ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, September 4, 2025

ಸೊನ್ನೆಯ ಸುತ್ತ ಮುತ್ತಾ?

ಸೊನ್ನೆಯ ಸುತ್ತ ಮುತ್ತಾ?

 

                     


             
ಲೇಖಕರು ಶ್ರೀ ಕೃಷ್ಣ ಸುರೇಶ

ಇಂದು ನಾವು ಬದುಕುತ್ತಿರುವ ಡಿಜಿಟಲ್‌ ಲೋಕದಲ್ಲಿ ಗಣಕೀಕರಣಕ್ಕೆ ಮೂಲಭೂತವಾಗಿ ಬಳಕೆಯಾಗುವುದು ದ್ವಿಮಾನ ಪದ್ಧತಿಯ ಎರಡು ಅಂಕೆಗಳು. ಅವು ಯಾವುವೆಂದರೆ ಮತ್ತು 1. ಗಣಕ ಯಂತ್ರಕ್ಕೆ ಅರ್ಥವಾಗುವ ಭಾಷೆಯ ವರ್ಣಮಾಲೆಯಲ್ಲಿರುವುದು ಎರಡೇ ವರ್ಣಗಳು. 0 ಎಂದರೆ ಸ್ವಿಚ್‌ ಆಫ್‌, 1 ಎಂದರೆ ಸ್ವಿಚ್‌ ಆನ್. ಎಲ್ಲಾ ಮಾನವ ಸಂವೇದಿ  ಭಾಷೆಯ ಅಕ್ಷರಗಳು, ಅಂಕೆಗಳು, ಸಂಕೇತಗಳು, ಧ್ವನಿಗಳು, ದೃಶ್ಯಗಳು ಎಲ್ಲವನ್ನೂ ಎರಡು ವರ್ಣಗಳನ್ನು ಬಳಸಿಕೊಂಡು ವಿವಿಧ ಸಂಯೋಜನೆಗಳ ಮೂಲಕ ದ್ವಿಮಾನ ಪದ್ಧತಿಗೆ ಬದಲಾಯಿಸಿ ಕಂಪ್ಯೂಟರಿಗೆ ಎಲ್ಲವನ್ನೂ ನಾವು ತಿಳಿಸಬೇಕಾಗುತ್ತದೆ. ಇಂದು ವ್ಯಾಪಕವಾಗಿ ಬಳಸುವ ವಾನ್‌ ನೋಯ್ಮನ್‌ರ ಆರ್ಕಿಟೆಕ್ಚರ್‌ ಕಂಪ್ಯೂಟಿಂಗಿನಲ್ಲಿ ಮಾಹಿತಿಯನ್ನು ಡೇಟಾ ಮತ್ತು ಇನಸ್ಟ್ರಕ್ಷನ್‌ ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಉದಾಹರಣೆಗೆ 2 ಮತ್ತು 3 ಮೊತ್ತ ಕಂಡುಹಿಡಿಯುವ ಕಂಪ್ಯೂಟಿಂಗಿನಲ್ಲಿ 2 ಮತ್ತು 3 ಡೇಟಾ ಆದರೆ ಮೊತ್ತ ಕಂಡುಹಿಡಿಯುವ + ಸಂಕೇತ ಇನಸ್ಟ್ರಕ್ಷನ್‌ ಆಗಿರುತ್ತದೆ. ಡೇಟಾ ಮತ್ತು ಇನಸ್ಟ್ರಕ್ಷನ್‌ಗಳನ್ನೂ ಸಹ 0 ಮತ್ತು 1 ರೂಪಕ್ಕೆ ಬದಲಾಯಿಸಿ ಕಂಪ್ಯೂಟರ್‌ ಟಾಸ್ಕನ್ನು ನಿರ್ವಹಿಸಿ ಮೊತ್ತವನ್ನು ದ್ವಿಮಾನ ಪದ್ಧತಿಯಲ್ಲಿ ಲೆಕ್ಕಿಸಿ ನಮಗೆ ಅರಿವಾಗುವ ಭಾಷೆಯ ರೂಪದಲ್ಲಿ ಬದಲಾಯಿಸಿ ನಮಗೆ ಫಲಿತಾಂಶವನ್ನು ನೀಡುತ್ತದೆ. ಸರಿ (1) ಅಥವಾ ತಪ್ಪುಗಳ(0) ವಿಶ್ಲೇಷಿಸುವ ಮತ್ತು ಬೂಲಿಯನ್‌ ಗಣಿತದ ಮೂಲಕ್ರಿಯೆಗಳನ್ನು (AND, OR, NOT) ಸಹ ದ್ವಿಮಾನ ಪದ್ಧತಿಗೆ ಬದಲಾಯಿಸಿ ಕಂಪ್ಯೂಟಿಂಗ್ ಮಾಡಬೇಕಾಗುತ್ತದೆ. 0 ಮತ್ತು 1 ಗಳನ್ನು ಬೈನರಿ ಡಿಜಿಟ್‌ ಅಥವಾ ಬಿಟ್‌ ಎಂದು ಸಂಕ್ಷಿಪ್ತವಾಗಿ ಹೇಳುತ್ತಾರೆ. ಒಂದು ಬಿಟ್‌ ಎಂದರೆ 0 ಅಥವಾ 1 ಇವುಗಳಲ್ಲಿ ಯಾವುದಾದರೂ ಒಂದು ಅಂಕೆ. ನಾಲ್ಕು ಬಿಟ್‌ ಗಳ ಮಾಲೆಯನ್ನು ಒಂದು ನಿಬಲ್‌ ಎಂತಲೂ ಎಂಟು ಬಿಟ್ಗಳ ಮಾಲೆಯನ್ನು ಒಂದು ಬೈಟ್‌ ಎಂತಲೂ ಕರೆಯುತ್ತಾರೆ. ದ್ವಿಮಾನ ಪದ್ಧತಿಯಲ್ಲಿ ಬಳಕೆಯಲ್ಲಿರುವ ಸೊನ್ನೆಯನ್ನು ಮತ್ತು ಅದರ ಸ್ಥಾನ ಸೂಚಕ ಬೆಲೆಯನ್ನು ಮಾನವ ಕುಲ ಕಂಡುಕೊಳ್ಳದೇ ಹೋಗಿದ್ದರೆ ಗಣಿತ ಶಾಸ್ತ್ರವಾಗಲಿ ವಿಜ್ಞಾನ ತಂತ್ರಜ್ಞಾನವಾಗಲಿ ಇಷ್ಟೊಂದು ಪ್ರಗತಿ ಹೊಂದಲು ಸಾಧ್ಯವಾಗುತ್ತಿರಲಿಲ್ಲ ಎಂಬುದರಲ್ಲಿ ಅನುಮಾನವೇ ಇಲ್ಲ. ಗಣಿತಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅಪಾರ. ಅದರಲ್ಲೂ ಸೊನ್ನೆಯ ಬಳಕೆಯನ್ನು ಜಗತ್ತಿಗೆ ತಿಳಿಸಿದ ಭಾರತೀಯರ ಕೊಡುಗೆ ಅನನ್ಯವಾದದ್ದು.

 ಸೊನ್ನೆಯ ಪ್ರಸ್ತಾಪವನ್ನು ಗ್ವಾಲಿಯರನಲ್ಲಿರುವ ಚತುರ್ಭುಜ ವಿಷ್ಣು ದೇವಾಲಯದ ಶಿಲಾ ಶಾಸನವೊಂದರಲ್ಲಿ ಪ್ರಸ್ತಾಪ ಮಾಡಲಾಗಿದೆ. ಈ ಶಾಸನವು ಕ್ರಿಶ 876 ವರ್ಷಕ್ಕೆ ಸೇರಿದ್ದು ಎಂದು ಪರಿಣಿತರ ಅಭಿಮತವಾಗಿದೆ.

ಇಂಡೋನೇಷಿಯಾದಲ್ಲಿನ ದಕ್ಷಿಣ ಸುಮಾತ್ರಾದ ತತಾಂಗ್‌ ನದಿಯ ದಡದಲ್ಲಿ ಪತ್ತೆಯಾದ ಪ್ರಶಸ್ತಿ ಕೆಡುಕನ್‌ ಬುಕಿಟ್ ಎಂಬ ಶಿಲಾಶಾಸನದಲ್ಲಿಯೂ ಸೊನ್ನೆಯ ಪ್ರಸ್ತಾಪವಿದೆ. ಇದನ್ನು ಪಲ್ಲವ ಲಿಪಿಯಲ್ಲಿ ಬರೆದ ಹಳೇ ಮಲೆಯನ್‌ ಭಾಷೆಯಲ್ಲಿ ಕೆತ್ತಲಾಗಿದೆಅಂದು ಬಳಕೆಯಲ್ಲಿದ್ದ ತಮಿಳುನಾಡು ಮೂಲದ ಪಲ್ಲವ ಲಿಪಿಯ ಹಲವಾರು ಅಕ್ಷರಗಳು ಮತ್ತು ಕನ್ನಡದ ಅಕ್ಷರಗಳು ಹೋಲಿಕೆಯಲ್ಲಿ ಒಂದೇ ರೀತಿ ಇವೆ. ಕದಂಬ-ಪಲ್ಲವ
ಲಿಪಿಗಳ ಸಂಕರಣದಿಂದ ಕನ್ನಡ ಮತ್ತು ತೆಲುಗು ಲಿಪಿಗಳ ಉಗಮವಾಯಿತೆಂದು ಪಂಡಿತರ ಅಭಿಮತವಿದೆ. ಸ್ವಸ್ತಿ ಶ್ರೀ ಶಕ ವರ್ಷಾತಿತ್‌ 604 ಏಕಾದಶಿ ಶುಕ್ಲ ಪಕ್ಷ ಎಂದು ಆರಂಭಗೊಳ್ಳುವ ಶಿಲಾಶಾಸನ ಶ್ರೀ ವಿಜಯ ಅರಸು ಮನೆತನದ ಆಳ್ವಿಕೆಯ ಕಾಲದ್ದೆಂದು ಸಂಶೋಧನೆಗಳಿಂದ ತಿಳಿದು ಬರುತ್ತದೆ.        ಇದರಲ್ಲಿ ವರ್ಷಾತಿತ್‌ 605 (ಕ್ರಿಶ 683) ಎನ್ನುವಲ್ಲಿ ಸೊನ್ನೆಯ ಬಳಕೆಯಾಗಿದೆ. ತಲಾಂಗ್ತಾವ್‌ ಮತ್ತು ಕೋಟಾಕಾಪುರಗಳಲ್ಲಿ ಶಕವರ್ಷ 606 ಮತ್ತು 608 ಗಳನ್ನು (ಕ್ರಿಶ 684 ಮತ್ತು ಕ್ರಿಶ 686). ಕೆತ್ತಿರುವ ಶಿಲಾಶಾಸನಗಳು ದೊರೆತಿವೆ. ಇವುಗಳಲ್ಲಿ ಸೊನ್ನೆಯ ಬಳಕೆಯ ಪ್ರಸ್ತಾಪದ ಜೊತೆಗೆ ತಮಿಳು ನಾಡನ್ನು ಅಲ್ಲದೆ ದಕ್ಷಿಣ ಭಾರತವನ್ನು ಆಳಿದ ಪಲ್ಲವ, ಚೋಳ, ಚೇರ ಮುಂತಾದ ಅರಸರು ಬಲವಾದ ನೌಕಾಬಲವನ್ನು ಕಟ್ಟಿ ಆಗ್ನೇಯ ಏಷ್ಯಾದ ಹಲವಾರು ರಾಜ್ಯಗಳನ್ನೂ ಸಹ ಆಳಿದ್ದರು, ಒಂದು ಕಾಲದಲ್ಲಿ ಇವು ಸಹ ಭಾರತದ ಭಾಗವಾಗಿದ್ದು ಭಾರತದ ಧರ್ಮ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದವು ಎನ್ನುವ ಅಂಶವನ್ನು ಎತ್ತಿ ಹಿಡಿಯುತ್ತವೆ. ಜೊತೆಗೆ ಪಲ್ಲವರ ಭಾಷೆ ಸಂಸ್ಕೃತಮಯವಾಗಿದ್ದಿತು ಎನ್ನುವುದಕ್ಕೆ ಎಲ್ಲಾ ಶಿಲಾಶಾಸನಗಳು ಸಾಕ್ಷಿಯಾಗಿ ನಿಲ್ಲುತ್ತವೆ.         
೧೮೯೧ರಲ್ಲಿ ಕಾಂಬೋಡಿಯಾದ ಮೆಕಾಂಗ್‌ ನದಿಯ ದಡದಲ್ಲಿ ಒಂದು ಶಿಲಾ ಶಾಸನವನ್ನು ಫ್ರೆಂಚ್‌ ಸಂಶೋಧನಾ ತಂಡವು ಪತ್ತೆ ಮಾಡಿತು. K 127 ಎಂದು ಗುರುತಿಸಲಾಗುವ ಶಿಲಾ ಶಾಸನದಲ್ಲಿ ಐದು ಚೀಲ ಅಕ್ಕಿಯನ್ನು, ಐದು ಜೊತೆ ಎತ್ತುಗಳನ್ನು ಮತ್ತು ಜೀತದಾಳುಗಳನ್ನು ಮಾರಾಟ ಮಾಡಿದ ದಾಖಲೆ ಸಿಗುತ್ತದೆ. ಖಮೆರ್‌ ವರ್ಷವನ್ನು ಶಿಲಾಶಾಸನದಲ್ಲಿ ಶಕವರ್ಷ ೬೦೫(ಕ್ರಿಶ ೬೮೫) ಎಂದು ನಮೂದಿಸಲಾಗಿರುವಲ್ಲಿ ಕೆತ್ತಲಾದ ಸೊನ್ನೆಯನ್ನು 1931 ರಲ್ಲಿ ಫ್ರೆಂಚ್‌ ಸಂಶೋಧಕ ಜಾರ್ಜ್‌ ಪತ್ತೆ ಮಾಡಿದನು. ಅಮಿರ್‌ ಅಕ್ಜೆಲ್‌ ಎಂಬ ಅಮೆರಿಕನ್‌ ಗಣಿತ ಬೋಧಕರು