ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Saturday, April 4, 2026

ಭಯವನ್ನೇ ಅರಿಯದ ಹನಿ ಬ್ಯಾಡ್ಜರ್ ಎಂಬ ಪ್ರಕೃತಿಯ ವಿಸ್ಮಯ

  ಭಯವನ್ನೇ ಅರಿಯದ ಹನಿ ಬ್ಯಾಡ್ಜರ್ ಎಂಬ ಪ್ರಕೃತಿಯ ವಿಸ್ಮಯ

✍️ ಲೇಖಕರು: ರಾಮಚಂದ್ರ ಭಟ್ ಬಿ.ಜಿ


ಉತ್ಸಾಹೋ ಬಲವಾನಾರ್ಯ ನಾಸ್ತ್ಯುತ್ಸಾಹಾತ್ ಪರಂ ಬಲಂ
ಸೋತ್ಸಾಹಸ್ಯ ಹಿ ಲೋಕೇಷು ನ ಕಿಂಚಿದಪಿ ದುರ್ಲಭಂ॥”

ಸುಗ್ರೀವನು ಕೊಟ್ಟ ಮಾತಿಗೆ ತ‌ಪ್ಪಿ, ತನ್ನ ಕರ್ತವ್ಯವನ್ನು ಮಾಡಲು ವಿಳಂಬ ಮಾಡುತ್ತಿರುವಾಗ, ಕಿಷ್ಕಿಂಧಾ ಕಾಂಡದಲ್ಲಿ, ಅವನಿಗೆ ಉತ್ತೇಜನ ನೀಡುವ ಸಲುವಾಗಿ ಲಕ್ಷ್ಮಣನು ಉತ್ಸಾಹದ ಮಹತ್ವವನ್ನು ವಿವರಿಸುತ್ತಾನೆ. ಈ ಜೀವಿಯ ಬಗ್ಗೆ ಅಧ್ಯಯನ ಮಾಡುತ್ತ ಹೋದಾಗ ನನಗೆ ರಾಮಾಯಣದ ಈ ಉಕ್ತಿಯ ನೆನಪಾಯಿತು. ಬಹುಶಃ ತನ್ನ ಬಲಾಬಲಗಳನ್ನು ಅರಿತು ಅತ್ಯುತ್ಸಾಹದಿಂದ ಮುನ್ನುಗ್ಗುವವರಿಗೆ ಈ ಪ್ರಾಣಿ ಆದರ್ಶ ಎನಿಸೀತು!! ಉತ್ಸಾಹ, ಧೈರ್ಯ, ಸಾಹಸಗಳು ಈ ಪ್ರಾಣಿಯ ರೂಪದಲ್ಲಿ ಧರೆಗಿಳಿದಂತೆ ಅನಿಸದಿರದು.

ಕಾಳಿಂಗ ಸರ್ಪದಂತಹ ಘಟಸರ್ಪದ ಕಡಿತಕ್ಕೆ ಭಯಪಡದಿರುವವರು ಯಾರು ? ಆದರೆ 10-12 kg ತೂಕದ ಈ ಪುಟ್ಟ ಪ್ರಾಣಿ ಕಾಳಿಂಗನಿಗೆ ಹೆದರುವುದು ಬಿಡಿ ಅದರೊಂದಿಗೆ ಅತ್ಯುತ್ಸಾಹದೊಂದಿಗೆ ನೇರವಾಗಿ ಸಂಘರ್ಷಕ್ಕೆ ಇಳಿಯುವುದಷ್ಟೇ ಅಲ್ಲದೇ ಅದನ್ನೇ ಸಾಯಿಸಿ ತಿನ್ನಬಲ್ಲುದು!!! ಹಾವಿನ ಕಡಿತದಿಂದ ವಿಷವೇರಿದರೂ ನಿದ್ದೆ ಮಾಡಿ ಎದ್ದು ಏನೂ ನಡೆದೇ ಇಲ್ಲವೆಂಬಂತೆ ಇರುತ್ತದೆ!!! ಸಿಂಹದಂತಹ ಕಾಡಿನ ರಾಜನೂ ಇದರ ತಂಟೆಗೆ ಬಾರದು!!!. ಅಲ್ಲದೇ ಪ್ರಕೃತಿಯ ಅರಣ್ಯ ಲೋಕದಲ್ಲಿ ಗಾತ್ರವೇ ಶಕ್ತಿ ಎಂಬ ಭ್ರಮೆಯನ್ನು ಒಡೆದು ಹಾಕುವ ಅದ್ಭುತ ಜೀವಿಯೇ ಹನಿ ಬ್ಯಾಡ್ಜರ್ (Mellivora capensis). ಸ್ಥಳೀಯವಾಗಿ ಇದನ್ನು ‘ರಾಟೆಲ್’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದು ಆಫ್ರಿಕಾ ಖಂಡದ ವಿಶಾಲ ಸವನ್ನಾ ಹುಲ್ಲುಗಾವಲುಗಳಿಂದ ಹಿಡಿದು ಭಾರತದ ಅರಣ್ಯ ಪ್ರದೇಶಗಳವರೆಗೆ - ವಿಶಾಲ ವ್ಯಾಪ್ತಿಯ ವಿವಿಧ ಆವಾಸ ಸ್ಥಾನಗಳಲ್ಲಿ ಕಂಡುಬರುತ್ತದೆ. ಈ ಪ್ರಾಣಿ, ತನ್ನ ಧೈರ್ಯ, ದಿಟ್ಟತನ ಮತ್ತು ವಿಶಿಷ್ಟ ಜೀವನ ಶೈಲಿಯಿಂದ ವಿಜ್ಞಾನಿಗಳ ಸಂಶೋಧನೆಗೂ ಸರಕಾಗಿ ಎಲ್ಲರ ಗಮನ ಸೆಳೆದಿದೆ.



