ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, January 2, 2021

ಹೀಗೊಂದು ಯುದ್ಧ !

ಹೀಗೊಂದು ಯುದ್ಧ !

ಲೇಖನ: ಡಾ.ಟಿ.ಎ.ಬಾಲಕೃಷ್ಣ ಅಡಿಗ

       ನಿವೃತ್ತ ಪ್ರಾಂಶುಪಾಲರು ಮತ್ತು ಜೀವಶಾಸ್ತ್ರ ಉಪನ್ಯಾಸಕರು

ಶತ್ರು ಪಡೆ ಆಗಮಿಸುತ್ತಿದೆ. ಮುಂದೆ ಇರುವ ಅದರ ಕಾವಲು ಪಡೆ ಒಂದೊಂದೇ ಹೆಜ್ಜೆ ಮುಂದಿಡುತ್ತಿದೆ. ವಿಶ್ವಾಸ ದ್ರೋಹ ಮತ್ತು ಮೋಸವೇ ಶತ್ರು ಪಡೆಯ ಮುಖ್ಯ ಗುರಿ. ಎದುರು ಕಡೆಯಿಂದ ಯಾವುದೇ ವಿರೋಧ ಕಾಣಿಸುತ್ತಿಲ್ಲ. ಇದರ ಪ್ರಯೋಜನ ಪಡೆದು ಗಡಿಯಲ್ಲಿ ಮುನ್ನುಗ್ಗುವ ಪ್ರಯತ್ನ ಶತ್ರು ಪಡೆಯಿಂದ ಪ್ರಾರಂಭವಾಗಿದೆ. ಅದು ದಾಳಿ ಮಾಡಬೇಕೆಂದಿರುವ ನೆಲದಲ್ಲಿ ಬಲವಾಗಿ ಬೇರೂರಿ, ಅಲ್ಲಿಂದ ವಿವಿಧ ತಾಣಗಳಿಗೆ ಹರಡಿ ಹೋಗುವ ಉದ್ದೇಶ ಕಂಡು ಬರುತ್ತಿದೆ.


ಆದರೆ, ಈ ದಾಳಿಯನ್ನು ಎದುರಿಸಬೇಕಾದ ನೆಲದ ರಕ್ಷಣಾ ವ್ಯವಸ್ಥೆಯಲ್ಲಿ ಯಾವುದೇ ಲೋಪ ಕಂಡುಬರುತ್ತಿಲ್ಲ. ರಕ್ಷಣಾ ಪಡೆಗಳು ಗಡಿ ದಾಟಿರುವ ಶತ್ರು ಪಡೆಯನ್ನು ಗುರುತಿಸಿವೆ. ಮುಂದೆ ಸಾಗಿ ಬಂದಿರುವ ಕೆಲವು ಶತ್ರು ಸೈನಿಕರ ಗುರುತನ್ನು ಪತ್ತೆ ಮಾಡಲಾಗಿದೆ. ನುಗ್ಗಿ ಬಂದಿರುವವರು ಮುಗ್ಧ ಅಲೆಮಾರಿಗಳೂ ಅಲ್ಲ, ಸ್ನೇಹಿತರೂ ಅಲ್ಲ ಎಂಬುದು ಖಚಿತವಾಗಿದೆ.

ಬಂದಿರುವ ಶತ್ರು ಸೈನಿಕರ ಉದ್ದೇಶವನ್ನು ಅರ್ಥಮಾಡಿಕೊಂಡಿರುವ ಗಡಿ ರಕ್ಷಣಾ ಪಡೆಗಳಿಂದ ತಮ್ಮ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನೆಯಾಗಿದೆ. ಅಲ್ಲಿಂದ ಆದೇಶಕ್ಕೆ ಕಾಯಲಾಗುತ್ತಿದೆ. ನಿಯಂತ್ರಣ ಕೇಂದ್ರದಲ್ಲಿ ಆಗಲೇ ಹೆಚ್ಚಿನ ಸೈನಿಕರನ್ನು ಸೇರಿಸುವ ಕಾರ್ಯ ಪ್ರಾರಂಭವಾಗಿದೆ. ಜೊತೆಗೆ, ಗಡಿಯ ವಿವಿಧೆಡೆ ಸೂಕ್ಷ್ಮ ಪ್ರದೇಶಗಳಲ್ಲಿರುವ ರಕ್ಷಣಾ ಪಡೆಗೆ ಯುದ್ಧ ಸನ್ನದ್ಧರಾಗಿರಲು ಸೂಚನೆ ನೀಡಲಾಗಿದೆ.

ರಕ್ಷಣಾ ಪಡೆ ರಣೋತ್ಸಾಹದಿಂದ ಹೋರಾಟಕ್ಕೆ ಸಿದ್ಧವಾಗುತ್ತಿದೆ. ಪಡೆಯ ಒಂದು ಪ್ರಮುಖ ಅಂಗವಾದ ಆತ್ಮಹತ್ಯಾ ಬ್ರಿಗೇಡ್‌ನ ಸಿಪಾಯಿಗಳು ಶಸ್ತ್ರಗಳೊಂದಿಗೆ ಟ್ಯಾಂಕ್‌ಗಳನ್ನೇರಿ ಸಜ್ಜಾಗಿದ್ದಾರೆ. ಮಿಸೈಲುಗಳು ಸಿದ್ಧವಾಗಿವೆ. ಶತ್ರು ಪಡೆಯ ಮೇಲೆ ದಾಳಿ ಮಾಡುವ ಆದೇಶಕ್ಕಾಗಿ ಪಡೆ ಹದ್ದಿನಂತೆ ಕಾಯುತ್ತಿದೆ. ಆದೇಶ ಬಂದಕೂಡಲೇ, ಶತ್ರು ಪಡೆಯನ್ನು ಸಮೀಪಿಸಿ ದಾಳಿ ಮಾಡಲಾಗಿದೆ. ಯುದ್ಧ ಪ್ರಾರಂಭವಾಗಿದೆ.

ರಣಾಂಗಣದಲ್ಲಿ ಎಲ್ಲೆಲ್ಲೂ ಶತ್ರು ಸೈನಿಕರ ಶವಗಳು ಕಾಣ ಸುತ್ತಿವೆ. ದೇಶಕ್ಕಾಗಿ ಹೋರಾಡಿ ಮಡಿದ ರಕ್ಷಣಾ ಪಡೆಯ ಕೆಲವು ನಿಷ್ಟಾವಂತ ಸೈನಿಕರ  ಶವಗಳೂ ಅಲ್ಲಲ್ಲಿ ಉರುಳಿವೆ. ಯುದ್ಧದಲ್ಲಿ ತಮ್ಮ ಸರದಿಗಾಗಿ ಕಾಯುತ್ತಿರುವ ರಕ್ಷಣಾ ಪಡೆಯ ಸೈನಿಕರು ಈ ಎಲ್ಲ ಶವಗಳ ವಿಲೇವಾರಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಶತ್ರು ಪಡೆಯನ್ನು ಬಹುತೇಕ ನಾಶ ಪಡಿಸಲಾಗಿದೆ. ಯುದ್ಧದಲ್ಲಿ ವಿಜಯವೇನೋ ದೊರೆತಿದೆ. ಆದರೆ, ಉಂಟಾಗಿರುವ ಹಾನಿಯನ್ನು ಸರಿಪಡಿಸಬೇಕಾಗಿದೆ. ಹಾನಿಗೊಂಡ ಶಸ್ತ್ರಾಸ್ತ್ರಗಳ ದುರಸ್ತಿ, ಗಾಯಾಳುಗಳ ಚಿಕಿತ್ಸೆ ಮುಂತಾದ ಪರ್ಯಾಯ ವ್ಯವಸ್ಥೆ ಪ್ರಾರಂಭವಾಗಬೇಕಿದೆ.

*                   *                   *

ಇದುವರೆಗೂ ನೀವು ಓದಿದ್ದು ಯುದ್ಧ ಭೂಮಿಯೊಂದರ ಒಂದು ಸನ್ನಿವೇಶದ ಕಲ್ಪನೆ. ಹೀಗೊಂದು ಯುದ್ಧ ನಮ್ಮ ದೇಹದಲ್ಲಿ ಪ್ರತಿ ಕ್ಷಣವೂ ನಡೆಯುತ್ತಿರುತ್ತದೆ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೆ?  ನಿಜ ಸಂಗತಿಯೆಂದರೆ, ದೇಹದಲ್ಲಿ ಸದಾ ನಡೆಯುತ್ತಿರುವ ಈ ಯುದ್ಧ ನಮ್ಮ ಗಮನಕ್ಕೇ ಬರುವುದಿಲ್ಲ. ಕಾರಣವೇನೆಂದರೆ, ನಮ್ಮ ದೇಹದ ಒಳಗಿನ ಯುದ್ಧ ಭೂಮಿಗಳಲ್ಲಿ ಶತ್ರು ಪಡೆ ಮತ್ತು ರಕ್ಷಣಾ ಪಡೆ, ಎಲ್ಲವೂ ನಮ್ಮ ಬರಿಗಣ್ಣಿಗೆ ಗೋಚರಿಸದಷ್ಟು ಸೂಕ್ಷ್ಮ ಗಾತ್ರದವಾಗಿರುತ್ತವೆ.

ಹಾಗೆ ನೋಡಿದರೆ, ನಾವು ಮಾನವರು ಅತಿ ಹೆಚ್ಚು ವಿಕಾಸ ಹೊಂದಿರುವ ಪ್ರಾಣಿಗಳು. ನಮ್ಮ ಬುದ್ಧಿಮತ್ತೆಯಿಂದ ನಾವು ವಾಸಿಸುತ್ತಿರುವ ದೇಶದ ರಕ್ಷಣೆಗೆ ಬೇಕಾಗುವ ಸಾಕಷ್ಟು ಶಸ್ತ್ರಗಳನ್ನು ಅಭಿವೃದ್ಧಿ ಪಡಿಸಿಕೊಂಡಿದ್ದೇವೆ. ಆದರೆ, ನಮ್ಮ ದೇಹವನ್ನು ಶತ್ರು ರೋಗಾಣುಗಳ ವಿರುದ್ಧ ರಕ್ಷಿಸಿಕೊಳ್ಳುವುದು ನಮಗೆ ಒಂದು ಬೃಹತ್ ಸಮಸ್ಯೆ. ವಿಜ್ಞಾನಿಗಳ ಅಭಿಪ್ರಾಯದಲ್ಲಿ ಮಾನವ ‘ಸೂಕ್ಷ್ಮ ಜೀವಿಗಳ ಸಾಗರದಲ್ಲಿ ತೇಲುತ್ತಿರುವ ಪ್ರಾಣಿ’. ನಮ್ಮ ಸುತ್ತ ಇರುವ ಅಸಂಖ್ಯಾತ ರೋಗಕಾರಕ ಸೂಕ್ಷಜೀವಿಗಳ ದಾಳಿಯಿಂದ ನಮ್ಮ ದೇಹವನ್ನು ಸಂಪೂರ್ಣವಾಗಿ ರಕ್ಷಿಸಿಕೊಳ್ಳುವ ಒಂದು ವ್ಯವಸ್ಥೆ ಅಗತ್ಯ ಎನಿಸುವುದಲ್ಲವೇ ?

ಯಾವುದೇ ಒಂದು ದೇಶದ ರಕ್ಷಣಾ ವ್ಯವಸ್ಥೆಯ ಮೂಲ ಅವಶ್ಯಕತೆಯೆಂದರೆ ಯೋಧರು. ಸದಾ ಎಚ್ಚರವಿರಬೇಕಾದ ಸೈನ್ಯವೊಂದರಲ್ಲಿ ಯಾವಾಗಲೂ ಹೊಸದಾಗಿ ಯೋಧರ ನೇಮಕಾತಿ ನಡೆಯುತ್ತಲೇ ಇರುತ್ತದೆ. ಹೀಗೆ ನೇಮಕಾತಿ ಆದವರನ್ನು ಶತ್ರುವನ್ನು ಗುರುತಿಸುವ ಬಗೆ, ಶಸ್ತ್ರಾಸ್ತ್ರಗಳ ಬಳಕೆ, ಯುದ್ಧ ನೀತಿ ಮುಂತಾದ ವಿಷಯಗಳಲ್ಲಿ ಸೂಕ್ತ ತರಬೇತಿ ನೀಡಿ ಸಿದ್ಧಪಡಿಸಲಾಗುತ್ತದೆ. ಸೇನೆಯ ವಿವಿಧ ವಿಭಾಗಗಳಲ್ಲಿ ನಿರ್ದಿಷ್ಟ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಅವರಲ್ಲಿ ಬೆಳೆಸಲಾಗುತ್ತದೆ. ಇಷ್ಟೆಲ್ಲಾ ತರಬೇತಿ ಪಡೆದರೂ, ಯುದ್ಧದಲ್ಲಿ ಯೋಧ ಏಕಾಂಗಿಯಾಗಿ ಹೋರಾಡಲಾರ. ಯೋಧರನ್ನು ಇದಕ್ಕಾಗಿ ಪ್ಲಟೂನ್, ಬೆಟಾಲಿಯನ್, ಬ್ರಿಗೇಡ್, ಮುಂತಾದ ವಿಶಿಷ್ಟ ಗುಂಪುಗಳಲ್ಲಿ ಗುರುತಿಸಲಾಗುತ್ತದೆ. ಈ ಎಲ್ಲ ತಂಡಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಒಂದು ಕೇಂದ್ರೀಯ ವ್ಯವಸ್ಥೆ ಇದೆ. ಕಾಲ, ಕಾಲಕ್ಕೆ ಅವಶ್ಯಕ ನಿರ್ದೇಶನಗಳನ್ನು ಈ ಕೇಂದ್ರ ನೀಡುತ್ತದೆ. ಒಂದು ಸುವ್ಯವಸ್ಥಿತ, ಸಮರ್ಥ ಸೇನೆಯಲ್ಲಿ ಕಂಡುಬರಬಹುದಾದ ದೃಶ್ಯ ಇದು. ನಮ್ಮ ದೇಹದ ರಕ್ಷಣಾ ವ್ಯವಸ್ಥೆಯಲ್ಲಿಯೂ ಇಂಥದ್ದೇ ಸ್ಥಿತಿಯನ್ನು ಗಮನಿಸಬಹುದು. ಈ ಒಂದು ವ್ಯವಸ್ಥೆಗೆ ‘ರೋಗ ನಿರೋಧ ವ್ಯವಸ್ಥೆ’ (immune system) ಎಂಬ ಹೆಸರಿದೆ.

