💀 ಕಳೇಬರಗಳನ್ನು ಕದ್ದು ಪಾಠ ಮಾಡುತ್ತಿದ್ದ ವೈದ್ಯ!
ಲೇಖಕರು: ಡಾ. ಎಮ್.ಜೆ. ಸುಂದರ ರಾಮ್
ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು
ವಿಜಯ ಕಾಲೇಜು, ಬೆಂಗಳೂರು -೪
ಮಾನವ ಶರೀರಗಳು ಪವಿತ್ರವೆಂದೂ, ಅವುಗಳ ಮರಣೋತ್ತರ ತಪಾಸಣೆ (post mortem) ಗಳು ಪಾಪಕೃತ್ಯಗಳೆಂದೂ ಹಿಂದಿನ ಕಾಲದಲ್ಲಿ ಜನ ನಂಬಿದ್ದರು. ಗ್ರೀಕರು ಹಾಗೂ ರೋಮನ್ನರ ಕಾನೂನುಗಳಲ್ಲಿ ಮಾನವ ಶರೀರದ ಕೊಯ್ತ (dissections) ಕ್ಕೆ ಅನುಮತಿ ಇರಲಿಲ್ಲ. ಆದರೆ, ಅಪರಾಧಿಗಳ ಶವಗಳನ್ನು ಮಾತ್ರ ನೇಣುಗಂಬಕ್ಕೆ ನೇತುಹಾಕಿ ದಿನಗಟ್ಟಲೆ ಹಾಗೆಯೇ ಕೊಳೆಯಲು ಬಿಡುತ್ತಿದ್ದರು. ವೈದ್ಯ ವಿದ್ಯಾರ್ಥಿಗಳಿಗೆ ಮಾನವ ಅಂಗರಚನೆ (human anatomy) ವಿಷಯವನ್ನು ಪರಿಚಯಿಸಲು ಅಂದಿನ ಅತ್ಯಂತ ಪ್ರಭಾವಶಾಲಿ ವೈದ್ಯರಾಗಿದ್ದ ಗಾಲನ್, ಹಂದಿ ಮತ್ತು ವಾನರ (apes) ಗಳ ದೇಹಗಳನ್ನು ಕೊಯ್ದು ತೋರಿಸಿ, ನಮ್ಮ ದೇಹದಲ್ಲಿಯೂ ಇದೇ ರೀತಿಯ ರಚನೆಯಿದೆ ಎಂದು ತಪ್ಪಾದ ಪಾಠ ಬೋಧಿಸುತ್ತಿದ್ದರು.
ಗಾಲನ್ರ ಹೇಳಿಕೆಗಳೆಲ್ಲವನ್ನೂ ವೆಸೇಲಿಯಸ್ ಸಾರಾಸಗಟಾಗಿ ಒಪ್ಪಲಿಲ್ಲ. ಮಾನವ ದೇಹವನ್ನೇ ಕೊಯ್ದು ನಿಜಸ್ಥಿತಿಯನ್ನು ತಮ್ಮ ಸಹಪಾಠಿಗಳಿಗೆ ಬೋಧಿಸಲು ಮಾನವ ಶವಗಳಿಗಾಗಿ ಹುಡುಕಾಡಲಾರಂಭಿಸಿದರು. ಸ್ಮಶಾನಗಳಲ್ಲಿ ಕೊಳೆತು ನಾರುತ್ತಿದ್ದ ಅಪರಾಧಿಗಳ ಕಳೇಬರಗಳು ಅವರ ಗಮನ ಸೆಳೆದವು. ತಮ್ಮ ಸ್ನೇಹಿತರೊಡನೆ ಸ್ಮಶಾನಗಳಿಗೆ ರಾತ್ರಿ ವೇಳೆ ಹೋಗಿ, ಹೆಣಗಳನ್ನು ಕದ್ದು ತಂದು, ತರಗತಿಯಲ್ಲಿ ಸಹಪಾಠಿಗಳೆದುರು ಕೊಯ್ದು ತಾವೇ ಪಾಠ ಮಾಡಲಾರಂಭಿಸಿದರು.
ವೆಸೇಲಿಯಸ್ ಮಿತ್ರರೊಡನೆ ರಾತ್ರಿ ವೇಳೆ ಒಮ್ಮೊಮ್ಮೆ ಪ್ಯಾರಿಸ್‌ನ ಹೊರನಗರಗಳಿಗೂ ನುಸುಳಿದ್ದಾಗ, ಅನೇಕ ಸಲ ನಾಯಿಗಳ ಭಯಾನಕ ಆಕ್ರಮಣವನ್ನು ಎದುರಿಸಬೇಕಾಗುತ್ತಿತ್ತು. ಸುಟ್ಟು ಕರಕಲಾದಿದ್ದ ಶವಗಳಿಂದ ಹೊರಸೂಸುತ್ತಿದ್ದ ದುರ್ನಾತವನ್ನು ಮೂಗು ಮುಚ್ಚಿಕೊಂಡು ಸಹಿಸಿಕೊಳ್ಳಬೇಕಾಗುತ್ತಿತ್ತು. ಇಷ್ಟೆಲ್ಲ ಅಡೆತಡೆಗಳು ಎದುರಾದರೂ ಸ್ವಲ್ಪವೂ ಬೇಸರ ಪಡದೆ ತಮ್ಮ ದುಸ್ಸಾಸಹವನ್ನು ಬಿಡದೆ ಕಂಬಗಳಲ್ಲಿ ನೇತಾಡುತ್ತಿದ್ದ ಅರೆಬೆಂದ ಶವ ಮತ್ತು ಅಸ್ಥಿಪಂಜರಗಳನ್ನು, ಛಲಬಿಡದ ತ್ರಿವಿಕ್ರಮ ಬೇತಾಳನನ್ನು ತನ್ನ ಹೆಗಲ ಮೇಲೇರಿಸಿಕೊಂಡು ಬಂದಂತೆ ಶವಗಳನ್ನು ಹೊತ್ತು ತಂದು ಕೊಯ್ದು ಮಾನವ ಅಂಗರಚನೆಯನ್ನು ನೇರವಾಗಿ ವೀಕ್ಷಿಸಿ ವೈದ್ಯಶಾಸ್ತ್ರ ಬೋಧನೆಯಲ್ಲಿ ಹೊಸ ಕ್ರಾಂತಿಯೆಬ್ಬಿಸಿದರು.
ಅಂದಿನ ಕಾಲದಲ್ಲಿ ಕೊಲೆಗಡುಕರನ್ನು ಸಾಮಾನ್ಯವಾಗಿ ಸೋಮವಾರ ಬೆಳಿಗ್ಗೆ 8 ಗಂಟೆ ಹೊತ್ತಿಗೆ ನೇಣು ಹಾಕಿ, ಒಂದು ಗಂಟೆ ಬಳಿಕ ಅವರ ಶವಗಳನ್ನು ವೈದ್ಯಕೀಯ ಕಾಲೇಜುಗಳಿಗೆ ರವಾನಿಸುತ್ತಿದ್ದರು. ಕಳೇಬರಗಳನ್ನು ಕದಿಯುವುದೇ ಅಂದು ಲಾಭದಾಯಕ ಕಸುಬಾಗಿತ್ತು. ಹೊಸ ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗುತ್ತಾ ಬಂದವು. ಶವಗಳನ್ನು ಬಹುಕಾಲ ಉಳಿಸಿಟ್ಟುಕೊಂಡರೆ ಅವು ಕೊಳೆತು ನಾರುತ್ತಿದ್ದುದರಿಂದ ಅವುಗಳನ್ನು ಅತಿ ಬೇಗ ಬಳಸಿ, ಎಸೆಯಬೇಕಾಗಿತ್ತು. ಈ ಕಾರಣಗಳಿಂದ ಶವಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚತೊಡಗಿತು. ಮೊದಲೊದಲು ವೈದ್ಯ ಶಿಕ್ಷಕರು, ವೈದ್ಯ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿಗಳು, ಉದ್ಯೋಗಿಗಳು ಶವಗಳನ್ನು ಕದಿಯಲು ಪ್ರಾರಂಭಿಸಿದರು. ಕ್ರಮೇಣ ಶವಗಳ್ಳರು ಹುಟ್ಟಿಕೊಂಡು ಶವಗಳನ್ನು ಕದ್ದು ಕಾಲೇಜುಗಳಿಗೆ ದುಬಾರಿ ಬೆಲೆಗೆ ಮಾರಿ, ಅಪಾರ ಹಣ ಗಳಿಸಲಾರಂಭಿಸಿದರು. ಶವಗಳ ಬೆಲೆ ಏರುತ್ತಾ ಬಂದಂತೆ ಸ್ತ್ರೀಯರೂ ಈ ಧಂಧೆಯಲ್ಲಿ ಸಕ್ರಿಯವಾಗಿ ಭಾಗವಹಿಸತೊಡಗಿದರು. ಅನಾಥ ಶವಗಳನ್ನು ಹೂಳುವಾಗ ಸ್ತ್ರೀಯರು ಅಲ್ಲಿ ಪ್ರತ್ಯಕ್ಷರಾಗಿ ಗೋಳಾಡುತ್ತಾ, ಆ ಶವಕ್ಕೆ ತಾವೇ ವಾರಸುದಾರರೆಂದು ಅತೀವ ದುಃಖವನ್ನು ತೋರ್ಪಡಿಸಿ ಅತ್ತು, ಗೋಗರೆದು ಹೆಣವನ್ನು ಪಡೆದು, ಬಳಿಕ ಅದನ್ನು ಲಾಭಕ್ಕೆ ಮಾರಿಕೊಳ್ಳುತ್ತಿದ್ದರು. ಶವಗಳ ಅಪಹರಣದ ಸುವರ್ಣಯುಗ (Golden Age of Body Snatching) ಎಂದೇ ಆ ಕಾಲ ಪ್ರಸಿದ್ಧವಾಗಿತ್ತು!
ಶವದ ಅಪಹರಣ ಕೃತ್ಯವನ್ನು ಅತಿ ಗೌಪ್ಯವಾಗಿಡಲಾಗುತ್ತಿತ್ತು. ಶವ ಹೂಳುವ ಪ್ರಕ್ರಿಯೆಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ ದೃಢಪಡಿಸಿಕೊಳ್ಳಲು ಅಪರಿಚಿತ ವ್ಯಕ್ತಿಯೊಬ್ಬ ಬೇಟೆಗಾರನ ಸೋಗಿನಲ್ಲಿ ತನ್ನ ಹೆಗಲಿಗೆ ಬಂದೂಕು ನೇತುಹಾಕಿಕೊಂಡು ಹತ್ತಿರದಲ್ಲೇ ನಿಂತು, ಏನೂ ಅರಿಯದವನಂತೆ ಎಲ್ಲ ತಮಾಷೆ ನೋಡಿ, ಖಚಿತಪಡಿಸಿಕೊಳ್ಳುತ್ತಿದ್ದ. ಶವಗಳನ್ನು ಹೂಳುವ ಮಾಹಿತಿಯನ್ನು ನೇರವಾಗಿ ಶವಗಳ್ಳರಿಗೆ ಒದಗಿಸದೆ, ದೂತನ ಮೂಲಕ ಅಥವಾ ಔಷಧ ವ್ಯಾಪಾರಿಯ ಮೂಲಕ ಸಾಂಕೇತಿಕವಾಗಿ ರವಾನಿಸಿ, ಶವವನ್ನು ಯಾವ ರುದ್ರಭೂಮಿಯಲ್ಲಿ, ಯಾವ ಸಮಯ ಹೂಳುತ್ತಿದ್ದಾರೆ ಎಂಬ ಸಕಲ ಮಾಹಿತಿಯನ್ನೂ ಒದಗಿಸಲಾಗುತ್ತಿತ್ತು. ಇದರಿಂದ ರಾತ್ರಿ ವೇಳೆ ಅನವಶ್ಯಕವಾಗಿ ಶವಗಳನ್ನು ಹುಡುಕದೆ, ನೇರವಾಗಿ ಶವವಿರುವ ಸ್ಥಳಕ್ಕೆ ಬಂದು ಇಳಿಯಬಹುದಿತ್ತು. ಮಧ್ಯರಾತ್ರಿ ನಾಲ್ಕು ಜನ ಒಂದು ವಾಹನದಲ್ಲಿ ಬರುತ್ತಿದ್ದರು. ಮೂವರು ಶವ ಹೂತಿದ್ದ ಸ್ಮಶಾನ ಭಾಗದಲ್ಲಿ ಇಳಿಯುತ್ತಿದ್ದರು. ಚಾಲಕ ವಾಹನದೊಡನೆ ಸಮೀಪದಲ್ಲೇ ನಿಗದಿತ ಸ್ಥಳದಲ್ಲಿ ಸಿದ್ಧನಾಗಿ ಕಾಯುತ್ತಿದ್ದ.
ಶವಪೆಟ್ಟಿಗೆ (coffin) ಯ ಮೇಲ್ಭಾಗದಲ್ಲಿ ಸಣ್ಣದೊಂದು ರಂಧ್ರವನ್ನು ಕೊರೆದು, ಅದರ ಮೂಲಕ ಮುಚ್ಚಳವನ್ನು ಎಬ್ಬಿಸಿ ತೆಗೆದು, ಶವವನ್ನು ಹೊತ್ತು ವಾಹನದಲ್ಲಿಡುತ್ತಿದ್ದರು. ಶವವನ್ನು ಸಾಮಾನ್ಯವಾಗಿ 4-5 ಅಡಿ ಆಳದಲ್ಲಿ ಹೂಳುತ್ತಿದ್ದುದರಿಂದ ಅದನ್ನು ಹೊರತೆಗೆಯಲು ಪ್ರಯತ್ನವಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಉದ್ದವಾದ ಕೋಲಿನ ಒಂದು ತುದಿಗೆ 'ಜೆ' ಆಕಾರದ ಕೊಕ್ಕೆ ಯನ್ನು ಬಿಗಿದು, ಕೊಕ್ಕೆಯನ್ನು ಶವದ ಗಲ್ಲಕ್ಕಿಟ್ಟು ಮೀಟಿ ಮೇಲಕ್ಕೆತ್ತುತ್ತಿದ್ದರು. ಇದರಿಂದ ಶವದ ಮುಖ ಭಾಗಗಳಿಗೆ ಕೆಲವೊಮ್ಮೆ ಲಘುವಾಗಿ ಪೆಟ್ಟಾಗುತ್ತಿತ್ತು. ಶವವನ್ನೆತ್ತಿ ಹೊರತೆಗೆದ ಬಳಿಕ ಯಾರಿಗೂ ಸಂಶಯ ಬಾರದಿರಲು ಖಾಲಿ ಶವಪೆಟ್ಟಿಗೆಯನ್ನು ಮತ್ತೆ ಮೊದಲಿನಂತೆಯೇ ಮುಚ್ಚಿ ಸಮಾಧಿ ಸ್ಥಳದಲ್ಲಿಟ್ಟು ದುರಸ್ತಿಮಾಡಿ ಹೋಗುತ್ತಿದ್ದರು. ಅಲ್ಪಾವಧಿಯಲ್ಲಿ ಇಷ್ಟೆಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದ್ದವು.
1537ರಲ್ಲಿ ತಮ್ಮ ವೈದ್ಯ ವ್ಯಾಸಂಗವನ್ನು ಯಶಸ್ವಿಯಾಗಿ ಮುಗಿಸಿದ ವೆಸೇಲಿಯಸ್ ಇಟಲಿಯ ಪಡುವ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. ವೈದ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಅಂಗರಚನಾಶಾಸ್ತ್ರದ ಬಗ್ಗೆ ಸರಣಿ ಉಪನ್ಯಾಸಗಳನ್ನು ಮಾಡುತ್ತಾ ಅಸಲಿ ಮಾನವ ಶವಗಳನ್ನು ಅವರ ಮುಂದಿಟ್ಟುಕೊಂಡು ಅದನ್ನು ಕೊಯ್ದು ಪ್ರತಿಯೊಂದು ಅಂಗದ ರಚನೆ ಮತ್ತು ಕಾರ್ಯಚರಣೆಯನ್ನು ವಿಶದವಾಗಿ ವಿವರಿಸಿ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಪಾಠ ಮಾಡುತ್ತಾ ಬಂದರು. ಇದರಿಂದ ವಿದ್ಯಾರ್ಥಿಗಳಿಗೆ ಅಂಗಗಳ ಪೂರ್ಣ ಮಾಹಿತಿ ಲಭಿಸುತ್ತಿತ್ತು. ಈ ರೀತಿಯ ಉಪನ್ಯಾಸಗಳಿಂದ ವೆಸೇಲಿಯಸ್ ಎಲ್ಲರ ಅಚ್ಚುಮೆಚ್ಚಿನ ಉಪನ್ಯಾಸಕರಾಗಿ ಮಿಂಚಿದರು. ವೆಸೇಲಿಯಸ್‌ನ ಉಪನ್ಯಾಸಗಳಿಗೆ ವಿದ್ಯಾರ್ಥಿಗಳು ಹಾಗೂ ಇತರ ಪ್ರಾಧ್ಯಾಪಕರು ಪಾಠದ ಕೋಣೆಯಲ್ಲಿ ಕಿಕ್ಕಿರಿದು ನೆರೆದು ನಿಶ್ಶಬ್ದದಿಂದ ಆಲಿಸುತ್ತಿದ್ದರು. ಶವಗಳನ್ನು ತಾವಾಗಿಯೇ ಸ್ವತಃ ಕೊಯ್ದು ನಡೆಸಿದ ಅಧ್ಯಯನದಿಂದ, ಗಾಲನ್ ಬೋಧಿಸಿದ್ದ ಸುಮಾರು 200ಕ್ಕೂ ಹೆಚ್ಚು ಮಾಹಿತಿಗಳು ತಪ್ಪಾಗಿದ್ದವೆಂದು ವೆಸೇಲಿಯಸ್ ತೋರಿಸಿಕೊಟ್ಟರು.
ಹೆಣಗಳನ್ನು ಕೊಯ್ದು ಅಧ್ಯಯನ ಮಾಡುತ್ತ ಬಂದ ವೆಸೇಲಿಯಸ್‌ಗೆ ದೇಹದ ಅಂಗಾಂಗಗಳ ನಿಖರ ಮಾಹಿತಿ ಲಭ್ಯವಾಯಿತು. ಜೊತೆಗೆ ಹೆಣ ಕದಿಯುವ ಕೌಶಲವೂ ತೀಕ್ಷ್ಣವಾಯಿತು! ಈ ಎರಡೂ ತಾಂತ್ರಿಕತೆಗಳನ್ನು ವೆಸೇಲಿಯಸ್ ತಮ್ಮ ಶಿಷ್ಯರಿಗೆ ಉಪದೇಶ ಮಾಡಿದರು. ಹೆಣ ಕದಿಯುವ ಕಲೆಯಲ್ಲಿ ವಿದ್ಯಾರ್ಥಿಗಳು ಗುರುಗಳನ್ನೇ ಮೀರಿಸತೊಡಗಿದರು! ಕದ್ದುತಂದ ಹೆಣಗಳನ್ನು ಯಾರೂ ಗುರುತಿಸದಂತೆ, ಯಾರಿಗೂ ಸಂದೇಹ ಬರದಂತೆ ಅದಕ್ಕೆ ವೈದ್ಯ ಪೋಷಾಕು, ಎದೆಕವಚ (Apron) ತೊಡಿಸಿ, ಅದರ ಮೇಲೆ medicine ಸಿಂಪಡಿಸಿ, ಅಕ್ಕಪಕ್ಕದಲ್ಲಿ ಇಬ್ಬರು ವಿದ್ಯಾರ್ಥಿಗಳು ತಮ್ಮ ಹೆಗಲ ಮೇಲೆ ಒಂದು ಕೈ ಇರಿಸಿ, ತಮ್ಮ ಸಹಪಾಠಿಯೊಬ್ಬ ಅತಿಯಾಗಿ medicine ಸೇವಿಸಿ, ಅವನಿನಲ್ಲಿ ನಡೆಯಲಾರದೆ ಕುಸಿದಿದ್ದಾನೆಂದು, ಅವನನ್ನು ಪ್ರಯಾಸಪಟ್ಟು ಪ್ರಯೋಗಾಲಯಕ್ಕೆ ನಡೆಸಿಕೊಂಡು ಹೋಗುತ್ತಿರುವುದಾಗಿ ಸುಳ್ಳು ಹೇಳಿ, ಇತರ ಸಹಪಾಠಿಗಳು ಹೆಣ ಕಾಣಿಸದಂತೆ ಅದನ್ನು ಸುತ್ತುವರಿದು, ಶವವನ್ನು ನಡೆಸಿಕೊಂಡು ಹೋಗಿ, ಅಲ್ಲಿ ಅದನ್ನು ಕೊಯ್ದು ಅಧ್ಯಯನ ಮಾಡುತ್ತಿದ್ದರಂತೆ!
ಆಡಮ್ ಎಂಬ ಒಬ್ಬ ತರುಣ ತನ್ನ ಒಂದು ಪಕ್ಕೆಲುಬನ್ನು (rib) ಮುರಿದು ಅದರಿಂದ ಈವ್ ಎಂಬ ತರುಣಿಯನ್ನು ಸೃಷ್ಟಿಸಿದನೆಂದು ಬೈಬಲ್ (Bible) ನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಪ್ರಭಾವಿತರಾಗಿದ್ದ ಗಾಲನ್, ಪುರುಷರಿಗೆ ಮಹಿಳೆಯರಿಗಿಂತ ಒಂದು ಪಕ್ಕೆಲುಬು ಕಡಿಮೆಯಿದೆ ಎಂದೇ ಅನೇಕ ವರ್ಷಗಳಿಂದಲೂ ವೈದ್ಯ ವಿದ್ಯಾರ್ಥಿಗಳಿಗೆ ಬೋಧಿಸುತ್ತಾ ಬಂದಿದ್ದರು. ಆದರೆ ಸ್ತ್ರೀ ಪುರುಷರಿಬ್ಬರಲ್ಲೂ ಪಕ್ಕೆಲುಬುಗಳ ಸಂಖ್ಯೆ ಒಂದೇ ಆಗಿದೆ ಎಂದು ವೆಸೇಲಿಯಸ್‌ನ ಶವ ಕೊಯ್ತಗಳಿಂದ ತಿಳಿಯಿತು. ಎರಡು ಹೃತ್ಕುಕ್ಷಿಗಳ ಮಧ್ಯೆ ರಕ್ತ ಪರಿಚಲನೆಯಾಗುವುದೆಂದೂ, ಕೆಳದವಡೆಯು ಒಂದಕ್ಕಿಂತ ಹೆಚ್ಚು ಮೂಳೆಗಳಿಂದ ಮಾಡಲ್ಪಟ್ಟಿದೆ ಎಂದೂ ಗಾಲನ್ ಮಾನವನ ದೇಹರಚನೆ (The Structure of the Human Body) ಎಂಬ ತಮ್ಮ ಪುಸ್ತಕದಲ್ಲಿ ಬರೆದಿದ್ದರು. ಇವೆಲ್ಲ ಮಾಹಿತಿಗಳು ತಪ್ಪಾದವೆಂದು ವೆಸೇಲಿಯಸ್ ತೋರಿಸಿಕೊಟ್ಟರು. ಗಾಲನ್‌ರ ಉಪನ್ಯಾಸಗಳನ್ನೇ ಆಧಾರವಾಗಿಟ್ಟುಕೊಂಡು ಪಾಠ ಬೋಧಿಸುತ್ತಿದ್ದ ಅನೇಕ ಶಿಕ್ಷಕರು ವೆಸೇಲಿಯಸ್‌ನ ಪಾಠಪ್ರವಚನದ ವೈಖರಿಯಿಂದ ಪ್ರೇರಿತರಾಗಿ, ಗಾಲನ್‌ರ ಅನೇಕ ತಪ್ಪು ಹೇಳಿಕೆಗಳನ್ನು ತ್ಯಜಿಸಿ ವೆಸೇಲಿಯಸ್‌ನ ಮಾಹಿತಿಯನ್ನು ಅನುಸರಿಸಿದರು. ಇದರಿಂದ ಕೋಪಗೊಂಡ ಗಾಲನ್‌ರ ಹಿಂಬಾಲಕರು, ಗಾಲನರ ವಿವರಣೆಗಳು ಸರಿಯೆಂದೂ, ಗಾಲನ್ರ ಕಾಲಕ್ಕೂ ವೆಸೇಲಿಯಸ್‌ನ ಕಾಲಕ್ಕೂ ನಡುವಿನ ಅಂತರದಲ್ಲಿ ಮಾನವನ ದೇಹ ರಚನೆಯಲ್ಲೇ ಬದಲಾವಣೆಗಳಾಗಿರುವುದರಿಂದ ಇಂತಹ ವ್ಯತ್ಯಾಸಗಳು ಸಹಜವೆಂದು ವಾದಿಸಿದರು! ಅವರು ವೆಸೇಲಿಯಸ್‌ನ ವಿಧಾನಗಳನ್ನು ಕಟುವಾಗಿ ಟೀಕಿಸಲಾರಂಭಿಸಿದರು. ಇದರಿಂದ ತೀವ್ರವಾಗಿ ಬೇಸರಗೊಂಡ ವೆಸೇಲಿಯಸ್ ತಾವು ರಚಿಸಿದ್ದ ವೈದ್ಯ ಪುಸ್ತಕಗಳೆಲ್ಲವನ್ನೂ ಬೆಂಕಿಯಲ್ಲಿ ಸುಟ್ಟು ತಮ್ಮ ವೈದ್ಯಶಾಲೆಯನ್ನು ಮುಚ್ಚಿ, ಮದುವೆಯಾಗಿ, ರಾಜವೈದ್ಯರಾಗಿ ಮುಂದುವರೆದರು.
ವೆಸೇಲಿಯಸ್ ರಾಜವೈದ್ಯರಾದದ್ದನ್ನು ಸಹಿಸದ ಇತರ ವೈದ್ಯರು ಮತ್ತು ಪಾದ್ರಿಗಳನೇಕರು, ಆಸ್ಥಾನ ಪಂಡಿತರೊಬ್ಬರನ್ನು ಹತ್ಯೆಗೈದರೆಂದು ವೆಸೇಲಿಯಸ್ ಮೇಲೆ ಸುಳ್ಳು ಆರೋಪಣೆ ಹೊರಿಸಿದರು. ರಾಜನು ವೆಸೇಲಿಯಸ್‌ನ ಶಿಕ್ಷೆಯನ್ನು ಸಡಿಲಿಸಿ, ಅವರನ್ನು ತೀರ್ಥಯಾತ್ರೆಗೆ ಕಳುಹಿಸಿಕೊಟ್ಟನು. ವೆಸೇಲಿಯಸ್ ಯಾನ ಮಾಡುತ್ತಿದ್ದ ಹಡಗು ಬಿರುಗಾಳಿಗೆ ಸಿಲುಕಿ ಮುಳುಗಿ ಹೋಯಿತು. ವೆಸೇಲಿಯಸ್‌ನನ್ನು ರಕ್ಷಿಸಿ ತರಲಾಯಿತು. ಆದರೆ, ಅವರು ಸಾವನ್ನಪ್ಪಿದರು.
ತಮ್ಮ ಜೀವನದ ಅಂತ್ಯದಲ್ಲಿ, ತಾವು ತಮ್ಮ ಶಿಷ್ಯರಿಗೆ ಹೆಣಗಳನ್ನು ಕದಿಯಲು ಪ್ರೋತ್ಸಾಹಿಸಿದ್ದ ಬಗ್ಗೆ ತಮ್ಮ ವಿಷಾದ ವ್ಯಕ್ತಪಡಿಸಿ ‘ಹೆಣಗಳನ್ನು ಹೂಳುವ ಸ್ಥಳದ ಬಗ್ಗೆ ಗಮನ ಕೊಡಬೇಕೆಂದು ನನ್ನ ಶಿಷ್ಯರಿಗೆ ನಾನು ಮಾರ್ಗದರ್ಶನ ಮಾಡಬಾರದಾಗಿತ್ತು. ಚಿಕಿತ್ಸೆಗಾಗಿ ನನ್ನನ್ನು ಹುಡುಕಿಕೊಂಡು ಬರುವ ರೋಗಿಗಳ ಆರೋಗ್ಯಸ್ಥಿತಿ ಬಗ್ಗೆ, ಅವರ ಕಳೇಬರಗಳನ್ನು ಕದಿಯಲು ಸುಲಭವಾಗುವಂತೆ ಮರಣೋತ್ತರ ಅವರನ್ನು ಹೂಳುವ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸಲು ನನ್ನ ಶಿಷ್ಯರಿಗೆ ಉಪದೇಶಿಸಬಾರದಾಗಿತ್ತು’ ಎಂದು ವೆಸೇಲಿಯಸ್ ತಮ್ಮ ಅಸಮಾಧಾನದಿಂದ ಪಶ್ಚಾತ್ತಾಪಪಟ್ಟಿದ್ದರು.
ವೆಸೇಲಿಯಸ್‌ನಂತಹ ಕ್ರಾಂತಿಕಾರಿ ವೈದ್ಯರು ಅಂದು ಜನಿಸದಿದ್ದರೆ ಶೈಶವಾವಸ್ಥೆ (Infancy) ಯಲ್ಲಿದ್ದ ವೈದ್ಯಶಾಸ್ತ್ರವು ಹೇಗೆ ಬೆಳೆಯುತ್ತಿತ್ತೋ ಎಂದು ಊಹಿಸಲೂ ಆಗದು. ಸೆರೆಂಡಿಪಿಟಿ (Serendipity) ಯು ಕಾಲಾನುಕಾಲಕ್ಕೆ ಇಂತಹ ಮೇಧಾವಿಗಳನ್ನು ಸೃಷ್ಟಿಸಿ ಮನುಕುಲವನ್ನು ರಕ್ಷಿಸುತ್ತಲೇ ಬಂದಿದೆ.

No comments:
Post a Comment