ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Sunday, January 4, 2026

ಬೆಂಕಿಬೆನ್ನಿನ ಹೊನ್ನಹಕ್ಕಿ

 ಬೆಂಕಿಬೆನ್ನಿನ ಹೊನ್ನಹಕ್ಕಿ



ಚಿತ್ರ ಲೇಖನ: ಕೃಷ್ಣ ಸುರೇಶ





ಹೊನ್ನ ಬೆನ್ನಿನ ಮರಕುಟುಕ ಭಾರತ ಉಪಖಂಡದ ಉದ್ದಗಲಕ್ಕೂ ಹರಡಿರುವ ಒಂದು ಪಕ್ಷಿ ಪ್ರಭೇದ. ಬಂಗಾರ ವರ್ಣದ ಮುಖದ ತುಂಬ ಬಿಳಿ ಚುಕ್ಕೆಗಳು, ಕೆಂಪು ಕುಲಾವಿ ಧರಿಸಿದಂತೆಯೇ ಕಾಣುವ ತಲೆಯ ಭಾಗ, ಕುತ್ತಿಗೆಯಿಂದ ಕೊಕ್ಕಿನವರೆಗೆ ಎಳೆದಂತೆ ಕಾಣುವ ಎರಡು ಬಿಳಿಯ ಗೆರೆಗಳು, ಅದರ ಮಧ್ಯೆ ಇರುವ ಕಪ್ಪುಗೆರೆ, ಕಡುಗಪ್ಪು ಬಣ್ಣದ ಕುತ್ತಿಗೆಯ ತಳಭಾಗ, ಕಪ್ಪು ರೆಕ್ಕೆಗಳ ಅಂಚು ಮತ್ತು ಬಾಲ, ರೆಕ್ಕೆಗಳ ಮೇಲೆ ಅಲಂಕರಿಸಿದಂತೆ ಎದ್ದುಕಾಣುವ ರಂಗೋಲಿಯನ್ನ ಹೊಲುವ ಬಿಳಿಯ ಚುಕ್ಕಿಗಳನ್ನು    ಇದರಲ್ಲಿ ಕಾಣಬಹುದು.

  ಜೊತೆಗೆ, ಜ್ವಾಲೆಯ ಬಣ್ಣದ ಬೆನ್ನಿನ ಹೊದಿಕೆ ಮತ್ತು ಕಪ್ಪು ಪೃಷ್ಟ ಇರುವುದರಿಂದ ಇದನ್ನುಜ್ವಾಲೆ ಬೆನ್ನಿನ ಮರಕುಟಿಕ (Flame back wood pecker) ಹಾಗೂ ಕಪ್ಪು ಪೃಷ್ಟದ ಮರಕುಟಿಕ (Black rumped wood pecker) ಎಂತಲೂ ಕರೆಯುತ್ತಾರೆ. 

