ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ.

Wednesday, February 3, 2021

ಜಲಸಸ್ಯಗಳು ಒಂದು ರೋಚಕ ಕಥೆರಾಘವೇಂದ್ರ ಮಯ್ಯ ಎಂ.ಎನ್
.ಶಿ.  ಸರ್ಕಾರಿ ಪ್ರೌಢಶಾಲೆ ,
ಬೈರಾಪಟ್ಟಣಚನ್ನಪಟ್ಟಣ
ರಾಮನಗರ ಜಿಲ್ಲೆ . 


ಚಿಕ್ಕಂದಿನಲ್ಲಿ ನಮಗೆ ಎಲ್ಲವೂ ಅದ್ಭುತವೇ,  ಪ್ರತಿಯೊಂದು ಪ್ರಾಣಿಯನ್ನೂ, ಪಕ್ಷಿಯನ್ನೂ, ಸಸ್ಯವನ್ನೂ  ಅದ್ಭುತವೆಂಬಂತೆ ನೋಡುತ್ತಿದ್ದೆವು. ನಮ್ಮ ಮನೆಯ ಹಿಂದೆ ಒಂದು ದೊಡ್ಡ ನೀಲಗಿರಿ ಮರ ಇತ್ತು. ನನ್ನ  ಕಣ್ಣಿಗೆ ಮರ ಕಂಡಾಗಲೆಲ್ಲ ಅದರ ತುದಿಯವರೆಗೂ ನೀರು ಹೇಗೆ ಹೋಗುತ್ತದೆ ಎಂದು ಯೋಚಿಸುತ್ತಿದ್ದೆ. ನಮ್ಮ ಮನೆಯ ಹಿತ್ತಲಲ್ಲಿ ಒಂದು ಬಾವಿ ಇದೆ. ಅದರಿಂದ ನೀರೆತ್ತಲು ಒಂದು ಪಂಪ್ ಸೆಟ್ ಹಾಕಿದ್ದರು. ಅದನ್ನು ನೋಡಿದ್ದ ನಾನು ಮರದ ಬುಡದಲ್ಲೂ, ಒಳಗೊಂದು ಪಂಪ್ ಸೆಟ್ ಇದೆ, ಅದು ಮರದ ತುದಿಯವರೆಗೂ ನೀರನ್ನು ಪಂಪ್ ಮಾಡುತ್ತದೆಎಂದು ಕೊನೆಗೊಮ್ಮೆ ತೀರ್ಮಾನಿಸಿ ಸುಮ್ಮನಾಗಿದ್ದೆ. ಮುಂದೆ ಶಾಲೆಯಲ್ಲಿ ಮಾಡಿದ ಪಾಠಗಳೆಲ್ಲವನ್ನೂ ಗಮನಿಸುವ ವಯಸ್ಸು ಬಂದಾಗ ಉಪಾಧ್ಯಾಯರು  ಸಸ್ಯಗಳು ಬಹಳ ಕಾಲ ನೀರಿನ ಸಂರ್ಪಕದಲ್ಲಿದ್ದರೆ ಅಥವಾ ಅವುಗಳಿಗೆ ಹೆಚ್ಚು ನೀರುಣಿಸಿದರೆ ಅವು ಕೊಳೆಯುತ್ತವೆ ಎಂದು ಹೇಳಿದ್ದು ನೆನಪಲ್ಲಿ ಉಳಿಯಿತು, ಹಾಗಾದರೆ ಹೊಳೆಯಲ್ಲಿ, ಕೆರೆಯಲ್ಲಿ ಗಿಡಗಳು ಬೆಳೆಯುತ್ತವಲ್ಲ! ಅವು ಏಕೆ ಕೊಳೆಯುವುದಿಲ್ಲ ಎಂದು ಆಗಲೇ ಎದ್ದ ಪ್ರಶ್ನೆಯೊಂದಿಗೆ ಜಲಸಸ್ಯಗಳ ಬಗ್ಗೆ ಕುತೂಹಲವೊಂದು ನನ್ನಲ್ಲಿ ಮೂಡಲಾರಂಭಿಸಿತು. ವೀರಪ್ಪ ಮೇಷ್ಟ್ರ ರೌದ್ರಾವತಾರ ಗೊತ್ತಿದ್ದ ನಾನು ಪ್ರಶ್ನೆಯನ್ನು ಅವರಿಗೆ ಕೇಳುವ ಗೋಜಿಗೆ ಹೋಗಿರಲಿಲ್ಲ . ನಾನು ದ್ವಿತೀಯ ಡಿಗ್ರಿಗೆ ಬರುವವರೆಗೂ ಪ್ರಶ್ನೆಗೆ ಸಮರ್ಪಕ ಉತ್ತರ ಸಿಕ್ಕಿರಲಿಲ್ಲ.


