ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, November 4, 2025

ಒಮರ್ ಯಾಘಿ ಎಂಬ ಆಣ್ವಿಕ ವಾಸ್ತು ಶಿಲ್ಪಿ!!!

ಒಮರ್ ಯಾಘಿ ಎಂಬ ಆಣ್ವಿಕ ವಾಸ್ತು ಶಿಲ್ಪಿ!!!

                   ✍️ ರಾಮಚಂದ್ರ ಭಟ್ ಬಿ.ಜಿ. 



ಸುಸುಮು ಕಿತಗಾವಾ (Susumu Kitagawa), ರಿಚರ್ಡ್ ರಾಬ್ಸನ್ (Richard Robson) ಮತ್ತು ಒಮರ್ ಎಂ. ಯಾಘಿ (Omar M. Yaghi) ಅವರಿಗೆ 2025 ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು (Nobel Prize in Chemistry 2025) ಹೊಸ ಮಾದರಿಯ ಆಣ್ವಿಕ ವಾಸ್ತುಶಿಲ್ಪದ (molecular architecture) ಅಭಿವೃದ್ಧಿಗಾಗಿ ನೀಡಲಾಗಿದೆ. 

https://cdn-hnicp.nitrocdn.com/KsPFrvaqlnWDChuafpXrQoiUQhYTrYbz/assets/images/optimized/rev-604a158/atoco.com/wp-content/uploads/2024/06/omar-yaghi-tang-prize.jpg

ವಿಜ್ಞಾನಲೋಕದಲ್ಲಿ ಮೆಟಲ್-ಆರ್ಗ್ಯಾನಿಕ್ ಫ್ರೇಮ್‌ವರ್ಕ್‌ಗಳು (MOFs) ಮತ್ತು ಕೊವೆಲೆಂಟ್-ಆರ್ಗ್ಯಾನಿಕ್ ಫ್ರೇಮ್‌ವರ್ಕ್‌ಗಳು (COFs) ಎಂಬ ಮಾಂತ್ರಿಕ ವಸ್ತುಗಳನ್ನು ಸೃಷ್ಟಿಸಿ ಕ್ರಾಂತಿ ಮಾಡಿದ ಮಹಾನ್ ವಿಜ್ಞಾನಿ ಒಮರ್ ಮ್ವಾನ್ನೆಸ್ ಯಾಘಿ ಅವರ ಪಯಣವು, ಕೇವಲ ಪ್ರಯೋಗಾಲಯದ ಸಾಧನೆಯಲ್ಲ. ಅದು ಕನಸು, ಕುತೂಹಲ, ಬದುಕಿನ ಕಡೆಗಿನ ಅದಮ್ಯ ಉತ್ಸಾಹ ಮತ್ತು ಮಾನವೀಯತೆಯನ್ನೊಳಗೊಂಡ ಕೂಡಿದ ಅದ್ಭುತ ಪ್ರೇರಣಾದಾಯಕ ಕಥೆ. 


https://cdn-hnicp.nitrocdn.com/KsPFrvaqlnWDChuafpXrQoiUQhYTrYbz/assets/images/optimized/rev-604a158/atoco.com/wp-content/uploads/2023/07/atoco-founder-square4-1200.jpg

2017: Albert Einstein World Award of Science

ಬಾಲ್ಯದ ಕಿಡಿ- ರಸಾಯನಶಾಸ್ತ್ರದೆಡೆಗೆ ಒಲವು : 

ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ ಒಮರ್ ಯಾಘಿ ಅವರ ವಿಜ್ಞಾನದ ಪಯಣ ಅನಿರೀಕ್ಷಿತ ತಿರುವಿನಿಂದ ಶುರುವಾಯಿತು. ಜೋರ್ಡಾನ್‌ನ ಅಮ್ಮಾನ್‌ನಲ್ಲಿ ವಿದ್ಯುತ್ ಹಾಗೂ ನೀರಿನ ಸೌಲಭ್ಯವಿಲ್ಲದ ಒಂದೇ ಕೋಣೆಯಲ್ಲಿ ತಮ್ಮ ಅನೇಕ ಅಣ್ಣ-ತಮ್ಮಂದಿರ ಮತ್ತು ಅಕ್ಕ-ತಂಗಿಯರೊಂದಿಗೆ ಬೆಳೆದ ಯಾಘಿಗೆ ಶಾಲೆಯೇ ಕಷ್ಟದ ಜೀವನದಲ್ಲಿ ಒಂದು ಆಶಾ ಕಿರಣವಾಯಿತು. ಹತ್ತು ವರ್ಷದ ಬಾಲಕನಾಗಿದ್ದಾಗ, ಒಮ್ಮೆ, ಬೀಗ ಹಾಕಿದ ಶಾಲಾ ಗ್ರಂಥಾಲಯಕ್ಕೆ ನುಸುಳಿ, ಶೆಲ್ಫ್‌ನಿಂದ ಒಂದು ಪುಸ್ತಕವನ್ನು ತೆಗೆದರು. ಪುಟ ತೆರೆಯುತ್ತಿದ್ದಂತೆ, ಅರ್ಥವೇ ಆಗದ ಆದರೆ ಆಕರ್ಷಕ ಚಿತ್ರಗಳು ಅವರ ಕಣ್ಣಿಗೆ ಬಿದ್ದವು ಅದು ಅಣು ರಚನೆಗಳೊಂದಿಗಿನ ಅವರ ಮೊದಲ ಪರಿಚಯವಾಗಿತ್ತು. ಈ ನೋಟವೇ Love at first sight  ಎಂಬಂತೆ ಬಿಡದ ಬಂಧವಾಯಿತು. ‘ಪ್ರಪಂಚದ ಪ್ರತಿಯೊಂದು ವಸ್ತು ಹೇಗೆ ನಿರ್ಮಿತವಾಗಿದೆ?’ ಎಂಬ ಬಾಲ್ಯದ ಪ್ರಶ್ನೆ ಮತ್ತು ಅದಕ್ಕೆ ಉತ್ತರ ಕಂಡುಕೊಳ್ಳುವ ಕುತೂಹಲವೇ ಅವರ ವಿಜ್ಞಾನ ಲೋಕದೆಡೆಗಿನ ಅವರ ಪಯಣಕ್ಕೆ ಭದ್ರ ಬುನಾದಿ ಹಾಕಿತು. ಹದಿನೈದನೆಯ ವಯಸ್ಸಿನಲ್ಲಿ, ಕುಟುಂಬದ ಒತ್ತಾಸೆಯಂತೆ, ಕುಟುಂಬದ ಉಳಿತಾಯದ ಹಣವನ್ನು ಪಡೆದುಕೊಂಡು ಅಮೆರಿಕಾಗೆ ಪ್ರಯಾಣ ಬೆಳೆಸಿದರು. ಅಲ್ಲಿ ಯಾಘಿ, ರಸಾಯನಶಾಸ್ತ್ರದತ್ತ ಆಕರ್ಷಿತರಾದರು. ಅಲ್ಲಿ ಅವರು ಪರಮಾಣುಗಳನ್ನು ಇಟ್ಟಿಗೆಗಳಂತೆ ಜೋಡಿಸಿ ಹೊಸ ಅಣುರಚನೆಗಳನ್ನು ನಿರ್ಮಿಸುವ ಕಲೆ 'ಅಣು ವಾಸ್ತುಶಿಲ್ಪ'ಹೊಸಲೋಕಕ್ಕೆ ಕಾಲಿಟ್ಟರು. ಎಲ್ಲರೂ ಹಿಡಿಯುವ ಹಾದಿ ನನಗೆ ಬೇಕಿಲ್ಲ. ನಾನು ನನ್ನದೇ ಹೊಸ ಹಾದಿಯನ್ನು ನಿರ್ಮಿಸಬೇಕು‌ ಎಂದುಕೊಂಡರು.  ಪದೇಪದೇ ಬಾಲ್ಯದ ನೋವು ಅವರನ್ನು ಕಾಡುತ್ತಿತ್ತು. ಇದರಿಂದ ತಮ್ಮ ಸಂಶೋಧನೆಗಳು ಜನಸಾಮಾನ್ಯರ ಬವಣೆಗಳನ್ನು ನಿವಾರಿಸುವಂತಿರಬೇಕು ಎನ್ನುವ ಛಲವನ್ನು ಮೈಗೂಡಿಸಿಕೊಂಡರು. ಮರಳುಗಾಡಾದ ಜೋರ್ಡಾನ್‌ನಲ್ಲಿ ಜಲಕ್ಷಾಮ ಬಹು ಸಾಮಾನ್ಯವಾಗಿತ್ತು. ಇದಕ್ಕೇನಾದರೂ ಮಾಡಲೇಬೇಕು ಎನ್ನುವ ದೃಢ ನಿರ್ಧಾರವನ್ನು ಮಾಡಿದರು. 

