ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Monday, August 4, 2025

ಬೆಟ್ಟದ ಹೂವು

 ಬೆಟ್ಟದ ಹೂವು

                                        

                     ಲೇಖಕ: ಶ್ರೀ ಕೃಷ್ಣ ಚೈತನ್ಯ

                        ಶಿಕ್ಷಕ ಹಾಗೂ ವನ್ಯಜೀವಿ ತಜ್ಞ

ನಾನು ಕಾಲೇಜಿನ ದಿನದಲ್ಲಿದ್ದಾಗ ನೋಡಿದ, ಪುನೀತ್‌ ರಾಜ್‌ಕುಮಾರ್ ನಟಿಸಿದ ಒಂದು ಅದ್ಭುತ, ಸರಳ ಮತ್ತು ಸುಂದರ ಮಕ್ಕಳ ಚಿತ್ರ ಇದು. ಅದೂ, ಕಪ್ಪು-ಬಿಳುಪು ಟಿ.ವಿಯಲ್ಲಿ ! ಬಡತನ ಮತ್ತು ದಿಕ್ಕಿಲ್ಲದ ಬಾಲಕನ ಬದುಕು, ಕಾಸು ಕೂಡಿಸಿಕೊಂಡು ರಾಮಾಯಣ ಪುಸ್ತಕ ತೆಗೆದುಕೊಳ್ಳುವ, ಸ್ಟರ್ಲಿಂಗ್‌ ಮೇಡಂಗೆ ಬೆಟ್ಟದಲ್ಲಿ ಬೆಳೆದಿರುವ ಎತ್ತರದ ಮರದಲ್ಲಿ ಬೆಳೆದಿರುವ ಬೆಟ್ಟದ ಹೂ ತಂದು ಕೊಡುವ ಆತನ ಅಭಿನಯ ಇಂದಿಗೂ ಮನಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ. ನಾನೀಗ ಕಥೆ ಹೇಳಹೊರಟಿರುವುದು ಅದೇ ಬೆಟ್ಟದ ಹೂವೆಂದು ಕರೆಯಲಾಗುವ ಆಕರ್ಷಕ, ಮನಮೋಹಕ ಸೀತೆ ಹೂ ಅಥವಾ ಕಾಡಿನ ಆರ್ಕಿಡ್‌ ಹೂವಿನ ಬಗೆಗೆ. ಅಂದು ನಾನು ನೋಡಿರದ ಹೂವಿನ ಬಗ್ಗೆ ತಿಳಿಯುವ ಕುತೂಹಲ ಬಂದದ್ದು ಮಲೆನಾಡಿಗೆ ಬಂದ ನಂತರ. ಕೊಡಗಿನಲ್ಲಿ ಹೇಳಿ-ಕೇಳಿ ಗಾಳಿ, ಮಳೆ, ಹೆಚ್ಚು. ಆಗಾಗ್ಗೆ ಬೀಸುವ ಬಾರಿ ಗಾಳಿ-ಮಳೆಗೆ ಬುಡಮೇಲಾಗುವ ಮರಗಳನ್ನು ಗಮನಿಸಿ, ಅದರಲ್ಲಿದ್ದ ಅಪ್ಪು ಸಸ್ಯಗಳ ಸಂಗ್ರಹ ಪ್ರಾರಂಭವಾಗಿ, ನಂತರ ಅವುಗಳ ಸಂರಕ್ಷಣೆಗೂ ಎಡೆಮಾಡಿಕೊಟ್ಟಿತು.

ಚಿತ್ರ: ಫಾಕ್ಸ್‌ ಟೈಲ್‌ ಅರ್ಕಿಡ್(ರೈಂಕೊಸ್ಟೈಲಿಸ್‌ ರೆಟ್ಯೂಸ) ಸೀತೆ ಹೂ ಅಥವಾ ಬೆಟ್ಟದ ಹೂ

ಹೂವು, ಎಲ್ಲವೂ ಅತೀ ಸುಂದರ, ಆಕರ್ಷಕ, ಕಣ್ಮನ ಸೆಳೆಯುವ ಒಂದು ಅದ್ಭುತ ಸೃಷ್ಟಿ. ಅದರಲ್ಲೂ ನಮ್ಮ ಕನ್ನಡ ನಾಡಿನ ಮಲ್ಲಿಗೆ, ಕೇದಗೆ, ಸಂಪಿಗೆ, ಪಾರಿಜಾತ, ಚೆಂಡು ಹೂ, ಮುಂತಾದ ಹೂವುಗಳ ಘಂ ಎನ್ನುವ ಪರಿಮಳ, ಎಂಥವರನ್ನೂ ಮರುಳುಮಾಡಿಬಿಡುತ್ತದೆ. ಆದರೆ ಆರ್ಕಿಡ್‌ ಹೂವಿಗೆ ಆ ಘಂ ಎನ್ನುವ ಪರಿಮಳವಿಲ್ಲ. ಸೀತೆ ಹೂ ಎಂದು ಏಕೆ ಬಂದಿರಬಹುದು ಎಂದು ಯೋಚಿಸಿದಾಗ ಸಿಗುವ ಉತ್ತರ, ಬಹುಶಃ ಸೀತೆಯನ್ನು ರಾಮ ಕಾಡಿನ ಪಾಲು ಮಾಡಿದ ಎಂತಲೋ, ಆಥವಾ ರಾವಣ ಸೀತೆಯನ್ನು ಅಪಹರಿಸಿ ಅಶೋಕವನದಲ್ಲಿ ಇಟ್ಟ ಕಾರಣಕ್ಕೋ ತಿಳಿಯದು.

ಸೀತೆ ಹೂವು ಒಂದು ಕಾಡಿನ ಅಪ್ಪುಸಸ್ಯ. ಸಹ್ಯಾದ್ರಿ ಶ್ರೇಣಿ (ಪಶ್ಚಿಮ ಘಟ್ಟ)ಯ ಬಹುತೇಕ ಮರಗಳ ತೊಗಟೆಗೆ ಅಪ್ಪಿಕೊಂಡು ಬೆಳೆಯುವ ಒಂದು ಪುಟ್ಟ ಸಸ್ಯ. ಆರಂಭದಲ್ಲಿ ಸಸ್ಯ ಮೊಳೆಯುವಾಗ ಹುಟ್ಟಿಕೊಳ್ಳುವ ಬೂದು ಬಣ್ಣದ ಬೇರು, ಗಿಡ ಬೆಳೆದಂತೆ ಬೆಳೆದು ಮರದ ಕೊಂಬೆ, ರೆಂಬೆ ಮತ್ತು ಕಾಂಡದ ಮೇಲೆ ಸುತ್ತಿಕೊಳ್ಳುವಂತೆ ಬೆಳೆಯುತ್ತವೆ. ಬೇರಿನ ತುದಿ ಮಳೆಗಾಲದಲ್ಲಿ ಮಾತ್ರ ಸ್ಪಂಜಿನಂತೆ ಬೆಳೆದು ಕ್ರಮೇಣ ಬಿಸಿಲು ಹೆಚ್ಚಾಗುವ ತಿಂಗಳು ಬಂದಂತೆ ಗಟ್ಟಿಯಾಗಿಬಿಡುತ್ತವೆ. ಇನ್ನು ಹೂವುಗಳು ಮಾತ್ರ ಕಾಣಸಿಗುವುದು ಮಳೆಗಾಲದಲ್ಲಿಯೇ ! ಅದೂ ಒಂದೆರಡು ವಾರ ಮಾತ್ರ.   

ನಾವು ಬಿಎಸ್ಸಿ., ಪದವಿ ಅದ್ಯಯನ ಮಾಡುವ ಸಂದರ್ಭ ವ್ಯಾಂಡ ಎಂಬ ಸಸ್ಯದ ಒಂದೆರಡು ಎಲೆ, ಕಾಂಡ ಮತ್ತು ಒಂದು ಹೂವಿನ ಚಿತ್ರ ಬರೆದಿರುವುದು ಇನ್ನೂ ನನ್ನ ಬಳಿ ಇದೆ. ಅದು ನೆಲದಲ್ಲಿ ಬೆಳೆಯುವ ಒಂದು ಆರ್ಕಿಡ್. ಆದರೆ, ನಿಜವಾಗಿ ನೋಡಿದಾಗ ಸಿಗುವ ಅದರ ಸೌಂಧರ್ಯ ನೋಡಿಯೇ ಆನಂದಿಸಬೇಕು. ಕಡ್ಡಿಯಂತೆ ಬೆಳೆಯುವ ಕಾಂಡ, ಅದರ ಎರಡು ಬದಿಯಲ್ಲಿ ಚಪ್ಪೆಟೆಯಾದ ಮತ್ತು ಮಂದವಾದ, ೨ ರಿಂದ ೩ ಇಂಚು ಉದ್ದದ ಎಲೆಗಳು. ಸಣ್ಣ ಸಣ್ಣ ಬೇರುಗಳು ಮಣ್ಣಿನಲ್ಲಿ ಸ್ವಲ್ಪ ಮಟ್ಟಿಗೆ ಬೆಳೆದರೆ ಬಹಳಷ್ಟು ಅಂಚಿ ಕಡ್ಡಿಯಷ್ಟು ದಪ್ಪದ ಬೇರುಗಳು ಗಾಳಿಯಲ್ಲಿ ಬೆಳೆಯುತ್ತವೆ ಮಲೆನಾಡಿನ ಮಳೆಯಲ್ಲಿ ಚೆನ್ನಾಗಿ ಬೆಳೆಯುವ ಈ ಗಿಡಕ್ಕೆ ಸ್ಟಾರ್‌ ಫೈರ್‌ ಆರ್ಕಿಡ್‌ ಎನ್ನುವರು. ಸಾಮಾನ್ಯವಾಗಿ ಕ್ರೂಸಿಫಿಕ್ಸ್ ಅಥವಾ ಬಡವನ ಆರ್ಕಿಡ್‌ ಎಂತಲೂ ಕರೆಯುವರು. ಹೂವುಗಳು ಬೆಂಕಿಯ ಕೆಂಡದಂತೆ ಕಡು ಕೆಂಪುಬಣ್ಣದವು, ಮೂರು ಪುಷ್ಪಪಾತ್ರೆಯ ದಳ ಮತ್ತು ಮೂರು ಪುಷ್ಪದಳಗಳು. ಯಾವುದೇ ಆರ್ಕಿಡ್‌ ನೋಡಿದರೂ ಇಷ್ಟೇ ಸಂಖ್ಯೆಯ ದಳಗಳನ್ನು ಹೊಂದಿರುವುದು ವಿಶೇಷ. ಸುಮಾರು ಮೂರರಿಂದ ಆರು ತಿಂಗಳಿನವರೆಗೂ ಹೂವುಗಳು ಮೇಲೆ ಮೇಲೆ ಅರಳುತ್ತಿರುತ್ತವೆ,

                        ಚಿತ್ರ: ಗ್ರೌಂಡ್‌ ಆರ್ಕಿಡ್‌. ಸ್ಟಾರ್‌ ಫೈರ್‌ ಆರ್ಕಿಡ್ (ಎಪಿಡೆಂಢ್ರಮ್‌)

ಹೂವು ಬಿಡುವ ಎರಡು ಸಸ್ಯಗಳ ದೊಡ್ಡ ಗುಂಪಿನಲ್ಲಿ ಇದೂ ಒಂದು. ಬೀಜ ಬಿಡುವ ಸಸ್ಯಗಳಲ್ಲಿ ಆರ್ಕಿಡ್‌ಗಳ ಪಾಲು ಶೇಕಡ ೬ ರಿಂದ ೧೧ ರಷ್ಟು. ಆರ್ಕಿಡೇಸಿ ಕುಟುಂಬದಲ್ಲಿ ಬರುವ ಈ ಸಸ್ಯಗಳು, ನಾಲ್ಕು ವರ್ಗಗಳಾದ ಡೆಂಡ್ರೋಬಿಯಂ, ಬಲ್ಬೊಫಿಲ್ಲಂ, ಎಪಿಡೆಂಡ್ರಮ್‌ ಮತ್ತು ಪ್ಲುರೋಥಾಲಿಸ್‌. ಇವುಗಳಲ್ಲಿ ಒಟ್ಟು ೫೯೦೦ ಜಾತಿಯ ಸಸ್ಯಗಳು ಕಾಣುತ್ತವೆ. ಭಾರತದಲ್ಲಿ ಸುಮಾರು ೧೩೦೦ ಪ್ರಬೇಧಗಳು ಕಾಣಸಿಗುತ್ತವೆ. ಇವುಗಳಲ್ಲಿ ಬಹಳಷ್ಟು ಮರಗಳ ಮೇಲೆ ಬೆಳೆದರೆ ಇನ್ನು ಕೆಲವು ನೆಲದ ಮೇಲೆ ಬೆಳೆಯುತ್ತವೆ. ಮರಗಳ ಮೇಲೆ ಬೆಳೆಯುವ ಆರ್ಕಿಡ್‌ಗಳನ್ನೆ ಅಪ್ಪುಸಸ್ಯಗಳು ಎಂದು ನಾವೆಲ್ಲರೂ ಓದಿದ್ದೇವೆ. ಕೇವಲ ಆಶ್ರಯಕ್ಕಾಗಿ ಇತರ ಮರಗಳನ್ನು ಅವಲಂಬಿಸಿರುವ ಇವು ನೀರಿಗಾಗಿ ವಾತಾವರಣದ ತೇವಾಂಶವನ್ನು ಹೀರಿಕೊಳ್ಳಲು ವಿಶಿಷ್ಟವಾದ ವೆಲಾಮೆನ್‌  ಅಂಗಾಂಶವಿದೆ. ಇನ್ನು ಕಾರ್ಬನ್‌ ಡೈಆಕ್ಸೈಡ್‌ ಕೂಡ ಅಲ್ಲಿಂದಲೇ ಲಭ್ಯ. ನೆಲದಲ್ಲಿ ಬೆಳೆಯುವ ಕೆಲವು ಆರ್ಕಿಡ್‌ಗಳು ಈರುಳ್ಳಿ ಗೆಡ್ಡೆಯಂತೆ ಕಾಂಡವನ್ನು ಹೊಂದಿದ್ದು ನೀಳವಾದ ಎಲೆಗಳು ನೆಲಕ್ಕಿಂತ ಮೇಲೆ ಬೆಳೆಯುತ್ತವೆ. ಗೆಡ್ಡೆಯಿಂದಲೇ ನೀಳವಾಗಿ ಬೆಳೆಯುವ ತೊಟ್ಟಿಗೆ ಪುಷ್ಪಮಂಜರಿಗಳು ಆಕರ್ಷಕವಾಗಿರುತ್ತವೆ.

  ಮರದ ಮೇಲೆಯೇ ಬೆಳೆಯುವ ಪರ್ಲ್‌ ಆರ್ಕಿಡ್‌ನದು ಮತ್ತೊಂದು ವಿಶಿಷ್ಟ. ಇದಕ್ಕೂ ಸಹ ಚೌಕಾಕಾರದ ಗೆಡ್ಡೆಗಳಿದ್ದು ತುದಿ ಚೂಪಾಗಿರುತ್ತವೆ. ಪ್ರತಿ ವರ್ಷವೂ ಗೆಡ್ಡೆಗಳ ಸಂಖ್ಯೆ ಹೆಚ್ಚುತ್ತಾ ಹೋಗಿ ಗಿಡಗಳು ವೃದ್ಧಿಯಾಗುತ್ತವೆ. ಗೆಡ್ಡೆ ಮತ್ತು ಎಲೆಯ ಮಧ್ಯಭಾಗದಿಂದ ಒಂದು ಸಣ್ಣ ದಾರದಂತೆ ಬೆಲೆಯುವ ಹೂ ತೊಟ್ಟು ಕೆಳಗಡೆಗೆ ಇಳಿ ಬಿದ್ದಂತೆ ಬೆಳೆದು, ಅದರ ಎರಡು ಬದಿಯಲ್ಲಿ ಮತ್ತಿನ ಮಣಿ ಪೋಣಿಸಿದಂತೆ ಹೂವುಗಳು ಬೆಳೆಯುತ್ತವೆ. ಇದರಲ್ಲಿ ತೂಗಾಡುವ ವಾಯುವಿಕ ಬೇರುಗಳು ಕಂಡುಬರುವುದಿಲ್ಲ.

                                ಚಿತ್ರ: ಪರ್ಲ್‌ ಆರ್ಕಿಡ್‌

ಕೆಲವಂತೂ ಬಹಳ ವಿಶಿಷ್ಟವಾಗಿ ಬೆಳೆಯುವ ಕೊಳೆತಿನಿ ಆರ್ಕಿಡ್ ಗಳು . ಇವುಗಳಿಗೆ ಎಲೆಗಳಂತೂ ಕಾಣುವುದಿಲ್ಲ! ಹೂವಿನ ದಂಡೆ ನೆಲದಿಂದ ಮೇಲಕ್ಕೆ ಮುಕ್ಕಾಲು ಅಡಿಯಷ್ಟು ಬೆಳೆದು ಬಿಳಿ ಬಣ್ಣದ ಹೂ ಗೊಂಚಲು ಬಿಡುತ್ತದೆ. ಗೆಡ್ಡೆಯನ್ನು ಕೆದಕಿ ಹಾಳುಮಾಡಲು ನನಗೆ ಮನಸ್ಸಾಗದೆ ಹೂಗೊಂಚಲಿನ ಚಿತ್ರ ತೆಗೆದು ಸುಮ್ಮನೆ ಬಂದೆ. 

ಚಿತ್ರ: ಪೂತಿಜನ್ಯ ಆರ್ಕಿಡ್

ಬಹಳ ಅಪರೂಪವಾದ, ನಶಿಸಿಹೋಗುವ ಹಂತವನ್ನು ತಲುಪಿರುವ ವಿರಳ ಆರ್ಕಿಡ್‌ ಎಂದರೆ ಅದುವೆ ವ್ಯಾಂಡ ವೈಟೀ ಪ್ರಬೇಧ. ಕೇವಲ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಪಶ್ಚಿಮ ಘಟ್ಟ ಮತ್ತು ಶ್ರೀಲಂಕಾದ ಕಾಡುಗಳಲ್ಲಿರುವ ಸ್ಥಳೀಯ ಸಸ್ಯ. ಇದು ವರ್ಷಕ್ಕೆ ಬಿಡುವುದು ಒಂದೇ ಒಂದು ಹೂವು. ಬಹಳ ಅಪರೂಪಕ್ಕೆ ಎರಡು. ಈ ಸಸ್ಯ ಅಳಿದು ಹೋಗಿದೆ ಎಂದು ನಂಬಲಾಗಿತ್ತು. ೧೮೪೯ ರಲ್ಲಿ ಮತ್ತೆ ಸಿಕ್ಕಿದ್ದು ಈ ಪ್ರಬೇಧ ಉಳಿದಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಸಸ್ಯದ ಬೆಳವಣಿಗೆ ತುಂಬಾ ನಿಧಾನಗತಿಯದ್ದು. ಹೂವು ಹಸಿರು ಮಿಶ್ರಿತ ಕಡುಕಂದು ಬಣ್ಣ. ಎರಡು ದಳಗಳು ಮಾಮೂಲಿನಂತಿದ್ದು, ಮೂರನೆಯದು ಮಾತ್ರ ಬಿಳಿ ಬಣ್ಣವನ್ನು ಹೊಂದಿದೆ.

ಎಲ್ಲಾ ಆರ್ಕಿಡ್‌ಗಳು ಲೈಂಗಿಕ ರೀತಿಯಲ್ಲಿ ಸಂತಾನೋತ್ಪತ್ತಿ ನಡೆಸಿ, ಅಪರೂಪಕ್ಕೆ ಬೀಜೋತ್ಪತ್ತಿ ಮಾಡುತ್ತವೆ. ಬೀಜಗಳು ಅತ್ಯಂತ ಸಣ್ಣ ಗಾತ್ರದವಾಗಿದ್ದು ಗಾಳಿಯಲ್ಲಿ ತೂರಿ ಇತರ ಮರಗಳಿಗೆ ಹರಡಿಕೊಳ್ಳುತ್ತವೆ. ಕೆಲವು ಕಾಯಜ ರೀತಿಯ ಸಂತಾನೋತ್ಪತ್ತಿಯ ಮೂಲಕ ಗಿಡಗಳು ಹುಟ್ಟಿಕೊಳ್ಳುತ್ತವೆ. ಇನ್ನು ಕೆಲವು ಪ್ರಬೇಧಗಳನ್ನು ತಳೀಕರಣದ ಮೂಲಕ ಬೆಳಸಲಾಗುತ್ತಿದ್ದು ದೊಡ್ಡ ಗಾತ್ರದ ಹೂವುಗಳನ್ನು ಬಿಡುತ್ತವೆ. ಹೂವುಗಳು ಹಲವು ಬಣ್ಣಗಳಲ್ಲಿದ್ದು ಸುಮಾರು ಮೂರು ತಿಂಗಳಿನಂತೆ ಎರಡ್ಮೂರು ಬಾರಿ ಅರಳಿರುತ್ತವೆ.

ಚಿತ್ರ: ತಳೀಕರಣದ ಪ್ರಬೇಧಗಳು 


No comments:

Post a Comment