ಎಂದಿನ ಭಾನುವಾರದಂತೆಯೇ ಅಂದೂ ಕೂಡ ನಾನು ಮತ್ತು ನನ್ನ ತಮ್ಮ ಬಟ್ಟೆ ತೊಳೆಯಲು ತುಂಗಾನದಿಗೆ ಹೋದೆವು. ಮಳೆಗಾಲ ಮುಗಿದು ಆಗಲೇ ಮೂರು ತಿಂಗಳಾಗಿತ್ತು. ಮಳೆಗಾಲದಲ್ಲಿ ತುಂಬಿ ಹರಿದು ಎಲ್ಲರ ಎದೆ ನಡುಗಿಸಿದ್ದ ತುಂಗೆ ನಿಧಾನಗತಿಯಲ್ಲಿ ಸಣ್ಣಗೆ ಹರಿಯುತ್ತಿದ್ದಳು. ಅಲ್ಲಲ್ಲಿ  ನೀರಿನಿಂದ ಹೊರಚಾಚಿದ್ದ ಕಲ್ಲುಗಳ ಮೇಲೆ ನಾವಿಬ್ಬರೂ ಕಾಲಿಡುತ್ತಾ ದಾಟಿಕೊಂಡು ಬಟ್ಟೆ ತೊಳೆಯುವ ಸ್ಥಳಕ್ಕೆ ಹೋದೆವು. ನಾವು ಬಟ್ಟೆ ತೊಳೆಯುತ್ತಿರುವಾಗ ತೇಲುತ್ತಾ ಗಿಡವೊಂದು ಬಂತು, ಅದರ ಎಲೆಗಳು ಮೇಲೆ ತೇಲುತ್ತಿದ್ದವು , ಕಾಂಡ ಮತ್ತು ಬೇರು ನೀರಿನ ಒಳಗೇ ಇತ್ತು, ಅದನ್ನು ಹಿಡಿದು ನೋಡಿದೆ. ಎಲೆಗಳನ್ನು ಸವರಿದಾಗ ಅದರ ಮೇಲ್ಮೈ ಮೇಲೆ ಬೆಳೆದಿದ್ದ ಸಣ್ಣ ಸಣ್ಣ ಒರಟು ಕೂದಲಿನಂತಹ ರಚನೆಗಳು ಬೆರಳಿಗೆ ತಾಕಿದವು. ಕೈಯಿಂದ ನೀರು ತೆಗೆದುಕೊಂಡು ಗಿಡದ ಎಲೆಯ ಮೇಲೆ ಹಾಕಿದೆ. ಸರ್ರನೆ ಮಣಿಗಳಂತೆ ಜಾರಿ ಬಿದ್ದವು. ರೀತಿಯ ವರ್ತನೆ ನಾವು ಭೂಮಿಯ ಮೇಲೆ ಬೆಳೆಯುವ ಕೆಸುವಿನ ಗಿಡದಲ್ಲೂ ಕಾಣಬಹುದು,  ಮತ್ತೆ ನೀರು ಹಾಕಿದೆ, ಮತ್ತೆ ಜಾರಿದವು.  ನನಗೆ ಕುತೂಹಲವಾಗಿ ಹಿಂದಿರುಗಿ ಬರುವಾಗ ಗಿಡವನ್ನು ಜೊತೆಗೇ ತೆಗೆದುಕೊಂಡು ಬಂದೆ. ಸಸ್ಯದ ಗುಣವನ್ನು ಪರೀಕ್ಷಿಸುತ್ತ ಪುಸ್ತಕದಲ್ಲಿ ಅದರ ಬಗೆಗಿನ ವಿವರಣೆಗಾಗಿ ಹುಡುಕಿದೆ. ಸಸ್ಯದ ಚಿತ್ರವೇ ಸಿಕ್ಕಿತು. ಜಲಸಸ್ಯಗಳು (Hydrophytes) ಎಂಬ ತಲೆಬರಹದ ಅಡಿಯಲ್ಲಿ ಸಸ್ಯಕ್ಕೆ ಪಿಸ್ಟಿಯಾ (Water lettuce) ಎಂದು ಹೆಸರಿಸಲಾಗಿತ್ತು,  ಜನಬಳಕೆಯಲ್ಲಿರುವ ಹೆಸರಿಗಾಗಿ ತಡಕಾಡಿದೆ,  ದೊರೆಯಲಿಲ್ಲ.   