ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, September 4, 2025

ಜಠರದಲ್ಲೊಂದು ಕಿಟಕಿ!

 ಜಠರದಲ್ಲೊಂದು ಕಿಟಕಿ!


ಲೇಖನ : ಡಾ|| ಎಂ.ಜೆ. ಸುಂದರ್ ರಾಮ್ 

ನಿವೃತ್ತ ಪ್ರಾಣಿ ವಿಜ್ಞಾನ ಪ್ರಾಧ್ಯಾಪಕರು 


   

    ಢಂ!...

ಬಂದೂಕಿನ ಬಾಯಿಂದ ಆಕಸ್ಮಿಕವಾಗಿ ಸಿಡಿದು ಹಾರಿದ ಒಂದು ಸಿಡಿ ಗುಂಡು ಅವನ ಎಡ ಪಕ್ಕೆಯನ್ನು ತೂರಿ ಒಳಹೊಕ್ಕಿತ್ತು. ಅದರ ಆಘಾತವನ್ನು ತಾಳಲಾರದೆ ಅವನು ಚೀತ್ಕರಿಸುತ್ತಾ ಕುಸಿದು ಬಿದ್ದ. ಗುಂಡಿನ ಹೊಡೆತ ಬಿದ್ದ ಸ್ಥಳದಲ್ಲಿ ಅವನು ಉಟ್ಟಿದ್ದ ಬಟ್ಟೆ ಚಿಂದಿಯಾಗಿತ್ತು. ಅವನ 6ನೇ ಪಕ್ಕೆಲುಬು ಪುಡಿಪುಡಿಯಾಗಿ ಖಂಡಗಳು ಹರಿದುಹೋಗಿದ್ದವು. ಹೊರಗೇನಾಯಿತು ಎಂದು ತಿಳಿಯುವುದಕ್ಕಾಗಿಯೋ ಎಂಬಂತೆ, ಅವನ ಜಠರ ಗುಂಡಿನಿಂದ ಆಗಿದ್ದ ರಂಧ್ರದಿಂದ ಹೊರಗೆ ಇಣುಕಿನೋಡುತ್ತಿತ್ತು. ಅಷ್ಟಕ್ಕೇ ತೃಪ್ತವಾಗದ ಆ ಗುಂಡು ಅವನ ಜಠರದ ಗೋಡೆಯನ್ನೂ ಕೊರೆದು ಒಳಹೊಕ್ಕಿತ್ತು. ಅಲ್ಲಿ ರಕ್ತದ ಹೊಳೆಯೇ ಹರಿಯುತ್ತಿತ್ತು. ಕೈಯನ್ನು ಸುಲಭವಾಗಿ ಜಠರದೊಳಗೆ ತೂರಿಸುವಷ್ಟು ವಿಶಾಲವಾಗಿತ್ತು ಆ ರಂಧ್ರ.

ಉತ್ತರ ಅಮೆರಿಕಾದ ಮಿಚಿಗನ್ ಮತ್ತು ಹ್ಯೂರಾನ್ ನದಿಗಳ ಸಂಗಮ ಸ್ಥಳದಲ್ಲಿರುವ ಮ್ಯಾಕಿನಾಕ್ ಎಂಬ ಗ್ರಾಮದಲ್ಲಿ 1822ನೇ ಇಸವಿಯ ಜೂನ್ 6ರಂದು ಸಂಭವಿಸಿದ ಘಟನೆ ಇದು. ತುಪ್ಪ, ಮೃಗಚರ್ಮ ಮುಂತಾದುವನ್ನು ಮಾರುವ ಅಮೆರಿಕಾದ ವರ್ತಕ ಸಂಘದ ಮಾರಾಟ ಕೇಂದ್ರವಾಗಿ ಪ್ರಸಿದ್ಧವಾಗಿತ್ತು ಮ್ಯಾಕಿನಾಕ್ ಗ್ರಾಮ. ವರ್ಷವಿಡೀ ಬೇಟೆಯಾಡಿ ಶೇಖರಿಸಿದ್ದ ಮೃಗಚರ್ಮವನ್ನು ಮಾರಲು ನೂರಾರು ಬೇಟೆಗಾರರು ಅಲ್ಲಿ ಜಮಾಯಿಸಿದ್ದರು. ಅವರಲ್ಲೊಬ್ಬ ತಂದಿದ್ದ ಬಂದೂಕು ಅವನ ಅಜಾಗರೂಕತೆಯಿಂದ ಅವನಿಗರಿವಿಲ್ಲದೆ ಸಿಡಿದು, ಕೆನಡಾದ ಅಲೆಕ್ಸಿಸ್ ಸೆಂಟ್ ಮಾರ್ಟಿನ್ ಎಂಬ ಹತ್ತೊಂಭತ್ತು ವರ್ಷದ ತರುಣನನ್ನು ನೆಲಕ್ಕೆ ಕೆಡವಿತು.

ಚಿಕಿತ್ಸೆಗಾಗಿ, ವಿಲಿಯಮ್ ಬ್ಯೂಮಾಂಟ್ (William Beaumont) ಎಂಬ ಸೈನ್ಯದ ವೈದ್ಯರನ್ನು ಕರೆಸಲಾಯಿತು. ಗಾಯವನ್ನು ದೀರ್ಘವಾಗಿ ಪರಿಶೀಲಿಸಿದ ಬ್ಯೂಮಾಂಟ್, ಕೇವಲ ಇಪ್ಪತ್ತು ನಿಮಿಷಗಳಲ್ಲಿ ಅಲೆಕ್ಸಿಸ್ ಸಾಯುವನೆಂದು ತಿಳಿಸಿದರು. ಆದರೂ ತಮ್ಮ ಕೈಲಾದ ಚಿಕಿತ್ಸೆಯನ್ನು ಮಾಡಿ ಪ್ರಯತ್ನಿಸೋಣವೆಂದು ನಿಶ್ಚಯಿಸಿದರು. ಗಾಯವನ್ನು ತೊಳೆದು, ಔಷಧ ಲೇಪಿಸಿ ಚಿಕಿತ್ಸೆ ನೀಡಿದರು. ಒಂದು ಗಂಟೆಯಾದರೂ ಅಲೆಕ್ಸಿಸ್ ಸಾಯಲಿಲ್ಲ. ಅವನ ಸಾಯುವ ಲಕ್ಷಣಗಳು ಕ್ರಮೇಣ ಕ್ಷೀಣಿಸುತ್ತ ಬಂದವು. ಕೊನೆಗೆ ಅವನು ಬದುಕುವುದು ಖಚಿತವಾಯಿತು.

ಬ್ಯೂಮಾಂಟ್ ಅಲೆಕ್ಸಿಸ್‌ನ ಗಾಯವನ್ನು ನಿತ್ಯವೂ ಆರೈಕೆ ಮಾಡುತ್ತ ಬಂದರು. ಒಂದು ವಾರದ ಬಳಿಕ ಗಾಯ ಮಾಯವಾಗತೊಡಗಿತು. ಗಾಯದ ಅಂಚಿನ ಸುತ್ತ ಹೊಸ ಚರ್ಮ ಬೆಳೆಯತೊಡಗಿತು. ಗಾಯದ ಎರಡು ತುದಿಗಳನ್ನು ಸೇರಿಸಿ ಹೊಲಿಗೆ ಹಾಕದಿದ್ದರೆ ಗಾಯದ ರಂಧ್ರ ಹಾಗೆಯೇ ಉಳಿದುಬಿಡಬಹುದೆಂಬ ಶಂಕೆ ಬ್ಯೂಮಾಂಟ್‌ಗೆ ಕಾಡುತ್ತಿತ್ತು. ಆದರೆ ಅದಕ್ಕೆ ತಾನು ಸಿದ್ಧನಲ್ಲವೆಂದು ಹಟಹಿಡಿದ ಅಲೆಕ್ಸಿಸ್. ಕ್ರಮೇಣ ಬ್ಯೂಮಾಂಟ್ ಅವರ ಶಂಕೆಯೇ ನಿಜವಾಯಿತು. ಗಾಯವು ಪೂರ್ಣವಾಗಿ ಮುಚ್ಚಿಕೊಳ್ಳದೆ ರಂಧ್ರ ಹಾಗೆಯೇ ಉಳಿಯಿತು.


    ಅವನ ಜಠರದಲ್ಲಿಯೂ ಮತ್ತೊಂದು ಚಮತ್ಕಾರ ನಡೆಯಿತು. ಜಠರದ ಗಾಯವೂ ಗುಣವಾಗುತ್ತ ಬಂದರೂ ಗಾಯದ ಅಂಚು ಬೆಳೆದು ಜಠರದ ರಂಧ್ರವನ್ನು ಮುಚ್ಚದೆ, ಪಕ್ಕೆಯಲ್ಲಿದ್ದ ರಂಧ್ರದ ಅಂಚಿನೊಡನೆ ಬೆಸೆದುಕೊಂಡಿತು. ಇಂತಹ ಬೆಳವಣಿಗೆಗಳಿಗೆ ವೈದ್ಯಸಾಹಿತ್ಯದಲ್ಲಿ ಫಿಸ್ಟುಲ (Fistula) ಎಂದು ಕರೆಯುತ್ತಾರೆ. ಇದರಿಂದ ಪಕ್ಕೆಯ ರಂಧ್ರದ ಮೂಲಕ ಜಠರದ ಒಳಭಾಗವನ್ನು ಸ್ಪಷ್ಟವಾಗಿ ವೀಕ್ಷಿಸಬಹುದಾಗಿತ್ತು. ಎಂದರೆ, ಪಕ್ಕೆಯ ರಂಧ್ರ ಜಠರದ ಕಿಟಕಿಯಾಗಿ ಪರಿಣಮಿಸಿತು. ಜಠರದ ಒಳಚರ್ಮವು ಗಾಯದ ರಂಧ್ರಕ್ಕೆ ಅಂಟಿಕೊಂಡು, ಜಠರದಿಂದ ಯಾವುದೂ ಹೊರಬರದಂತೆ ಬಾಗಿಲಿನಂತೆ ತಡೆಯುತ್ತಿತ್ತು. ಆದರೆ ಈ ಚರ್ಮವನ್ನು ಬೆರಳಿನಿಂದ ಸರಿಸಿ, ಜಠರದ ಒಳಭಾಗವನ್ನು ವೀಕ್ಷಿಸಬಹುದಾಗಿತ್ತು.

ಪಕ್ಕೆಯ ಕಿಟಕಿ ಕ್ರಮೇಣ ಕಿರಿದಾಗುತ್ತ ಬಂದು ಕೊನೆಗೆ ಒಂದೇ ಒಂದು ಬೆರಳು ತೂರಿಸುವಷ್ಟು ಕಿರಿದಾಯಿತು. ಅಲೆಕ್ಸಿಸ್‌ಗೆ ಚಿಕಿತ್ಸೆ ನೀಡುತ್ತಿದ್ದ ಬ್ಯೂಮಾಂಟ್‌ಗೆ ದಿಢೀರನೆ ಹೊಸ ಯೋಚನೆ ಹೊಳೆಯಿತು. ಅಲೆಕ್ಸಿಸ್‌ನ ಪಕ್ಕೆಯ ಕಿಟಕಿಯಿಂದ ಅವನ ಜಠರದೊಳಗೆ ಆಹಾರ ಪಚನವಾಗುವ ಕ್ರಿಯೆಯನ್ನು ವೀಕ್ಷಿಸಬಹುದಲ್ಲ! ಕೂಡಲೇ ಅಲೆಕ್ಸಿಸ್‌ನೊಂದಿಗೆ ಒಪ್ಪಂದ ಮಾಡಿಕೊಂಡು, ಅವನನ್ನು ತನ್ನ ಮನೆಯಲ್ಲೇ ಉಳಿಸಿಕೊಂಡರು. ಸೆರೆಂಡಿಪಿಟಿ ತನ್ನ ನಾಟಕವನ್ನು ಪ್ರಾರಂಭಿಸಿತ್ತು!

ಜಠರದಲ್ಲಿ ಪಚನಕ್ರಿಯೆ – ಬ್ಯೂಮಾಂಟ್‌ರ ಸಂಶೋಧನೆ

ಜಠರದಲ್ಲಿ ಆಹಾರವು ಪಚನವಾಗುವ ಬಗ್ಗೆ ವೈದ್ಯರಿಗೆ ಸರಿಯಾದ ಮಾಹಿತಿಯಿರಲಿಲ್ಲ. ಹಿಪೊಕ್ರೇಟ್ಸ್ ಪ್ರಕಾರ, ಪಚನವು ಆಹಾರ ಬೆರೆತು ನಿಧಾನವಾಗಿ ಬೆಂದು ಬಾಡುವ ಕ್ರಿಯೆ. ಆಹಾರ ಬೆಂಕಿಯ ಮೇಲೆ ಬೇಯುವಂತೆ ದೇಹದ ಶಾಖದಿಂದ ಪಚನವಾಗುತ್ತದೆ ಎಂದು ಕೆಲ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದರು. ಆಹಾರ ಹುದುಗುವುದರಿಂದ ಅನ್ನರಸವಾಗುತ್ತದೆ ಎಂದು ಕೆಲವರು ನಂಬುತ್ತಿದ್ದರು. ಇನ್ನೂ ಕೆಲವರು, ಆಹಾರ ಕೊಳೆಯುವ ಮೂಲಕ ಪಚನವಾಗುತ್ತದೆ ಎಂದೂ, ಜಠರವು ಆಹಾರವನ್ನು ಜಜ್ಜಿ, ಹಿಂಡಿ, ಪುಡಿಮಾಡುವುದರ ಮೂಲಕ ಪಚನಗೊಳಿಸುತ್ತದೆ ಎಂದೂ ತಿಳಿಯುತ್ತಿದ್ದರು.

