"ಅಂಚೆ:ಬಾಂಧವ್ಯದ ಬೆಸುಗೆಯ ಸಂಚಯನ ಸೇವೆ"
ಲೇಖನ: ಬಸವರಾಜ ಎಮ್ ಯರಗುಪ್ಪಿ
ಶಿಕ್ಷಕರು, ಹವ್ಯಾಸಿ ಬರಹಗಾರರು
ಸಾ.ಪೊ ರಾಮಗೇರಿ ತಾಲ್ಲೂಕು ಲಕ್ಷ್ಮೇಶ್ವರ ಜಿಲ್ಲಾ ಗದಗ.
ದೂರವಾಣಿ 9742193758
ಮಿಂಚಂಚೆ basu.ygp@gmail.com.
ಅಕ್ಟೋಬರ್ 9 – ವಿಶ್ವ ಅಂಚೆ ದಿನ
“ಅಂಚೆಯು ಹೃದಯದಿಂದ ಹೃದಯವನ್ನು ಬೆಸೆಯುವ ಸೇತುವೆ”
"ಹಿಮವಾಗಲೀ, ಮಳೆಯಾಗಲೀ, ಶಾಖವಾಗಲೀ ಅಥವಾ ರಾತ್ರಿಯ ಕತ್ತಲೆಯಾಗಲೀ ಈ ಅಂಚೆಗಳನ್ನು, ಅವರ ನಿಗದಿತ ಸುತ್ತುಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ತಲುಪಿಸುವುದನ್ನು ಯಾರಿಂದಲೂ ತಡೆಯಲಾಗುವುದಿಲ್ಲ" — ಎಂದು ಹೆರೊಡೋಟಸ್ ಹೇಳಿದರು. ಈ ಮಾತುಗಳನ್ನು ಯು.ಎಸ್. ಅಂಚೆ ಸೇವೆಯು ಧ್ಯೇಯವಾಕ್ಯವನ್ನಾಗಿ ಅಳವಡಿಸಿಕೊಂಡಿರುವುದು ಅಂಚೆಯ ಮಹತ್ವವನ್ನು ಸಾರುತ್ತದೆ.
ಪುರಾತನ ಕಾಲದ ಮೇಘಸಂದೇಶ, ಮಹಾರಾಜರ ಕಾಲದ ಪಾರಿವಾಳ ಸಂದೇಶಗಳು, ನಂತರದ ಕಾಲದ ಕುದುರೆ ಅಥವಾ ಕಾಲ್ನಡಿಗೆಯ ಸಂದೇಶವಾಹಕರಿಂದ ಆರಂಭವಾದ ಅಂಚೆ ಸೇವೆ, ಮಾನವ ಸಂವಹನದ ಹೊಸ ಅಧ್ಯಾಯವನ್ನು ಬರೆದಿತು. ಕಾಲ ಬದಲಾದಂತೆ ಅಂಚೆಯೂ ಬದಲಾಗಿತು, ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಇಂದಿಗೂ ಜನಮಾನಸದಲ್ಲಿ ತನ್ನದೇ ಆದ ಜೀವಂತ ಅಸ್ತಿತ್ವವನ್ನು ಉಳಿಸಿಕೊಂಡಿದೆ.
ಈ ಸೇವೆಯ ಮಹತ್ವವನ್ನು ನೆನಪಿಸಲು ಪ್ರತಿ ವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ.
ಇತಿಹಾಸದ ಓಲೆಗಳು
ಅಶ್ವರೋಹಿಗಳ ಮೂಲಕ ಪ್ರಾರಂಭವಾದ ಅಂಚೆ ಪದ್ಧತಿಯನ್ನು 1296ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಜಾರಿಗೆ ತಂದರು, ಶೇರ್ ಶಾ ಸುರಿ ಅದನ್ನು ಇನ್ನಷ್ಟು ವಿಸ್ತರಿಸಿದರು.
1874ರಲ್ಲಿ ಸ್ವಿಜರ್ಲ್ಯಾಂಡ್‌ನ ಬರ್ನ್ ನಗರದಲ್ಲಿ ಯೂನಿವರ್ಸಲ್ ಪೋಸ್ಟಲ್ ಯೂನಿಯನ್ (UPU) ಸ್ಥಾಪನೆಯಾದಾಗ ಅಂಚೆ ಜಾಗತಿಕ ಮುಖವನ್ನು ಕಂಡಿತು.
ಅಕ್ಟೋಬರ್ 9, 1969ರಂದು ಟೋಕಿಯೋ ನಗರದಲ್ಲಿ ಮೊದಲ ಬಾರಿ ವಿಶ್ವ ಅಂಚೆ ದಿನವನ್ನು ಆಚರಿಸಲಾಯಿತು.
ಅಂಚೆ – ನಮ್ಮ ಜೀವನದ ಮಾಧ್ಯಮ ಮಿತ್ರ
ಅಂಚೆ ಸೇವೆಯು ಜನರ ಭಾವನೆ, ಮಾಹಿತಿ, ವ್ಯವಹಾರ, ಹಾಗೂ ಸಂಬಂಧಗಳ ಸೇತುವೆಯಾಗಿದೆ. ಭಾರತದಲ್ಲಿ ಇದು ಜನಸಾಮಾನ್ಯರಿಗೇ ಹೆಚ್ಚು ಸಿಗುವ ಸಂವಹನದ ಪ್ರಮುಖ ಮಾರ್ಗವಾಗಿದ್ದು, ಅದರ ಮೂಲಕ ಹೃದಯದ ನುಡಿಗಳು ದೇಶದ ಅಂಚಿನಿಂದ ಅಂಚಿಗೆ ತಲುಪುತ್ತಿವೆ.
ಭಾರತದಲ್ಲಿನ ಅಂಚೆ ವ್ಯವಸ್ಥೆ
ಭಾರತದ ಸುಧಾರಿತ ಅಂಚೆ ಪದ್ಧತಿಗೆ ಬ್ರಿಟಿಷರ ಕಾಲವೇ ಮೂಲ. ಅವರ ವಸಾಹತು ನಿರ್ವಹಣೆಗೆ ಅಂಚೆಯ ಅಗತ್ಯವಿದ್ದ ಕಾರಣ ಅವರು ಪರಿಣಾಮಕಾರಿಯಾಗಿ ಈ ವ್ಯವಸ್ಥೆಯನ್ನು ರೂಪಿಸಿದರು.
ಆದರೆ ಅದಕ್ಕೂ ಮುನ್ನ ಚಕ್ರಾಧಿಪತಿಗಳ ಕಾಲದಲ್ಲಿ ಪಾರಿವಾಳಗಳು, ಕುದುರೆ ಸವಾರರು, ಸೇನಾಭಟರು ಪತ್ರವಹಕರಾಗಿದ್ದರು.
ಮುದ್ರಿತ ದಾಖಲೆ ಪತ್ರದ ರೂಪದಲ್ಲಿ ಅಂಚೆ ಬದಲಾದ ನಂತರ ಲಾರ್ಡ್ ಡಾಲ್ಹೌಸಿ (Lord Dalhousie) ಅಂಚೆ ಸುಧಾರಣೆಗೆ ಕಾರಣರಾದರು.
ಅಂಚೆಯ ಪ್ರಮುಖ ಸೇವೆಗಳು
ಇಂದಿನ ಅಂಚೆ ಕಚೇರಿಗಳು ಕೇವಲ ಪತ್ರ ಕಳುಹಿಸುವ ಸ್ಥಳವಲ್ಲ – ಜನಸಾಮಾನ್ಯರ ಆರ್ಥಿಕ ಜೀವನದ ಭಾಗವಾಗಿದೆ:
-
ಸುಕನ್ಯಾ ಸಮೃದ್ಧಿ ಯೋಜನೆ
-
ಆವರ್ತಿತ ಠೇವಣಿ (RD), ನಿಶ್ಚಿತ ಠೇವಣಿ (FD)
-
ಇ-ಅಂಚೆ, ಶೀಘ್ರ ಅಂಚೆ, ಪಾರ್ಸೆಲ್, ನೋಂದಾಯಿತ ಪತ್ರ
-
ಮನಿ ಆರ್ಡರ್, ಹಣ ವರ್ಗಾವಣೆ
-
ಮ್ಯುಚುಯಲ್ ಫಂಡ್, ಕಿಸಾನ್ ವಿಕಾಸ್ ಪತ್ರ
-
ರಾಷ್ಟ್ರೀಯ ಉಳಿತಾಯ ಪತ್ರ ಮುಂತಾದ ಸೇವೆಗಳು
ಭಾರತದ ಅಂಚೆ ಸೇವೆ ವಿಶ್ವದ ಅತಿ ದೊಡ್ಡ ಜಾಲವಾಗಿದ್ದು 1,55,000 ಕ್ಕೂ ಹೆಚ್ಚು ಅಂಚೆ ಕಛೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ.
⚡ ಟೆಲಿಗ್ರಾಫ್ ಮತ್ತು ಮೋರ್ಸ್ ಕೋಡ್ – ಅಂಚೆಯ ಹೊಸ ಅಧ್ಯಾಯ
ಅಂಚೆಯ ಜೊತೆಗೆ ಸಂವಹನ ಕ್ಷೇತ್ರದ ಮಹತ್ವದ ಮೈಲಿಗಲ್ಲು ಎಂದರೆ ಟೆಲಿಗ್ರಾಫ್.
1837ರಲ್ಲಿ ಸ್ಯಾಮುವೆಲ್ ಮೋರ್ಸ್ (Samuel Morse) ಅವರಿಂದ ಕಂಡುಹಿಡಿಯಲ್ಪಟ್ಟ ಮೋರ್ಸ್ ಕೋಡ್ — “ಡಾಟ್” (·) ಮತ್ತು “ಡ್ಯಾಶ್” (–) ಗಳ ಸಂಯೋಜನೆಯ ಮೂಲಕ ಸಂದೇಶ ಕಳುಹಿಸುವ ವಿಧಾನ.
ಉದಾಹರಣೆಗೆ:
-
A = · –
-
B = – · · ·
-
SOS = · · · – – – · · ·
ಈ ವ್ಯವಸ್ಥೆಯಿಂದ ಸುದ್ದಿ ಕ್ಷಣಾರ್ಧದಲ್ಲಿ ತಲುಪುವಂತಾಯಿತು. ಭಾರತದಲ್ಲಿ ಟೆಲಿಗ್ರಾಫ್ ಸೇವೆ 1851ರಲ್ಲಿ ಆರಂಭಗೊಂಡು ಶತಮಾನಕ್ಕೂ ಹೆಚ್ಚು ಕಾಲ ಜನಸಂಪರ್ಕದ ಜೀವನಾಡಿಯಾಗಿತ್ತು. ಆದರೆ ಜುಲೈ 15, 2013ರಂದು ಇದು ಇತಿಹಾಸ ಸೇರಿತು.
ಜಾಗತೀಕರಣದ ಹೊಡೆತಕ್ಕೆ ಬಲಿಯಾದ ಅಂಚೆ ಸೇವೆ
ಡಿಜಿಟಲ್ ಯುಗದ ಪ್ರಾರಂಭದೊಂದಿಗೆ ಪತ್ರಗಳಿಗಾಗಿ ಕಾಯುವ ದಿನಗಳು ಕಡಿಮೆಯಾಗಿವೆ. ಮೊಬೈಲ್, ಇಮೇಲ್, ವಾಟ್ಸಪ್, ಫೇಸ್‌ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳು ಅಂಚೆಯ ಹಳೆಯ ಪಾತ್ರವನ್ನು ಹಂಚಿಕೊಂಡಿವೆ.
ಆದರೂ ಅಂಚೆ ವ್ಯವಸ್ಥೆಯ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆ ಇನ್ನೂ ಅದ್ವಿತೀಯವಾಗಿದೆ.
ಆಧುನೀಕರಣದ ಪಥದಲ್ಲಿ ಇಂಡಿಯಾ ಪೋಸ್ಟ್
ಭಾರತೀಯ ಅಂಚೆ ಈಗ ಡಿಜಿಟಲ್ ಹಾದಿಯಲ್ಲಿ ಮುಂದಾಗಿದೆ.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಗ್ರಾಮೀಣ ಮಟ್ಟದಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ.
ಸುಕನ್ಯಾ ಸಮೃದ್ಧಿ ಯೋಜನೆ, ಡಿಜಿಟಲ್ ಪಾವತಿ ವ್ಯವಸ್ಥೆ, QR ಕೋಡ್ ಮೂಲಕ ಹಣ ವರ್ಗಾವಣೆ — ಇವುಗಳೆಲ್ಲ ಅಂಚೆಯ ಆಧುನೀಕರಣದ ನಿದರ್ಶನ.
ಅಂಚೆಯ ಹೆಸರಿನ ಸ್ವಾರಸ್ಯಕರ ಕಥೆ
"ಅಂಚೆ" ಎಂಬ ಪದದ ಅರ್ಥ ಮೊದಲು “ಹಂಸ”. ಮೈಸೂರು ಸಂಸ್ಥಾನದ ಶ್ರೀ ಚಿಕ್ಕದೇವರಾಜ ಒಡೆಯರ್ ಅವರು ಕ್ರಿ.ಶ. 1672ರಲ್ಲಿ ರಾಜ್ಯದ ಟಪಾಲು ವಿಭಾಗವನ್ನು ಸ್ಥಾಪಿಸಿದಾಗ, ನಳ-ದಮಯಂತಿಯ ಪ್ರೇಮಪತ್ರದ ಸನ್ನಿವೇಶವನ್ನು ನೆನೆದು “ಅಂಚೆ” ಎಂಬ ನಾಮಕರಣ ಮಾಡಿದರು. ಅದು ಸಂವಹನದ ಹಂಸದಂತೆ ಜನರ ಹೃದಯವನ್ನು ಸೇರುವ ಪ್ರತೀಕವಾಯಿತು.
ಕೊನೆಯ ಮಾತು
ಓಲೆಗಳಿಂದ ಮನಗಳನ್ನು ಬೆಸೆಯುತ್ತಿದ್ದ ಅಂಚೆ ವ್ಯವಸ್ಥೆ ಇಂದಿಗೂ ಭಾರತೀಯನ ಹೃದಯದ ಭಾಗವಾಗಿದೆ.
ಕಾಲ ಬದಲಾಗುತ್ತಿದ್ದರೂ ಅದರ ಮಾನವೀಯ ನಂಟು ಎಂದಿಗೂ ಕಡಿದು ಹೋಗಿಲ್ಲ.
ವಿಶ್ವ ಅಂಚೆ ದಿನದಂದು, ಆ ನಂಟನ್ನು ಕಾಪಾಡಿ ಸಾಗಿಸುತ್ತಿರುವ ಎಲ್ಲ ಅಂಚೆ ಸೇವಕರಿಗೂ ಹೃದಯಪೂರ್ವಕ ನಮನಗಳು.
“ಡಾಟ್ – ಡ್ಯಾಶ್ – ಕಾಗದದ ಓಲೆ – ಡಿಜಿಟಲ್ ಮೆಸೇಜ್, ಆದರೂ ಅಂಚೆಯ ಬಾಂಧವ್ಯ ಎಂದಿಗೂ ಅಮರ.”
No comments:
Post a Comment