ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, September 4, 2025

ನಾವು ಏಕಾಂಗಿಗಳಲ್ಲ, ಒಬ್ಬೊಬ್ಬರೂ ನಡೆದಾಡುವ ಪರಿಸರ ವ್ಯವಸ್ಥೆಗಳಂತೆ !

  ನಾವು ಏಕಾಂಗಿಗಳಲ್ಲ, ಒಬ್ಬೊಬ್ಬರೂ ನಡೆದಾಡುವ ಪರಿಸರ ವ್ಯವಸ್ಥೆಗಳಂತೆ  !

ಲೇಖಕರು :    ಡಾ.ಟಿ.ಎ.ಬಾಲಕೃಷ್ಣ ಅಡಿಗ

 ನಾವು ನಮ್ಮನ್ನು ಸ್ವತಂತ್ರ ಜೀವಿಗಳಂತೆ ಭಾವಿಸಿಕೊಂಡರೂ, ನಿಜ ಅರ್ಥದಲ್ಲಿ ವೈರಾಣುಗಳು, ಬ್ಯಾಕ್ಟೀರಿಯಾಗಳು ಮುಂತಾದ ಸೂಕ್ಷ್ಮಜೀವಿಗಳಿಂದ ತುಂಬಿಹೋಗಿರುವ ʼ ನಡೆದಾಡುವ ಪರಿಸರವ್ಯವಸ್ಥೆಗಳು ' ಎಂದು ಪರಿಗಣಿಸಬಹುದು ! ಈ ಪರಾವಲಂಬಿ ಸೂಕ್ಷ್ಮಜೀವಿಗಳ ಮಧ್ಯೆ ಇರುವ ವ್ಯತ್ಯಾಸಗಳನ್ನು ಗಮನಿಸಿದಾಗ ಅವು ನೈಸರ್ಗಿಕ ಭಿನ್ನತೆಗಳಿಗೆ ಹಾಗೂ ಜೀವವಿಕಾಸಕ್ಕೆ ಕಾರಣವಾಗುವ ಆನುವಂಶೀಯ ಉತ್ಪರಿವರ್ತನೆಗಳಷ್ಟೇ ಪ್ರಮುಖ ಎಂದೆನಿಸುತ್ತದೆ.

ಇತ್ತೀಚೆಗೆ  ಪ್ರಕಟವಾದ ಸಂಶೋಧನಾ ಲೇಖನವೊಂದರಲ್ಲಿ  ಹಾಲೊಬಯಾಂಟ್ ಜೀವವಿಜ್ಞಾನ  ಜಾಲದ ಸೇತ್ ಬಾರ್ಡರ್ ಸ್ಟೈನ್  (Seth Borderstain) ಮತ್ತು ಅವರ ತಂಡದ ವಿಜ್ಞಾನಿಗಳ ಅಭಿಪ್ರಾಯದ ಪ್ರಕಾರ, ಪರಾವಲಂಬಿ ಸೂಕ್ಷ್ಮಜೀವಿಗಳ ಮತ್ತು ಅತಿಥೇಯ ಜೀವಿಗಳ ನಡುವಿನ ಸಂಬಂಧಗಳ ವಿಶ್ಲೇಷಣೆಯು ಜೈವಿಕ ಭಿನ್ನತೆಗಳನ್ನು ಸವಿವರವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ನೆರವಾಗುತ್ತದೆ.


                                          ಚಿತ್ರ 1. ನಮ್ಮ ದೇಹದೊಳಗೆ  ಕಂಡು ಬರುವ ವೈವಿಧ್ಯಮಯ ಸೂಕ್ಷ್ಮಜೀವಿಗಳು 

ಜೀವವಿಕಾಸ ಪ್ರಕ್ರಿಯೆಯಲ್ಲಿ ಸೂಕ್ಷ್ಮಜೀವಿಗಳು

ನಾವು ತಿಳಿದಿರುವಂತೆ  ಜೀವಿಗಳು ಕಾಲಾಂತರದಲ್ಲಿ ಉತ್ಪರಿವರ್ತನೆಗಳ ಹಾಗೂ ಹೊಂದಾಣಿಕೆಗಳ ಮೂಲಕ ಕ್ರಮೇಣ ಬದಲಾವಣೆಗಳಿಗೆ ಒಳಪಡುವ ಪ್ರಕ್ರಿಯೆಯೇ ಜೀವವಿಕಾಸ. ಉಪಯುಕ್ತ ಲಕ್ಷಣಗಳು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗಲಿಕ್ಕೆ ಕಾರಣವಾಗುವ ನೈಸರ್ಗಿಕ ಆಯ್ಕೆ ಎಂಬ ಪ್ರಕ್ರಿಯೆಯಿಂದ ಈ ಹೊಂದಾಣಿಕೆಗಳು ಪ್ರೇರಿತಗೊಳ್ಳುತ್ತವೆ.

ಒಂದು ಆತಿಥೇಯ ಜೀವಿಯ ಒಳಗೆ ಮತ್ತು ದೇಹದ ಮೇಲೆ ವಾಸಿಸುವ ಸೂಕ್ಷ್ಮಜೀವಿಗಳ ಸಮೂಹವನ್ನು ಒಟ್ಟಾಗಿ ಪರಿಗಣಿಸಿದಾಗ, ಜೀವವಿಕಾಸ ಪ್ರಕ್ರಿಯೆಯು ಹೆಚ್ಚು ಕುತೂಹಲಕಾರಿ ಮತ್ತು ಸಂಕೀರ್ಣ ಎಂದೆನಿಸುತ್ತದೆ. ಸಂಪ್ರದಾಯಿಕವಾಗಿ ನಾವು ಕಣ್ಣಿಗೆ ಕಾಣುವ ಮತ್ತು ಕಾಣದ ಜೀವಿಗಳನ್ನು ಪ್ರತ್ಯೇಕವಾಗಿಯೇ ಅಧ್ಯಯನ ಮಾಡುತ್ತಿದ್ದೇವೆ. ಆದರಲ್ಲಿಯೂ, ಸೂಕ್ಷ್ಮಜೀವಿಗಳನ್ನು ಕೆಲವು ವಿಜ್ಞಾನಿಗಳು ಬೇರೆಯೇ ದೃಷ್ಟಿಯಲ್ಲಿ ನೋಡುತ್ತಾರೆ.

                                                 ಚಿತ್ರ 2. ದೇಹದೊಳಗಿನ ಸೂಕ್ಷ ಜೀವಿಗಳ ಆನುವಂಶೀಯ ವಿಶ್ಲೇಷಣೆ

 ಬಾರ್ಡನ್ ಸ್ಟೇನ್  ಪ್ರಕಾರ ಸೂಕ್ಷ್ಮಜೀವಿಗಳು ಇಡೀ ಜೀವಿಮಂಡಳದ  ತಳಪಾಯವಾಗಿವೆ. ಪ್ರತಿಯೊಂದು ಜೀವಿಯು ಸೂಕ್ಷ್ಮಜೀವಿಗಳ ಸಂಪರ್ಕ ಹಾಗೂ ಸಹವಾಸವಿಲ್ಲದೆ ಬದುಕಲಾರದು. ಹೀಗಾಗಿ, ಈ ಸೂಕ್ಷ್ಮಜೀವಿಗಳು ಆತಿಥೇಯ ಜೀವಿಯ ಗುಣಲಕ್ಷಣಗಳನ್ನು ನಿರಂತರವಾಗಿ ಪ್ರಭಾವಿಸಿ, ಬದಲಾಯಿಸುತ್ತವೆ.ಈ ಒಂದು ಸತ್ಯವು ಒಂದು ಹೊಸ ಸಿದ್ಧಾಂತವನ್ನೇ ಹುಟ್ಟುಹಾಕಿದೆ. ಅದನ್ನು ಹಾಲೋಬಯಾಂಟ್‌ ಬಯಾಲಜಿ(holobiont biology) ಎಂದು ಕರೆಯಲಾಗುತ್ತದೆ. ಇದು ಜೀವಿಗಳ ವಿವಿಧ ರೂಪಗಳು ಮತ್ತು ಕ್ರಿಯೆಗಳು ಪರಾವಲಂಬಿ ಸೂಕ್ಷ್ಮಜೀವಿಗಳ ಮತ್ತು ಅವುಗಳ ಆತಿಥೇಯ ಜೀವಿಗಳ ನಡುವಿನ ಸಂಬಂಧಗಳ ಪರಿಪೂರ್ಣ ವಿಶ್ಲೇಷಣೆಯಾಗಿದೆ. ಅಲ್ಲದೆ, ಜೀವಿಗಳನ್ನು ಮತ್ತು ಅವುಗಳ ಜೊತೆಗೆ ಬಿಡಿಸಲಾಗದ ನಂಟನ್ನು ಹೊಂದಿರುವ ಸೂಕ್ಷ್ಮಜೀವಿಗಳನ್ನು ಬೇರೆ ಬೇರೆಯಾಗಿ ಪರಿಗಣಿಸದೆ, ಒಟ್ಟಾರೆಯಾಗಿ ಪರಿಗಣಿಸುತ್ತದೆ. ಬಾರ್ಡರ್‌ಸ್ಟೇನ್‌ ಅವರ ಪ್ರಕಾರ, ʼ ಯಾವುದೇ ಜೀವಿ ಸ್ವತಂತ್ರವಲ್ಲ, ಎಲ್ಲವೂ ಸೂಕ್ಷ್ಮಜೀವಿಗಳ ಜೊತೆಗೆ ಸಹಯೋಗ ಮತ್ತು ಸಂಪರ್ಕವನ್ನು ಹೊಂದಿರುತ್ತವೆ

 ಈ ನವೀನ, ವಿಶಿಷ್ಟ ಅಲೋಚನೆಯು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು, ಸುಸ್ಥಿರ ಪರಿಸರ.ಚಿಂತನೆಯಲ್ಲಿ ಸ್ಥಿತಪ್ರಜ್ಞತೆಯನ್ನು ಹಾಗೂ ಕೃಷಿಕೇತ್ರದಲ್ಲಿ ಅಭಿವೃದ್ಧಿಯನ್ನು ತರುವ ನಿಟ್ಟಿನಲ್ಲಿ ಸುಕ್ಷ್ಮಜೀವಿಗಳನ್ನು ಬಳಸಿಕೊಳ್ಳುವ ಅವಕಾಶಗಳನ್ನು ಹೆಚ್ಚಿಸಲಿದೆ. ಯೋಚಿಸಿ ನೋಡಿ, ಇದರಿಂದ ತೀವ್ರ ಸ್ವರೂಪದ ಕ್ಯಾನ್ಸರ್‌ ನಂಥ ಖಾಯಿಲೆಗಳನ್ನು ಎದುರಿಸುವಲ್ಲಿ ಅಥವಾ ಹವಾಮಾನ ಬದಲಾವಣೆಯನ್ನು ಪ್ರತಿರೋಧಿಸುವ ಬೆಳೆಗಳನ್ನು ಪಡೆಯುವಂತಾದರೆ ಅದು  ಉಪಯುಕ್ತವಲ್ಲವೇ ?

ಸೂಕ್ಷ್ಮಜೀವಿಗಳ ಹಿನ್ನೆಲೆಯಲ್ಲಿ ಜೀವವಿಕಾಸದ ಮರು ಅಧ್ಯಯನ

 ಡಾರ್ವಿನ್‌ ತನ್ನ ʼ ಪ್ರಭೇದಗಳ ಉಗಮiʼ(Origin of Species) ಎಂಬ ಹೆಸರಾಂತ ಕೃತಿಯಲ್ಲಿ ಪ್ರಾಣಿಗಳನ್ನು ಮತ್ತು ಸಸ್ಯಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಜೀವವಿಕಾಸದ ಮೇಲಿನ ತನ್ನ ವಾದವನ್ನು ಮಂಡಿಸಿದ್ದ. ಆಗ ಹೆಚ್ಚಿನ ಮಾಹಿತಿಯಿಲ್ಲದಿದ್ದ ಕಾರಣ ಸೂಕ್ಷ್ಮಜೀವಿಗಳನ್ನು ಆತ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಪ್ರಸ್ತುತ ಸೂಕ್ಷ್ಮ ಜೀವಿಗಳ ಬಗ್ಗೆ ಇರುವ ಅಗಾಧ ಮಾಹಿತಿಯ ಹಿನ್ನೆಲೆಯಲ್ಲಿ ತಳಿಶಾಸ್ತ್ರ ಮತ್ತು ಜೀವವಿಕಾಸದ ಸಿದ್ಧಾಂತಗಳನ್ನು ಮರುಪರೀಶೀಲಿಸಬೇಕಾದ ಅಗತ್ಯವನ್ನು ಬಾರ್ಡರ್‌ಸ್ಟೇನ್‌ ಒತ್ತಿ ಹೇಳಿದ್ದಾರೆ.

ಜೀವಿಗಳ ವಿಕಾಸ ಹಾಗೂ ಇನ್ನಿತರ ಜೈವಿಕ ಅಂಶಗಳ ಅಧ್ಯಯನದಲ್ಲಿ ಸೂಕ್ಷ್ಮಜೀವಿಗಳ ಮಹತ್ವವನ್ನು ಅರ್ಥಮಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಹೇಗೆ ಅಳವಡಿಸಿಕೊಳ್ಳಬೇಕು ? ಹಾಲೋಬಯಾಂಟ್ ಜೀವಶಾಸ್ತ್ರದ ಪ್ರತಿಪಾದಕರ ಪ್ರಕಾರ, ಇದಕ್ಕೆ ಜೀವಶಾಸ್ತ್ರದ ನಿರೂಪಣೆ ಹಾಗೂ ಅಧ್ಯಯನದಲ್ಲಿ ಅಮೂಲಾಗ್ರ ಬದಲಾವಣೆ ತರಬೇಕಿದೆ. ಜೊತೆಗೆ ಸೂಕ್ಷ್ಮಜೀವಿಗಳ ಪ್ರಭಾವವನ್ನು ನಿರ್ಧರಿಸುವ ಹೊಸ ವಿಶ್ಲೇಷಣಾತ್ಮಕ ಪರಿಕರಗಳ ಅವಸ್ಯಕತೆಇದೆ. ಜೀವಿಗಳ ಲಕ್ಷಣಗಳ ಅಬಿವ್ಯಕ್ತಿಗೆ ಅವು ಆನುವಂಶೀಯತೆಯ ಜೊತೆಗೆ ಹೇಗೆ ವರ್ತಿಸುತ್ತವೆ ಎಂಬುದನ್ನು ತಿಳಿಯಬೇಕಿದೆ.ಅಂಥ ಪರಿಕರಗಳು ದೊರೆತಾಗ ಸೂಕ್ಷ್ಮಜೀವಿಗಳನ್ನು ಹಾಗೂ ಸೂಕ್ಷ್ಮಜೀವಿಗೋಳವನ್ನು ಸೂಕ್ತವಾಗಿ ಮಾರ್ಪಡಿಸುವ ಸಾದ್ಯತೆ  ಹೆಚ್ಚುತ್ತದೆ.

 ಸೂಕ್ಷ್ಮಜೀವಿಗಳು ಭೂಮಿಯ ಮೇಲೆ ನಾಲ್ಕು ಬಿಲಿಯನ್‌ ಗೂ ಹೆಚ್ಚು ವರ್ಷಗಳಿಂದ ಉಳಿದು ಬಂದಿವೆ. ಸಂಖ್ಯೆಯಲ್ಲಿ ಅವು ಆಕಾಶದಲ್ಲಿರುವ ನಕ್ಷತ್ರಗಳನ್ನು ಮೀರಿಸುತ್ತವೆ. ಅಷ್ಟೇ ಏಕೆ? ನಿಮ್ಮ ಬಾಯಂಗಳವೊಂದರಲ್ಲೇ ಇರುವ ಸೂಕ್ಷ್ಮಜೀವಿಗಳ ಸಂಖ್ಯೆ ಜಗತ್ತಿನಲ್ಲಿರುವ ಮಾನವರ ಒಟ್ಟು ಸಂಖ್ಯೆಗಿಂತ ಹೆಚ್ಚಿದೆ. ಸೂಕ್ಷ್ಮಜೀವಿಗಳು ನಮ್ಮ ಪ್ರಪಂಚವನ್ನು ಬದಲಾಯಿಸುತ್ತಿರುವ ವಿಧಾನವನ್ನು ಈಗಷ್ಟೇ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದ್ದೇವೆ.

 ಇತ್ತೀಚಿನ ಸಂಶೋಧನೆಗಳ ಪ್ರಕಾರ ಕ್ಯಾನ್ಸರ್‌ ನಂತ ರೋಗಗಳು ಉಂಟಾಗುವ ಸಾದ್ಯತೆ, ಅಧಿಕ ಕೋಲೆಸ್ಟರಾಲ್‌ ಸಂಗ್ರಹದ ಸಾದ್ಯತೆ ಮುಂತಾದ ಲಕ್ಷಣಗಳನ್ನು ನಿರ್ಧರಿಸುವಲ್ಲಿಯೂ ಈ ಸೂಕ್ಷ್ಮಜೀವಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದಕ್ಕೆ ಕಾರಣ  ನಅವು ನಮ್ಮ ದೇಹದಲ್ಲಿ ನಮ್ಮದೇ ಜೀನ್‌ ಗಳ ಜೊತೆಗೆ ಈ ಬಿಲಿಯನ್‌ ಗಟ್ಟಲೆ ಪರಾವಲಂಬಿ ಸೂಕ್ಷ್ಮಜೀವಿಗಳ ಜೀನ್‌ ಗಳನ್ನೂ ಹೊಂದಿದ್ದೇವೆ ಅಲ್ಲವೇ ?  ಈಗೀಗ ನಮ್ಮ ಗಣನೆಗೆ ಬರುತ್ತಿರುವ ವಿಷಯವೆಂದರೆ, ಸೂಕ್ಷ್ಮಜೀವಿಗಳು ಅತಿಥೇಯ ಜೀವಿಗಳ ಲಕ್ಷಣಗಳಲ್ಲಿ ಜೀನ್‌ ಗಳು ಉಂಟುಮಾಡುವ ಬಿನ್ನತೆಗಳಿಗಿಂತ ಹೆಚ್ಚಿನ ಭಿನ್ನತೆಗಳಿಗೆ ಕಾರಣವಾಗುತ್ತವೆ. ಮಾನವರ ಭವಿಷ್ಯವು ಅವರಲ್ಲಿರುವ ಜೀನ್‌ಗಳ ಅಬಿವ್ಯಕ್ತಿಗಿಂತ ಹೆಚ್ಚಾಗಿ ಸಹಯೋಗದಲ್ಲಿರುವ ಸೂಕ್ಷ್ಮಜೀವಿಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ, ನಾವು ಒಬ್ಬೊಬ್ಬರೂ ಬರಿಯ ನಾವಲ್ಲ, ನಾವು ಒಬ್ಬೊಬ್ಬರೂ ಒಂದು ಪರಿಸರವ್ಯವಸ್ಥೆಯೇ  ಆಗಿದ್ದೇವೆ, ಅಲ್ಲವೇ ?

 ಗಮನಿಸಿ, ನಾಳೆ ಬೆಳಿಗ್ಗೆ ನೀವು ಹಲ್ಲುಜ್ಜುವಾಗ. ಕೇವಲ ನಿಮ್ಮ ಹಲ್ಲಿನ ಆರೋಗ್ಯದ ಕಡೆ ಮಾತ್ರ  ನಿಗಾ ವಹಿಸುತ್ತಿಲ್ಲ, ಬದಲಿಗೆ, ಅಲ್ಲೊಂದು ಪರಿಸರ ವ್ಯವಸ್ಥೆಯನ್ನೇ  ನೀವು ನಿರ್ವಹಿಸುತ್ತಿದ್ದೀರಿ !

 

No comments:

Post a Comment