ವೈಜ್ಞಾನಿಕ ವರ್ಗೀಕರಣದ ದೃಷ್ಟಿಯಿಂದ ಗಮನಿಸಿದರೆ, ಇದು ‘ಮುಸ್ಟೆಲಿಡೇ’ (Mustelidae) ಕುಟುಂಬಕ್ಕೆ ಸೇರಿದ್ದು,  ತನ್ನ ವಿಶಿಷ್ಟ ಲಕ್ಷಣಗಳಿಂದಾಗಿ ‘ಮೆಲ್ಲಿವೋರಿನೇ’ (Mellivorinae – ಲ್ಯಾಟಿನ್‌ ಭಾಷೆಯಲ್ಲಿ ಜೇನುಭಕ್ಷಕ) ಎಂಬ ಉಪಕುಟುಂಬದಲ್ಲಿ ಏಕೈಕ ಜೀವಂತ ಪ್ರತಿನಿಧಿ ಎಂದು ಗುರುತಿಸಲ್ಪಟ್ಟಿದೆ. ಸುಮಾರು 8 ರಿಂದ 14 ಕೆ.ಜಿ ತೂಕವುಳ್ಳ ಹನಿ ಬ್ಯಾಡ್ಜರ್‌ 60–70 ಸೆಂ.ಮೀ ನಷ್ಟು ಉದ್ದವಿದೆ. ಕಪ್ಪು ದೇಹದ ಮೇಲೆ ಬೆಳ್ಳಿಯಂತೆ ಮಿರಮಿರ ಮಿಂಚುವ ತುಪ್ಪಳದ ಹೊದಿಕೆ (Mantle) ಇದರ ಮುಖ್ಯ ಗುರುತು. ಹನಿ ಬ್ಯಾಡ್ಜರ್‌ನ ದೇಹವನ್ನು ನೋಡಿದಾಗ ಅದು ಒಂದು ಜೀವಂತ ಯುದ್ಧ ಯಂತ್ರದಂತೆಯೇ ಕಾಣಿಸುತ್ತದೆ!! ಇದರ ಚರ್ಮ ಸುಮಾರು 6 ಮಿ.ಮೀ ದಪ್ಪವಿದ್ದು, ಇದು ನಮ್ಮ ಚರ್ಮಕ್ಕೆ ಹೋಲಿಸಿದರೆ ಸುಮಾರು 3-10ಪಟ್ಟು ಹೆಚ್ಚು ದಪ್ಪಚರ್ಮವನ್ನು ಹೊಂದಿದೆ. ಇದು ಅತ್ಯಂತ ಸಡಿಲ ಹಾಗೂ ಸ್ಥಿತಿಸ್ಥಾಪಕತೆಯನ್ನು ಹೊಂದಿರುವುದರಿಂದ ಶತ್ರು ಪ್ರಾಣಿ ಹಿಡಿದರೂ, ತನ್ನ ದೇಹವನ್ನು ತಿರುಗಿಸಿ ಎದುರಾಳಿಗೆ ತೀವ್ರ ಪ್ರತಿರೋಧ ನೀಡಲು ಸಾಧ್ಯವಾಗುತ್ತದೆ. ಮುಂಗಾಲುಗಳಲ್ಲಿ ಇರುವ ಉದ್ದವಾದ ಮತ್ತು ಗಟ್ಟಿಯಾದ ಬಲಿಷ್ಟ ಉಗುರುಗಳು ನೆಲವನ್ನು ಅಗೆಯಲು ಹಾಗೂ ಜೇನುಗೂಡುಗಳನ್ನು ಒಡೆಯಲು ಸಹಕಾರಿಯಾಗಿವೆ. 

