿಡ್ ಎಂಬುದರ ಸಂಕ್ಷಿಪ್ತ ರೂಪವೇ ಡಿಎನ್ಎ. ಜೀವಿಗಳ ವರ್ಣತಂತುಗಳಲ್ಲಿರುವ ಅತ್ಯಂತ ಸಂಕೀರ್ಣವಾದಂತಹ ಅನುವಂಶಿಯ ರಾಸಾಯನಿಕ ಗುಣಲಕ್ಷಣಗಳನ್ನು ಹೊಂದಿರುವ ಅಣು ಇದು. ವಂಶವಾಹಿಯ ಮುಖ್ಯ ಭಾಗವಾಗಿರುವ ಏಣಿಯ ರೂಪದಲ್ಲಿ ಜೀವಕೋಶದ ಕೇಂದ್ರ ಭಾಗದಲ್ಲಿರುತ್ತದೆ. ವ್ಯಕ್ತಿ ಅಥವಾ ಜೀವಿಗಳ ವಂಶಾವಳಿಯ ಮಾಹಿತಿಗಳನ್ನು ತಲೆಮಾರಿನಿಂದ ತಲೆಮಾರಿಗೆ ಇದು ತೆಗೆದುಕೊಂಡು ಹೋಗುತ್ತದೆ. ಡಿಎನ್ಎ ಮೂಲಗಳು ವೀರ್ಯಾಣು, ರಕ್ತ, ಕೂದಲು, ಜೊಲ್ಲು, ಮೂತ್ರ, ಚರ್ಮ, ಮೂಳೆ ಮತ್ತು ಅಂಗಾಂಶಗಳನ್ನು ಒಳಗೊಂಡಿವೆ. 

             ಡಿಎನ್ಎ ಬೆರಳಚ್ಚು ಅಥವಾ ಡಿಎನ್ಎ ಫಿಂಗರ್ ಪ್ರಿಂಟಿಂಗ್ ಅಥವಾ ಡಿಎನ್ಎ ಪ್ರೊಫೈಲಿಂಗ್ ಎಂದರೆ ವ್ಯಕ್ತಿಯ ಡಿಎನ್ಎಯ ವಿಶಿಷ್ಟ ಮಾದರಿಯನ್ನು ಗುರುತಿಸುವ ಒಂದು ತಂತ್ರಜ್ಞಾನವಾಗಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವ ಡಿಎನ್ಎ ಭಾಗಗಳನ್ನು ವಿಶ್ಲೇಷಿಸುತ್ತದೆ. ಪ್ರತಿಯೊಬ್ಬರ ಡಿಎನ್ಎಯ ಒಳಗೆ ಜೀವಿಗಳ ನಡುವೆ ಪುನರಾವರ್ತಿತ ಸರಣಿಗಳು ಇರುತ್ತವೆ. ಇದನ್ನು ತಾಂಡೆಂ ಪುನರಾವರ್ತನೆ (ತಾಂಡೆಂ ರಿಪೀಟ್) ಎನ್ನುತ್ತಾರೆ. ಈ ಪುನರಾವರ್ತನೆಯ ಅನುಕ್ರಮವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಡಿಎನ್ಎ ಬೆರಳಚ್ಚು ತಂತ್ರಜ್ಞಾನವನ್ನು ಬಳಸಿಕೊಂಡು ಪ್ರತಿ ವ್ಯಕ್ತಿಗೆ ಒಂದು ಅನನ್ಯ ಪುನರಾವರ್ತನೆಯ ಮಾದರಿಯನ್ನು ನಾವು ಕಂಡುಕೊಳ್ಳಬಹುದು. ರಕ್ತ ಸಂಬಂಧಿಕರ ನಡುವೆ ಡಿಎನ್ಎ ಅನುಕ್ರಮಗಳು ಪರಸ್ಪರ ಸಂಬಂಧವಿಲ್ಲದ ವ್ಯಕ್ತಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೋಲುತ್ತವೆ. ಇದು ಹಲವಾರು ಪ್ರಕರಣಗಳಲ್ಲಿ ವ್ಯಕ್ತಿಯ ಗುರುತನ್ನು ಖಚಿತಪಡಿಸಲು ಮತ್ತು ರಕ್ತ ಸಂಬಂಧಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. 

ಡಿಎನ್ಎ ಬೆರಳಚ್ಚು ವಿಧಾನದಲ್ಲಿ ಮೊದಲು ವ್ಯಕ್ತಿಯಿಂದ ರಕ್ತ, ಕೂದಲು, ಲಾಲಾರಸ ಅಥವಾ ಇತರ ಅಂಗಾಂಶದ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ನಂತರ ಈ ಮಾದರಿಗಳಿಂದ ಡಿಎನ್ಎಯನ್ನು ಹೊರತೆಗೆಯಲಾಗುತ್ತದೆ. ಹೊರತೆಗೆದ ಡಿಎನ್ಎಯನ್ನು ನಿರ್ದಿಷ್ಟ ಕಿಣ್ವಗಳನ್ನು ಬಳಸಿ ಸಣ್ಣ ತುಣುಕುಗಳಾಗಿ ವಿಭಜಿಸಲಾಗುತ್ತದೆ. ಈ ತುಣುಕುಗಳನ್ನು ಜೆಲ್ ಎಲೆಕ್ಟ್ರೋಪೋರೋಸಿಸ್ ಎಂಬ ವಿಧಾನವನ್ನು ಬಳಸಿ ಗಾತ್ರದ ಆಧಾರದ ಮೇಲೆ ಪ್ರತ್ಯೇಕಿಸಲಾಗುತ್ತದೆ. ಪ್ರತ್ಯೇಕವಾದ ಡಿಎನ್ಎ ತುಣುಕುಗಳನ್ನು ಪಾಲಿಮರೇಸ್ ಚೈನ್ (ಪಿಸಿಆರ್) ತಂತ್ರಜ್ಞಾನವನ್ನು ಬಳಸಿ ವರ್ದಿಸಲಾಗುತ್ತದೆ. ಇದರಿಂದಾಗಿ ಹೆಚ್ಚು ಡಿಎನ್ಎ ಸಿಗುತ್ತದೆ. ವರ್ದಿತ ಡಿಎನ್ಎ ಮಾದರಿಗಳನ್ನು ಎಕ್ಸರೇ ಫಿಲಂ ಅಥವಾ ಇತರ ವಿಧಾನಗಳನ್ನು ಬಳಸಿ ದೃಶ್ಯೀಕರಿಸಲಾಗುತ್ತದೆ. ಇದರಿಂದಾಗಿ ವಿಶಿಷ್ಟ  ಮಾದರಿಯನ್ನು ಪಡೆಯಲಾಗುತ್ತದೆ. ಪಡೆದ ಮಾದರಿಯನ್ನು ರಕ್ತ ಸಂಬಂಧಿಗಳ ಮಾದರಿಗಳಿಗೆ ಹೋಲಿಸಿ ನೋಡಿ ವ್ಯಕ್ತಿಯ ಗುರುತನ್ನು ಸುಲಭವಾಗಿ ಪತ್ತೆಹಚ್ಚಬಹುದು.

 ಕೇವಲ ವ್ಯಕ್ತಿಯ ಗುರುತನ್ನು ಪತ್ತೆಹಚ್ಚಲು ಡಿಎನ್ಎ ಬೆರಳಚ್ಚು ಪರೀಕ್ಷೆಯು ಸಹಾಯ ಮಾಡುವುದಲ್ಲದೆ ಮಕ್ಕಳ ಬದಲಾಯಿಸುವಿಕೆ, ಪಿತೃತ್ವ/ಮಾತೃತ್ವ ಪರೀಕ್ಷೆ, ಸಾಮೂಹಿಕ ಅತ್ಯಾಚಾರ, ಅಪಹರಣ, ಕೊಲೆ, ದರೋಡೆ, ಮಕ್ಕಳ ಮೇಲಿನ ಲೈಂಗಿಕ ಕಿರುಕಳವಂತಹ ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳನ್ನು ಕಂಡುಹಿಡಿಯಲು, ಪ್ರವಾಹ, ಭೂಕಂಪದಂತಹ ಪ್ರಕೃತಿ ವಿಕೋಪಗಳು ನಡೆದ ಸಂದರ್ಭದಲ್ಲಿ ಸಂತ್ರಸ್ತರ ಪತ್ತೆಗೂ ಸಹ ಅನುಕೂಲ ಮಾಡಿಕೊಡುತ್ತದೆ. ಮನುಷ್ಯರಲ್ಲಷ್ಟೇ ಅಲ್ಲದೆ

ಪ್ರಾಣಿಗಳ ಬೇಟೆ, ಕಳ್ಳ ಸಾಗಣೆ ಪತ್ತೆ ಹಚ್ಚಲು ಈ ಪರೀಕ್ಷಾ ವಿಧಾನ ಬಳಸಲಾಗುತ್ತಿದೆ. ಡಿಎನ್ಎ ಬೆರಳಚ್ಚು ವಿಧಾನವು ಕೆಲವು ಅನುವಂಶಿಕ ಕಾಯಿಲೆಗಳನ್ನು ಗುರುತಿಸಲು ಮತ್ತು ರೋಗ ನಿರ್ಣಯ ಮಾಡಲು ಸಹಾಯ ಮಾಡುವುದಲ್ಲದೆ ಮಾನವನ ವಿಕಸನ ಹಾಗೂ ವಲಸೆಯ ಬಗ್ಗೆ ಅಧ್ಯಯನ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

ಇಂದು ಪ್ರತಿನಿತ್ಯ ಮಾಧ್ಯಮಗಳಲ್ಲಿ ಕೊಲೆ, ದರೋಡೆ, ಅತ್ಯಾಚಾರ, ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಮೊದಲಾದ ಘಟನೆಗಳ ಬಗ್ಗೆ ಹೆಚ್ಚು ವರದಿಯಾಗುತ್ತಿವೆ. ಸಮಾಜದಲ್ಲಿ ಇಂತಹ ಅಪರಾಧಗಳು ನಡೆಯಲೇಬಾರದು. ನಡೆದಾಗ ನಿಜವಾದ ಅಪರಾಧಿಗೆ ಶಿಕ್ಷೆ ಕೊಡಿಸಬೇಕು. ಆಗ ಮಾತ್ರ ಸಮಾಜದಲ್ಲಿ ಇಂಥ ಅಪರಾಧಗಳು ಮರುಕಳಿಸಿದಂತೆ ತಡೆಗಟ್ಟಬಹುದು. ಇಂಥ ಅಪರಾಧಗಳ ತನಿಖೆಯಲ್ಲಿ ಡಿಎನ್ಎ ಬೆರಳಚ್ಚು ತಂತ್ರಜ್ಞಾನದ ಪಾತ್ರ ಮಹತ್ವದಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಡಿಎನ್ಎ ಬೆರಳಚ್ಚು ತಂತ್ರಜ್ಞಾನವು ಮಾನವನಿಗೆ ದೊರೆತಿರುವ ಅದ್ಭುತವಾದ ವರವೆಂದೇ ಭಾವಿಸಬಹುದಲ್ಲವೇ?

No comments:

Post a Comment