ಪುಸ್ತಕದಲ್ಲಿದ್ದ ಇನ್ನೊಂದು ಚಿತ್ರ ನನ್ನ ಗಮನ ಸೆಳೆಯಿತು,  ನಾವೆಲ್ಲ ಅಂತರಗಂಗೆ (Eichornia) ಅನ್ನುತ್ತೀವಲ್ಲ,   ಸಸ್ಯದ ಚಿತ್ರ. ಅಂತರಗಂಗೆ ಒಮ್ಮೆ ಕೆರೆಗಳಲ್ಲಿ, ನೀರಿನ ಹೊಂಡಗಳಲ್ಲಿ ಕಾಣಿಸಿಕೊಂಡರೆ ಅವುಗಳನ್ನು ಕೂಡಲೇ ತೆಗೆದು ಹಾಕಬೇಕು.  ಇಲ್ಲದಿದ್ದರೆ, ಇಡೀ ಕೆರೆಯೇ ಇವುಗಳಿಂದ ಮುಚ್ಚಿಹೋಗಿ ನೀರನ್ನು ಬಳಸಲು ಅಸಾಧ್ಯವಾಗುತ್ತದೆ.ನನಗೆ ತುಂಗಾ ನದಿಯಲ್ಲಿ ಸಿಕ್ಕ ಸಸ್ಯ  ‘ಪಿಸ್ಟಿಯಾ ‘. ಇದು ಸ್ವತಂತ್ರವಾಗಿ ತೇಲುವ ಜಲಸಸ್ಯಗಳ ಗುಂಪಿಗೆ ಸೇರುತ್ತವೆ. ಸ್ವತಂತ್ರವಾಗಿ ತೇಲುವ ಇನ್ನೊಂದು ಸಸ್ಯ ಜೆಸ್ಸಿಯಾ ಸಸ್ಯದಲ್ಲಿ ಎರಡು ರೀತಿಯ ಬೇರುಗಳ ರಚನೆ ಕಾಣಸಿಗುತ್ತದೆ.  ಒಂದು ಸಾಮಾನ್ಯ ಬೇರು,  ಇನ್ನೊಂದು ತೇಲುವ ಬೇರು. ತೇಲುವ ಬೇರುಗಳು ಉಬ್ಬಿಕೊಂಡಿದ್ದು ಒಳಗೆ ಗಾಳಿ ತುಂಬಿರುತ್ತದೆ . ಸ್ವತಂತ್ರವಾಗಿ ತೇಲುವ ಸಸ್ಯಗಳ ಎಲೆಗಳ ಮೇಲ್ಬಾಗ ಮೇಣದಿಂದ ಆವರಿಸಲ್ಪಟ್ಟಿರುತ್ತದೆ ಅಥವಾ ಬಿರುಸಾದ ಕೂದಲುಗಳಿಂದ ಕೂಡಿರುತ್ತದೆ. ವ್ಯವಸ್ಥೆ ಎಲೆಗಳ ಮೇಲ್ಬಾಗ ನೀರಿನಿಂದ ಒದ್ದೆಯಾಗುವುದನ್ನು ತಪ್ಪಿಸುತ್ತದೆ  ಹಾಗೂ ಎಲೆಗಳ ಮೇಲ್ಬಾಗದಲ್ಲಿರುವ ಉಸಿರಾಟದ ರಂಧ್ರಗಳು (Stomata) ನೀರಿನಿಂದಾಗಿ ಮುಚ್ಚಿಕೊಳ್ಳದಂತೆ ಕಾಪಾಡುತ್ತದೆ .
ಜಲಸಸ್ಯಗಳು ತಮ್ಮದೇ ಆದಂತಹ ಔಷಧೀಯ ಗುಣಗಳನ್ನು ಹೊಂದಿವೆ ಅದರಲ್ಲಿ ಪ್ರಮುಖವಾಗಿ ಅಂತರಗಂಗೆ (Eichornia) ಅರಿಶಿನ ಕಾಮಾಲೆ ರೋಗ ಗುಣಪಡಿಸಲು ಆಯುರ್ವೇದ ಔಷಧ ಪದ್ಧತಿಯಲ್ಲಿ ಬಳಸುತ್ತಾರೆ. ಕಮಲದ ಹೂವಿನ ಬೇರು ಮತ್ತು ಕಾಂಡಗಳನ್ನು ಸೀತಾಳೆ ಸಿಡುಬು, ಚರ್ಮಸಂಬಂಧಿ ಕಾಯಿಲೆ ಮತ್ತು ಹೊಟ್ಟೆನೋವು ಗುಣಪಡಿಸುವ ಔಷಧಿಗಳಲ್ಲಿ ಬಳಸುತ್ತಾರೆ.