ಹೀಗೆ, ಪಚನಕ್ರಿಯೆ ಹೇಗೆ ನಡೆಯುತ್ತದೆಂಬ ವಿಷಯ ವಿಜ್ಞಾನಿಗಳಿಗೆ ಒಗಟಾಗಿಯೇ ಉಳಿಯಿತು. ಇಟಲಿಯ ಸ್ಪಾಲಾಂಜಾನಿ ಎಂಬ ವಿಜ್ಞಾನಿ, ಜಠರದಲ್ಲಿ ಒಂದು ದ್ರವ ಉತ್ಪತ್ತಿಯಾಗುತ್ತದೆ, ಅದಕ್ಕೆ ಆಹಾರ ಕರಗಿಸುವ ಶಕ್ತಿ ಇದೆ ಎಂದು ಕಂಡುಹಿಡಿದು ಅದನ್ನು ಜಠರರಸ ಎಂದು ಹೆಸರಿಸಿದರು.

ಈ ಪರಿಸ್ಥಿತಿಯಲ್ಲಿ ಬ್ಯೂಮಾಂಟ್ ತಮ್ಮ ಸಂಶೋಧನೆ ಪ್ರಾರಂಭಿಸಿದರು. ಕೆಲ ಗಂಟೆಗಳ ಉಪವಾಸವಿದ್ದ ಅಲೆಕ್ಸಿಯ ಜಠರದ ಕಿಟಕಿಯ ಬಳಿ ದೀಪವಿಟ್ಟು ಒಳಭಾಗವನ್ನು ಪರಿಶೀಲಿಸಿದರು. ಜಠರದ ಒಳಚರ್ಮ ಮೃದುವಾಗಿದ್ದು ಕಂದು ಬಣ್ಣದಂತಿತ್ತು. ತಿಳಿಯಾದ ದ್ರವವೊಂದು ಚರ್ಮವನ್ನು ಲೇಪಿಸಿತ್ತು. ರೊಟ್ಟಿಯ ಚೂರುಗಳನ್ನು ಕಿಟಕಿ ಮೂಲಕ ಒಳಕ್ಕೆ ಹಾಕಿ ವೀಕ್ಷಿಸಿದಾಗ, ಕ್ಷಣಾರ್ಧದಲ್ಲಿ ಜಠರಚರ್ಮದ ಮೇಲೆ ಬೆವರಿನ ಹನಿಗಳಂತೆ ಅನೇಕ ಹನಿಗಳು ಮೂಡಿ ಹರಿಯತೊಡಗಿದವು. ಆಹಾರವಿದ್ದಾಗ ಮಾತ್ರ ಜಠರರಸ ಉತ್ಪತ್ತಿಯಾಗುತ್ತದೆ ಎಂಬುದನ್ನು ಬ್ಯೂಮಾಂಟ್ ಕಂಡುಹಿಡಿದರು.

ಅವರು ಎರಡು ಪ್ರಮುಖ ವಿಚಾರಗಳನ್ನು ಗುರುತಿಸಿದರು:

  1. ಜಠರರಸವು ಆಮ್ಲೀಯವಾಗಿದೆ.

  2. ಆಹಾರ ಜಠರರಸ ಉತ್ಪಾದನೆಯನ್ನು ಪ್ರೇರೇಪಿಸುತ್ತದೆ; ಆಹಾರವಿಲ್ಲದಿದ್ದಾಗ ಜಠರರಸ ಉತ್ಪಾದನೆಯೇ ಇರುವುದಿಲ್ಲ.

ಅಲೆಕ್ಸಿಯ ಜಠರರಸವನ್ನು ಹೊರತೆಗೆದು ಗಾಜಿನ ಬೀಕರ್‌ನಲ್ಲಿ ಆಹಾರ ಚೂರುಗಳನ್ನು ಮುಳುಗಿಸಿ, ಅದರ ಪಚನಕ್ರಿಯೆಯನ್ನು ಗಮನಿಸಿದರು. ಈ ಮೂಲಕ ಜಠರರಸದಲ್ಲಿ ದುರ್ಬಲ ಹೈಡ್ರೋಕ್ಲೋರಿಕ್ ಆಮ್ಲವಿದೆ ಎಂಬುದನ್ನು ಸಾಬೀತುಪಡಿಸಿದರು. ಈ ಪ್ರಯೋಗದಿಂದ ಪಚನ ತಾಂತ್ರಿಕ ಕ್ರಿಯೆಯಲ್ಲ, ಅದು ರಾಸಾಯನಿಕ ಕ್ರಿಯೆ ಎಂಬುದನ್ನು ಸ್ಪಷ್ಟಪಡಿಸಿದರು.

ವಿವಿಧ ಆಹಾರಗಳ ಪಚನವನ್ನು ತಿಳಿಯಲು ಮತ್ತೊಂದು ಪ್ರಯೋಗ ಮಾಡಿದರು. ಹಸಿ ಗೋಮಾಂಸ, ಬೇಯಿಸಿದ ಗೋಮಾಂಸ, ಹಂದಿ ಮಾಂಸ, ಹಳಸಿದ ರೊಟ್ಟಿ ಮತ್ತು ಎಲೆಕೋಸು – ಇವುಗಳನ್ನು ದಾರಕ್ಕೆ ಕಟ್ಟಿ ಅಲೆಕ್ಸಿಯ ಜಠರದೊಳಗೆ ಹಾಕಿದರು. ಒಂದು ಗಂಟೆಯ ನಂತರ ಹೊರತೆಗೆದಾಗ ರೊಟ್ಟಿ ಮತ್ತು ಎಲೆಕೋಸು ಅರ್ಧವಾಗಿ ಜೀರ್ಣವಾಗಿದ್ದವು, ಮಾಂಸ ಬದಲಾಗಿರಲಿಲ್ಲ. ಎರಡು ಗಂಟೆಗಳ ನಂತರ ಎಲೆಕೋಸು, ರೊಟ್ಟಿ ಮತ್ತು ಬೇಯಿಸಿದ ಮಾಂಸ ಪೂರ್ತಿಯಾಗಿ ಜೀರ್ಣಗೊಂಡಿದ್ದವು, ಹಸಿ ಮಾಂಸ ಮಾತ್ರ ಹಾಗೆಯೇ ಉಳಿಯಿತು. ಇನ್ನೂ ಒಂದು ಗಂಟೆಯ ನಂತರ ಹಸಿ ಮಾಂಸವೂ ಜೀರ್ಣವಾಗಲು ಪ್ರಾರಂಭಿಸಿತು. ಇದರಿಂದ ವಿವಿಧ ಆಹಾರಗಳಿಗೆ ಪಚನಕ್ಕೆ ಬೇರೆ ಬೇರೆ ಸಮಯ ಬೇಕು ಎಂಬುದು ತಿಳಿಯಿತು.

ಅಲೆಕ್ಸಿಯನ್ನು 17 ಗಂಟೆಗಳ ಉಪವಾಸವಿರಿಸಿ, ಅವನ ಜಠರದ ಉಷ್ಣತೆಯನ್ನು ಅಳೆಯಲಾಯಿತು. ಅದು 100°F (ಫಾರೆನ್ಹೀಟ್). ಜಠರರಸದಲ್ಲಿ ಮಾಂಸದ ತುಂಡು ಮುಳುಗಿಸಿ ಅದನ್ನು 100°F ತಾಪಮಾನದಲ್ಲಿ ಇರಿಸಿದಾಗ, 40 ನಿಮಿಷಗಳಲ್ಲಿ ಮಾಂಸ ಜೀರ್ಣಗೊಳ್ಳಲು ಆರಂಭಿಸಿತು, ನಾಲ್ಕು ಗಂಟೆಗಳ ಬಳಿಕ ಬಹುತೇಕ ಜೀರ್ಣಗೊಂಡಿತು, ಹತ್ತು ಗಂಟೆಗಳ ಬಳಿಕ ಸಂಪೂರ್ಣ ಜೀರ್ಣವಾಯಿತು. ಜಠರರಸಕ್ಕೆ ಆಹಾರ ಜೀರ್ಣಿಸುವ ಅದ್ಭುತ ಶಕ್ತಿ ಇದೆ ಎಂಬುದು ಬ್ಯೂಮಾಂಟ್‌ಗೆ ಗೊತ್ತಾಯಿತು.

ಅವರು ಕಂಡುಕೊಂಡ ಮತ್ತೊಂದು ವಿಚಾರವೆಂದರೆ – ಭಯ, ಕೋಪ ಇತ್ಯಾದಿ ಮನಸ್ಥಿತಿಗಳಲ್ಲಿ ಜಠರರಸ ಉತ್ಪಾದನೆ ಕಡಿಮೆಯಾಗುತ್ತದೆ. ಹಾಗೆಯೇ ಕೊಬ್ಬು ಜೀರ್ಣವಾಗಲು ಹೆಚ್ಚು ಕಾಲ ಬೇಕೆಂಬುದನ್ನು ತಿಳಿದರು. ಬ್ಯೂಮಾಂಟ್ ಅಲೆಕ್ಸಿಯ ಜಠರರಸವನ್ನು ಹೊರತೆಗೆದು ತಮ್ಮ ಬಾಯಂಗಳದಲ್ಲೇ ಪ್ರಯೋಗ ಮಾಡಿದ್ದರೆಂಬುದು ಅವರ ವೈಜ್ಞಾನಿಕ ಧೈರ್ಯವನ್ನು ತೋರಿಸುತ್ತದೆ.


1838ರಲ್ಲಿ ಬ್ಯೂಮಾಂಟ್ ತಮ್ಮ ಎಲ್ಲಾ ಸಂಶೋಧನೆಗಳನ್ನು "ಜಠರರಸ ಹಾಗೂ ಪಚನಕ್ರಿಯೆಗಳ ಬಗ್ಗೆ ಪ್ರಯೋಗಗಳು ಮತ್ತು ವೀಕ್ಷಣೆಗಳು" ಎಂಬ ಶೋಧಪ್ರಬಂಧದಲ್ಲಿ ಪ್ರಕಟಿಸಿದರು.

ಆದರೆ, ನಿರಂತರ ಪ್ರಯೋಗಗಳಿಂದ ಬೇಸತ್ತ ಅಲೆಕ್ಸಿ ಸಹಕರಿಸಲು ನಿರಾಕರಿಸಿದ. ನಂತರ ಒಪ್ಪಂದದ ಮೂಲಕ ವರ್ಷಕ್ಕೆ 2000 ಡಾಲರ್ ನೀಡುವುದಾಗಿ ಹೇಳಿ ಪ್ರಯೋಗ ಮುಂದುವರಿಸಿದರೂ, ಕೊನೆಗೆ ಅಲೆಕ್ಸಿ ಊರ ಬಿಟ್ಟು ಹೋದನು ಮತ್ತು ಮತ್ತೆ ಬ್ಯೂಮಾಂಟ್‌ರೊಂದಿಗೆ ಸಹಕರಿಸಲಿಲ್ಲ. ಹೀಗಾಗಿ ಅವರ ಪ್ರಯೋಗಗಳು ಅಲ್ಲಿ ಕೊನೆಗೊಂಡವು.

1825ರಲ್ಲಿ ಆರಂಭವಾದ ಬ್ಯೂಮಾಂಟ್‌ರ ಪಚನ ಸಂಶೋಧನೆಗಳು 1833ರವರೆಗೆ ಮುಂದುವರಿದು, ಪಚನಕ್ರಿಯೆಯ ಅನೇಕ ನಿಗೂಢ ರಹಸ್ಯಗಳನ್ನು ಬೆಳಕಿಗೆ ತಂದವು. ಬಂದೂಕಿನಿಂದ ಹೊರಟ ಆಕಸ್ಮಿಕ ಗುಂಡು – ವೈದ್ಯಕೀಯ ಇತಿಹಾಸದಲ್ಲಿ ಮಹತ್ವದ ಸಂಶೋಧನೆಗಳಿಗೆ ದಾರಿ ಮಾಡಿಕೊಟ್ಟಿತು.

ಸೆರೆಂಡಿಪಿಟಿ ಬ್ಯೂಮಾಂಟ್ ಮೂಲಕ ವೈದ್ಯಜ್ಞಾನವನ್ನು ಶ್ರೀಮಂತಗೊಳಿಸಿತು!

No comments:

Post a Comment