ಲೇಖನ: ಬಸವರಾಜ ಎಮ್ ಯರಗುಪ್ಪಿ
ಸಹ ಶಿಕ್ಷಕರು, ಸ ಕಿ ಪ್ರಾ ಶಾಲೆ ಮುಕ್ತಿನಗರ,ಲಕ್ಷ್ಮೇಶ್ವರ
ದೂರವಾಣಿ 9742193758
ಮಿಂಚಂಚೆ basu.ygp@gmail.com
ಆಗಸ್ಟ್ 10,2025 ರಂದು ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ ತನ್ನಿಮಿತ್ತ ವಿಶೇಷ ಲೇಖನ.
"ಜೈವಿಕ ಇಂಧನಗಳು ದೇಶದ್ಯಾಂತ ಮತ್ತು ಪ್ರಪಂಚದಾದ್ಯಂತ ಶಕ್ತಿಯ ಭವಿಷ್ಯಗಳಾಗಿವೆ"ಎಂದು ರಾಡ್ ಬ್ಲಾಗೋಜೆವಿಚ್ ಹೇಳಿದ್ದು ನಿಜ. ಏಕೆಂದರೆ ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಜೈವಿಕ ಇಂಧನ ಅಭಿವೃದ್ಧಿ ಪಡಿಸಲು ಜೈವಿಕ ಸಂಪನ್ಮೂಲಗಳ ಕುರಿತಾಗಿ ತಂತ್ರಜ್ಞಾನ ಬಳಕೆಯ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.ಉತ್ತಮ ಜಗತ್ತಿಗೆ ಜೈವಿಕ ಇಂಧನಗಳತ್ತ ಸಾಗುವಂತೆ ಜಗತ್ತಿನ ಜನರನ್ನು ವಿವೇಕರನ್ನಾಗಿ ಮಾಡುವುದು ಮತ್ತು ವಿಶೇಷವಾಗಿ ತಮ್ಮ ದೇಶಗಳ ಮೇಲೆ ಇಂಧನ ಅವಲಂಬಿತವಾಗಿರುವ ಹೆಚ್ಚಿನ ದೇಶಗಳು ಸ್ವತಂತ್ರವಾಗಿ ಜೈವಿಕ ಇಂಧನ ಶಕ್ತಿ ಅಭಿವೃದ್ಧಿ ಪಡಿಸಲು ಹಾಗೂ ಜೈವಿಕ ಇಂಧನಗಳ ಬಳಕೆ ಮತ್ತು ಇತರ ಪಳೆಯುಳಿಕೆ ರಹಿತ ಶಕ್ತಿಯ ಮೂಲಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ಪ್ರತಿ ವರ್ಷ ಆಗಸ್ಟ್ 10 ರಂದು "ಜೈವಿಕ ಇಂಧನ" ದಿನವನ್ನಾಗಿ ಆಚರಿಸಲಾಗುತ್ತದೆ.
ವಿಶ್ವ ಜೈವಿಕ ಇಂಧನ ದಿನದ ಇತಿಹಾಸ:
ಮೊದಲ ಬಾರಿಗೆ ವಿಶ್ವ ಜೈವಿಕ ಇಂಧನ ದಿನವನ್ನು ಆಗಸ್ಟ್ 10, 2015 ರಲ್ಲಿ ಆಚರಿಸಲಾಯಿತು. ಈ ದಿನವನ್ನು ಭಾರತೀಯ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಭಾರತದಲ್ಲಿ ಜೈವಿಕ ಇಂಧನ ಅಭಿವೃದ್ಧಿ ಪಡಿಸಲು ಅವಿರತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.
ಜೈವಿಕ ಇಂಧನ ಮಹತ್ವ
ಸಸ್ಯ ಬೀಜಗಳು, ಕೃಷಿತ್ಯಾಜ್ಯ, ಪ್ರಾಣಿಗಳಕೊಬ್ಬು, ಆಮ್ಲಜನಕ ರಹಿತ ಜೀರ್ಣಕ್ರಿಯೆ ಮೊದಲಾದವುಗಳಿಂದ ಪಡೆದ ಇಂಧನವನ್ನು ಜೈವಿಕ ಇಂಧನ ಎಂದು ಕರೆಯಲಾಗಿದೆ. ಆಧುನಿಕ ಜಗತ್ತಿನ ಅತ್ಯುತ್ತಮ ದಿನನಿತ್ಯದ ಬಳಕೆಯಲ್ಲಿರುವ ವಸ್ತುಗಳಲ್ಲಿ ಇಂಧನವೂ ಒಂದು. ಬಳಕೆ ಹೆಚ್ಚಾದಂತೆಲ್ಲಾ ತನ್ನ ಲಭ್ಯತೆಯು ಕೊರತೆಯಾಗುತ್ತಾ ಬರುತಿದೆ.
ಪ್ಲಾಸ್ಟಿಕ್, ಪುರಸಭೆಯ ತ್ಯಾಜ್ಯ, ಅರಣ್ಯ ತ್ಯಾಜ್ಯ, ಕೃಷಿ ತ್ಯಾಜ್ಯ, ಹೆಚ್ಚುವರಿ ಧಾನ್ಯಗಳಿಂದ ಜೈವಿಕ ಇಂಧನಗಳನ್ನು ಉತ್ಪಾದಿಸಬಹುದಾಗಿದ್ದು, ಇದು ದೇಶವು ನಿಗದಿತ ಗುರಿ ತಲುಪಲು ಸಹಕಾರಿ. ಜೈವಿಕ ಇಂಧನವು ಶಕ್ತಿಯ ಪರ್ಯಾಯವಾಗಿದ್ದು ಇದು ರೈತರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಆಮದು ಕಡಿಮೆಮಾಡುತ್ತದೆ . ಅಲ್ಲದೆ ಉದ್ಯೋಗ ಸೃಷ್ಟಿ ಹೆಚ್ಚುತ್ತದೆ. ಹಾಗಾಗಿ ತ್ಯಾಜ್ಯವು ಸಂಪತ್ತಿನ ಸೃಷ್ಟಿಯ ರೂಪವಾಗಿದೆ. ಆದ್ದರಿಂದ, ಸರ್ಕಾರಗಳು ವಿವಿಧ ವಿಧಾನಗಳ ಮೂಲಕ ಜೈವಿಕ ಇಂಧನ ಉತ್ಪಾದನೆಯತ್ತ ಗಮನ ಹರಿಸುತ್ತಿವೆ ಮತ್ತು ಬಗ್ಗೆ ಜಾಗೃತಿ ಮೂಡಿಸುತ್ತಿವೆ.
ಜೈವಿಕ ಇಂಧನ ಮೂಲಗಳು:
ಹೊಂಗೆ, ಜತ್ರೋಪ, ಬೇವು, ಹಿಪ್ಪೆ, ಸಿಮರೂಬ, ಅಮೂರ, ಸುರಹೊನ್ನೆ ಇತರೆ ಎಣ್ಣೆಕಾಳು ಬೆಳೆಗಳನ್ನು ರೈತರು ಅನುಕೂಲಕ್ಕೆ ತಕ್ಕಂತೆ ಬೆಳೆಯಬಹುದು.ಸಸ್ಯಮೂಲ ಎಣ್ಣೆ ಹಾಗೂ ಪ್ರಾಣಿಜನ್ಯ ಕೊಬ್ಬಿನಿಂದ ಗ್ಲಿಸರಿನ್ ಬೇರ್ಪಡಿಸಿ ಬಯೋಡೀಸೆಲ್ ತಯಾರಿಸಲಾಗುತ್ತಿದೆ.
ಮೊದಲಿನಿಂದಲೂ ನಾವು ಇಂಧನಕ್ಕಾಗಿ ಗಲ್ಫ್ ರಾಷ್ಟ್ರಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದು, ಈ ಕಚ್ಚಾ ತೈಲಕ್ಕಾಗಿ ಡಾಲರ್‌ಗಳಲ್ಲಿ ಪಾವತಿಸಬೇಕಾಗುತ್ತದೆ. ಹಾಗಾಗಿ ಇಂಧನಕ್ಕೆ ಪರ್ಯಾಯವನ್ನು ಕಂಡುಕೊಳ್ಳಲು ಪ್ರಪಂಚದಾದ್ಯಂತ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈಗ ಬ್ಯಾಟರಿ ಚಾಲಿತ ಕಾರುಗಳ ಉತ್ಪಾದನೆ ಆರಂಭವಾಗಿದ್ದು, ಇದು ಜೈವಿಕ ಇಂಧನಗಳಿಗೆ ಪರ್ಯಾಯವಾಗಿದೆ. ಈ ಜೈವಿಕ ಇಂಧನವು ಕಚ್ಚಾ ತೈಲ ಆಮದು ವೆಚ್ಚವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವುದಲ್ಲದೆ ಪರಿಸರಕ್ಕೆ ಪೂರಕವಾಗಿದೆ. ಇದರಿಂದ ಮಾಲಿನ್ಯ ಕಡಿಮೆ ಯಾಗುತ್ತದೆ, ಉದ್ಯೋಗ ಸೃಷ್ಟಿ ಹೆಚ್ಚಾಗುತ್ತದೆ. ಆದ್ದರಿಂದ, ಭಾರತದಂತಹ ದೇಶಕ್ಕೆ ಜೈವಿಕ ಇಂಧನ ಬಹಳ ಮುಖ್ಯ.
"ಹಸಿರು ಇದ್ದರೆ ನಮ್ಮಯ ಉಸಿರು" ಎಂಬುದು ಕೇವಲ ಧೈಯ ವಾಕ್ಯವಲ್ಲ ಅದು ಒಂದು ಜೀವನ ಮಾರ್ಗ. ಮರ-ಗಿಡಗಳಿಂದಲೇ ಸಮಸ್ತ ಜೀವಿಗಳ ಬದುಕು. ಆಧುನಿಕತೆಯ ಹಾದಿಯಲ್ಲಿ ಮರಗಿಡಗಳಿಂದ ಆಗುವ ಅನುಕೂಲಗಳನ್ನು ಕೆಲ ಕಾಲ ಮರೆತ ನಾವು ಇದೀಗ ಪರಿಸರದೆಡೆಗೆ ಮತ್ತೆ ನಡೆಯುತ್ತಿದ್ದೇವೆ.ಇಂಧನ ಕೊರತೆಯು ನಮ್ಮ ರಾಜ್ಯದ ಅಭಿವೃದ್ಧಿ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಜೊತೆಗೆ ಇಂಧನದ ಬೆಲೆ ಏರುತ್ತಲೇ ಇದೆ. ಆದುದರಿಂದ ಪರ್ಯಾಯ ಇಂಧನ ಉತ್ಪಾದನೆ ಈಗ ನಮ್ಮ ಮುಂದಿರುವ ಸವಾಲು, ಈ ಸವಾಲನ್ನು ಸಮರ್ಥವಾಗಿ ಎದುರಿಸಬೇಕಾದರೆ 'ಜೈವಿಕ ಇಂಧನ" ಉತ್ಪಾದನೆಗೆ ಒತ್ತು ನೀಡುವುದು ಅನಿವಾರ್ಯ.
ಇದಕ್ಕೆ ಪೂರಕವೆಂಬಂತೆ ಕರ್ನಾಟಕದ ಜೈವಿಕ ಇಂಧನ ಕಾರ್ಯಪಡೆ "ಹಸಿರು ಹೊನ್ನು" ಕೈಪಿಡಿಯನ್ನು ಹೊರತರುತ್ತಿದೆ. ಇದರಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬೆಳೆಸಬಲ್ಲ ಜೈವಿಕ ಇಂಧನ ಕೃಷಿ ಬಗ್ಗೆ ವಿವಿಧ ಇಂಧನ ಬೆಳೆಗಳ ಬಗ್ಗೆ ಮೌಲ್ಯವರ್ಧನೆ, ಮಾರುಕಟ್ಟೆ ಹಾಗೂ ಅನುಸರಿಸಬೇಕಿರುವ ಕ್ರಮಗಳ ಕುರಿತು ಸಾಕಷ್ಟು ಮಾಹಿತಿ ಲಭ್ಯವಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಬಹುದು. ಕರ್ನಾಟಕ ಕೃಷಿಭೂಮಿಯಲ್ಲಿ, ಬೇಲಿ ಹಾಗೂ ಬದುಗಳಲ್ಲಿ ಜೈವಿಕ ಇಂಧನ
ಸಸಿಗಳನ್ನು ಬೆಳೆಸುವ ಯೋಜನೆಯೊಂದನ್ನು ಜಾರಿಗೊಳಿಸಿದೆ. ಇದಕ್ಕೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುದಾನವನ್ನು ಬಳಸಿಕೊಳ್ಳುತ್ತಿರುವುದು ಶ್ಲಾಘನೀಯ.
ಜೈವಿಕ ಇಂಧನ ಬಳಕೆಯಿಂದ ಆಗುವ ಪ್ರಯೊಜನಗಳು: ನವೀಕರಿಸಬಹುದಾದ ಇಂಧನದ ಮೂಲವಾಗಿದೆ.
ಕಡಿಮೆ ಇಂಗಾಲದ ಹೊರಸೂಸುವಿಕೆ: ಪಳೆಯುಳಿಕೆ ಇಂಧನಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆಮಾಡಬಹುದು.
ಬಯೋಇಥೆನಾಲ್ ಮತ್ತು ಜೈವಿಕ ಡೀಸೆಲ್‌ನಂತಹ ಜೈವಿಕ ಇಂಧನಗಳನ್ನು ಕಾರುಗಳು ಮತ್ತು ಬಸ್‌ಗಳಂತಹ ವಾಹನಗಳಿಗೆ ಸಾಂಪ್ರದಾಯಿಕ ಇಂಧನ ಮೂಲಗಳಿಗೆ ಪರ್ಯಾಯವಾಗಿ ಅಥವಾ ಸಂಯೋಜಕವಾಗಿ ಬಳಸಬಹುದು. ಈ ಪರ್ಯಾಯಗಳು ಇಂಧನ ದಕ್ಷತೆಯನ್ನು ಹೆಚ್ಚಿಸುವುದಲ್ಲದೆ, ಅವು ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತವೆ.
ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಇಂಧನ ಮತ್ತು ಸಾರಿಗೆ ವಲಯಗಳಲ್ಲಿ ಜೈವಿಕ ಇಂಧನದ ಬಳಕೆಯಿಂದ ಮಾಲಿನ್ಯ ನಿಯಂತ್ರಣ ಮತ್ತು ಆರ್ಥಿಕತೆ ಸುಧಾರಿಸುತ್ತದೆ.
ಒಟ್ಟಾರೆಯಾಗಿ ಜೈವಿಕ ಇಂಧನಗಳಲ್ಲಿ ತಂತ್ರಜ್ಞಾನ ಆಧುನೀಕರಣವನ್ನು ಉತ್ತೇಜಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಇದು ಪರಿಸರ ಸ್ನೇಹಿ ಶಕ್ತಿ ಉತ್ಪಾದನೆ ಮತ್ತು ಉದ್ಯೋಗ ಅವಕಾಶಗಳನ್ನು ಹೆಚ್ಚಿಸಬಹುದು. ಹೀಗಾಗಿ ಜೈವಿಕ ಇಂಧನ ಆರ್ಥಿಕತೆ ಮತ್ತು ಬಲವರ್ಧನೆಯು ಭಾರತಕ್ಕೆ ಇಂಧನ ಭದ್ರತೆ ರಚಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ.
ಕೊನೆಯ ಮಾತು
ನಾವು ಹೆಚ್ಚು ಜೈವಿಕ ಇಂಧನವನ್ನು ಮತ್ತು ಕಡಿಮೆ ಪಳೆಯುಳಿಕೆ ಇಂಧನವನ್ನು ಬಳಸಿದರೆ ಜಗತ್ತು ಬದುಕಲು ಉತ್ತಮ ಸ್ಥಳವಾಗುತ್ತದೆ.
ಎಲ್ಲರಿಗೂ ಜೈವಿಕ ಇಂಧನ ದಿನದ ಶುಭಾಶಯಗಳು.
No comments:
Post a Comment