ಸಾಮಾನ್ಯವಾಗಿ ಜಲಸಸ್ಯಗಳು ಮೃದುವಾದ ಮತ್ತು ಸ್ಪಂಜಿನಂತಹ ಅಂಗಾಂಶ ರಚನೆಯನ್ನು ತೋರುತ್ತವೆ. ಅಂಗಾಂಶ ರಚನೆ ಅವುಗಳ ಮುಖ್ಯ ಗುಣ. ಅಂಗಾಂಶಗಳಲ್ಲಿ ಗಾಳಿ ತುಂಬಿರುತ್ತದೆ (Aerenchyma). ಗಾಳಿಯಲ್ಲಿರುವ ಕಾರ್ಬನ್‌ ಡೈಆಕ್ಸೈಡ್ ಮತ್ತು ಆಕ್ಸಿಜನ್‌ ಜಲಸಸ್ಯಗಳ ದ್ಯುತಿಸಂಶ್ಲೇಷಣಾ ಕ್ರಿಯೆಗೆ (Photosynthesis) ಮತ್ತು ಉಸಿರಾಟ ಕ್ರಿಯೆಗೆ ಸಹಾಯ ಮಾಡುತ್ತವೆ . ಮೃದುವಾದ ಅಂಗಾಂಶಗಳು ಜಲಸಸ್ಯಗಳ ಎಲೆ ಮತ್ತು ಕಾಂಡಗಳಲ್ಲಿ ಪ್ರಮುಖವಾಗಿ ಕಾಣಸಿಗುತ್ತವೆ. ಇಡೀ ಜಲಸಸ್ಯವೇ ಜಿಡ್ಡಿನಂತಹ ಅಥವಾ ಲೋಳೆಯಂತಹ ಪದಾರ್ಥದಿಂದ ಆವರಿಸಲ್ಪಟ್ಟಿರುತ್ತದೆ. ವ್ಯವಸ್ಥೆ ಸಸ್ಯಗಳು ಕೊಳೆತು ಹೋಗದಂತೆ ತಡೆಯುತ್ತದೆ .
ಜಲಸಸ್ಯಗಳಲ್ಲಿ ಏರೆಂಕೈಮ ಎಂಬ ಗಾಳಿ ತುಂಬಿರುವ ಮೃದು ಅಂಗಾಂಶವಿದ್ದು ಪ್ಲವನತೆ ( Buoyancy - ಹೆಚ್ಚಿನ ಮಾಹಿತಿಗೆ ಕ್ಲಿಕ್ಮಾಡಿ ) ಯನ್ನೊದಗಿಸುತ್ತದೆ. ಇದನ್ನು ನೋಡಿದಾಗ ಅದ್ಭುತ ವಿಜ್ಞಾನಿ ಆರ್ಕಿಮಿಡಿಸ್ಸ್ಮೃತಿಪಟಲದಲ್ಲಿ ಮಿಂಚಿ ಮಾಯವಾದ. ನೀರ ಮೇಲೆ ತೇಲುವ ಹಡಗು ಮುಳುಗೇಳಬಲ್ಲ ಸಬ್ಮೆರಿನ್ಗಳ ಸೂತ್ರ ನಿಸರ್ಗದಲ್ಲೇ ಬಚ್ಚಿಟ್ಟುಕೊಂಡಿರುವುದು ಅಚ್ಚರಿಯನ್ನು ಉಂಟು ಮಾಡಿತು. ನಿಸರ್ಗದಲ್ಲಿ ಇಂತಹ ಅದೆಷ್ಟು ನಿಗೂಢ ರಮ್ಯತೆಗಳಡಗಿವೆಯೋ ಯಾರು ಬಲ್ಲರು? ವಿಜ್ಞಾನ ಇಂತಹ ಅಚ್ಚರಿಗಳ ಹುಡುಕಾಟವಲ್ಲವೇ ? ನಾವು ಏನೇನೋ ಕಂಡುಹಿಡಿದೆವು, ನಿಸರ್ಗವನ್ನೇ ಗೆದ್ದೆವೆಂಬ ಮಾನವ ಹಮ್ಮು ಇವುಗಳ ಮುಂದೆ ಮಂಡಿಯೂರಿದಂತೆನಿಸಿತು. ತೇಲುಸಸ್ಯಗಳಲ್ಲದೇ ನೀರಿನಲ್ಲಿ ಮುಳುಗಿಯೇ ಇರುವ ಸಸ್ಯಗಳೂ ಇವೆ. ಸಸ್ಯಗಳು ನೀರಿನ ಆಳ ಕಡಿಮೆ ಇರುವ ಪ್ರದೇಶದಲ್ಲಿ ಬೆಳೆಯುತ್ತವೆ. ಹೈಡ್ರಿಲಾ (Hydrilla), ವ್ಯಾಲಿಸ್ನೇರಿಯ (Vallisnaria) ಬೇರಿರುವ ಮುಳುಗು ಸಸ್ಯಗಳಾದರೆ, ಯುಟ್ರಿಕ್ಯುಲೇರಿಯಾ (Utricularia)  ಕೀಟಹಾರಿ ಸಸ್ಯ ಮತ್ತು ಸೆರೆಟೋಫೈಲಮ್ (Ceretophyllum) ಬೇರಿಲ್ಲದ ಮುಳುಗು ಸಸ್ಯಗಳಾಗಿವೆ.ನೀರಿನಲ್ಲೇ ಇರುವ ಸಸ್ಯಗಳು ಏಕೆ ಕೊಳೆಯುವುದಿಲ್ಲ ಎಂದು ನನ್ನನ್ನು ಚಿಕ್ಕಂದಿನಲ್ಲಿ ಕಾಡಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿತು. ಸಸ್ಯಗಳು ಬದಲಾದ ವಾತಾವರಣಕ್ಕೆ ತಕ್ಕಂತೆ ತಮ್ಮ ದೇಹದ ಹೊರರಚನೆ ಮತ್ತು ಒಳರಚನೆಯನ್ನು ಬದಲಾಯಿಸಿಕೊಂಡು  ಅಥವಾ ಮಾರ್ಪಡಿಸಿಕೊಂಡು ಬದುಕುವ ಪರಿ ನೋಡಿ ನನಗೆ ಆಶ್ಚರ್ಯವಾಯಿತು .


ಈ ಲೇಖನದ ಪಿ.ಡಿ.ಎಫ಼್. ಫೈಲ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು 

ಇಲ್ಲಿ ಕ್ಲಿಕ್ ಮಾಡಿ 👉 ಜಲಸಸ್ಯಗಳು ಒಂದು ರೋಚಕ ಕಥೆ


8 comments:

  1. ಬಾಲ್ಯದ ಕುತೂಹಲ ಬತ್ತದೇ ಇರಲಿ, ವೈಜ್ಞಾನಿಕ ಕಾರಣ ತಿಳಿಯುವ ಆಸಕ್ತಿ ಬತ್ತದೇ ಇರಲಿ ಎಂಬ ಆಶಯದ ಲೇಖನ . ಉತ್ತಮವಾಗಿ ಮಬಡಿ ಬಂದಿದೆ🙏

    ReplyDelete
  2. ಉತ್ತಮ ಬರಹ ಮತ್ತು‌ಉಪಯುಕ್ತ ಮಾಹಿತಿ
    ಹೀಗೆಯೆ ಮುಂದುವರಿಯಲಿ ವಿಜ್ಞಾನ ಸಾಹಿತ್ಯ ಕೃಷಿ

    ReplyDelete