ನಮ್ಮ ದೇಹದ ಶತ್ರುಗಳಾದ ವೈರಾಣುಗಳಲ್ಲದೆ ಬ್ಯಾಕ್ಟೀರಿಯ, ಶಿಲೀಂಧ್ರ  ಮುಂತಾದ ರೋಗಕಾರಕ ಜೀವಿಗಳು ಸಾಮಾನ್ಯವಾಗಿ ನಾವು ಶ್ವಾಸ ಒಳಗೆ ಎಳೆದುಕೊಳ್ಳುವಾಗ ಗಾಳಿಯ ಮೂಲಕ ಒಳಗೆ ಸೇರುತ್ತವೆ. ಇವುಗಳ ನಿಯಂತ್ರಣಕ್ಕಾಗಿ ನಮ್ಮ ಶ್ವಾಸನಾಳದ ಉದ್ದಕ್ಕೂ ಪ್ಯಾರಾಟ್ರೇಕಿಯಲ್ (paratracheal) ದುಗ್ಧರಸ ಗಂಟುಗಳಿವೆ. ಹಾಗೆಯೇ, ನಾವು ಸೇವಿಸುವ ಆಹಾರ ಅಥವಾ ನೀರಿನ ಮೂಲಕವೂ ಇಂಥ ಶತ್ರು ಪಡೆ ನಮ್ಮ ದೇಹ ಸೇರಬಹುದು. ನಮ್ಮ ಆಹಾರನಾಳದ ಉದ್ದಕ್ಕೂ ಇಂಥ ದುಗ್ಧರಸ ಗಂಟುಗಳು ಕಂಡು ಬರುತ್ತವೆ. ಕೆಲ ಶತ್ರು ಪಡೆ ನಮ್ಮ  ಚರ್ಮವನ್ನು ಭೇದಿಸಿ ಒಳಸೇರುವ ಸಾಧ್ಯತೆ ಇದೆ. ಅದಕ್ಕಾಗಿ ಕಾಯುತ್ತಿರುವ ದುಗ್ಧರಸ ಗಂಟುಗಳು ಚರ್ಮದ ಕೆಳಗೆ ಎಲ್ಲ ಕಡೆ ಹರಡಿಕೊಂಡಿವೆ.


ಚಿತ್ರ ೧. ದೇಹದ ರೋಗರಕ್ಷಣಾ ವ್ಯವಸ್ಥೆಯ ಘಟಕಗಳು

ನಮ್ಮ ಜಠರದ ಕೆಳಗೆ ಎಡ ಭಾಗದಲ್ಲಿರುವ ಗುಲ್ಮ (spleen) ಎಂಬ ಅಂಗವೂ ಸೂಕ್ಷ್ಮಜೀವಿ ಶತ್ರುಗಳ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸುತ್ತದೆ. ನಾಲಗೆಯ ಬಳಿ ಇರುವ ಟಾನ್ಸಿಲ್ (tonsil) ಮತ್ತು ಸಣ್ಣ ಕರುಳಿನ ಭಿತ್ತಿಯಲ್ಲಿರುವ ಪೇಯರನ ಪಟ್ಟಿಗಳು (Payers patches) ಸಹಾ ದೇಹದ ರಕ್ಷಣಾ ವ್ಯವಸ್ಥೆಯ ಭಾಗವಾಗಿ ಕಾರ್ಯ ನಿರ್ವಹಿಸುತ್ತವೆ.

ರಕ್ಷಣಾ ವ್ಯವಸ್ಥೆ ಸಮರ್ಥವಾಗಿ ಶತ್ರು ಪಡೆಯನ್ನು ನಾಶ ಪಡಿಸಬಲ್ಲುದು ಎಂಬುದು ಎಷ್ಟು ಮುಖ್ಯವೋ, ಈ ಸೂಕ್ಷ್ಮಜೀವಿ ಶತ್ರುಗಳು ದೇಹದ ಒಳಕ್ಕೆ ಪ್ರವೇಶಿಸದಂತೆ ತಡೆಯುವ ವ್ಯವಸ್ಥೆಯೂ ಅಷ್ಟೇ ಮುಖ್ಯವಾಗುತ್ತದೆ. ನಮ್ಮ ದೇಹದ ಗಡಿ ರಕ್ಷಣಾ ಪಡೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಮ್ಮ ಚರ್ಮ ನಿರ್ವಹಿಸುತ್ತದೆ. ಕಣ್ಣು, ಬಾಯಿ, ಮೂಗಿನ ಹೊಳ್ಳೆಗಳು ಮತ್ತು ಹೊರಕಿವಿಗಳನ್ನು ಹೊರತುಪಡಿಸಿ, ದೇಹದ ಉಳಿದ ಎಲ್ಲ ಭಾಗಗಳಲ್ಲಿ ಶತ್ರು ರೋಗಾಣುಗಳು ಒಳಕ್ಕೆ ಪ್ರವೇಶಿಸದಂತೆ ಚರ್ಮ ತಡೆಯುತ್ತದೆ. ನೀರನ್ನು ಹೀರಿಕೊಳ್ಳದ ಚರ್ಮದ ಗುಣ ಇದಕ್ಕೆ ಮುಖ್ಯ ಕಾರಣ. ಜೊತೆಗೆ, ಚರ್ಮದಲ್ಲಿ ಸ್ರವಿಕೆಯಾಗುವ ಕೆಲ ಕೊಬ್ಬಿನ ಆಮ್ಲಗಳು ಸೂಕ್ಷ್ಮಜೀವಿಗಳಿಗೆ ವಿಷಕಾರಿಯಾಗಿರುತ್ತದೆ.

ಹಾಗೊಂದು ವೇಳೆ, ಶತ್ರು ರೋಗಾಣು ಒಳಸೇರಿದ್ದೇ ಆದರೆ, ಅವುಗಳನ್ನು ಎದುರಿಸುವ ವ್ಯವಸ್ಥೆಯೂ ದೇಹದಲ್ಲಿದೆ. ಕಣ ಕಣ್ಣಿನಲ್ಲಿರುವ ಲ್ಯಾಕ್ರಿಮಲ್ (lacrymal) ಗ್ರಂಥಿಗಳ ಸ್ರವಿಕೆಯಾದ ಕಣ ಕಣ್ಣೀರು ಮತ್ತು ಬಾಯಂಗಳದಲ್ಲಿ ಸ್ರವಿಕೆಯಾಗುವ ಲಾಲಾರಸ(ಜೊಲ್ಲು)ದಲ್ಲಿ ಲೈಸೋಝೈಮ್ (lysosome) ಎಂಬ ಕಿಣ್ವ ಶತ್ರು ರೋಗಾಣುಗಳ ಪಡೆಯನ್ನು ನಾಶಪಡಿಸಬಲ್ಲುವು. ಅಲ್ಲದೆ, ಆಹಾರನಾಳದ ಮತ್ತು ಶ್ವಾಸನಾಳದ ಉದ್ದಕ್ಕೂ ಸ್ರವಿಕೆಯಾಗುವ ಲೋಳೆ(mucous) ಇಂಥ ರೋಗಾಣುಗಳನ್ನು ನಿಶ್ಚಲಗೊಳಿಸಬಹುದು. ಇದರ ಜೊತೆಗೆ, ಜಠರ ರಸದಲ್ಲಿರುವ ಹೈಡ್ರೋಕ್ಲೋರಿಕ್ ಆಮ್ಲ, ತಿಳಿದೋ, ತಿಳಿಯದೆಯೋ ಬಂದಿರುವ ರೋಗಾಣುಗಳನ್ನು ಕೊಲ್ಲುತ್ತದೆ. ಇಷ್ಟೆಲ್ಲಾ ಅಡೆ ತಡೆಗಳನ್ನು ದಾಟಿಯೂ ರೋಗಾಣುಗಳು ದೇಹದ ಜೀವಕೋಶಗಳನ್ನು ಪ್ರವೇಶಿಸಿದರೆ, ಅವು ಈಗ ದೇಹದ ರೋಗ ಪ್ರತಿರೋಧ ವ್ಯವಸ್ಥೆಯನ್ನು ಎದುರಿಸಬೇಕಾಗುತ್ತದೆ. ಈ ವ್ಯವಸ್ಥೆಯ ಘಟಕಗಳೇ ನಮ್ಮ ದೇಹದ ‘ಯೋಧರು’.

ವಿಶಿಷ್ಟ ಜೀವಕೋಶಗಳ ರೂಪದಲ್ಲಿರುವ, ದೇಹಕ್ಕೆ ಅಗತ್ಯವಾದ ಈ ‘ಯೋಧರ’ ನೇಮಕಾತಿ ನಡೆಯುವ ಕೇಂದ್ರವೆಂದರೆ, ನೀಳ ಮೂಳೆಗಳ ಒಳಗಿರುವ ಅಸ್ಥಿರಜ್ಜು (bone marrow). ಇದರಲ್ಲಿರುವ ಆಕರ ಜೀವಕೋಶಗಳು stem cells) ರಕ್ತದಲ್ಲಿರುವ ಎಲ್ಲ ಬಿಳಿರಕ್ತ ಕಣಗಳ ಮಾತೃಕೋಶಗಳು. ಇಲ್ಲಿ ಉತ್ಪತ್ತಿಯಾಗುವ ಜೀವಕೋಶಗಳಲ್ಲಿ ಕೆಲವು ಲಿಂಫೋಸೈಟ್(lymphocyte)ಗಳಾಗಿ ವಿಭೇದೀಕರಣ ಗೊಂಡರೆ, ಉಳಿದವು ಮಾಸ್ಟ್ (mast cells) ಕೋಶಗಳು  ಗ್ರಾನ್ಯುಲೋಸೈಟ್‌ಗಳು  (granulocytes), ಡೆಂಡ್ರೈಟಿಕ್ ಕೋಶಗಳು (dendritic cells) ಮತ್ತು ಬೃಹತ್‌ಭಕ್ಷಿಕೋಶ (macrophages)ಗಳಾಗಿ ರೂಪುಗೊಳ್ಳುತ್ತವೆ. ದೇಹ ರಕ್ಷಣೆಯಲ್ಲಿ ಲಿಂಫೋಸೈಟ್‌ಗಳದ್ದು ಪ್ರಮುಖ ಪಾತ್ರವಾದರೆ,  ಉಳಿದ ಜೀವಕೋಶಗಳೂ ಈ ಕ್ರಿಯೆಯಲ್ಲಿ ತಮ್ಮದೇ ಆದ ನಿರ್ದಿಷ್ಟ ಪಾತ್ರಗಳನ್ನು ಹೊಂದಿವೆ.

ನಮ್ಮ ದೇಹದಲ್ಲಿನ ರಕ್ಷಣಾ ವ್ಯವಸ್ಥೆಯ ಪ್ರಮುಖ ಯೋಧರೆಂದರೆ, ಒಂದು ಬಗೆಯ ಬಿಳಿ ರಕ್ತ ಕಣಗಳಾದ ಲಿಂಫೋಸೈಟ್‌ಗಳು. ಈ ಜೀವಕೋಶಗಳಿಗೆ ದೇಹದಲ್ಲಿ ‘ಸ್ವಂತ’ ಹಾಗೂ ‘ಸ್ವಂತವಲ್ಲದ‘ ವಸ್ತುಗಳನ್ನು ಗುರುತಿಸುವ ಸಾಮರ್ಥ್ಯ ಇದೆ. ಹೀಗಾಗಿ, ದೇಹದಲ್ಲಿ ಮಿತ್ತರನ್ನು ಹಾಗೂ ಶತ್ರುಗಳನ್ನು ಈ ಜೀವಕೋಶಗಳು ಗುರುತಿಸಬಲ್ಲವು. ಇದನ್ನು ಮೊದಲಿಗೆ ಕಂಡು ಹಿಡಿದದ್ದು ಸರ್ ಫ್ರಾಂಕ್ ಬರ್ನೆಟ್ (Sir Frank Burnet) ಎಂಬ ವಿಜ್ಞಾನಿ. ‘ಸ್ವಂತ’ ಮತ್ತು ‘ಸ್ವಂತವಲ್ಲದ’ ವಸ್ತುಗಳನ್ನು ಅವು ಹೊಂದಿರುವ ನಿರ್ದಿಷ್ಟ ‘ಗುರುತಿನ ಚೀಟಿ’ಯ ಆಧಾರದ ಮೇಲೆ ಈ ಜೀವಕೋಶಗಳು ಪತ್ತೆ ಹಚ್ಚುತ್ತವೆ ಎಂಬುದನ್ನು ಈತ ಕಂಡುಹಿಡಿದ. ಈ ಗುರುತಿನ ಚೀಟಿ ಆ ಒಂದು ವಸ್ತುವಿಗೇ ನಿರ್ದಿಷ್ಟವಾದ ಅಣು ರಚನೆ ಹೊಂದಿರುವ ರಾಸಾಯನಿಕದ ರೂಪದಲ್ಲಿ ಇರುತ್ತದೆ. ಇದನ್ನು ‘ಪ್ರತಿಜನಕ’ (antigen) ಎಂದು ಕರೆಯಲಾಗಿದೆ.

ಬೃಹತ್ ಭಕ್ಷಿಗಳು ಎಂಬ ಇನ್ನೊಂದು ಬಗೆಯ ಬಿಳಿ ರಕ್ತ ಕಣಗಳು ದೇಹದ ಒಳ ಹೊಕ್ಕಿರುವ ಸೂಕ್ಷ್ಮಜೀವಿಯನ್ನು ನೇರವಾಗಿ ಭಕ್ಷಿಸುವ ಸಾಮರ್ಥ್ಯ ಹೊಂದಿವೆ. ಶಾಖೆಗಳನ್ನು ಹೊಂದಿರುವ ಡೆಂಡ್ರೈಟಿಕ್ ಕೋಶಗಳು ಕೆಲವು ಸೂಕ್ಷ್ಮಜೀವಿಗಳ ಗುರುತಿನ ಚೀಟಿಯನ್ನು ತಮ್ಮದೇ ಗುರುತಿನ ಚೀಟಿಯ ಜೊತೆಗೆ ಇಟ್ಟುಕೊಂಡು ಅದನ್ನು ಲಿಂಫೋಸೈಟ್‌ಗಳಿಗೆ ಪ್ರದರ್ಶಿಸುತ್ತವೆ. ಇದರ ಆಧಾರದ ಮೇಲೆ ಲಿಂಫೋಸೈಟ್‌ಗಳು ತಮ್ಮ ಮುಂದಿನ ನಿರ್ಧಾರಕ್ಕೆ ಅಣಿಯಾಗುತ್ತವೆ.

ಲಿಂಫೋಸೈಟ್‌ಗಳು ಅಸ್ಥಿರಜ್ಜುವಿನಿಂದ ಹೊರಬರುವ ವೇಳೆಗೆ ಅವು ವಹಿಸಿಬೇಕಾದ ಪಾತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಮರ್ಥ್ಯವನ್ನು ಪಡೆದಿರುತ್ತವೆ. ಅವು ಕನಿಷ್ಟ ಎರಡು ಪ್ರಮುಖ ಹಾಗೂ ಅನೇಕ ಸಣ್ಣ ಘಟಕಗಳಾಗಿ ವಿಭೇದೀಕರಣ ಹೊಂದಿರುತ್ತವೆ. ನಮ್ಮ ದೇಹದಲ್ಲಿ ಲಿಂಫೋಸೈಟ್‌ಗಳ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತರಬೇತಿ ನೀಡುವ ಎರಡು ಕೇಂದ್ರಗಳಿವೆ. ಅದರಲ್ಲಿ ಒಂದು ತರಬೇತಿ ಅಸ್ಥಿರಜ್ಜುವಿನಲ್ಲೇ ನಡೆಯುತ್ತದೆ. ಈ ತರಬೇತಿ ಪಡೆದು ಹೊರಬರುವ ಲಿಂಫೋಸೈಟ್‌ಗಳಿಗೆ ಬಿ-ಲಿಂಫೋಸೈಟ್‌ಗಳು (B-lymphocytes) ಎಂದು ಕರೆಯಲಾಗುತ್ತದೆ. ಇನ್ನೊಂದು ತರಬೇತಿ ಕೇಂದ್ರವೆಂದರೆ, ಹೃದಯದ ಸಮೀಪವಿರುವ ಥೈಮಸ್ (thymus) ಗ್ರಂಥಿ. ಇಲ್ಲಿಂದ ಹೊರಬರುವ ಲಿಂಫೋಸೈಟ್‌ಗಳಿಗೆ ಟಿ-ಲಿಂಫೋಸೈಟ್‌ಗಳು (T-lymphocytes) ಎಂದು ಕರೆಯಲಾಗುತ್ತದೆ. ಈ ಎರಡು ಬಗೆಯ ಲಿಂಫೋಸೈಟ್‌ಗಳ ಮೇಲಿರುವ ಗುರುತಿನ ಚೀಟಿಯಲ್ಲಿ (ಗ್ರಾಹಕಗಳಲ್ಲಿ receptors) ಭಿನ್ನತೆ ಇರುವುದಷ್ಟೇ ಅಲ್ಲದೆ, ಕಾರ್ಯವ್ಯಾಪ್ತಿಯಲ್ಲಿಯೂ ಭಿನ್ನತೆ ಇರುತ್ತದೆ. ಇವೆರಡೂ ಬಗೆಯ ಲಿಂಫೋಸೈಟ್‌ಗಳಲ್ಲದೆ ಭಿನ್ನವಾದ ಹೆಚ್ಚಿನ ಗುರುತಿನ ಚೀಟಿ ಹೊಂದಿರುವ ಮೂರನೇ ಬಗೆಯ ಲಿಂಫೋಸೈಟ್‌ಗಳೂ ಈ ವ್ಯವಸ್ಥೆಯಲ್ಲಿ ಇರುತ್ತವೆ.

ನಮ್ಮ ರಕ್ತದಲ್ಲಿ ಒಟ್ಟು ಸರಾಸರಿ 100 ಬಿಲಿಯನ್ (1011) ಬಿಳಿರಕ್ತ ಕಣಗಳು ಇರುತ್ತವೆ. ಲಿಂಫೋಸೈಟ್‍ಗಳು ಒಟ್ಟು ಬಿಳಿರಕ್ತ ಕಣಗಳ ಶೇ.20-30ರಷ್ಟಿರುತ್ತವೆ. ಇದರಲ್ಲಿ, ಬಿ-ಲಿಂಫೋಸೈಟ್‍ಗಳು 5ರಿಂದ 15%, ಟಿ-ಲಿಂಫೋಸೈಟ್‍ಗಳು 65 ರಿಂದ 75% ಇದ್ದರೆ, ಉಳಿದ ಭಾಗ ಮೂರನೇ ಬಗೆಯ ಲಿಂಫೋಸೈಟ್‍ಗಳಾಗಿರುತ್ತವೆ.

ಬಿ-ಲಿಂಫೋಸೈಟ್‌ಗಳಿಗೆ(= ಬಿ-ಕೋಶಗಳಿಗೆ) ಹೋಲಿಸಿದರೆ, ಟಿ-ಲಿಂಫೋಸೈಟ್‌ಗಳು (= ಟಿ-ಕೋಶಗಳು) ಸಂಖ್ಯಾ ಬಾಹುಳ್ಯದ ಜೊತೆಗೆ, ಕಾರ್ಯವ್ಯಾಪ್ತಿಯಲ್ಲಿಯೂ ವೈವಿಧ್ಯತೆ ತೋರುತ್ತವೆ. ಅವು ದೇಹದ ಒಳ ಹೊಕ್ಕಿರುವ ಶತ್ರುವಿನ ಗುರುತು ಪತ್ತೆ ಮಾಡುವುದರಲ್ಲಿ  ಬೃಹತ್‌ಭಕ್ಷಿಗಳ ಜೊತೆಗೂಡಿ ಕೆಲಸ ಮಾಡುವುದಲ್ಲದೆ, ಶತ್ರುವಿನ ಉದ್ದೇಶ ತಿಳಿದಕೂಡಲೇ ಚುರುಕುಗೊಳ್ಳುತ್ತವೆ. ಹೀಗೆ ಚುರುಕುಗೊಂಡ ಕೆಲವು ಟಿ-ಕೋಶಗಳು ನಿರ್ದಿಷ್ಟ ಬಿ-ಕೋಶಗಳನ್ನು ಸಮೀಪಿಸಿ ಅವು ಪ್ರತಿಕಾಯಗಳನ್ನು ಉತ್ಪಾದಿಸುವ ಕ್ರಿಯೆಗೆ ಸಹಾಯ ಮಾಡುತ್ತವೆ. ಹೀಗಾಗಿ, ಇಂಥ ಟ-ಕೋಶಗಳಿಗೆ ಸಹಾಯಕ ಟಿ-ಕೋಶಗಳು (helper T-cells) ಎಂದು ಕರೆಯಲಾಗುತ್ತದೆ.

ಚಿತ್ರ ೨. ದೇಹ ರಕ್ಷಣೆಯ ಪ್ರಮುಖ ಯೋಧರು

ಕೆಲವು ಟಿ-ಕೋಶಗಳು ನೇರವಾಗಿ ಬಂದಿರುವ ಶತ್ರುವಿನ ಮೇಲೆ ಮಾರಕ ದಾಳಿ ನಡೆಸಿ ನಾಶ ಪಡಿಸುತ್ತವೆ. ಹೀಗಾಗಿ, ಈ ಟಿ-ಕೋಶಗಳಿಗೆ ಕೊಲೆಗಾರ ಟಿ-ಕೋಶಗಳು (killer T-cells) ಎಂಬ ಹೆಸರಿದೆ.

ಟಿ-ಕೋಶಗಳಾಗಲೀ, ಬಿ-ಕೋಶಗಳಾಗಲೀ ಎಚ್ಚರ ತಪ್ಪದಂತೆ ನೋಡಿಕೊಳ್ಳುವ ಇನ್ನೊಂದು ಬಗೆಯ ಟಿ-ಕೋಶಗಳಿವೆ. ಇವನ್ನು ನಿಯಂತ್ರಕ ಟಿ-ಕೋಶಗಳು (regulatory T-cells) ಎಂದು ಕರೆಯಲಾಗುತ್ತದೆ. ಇವು, ದಾಳಿಯ ತೀವ್ರತೆಯನ್ನು ನಿರ್ದಿಷ್ಟ ಮಟ್ಟದಲ್ಲಿ ಕಾಪಾಡಿಕೊಳ್ಳಲು ನೆರವಾಗುತ್ತವೆ. ಸಹಾಯಕ ಮತ್ತು ನಿಯಂತ್ರಕ ಟಿ-ಕೋಶಗಳ ಸಾಮರ್ಥ್ಯದಲ್ಲಿ ಒಂದು ಸೂಕ್ಷ್ಮ  ಸಮತೋಲನವಿರುತ್ತದೆ.  ಈ ಸಮತೋಲನದಲ್ಲಿ ಯಾವುದೇ ಏರುಪೇರು ಉಂಟಾದರೂ ಅದು ದೇಹಕ್ಕೆ ಮಾರಕವಾಗುತ್ತದೆ.

ಟಿ- ಮತ್ತು ಬಿ-ಕೋಶಗಳಲ್ಲದೆ ಇರುವ ಮೂರನೇ ಬಗೆಯ ಲಿಂಫೋಸೈಟ್‌ಗಳು ಯಾವುದೇ ನಿರ್ದಿಷ್ಟ ಗುರುತಿನ ಚೀಟಿ ಹೊಂದಿಲ್ಲವಾದರೂ, ದೇಹದಲ್ಲಿ ಗಂತಿಗಳಿಗೆ (tumours) ಕಾರಣವಾಗುವ ಜೀವಕೋಶಗಳನ್ನು ಅಥವಾ ವೈರಾಣು ಸೋಂಕಿತ ಜೀವಕೋಶಗಳನ್ನು ನಾಶ ಪಡಿಸುತ್ತವೆ. ಹೀಗಾಗಿ, ಈ ಜೀವಕೋಶಗಳನ್ನು ಸ್ವಾಭಾವಿಕ ಕೊಲೆಗಾರ ಜೀವಕೋಶಗಳು (natural killer cells-NK cells) ಎಂದು ಕರೆಯಲಾಗುತ್ತದೆ. ಈ ಬಗೆಯ ಲಿಂಫೋಸೈಟ್‌ಗಳಿಗೆ ಯಾವುದೇ ನಿರ್ದಿಷ್ಟ ಪ್ರತಿಜನಕಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಇಲ್ಲ.

ಪ್ರತಿಜನಕ-ಪ್ರತಿಕಾಯ ವ್ಯವಸ್ಥೆ

ಅಗಂತುಕ ರೋಗಾಣುವೊಂದು ಪ್ರವೇಶ ಮಾಡಿದ ಕೂಡಲೇ ಅದನ್ನು ಕೆಲ ಲಿಂಫೋಸೈಟ್‍ಗಳು ಸುತ್ತುವರೆದು ಅದರ ಗುರುತಿನ ಚೀಟಿಯನ್ನು ತಮ್ಮ ಗುರುತಿನ ಚೀಟಿಯ ಜೊತೆಗೆ ಒಂದು ಪ್ರೋಟೀನ್ ಅಣುವಿನ ರೂಪದಲ್ಲಿ ಸಹಾಯಕ ಟಿ-ಕೋಶಗಳಿಗೆ ಪ್ರದರ್ಶಿಸುತ್ತವೆ. ಇದರಿಂದ, ಇವು ಗೂಢಚಾರರಲ್ಲ, ಬದಲಿಗೆ ರೋಗಾಣುವನ್ನು ಪತ್ತೆ ಹಚ್ಚಿರುವ ತಮ್ಮದೇ ದಾಯಾದಿ ಕೋಶಗಳು ಎಂಬ ಮಾಹಿತಿ ಸಹಾಯಕ ಕೋಶಗಳಿಗೆ ದೊರಕುತ್ತದೆ. ಇಷ್ಟಾದರೂ ಅವು ಶತ್ರುವಿನ ಮೇಲೆ ದಾಳಿ ಮಾಡುವುದಿಲ್ಲ. ಬದಲಿಗೆ ಸೂಕ್ತ ಪ್ರತಿಕಾಯವನ್ನು (antibody) ಉತ್ಪಾದಿಸಬಲ್ಲ ಬಿ-ಕೋಶಗಳನ್ನು ಹುಡುಕುತ್ತವೆ. ಆ ಜೀವಕೋಶಗಳಿಗೆ ರಾಸಾಯನಿಕ ಸಂಕೇತದ ಮೂಲಕ ಪ್ರತಿಕಾಯದ ಉತ್ಪಾದನೆಗೆ ನಿಶಾನೆ ತೋರಿಸುತ್ತವೆ.


ಪ್ರತಿಕಾಯಗಳು ಇಮ್ಯುನೋಗ್ಲಾಬ್ಯುಲಿನ್ (immunoglobulin) ಎಂಬ ಪ್ರೋಟೀನ್ ಅಣುಗಳಾಗಿದ್ದು, ಯ ಆಕಾರದ ನಿರ್ದಿಷ್ಟ ರಚನೆಯನ್ನು ಹೊಂದಿರುತ್ತವೆ. IgM, IgA, IgD, IgG ಮತ್ತು IgE ಎಂಬ ಐದು ಬಗೆಯ ಪ್ರತಿಕಾಯಗಳನ್ನು ಗುರುತಿಸಲಾಗಿದೆ. ಇವು ನಿರ್ದಿಷ್ಟ ಶತ್ರು ರೋಗಾಣುವಿನ ಪ್ರತಿಜನಕದೊಂದಿಗೆ ಬಂಧಗೊಂಡು, ರೋಗಾಣುವನ್ನು ನಾಶಪಡಿಸುತ್ತವೆ.

ಹೀಗೆ, ಶತ್ರುವಿನ ಮೇಲೆ ದಾಳಿ ಮಾಡಲು ವಿವಿಧ ರೀತಿಯ ತರಬೇತಿ ಪಡೆದಿರುವ ಬಿಳಿ ರಕ್ತಕಣಗಳು ದೇಹದ ನಿರ್ದಿಷ್ಟ ತಾಣಗಳಲ್ಲಿ ಗುಂಪುಗೂಡಿಕೊಂಡಿರುತ್ತವೆ. ಈ ತಾಣಗಳಿಗೆ ದುಗ್ಧರಸ ಗಂಟುಗಳು (lymph nodes) ಎಂಬ ಹೆಸರಿದೆ. ಇಲ್ಲಿ ಶತ್ರು ಪಡೆಗೆ ಎರಡು ರೀತಿಯ ಪ್ರತಿಕ್ರಿಯೆ ಎದುರಾಗುತ್ತದೆ. ಒಂದನ್ನು ಕೋಶ ಮಾಧ್ಯಮಿತ ರಕ್ಷಣೆ (cell mediated response) ಎಂದೂ, ಇನ್ನೊಂದನ್ನು ರಸಧಾತು ರಕ್ಷಣೆ (humoral response) ಎಂದೂ ಕರೆಯಲಾಗುತ್ತದೆ. ಕೋಶ ಮಾಧ್ಯಮಿತ ರಕ್ಷಣೆಯಲ್ಲಿ ಶತ್ರು ರೋಗಾಣುಗಳನ್ನು ನಾಶಪಡಿಸುವ ಜವಾಬ್ದಾರಿ ಕೊಲೆಗಾರ ಟಿ-ಕೋಶಗಳದ್ದು. ರಸಧಾತು ರಕ್ಷಣೆಯಲ್ಲಿ ಬಿ-ಕೋಶಗಳಿಂದ ಉತ್ಪತಿಯಾಗುವ ಪ್ರತಿಕಾಯಗಳೆಂಬ ವಿಶಿಷ್ಟ ಮಿಸೈಲ್‌ಗಳ  ಮೂಲಕ, ಸಹಾಯಕ ಟಿ-ಕೋಶಗಳ ಸಹಕಾರದೊಂದಿಗೆ ಶತ್ರು ಪಡೆಯನ್ನು ನಾಶಪಡಿಸಲಾಗುತ್ತದೆ. 

ಕೆಲವೊಮ್ಮೆ ವೈರಾಣುವಿನಂಥ ಶತ್ರು ಪಡೆ ಎಲ್ಲ ವ್ಯವಸ್ಥೆಯನ್ನೂ ತೂರಿಕೊಂಡು ದೇಹದ ಜೀವಕೋಶಗಳ ಒಳಗೆ ಸೇರಿಕೊಂಡು ಹಾನಿ ಉಂಟುಮಾಡುವ ಸಾಧ್ಯತೆ ಇದೆ. ಇಂಥ ಸಂದರ್ಭದಲ್ಲಿ ಸೂಕ್ತ ಪ್ರತಿಕಾಯ ದೊರಕದೇ ಹೋಗಬಹುದು. ಹೀಗೆ ಬಂದ ವೈರಾಣುವಿನ ಗುರುತಿನ ಚೀಟಿಯ ಒಂದು ತುಣುಕು ಸಿಕ್ಕಿದರೂ ಸಾಕು, ಅದನ್ನು ಬಳಸಿಕೊಂಡು ಮಾಹಿತಿಯನ್ನು ಕೊಲೆಗಾರ ಟಿ-ಕೋಶಗಳಿಗೆ ರವಾನಿಸಲಾಗುತ್ತದೆ. ಈ ಕೋಶಗಳು ರೋಗಾಣುವನ್ನು ನಾಶಪಡಿಸುತ್ತವೆ.

ಕೆಲವು ವೈರಾಣುಗಳ ಮೇಲೆ ಇಂಟರ್‌ಫೆರಾನ್ (interferon) ಎಂಬ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸಲಾಗುತ್ತದೆ. ಈ ರಾಸಾಯನಿಕ ವೈರಾಣುವಿನ ವಿಭಜನೆಯ ಸಾಮರ್ಥ್ಯವನ್ನು ಕುಂದಿಸುವ ಮೂಲಕ ಅದನ್ನು ನಾಶಪಡಿಸುತ್ತದೆ.

ಹೀಗೆ, ದೇಹದಲ್ಲಿ ಶತ್ರು ಪಡೆಯ ವಿರುದ್ಧ ಹೋರಾಡಲು ಹಲವು ಬಗೆಯ ತಂತ್ರಗಳನ್ನು ಸಂದರ್ಭಕ್ಕೆ ಅನುಗುಣವಾಗಿ ಬಳಸಲಾಗುತ್ತದೆ. ಶತ್ರುವನ್ನು ಮಣಿಸಿ ದೇಹವನ್ನು ರಕ್ಷಿಸುವ ಈ ಯುದ್ಧ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಈ ಯುದ್ಧದಲ್ಲಿ  ಕದನ ವಿರಾಮದ ಪ್ರಶ್ನೆಯೇ ಇಲ್ಲ ! 

ಚಿತ್ರಗಳ ರಚನೆ: ಶ್ರೀಮತಿ ಬಿ. ಜಯಶ್ರೀ ಶರ್ಮ

***

ಈ ಲೇಖನದ  ಆವೃತ್ತಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

28 comments:

  1. Fantastic narration. Motivates reading. ಸಂಗ್ರಹ ಯೋಗ್ಯ ಲೇಖನ. ತರಗತಿ ಬೋಧನಾ ಕಲಿಕಾ ಚಟುವಟಿಕೆಗೆ ಅತ್ಯುತ್ತಮ ಮಾರ್ಗದರ್ಶಕ

    ReplyDelete
  2. Fantastic narration. Motivates reading. ಸಂಗ್ರಹ ಯೋಗ್ಯ ಲೇಖನ. ತರಗತಿ ಬೋಧನಾ ಕಲಿಕಾ ಚಟುವಟಿಕೆಗೆ ಅತ್ಯುತ್ತಮ ಮಾರ್ಗದರ್ಶಕ

    ReplyDelete
  3. Very informative.
    excellent flow of knowledge.....

    ReplyDelete
  4. Good information sir hope this Blog helps to All Teachers Creative work !

    ReplyDelete
  5. Very beautiful narration sir! Helps teachers get their students love biology which is always tagged as a difficult subject !!

    ReplyDelete
  6. Excellent explanation sir.. Very useful
    🙏🙏

    ReplyDelete
  7. Simple yet detailed information. Highly useful to both teachers and students as it is in our Kannada. Salute to you sir.

    ReplyDelete
  8. It is very informative and narrated so nicely that any non science also understands... Teachers can make use of it.... Creative writing.....

    ReplyDelete
  9. It is very informative and narrated so nicely that any non science also understands... Teachers can make use of it.... Creative writing.....

    ReplyDelete
  10. Very good informative article sir. Thank you for sharing. Keep writing and share sir.

    ReplyDelete
  11. Really very informative,sir.The way you have explained can reach even a lay mam. Thank you for sharing.

    ReplyDelete
  12. ಮನಮುಟ್ಟುವ ಲೇಖನ.... ಸವಿ ಜ್ಞಾನ ರುಚಿಕರವಾಗಿದೆ

    ReplyDelete
  13. Beautiful explanation....even primary students can also understand easily........Adiga Sir...told science matter like story...
    Thanks

    ReplyDelete
  14. Sir you explained Science matter like a story....even primary students can also understand.....
    Thank you sir

    ReplyDelete
  15. ಅಮೂಲ್ಯವಾದ ಮಾಹಿತಿ ಸರ್, ಧನ್ಯವಾದಗಳು ಸರ್

    ReplyDelete
  16. Sir.. Very good information. You have narrated the thing beautifully.
    Thank you..

    ReplyDelete
  17. ಅತ್ಯಮೂಲ್ಯವಾದ ಮಾಹಿತಿ.ಸರಳವಾದ, ಸ್ಪಷ್ಟ ಮಾಹಿತಿ. ಎಂಥವರೂ ಓದಿದರೂ ಸುಲಭವಾಗಿ ಅರ್ಥಯಿಸಿ ಕೊಳ್ಳಬಹುದಾದಂಥ ಬರವಣಿಗೆ. ತುಂಬಾ ಧನ್ಯವಾದಗಳು ವಾದಗಳು ಸರ್.

    ReplyDelete
  18. ಅತ್ಯುತ್ತಮವಾದ ಮಾಹಿತಿ ಸರ್ ಇಂತಹ ಸಾಂಕ್ರಾಮಿಕ ರೋಗ ಹರಡುತ್ತಿರುವ ಪರಿಸ್ಥಿತಿಯಲ್ಲಿ ಇಂತಹ ಮಾಹಿತಿ ಮನುಷ್ಯನನ್ನು ಜಾಗೃತಗೊಳಿಸುತ್ತದೆ ಆರೋಗ್ಯ ವರ್ಧನೆಯ ಕಡೆ ಗಮನ ಸೆಳೆಯುವಂತಹ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು🙏🙏🙏

    ReplyDelete
  19. ಬಹಳ ಸುಂದರವಾಗಿ ಮೂಡಿ ಬಂದಿರುವ ಲೇಖನ. ವಿಜ್ಞಾನವನ್ನು ಕನ್ನಡದಲ್ಲಿ ಎಷ್ಟು ಸುಲಲಿತವಾಗಿ ಹೇಳಬಹುದು ಎಂದು ತೋರಿಸಿ ಕೊಟ್ಟ ಲೇಖನ. ಯುಧ್ದ ದ ಉಪಮೆ ಚೆನ್ನಾಗಿ ಹೊಂದಿಕೆ ಆಗುತ್ತಿದೆ. ಎಲ್ಲಿಯೂ ಕ್ಲಿಷ್ಟ ಅನ್ನಿಸಲಿಲ್ಲ.
    ಹೀಗೆ ಇನ್ನೂ ಹೊಸ ಹೊಸ ವಿಚಾರಗಳು ಲೇಖನಗಳ ಮೂಲಕ ಬರಲಿ !! ನಿಮ್ಮ ಈ ಮ್ಯಾಗಜಿನ್ ಗೆ ಶುಭಾಶಯಗಳು. ನಿಮ್ಮ ಈ ಪ್ರಯತ್ನ ಕ್ಕೆ hats off.

    ReplyDelete
  20. ಬಹಳ ಸುಂದರವಾಗಿ ಮೂಡಿ ಬಂದಿರುವ ಲೇಖನ. ವಿಜ್ಞಾನವನ್ನು ಕನ್ನಡದಲ್ಲಿ ಎಷ್ಟು ಸುಲಲಿತವಾಗಿ ಹೇಳಬಹುದು ಎಂದು ತೋರಿಸಿ ಕೊಟ್ಟ ಲೇಖನ. ಯುಧ್ದ ದ ಉಪಮೆ ಚೆನ್ನಾಗಿ ಹೊಂದಿಕೆ ಆಗುತ್ತಿದೆ. ಎಲ್ಲಿಯೂ ಕ್ಲಿಷ್ಟ ಅನ್ನಿಸಲಿಲ್ಲ.
    ಹೀಗೆ ಇನ್ನೂ ಹೊಸ ಹೊಸ ವಿಚಾರಗಳು ಲೇಖನಗಳ ಮೂಲಕ ಬರಲಿ !! ನಿಮ್ಮ ಈ ಮ್ಯಾಗಜಿನ್ ಗೆ ಶುಭಾಶಯಗಳು. ನಿಮ್ಮ ಈ ಪ್ರಯತ್ನ ಕ್ಕೆ hats off.

    ReplyDelete
  21. ����excellent ..very useful information sir great ��..good job ...

    ReplyDelete