    ಇದರ ಮುಖ್ಯ ರಕ್ಷಣಾ ತಂತ್ರ ಎಂದರೆ ಅದರ ದುರ್ವಾಸನಾ ಗ್ರಂಥಿಗಳು!!! ಶತ್ರುಗಳಿಂದ ತಪ್ಪಿಸಿಕೊಳ್ಳಲು ತೀಕ್ಷ್ಣ ದುರ್ವಾಸನೆಯನ್ನು ಹೊರಹಾಕುವ ಸಾಮರ್ಥ್ಯ ಹೊಂದಿದೆ!!. ಇದ ಗುದಗ್ರಂಥಿಗಳು ಸ್ರವಿಸುವ (anal gland secretion) ಹಳದಿಬಣ್ಣದ ದ್ರವದಲ್ಲಿ ಘಾತಕ ಎನಿಸುವ ಆವಿಶೀಲ ರಾಸಾಯನಿಕಗಳಿವೆ. ಮುಖ್ಯವಾಗಿ ಚಿಕ್ಕ ಸರಪಣಿಯ ಕಾರ್ಬಾಕ್ಸಿಲಿಕ್‌ ಆಮ್ಲಗಳಾದ ಅಸಿಟಿಕ್‌ ಆಮ್ಲ, ಬ್ಯುಟನೋಯಿಕ್‌ ಆಮ್ಲ ಮತ್ತು ಪೆಂಟನೋಯಿಕ್‌ ಆಮ್ಲಗಳು, ಕೆಲವು ಫೀನಾಲ್‌ಗಳು , ಆಲ್ಡಿಹೈಡ್‌ಗಳು, ಎಸ್ಟರ್‌ಗಳು ಮತ್ತು ಕೆಲವು ಆಲ್ಕೋಹಾಲ್‌ಗಳನ್ನೂ ಒಳಗೊಂಡಿದ್ದು ತೀಕ್ಷ್ಣ ಕಮಟು ಹಾಗೂ ಕೊಳೆತ ದುರ್ವಾಸನೆಯನ್ನು ಉಂಟು ಮಾಡುತ್ತವೆ. ಗುದಸ್ರಾವವು ಸುಮಾರು 40 ಮೀಟರ್ ದೂರದವರೆಗೂ ವಿಸರಣೆಗೊಂಡು ಅಲ್ಲಿ ದುರ್ವಾಸನೆಯನ್ನು ಹರಡುತ್ತದೆ.!!! ಅಸಹನೀಯ ವಾಸನೆಯು ಶತ್ರಗಳಿಗೆ ಎಚ್ಚರಿಕೆ ನೀಡುತ್ತದೆ. ಇದು ಜೇನುಗೂಡಿನಿಂದ ಹುಳುಗಳನ್ನು ಓಡಿಸಲು, ಬೆದರಿಕೆ ಅಥವಾ ಹೋರಾಟದ ಸಮಯದಲ್ಲಿ (predators ಜೊತೆಗೆ ಎದುರಾದಾಗ – ಸಿಂಹ , ಚಿರತೆ, ಹೈನಾ ಇತ್ಯಾದಿ) ಇದು ರಕ್ಷಣಾ ಕಾರ್ಯವನ್ನೂ ಮಾಡುತ್ತದೆ!!!. ಕೆಲವು ಅಧ್ಯಯನಗಳ ಪ್ರಕಾರ ಬ್ಯಾಡ್ಜರ್‌ ಜೇನುಗುಡಗಳ ಮೇಲೆ ದಾಳಿ ಮಾಡುವಾಗ ಜೇನುಗಳನ್ನು ತಾತ್ಕಾಲಿಕವಾಗಿ ಸುಸ್ತುಗೊಳಿಸಲು ಅಥವಾ ಓಡಿಸಲು ತನ್ನ‌ ಈ ರಾಸಾಯನಿಕ ಅಸ್ತ್ರವನ್ನು  ಬಳಸುತ್ತದೆ. ಕೆಲವೊಮ್ಮೆ ಇದು ತನ್ನ ಗಡಿಯನ್ನು ಗುರುತಿಸಲು (ಟೆರಿಟರಿ ಮಾರ್ಕ್ಸಹ ಬಳಸುತ್ತದೆ. ಶತ್ರುವಿನೊಂದಿಗೆ ಹೋರಾಡುವಾಗ ತನ್ನ ಗುದದ ಚೀಲ (anal pouch) ವನ್ನು ಶತ್ರುವಿನತ್ತ ತಿರುಗಿಸಿ ಸ್ರಾವವನ್ನು ಬಿಡುಗಡೆ ಮಾಡುವ ಮೂಲಕ ಅಸಹನೀಯ ವಾತಾವರಣವನ್ನು ಸೃಜಿಸಿ ಅವುಗಳನ್ನು ಓಡಿಸುತ್ತದೆ. 

ಹನಿ ಬ್ಯಾಡ್ಜರ್‌ನ ಗುದಗ್ರಂಥಿ ಚೀಲದಲ್ಲಿ ವಾಸಿಸುವ ಬ್ಯಾಕ್ಟೀರಿಯಾ ಸಮುದಾಯಗಳು (microbiome) ಹುದುಗುವಿಕೆಯ (fermentation) ಮೂಲಕ ತೀವ್ರ ದುರ್ವಾಸನೆಯ ರಾಸಾಯನಿಕಗಳನ್ನು ಉತ್ಪತ್ತಿ ಮಾಡುತ್ತವೆ. ಹೀಗೆ ಬ್ಯಾಕ್ಟೀರಿಯಾಗಳ ಚಯಾಪಚಯದಿಂದ ಉತ್ಪತ್ತಿಯಾಗುವ ಈ ವಿಶಿಷ್ಟ ದ್ರವ ಆವಿಗೊಂಡು ಉಂಟಾದ ಅಸಹನೀಯ ದುರ್ವಾಸನೆಯು ಶತ್ರುವನ್ನು ಉಸಿರುಗಟ್ಟಿಸಿ ಓಡಿಸುತ್ತದೆ!!! ಹನಿ ಬ್ಯಾಡ್ಜರ್‌ನ ಈ "ಕೆಮಿಕಲ್ ವೆಪನ್" ಅಥವಾ "ದುರ್ವಾಸನೆಯ ಬಾಂಬ್"  ಅದರ ಭಂಡ ಧೈರ್ಯಕ್ಕೆ ಇನ್ನೊಂದು ಕಾರಣ ಎಂದರೂ ತಪ್ಪಿಲ್ಲ. ದುರ್ವಾಸನೆಯ ಜೊತೆಗೆ ಅದು ಗುರುಗುಟ್ಟುವುದು, ಕೂದಲು ನಿಮಿರಿಸಿ ಎತ್ತರಕ್ಕೆ ನಿಲ್ಲುವುದು ಮತ್ತು ಧಾಳಿ ಮಾಡುವುದು – ಇವೆಲ್ಲಾ ಒಟ್ಟಿಗೆ ಸೇರಿಸಿ ಶತ್ರುವಿಗೆ ಬೆದರಿಕೆಯನ್ನು ಹೆಚ್ಚಿಸುತ್ತವೆ. ಆನೆಯಂತಹ ದೈತ್ಯ ಪ್ರಾಣಿಗೂ ದಾರಿ ಬಿಡದೆ ಗುರಾಯಿಸಿ ನಿಲ್ಲಬಲ್ಲುದು!!!


 ಈ ಸಂಯುಕ್ತಗಳ ಮಾಸ್‌ ಸ್ಪೆಕ್ಟ್ರೋಸ್ಕೋಪಿ , ಅನಿಲ ವಿಶ್ಲೇಷಕ ಪತ್ತೆ ಪರೀಕ್ಷೆಗಳ ಕುರಿತಂತೆ ಪೂರ್ಣ ಪ್ರಮಾಣದ ನಿಖರವಾದ ರಾಸಾಯನಿಕ ವಿಶ್ಲೇಷಣೆ (detailed chemical composition) ಸಂಶೋಧನೆಗಳು ಇನ್ನೂ ನಡೆದಿಲ್ಲದ ಕಾರಣ ಪೂರ್ಣ ಪ್ರಮಾಣದ ರಾಸಾಯನಿಕ ಸಂಯೋಜನೆ ತಿಳಿದಿಲ್ಲ. ಭವಿಷ್ಯದ ಸಂಶೋಧನೆಗಳು ವಿವಿಧ ರಾಸಾಯನಿಕ ಅಸ್ತ್ರಗಳ  ಬೆಳವಣಿಗೆಗೆ ಕಾರಣವಾದರೂ ಅಚ್ಚರಿ ಇಲ್ಲ.    

ಅಚ್ಚರಿ ಎನಿಸುವಷ್ಟು ಇದು ವಿಷ ನಿರೋಧಕ ಶಕ್ತಿ ಮತ್ತು ಆಹಾರ ಪದ್ಧತಿಯಿಂದಾಗಿ, ಹನಿ ಬ್ಯಾಡ್ಜರ್ ಬಗ್ಗೆ ವಿಜ್ಞಾನ ಲೋಕದಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ. ಸಂಶೋಧನೆಗಳು ಮುಂದಿನ ದಿನಗಳಲ್ಲಿ ಹೊಸ ಔಷಧಿ ಮತ್ತು ಲಸಿಕೆಗಳ  ಅಭಿವೃದ್ದಿಗೆ ಕಾರಣವಾಗಬಹುದು. ಕಾಳಿಂಗ ಸರ್ಪ ಅಥವಾ ವೈಪರ್ ಹಾವು ಕಚ್ಚಿದರೂ, ಸ್ವಲ್ಪ ಸಮಯ ಪ್ರಜ್ಞೆ ಕಳೆದುಕೊಂಡ ನಂತರ ಮತ್ತೆ ಚೇತರಿಸಿಕೊಂಡು ತನ್ನ ದಾರಿಯಲ್ಲಿ ಮುಂದುವರಿಯುತ್ತದೆ. ಇಂತಹ ವಿಷನಿರೋಧಕ ಶಕ್ತಿ ನಮಗೂ ದೊರೆತರೆ ಎಷ್ಟು ಅನುಕೂಲಕಾರಿ ಅಲ್ಲವೇ? 

 ಹನಿ ಬ್ಯಾಡ್ಜರ್ ಹಾವಿನ ಕಾರ್ಕೋಟಕ ವಿಷದಿಂದ ಹೇಗೆ ಉಳಿಯುತ್ತದೆ? ಎಂಬ ಪ್ರಶ್ನೆ ಏಳುವುದು ಸಹಜ. ಹಾವುಗಳ ವಿಷ (ವಿಶೇಷವಾಗಿ ಕಾಳಿಂಗ ಸರ್ಪದ ವಿಷ) ನರಗಳನ್ನು ನಿಶ್ಚೇಷ್ಟಿತಗೊಳಿಸುವ α-ನ್ಯೂರೋಟಾಕ್ಸಿನ್ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ಸಾಮಾನ್ಯವಾಗಿ ಇದು ಸ್ನಾಯುಗಳಲ್ಲಿರುವ ನಿಕೋಟಿನಿಕ್ ಅಸಿಟೈಲ್‌ಕೋಲಿನ್ ರಿಸೆಪ್ಟರ್ ಅಥವಾ ಗ್ರಾಹಕದೊಂದಿಗೆ(nAChR) ಬಂಧಿಸಿ ಉಸಿರುಟ್ಟಿಸುತ್ತದೆ. ಆದರೆ ಹನಿ ಬ್ಯಾಡ್ಜರ್‌ನ ರಿಸೆಪ್ಟರ್‌ ಕೋಶಗಳಲ್ಲಿ ಒಂದು ಸಣ್ಣ ಆನುವಂಶೀಯ  ಬದಲಾವಣೆ ಇದ್ದು , ವಿಕಾಸದ ಹಾದಿಯಲ್ಲಿ , ಸಾಮಾನ್ಯ ಪ್ರಾಣಿಗಳಲ್ಲಿರುವ ಟ್ರಿಪ್ಟೋಫ್ಯಾನ್‌ ಅಮೈನೋ ಆಮ್ಲದ ಬದಲು , ಹನಿ ಬ್ಯಾಡ್ಜರ್‌ನಲ್ಲಿ ಅದು ಆರ್ಜಿನಿನ್‌ ಆಗಿ ಬದಲಾಗಿದೆ. ಈ ಬದಲಾವಣೆಯಿಂದ ರಿಸೆಪ್ಟರ್‌ ಧನ ವಿದ್ಯದಾವೇಶಗೊಳ್ಳುತ್ತದೆ. ಹಾವಿನ ವಿಷದ ರಾಸಾಯನಿಕ ಅಣುವೂ ಧನ ವಿದ್ಯದಾವೇಶವುಳ್ಳದ್ದಾಗಿರುವುದರಿಂದ ಇವು ಪರಸ್ಪರ ವಿಕರ್ಷಿಸುತ್ತವೆ. ಇದರಿಂದ ವಿಷವು ರಿಸೆಪ್ಟರ್‌ನೊಂದಿಗೆ ಬಂಧವನ್ನು ಉಂಟು ಮಾಡದು. ಇದು ಸಾವಿನಿಂದ ಪಾರಾಗುವ ನಿಸರ್ಗದ ಗುಟ್ಟು. ಇಂತಹ ಅನೇಕ ರಹಸ್ಯಗಳು ನಿಸರ್ಗದ ಒಡಲಿನಲ್ಲಿ ಅಡಗಿವೆ. ಕುತೂಹಲದಿಂದ ಹೊರಟ ಮಾನವ ಇವುಗಳ ಹಿಂದ ಬಿದ್ದು ಸಂಶೋಧನೆಯ ಮೂಲಕ ಕಂಡುಕೊಳ್ಳುತ್ತಾ ಮಾನವನ ಒಳಿತಿಗೆ ಬಳಸತೊಡಗುತ್ತಾನೆ . 

Indian honey badger drinks from a natural stream

ಇದರ ಜೊತೆಗೆ ದಪ್ಪ ಮತ್ತು ಸಡಿಲ ಚರ್ಮವು ಹಾವಿನ ಹಲ್ಲುಗಳು ಆಳವಾಗಿ ತೂರದಂತೆ ತಡೆಯುತ್ತದೆ. ಆದ್ದರಿಂದ ವಿಷವು ರಕ್ತಕ್ಕೆ ಸುಲಭವಾಗಿ ಸೇರುವುದಿಲ್ಲ. ಈ ವಿಶೇಷತೆಯಿಂದ ಹನಿ ಬ್ಯಾಡ್ಜರ್ ಹಾವುಗಳನ್ನು ತಿನ್ನುತ್ತದೆ ಮತ್ತು ವಿಷದ ಕಡಿತಕ್ಕೆ ಪ್ರತಿರೋಧಕತೆಯನ್ನು ಹೊಂದಿದೆ. ಈ ಹೊಂದಾಣಿಕೆಯು ಪ್ರಕೃತಿಯ ಜೀವವಿಕಾಸಕ್ಕೊಂದು ಜೀವಂತ ಉದಾಹರಣೆ!

“Survival is not for the strongest, but for the most adaptable.” ಎಂದಿದ್ದಾನೆ ವಿಕಾಸವಾದದ ಪಿತಾಮಹ ಎನಿಸಿದ ಡಾರ್ವಿನ್‌

ಹನಿ ಬ್ಯಾಡ್ಜರ್ ಆಹಾರದಲ್ಲಿ ಬಹಳ ವೈವಿಧ್ಯತೆಯನ್ನು ತೋರಿಸುತ್ತದೆ. ಜೇನುತುಪ್ಪ, ಕೀಟಗಳು ಮತ್ತು ಚೇಳುಗಳು, ಹಲ್ಲಿಗಳಂತಹ ಸಣ್ಣ ಪ್ರಾಣಿಗಳುಗೆಡ್ಡೆ-ಗೆಣಸುಗಳು ಅದರ ಆಹಾರ. ಜೇನುತುಪ್ಪವನ್ನು ಹುಡುಕುವಾಗ ‘ಹನಿ ಗೈಡ್’ ಹಕ್ಕಿಯೊಂದಿಗೆ ಅದರ ಸ್ನೇಹ ಬಾಂಧವ್ಯಗಳು, ಪರಸ್ಪರ ಸಹಕಾರಗಳು ಪ್ರಕೃತಿಯಲ್ಲಿನ ಸೂಕ್ಷ್ಮ ಪರಸ್ಪರಾವಲಂಬನೆಗೊಂದು ಅದ್ಭುತ ಉದಾಹರಣೆಯಾಗಿದೆ. 

ಹನಿ ಬ್ಯಾಡ್ಜರ್ ಕೇವಲ ಬಲಿಷ್ಠವಲ್ಲ; ಅದು ಅತ್ಯಂತ ಬುದ್ಧಿವಂತ ಪ್ರಾಣಿಯೂ ಹೌದು. ಸಮಸ್ಯೆ ಪರಿಹಾರದಲ್ಲಿಯೂ ಎತ್ತಿದ ಕೈ. ಅದ್ಭುತ ಆಲೋಚನಾ ಸಾಮರ್ಥ್ಯವಿದೆ. ಇದನ್ನು ಬಂಧಿಸಿ ಇಟ್ಟರೆ, ಕಲ್ಲುಗಳನ್ನು ಉಪಯೋಗಿಸಿ ಕಲ್ಲೇಣಿ  ರಚಿಸಿ ಚಾತುರ್ಯದಿಂದ ತಪ್ಪಿಸಿಕೊಂಡ ಉದಾಹರಣೆಗಳು  ಅನೇಕ.

ಭೀತಿಯನ್ನೇ ಅರಿಯದ  ಹನಿ ಬ್ಯಾಡ್ಜರ್ ಸಾಮಾನ್ಯವಾಗಿ ಏಕಾಂಗಿ ಜೀವನ ನಡೆಸುತ್ತದೆ. ಇದರ ಸಂತಾನೋತ್ಪತ್ತಿ ವಿಧಾನವು ವಿಶಿಷ್ಟವಾಗಿದೆ.ವಿಳಂಬಿತ ಗರ್ಭಧಾರಣೆ, ಅಷ್ಟೇ ಅಲ್ಲದೇ ಸೂಕ್ತ ಪರಿಸರ ಸಿಕ್ಕಾಗ ಮಾತ್ರ ಭ್ರೂಣ ಬೆಳವಣಿಗೆ ಆರಂಭವಾಗುತ್ತದೆ. ತಾಯಿ ತನ್ನ ಮರಿಯನ್ನು 12–18 ತಿಂಗಳುಗಳವರೆಗೆ ಸಾಕಿ, ಬೇಟೆಯ ಕೌಶಲ್ಯ ಕಲಿಸುತ್ತದೆ


ಇಂತಹ ಧೀರನಿಗೂ ಸವಾಲುಗಳು ನೂರಾರು. ಮಾನವನೇ ಇದಕ್ಕೆದೊಡ್ಡ ಶತ್ರು ಎನ್ನಬಹುದು. ಜೇನು ಕೃಷಿಕರ ಜೊತೆಗಿನ ಸಂಘರ್ಷ ಸರ್ವೇ ಸಾಮಾನ್ಯ, ಚರ್ಮಕ್ಕಾಗಿ ಇದನ್ನು ಬೇಟೆಯಾಡುತ್ತಾರೆ. ಇವುಗಳ ಸಂಖ್ಯೆ ಇಳಿಯದಿದ್ದರೂ, ಭವಿಷ್ಯದ ದೃಷ್ಟಿಯಿಂದ ಸಂರಕ್ಷಣೆ ಅಗತ್ಯವಾಗಿದೆ.

ಹನಿ ಬ್ಯಾಡ್ಜರ್ ಕೇವಲ ಒಂದು ಪ್ರಾಣಿಯಲ್ಲ; ಅದು  ತನ್ನ ವಂಶದ ಅನೇಕ ಪ್ರಬೇಧಗಳು ಅಳಿದರೂ ತಾನು ಪ್ರಕೃತಿಯೊಂದಿಗಿನ  ಸವಾಲು ಗೆದ್ದು  ಬದುಕುಳಿದುದರ ಧನಾತ್ಮಕ ಸಂಕೇತ ಎನಿಸಿದೆ. ಅದರ ಧೈರ್ಯ, ಜಾಣ್ಮೆ ಮತ್ತು ಹೊಂದಿಕೊಳ್ಳುವ ಶಕ್ತಿ , ಪ್ರಕೃತಿಯ ಅದ್ಭುತ ಸೃಷ್ಟಿಯ ಹೊಸ ಸಾಧ್ಯತೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಭಾರತದ ಅರಣ್ಯಗಳಲ್ಲಿ ಕಂಡುಬರುವ ಈ ‘ಇಂಡಿಯನ್ ರಾಟೆಲ್’ ಅನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. 

5 comments: