ಜೀವದ ಸೂಕ್ಷ್ಮ ಜಗತ್ತಿಗೆ ದಿಕ್ಕು ತೋರಿದ ವಿಜ್ಞಾನ ತಪಸ್ವಿ ಜಿ. ಎನ್. ರಾಮಚಂದ್ರನ್
ಲೇಖಕರು ; ರಾಮಚಂದ್ರ ಭಟ್ ಬಿ.ಜಿ.
ಇತ್ತೀಚೆಗೆ JNCASR ನಲ್ಲಿ ವಿಜ್ಞಾನ ಉಪನ್ಯಾಸವೊಂದನ್ನು ಕೇಳುತ್ತಿದ್ದೆ. ಅಲ್ಲಿನ ವಿಜ್ಞಾನಿ ಡಾ. ಚಂದ್ರಭಾಸ ನಾರಾಯಣ್ ಅವರು ತಮ್ಮ ಉಪನ್ಯಾಸದಲ್ಲಿ ರಾಮಚಂದ್ರನ್‌ರವರ ಬಗ್ಗೆ ಒಂದಷ್ಟು ವಿಷಯ ಹೇಳುತ್ತಿದ್ದಂತೆ ಈ ಸಾಧಕರ ಬಗ್ಗೆ ಭಾರತೀಯರಾದ ನಾವು ತಿಳಿದುಕೊಳ್ಳಲೇಬೇಕು ಎಂದೆನಿಸಿತು.
ವಿಜ್ಞಾನ ಇತಿಹಾಸವು ಕೆಲವೊಮ್ಮೆ ಗದ್ದಲದಿಂದ ಕೂಡಿದ್ದರೆ, ಕೆಲವೊಮ್ಮೆ ಮೌನಮಯ. .ಕೆಲವರು ಸಾಧನೆ ಮಾಡಿದ ಕ್ಷಣದಲ್ಲೇ ಜಗತ್ತಿನ ಕಣ್ಸೆಳೆದರೆ, ಇನ್ನೂ ಕೆಲವರು — ಶಾಂತವಾಗಿ, ಯಾವುದೇ ಹಂಬಲವಿಲ್ಲದೆ —ಮಾನವ ಜ್ಞಾನದ ಅಡಿಪಾಯವನ್ನೇ ಗಟ್ಟಿಗೊಳಿಸುತ್ತಾ ಹೋಗುತ್ತಾರೆ. ಜಿ. ಎನ್. ರಾಮಚಂದ್ರನ್ ಎಂಬ ಭಾರತೀಯ ವಿಜ್ಞಾನ ಲೋಕದ ಧ್ರವತಾರೆ ಅಂತಹ ಮೌನ ಸಾಧಕರಲ್ಲೊಬ್ಬರು. ಪ್ರಕಾಶಮಾನವಾದ ಖ್ಯಾತ ನಕ್ಷತ್ರಗಳ ನಡುವೆ ನಮಗೆ ಕಾಣಿಸದಿದ್ದರೂ, ಪ್ರೋಟೀನ್ ಎಂಬ ಜೀವದ ಮೂಲಭೂತ ರಚನೆಗೆ ದಿಕ್ಕು ತೋರಿದ ಧ್ರುವತಾರೆ. .ಅವರ ಸಾಧನೆಯಾದ ರಾಮಚಂದ್ರನ್ ಪ್ಲಾಟ್ ಬಳಸದೇ ಯಾವ ವಿಜ್ಞಾನಿಯೂ ಪ್ರೋಟೀನ್‌ಗಳ ರಚನೆಯ ಬಗ್ಗೆ ಅಧ್ಯಯನ ಮಾಡಲಾರ. ನೋಬಲ್ ಪ್ರಶಸ್ತಿಯನ್ನೂ ಗಳಿಸಲಾರ ಎಂದರೆ ನಿಮಗೆ ಅವರ ಸಾಧನೆಯ ಪ್ರಾಮುಖ್ಯತೆ ಬಗ್ಗೆ ಅರಿವಾದೀತು.
ಪ್ರತಿಭೆಯ ಮೂಲ: ಬಾಲ್ಯ, ಮನೆ ಮತ್ತು ಮನಸ್ಸು
೧೯೨೨ರ ಅಕ್ಟೋಬರ್ ೮. ಕೇರಳದ ಎರ್ನಾಕುಲಂನಲ್ಲಿ ಜನಿಸಿದ ಈ ಬಾಲಕ, ಮುಂದೆ
ಜೀವವಿಜ್ಞಾನದ ದಿಕ್ಕನ್ನೇ ಬದಲಿಸುವುದೆಂದು ಅಂದು ಯಾರಿಗೆ ತಾನೇ
ಗೊತ್ತಿತ್ತು? ಅವರ ತಂದೆ ಜಿ. ನಾರಾಯಣ
ಅಯ್ಯರ್, ಗಣಿತದ ಪ್ರಾಧ್ಯಾಪಕರು. ಸಂಖ್ಯೆಗಳ
ಶಿಸ್ತು, ಲೆಕ್ಕಾಚಾರದ ನಿಖರತೆ, ತಾರ್ಕಿಕ ಚಿಂತನೆ — ಇವೆಲ್ಲವೂ ಬಾಲಕ ರಾಮಚಂದ್ರನ್ ಅವರ ಮನಸ್ಸಿನಲ್ಲಿ ಅಜ್ಞಾತವಾಗಿ ಬೇರುಬಿಟ್ಟವು. ಅವರ ಬಾಲ್ಯದಲ್ಲಿ ವಿಜ್ಞಾನ ಎಂದರೆ ಕೇವಲ ವಿಷಯವಲ್ಲ; ಅದು ಚಿಂತನೆಯ ವಿಧಾನವಾಗಿತ್ತು.
ಶಿಕ್ಷಣ: ಭೌತಶಾಸ್ತ್ರದಿಂದ ಜೀವದ ಒಳಹೊಕ್ಕು
ಎರ್ನಾಕುಲಂನಲ್ಲಿ ಶಾಲೆ, ಮದ್ರಾಸ್‌ನ
ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೌತಶಾಸ್ತ್ರ ಪದವಿ. ಆದರೆ ಅವರ
ನಿಜವಾದ ಬೌದ್ಧಿಕ ವಿಕಾಸವಾಗಿದ್ದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್
ಆಫ್ ಸೈನ್ಸ್ನಲ್ಲಿ ಆಯಿತು. ಅದಕ್ಕೆ ದಾರಿ
ತೋರಿದವರು ಅಸಾಮಾನ್ಯ ವಿಜ್ಞಾನಿ - ನೊಬೆಲ್ ವಿಜೇತ ಸರ್ ಸಿ. ವಿ. ರಾಮನ್.
ಸಿ.ವಿ. ರಾಮನ್ ಅವರ ಶಿಷ್ಯರಾಗುವುದು ಸುಲಭದ ಮಾತಲ್ಲ. ಶಿಸ್ತಿನ ಕಠಿಣತೆ, ಪ್ರಶ್ನೆಗಳ ತೀಕ್ಷ್ಣತೆ — ಅದು ವಿಜ್ಞಾನದ ತಪಸ್ಸಿನಂತಿತ್ತು. ರಾಮಚಂದ್ರನ್ ಅವರ ಬುದ್ಧಿವಂತಿಕೆಯನ್ನು ರಾಮನ್ ಕ್ಷಣಾರ್ಧದಲ್ಲೇ ಗುರುತಿಸಿದರು.
ಭೌತಶಾಸ್ತ್ರದ ಬೆಳಕು ಮತ್ತು ಹರಳುಗಳ ಅಧ್ಯಯನಕ್ಕೆ ಹೊರಟ ಈ ಯುವ ವಿಜ್ಞಾನಿ ಮುಂದೆ
ಪ್ರೋಟೀನ್‌ನ ಸೂಕ್ಷ್ಮ ರಚನೆಯಾದ ಟ್ರಿಪಲ್ ಹೆಲಿಕ್ಸ್ಗೆ ದಾರಿಯಾದುದು ವಿಜ್ಞಾನ ಇತಿಹಾಸದ ಅಚ್ಚರಿ ಸಂಗತಿ.
ಸುಳಿವಿಲ್ಲದ ವಿಜ್ಞಾನ ಪ್ರಶ್ನೆ: ಪ್ರೋಟೀನ್ ಹೇಗೆ ಮಡಚಿಕೊಳ್ಳುತ್ತದೆ?
ಜೀವದ ಪ್ರತಿಯೊಂದು ಚಲನೆಯ ಹಿಂದಿರುವುದು ಒಂದು ಸೂಕ್ಷ್ಮ ಪ್ರೋಟೀನ್ ರಚನೆ. ಆದರೆ ಪ್ರಶ್ನೆ ಸರಳವಾಗಿರಲಿಲ್ಲ:
- ಪ್ರೋಟೀನ್ ಯಾವ ಆಕಾರದಲ್ಲಿ ಇರಬಹುದು?
- ಯಾವ ರೀತಿಯ ಮಡಚುವಿಕೆ ಸಾಧ್ಯ?
- ಯಾವುದು ಅಸಾಧ್ಯ?
ಅಂದಿನ ವಿಜ್ಞಾನಕ್ಕೆ ಈ ಪ್ರಶ್ನೆಗಳು ಕತ್ತಲೆಯ ಕೊಠಡಿಯಲ್ಲಿ ಸೂಜಿ ಹುಡುಕಿದಂತಿತ್ತು.
ರಾಮಚಂದ್ರನ್ ಪ್ಲಾಟ್: ಕತ್ತಲೆಗೆ ಬೆಳಕು
ಅಚ್ಚರಿಯೆಂದರೆ, ಈ ಲೆಕ್ಕಾಚಾರಗಳು ನಡೆದದ್ದು ಕಂಪ್ಯೂಟರ್‌ಗಳಿಲ್ಲದ ಕಾಲದಲ್ಲಿ. ಸಂಕೀರ್ಣ ಗಣಿತೀಯ ದತ್ತಾಂಶಗಳು , ಲೆಕ್ಕಾಚಾರಗಳು ಮತ್ತವುಗಳ
ವಿಶ್ಲೇಷಣೆಗಳನ್ನು ಅವರು ಪೆನ್, ಕಾಗದಗಳನ್ನು ಬಳಸಿ ಮಾಡಬೇಕಿತ್ತು. ಇಂದು ಸೂಪರ್
ಕಂಪ್ಯೂಟರ್‌ಗಳು ಅವರ
ಲೆಕ್ಕಾಚಾರವನ್ನು ದೃಢಪಡಿಸಿವೆ. Ramachandran plot for Glycine
ನಮ್ಮ ಚರ್ಮ, ಮೂಳೆ, ಸ್ನಾಯು — ಇವೆಲ್ಲವೂ
ನಿಂತಿರುವುದು ಕೊಲಾಜನ್ ಮೇಲೆ. ಈ ಕೊಲಾಜನ್‌ನ ತ್ರಿವಳಿ
ಸುರುಳಿ ರಚನೆಯನ್ನು ಜಗತ್ತಿಗೆ
ಮೊದಲಾಗಿ ವಿವರಿಸಿದವರು ರಾಮಚಂದ್ರನ್
ಮತ್ತು ಅವರ ತಂಡ. ಈ ಮಾದರಿಯನ್ನೇ ವಿಜ್ಞಾನ ಲೋಕವು ಗೌರವದಿಂದ “ಮದ್ರಾಸ್ ಹೆಲಿಕ್ಸ್” ಎಂದು ಕರೆಯಿತು.ಇದು ವೈದ್ಯಕೀಯ ವಿಜ್ಞಾನದಲ್ಲಿ ಹೊಸ
ಅಧ್ಯಾಯವನ್ನೇ ಆರಂಭಿಸಿತು.
The triple helix: three left-handed polyproline type II helices (red, green, blue) assemble by an axial hydrogen bond to form a right-handed triple helix, the tertiary structure of collagen.
ಸೌಲಭ್ಯವಿಲ್ಲದ
ಸಾಧನೆ: ಭಾರತೀಯ ವಿಜ್ಞಾನದ ಧೈರ್ಯ
ಅಲ್ಪ ಅನುದಾನ, ಸಾಧನಗಳ ಕೊರತೆ —ಇವೆಲ್ಲವೂ ಅವರ
ಸಾಧನೆಯ ಹಾದಿಯಲ್ಲಿ ಮುಳ್ಳಿನಂತೆ ಇದ್ದವು. ಒಂದು
ಕಂಪ್ಯೂಟರ್‌ಗಾಗಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೆ ಅವರ
ನಂಬಿಕೆ ಸ್ಪಷ್ಟವಾಗಿತ್ತು. “ಸೌಲಭ್ಯಗಳಿಗಿಂತ
ಸಂಕಲ್ಪ ಮುಖ್ಯ.”
ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಅವರು ಕಟ್ಟಿದ ಪ್ರಯೋಗಾಲಯ ವಿದೇಶಿ ವಿಜ್ಞಾನಿಗಳನ್ನು ಬೆರಗುಗೊಳಿಸಿತು. ಭಾರತವೂ ವಿಜ್ಞಾನದಲ್ಲಿ ಕೇವಲ ಅನುಯಾಯಿ ಅಲ್ಲ ಎಂಬುದನ್ನು ಅವರು ಸಾಬೀತುಪಡಿಸಿದರು.
ವ್ಯಕ್ತಿತ್ವ: ವಿಜ್ಞಾನ ತಪಸ್ವಿ
ರಾಮಚಂದ್ರನ್ ಕೇವಲ
ಪ್ರಯೋಗಾಲಯಕ್ಕಷ್ಟೇ ಸೀಮಿತಗೊಂಡ ವಿಜ್ಞಾನಿಯಲ್ಲ. ಅವರು: ಗಣಿತಪ್ರೇಮಿ, ಸಂಸ್ಕೃತಾಸಕ್ತ̧ ತತ್ವಶಾಸ್ತ್ರದ
ಚಿಂತಕ̧ ಅಪೂರ್ವ ವಾಗ್ಮಿ . ಅವರು
ಹೇಳುತ್ತಿದ್ದ ಮಾತು: “ವಿಜ್ಞಾನ ಎಂದರೆ
ಸಾಧನಗಳಲ್ಲ; ಅದು ನಮ್ಮ ಚಿಂತನೆಯ ಶಿಸ್ತು.”
ನೋಬೆಲ್
ಪ್ರಶಸ್ತಿ: ಸಿಕ್ಕದ ಗೌರವ
ಅನೇಕ ವಿಜ್ಞಾನಿಗಳು ಇಂದಿಗೂ ಹೇಳುತ್ತಾರೆ: ರಾಮಚಂದ್ರನ್ ಅವರಿಗೆ ನೋಬೆಲ್ ಸಿಗಬೇಕಿತ್ತು. ಆದರೆ ಪ್ರಶಸ್ತಿಗಿಂತ ದೊಡ್ಡದು ಅವರ ಕೊಡುಗೆಯ ಶಾಶ್ವತತೆ, ಪ್ರತಿ
ಜೀವವಿಜ್ಞಾನ ಪಠ್ಯಪುಸ್ತಕದಲ್ಲಿ ಅವರ ಹೆಸರು
ಜೀವಂತವಾಗಿದೆ. ಪ್ರಮುಖ ಗೌರವಗಳೆಂದರೆ,
- ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ
- ರಾಯಲ್ ಸೊಸೈಟಿ ಆಫ್ ಲಂಡನ್ – ಫೆಲೋ (FRS)
- ಪದ್ಮಭೂಷಣ
ವಿಜ್ಞಾನ ಮತ್ತು ವಿನಯ
ರಾಮಚಂದ್ರನ್ ಅವರ ಅನೇಕ
ಮಹತ್ವದ ಕೆಲಸಗಳು ತಡವಾಗಿ ಪ್ರಕಟವಾದವು. ಇದಕ್ಕೆ ಕಾರಣ: ಅವರು ಆತುರಪಡಲಿಲ್ಲ. ಪ್ರತಿಯೊಂದು
ಲೆಕ್ಕಾಚಾರವೂ ನೂರು ಶೇಕಡಾ ನಿಖರವಾಗಿರಬೇಕು ಎಂಬ ಹಠ. ಆದರೆ ವಿಜ್ಞಾನ ಲೋಕದಲ್ಲಿ ಇದೊಂದು ದುರ್ಬಲತೆಯಂತೆ
ಪರಿಗಣಿಸಲಾಯಿತು. ಅಂದು ಪಾಶ್ಚಾತ್ಯ ವಿಜ್ಞಾನದಲ್ಲಿ ಒಂದು ಅಡಗಿದ ನಿಲುವಿತ್ತು: “ಮೊದಲು ಪ್ರಕಟಿಸಿದವನೇ ನಾಯಕ.” ಆದರೆ ರಾಮಚಂದ್ರನ್ ಮಾತ್ರ ಹೇಳುತ್ತಿದ್ದರು: “ಸರಿಯಾಗಿ ಪ್ರಕಟಿಸಿದವನೇ ವಿಜ್ಞಾನಿ.” ಈ ನೈತಿಕತೆ ಅವರನ್ನೇ ಹಿಂದೆ ತಳ್ಳಿತು.
ಜಿ. ಎನ್. ರಾಮಚಂದ್ರನ್ ವಿಜ್ಞಾನಕ್ಕೆ ಹೊಸಭಾಷ್ಯ
ಬರೆದವರು, ಹೊಸದಿಕ್ಕು ಕೊಟ್ಟವರು, ಆದರೆ
ಅಹಂಕಾರಕ್ಕೆ ಸ್ಥಳಕೊಡದವರು. ಅವರ ಬದುಕು
ಹೇಳುತ್ತದೆ - “ಮೌನದಲ್ಲಿಯೂ ಮಹತ್ವ ಹುಟ್ಟುತ್ತದೆ.” ಇಂದಿನ
ವಿದ್ಯಾರ್ಥಿಗಳಿಗೆ, ಯುವ ವಿಜ್ಞಾನಿಗಳಿಗೆ,ಶಿಕ್ಷಕರಿಗೆ
—ರಾಮಚಂದ್ರನ್ ಅವರ ಜೀವನ ಒಂದು ಜ್ಞಾನಸಮುದ್ರ.
ಸಾಧನೆಯ ಹಾದಿಯತ್ತ ಕರೆದೊಯ್ಯಬಲ್ಲ ಸೊಡರು. ಜೀವದ ಸೂಕ್ಷ್ಮ
ಜಗತ್ತನ್ನು ಮಾನವ ಬುದ್ಧಿಗೆ
ತೆರೆದ ಆ ವಿಜ್ಞಾನ
ತಪಸ್ವಿಗೆ ಇದು ನಮ್ಮ ಗೌರವ
ನಮನ.
ಹೆಚ್ಚಿನ ಮಾಹಿತಿಗಾಗಿ ವೀಕ್ಷಿಸಿ :
https://www.youtube.com/watch?v=FgVgOKlSB4M&t=898s


No comments:
Post a Comment