ನವೀನ ವಿಧಾನದ ಅನ್ವೇಷಣೆ: MOFಗಳ ಹುಟ್ಟು ಹೊಸ ವಸ್ತುಗಳನ್ನು ವಿನ್ಯಾಸಗೊಳಿಸುವ ಕಲೆಯು ಯಾಘಿ ಅವರನ್ನು ಪ್ರಭಾವಿಸಿತು. ವಿವಿಧ ರಾಸಾಯನಿಕಗಳನ್ನು ಕಾಸುವ ಪ್ರಕ್ರಿಯೆಗೆ ಒಳಪಡಿಸಿದಾಗ, ಅಪೇಕ್ಷಿತ ಅಣುವಿನೊಂದಿಗೆ ಅನೇಕ ಅನಪೇಕ್ಷಿತ ಉಪ ಉತ್ಪನ್ನಗಳೂ ಉಂಟಾಗಿ ಸಂಶೋಧನೆಗೆ ತೊಡಕನ್ನು ಒಡ್ಡುತ್ತಿದ್ದವು. ಆದರೆ ಆದರೆ ಯಾಘಿ ಅವರ ದೃಷ್ಟಿ ಸ್ಪಷ್ಟವಾಗಿತ್ತು. ಸಂಶೋಧಕನಿಗೆ ಇರಲೇಬೇಕಾದ ಅಪಾರ ತಾಳ್ಮೆ ಅವರಿಗೆ ಸಿದ್ಧಿಸಿತ್ತು. ಅಣುಗಳನ್ನು ಬಟ್ಟೆ ನೇಯುವಂತೆ ನೇಯ್ದು ಹೊಸದನ್ನು ಸೃಜಿಸುವ ಕನಸು ಕಾಣುತ್ತಿದ್ದರು. 1992ರಲ್ಲಿ ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸಂಶೋಧನಾ ತಂಡದ ಮುಖ್ಯಸ್ಥರಾಗಿ ತಮ್ಮ ಸಂಶೋಧನೆಗಳನ್ನು ಮುಂದುವರೆಸಿದರು. ಅಲ್ಲಿ ಅವರು ಹೆಚ್ಚು ನಿಯಂತ್ರಿತ ರೀತಿಯಲ್ಲಿ ವಸ್ತುಗಳನ್ನು ರಚಿಸಬಯಸಿದರು. LEGO ರಚನೆಗಳೊಂದಿಗೆ ನೀವು ಆಡಿರಬಹುದು. ಆ ತುಂಡುಗಳಂತೆ ವಿಭಿನ್ನ ರಾಸಾಯನಿಕ ಘಟಕಗಳನ್ನು ತಾರ್ಕಿಕವಾಗಿ ಜೋಡಿಸಿ ದೊಡ್ಡ ಸ್ಫಟಿಕಗಳನ್ನು ನಿರ್ಮಿಸುವ ಬಗ್ಗೆ ಸಂಶೋಧನೆಯನ್ನು ನಡೆಸಲಾರಂಭಿಸಿದರು. ಈ ಪ್ರಯತ್ನದಲ್ಲಿ ಅನೇಕ ವೈಫಲ್ಯಗಳ ನಂತರ, ಅವರು ಲೋಹದ ಅಯಾನುಗಳನ್ನು ಸಾವಯವ ಅಣುಗಳೊಂದಿಗೆ ಸಂಯೋಜಿಸಲು ಪ್ರಾರಂಭಿಸಿ ಯಶ ಗಳಿಸಿದರು. 1995ರಲ್ಲಿ ಯಾಘಿ ಎರಡು ವಿಭಿನ್ನ ದ್ವಿ-ಆಯಾಮದ ವಸ್ತುಗಳ ರಚನೆಯನ್ನು ಪ್ರಕಟಿಸಿದರು; ಇವು ತಾಮ್ರ ಅಥವಾ ಕೋಬಾಲ್ಟ್‌ನಿಂದ ಬಂಧಿಸಲ್ಪಟ್ಟ ಬಲೆಗಳಂತಿದ್ದವು. ಅವು ಅತಿಥಿ ಅಣುಗಳನ್ನು ತಮ್ಮ ರಂಧ್ರಗಳಲ್ಲಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದವು ಮತ್ತು 350°C ನಷ್ಟು ಹೆಚ್ಚಿನ ತಾಪಮಾನದಲ್ಲೂ ಸ್ಥಿರವಾಗಿದ್ದವು. ಈ ವಸ್ತುಗಳಿಗೆ ಅವರು 'ಮೆಟಲ್-ಆರ್ಗ್ಯಾನಿಕ್ ಫ್ರೇಮ್‌ವರ್ಕ್' (MOF) ಎಂಬ ಹೆಸರನ್ನು ನೀಡಿದರು.

ವಿಸ್ಮಯಕಾರಿ MOF-5 ಮತ್ತು ಅದರ ಅನ್ವಯಗಳು: 

 1999ರಲ್ಲಿ ಅವರು MOF-5 ಅನ್ನು ಜಗತ್ತಿಗೆ ಪರಿಚಯಿಸಿದರು. ಈ ವಸ್ತುವು ವಿಜ್ಞಾನ ಕ್ಷೇತ್ರದಲ್ಲಿ ಒಂದು ಉತ್ಕೃಷ್ಟ ವಸ್ತು ಎನಿಸಿಕೊಂಡಿದೆ. ಇದು ಖಾಲಿಯಾಗಿದ್ದರೂ 300°C ವರೆಗೆ ಕುಸಿಯದೆ ಸ್ಥಿರವಾಗಿರುವ, ಅಸಾಧಾರಣವಾದ ವಿಶಾಲವಾದ ಆಂತರಿಕ ಜಾಗವನ್ನು ಹೊಂದಿರುವ ಅಣು ರಚನೆಯಾಗಿತ್ತು. ಅನೇಕ ವಿಜ್ಞಾನಿಗಳನ್ನು ಬೆರಗುಗೊಳಿಸಿದ್ದು, ಈ ವಸ್ತುವಿನ ಘನ ಜಾಗದಲ್ಲಿ ಅಡಗಿರುವ ಅಗಾಧವಾದ ಮೇಲ್ಮೈ ವಿಸ್ತೀರ್ಣ. ಕೇವಲ ಕೆಲವು ಗ್ರಾಂ MOF-5 ಒಂದು ಫುಟ್‌ಬಾಲ್ ಮೈದಾನದಷ್ಟು ದೊಡ್ಡ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುತ್ತದೆ! ಇದು ಸಾಂಪ್ರದಾಯಿಕ ಜಿಯೋಲೈಟ್‌ಗಳಿಗಿಂತ (zeolites) ಅದೆಷ್ಟೋ ಪಟ್ಟು ಹೆಚ್ಚು ಅನಿಲವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ನೀಡುತ್ತದೆ. ಇದೇ ಅವಧಿಯಲ್ಲಿ ಸುಸುಮು ಕಿಟಗಾವಾ ಅವರಂತಹ ವಿಜ್ಞಾನಿಗಳು MOFಗಳನ್ನು ಜಿಗುಟು ಮತ್ತು ರೂಪ ಬದಲಾಯಿಸುವ ಗುಣವುಳ್ಳ ವಸ್ತುಗಳನ್ನಾಗಿ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದರು ಇದು ಶ್ವಾಸಕೋಶದಂತೆ ಅನಿಲವನ್ನು ಒಳಗೆಳೆದು ಹೊರಹಾಕುವ ಸಾಮರ್ಥ್ಯವನ್ನು ಹೊಂದಿತ್ತು.

 ತಾರ್ಕಿಕ ವಿನ್ಯಾಸ ಮತ್ತು ಭವಿಷ್ಯದ ಪರಿಹಾರಗಳು

Molecular weaving

ಮೆಟಲ್-ಆರ್ಗ್ಯಾನಿಕ್ ಫ್ರೇಮ್‌ವರ್ಕ್ಸ್ (MOF) ಮತ್ತು ಕೋವಲೆಂಟ್ ಆರ್ಗ್ಯಾನಿಕ್ ಫ್ರೇಮ್‌ವರ್ಕ್ಸ್ (COF) ಜೊತೆಗೆ ಆಣ್ವಿಕ ನೆಯ್ಗೆ ತಂತ್ರಜ್ಞಾನವನ್ನು (molecular weaving technologies) ಬೆಸೆದರು. ಅಜೈವಿಕ ಮತ್ತು ಸಾವಯವ ಸಂಯುಕ್ತಗಳ ಸಂಶ್ಲೇಷಣೆ, ರಚನೆ ಹಾಗೂ ಗುಣಲಕ್ಷಣಗಳು ಮತ್ತು ಹೊಸ ಸ್ಫಟಿಕದಂತಹ ವಸ್ತುಗಳ ವಿನ್ಯಾಸ ಮತ್ತು ನಿರ್ಮಾಣವನ್ನು ಅವರ ಸಂಶೋಧನೆಯು ಒಳಗೊಂಡಿದೆ. ಪರಮಾಣುವಿನ ನಿಖರತೆಯೊಂದಿಗೆ (atomic precision) ನವೀನ ವಸ್ತುಗಳನ್ನು ವಿನ್ಯಾಸಗೊಳಿಸುವ ಮತ್ತು ಅಭಿವೃದ್ಧಿಪಡಿಸಿದರು.  2002 ಮತ್ತು 2003ರಲ್ಲಿ ಯಾಘಿ, MOFಗಳನ್ನು ತಾರ್ಕಿಕವಾಗಿ ಮಾರ್ಪಡಿಸಿ ವಿವಿಧ ಗುಣಲಕ್ಷಣಗಳನ್ನು ನೀಡಲು ಸಾಧ್ಯ ಎಂದು ತೋರಿಸಿದರು. ಅವರು MOF-516 ವಿಭಿನ್ನ ರೂಪಗಳನ್ನು ಉತ್ಪಾದಿಸಿದರು. ಇವು ಮೂಲ ವಸ್ತುವಿಗಿಂತ ದೊಡ್ಡ ಮತ್ತು ಚಿಕ್ಕ ರಂಧ್ರಗಳನ್ನು ಹೊಂದಿದ್ದವು. ಒಂದು ರೂಪವು ಅಪಾರ ಪ್ರಮಾಣದ ಮೀಥೇನ್ ಅನಿಲವನ್ನು ಸಂಗ್ರಹಿಸಬಲ್ಲ ಸಾಮರ್ಥ್ಯ ಹೊಂದಿತ್ತು. ಇದು RNG-ಇಂಧನ ವಾಹನಗಳಲ್ಲಿ ಬಳಕೆಯಾಗಬಹುದು ಎಂದು ಯಾಘಿ ಸೂಚಿಸಿದ್ದರು. ಇಂದು MOFಗಳು ಜಗತ್ತನ್ನು ಆಕ್ರಮಿಸಿಕೊಂಡಿವೆ. ಯಾಘಿ ಅವರ ಸಂಶೋಧನಾ ತಂಡ ಅರಿಜೋನಾದ ಮರುಭೂಮಿಯ ಗಾಳಿಯಿಂದ ನೀರನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ರಾತ್ರಿಯ ಸಮಯದಲ್ಲಿ, ಅವರ MOF ವಸ್ತುವು ನೀರಾವಿಯನ್ನು ಹೀರಿಕೊಳ್ಳುತ್ತದೆ ಮತ್ತು ಸೂರ್ಯನ ಶಾಖದಿಂದ ಬೆಳಿಗ್ಗೆ ಶುದ್ಧ ಕುಡಿಯುವ ನೀರನ್ನು ಬಿಡುಗಡೆ ಮಾಡುತ್ತದೆ. MOF-303, MIL-101, UiO-67, ZIF-8, CALF-20, NU-1501 ನಂತಹ ನಿರ್ದಿಷ್ಟ MOFಗಳು ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುವಿಕೆ, ಕಲುಷಿತ ನೀರನ್ನು ಶುದ್ಧೀಕರಿಸುವಿಕೆ, ಅಪರೂಪದ ರೇರ್‌ ಅರ್ಥ್ ಧಾತುಗಳ ಹೊರತೆಗೆಯುವಿಕೆ, ವಿಷಕಾರಿ ಅನಿಲಗಳನ್ನು ಹೀರಿಕೆ, ಹೈಡ್ರೋಜನ್ ಸಂಗ್ರಹಣೆ ಮೊದಲಾದ ಅನ್ವಯಗಳೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಮಹತ್ವವನ್ನು ಸಾಬೀತುಪಡಿಸಿವೆ.

ವಿಜ್ಞಾನಕ್ಕಿಂತ ಹೆಚ್ಚು ಮಾನವೀಯ ಮೌಲ್ಯಗಳು : 

ಒಮರ್ ಯಾಘಿ ಅವರು ವಿಜ್ಞಾನವನ್ನು ಕೇವಲ ಒಂದು ವೃತ್ತಿಯಂತೆ ನೋಡದೆ, ಮಾನವೀಯತೆಗೆ ಪ್ರಯೋಜನವಾಗುವ ಕಲೆಯಂತೆ ಕಾಣುತ್ತಾರೆ. "ಪ್ರಕೃತಿ ಅತ್ಯುತ್ತಮ ವಿಜ್ಞಾನಿ; ನಾವು ಅದರಿಂದ ಕಲಿಯಬೇಕು," ಎಂಬುದು ಅವರ ನಂಬಿಕೆ. ಅವರ  ಪ್ರಯೋಗಾಲಯದಲ್ಲಿ ದುಬಾರಿ ರಾಸಾಯನಿಕವೊಂದು ಕೈಜಾರಿ ಚೆಲ್ಲಿ ಹೋದಾಗ, ಸಿಡಿಮಿಡಿಗೊಳ್ಳದೇ "ಇದು ಮತ್ತೆ ಹೀಗೆ ಮಾಡಬಾರದೆಂದು ಪ್ರಕೃತಿಯೇ ನಮಗೆ ಪಾಠ ಹೇಳಿದೆ!" ಎಂದು ನಗು ಸ್ನೇಹಭಾವಗಳೊಂದಿಗೆ ಉತ್ತರಿಸುವ ಅವರು ಸದಾ ತಂಡಕ್ಕೆ ಪ್ರೇರಣೆ. ಅನಿರೀಕ್ಷಿತವಾಗಿ ಹೊಸ ಸ್ಫಟಿಕ ರೂಪುಗೊಂಡಾಗ ಮಕ್ಕಳಂತೆ ಸಂಭ್ರಮಿಸುವ ಅವರ ಮನಸ್ಸು ಸಂಶೋಧನೆಯೊಳಗಿನ ಆನಂದವನ್ನು ಪ್ರತಿಬಿಂಬಿಸುತ್ತದೆ. ಶುದ್ಧ ನೀರು, ಇಂಧನ ಸಂಗ್ರಹಣೆ, ಹವಾಮಾನ ಬದಲಾವಣೆ ಮುಂತಾದ ಜಾಗತಿಕ ಸವಾಲುಗಳಿಗೆ ವಿಜ್ಞಾನದ ಮೂಲಕ ಪರಿಹಾರ ಹುಡುಕುವುದು ಅವರ ಸಂಶೋಧನೆಯ ಅಂತಿಮ ಗುರಿ. ವಿದ್ಯಾರ್ಥಿಗಳಿಗೆ ಸದಾ ಸ್ಫೂರ್ತಿಯ ಚಿಲುಮೆಯಾಗಿರುವ ಯಾಘಿ ಅವರ ವಿನಯ, ದೃಢಸಂಕಲ್ಪ ಮತ್ತು ನವಿರಾದ ಹಾಸ್ಯಭಾವಗಳ ಅವರು ಮಾರ್ಗದರ್ಶಕರಾಗಿ ವಿಶಿಷ್ಟರಾಗಿದ್ದಾರೆ. ಅವರ ಈ ಸಾಧನೆಗಳಿಗೆ ವುಲ್ಫ್ ಪ್ರಶಸ್ತಿ (ರಸಾಯನಶಾಸ್ತ್ರ) ಮತ್ತು ಕಿಂಗ್ ಫೈಸಲ್ ಅಂತರಾಷ್ಟ್ರೀಯ ಪ್ರಶಸ್ತಿ (ವಿಜ್ಞಾನ) ಸೇರಿದಂತೆ ಅನೇಕ ಅಂತರಾಷ್ಟ್ರೀಯ ಗೌರವಗಳು ಸಂದಿವೆ. 

ಭವಿಷ್ಯದ ಭರವಸೆ: 

21ನೇ ಶತಮಾನದ ವಸ್ತುಗಳು ಕೆಲವು ಸಂಶೋಧಕರು ಮೆಟಲ್-ಆರ್ಗ್ಯಾನಿಕ್ ಫ್ರೇಮ್‌ವರ್ಕ್‌ಗಳು '21ನೇ ಶತಮಾನದ ವಸ್ತು' ಆಗುವ ಸಾಮರ್ಥ್ಯ ಹೊಂದಿವೆ ಎಂದು ನಂಬುತ್ತಾರೆ. ಒಮರ್ ಯಾಘಿ, ಸುಸುಮು ಕಿಟಗಾವಾ ಮತ್ತು ರಿಚರ್ಡ್ ರಾಬ್ಸನ್ ಅವರಂತಹ ವಿಜ್ಞಾನಿಗಳು ರಸಾಯನಶಾಸ್ತ್ರಜ್ಞರಿಗೆ ನಾವು ಎದುರಿಸುತ್ತಿರುವ ಕೆಲವು ಮಹತ್ವದ ಜಾಗತಿಕ ಸವಾಲುಗಳನ್ನು ಪರಿಹರಿಸಲು ಹೊಸ ಅವಕಾಶಗಳನ್ನು ಒದಗಿಸಿದ್ದಾರೆ. ಆಲ್ಫ್ರೆಡ್ ನೋಬೆಲ್ ಅವರ ಇಚ್ಛೆಯಂತೆ, ಅವರು ಮಾನವಕುಲಕ್ಕೆ 'ಅತ್ಯಂತ ದೊಡ್ಡ ಪ್ರಯೋಜನ'ವನ್ನು ತಂದಿದ್ದಾರೆ. ಒಮರ್ ಯಾಘಿ ಅವರ ಜೀವನವು ಕೇವಲ ವೈಜ್ಞಾನಿಕ ಸಾಧನೆಯ ಕಥೆಯಲ್ಲ, ಅದು ಕನಸು, ಕುತೂಹಲ, ಸೃಜನಾತ್ಮಕತೆ ಮತ್ತು ಸದಾ ನಗುಮುಖದಿಂದ ಸವಾಲುಗಳನ್ನು ಎದುರಿಸುವ ದೃಢಸಂಕಲ್ಪದ ಪ್ರೇರಕ ಕಥೆ. ವಿಜ್ಞಾನ ಎಂದರೆ ಕೇವಲ ಪ್ರಯೋಗವಲ್ಲ, ಅದು ನಗುವಿನೊಂದಿಗೆ ಭವಿಷ್ಯದ ಕನಸು ಕಟ್ಟುವ ಅದ್ಭುತ ಕಲೆಯಾಗಿದೆ. 

ಅವರ ಮಾತಿನಲ್ಲೇ ಅವರ ಕತೆಯನ್ನು ಕೇಳಿ https://atoco.com/our-founder/ 

1 comment: