ತನಿಖೆಯಲ್ಲಿ ಮಹತ್ವ ಪಾತ್ರ ವಹಿಸುವ ವಿಧಿವಿಜ್ಞಾನ ವಿಷಶಾಸ್ತ್ರ
ವೈಜ್ಞಾನಿಕ ಅಧಿಕಾರಿ, ಜೀವಶಾಸ್ತ್ರ ವಿಭಾಗ,
ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಜಲಪುರಿ , ಕೆಪಿಎ ಆವರಣ, ಮೈಸೂರು - 19
7204932795
ಇತ್ತೀಚಿಗೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ವಿಷ ಪ್ರಾಷನದಿಂದಾಗಿ ಐದು ಹುಲಿಗಳು ದಾರುಣವಾಗಿ ಸಾವನಪ್ಪಿದ ಘಟನೆ ಎಲ್ಲರ ಮನದಲ್ಲಿ ಇನ್ನೂ ಹಚ್ಚ ಹಸಿರಾಗಿದೆ ಮತ್ತು ಅದು ರಾಷ್ಟ್ರಮಟ್ಟದ ಸುದ್ದಿಯಾಗಿದೆ. ಹುಲಿಯ ದಾಳಿಗೆ ಬಲಿಯಾದ ಹಸುವಿನ ಕಳೆಬರಕ್ಕೆ ಸಿಂಪಡಿಸಿದ್ದ ಕಾರ್ಬೊಫ್ಯೂರಾನ್ (Carbofuron) ಕೀಟನಾಶಕವನ್ನು ತಿಂದ ತಾಯಿ ಹುಲಿ ಮತ್ತು ನಾಲ್ಕು ಮರಿಗಳು ವೃಥಾ ಜೀವತೆತ್ತಿವೆ. ಪ್ರಾಥಮಿಕ ತನಿಖೆಯಲ್ಲಿ ಅರಣ್ಯ ಸಿಬ್ಬಂದಿಯು ವಿಷಪ್ರಾಷನದಿಂದಲೇ ಹುಲಿಗಳ ಸಾವಾಗಿದೆ ಎಂಬ ಸಂಶಯವನ್ನು ವ್ಯಕ್ತಪಡಿಸಿ ಸತ್ತ ಹುಲಿಗಳ ಹಾಗೂ ಹಸುವಿನ ಅಂಗಾಂಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿನ ವಿಧಿವಿಜ್ಞಾನ ವಿಷಶಾಸ್ತ್ರ ವಿಭಾಗವು ಕಳುಹಿಸಿದ್ದ ಎಲ್ಲಾ ಅಂಗಾಂಗಗಳನ್ನು ಪರೀಕ್ಷೆಗೊಳಪಡಿಸಿ ಹುಲಿಗಳ ಅಸಹಜ ಸಾವಿಗೆ ಕಾರ್ಬೊಫ್ಯೂರಾನ್ ಕೀಟನಾಶಕ ಕಾರಣವೆಂದು ದೃಢಪಡಿಸಿತು. ಈ ನಿಟ್ಟಿನಲ್ಲಿ ವಿಧಿವಿಜ್ಞಾನ ವಿಷಶಾಸ್ತ್ರವು ಬಹಳ ಉಪಯೋಗವಾಗಿದ್ದು ತನಿಖೆಯಲ್ಲಿ ತನ್ನದೇ ಆದ ಮಹತ್ವವಾದ ಪಾತ್ರವನ್ನು ಹೊಂದಿದೆ ಎಂಬುದು ಗಮನಿಸಬೇಕಾದ ವಿಚಾರವಾಗಿದೆ.
ವಿಧಿವಿಜ್ಞಾನ (ಇಂಗ್ಲಿಷ್ನಲ್ಲಿ ಫೋರೆನ್ಸಿಕ್ ಸೈನ್ಸ್) ಎಂಬುದು ಒಂದು ಕಾನೂನು ವ್ಯವಸ್ಥೆಗೆ ಸಂಬಂಧಿಸಿದ ಹಿತಾಸಕ್ತಿಯ ಪ್ರಶ್ನೆಗಳನ್ನು ಉತ್ತರಿಸಲು ಅನ್ವಯಿಸಲಾಗುವ ವಿಜ್ಞಾನಗಳ ಒಂದು ವ್ಯಾಪಾರ ಶ್ರೇಣಿಯಾಗಿದೆ. ಇದು ವೈಜ್ಞಾನಿಕ ಕ್ಷೇತ್ರದೊಂದಿಗೆ ಬಹಳಷ್ಟು ನಿಕಟವಾದ ಸಂಬಂಧವನ್ನು ಹೊಂದಿದೆ. ಕ್ಲಿಷ್ಟಕರ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ವಿಧಿ ವಿಜ್ಞಾನವು ಇಂದಿನ ದಿನಗಳಲ್ಲಿ ಬಹಳಷ್ಟು ಸಹಕಾರಿಯಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ವಿವಿಧ ಅಪರಾಧ ಪ್ರಕರಣಗಳನ್ನು ತನ್ನದೇ ಆದ ವೈಜ್ಞಾನಿಕ ತಂತ್ರಜ್ಞಾನ ಬಳಸಿಕೊಂಡು ಅಪರಾಧ ಸ್ಥಳದಲ್ಲಿ ದೊರಕುವ ವಿವಿಧ ಮಾದರಿ ಹಾಗೂ ಕುರುಹುಗಳನ್ನು ಪರೀಕ್ಷೆಗೊಳಪಡಿಸಿ ಅಪರಾಧಿಗಳನ್ನು ಪತ್ತೆಹಚ್ಚಲು ವಿವಿಧ ವಿಭಾಗಗಳಿವೆ. ಅದರಲ್ಲಿ ಪ್ರಮುಖವಾಗಿ ವಿವಿಧ ಬಗೆಯ ಒಳಾಂಗಗಳನ್ನು (internal organs) ಪರೀಕ್ಷಿಸಿ ವಿಷಕಾರಿಗಳನ್ನು ಪತ್ತೆ ಹಚ್ಚಿ ಅಪರಾಧ ತನಿಖೆಗೆ ಸೂಕ್ತ ಸಹಾಯ ಹಸ್ತ ಚಾಚುವುದು ವಿಧಿ ವಿಜ್ಞಾನ ವಿಷಶಾಸ್ತ್ರ ವಿಭಾಗವಾಗಿದೆ ಎಂಬುದರಲ್ಲಿ ಬೇರೆ ಮಾತಿಲ್ಲ.
ವಿಧಿವಿಜ್ಞಾನ ವಿಷಶಾಸ್ತ್ರವನ್ನು ಇಂಗ್ಲಿಷ್ ನಲ್ಲಿ ಫೋರೆನ್ಸಿಕ್ ಟಾಕ್ಸಿಕಾಲಜಿ ಎಂದು ಕರೆಯುತ್ತಾರೆ. ಇದನ್ನು ನ್ಯಾಯ ವಿಜ್ಞಾನ ವಿಷಶಾಸ್ತ್ರ ಎಂದೂ ಕರೆಯುವುದುಂಟು. ಇದು ವಿಷಕಾರಿ ವಸ್ತುಗಳ ಪರಿಣಾಮಗಳನ್ನು ಅಧ್ಯಯನ ಮಾಡುವ ವಿಜ್ಞಾನ. ವಿಶೇಷವಾಗಿ ಸಾವಿನ ತನಿಖೆಗಳಲ್ಲಿ ಮತ್ತು ಅಪರಾಧ ಪ್ರಕರಣಗಳಲ್ಲಿ ದೇಹದಲ್ಲಿ ವಿಷಕಾರಿ ವಸ್ತುಗಳ ಉಪಸ್ಥಿತಿಯನ್ನು ಪತ್ತೆಹಚ್ಚಲು ಮತ್ತು ಪ್ರಮಾಣಿಕರಿಸಲು ಇದನ್ನು ಉಪಯೋಗಿಸಲಾಗುತ್ತದೆ. ವಿಧಿವಿಜ್ಞಾನ ವಿಷ ಶಾಸ್ತ್ರವು ಪ್ರಮಾಣಿಕರಿಸಿದ ಅಂಶಗಳನ್ನು ನ್ಯಾಯಾಲಯಗಳಲ್ಲಿ ಪುರಾವೆಯಾಗಿ ಹಿಂದಿನಿಂದಲೂ ಬಳಸಲಾಗುತ್ತಿದೆ.
ವಿಧಿವಿಜ್ಞಾನ ವಿಷಶಾಸ್ತ್ರದ ಪ್ರಮುಖ ಅಂಶಗಳು ಯಾವುವು ಅಂದರೆ ಮನುಷ್ಯ ಅಥವಾ ಪ್ರಾಣಿಯ ರಕ್ತ, ಮೂತ್ರ, ವಾಂತಿ, ಅಂಗಾಂಶಗಳು ಮುಂತಾದ ದೇಹದ ಮಾದರಿಗಳಲ್ಲಿ ಔಷಧಗಳು ಸೇರಿದಂತೆ ವಿಷಕಾರಿ ವಸ್ತುಗಳನ್ನು ಪರೀಕ್ಷೆಯ ಮೂಲಕ ಗುರುತಿಸುವುದು ಮತ್ತು ಪ್ರಮಾಣಿಕರಿಸುವುದು. ಪತ್ತೆಹಚ್ಚಿದ ವಿಷಕಾರಿ ವಸ್ತುಗಳ ಪ್ರಮಾಣವನ್ನು ಅಳೆಯುವುದು. ವಿಷಕಾರಿ ವಸ್ತುಗಳು ಸಾವಿಗೆ ಕಾರಣವಾಯಿತು ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುವುದು. ಅಪರಾಧ ಪ್ರಕರಣಗಳಲ್ಲಿ ವಿಷಕಾರಿ ವಸ್ತುಗಳ ಬಳಕೆ ಅಥವಾ ದುರುಪಯೋಗವನ್ನು ಸಾಬೀತುಪಡಿಸಲು ಸಹಾಯ ಮಾಡುವುದು ಹಾಗೂ ಕ್ರೋಮೆಟೊಗ್ರಫಿ, ಸ್ಪೆಕ್ಟ್ರೋಸ್ಕೋಪಿ ಮುಂತಾದ ತಂತ್ರಜ್ಞಾನಗಳನ್ನು ಬಳಸಿ ವಿಷಕಾರಿ ವಸ್ತುಗಳನ್ನು ವಿಶ್ಲೇಷಿಸುವುದು. ವಿಷಶಾಸ್ತ್ರ ವರದಿಯು ವ್ಯಕ್ತಿಯಲ್ಲಿ ಇರುವ ವಸ್ತುಗಳ ಪ್ರಕಾರ ಮತ್ತು ಆ ವಸ್ತುಗಳ ಪ್ರಮಾಣವು ಚಿಕಿತ್ಸಕ ಡೋಸೇಜಿಗೆ ಅನುಗುಣವಾಗಿದೆಯೇ ಅಥವಾ ಹಾನಿಕಾರಕ ಮಟ್ಟಕ್ಕಿಂತ ಹೆಚ್ಚಿದೆಯೇ ಎಂಬುದರ ಕುರಿತು ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ. ಮೇಲೆ ತಿಳಿಸಲಾದ ಮಾದರಿಗಳಲ್ಲದೆ ಅಪರಾಧ ಕೃತ್ಯ ನಡೆದ ಸ್ಥಳದಲ್ಲಿ ಕಂಡುಬರುವ ಭೌತಿಕ ವಸ್ತುಗಳಾದ ಕೀಟನಾಶಕಗಳ ಡಬ್ಬಿಗಳು, ಬಟ್ಟೆಗಳು, ಮಾತ್ರೆಗಳು ಇತ್ಯಾದಿಗಳನ್ನು ಸಹ ಪರೀಕ್ಷೆಗೆ ವಿಷ ಶಾಸ್ತ್ರಜ್ಞರು ಒಳಪಡಿಸುತ್ತಾರೆ. ಕುಡಿದು ವಾಹನ ಚಲಾಯಿಸಿರುವ ಪ್ರಕರಣಗಳಲ್ಲಿ ರಕ್ತ, ಮೂತ್ರದ ಮಾದರಿ ಹಾಗೂ ಜಠರ ತೊಳೆದ ದ್ರಾವಣವನ್ನು ಪರೀಕ್ಷೆಗೆ ಸ್ವೀಕರಿಸಲಾಗುತ್ತದೆ. ಇಷ್ಟೇ ಅಲ್ಲದೇ ವಿಷಶಾಸ್ತ್ರಜ್ಞರು ವಿಷಶಾಸ್ತ್ರ ವಿಭಾಗದಲ್ಲಿ ಕೀಟನಾಶಕಗಳು, ನಿದ್ರೆಯ ಔಷಧಿಗಳು, ಅರವಳಿಕೆಗಳು, ಲೋಹದ ಅಂಶಗಳು, ಆಲ್ಕಲಾಯ್ಡ್ ವಿಷಗಳು ಹಾಗೂ ಇತರ ರಾಸಾಯನಿಕಗಳನ್ನು ಸಹ ಪರಿಶೀಲಿಸುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ವಿಧಿವಿಜ್ಞಾನ ವಿಷಶಾಸ್ತ್ರ ವಿಭಾಗದಲ್ಲಿ ಮಾನವ ಹಾಗೂ ಪ್ರಾಣಿಯ ಅಸ್ವಾಭಾವಿಕ ಸಾವು, ಆತ್ಮಹತ್ಯೆ, ಸಾವು, ಕೊಲೆ ಇತ್ಯಾದಿ ಪ್ರಕರಣಗಳ ಹಲವಾರು ಮಾದರಿಗಳ ಪರೀಕ್ಷೆಯನ್ನು ನಡೆಸಿ ತನಿಖಾಧಿಕಾರಿಗಳಿಗೆ ನೆರವಾಗುತ್ತಾರೆ.
ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರಕರಣಗಳಾದ ಸಾಮೂಹಿಕ ಅತ್ಯಾಚಾರ, ರೈತ ಆತ್ಮಹತ್ಯೆ, ಕೊಲೆ ಇತ್ಯಾದಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗನೆ ವರದಿ ಕಲ್ಪಿಸುವಲ್ಲಿ ವಿಧಿವಿಜ್ಞಾನ ವಿಷಶಾಸ್ತ್ರವು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿ ತನಿಖೆಗೆ ಬಹಳಷ್ಟು ಸಹಾಯಕವಾಗಿದೆ. ಅಪರಾಧಿಗಳಿಗೆ ಶಿಕ್ಷೆಯಾಗುವುದು ಎಷ್ಟು ಮುಖ್ಯವೋ ನಿರಪರಾಧಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ವಿಧಿವಿಜ್ಞಾನದ ಪ್ರಮುಖ ಭಾಗವಾಗಿರುವ ವಿಷ ಶಾಸ್ತ್ರ ವಿಭಾಗವು ಹಲವು ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸುವಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ ಹಾಗೂ ನ್ಯಾಯ ಒದಗಿಸಲು ಸೂಕ್ತ ವೇದಿಕೆಯಾಗಿದೆ ಎಂದರೆ ತಪ್ಪಾಗಲಾರದು. ಚಾಮರಾಜನಗರ ಮಲೆಮಹದೇಶ್ವರ ವನ್ಯಧಾಮದಲ್ಲಿ ನಡೆದ ಹುಲಿಗಳ ದಾರುಣ ಸಾವಿಗೆ ಕಾರಣವಾದ ಕೀಟನಾಶಕವನ್ನು ಪತ್ತೆ ಹಚ್ಚುವಲ್ಲಿ ವಿಧಿವಿಜ್ಞಾನದ ವಿಷಶಾಸ್ತ್ರ ವಿಭಾಗವು ಯಶಸ್ವಿಯಾಗಿದೆ. ಅಂದಹಾಗೆ ಜುಲೈ 29, ವಿಶ್ವ ಹುಲಿ ದಿನದ ಈ ಸುಸಂದರ್ಭದಲ್ಲಿ ಈ ವಿಷಯವನ್ನು ನಾವು ಅರಿಯಬೇಕಾಗಿದೆ ಅಲ್ಲವೇ?
No comments:
Post a Comment