ನಗರ, ಪಟ್ಟಣ, ಕಾಡುಮೇಡುಗಳಲ್ಲೆಲ್ಲಾ ಕಂಡು ಬರುವ ೨೬ ರಿಂದ ೩೦ ಸೆಂ.ಮೀ.ವರಗೆ ಬೆಳೆಯುವ ಹೊನ್ನ ಬೆನ್ನಿನ ಮರಕುಟುಕದ ದೇಹದ ಬಣ್ಣದ ವಿನ್ಯಾಸವು ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ನೋಡಲು ಅಲ್ಪ ಸ್ವಲ್ಪ ವ್ಯತ್ಯಾಸವಿರುತ್ತದೆ. ನಾಲ್ಕು ಬೆರಳುಗಳ ಕಾಲುಗಳಲ್ಲಿ ೧ನೇ ಮತ್ತು ೪ನೇ ಬೆರಳುಗಳು ಹಿಂದಕ್ಕೂ ಮತ್ತು ೨ನೇ ಮತ್ತು ೩ನೇ ಬೆರಳುಗಳು ಮುಂದಕ್ಕೂ ಇದ್ದು, ಮರದ ರೆಂಬೆಯನ್ನು ಗಟ್ಟಿಯಾಗಿ ಅಮುಕಿ ಹಿಡಿಯಲು ಸೂಕ್ತವಾಗಿವೆ. ಕಪ್ಪು ಬಣ್ಣದ ಬಾಲ ಸಮತೋಲನ ಕಾಪಾಡಲು ಮತ್ತು ಅಗತ್ಯ ಬಿದ್ದಾಗ ರೆಂಬೆ ಕೊಂಬೆಗಳಿಗೆ ಒತ್ತಿ ಹಿಡಿಯಲು ಸಹಕರಿಸುತ್ತದೆ. ಕಪ್ಪು ಬಣ್ಣದ ನೀಳ ಮತ್ತು ಗಡುಸಾದ ಕೊಕ್ಕು ಮರದ ಕಾಂಡವನ್ನೂ ಸಹ ಕುಟ್ಟಿ ರಂದ್ರ ಮಾಡುವಷ್ಟು ಗಟ್ಟಿಯಾಗಿರುತ್ತದೆ. ಅನೇಕರು ಚಂದ್ರ ಮುಕುಟ ಪಕ್ಷಿಯನ್ನೇ ಮರಕುಟುಕವೆಂದು ಭಾವಿಸುವುದು ಉಂಟು.

  

ಮರದ ಪೊಟರೆ- ರಂದ್ರಗಳಲ್ಲಿ ಅಡಗಿ ಕುಳಿತಿರುವ ಕೀಟಗಳನ್ನು ಕೊಕ್ಕಿನಿಂದ ಮತ್ತು ಉದ್ದನೆಯ ನಾಲಿಗೆ ಬಳಸಿ ಈ ಮರಕುಟುಕ ಹೆಕ್ಕಿ ಭಕ್ಷಿಸಬಲ್ಲದು. ಇದರ ಆಹಾರ ಪದ್ಧತಿಯು ಅತ್ಯಂತ ವೈವಿದ್ಯಮಯವಾಗಿದ್ದು, ಮರದ ತೊಗಟೆ, ಪೊಟರೆಗಳಲ್ಲಿರುವ ಕೀಟಗಳ ಲಾರ್ವೆಗಳು ಇದರ ಇಷ್ಟ ಭಕ್ಷ್ಯ. ಗೆದ್ದಲುಗಳು, ವಿವಿಧ ಕೀಟಗಳು, ಜೀರುಂಡೆಗಳು, ಹಣ್ಣುಗಳು ಅಲ್ಲದೆಯೆ ಹೂವಿನ ಮಕರಂದವನ್ನು ಹೀರಬಲ್ಲವು. ಇತರೆ ಪಕ್ಷಿಗಳ ಗೂಡಿಗೆ ಕಳ್ಳನಂತೆ ನುಗ್ಗಿ, ಅವುಗಳ ಮೊಟ್ಟೆಗಳನ್ನು ಸೋರೆ ಮಾಡಿ ಸ್ವಾಹ ಮಾಡುತ್ತವೆ. ಆಹಾರದ ಲಭ್ಯತೆಯನ್ನು, ಅವಕಾಶವನ್ನು, ಅವಲಂಬಿಸಿ ಸಣ್ಣ ಸರಿಸೃಪಗಳು, ಚಿಕ್ಕಚಿಕ್ಕ ಇತರೆ ಪ್ರಾಣಿಗಳನ್ನು ಇವು ತಿನ್ನುತ್ತವೆ. ನಗರ ಪ್ರದೇಶಗಳಲ್ಲೂ ಕಂಡುಬರುವ ಇವು ನಾವು ಎಸೆದ ಉಳಿಕೆ ಆಹಾರ ಪದಾರ್ಥವನ್ನು ತಿನ್ನುತ್ತವೆ.


ಸಾಮಾನ್ಯವಾಗಿ ಜೋಡಿಯಾಗಿ ಅಥವಾ ಪರಿವಾರ ಸಮೇತ ಕಾಣಿಸಿಕೊಳ್ಳುವ ಇವು, ಮರದ ರೆಂಬೆಕೊಂಬೆಗಳ ಮೇಲೆ ಕುಳಿತಾಗ ಅದರ ಹಿನ್ನೆಲೆಯಲ್ಲಿ ಬೆರೆತು ಹೋಗುವುದರಿಂದ ಇವುಗಳನ್ನು ಬೇಟೆಯಾಡುವ ಶತೃಗಳಿಗೆ ನೋಡಲು ಕಷ್ಟಸಾದ್ಯ. ಇವುಗಳ ಸಂತಾನೋತ್ಪತ್ತಿಯ ಕಾಲ ಫೆಬ್ರವರಿಯಿಂದ ಜೂನ್‌ ತಿಂಗಳವರೆಗೆ ವ್ಯಾಪಿಸಿದೆ. ಹೆಣ್ಣನ್ನು ಒಲಿಸಿಕೊಳ್ಳಲು ಗಂಡು ಪಕ್ಷಿ ತನ್ನ ತಲೆಯನ್ನು ನೀಳವಾಗಿ ಮೇಲೆನೀಟುವುದು, ಕೆಳಕ್ಕೆಬಾಗಿಸವುದು, ತಲೆದೂಗುವುದು ಮುಂತಾದ ನೃತ್ಯವನ್ನು ಅಭಿನಯಿಸುತ್ತದೆ. ಪ್ರೇಮದ ಕಾಣಿಕೆಯಾಗಿ ಗುಟುಕನ್ನು ತಿನ್ನಿಸುತ್ತದೆ. ಜೋಡಿಹಕ್ಕಿಗಳು ಸಾಮಾನ್ಯವಾಗಿ ಮರದ ಎತ್ತರದಲ್ಲಿ ಕೊಳೆತ ಇಲ್ಲವೆ ಒಣಗಿದ ಕಾಂಡದಲ್ಲಿ ತಮ್ಮ ಬಲವಾದ ಕೊಕ್ಕಿನಿಂದ ಕುಟ್ಟಿ ಕುಟ್ಟಿ ಬಿಲ ತೋಡುತ್ತವೆ. ಆರಂಭದಲ್ಲಿ ಸಣ್ಣಗೆ ತೆರೆದುಕೊಳ್ಳುವ ಈ ಬಿಲ ನೆಲಕ್ಕೆ ಸಮಾಂತರವಾದ ಮತ್ತು ಒಳಗೆ ಆಳಕ್ಕೆ ಇಳಿಯುವಂತಿರುತ್ತದೆ. ಈ ಬಿಲದಲ್ಲಿ ಜೋಡಿಹಕ್ಕಿ ನೆಲೆಸುತ್ತವೆ. ಕೆಲವು ಸಂದರ್ಭಗಳಲ್ಲಿ ಇತರೆ ಪಕ್ಷಿಗಳ ಗೂಡುಗಳನ್ನು ಇವು ಕಬ್ಜ ಮಾಡಿಕೊಂಡು ಅಲ್ಲಿ ನೆಲೆಸುವುದೂ ಉಂಟು. ಒಂದು ಸಲಕ್ಕೆ ಎರಡರಿಂದ ಮೂರು ಗಾಜಿನಂತೆ ಹೊಳೆಯುವ ಬಿಳಿಯ ಮೊಟ್ಟೆಗಳನ್ನು ಹೆಣ್ಣುಪಕ್ಷಿ ಇಟ್ಟು ಕಾವು ಕೊಡುತ್ತದೆ. ಸುಮಾರು ಹನ್ನೊಂದು ದಿನಗಳಲ್ಲಿ ಮೊಟ್ಟೆಯೊಡೆದು ಮರಿಗಳು ಹೊರಬರುತ್ತವೆ. ಮರಿಗಳ ಪೋಷಣೆಯನ್ನು ಗಂಡು ಮತ್ತು ಹೆಣ್ಣುಪಕ್ಷಿಗಳೆರಡೂ ಮಾಡುತ್ತವೆ. ಮರಿಗಳಿಗೆ ಗುಟುಕು ತಂದುಕೊಡುವುದು, ಅವುಗಳು ವಿಸರ್ಜಿಸಿದ ಮಲವನ್ನು ಗೂಡಿನಿಂದ ತೆಗೆಯುವುದು ಮುಂತಾಗಿ ಎಲ್ಲ ಕೆಲಸಗಳನ್ನು ಹೆಣ್ಣು ಪಕ್ಷಿಯೊಂದಿಗೆ ಗಂಡೂ ನಿರ್ವಹಿಸುತ್ತದೆ. ಹೆಣ್ಣು ಮೊಟ್ಟೆಗಳಿಗೆ ಕಾವು ಕೊಡುತ್ತಿರುವಾಗ ಗಂಡು ಪಕ್ಷಿ ಅದಕ್ಕೆ ಗುಟುಕು ತಂದು ಉಣಿಸುವುದೂ ಉಂಟು. ಮೊಟ್ಟಯಿಂದ ಹೊರಬಂದ ಸುಮಾರು ೨೦ ದಿನಗಳಲ್ಲಿ ಮರಿ ಪಕ್ಷಿಗಳು ಬೆಳೆದು ಗರಿಗೆದರಿ ಗೂಡಿನಿಂದ ಗಗನಕ್ಕೆ ಹಾರುತ್ತವೆ.

 ಪರಿಸರದಲ್ಲಿ ಮರಕುಟುಕಗಳದ್ದು ಅವುಗಳದ್ದೇ ಆದ ಮಹತ್ತರ ಪಾತ್ರವಿದೆ. ಇವು ಮುಖ್ಯವಾಗಿ ಕೀಟ ಭಕ್ಷಕಗಳಾಗಿರುವುದರಿಂದ ಸಸ್ಯಗಳ ಕಾಂಡ ಕೊರೆಯುವ ಕೀಟಗಳನ್ನು ಹಾಗೂ ಗೆದ್ದಲುಗಳನ್ನುನಿಯಂತ್ರಿಸುತ್ತವೆ. ಒಣಗಿದ, ಕೊಳೆತ ಮರದ ಕಾಂಡವನ್ನು ಕೊಕ್ಕಿನಿಂದ ಕುಕ್ಕಿ, ಪುಡಿಗಟ್ಟಿ, ಅದು ಮಣ್ಣಿನಲ್ಲಿ ಬೆರೆಯುವಂತೆ ಮಾಡುತ್ತವೆ. ಇವು ಕೊರೆದ ಬಿಲಗಳ ಕಾರಣದಿಂದ ಒಣಗಿದ, ಕೊಳೆತ ಮರದ ಭಾಗವು ಬಿಸಿಲಿಗೆ, ಗಾಳಿ -ಮಳೆಗೆ, ತೇವಾಂಶಕ್ಕೆ ಹೆಚ್ಚು ತೆರೆದುಕೊಳ್ಳುವ ಕಾರಣದಿಂದ ಬೇಗ ಸಾವಯವ ಬದಲಾವಣೆಗೆ ಒಳಗಾಗಿ ಮಣ್ಣಿನಲ್ಲಿ ಬೆರೆಯಲು ಸಹಾಯಕವಾಗುತ್ತದೆ. ಇವುಗಳು ಮರದಲ್ಲಿ ಕೊರೆದು ಬಳಸಿ ಬಿಟ್ಟುಹೋದ ಬಿಲಗಳು, ಗೂಡು ಮಾಡಲಾಗದ ಗಿಳಿಗಳು, ಗೂಬೆಗಳಂತಹ ಪಕ್ಷಿಗಳು ಮತ್ತು ಅಳಿಲುಗಳಂತ ಪ್ರಾಣಿಗಳಿಗೆ ವಾಸಸ್ತಾನವಾಗಿ ಬಳಕೆಗೆ ಬರುತ್ತವೆ. ಈ ಕಾರಗಳಿಂದ ಹೊನ್ನ ಬೆನ್ನಿನ ಮರಕುಟಕ ಪಕ್ಷಿಗಳನ್ನು ಪರಿಸರವ್ಯವಸ್ಥೆಯ ಎಂಜಿನಿಯರ್‌ಗಳು ಎಂದೂ ಕರೆಯಲಾಗುತ್ತದೆ. ಈ ಲೇಖನ ಬರೆದು ಮುಗಿಸುವಷ್ಟರಲ್ಲಿ ಅದೂ ನಮ್ಮ ಮನೆಯ ಬದಿಯ ತೆಂಗಿನ ಮರದಿಂದ ಹೊನ್ನ ಬೆನ್ಣ ಮರಕುಟುಕ ಕೂಕುಕೂಕುಕುರರ್ರ್‌  ರ್ಕುರ್ರೂ.....‌ ಎಂದು ಕೂಗುತ್ತಾ ಕರೆಯುತ್ತಿದೆ. ಅದರ ಹೊರ ರಚನೆಯಿಂದ ಅಲ್ಲದೆಯೆ ಅದರ ಕೂಗು ಮತ್ತು ಅದು ತನ್ನ ದೇಹವನ್ನು ಸೀಸಾದಲ್ಲಿ ಕುಳಿತು ಆಡುವಂತೆ  ಮುಂದಕ್ಕೆ, ಹಿಂದಕ್ಕೆ ಬಾಗಿಸುತ್ತಾ ತೆಂಗಿನ ಮರವನ್ನು ಏರುವ ಪರಿ, ಇದು ಅದೇ ಪಕ್ಷಿ ಎಂದು ಸಾಬೀತು ಪಡಿಸುತ್ತದೆ. ಸಹಜವಾಗಿ ಕೊಂಚ ನಾಚಿಕೆ ಸ್ವಭಾವದ ಈ ಪಕ್ಷಿ ಕೆಲ ಸಂದರ್ಭಗಳಲ್ಲಿ ನಾಚಿಕೆ ಊರಆಚೆಗೆ ಎಂಬಂತೆ ವರ್ತಿಸುತ್ತಾ ಯಾರನ್ನೂ ಕೇರ್‌ ಮಾಡದೆ ಇರುವುದೂ ಇದೆ. IUCN ಕೆಂಪು ಪಟ್ಟಿಯಲ್ಲಿ ಇವುಗಳ ಉಳಿವಿನ ಸ್ಥಿತಿಯನ್ನು ಅಬಾಧಿತ ಎಂದು ನಮೂದಿಸಿದೆ ಯಾದರೂ ಸ್ಥಳೀಯವಾಗಿ ಭಾರತದಲ್ಲಿ ಇದರ ಅಳಿವು ಉಳಿವಿನ ಸ್ಥಿತಿಯನ್ನು ನಿರ್ಧರಿಸಲು ಪೂರಕ ಮಾಹಿತಿ ಕೊರತೆಯಿದೆ. ಪರಿಸರದಲ್ಲಿನ ಅಸಮತೋಲನ ನಿಸರ್ಗದ ಎಲ್ಲಾ ಜೀವಿಗಳ ಅಸ್ತಿತ್ವವನ್ನು ಅಲುಗಾಡಿಸುತ್ತಿರುವಾಗ ಹೊನ್ನಬೆನ್ನಿನ ಮರಕುಟಗಳ ಅಧ್ಯಯನವೂ ಅವಶ್ಯವಾಗಿ ಆಗಬೇಕಿದೆ.

ಹೊನ್ನಬೆನ್ನಿನ ಮರಕುಟುಕದ ಧ್ವನಿಯನ್ನು ಆಲಿಸಲು ಈ ಕೆಳಗಿನ ಲಿಂಕನ್ನು ಬಳಸಿ.

https://www.youtube.com/watch?v=33O4nU9slxk



No comments:

Post a Comment