ಶಿಲಾಶಾಸನದ ಆಧಾರದ ಮೇಲೆ ಸೊನ್ನೆಯ ಸಂಶೋಧಕರು ಕಾಂಬೋಡಿಯಾದವರು ಎಂಬ ಆತುರದ ತೀರ್ಮಾನಕ್ಕೆ ಬಂದು ೨೦೧೫ರಲ್ಲಿ ಇದರ ಬಗ್ಗೆ ಒಂದು ಪುಸ್ತಕವನ್ನೂ ಪ್ರಕಟಿಸಿದರು. ೧೮೮೧ರಲ್ಲಿ ಇಂದಿನ ಪಾಕಿಸ್ಥಾನದ ಕೈಬರ್‌ ಫಕ್ತೂನ್ವಾ ಪ್ರಾಂತದ ಬಕ್ಷಾಲಿ ಎಂಬ ಹಳ್ಳಿಯ ರೈತನೊಬ್ಬನೊಬ್ಬನ ಪಾಳು ಬಿದ್ದದ್ದ ಮನೆಯಲ್ಲಿ ಭೂರ್ಜಮರದ ತೊಗಟೆಯ 70 ಹಾಳೆಗಳಿರುವ ಪುಸ್ತಕವೊಂದು ಪತ್ತೆಯಾಗುತ್ತದೆ. ಭಾರತದ ಪ್ರಾಕ್ತನಶಾಸ್ತ್ರದ ಪಿತಾಮಹರೆಂದು ಪ್ರಖ್ಯಾತರಾದ ಅಲೆಗ್ಸಾಂಡರ್‌ ಕನ್ನಿಂಗ್‌ಹ್ಯಾಮರ ಮೂಲಕ ಅದು ಬ್ರಿಟನ್ನಿನ ಆಕ್ಸಫರ್ಡಿನ ಬೋಡ್ಲಿಯನ್‌ ಗ್ರಂಥಾಲಯವನ್ನು ಸೇರುತ್ತದೆ. ಗುರುಮುಖಿಗೆ ಮೂಲವೆನಿಸಿರುವ ಶಾರದಾ ಲಿಪಿಯಲ್ಲಿ ಕಾಶ್ಮೀರಿ ಮಿಶ್ರಿತ ಸಂಸ್ಕೃತ ಭಾಷೆಯಲ್ಲಿ ಬರೆಯಲಾಗಿರುವ ಗ್ರಂಥವು ಗಣಿತಕ್ಕೆ ಸಂಬಂಧಿಸಿದ ನಿಯಮಗಳ ಶ್ಲೋಕಗಳು ಮತ್ತು ದಿನನಿತ್ಯ ಬಳಕೆಗೆ ಬರುವ ಗಣಿತದ ಸಮಸ್ಯೆಗಳನ್ನು ಅಲ್ಲದೆಯೆ ಅವುಗಳಿಗೆ ಪರಿಹಾರಗಳನ್ನು ಒಳಗೊಂಡಿರುತ್ತದೆ. ಕೈಬರಹದಲ್ಲಿರುವ ಗ್ರಂಥದಲ್ಲಿ ಹಲವಾರು ಕಡೆಗಳಲ್ಲಿ ಸಂಖ್ಯೆಗಳನ್ನು ಬರೆಯುವಾಗ ಅಂಕೆಗಳ ನಡುವೆ ಸೊನ್ನೆಯನ್ನು ಅಂಕೆಯಂತೆ ಸೂಚಿಸಲು ಬಿಂದುವನ್ನು ಬಳಸಿರುವುದು ಗಮನ ಸೆಳೆಯುತ್ತದೆ ಗ್ರಂಥವನ್ನು ಆಳವಾಗಿ ಅಧ್ಯಯನ ಮಾಡಿದ ಪಾಶ್ಚಿಮಾತ್ಯ ಘನ ಪಂಡಿತರು ಇದರ ಕಾಲಮಾನವನ್ನು ಚೌಕಾಸಿ ಮಾಡುತ್ತಾ ೧೨ನೇ ಶತಮಾನಕ್ಕಿಂತ ಹಳೆಯದಲ್ಲವೆಂದೂ ಕಡೇ ಪಕ್ಷ ಗ್ವಾಲಿಯರ್‌ ಶಿಲಾಶಾಸನಕ್ಕಿಂತ ಇತ್ತೀಚಿನದ್ದೆಂದು ತೀರ್ಮಾನಿಸಿ ಷರಾ ಬರೆದರು. ಆದರೆ, ೨೦೧೭ರಲ್ಲಿ ಗ್ರಂಥದ ಮೂರು ಹಾಳೆಗಳ ಸಣ್ಣ ಭಾಗಗಳನ್ನು ಕಾರ್ಬನ್‌ ಡೇಟಿಂಗ್‌ ಪರೀಕ್ಷೆಗೆ ಒಳಪಡಿಸಿದಾಗ ಎರಡು ಹಾಳೆಗಳ ಕಾಲಮಾನವನ್ನು ಕ್ರಿಶ 680-779 ಮತ್ತು ಕ್ರಿಶ 885-993 ಎಂದು ನಿಗದಿಯಾಯಿತು. ಮೂರನೆಯ ಹಾಳೆಯ ಕಾರ್ಬನ್‌ ಡೇಟಿಂಗ್‌ ಫಲಿತಾಂಶವು ಪಾಶ್ಚಿಮಾತ್ಯ ಘನ ಪಂಡಿತರನ್ನು ದಿಗ್ಭ್ರಮೆಗೆ ಒಳಪಡಿಸಿತು. ಮೂರನೆಯ ಹಾಳೆಯ ಕಾಲಮಾನ ಕ್ರಿಶ 224 ಮತ್ತು 383 ನಡುವೆ ಎಂದು ನಿಗದಿಯಾಗಿದ್ದಿತು, ಭೂರ್ಜಮರದ ತೊಗಟೆಯ ಗ್ರಂಥದ 70 ಪುಟಗಳು ಪ್ರತಿಯೊಂದು ಬೇರೆ ಬೇರೆ ಕಾಲಮಾನಕ್ಕೆ ಸೇರಿದ್ದವಾಗಿವೆ ಎಂಬ ಮತ್ತೊಂದು ಆಶ್ಚರ್ಯವನ್ನು ಪಂಡಿತರು ಎದುರಿಸುವಂತಾಯಿತು. ವೈಜ್ಞಾನಿಕ ಪರೀಕ್ಷೆ ಮತ್ತು ಗ್ರಂಥದ ನಿರ್ದಿಷ್ಟ ಪುಟದ ಭಾಷೆಯ ಶೈಲಿ ಮತ್ತು ವಿಷಯದ ಕಾಲಮಾನದ ಆಧಾರದ ಮೇಲೆ ಸೊನ್ನೆಯ ಸಂಶೋಧನೆ ಮತ್ತು ಬಳಕೆಯನ್ನು ಕಂಡುಕೊಂಡ ಮೊದಲಿಗರು ಭಾರತೀಯರು  ಎಂಬುದು ಮತ್ತೊಮ್ಮೆ ಸಾಭೀತಾದಂತೆ ಆಯಿತು. 476 ಮತ್ತು 550 ನಡುವೆ ಜೀವಿಸಿದ್ದ ಆರ್ಯಭಟನು ಸಂಖ್ಯಾಶಾಸ್ತ್ರಕ್ಕೆ ನೀಡಿದ ಅಪಾರ ಕೊಡುಗೆಗಳಲ್ಲಿ ದಶಮಾನ ಪದ್ಧತಿಯನ್ನು ಪರಿಚಯಿಸುವುದರ ಜೊತೆಗೆ ಸೊನ್ನೆಯ ಬಳಕೆಯನ್ನು ಜಾರಿಗೆ ತಂದವರಲ್ಲಿ ಮೊದಲಿಗನು. ವರ್ಗ ಸಮೀಕರಣಗಳು, ತ್ರಿಕೋನಮಿತಿ, ಖಗೋಳಶಾಸ್ತ್ರಗಳಿಗೆ ಆರ್ಯಭಟನ ಕೊಡುಗೆ ಅಪಾರ. ೫೯೮-೬೬೮ ಜೀವಿಸಿದ್ದ ಬ್ರಹ್ಮಗುಪ್ತನು ಭೂಮಿಗೆ ವಿಶೇಷ ಆಕರ್ಷಣ ಶಕ್ತಿ ಇರುವುದನ್ನು ಮನಗಂಡಿದ್ದನು. ಶಕ್ತಿಯನ್ನು ಗುರುತ್ವಾಕರ್ಷಣೆ ಎಂದು ಕರೆದವರಲ್ಲಿ ಮೊದಲಿಗನೂ ಅವನೆ. ವರ್ಗಸಮೀಕರಣಗಳಿಗೆ ಪರಿಹಾರ ಒದಗಿಸುವ ಸೂತ್ರವನ್ನು ಮೊಟ್ಟಮೊದಲಿಗೆ ನೀಡಿದವನು ಬ್ರಹ್ಮಗುಪ್ತನೇ . ಸೊನ್ನೆಯನ್ನು ಒಂದು ಅಂಕೆ ಎಂದು ಪರಿಗಣಿಸಿ ಮೊದಲಿಗೆ ಪರಿಗಣಿಸಿ, ಅದಕ್ಕೆ ಸ್ಥಾನ ಬೆಲೆಯನ್ನು ನೀಡಿ ಲೆಕ್ಕಾಚಾರಕ್ಕೆ ಬಳಸಿ ಅಲ್ಗಾರಿದಂನ್ನು ರೂಪಿಸಿದ ಕೀರ್ತಿಗೆ ಬ್ರಹ್ಮಗುಪ್ತನೂ ಸಹ ಪಾಲುದಾರನಾಗಿದ್ದಾನೆ. ಬ್ರಹ್ಮಸ್ಫುಟಸಿದ್ಧಾಂತ ಮತ್ತು ಖಾಂಡಖಾಧ್ಯಾಯಕ ಇವು ಬ್ರಹ್ಮಗುಪ್ತನು ಬರೆದ ಎರಡು ಗ್ರಂಥಗಳು. ಇವುಗಳಲ್ಲಿ ಬ್ರಹ್ಮಸ್ಫುಟಸಿದ್ಧಾಂತ ಗ್ರಂಥವನ್ನು ಇಬ್ನ್‌ ಇಬ್ರಾಹಿಂ ಫಸಾರಿ ಎಂಬವನು ಅರೆಬಿಕ್‌ ಗೆ ಅನುವಾದಿಸಿದನು. ಕೃತಿಯೊಂದಿಗೆ ಭಾರತದ ಗಣಿತ ಶಾಸ್ತ್ರ ಮತ್ತು ಸಂಖ್ಯಾ ಪದ್ಧತಿ ಮತ್ತು ದಶಮಾನ ಪದ್ದತಿಗಳು ಅರಬ್‌ ಪ್ರಪಂಚವನ್ನು ತಲುಪಿತು. ಇದರಿಂದ ಪ್ರಭಾವಿತನಾದ ಅರಬ್‌ ಗಣಿತಜ್ಞನಾದ ಅಲ್‌ ಖ್ವಾರಿಜ್ಮಿಯು ಭಾರತೀಯ ಪದ್ಧತಿಯಲ್ಲಿ ಸಂಕಲನ ಮತ್ತು ವ್ಯವಕಲನ ಎಂಬ ಭಾರತೀಯ ಅಂಕೆಗಳನ್ನು ಮತ್ತು ಸಂಖ್ಯಾಪದ್ಧತಿಗೆ ಸಂಬಂಧಿಸಿದ ಪ್ರಸಿದ್ಧ ಪುಸ್ತಕವನ್ನು ಬರೆದನು. ಪುಸ್ತಕ ಮುಂದೆ ಲ್ಯಾಟಿನ್‌ ಭಾಷೆಗೆ ಅನುವಾದಗೊಂಡು ಯುರೋಪ ಮುಂತಾದ ಪಾಶ್ಚಮಾತ್ಯ ಜಗತ್ತನ್ನು ತಲುಪಿತು. ಅಲ್‌ ಖ್ವಾರಿಜ್ಮಿಯು ಸೊನ್ನೆ ಅಥವಾ ಶೂನ್ಯವನ್ನು ಸಿಫ್ರ್‌ ಎಂದು ಕರೆದನು. ಯುರೋಪಿಯನ್ನರ ಮಾತಿನ ಉಚ್ಛಾರದಲ್ಲಿ ಇದು ಜಿಫ್ರ್‌ ಆಗಿ ನಂತರ ಜಿಫ್ರೋ ಆಗಿ ಕೊನೆಗೆ ಬರುಬರುತ್ತಾ ಜೀರೋ ಆಗಿ ಉಳಿದಿದೆ
ಯುರೋಪಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದ್ದ ರೋಮನ್‌ ಸಂಖ್ಯಾಪದ್ಧತಿಯಲ್ಲಿ ಶೂನ್ಯ ಅಥವಾ ಸೊನ್ನೆಯೆಂಬುದರ ಪರಿಕಲ್ಪನೆಯೆ ಇರಲಿಲ್ಲ. . ಇದಕ್ಕೆ ವ್ಯತಿರಿಕ್ತವಾಗಿ ಭಾರತದ ಬ್ರಹ್ಮಗುಪ್ತ ಮುಂತಾದವರು ಸೊನ್ನೆ, ಅಭಾಗಲಬ್ದ ಸಂಖ್ಯೆಗಳು ಋಣಾತ್ಮಕ ಸಂಖ್ಯೆಗಳ ಬಗ್ಗೆ ಸಾಕಷ್ಟು ಸಿದ್ಧಾಂತಗಳನ್ನು ಮಂಡಿಸಿ ಸಾಧನೆ ಗಳನ್ನು ಮಾಡಿ ಜಗತ್ತಿಗೆ ತೋರಿಸಿದ್ದರು. ಭಾರತದ ಹಿನ್ನೆಲೆಯಲ್ಲಿ ಜೀವನದ ಪರಮ ಗುರಿಯೆಂದರೆ ಮುಕ್ತಿ ಹೊಂದುವುದು ಅಥವಾ ನಿರ್ವಾಣ ಹೊಂದುವುದು ಅಂದರೆ, ಶೂನ್ಯಕ್ಕೆ ತಲುಪುವುದಾದ್ದರಿಂದ ಸೊನ್ನೆಗೆ ಇನ್ನಿಲ್ಲದ ಮಹತ್ವವಿದೆ ಮತ್ತು ನಮ್ಮ ವೇದ ವೇದೋಪನಿಷದ್‌ ಪುರಾಣಗಳು ಪದೇ ಪದೇ ಇದನ್ನೇ ಪ್ರತಿಪಾದಿಸುವುದರಿಂದ ಶೂನ್ಯವೆಂಬುದು ಭಾರತೀಯರಿಗೆ ಅಮೂರ್ತವೆಂದು ಯಾವ ಕಾಲಘಟ್ಟದಲ್ಲಿಯೂ ಅನ್ನಿಸಿರಲಿಲ್ಲ. ಮೊದ ಮೊದಲಿಗೆ ಒಂದು ಬಿಂದುವನ್ನು ಸೊನ್ನೆಯ ಸಂಕೇತವಾಗಿ ಬಳಸುತ್ತಾ ಬಂದು ಕೊನೆಗೆ ವೃತ್ತವನ್ನು ಸೊನ್ನೆಗೆ ಸಂಕೇತವಾಗಿ ಉಳಿಸಿಕೊಂಡರು. ಅತ್ತಲಾಗಿ ಗ್ರೀಕರ ತತ್ವಶಾಸ್ತ್ರವು ಏನೋ ಇಲ್ಲದ, ಖಾಲಿ ಅಥವಾ ಶೂನ್ಯವೆಂಬುದು ಇರುವುದು ಅಸಾಧ್ಯವೆಂದು ಪ್ರತಿಪಾದಿಸಿದ್ದರಿಂದ ಅರಿಸ್ಟಾಟಲ್‌ ಒಳಗೊಂಡು ಶೂನ್ಯವೆಂಬುದು ಇರಲು ಸಾಧ್ಯವಿಲ್ಲವೆಂದು ಬಹುತೇಕ ಶಾಸ್ತ್ರ ಪಂಡಿತರು ನಂಬಿದ್ದರು. ಅಂಕೆ ಸಂಖ್ಯೆಗಳಿಗೂ ರೇಖಾಗಣಿತದ ಆಕೃತಿಗಳಿಗೂ ಇರುವ ಸಂಬಂಧವನ್ನು ಗ್ರೀಕರು ದೈವೀಕ ಎಂದು ಭಾವಿಸಿದ್ದರು. ಅವರು ಗಣಿತವೆಂದರೆ ಬಹುತೇಕ ರೇಖಾಗಣೀತವೆಂದೇ ಭಾವಿಸಿದ್ದು ಇದಕ್ಕೆ ಕಾರಣವಿರಬಹುದು. ಗ್ರೀಕರ ತರ್ಕದ ಪ್ರಕಾರ ಕನಿಷ್ಟ ಒಂದು ಮಾನದ್ದಾದರೂ ರೇಖೆ ಅಥವಾ ವೃತ್ತವಿರುತ್ತದೆ ಆದರೆ ಸೊನ್ನೆ ಮಾನದ ರೇಖೆಯಾಗಲಿ ವೃತ್ತವಾಗಲಿ ಅಥವಾ ಯಾವುದೇ ಆಕೃತಿಯಾಗಲಿ ಇರಲು ಸಾಧ್ಯವಿಲ್ಲ. ಹೀಗಾಗಿ ಶೂನ್ಯವೆಂಬುದು ಇರಲು ಸಾಧ್ಯವಿಲ್ಲ. ಹಾಗೆಯೆ 3 ಮಾನದ ರೇಖೆ ಅಥವಾ ವೃತ್ತವಿರಹುದು ಆದರೆ -3 ಇರುವ ರೇಖೆ ಅಥವಾ ವೃತ್ತ ಇರಲು ಹೇಗೆ ಸಾಧ್ಯ ?. ಋಣಾತ್ಮಕ ಮಾನದ ರೇಖಾಗಣಿತೀಯ ಆಕೃತಿಗಳು ಇರಲು ಸಾಧ್ಯವಿಲ್ಲ. ಆದ್ದರಿಂದ ಅವರು ಋಣ ಸಂಖ್ಯೆಗಳನ್ನು ಅವರು ಪರಿಗಣಿಸುತ್ತಲೇ ಇರಲಿಲ್ಲ. ಅಭಾಗಲಬ್ದ ಸಂಖ್ಯೆಗಳನ್ನು ಬಳಸುವುದಿರಲಿ, ಅವುಗಳ ಬಗ್ಗೆ ಯೋಚಿಸುವುದೇ ಧರ್ಮದ್ರೋಹವೆಂದು ಪೈಥಾಗೊರಿಯನ್ನರು ಪರಿಗಣಿಸಿದ್ದರು. ಅವರಲ್ಲಿ ಬಳಕೆಯಲ್ಲಿದ್ದ ಸಂಖ್ಯಾಶಾಸ್ತ್ರದಲ್ಲಿ ರೋಮನ್‌ ಮತ್ತು ಈಜಫ್ಷಿಯನ್ ಸಂಕೇತಗಳಿದ್ದು ಸಂಖ್ಯೆಗಳಲ್ಲಿ ಸ್ಥಾನ ಸೂಚಕವು(place holder) ಇರಲಿಲ್ಲ. ಉದಾಹರಣೆಗೆ ಐದನೂರ ಮೂರರಲ್ಲಿ ಐದು ನೂರುಗಳು ಇವೆ, ಹತ್ತುಗಳು ಇಲ್ಲ, ಬಿಡಿ ಸ್ಥಾನದಲ್ಲಿ ಮೂರು ಇದೆ. ಸೊನ್ನೆಯ ಬಳಕೆ ಗೊತ್ತಿರುವ ಭಾರತೀಯರಾದ ನಾವು ಇದನ್ನು ಮೊದಲಿನಿಂದಲೂ ೫೦೩ ಎಂದು ಬರೆದು ಸೂಚಿಸತ್ತೇವೆ. ಹತ್ತರ ಸ್ಥಾನದಲ್ಲಿ ಸೊನ್ನೆ ಬರೆಯುವುದರಿಂದ ಯಾವುದೇ ಗೊಂದಲಕ್ಕೆ ಇಲ್ಲಿ ಅವಕಾಶ ಇಲ್ಲ. ಆದರೆ ಗ್ರೀಕರಿಗೆ ಸೊನ್ನೆಯ ಪರಿಚಯವೇ ಇಲದಿರುವಾಗ ೫೦೩ನ್ನು ಮತ್ತು ೫೩ನ್ನು ಒಂದೆ ಬಗೆಯಲ್ಲಿ ಬರೆಯಬೇಕಾಗಿದ್ದಿತೆಂದರೆ ಎಷ್ಟು ಗೊಂದಲಗಳನ್ನು ಅದು ಸೃಷ್ಟಿಸಿರಹುದು ?. ಇಂತಿರಲು, ಅರೇಬಿಯಾದ ಮೂಲಕ ಪ್ರವೇಶಿಸಿದ ಸಿಫ್ರ್‌ ಅಥವಾ ಜಿಫ್ರ್‌ ಗ್ರೀಕರಲ್ಲಿದ್ದ ಗೊಂದಲವನ್ನು ನಿವಾರಿಸಿತು. ಇಂತಹ ಸ್ಥಾನ ಸೂಚಕ ಸಂಕೇತಗಳ ಬಳಕೆ ಬ್ಯಾಬಿಲೋನಿಯನ್ ಮತ್ತು ಮಾಯಾ ನಾಗರಿಕತೆಗಳಲ್ಲಿ ಬಳಕೆಯದ್ದಿತಾದರೂ ಸೊನ್ನೆ ಬಳಕೆಯ ಸಿದ್ಧಾಂತದಷ್ಟು ಪರಿಪೂರ್ಣವಾಗಿರಲಿಲ್ಲ. ಇಂತಿರಲು ಫಿಬೊನಾಚಿ ಎಂದು ಪ್ರಸಿದ್ಧನಾಗಿರುವ ಪೀಸಾದ ಲಿಯೋನಾರ್ಡೋ ಲೆಕ್ಕದ ಪುಸ್ತಕ(Libre Abaci) ಎಂಬ ಪುಸ್ತಕವನ್ನು೧೨೦೨ರಲ್ಲಿ ಪ್ರಕಟಿಸಿದ. ಉತ್ತರ ಆಫ್ರಿಕಾದ ಅರಬ್‌ ದೇಶಗಳನ್ನು ಸುತ್ತಿದ್ದ ಅವನಿಗೆ ಭಾರತೀಯ ಅಂಕೆಗಳ ಬಳಕೆಯ ವಿಧಾನದ ಶ್ರೇಷ್ಠತೆಯು ಮನನವಾಗಿತ್ತು. ಅವನ ಲೆಕ್ಕದ ಪುಸ್ತಕದಲ್ಲಿ ಸೊನ್ನೆಯ ಮಹತ್ವ ಮತ್ತು ಅದರ ಬಳಕೆಯೊಂದಿಗೆ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರಗಳನ್ನು ಹೇಗೆ ರೋಮನ್‌ ಅಂಕೆಗಳಿಗಿಂತ ಅತ್ಯಂತ ಸುಲಭವಾಗಿ ಲೆಕ್ಕಿಸಬಹುದೆಂಬುದನ್ನು ಉದಾಹರಣೆ ಸಹಿತ ವಿವರಿಸಿದ್ದ.

ಮೊದಮೊದಲಿಗೆ
ಯುರೋಪಿಯನ್ನರಲ್ಲಿ ಭಾರತೀಯ ಅಂಕೆಗಳ ಬಳಕೆಗೆ ಭಾರಿ ಪ್ರತಿರೋಧನೆಗಳು ಎದುರಾದರೂ ಕ್ರಮೇಣ ಅದರ ಅನುಕೂಲತೆಗಳು ಮತ್ತು ಸರಳತೆಯನ್ನು ಮನಗಂಡ ಎಲ್ಲರೂ ಒಪ್ಪಿ ಬಳಸಿಕೊಳ್ಳತೊಡಗಿದರು. ಹೀಗೆ ಮುಕ್ತಿ ಅಥವಾ ನಿರ್ವಾಣದ ಸೂಚಕವಾಗಿ ಬಳಕೆಗೆ ಬಂದ ಸೊನ್ನೆ ಅಥವಾ ಶೂನ್ಯ ಇಂದಿನ ಡಿಜಿಟಲ್‌ ಯುಗದ ಗಣಕದಲ್ಲಿ ಬಳಕೆಯಾಗುವ ಭಾಷಾ ವರ್ಣಮಾಲೆಯಲ್ಲಿ ಸರಿ ಅರ್ಧಭಾಗವಾಗಿ ಜಗತ್ತನ್ನು ನಡೆಸುತ್ತಿರುವ ಶಕ್ತಿಯಾಗಿದೆ ಎಂದರೆ ಆಶ್ಚರ್ಯವಲ್ಲವೇ? 

1 comment: