ವಿಜ್ಞಾನದೊಳಡಗಿದ ಕಲೆ !!!
ಕಳೆದ ಸಾಲಿನಲ್ಲಿ ಮಂಗಳೂರಿನ ಸ್ನೇಹಿತ ಅರವಿಂದ ಕುಡ್ಲ ಅವರು ಇಂಡಿಯಾ ಫೌಂಡೇಶನ್ ಫಾರ್ ಆರ್ಟ್ಸ್ (ಐಎಫ್ಎ) ಕಲಾ ಸಂಮ್ಮಿಳಿತ ಕಲಿ–ಕಲಿಸು ಯೋಜನೆಯನ್ನು ಅನುಷ್ಠಾನಕ್ಕೆ ಆಸಕ್ತ ಶಿಕ್ಷಕರಿಗೆ ಮಾರ್ಗದರ್ಶನ ಹಾಗೂ ಅನುದಾನ ನೀಡುತ್ತಾರೆ, ಕೃಷ್ಣಮೂರ್ತಿಯವರನ್ನು ಸಂಪರ್ಕಿಸಿ ಎಂದು ಅವರ ದೂರವಾಣಿ ಸಂಖ್ಯೆ ನೀಡಿದರು. IFA ಯ ಹಿರಿಯ ಕಾರ್ಯಕ್ರಮಾಧಿಕಾರಿಗಳಾದ ಕೃಷ್ಣಮೂರ್ತಿ ಅವರನ್ನು ಸಂಪರ್ಕಿಸಿದೆ. ಆತ್ಮೀಯವಾಗಿ ಮಾತನಾಡಿಸಿ ಸಾಕಷ್ಟು ಮಾಹಿತಿ ನೀಡಿದರು. ರಾಜ್ಯ ಯೋಜನಾ ನಿರ್ದೇಶಕರ ಕಛೇರಿಯಿಂದ ನಡೆಸಲಾದ ಕಲಾ ಸಮ್ಮಿಳಿತ ಯೋಜನೆಯಾದ ಕಲಿಕಾ ಹಬ್ಬದ ಸಂಪನ್ಮೂಲ ವ್ಯಕ್ತಿಯಾಗಿ, DSERTಯಲ್ಲಿ ಕಲಾ ಸಮ್ಮಿಳಿತ ಯೋಜನೆಯ ಮಾಡ್ಯೂಲ್ ತಯಾರಿಕೆಯ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಈ ಹಿಂದೆ ಪಾಲ್ಗೊಂಡಿದ್ದೆ. ಇದೂ ಕೂಡ ಒಂದು ಪ್ರೇರಣೆ ನೀಡಿ, ನಾನೂ ಈ ಯೋಜನೆಯನ್ನು ಮಾಡಬಲ್ಲೆ ಎಂಬ ಧೈರ್ಯವನ್ನೂ ನೀಡಿತು. ಕೃಷ್ಣಮೂರ್ತಿ ಅವರ ಸಲಹೆ ಪಡೆದು ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತಾವನೆಗೆ ಸಂದರ್ಶನದ ನಂತರ ಅನುಮೋದನೆ ದೊರೆಯಿತು. ೧೫ ತಿಂಗಳ ಅವಧಿಗೆ ವಿವಿಧ ಚಟುವಟಿಕೆಗಳಿಗಾಗಿ ಅನುದಾನವೂ ದೊರೆಯಿತು.
ಕಲಾ ಸಂಯೋಜಿತ ವಿಜ್ಞಾನವು ವಿದ್ಯಾರ್ಥಿಗಳಲ್ಲಿ ಕಲಿಕೆಗೆ ಆಸಕ್ತಿ ಹುಟ್ಟುಹಾಕುತ್ತದೆ. ಇದು ಕಲ್ಪನೆಗಳನ್ನು ದೃಶ್ಯರೂಪದಲ್ಲಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಜ್ಞಾನಿಕ ಕಲ್ಪನೆಗಳನ್ನು ನೃತ್ಯ, ಚಿತ್ರಕಲೆ, ನಾಟಕದ ಮೂಲಕ ಅನ್ವಯಿಸಲು ಅವಕಾಶ ನೀಡುತ್ತದೆ. ಇದು ಸಂವಹನ, ತಂಡ ಕಾರ್ಯ ಮತ್ತು ಸೃಜನಶೀಲತೆಗೆ ಉತ್ತೇಜನ ನೀಡುತ್ತದೆ.
ಇಂಡಿಯಾ ಫೌಂಡೇಶನ್ ಫಾರ್ ಆಟ್ಸ್ (IFA) ಲಾಭೋದ್ದೇಶವಿಲ್ಲದ, ದೇಶವ್ಯಾಪಿ ಕಾರ್ಯ ನಿರ್ವಹಿಸುವ, ಒಂದು ಸ್ವತಂತ್ರ, ಸಂಸ್ಥೆಯಾಗಿ 1993ರಲ್ಲಿ ಸ್ಥಾಪನೆಯಾಯಿತು. ಸಂಸ್ಥೆಯು 1995 ರಿಂದಲೂ ಕಲಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನೇಕ ಕಲಾ ಸಮ್ಮಿಳಿತ ಯೋಜನೆಗಳನ್ನು ಅನುಷ್ಟಾನ ಮಾಡುತ್ತಿದೆ. ಇದುವರೆಗೆ IFA ನಿಂದ 850ಕ್ಕಿಂತ ಹೆಚ್ಚು ಯೋಜನೆಗಳಿಗೆ ರೂ.38.65ಕೋಟಿ ಮೊತ್ತದ ಅನುದಾನ ನೀಡಲಾಗಿದೆ. ಈ ಯೋಜನೆಗಳ ಫಲವಾಗಿ ಹಲವು ಕೃತಿಗಳು, ಚಿತ್ರಣಗಳು, ಪ್ರದರ್ಶನಗಳು, ಆಟಗಳು, ವೆಬ್‌ಸೈಟ್‌ಗಳು ಮತ್ತು ಆರ್ಕೈವ್‌ಗಳು ಮೂಡಿಬಂದಿವೆ. ಇವುಗಳನ್ನು ಪ್ರದರ್ಶನಗಳು, ಚರ್ಚಾಕೂಟಗಳು, ಹಬ್ಬಗಳು ಮತ್ತು ಪ್ರದರ್ಶನಗಳ ಮೂಲಕ ಸಾರ್ವಜನಿಕ ವಲಯಕ್ಕೆ ತೆರೆದಿಡಲಾಗಿದೆ. IFA ಕಲೆಯು ವ್ಯಕ್ತಿಯ ಬದುಕು ಮತ್ತು ಸಮಾಜದ ಪ್ರಗತಿಗೆ ಅವಿಭಾಜ್ಯವೆಂದು ನಂಬಿದೆ.
ಇದು ನಮ್ಮ ಭೂತಕಾಲವನ್ನು ಪರಿಶೀಲಿಸಲು, ವರ್ತಮಾನವನ್ನು ಪ್ರಶ್ನಿಸಲು ಮತ್ತು ಭವಿಷ್ಯವನ್ನು ಕಲ್ಪಿಸಲು ವೈಜ್ಞಾನಿಕ ಚಿಂತನೆ, ಮನೋಭಾವಗಳನ್ನು ಮೂಡಿಸಲು ಸಹಕಾರಿಯಾಗಿದೆ. IFA ವಿಶ್ಲೇಷಣೆ, ಸಂಶೋಧನೆ, ಕಲೆಗಳ ಅಭ್ಯಾಸ, ಕಲಾ ಶಿಕ್ಷಣ, ಕಲೆ ಮತ್ತು ಸಂಗ್ರಹಾಲಯಗಳನ್ನು ಒಳಗೊಂಡ ಐದು ಪ್ರಮುಖ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.ಇದಕ್ಕೆನಮ್ಮ DSERT ಯ ಸಹಯೋಗವೂಇದೆ. ಆದರೂ. ಬಹುತೇಕ ಶಿಕ್ಷಕರಿಗೆ ಈ ಅದ್ಭುತ ಯೋಜನೆ ಅಪರಿಚಿತವಾಗಿಯೇ ಉಳಿದಿದೆ. ಅದಕ್ಕೆಂದೇ ಈ ಲೇಖನದ ಮೂಲಕ ಕಲಿಕೆಯನ್ನು ಕಟ್ಟಿಕೊಳ್ಳುವಲ್ಲಿನ ನನ್ನ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಾಸುತ್ತೇನೆ.
"ನೇಸರ ಬಾನಂಗಳದ ಬೆರಗು" ಯೋಜನೆಯು ಸೂರ್ಯನ ವೈಜ್ಞಾನಿಕ ಅಧ್ಯಯನ ಮತ್ತು ಸೃಜನಾತ್ಮಕ ಕಲಾತ್ಮಕ ಅಭಿವ್ಯಕ್ತಿಯನ್ನು ಒಂದಾಗಿ ಸೇರಿಸುವ ಅದ್ಭುತ ಪ್ರಯತ್ನವಾಗಿದ್ದು, ಈ ಯೋಜನೆಯಿಂದ ವಿಜ್ಞಾನ, ಕಲೆ, ಸಂಸ್ಕೃತಿ ಮತ್ತು ಸಮುದಾಯ ಭಾಗವಹಿಸುವಿಕೆಯನ್ನು ಒಂದೇ ವೇದಿಕೆಯಲ್ಲಿ ಹೇಗೆ ಸಾಧಿಸಬಹುದು ಎನ್ನುವುದನ್ನುನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇನೆ.
ಯೋಜನೆಯ ಮಹತ್ವ ಮತ್ತು ಉದ್ದೇಶಗಳು
ಸೂರ್ಯನ ವೈಜ್ಞಾನಿಕ ಅಧ್ಯಯನ ಹಾಗೂ ಸಮುದಾಯ ಭಾಗವಹಿಸುವಿಕೆ: ಸೂರ್ಯನ ಚಲನೆ, ಋತುಮಾನಗಳೊಂದಿಗಿನ ಸಂಬಂಧ, ಮತ್ತು ಗ್ರಹಣಗಳಂತಹ ಖಗೋಳ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳುವುದು. ಸಂಕ್ರಾಂತಿಹಬ್ಬ, ರಥಸಪ್ತಮಿ ಕುರಿತ ಮಾಹಿತಿ ಸಂಗ್ರಹಮಾಡಿ ಆಚರಣೆಗಳ ಹಿನ್ನಲೆಯನ್ನು, ವೈಜ್ಞಾನಿಕತೆಯನ್ನು ಅರ್ಥಮಾಡಿಕೊಳ್ಳುವುದು. ಸ್ಥಳೀಯ ಸಮುದಾಯ, ಕಲಾವಿದರು, ಮತ್ತು ವಿಜ್ಞಾನಿಗಳನ್ನು ಒಟ್ಟಿಗೆ ಸೇರಿಸಿ, ಜಾನಪದ ಕಲೆಗಳು ಮತ್ತು ವೈಜ್ಞಾನಿಕ ತತ್ವಗಳ ನಡುವಿನ ಸಂವಾದವನ್ನು ಪ್ರೋತ್ಸಾಹಿಸುವುದು ಮೂಲ ಉದ್ದೇಶ. ಈ ದಿಸೆಯಲ್ಲಿ ೬-೮ ನೇ ತರಗತಿಗಳ NCERT ವಿಜ್ಞಾನ ಪಠ್ಯ ಪುಸ್ತಕವಾದ " ಕುತೂಹಲ "ವನ್ನು ಓದಿ.
ಈ ಯೋಜನೆಯ ಸ್ಥೂಲ ರೂಪುರೇಷೆ ಹೀಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಬೃಹತ್ ವಿಜ್ಞಾನ ಮೇಳದ ಜೊತೆ ಆರಂಭಿಸಿದೆ.
ನೇಸರ ಬಾನಂಗಳದ ಬೆರಗು- ಕಲಾ ಸಮ್ಮಿಳಿತ ಬೃಹತ್ ವಿಜ್ಞಾನ ಮೇಳದಲ್ಲಿ ಸುತ್ತುಮುತ್ತಲಿನ ಶಾಲೆಗಳಿಂದ ಸುಮಾರು ೨ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ವೀಕ್ಷಿಸಿದರು.
೧೫ ತಿಂಗಳ ಅವಧಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಗ್ರಹಣಗಳು, ಸೂರ್ಯನ ಕಲೆಗಳು, ಮತ್ತು ನಕ್ಷತ್ರಗಳ ಬಗ್ಗೆ ತಿಳಿದುಕೊಳ್ಳಲು ಹಲವು ಚಟುವಟಿಕೆಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಸೂರ್ಯನ ಪರಿವಾರ ಕುರಿತು ಮಾಹಿತಿ, ವೀಡಿಯೋಗಳು ಸ್ಟೆಲೆರಿಯಂ, K̲star, Star tracker ಮೋಬೈಲ್ ಆಪ್ ಮೂಲಕ ಆಕಾಶಕಾಯಗಳ ಕುರಿತು ಮಾಹಿತಿ ನೀಡಿ ನಕ್ಷತ್ರವೀಕ್ಷಣೆಗೆ ಅಗತ್ಯ ವೇದಿಕೆ ಸಿದ್ಧಪಡಿಸಲಾಯಿತು. NEP ಆಧರಿತ ೬-೮ ತರಗತಿಗಳ ಹೊಸ ವಿಜ್ಞಾನ ಪಠ್ಯಪುಸ್ತಕಗಳಾದ “ಕುತೂಹಲ”ದಲ್ಲಿ ಖಗೋಳ ವಿಜ್ಞಾನಕ್ಕೆ ಸಾಕಷ್ಟು ಅವಕಾಶನೀಡಲಾಗಿದೆ. ಈ ನಿಟ್ಟಿನಲ್ಲಿ ಆಕಾಶ ವೀಕ್ಷಣೆಯ ಹವ್ಯಾಸವನ್ನು ಮೂಡಿಸುವ ದೃಷ್ಟಿಯಿಂದಲೂ ಸ್ಟಾರ್ ಗೇಜಿಂಗ್ ಹಮ್ಮಿಕೊಳ್ಳಲಾಯಿತು. ISPF ನ ಹಿರಿಯವಿಜ್ಞಾನಿ, ಖಗೋಳ ಶಾಸ್ತ್ರಜ್ಞರಾದ ಡಾ. ಪ್ರೊಚೇತ ಸರ್, ಉಸಾಮ ಹಾಗೂ ನಂದನ್ ಅವರ ಸಹಕಾರದೊಂದಿಗೆ ನಕ್ಷತ್ರ ವೀಕ್ಷಣೆಯಲ್ಲಿ ಪಾಲ್ಗೊಂಡೆ. ದಿನಾಂಕ 17-02-2025ರ ಸಂಜೆ 5 ರಿಂದ ಆರಂಭಗೊಂಡ ವೀಕ್ಷಣಾ ಚಟುವಟಿಕೆಗಳು ತಡರಾತ್ರಿ 11ರವರೆಗೂ ನಡೆದವು. ಸುಮಾರು 2ಲಕ್ಷ ರೂ ಮೌಲ್ಯದ ಎರಡು ಖಗೋಳ ದರ್ಶಕಗಳನ್ನು ಬಳಸಿ ಸೌರಮಂಡಲದ ಗ್ರಹಗಳು–ಗುರು, ಶನಿಯ ಸುಂದರ ಉಂಗುರಗಳನ್ನು ವೀಕ್ಷಿಸಿದೆವು. ಚಂದ್ರನಂತೆ ಗೋಚರಿಸಿದ ಶುಕ್ರ ನಮಗೆಲ್ಲರಿಗೂ ಅಚ್ಚರಿಯನ್ನುಂಟುಮಾಡಿತು !!! ಗುರು ಮತ್ತು ಗುರುವಿನ ೪ ಉಪಗ್ರಹಗಳು, ಚಂದ್ರ, ವಿವಿಧ ನಕ್ಷತ್ರಪುಂಜಗಳನ್ನು ವೀಕ್ಷಿಸಿದೆವು. ವಿವಿಧ ಬಗೆಯ ಟೆಲಿಸ್ಕೋಪ್‌ಗಳು ಮತ್ತು ಅವುಗಳ ಕಾರ್ಯನಿರ್ವಹಣೆ ಕುರಿತು ವಿವರಣೆ ನೀಡಲಾಯಿತು. ಮಕ್ಕಳ ಮತ್ತು ಪೋಷಕರ ಹಲವಾರು ಕುತೂಹಲಕರ ಪ್ರಶ್ನೆಗಳಿಗೆ ಉತ್ತರ ನೀಡಲಾಯಿತು. ಕಲಿಕೆಯ ಅದ್ಭುತ ಅವಕಾಶ ವಿದ್ಯಾರ್ಥಿಗಳಿಗೆ ದೊರಕಿತು. ೨೫ಕ್ಕೂ ಹೆಚ್ಚಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರೂ ಸೇರಿದಂತೆ ಸುಮಾರು ಮುನ್ನೂರಕ್ಕೂ ಹೆಚ್ಚು ಜನರು ನಕ್ಷತ್ರ ವೀಕ್ಷಣೆಯಲ್ಲಿ ಪಾಲ್ಗೊಂಡರು ಹಾಗೂ ತಮ್ಮಅನುಭವಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಆಕಾಶಕಾಯಗಳನ್ನು ಗುರುತಿಸಲು ಮಕ್ಕಳಿಗೆ ಮಾರ್ಗದರ್ಶನ ನೀಡಿ ನಕ್ಷತ್ರವೀಕ್ಷಣೆಯನ್ನು ಸ್ಮರಣೀಯವಾಗಿಸಿದರು.
ಕಲಾ ಮತ್ತು ಸಾಂಸ್ಕೃತಿಕ ಸಂಯೋಜನೆಗಾಗಿ ಸೂರ್ಯನನ್ನು ಕೇಂದ್ರವಾಗಿ ಹೊಂದಿರುವ ಕವನಗಳು, ನೃತ್ಯ, ನಾಟಕ, ಮತ್ತು ಜಾನಪದ ಕಥೆಗಳ ಮೂಲಕ ಸೃಜನಶೀಲ ಅಭಿವ್ಯಕ್ತಿಗೆ ಪ್ರೋತ್ಸಾಹ ನೀಡಿದವು. ಸಾಂಪ್ರದಾಯಿಕ ಕಲೆಗಳನ್ನು ಆಧುನಿಕ ವಿಜ್ಞಾನದೊಂದಿಗೆ ಹೊಂದಿಸುವ ಪ್ರಯೋಗಗಳನ್ನೂ ನಡೆಸಲಾಯಿತು.
ನೆರಳು –ಬೆಳಕಿನಾಟದ ಕುರಿತ ಮೈಮ್ ಕಿರು ನಾಟಕ ಪ್ರದರ್ಶನ
ವಿದ್ಯಾರ್ಥಿಗಳಿಗೆ ಕಳೆದ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಕಥಾರಚನೆ ಕುರಿತಂತೆ ತರಗತಿಯ ಸಂದರ್ಭದಲ್ಲಿ, ಹಾಗೂ ಕೆಲವೊಮ್ಮೆ ಶಾಲಾ ಅವಧಿಯ ನಂತರ, ರಜಾದಿನಗಳಲ್ಲಿ ಕಾರ್ಯಾಗಾರಗಳನ್ನು ನಡೆಸಿ ಸೃಜನಶೀಲ ಬರಹಗಳು, ಕಥೆ-ಕವನ ರಚೆನೆಗಳ ಕುರಿತು ಮಾಹಿತಿ ನೀಡಲಾಯಿತು. ಮಕ್ಕಳು ಬರೆದ, ಕೇಳಿದ, ಸಂಗ್ರಹಿಸಿದಕಥೆ, ಕವನಗಳು ಮತ್ತಿತರ ಸಂಗ್ರಹಿತ ಮಾಹಿತಿಗಳನ್ನು ಕ್ರೋಡೀಕರಿಸಲಾಯಿತು. ಈ ಮಾಹಿತಿಗಳನ್ನುಟೈಪ್ ಮಾಡಿ ಸೂಕ್ತಚಿತ್ರಗಳೊಂದಿಗೆ ಕಿರುಹೊತ್ತಗೆಯ ರೂಪಕ್ಕೆ ತರಲಾಯಿತು.
ರಂಗ ಮಿಡಿತದ ರಂಗಕರ್ಮಿ ಅರುಣ್ ಅವರ ಮಾರ್ಗದರ್ಶನದಲ್ಲಿ ಮಕ್ಕಳು ತಾವೇ ಕಪ್ಪು ಕಾಗದವನ್ನು ಕತ್ತರಿಸಿ ಪಾತ್ರಗಳನ್ನು ಸಿದ್ಧಪಡಿಸಿಕೊಂಡರು. ಗಣಿತದ ವಿವಿಧ ಆಕೃತಿಗಳನ್ನು ರಚಿಸಿ ಅದಕ್ಕೆ ಕೈ ಕಾಲುಗಳನ್ನು ದಾರ ಬಳಸಿ ಕಟ್ಟಿದರು. ಕಡ್ಡಿ ಜೋಡಿಸಿ, ಸೂತ್ರದ ಗೊಂಬೆಯಂತೆ ಸಿದ್ದಪಡಿಸಿಕೊಂಡರು. ತಾವೇ ಡೈಲಾಗ್ ಬರೆದುಕೊಂಡು ದ್ವನಿ ನೀಡಿ ರಿಹರ್ಸಲ್ ಮಾಡಿ ನೇರ್ಪುಗೊಳಿಸಿಕೊಂಡರು. ಬಿಳಿ ಪಂಚೆಯನ್ನೇ ಬೆಳ್ಳಿ ಪರದೆಯಾಗಿಸಿಕೊಂಡು, ಪ್ರೊಜೆಕ್ಟರ್ ಬೆಳಕನ್ನು ಬಳಸಿ ಪ್ರದರ್ಶನ ಮಾಡುತ್ತಾ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಭಾವ ಅಭಿವ್ಯಕ್ತಿ ಸಾದರ ಪಡಿಸುತ್ತ ಗೊಂಬೆಗಳಿಗೆ ಉಸಿರು ನೀಡುತ್ತಾ ಅರಳು ಕಂಗಳಿಂದ ನೆರಳು-ಬೆಳಕಿನ ಸೋಜಿಗವನ್ನು ಅರಿಯುತ್ತ ತಮ್ಮ ಕಲಾ ಸಂಮಿಳಿತ ಕಲಿಕೆಯನ್ನು ಹರಳುಗಟ್ಟಿಸಿಕೊಂಡರು.
ಮಕ್ಕಳು ತಾವು ಮಾಡಿದ ಗೊಂಬೆಗಳ ಜೊತೆ ಮಾತನಾಡಿದವು. ತಮ್ಮದೇ ಲೋಕದಲ್ಲಿ ವಿಹರಿಸುತ್ತ ತಮ್ಮ ಗೊಂಬೆಗಳಿಗೆ ತಾವೇ ಧ್ವನಿಯಾದರು. ನೆರಳು ಬೆಳಕಿನಾಟವನ್ನು ಅನುಭವಿಸಿದರು. ಪಾತ್ರವಾದರು. ಆಸ್ವಾದಿಸಿದರು. ಎಳೆಯ ಬದುಕಿನ ಅಪೂರ್ವ ಅನುಭವವನ್ನು ಕಟ್ಟಿಕೊಂಡರು. ಸನನಗೂ ಇದೊಂದು ಹೊಸ ಕಲಿಕೆಯ ತಾಜಾ ಅನುಭವ ನೀಡಿತು.
ಕಾರ್ಯಾಗಾರದ ವಿವಿಧ ಚಟುವಟಿಕೆಗಳವಿವರ.
Shadow puppetry Workshop:
0. Day : 1 Opinions :
1. Big bang :
2. Solar System :
3. World and Sun :
4. Sun and Water :
5. Rabbit on the Moon :
6. 3 Days Opinions :
ನೇಸರ-ಬಾನಂಗಳದ ಬೆರಗು ಯೋಜನೆಯ ಮುಂದುವರೆದ ಕಲಿಕೆಗಾಗಿ ವಿದ್ಯಾರ್ಥಿಗಳನ್ನು ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಕರೆದೊಯ್ದು ,ಸೂರ್ಯನ ರಚನೆ, ಗ್ರಹಣ, ಗ್ರಹ,ಉಪಗ್ರಹ, ಭಾರತದ ಕೃತಕ ಉಪಗ್ರಹಗಳು, ಇಸ್ರೋ ಸಾಧನೆಯ ಕುರಿತು ಮಾಹಿತಿ ಹಾಗೂ ಡಾಕ್ಯುಮೆಂಟರಿ ವೀಕ್ಷಣೆ ಏರ್ಪಡಿಸಿ ಭಾರತದ ಸಾಧನೆಯ ಕುರಿತು ಮಾಹಿತಿ ನೀಡಲಾಯಿತು. ಅಲ್ಲಿ ಹಲವಾರು ವೈಜ್ಞಾನಿಕ ಆಟಿಕೆಗಳು, ವಿವಿಧ ಗ್ರಹಗಳಲ್ಲಿ ನಮ್ಮ ತೂಕದಲ್ಲಾಗುವ ಬದಲಾವಣೆ, ಚಂದ್ರಯಾನ ಮೊದಲಾದ ಮಾಹಿತಿ ನೀಡಲಾಯಿತು. ಸೌರವ್ಯೂಹದ ಕುರಿತು ಸಿನಿಮ, ಡಾಕ್ಯುಮೆಂಟರಿಗಳನ್ನು ವೀಕ್ಷಣೆ ಮಾಡಲಾಯಿತು.
ನೇಸರ- ಬಾನಂಗಳದ ಬೆರಗು ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾದ ವಿವಿಧ ಚಟುವಟಿಕೆಗಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳಗಿಸುವಂತಿದ್ದು ಅವರಿಗೆ ವಿದ್ಯಾರ್ಥಿ ಬದುಕಿನ ಅತ್ಯುತ್ತಮ ಅವಕಾಶವಾಗಿದ್ದವು. ಇವು ಅವರ ಕಲಿಕೆಯನ್ನು ಕಟ್ಟಿಕೊಳ್ಳುವಲ್ಲಿ ನೆರವಾಗಿವೆ. ಅವರಲ್ಲಿ ಹೊಸದನ್ನು ಕಲಿಯುವ ಅವಕಾಶ, ಮಾಹಿತಿ ಸಂಗ್ರಹಿಸುವ, ತಮ್ಮ ಸ್ನೇಹಿತರ ಎದುರು ಧೈರ್ಯದಿಂದ ಮಾತನಾಡುವಂತೆ ಆತ್ಮವಿಶ್ವಾಸ ನೀಡಿದ್ದು ಸಂತಸದಿಂದ ತಮ್ಮ ಅಭಿಪ್ರಾಯಗಳನ್ನು ನನ್ನೊಡನೆ ಹಂಚಿಕೊಂಡಿದ್ದಾರೆ .
ಶಿಕ್ಷಕನಾಗಿ ಸಾಂಪ್ರದಾಯಿಕ ಬೋಧನಾ ವಿಧಾನದಿಂದ ಹೊಸತನ್ನು ಅನ್ವೇಷಿಸುವ ಅವಕಾಶ ನನಗೆ ದೊರೆಯಿತು. ಕಲೆಯನ್ನು ವಿಜ್ಞಾನದ ಪರಿಕಲ್ಪನೆಗಳೊಂದಿಗೆ ಹೇಗೆ ಮಿಳಿತಗೊಳಿಸಬಹುದು ಎನ್ನುವ ಹೊಸ ಕಲಿಕೆ ನನ್ನದಾಯಿತು, ಹೊಸ ಕಾರ್ಯಕ್ರಮಗಳನ್ನು ಪಠ್ಯಕ್ಕೆ ಪೂರಕವಾಗಿ ಅಳವಡಿಸಿಕೊಳ್ಳುವ ತಂತ್ರಗಳನ್ನು ಮೈಗೂಡಿಸಿಕೊಳ್ಳುವ ಅವಕಾಶವನ್ನು ಒದಗಿಸಿತು. ಸಮಾಜದ ವಿವಿಧ ಪ್ರತಿಭಾವಂತರು, ಕಲಾವಿದರು, ಅಧಿಕಾರಿಗಳು ಮೊದಲಾದ ವ್ಯಕ್ತಿಗಳೊಂದಿಗೆ ಬೆರೆಯುವ ಅವಕಾಶದೊಂದಿಗೆ ಹೊಸ ಬಗೆಯ ಅನ್ವೇಷಣೆ, ಶಾಲೆಯ ಎಲ್ಲ ಸಹೋದ್ಯೋಗಿಗಳ ಜೊತೆಗಿನ ಉತ್ತಮ ಹೊಂದಾಣಿಕೆ ಹಾಗೂ ಅವರ ವೃತ್ತಿಪರ ಕೌಶಲಗಳ ಸದ್ಬಳಕೆ ಮಾಡುವ ಅವಕಾಶ ದೊರಕಿತು. ಇದಕ್ಕಾಗಿ ನಾನು ಸಂಸ್ಥೆಗೆ ಚಿರಋಣಿ.
ಕಲಿಕೆ ಕಟ್ಟಿಕೊಳ್ಳುವ ವಿಧಾನವೊಂದರ ಮೇಲೆ ಸಹಭಾಗಿತ್ವ ಮತ್ತು ಮುಕ್ತ ಅವಕಾಶಗಳು ಮಹತ್ತರ ಪಾತ್ರ ವಹಿಸುತ್ತವೆ. ಕಲಿಕಾರ್ಥಿಗಳಲ್ಲಿ ಜವಾಬ್ದಾರಿ, ಸಾಧನೆ ಮಾಡಬೇಕೆನ್ನುವ ಹಪಾಹಪಿಯನ್ನು ರೂಢಿಗತಗೊಳಿಸಲು ಸ್ಫೂರ್ತಿ ನೀಡುತ್ತವೆ. ವೈಯಕ್ತಿಕವಾಗಿ ನನ್ನ ಚೇತೋಹಾರಿ ಅನುಭವ ಸುಗಮ ಗಾರಿಕೆಗೆ ಹೊಸ ಹೊಳಹನ್ನು ನೀಡಿದವು.
ಆಸಕ್ತರು ಈ ಕೆಳಗಿನ ಅಂತರ ಜಾಲತಾಣಕ್ಕೆ ಭೇಟಿ. ನೀಡಿ ಮಾಹಿತಿ ಪಡೆದುಕೊಳ್ಳಬಹುದು. ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಕಲೆಯನ್ನು ಯಥೋಚಿತವಾಗಿ ಬಳಸಿಕೊಳ್ಳಬಹುದು. https://indiaifa.org/grants-projects/ramachandra-bhat-bg.html
ನಿಮ್ಮ ಪ್ರಯೋಗದಲ್ಲಿ ನಾನೂ ಜೊತೆಯಾಗಿದ್ದು - ಯಾರೂ ಮಾಡದ ಸೂರ್ಯಯಾನ ನಡೆಸಿದ್ದು ವಯಕ್ತಿಕವಾಗಿ ತೃಪ್ತಿ ತಂದಿದೆ. ಧನ್ಯವಾದಗಳ ಸಹಿತ ಅಭಿನಂದನೆಗಳು ಸರ್
ReplyDeleteನಿಮ್ಮ ಪ್ರೋತ್ಸಾಹ, ಮಾರ್ಗದರ್ಶನಗಳಿಗೆ ಆಭಾರಿ ಸರ್
Deleteಮಕ್ಕಳ ದೃಷ್ಟಿಯಿಂದಲೂ ಚೇತೋಹಾರಿ ಅನುಭವ ಸರ್
ಸುಂದರವಾದ ಯೋಜನೆ, ಮಕ್ಕಳು ಭಾಗ್ಯವಂತರು. ನಿಮ್ಮ ಅನುಭವಗಳನ್ನು ಒಮ್ಮೆ ವಿಸ್ತಾರವಾಗಿ ಕೇಳಬೇಕು ಎಂಬಾಸೆ ಇದೆ
ReplyDelete